ಭಾನುವಾರ, ಸೆಪ್ಟೆಂಬರ್ 1, 2013

ನಾಳೆಗಳ ಹಂಗಿಲ್ಲದ ಅಲೆಮಾರಿ 'ಟಿ. ಎನ್. ಸೀತಾರಾಂ'

ನಾಳೆಗಳ ಹಂಗಿಲ್ಲದ ಅಲೆಮಾರಿ 'ಟಿ. ಎನ್. ಸೀತಾರಾಂ'
-ಡಿ. ಕೆ. ರಮೇಶ್

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ
ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ...

ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಈ ಸಾಲುಗಳಂತೆಯೇ ನಿರ್ದೇಶಕ ಟಿ.ಎನ್. ಸೀತಾರಾಂ ಅವರ ಬದುಕೂ ಒಂದು ರೂಪಕ. ವಕೀಲರಾಗಿ ಕೋರ್ಟ್‌ನಲ್ಲಿ ವಾದ ಮಂಡಿಸುತ್ತ ಆರಾಮವಾಗಿ ಇರಬಹುದಿತ್ತು. ಅಪ್ಪ ನೀಡಿದ ತೋಟವನ್ನಾದರೂ ನೋಡಿಕೊಂಡು ಖುಷಿಯಿಂದ ಕೂರಬಹುದಿತ್ತು. ಆದರೆ ಅವರು ಟೆಂಪೋ ಓಡಿಸಿದರು. ಕಾರ್ಖಾನೆಯಲ್ಲಿ ದುಡಿದರು. ನಾಟಕ ಆಡಿಸಿದರು.

ಪತ್ರಿಕೆಗಳಿಗೆ ಬರೆದರು. ಸ್ವತಃ ಪತ್ರಿಕೆ ಹೊರತಂದರು. ರಾಜಕಾರಣಕ್ಕೆ ಹೊರಳಿದರು. ಹೀಗೆ ಅವರು ಕೈಯಾಡಿಸದ ಕ್ಷೇತ್ರಗಳೇ ಇಲ್ಲ. ಏರಿಳಿತಗಳ ಬದುಕು ಕಲಿಸಿದ ಪಾಠ ಅವರೆಲ್ಲ ದೃಶ್ಯ-ಕೃತಿಗಳಲ್ಲಿ ಅವಧೂತರನ್ನು ಹುಟ್ಟು ಹಾಕಿತು. `ನಮ್ಮ ಸ್ವಾಮ್ಯೊರು ಇದನ್ನೇ ಹೇಳುತ್ತಿದ್ದರು.

ಜಂಗಮಯ್ಯನೋರು' ಎನ್ನುವ ಆ ನಡುವಯಸ್ಕ, `ಮಾಯಾಮೃಗ'ದ ಮಾಗಿದ ಮಾತುಗಳ ಹಿರಿಯ, ಮುಕ್ತದ ಟೋಪಿ ಶೇಷಪ್ಪ ಇವರ್ಲ್ಲೆಲರ ಹುಟ್ಟಿಗೆ ಸೀತಾರಾಂರ ಚಲನಶೀಲತೆ ಕಾರಣವಂತೆ. `ಅಲೆಮಾರಿಯಾದವನಿಗೆ ನಾಳೆಗಳ ಹಂಗಿರುವುದಿಲ್ಲ. ಹೀಗಾಗಿ ಸತ್ಯವನ್ನು ಪ್ರಖರವಾಗಿ ಹೇಳುವ ಶಕ್ತಿ ಆತನಿಗಿರುತ್ತದೆ' ಎನ್ನುತ್ತಾ ಅನುಭಾವಿಯಂತೆ ಮಾತಿಗಳಿದರು.

ಈಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಮುಕ್ತ ಮುಕ್ತ' ಈಗ ಕೊನೆಯ ಘಟ್ಟದಲ್ಲಿದೆ. ಇದೇ ಇಪ್ಪತ್ತೈದರಂದು ಅದರ ಕೊನೆಯ ಕಂತು ಪ್ರದರ್ಶನವಾಗಲಿದೆ. ಸೀತಾರಾಂ ನಿರ್ದೇಶಿಸಿದ ಬೃಹತ್ ಧಾರಾವಾಹಿ ಇದು.

ಮುನ್ನೂರು ಕಂತಿಗೆ ಸೀಮಿತ ಎಂದುಕೊಂಡಿದ್ದ ಕತೆ 1200 ಕಂತುಗಳವರೆಗೆ ಹರಡಿಕೊಂಡಿತು. `ಕತೆ ಮುಗಿಯಿತೇ' ಎಂದು ಕೆಲ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿರುವಾಗಲೇ ಸೀತಾರಾಂ ಸಿಹಿ ಸುದ್ದಿ ತಂದಿದ್ದಾರೆ. ಈ ಸುದ್ದಿಯಲ್ಲಿ ಎರಡೆರಡು ಸಿಹಿ ಬೆರೆತಿವೆ.

ಎಲ್ಲಾ ಅಂದುಕೊಂಡಂತೆ ನಡೆದರೆ ಅವರ ಹೊಸ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ. ತ್ರಿವೇಣಿ ಅಥವಾ ವಿ.ಎಂ. ಇನಾಂದಾರ್ ಅವರ ಕಾದಂಬರಿ, ಇಲ್ಲವೇ ಸಮಕಾಲಿನ ಬರಹಗಾರರ ಕೃತಿ, ಅದು ಸಾಧ್ಯವಾಗದಿದ್ದರೆ ಅವರದೇ ಕತೆ ಸಿನಿಮಾ ಆಗಬಹುದು. ವಿಶೇಷ ಎಂದರೆ ಇದುವರೆಗೆ ಅವರ ಧಾರಾವಾಹಿಯಲ್ಲಿ ಹೆಚ್ಚು ಕಾಣುತ್ತಿದ್ದ ಕೋರ್ಟ್ ದೃಶ್ಯಗಳು ಇನ್ನು ಹಿರಿತೆರೆಗೂ ನುಗ್ಗಲಿವೆ, ಪರೇಶ್ ರಾವಲ್‌ರ `ಓ ಮೈ ಗಾಡ್' ಚಿತ್ರದಂತೆ.

`ಮೀರಾ ಮಾಧವ ರಾಘವ', `ಮತದಾನ'ದಂಥ ಚಿತ್ರಗಳ ರುಚಿಕಂಡಿದ್ದ ಪ್ರೇಕ್ಷಕವರ್ಗವೊಂದು ಸೀತಾರಾಂರ ಸಿನಿಮಾ ಅಪೇಕ್ಷೆಯಲ್ಲಿದೆ. ಆದರೆ ಟೀವಿ ವೀಕ್ಷಕರಿಗೆ ಸೀತಾರಾಂರನ್ನು ಅಷ್ಟು ಬೇಗ `ಮುಕ್ತ'ಗೊಳಿಸಲು ಇಷ್ಟವಿಲ್ಲ. ಮತ್ತೊಂದು ಧಾರಾವಾಹಿ ನೀಡಿ ಎಂದು ದುಂಬಾಲು ಬಿದ್ದಿದ್ದಾರೆ.

ಮಹಾತ್ಮ ಗಾಂಧಿ ಹತ್ಯೆಯಿಂದ ಹಿಡಿದು ಈವರೆಗೆ ದೇಶದಲ್ಲಿ ನಡೆದ ದೊಡ್ಡ ದೊಡ್ಡ ವಿಚಾರಣೆಗಳನ್ನು ವಸ್ತುವಾಗಿಟ್ಟುಕೊಂಡು ಮತ್ತೊಂದು ಧಾರಾವಾಹಿ ನೀಡುವ ಉತ್ಸಾಹ ಸೀತಾರಾಂ ಅವರದು. ಇದು ದೊಡ್ಡ ಬಜೆಟ್ಟಿನ ಧಾರಾವಾಹಿ. ವಾಹಿನಿಗಳು ಒಪ್ಪಿದರೆ ಅದು ಮನೆಮಂದಿಯನ್ನು ರಂಜಿಸುವ ದಿನಗಳು ದೂರವಿಲ್ಲ.

ಮಾಯಾಪೆಟ್ಟಿಗೆಯೊಳಗೆ ಮತ್ತೊಂದು `ಮಾಯಾ' ಕನ್ನಡಿ ಕಾಣಿಸಿಕೊಳ್ಳುವುದು ದಿಟ.
ಚುನಾವಣೆ ಹತ್ತಿರ ಬರುತ್ತಿರುವಾಗ `ಮುಕ್ತ ಮುಕ್ತ'ದಂತಹ ರಾಜಕೀಯ ವಸ್ತುವುಳ್ಳ ಧಾರಾವಾಹಿ ಮುಕ್ತಾಯಗೊಳ್ಳುತ್ತಿರುವುದು ಸರಿಯಲ್ಲ ಎನ್ನುವುದು ಕೆಲವರ ವಾದ. ಆದರೆ ಸೀತಾರಾಂರ ಜೋಳಿಗೆಯಲ್ಲಿ ಕತೆ ಖಾಲಿಯಾಗಿದೆ. ಕತೆಯಿಲ್ಲದೆ ಸುಮ್ಮನೆ ಏನನ್ನೋ ಹೊಸೆಯಲು ಅವರಿಗೆ ಇಷ್ಟವಿಲ್ಲ. ಹಾಗಾಗಿ ಈ ಪೂರ್ಣವಿರಾಮ.

ದೊಡ್ಡಮಟ್ಟದಲ್ಲಿ ತಲುಪಬೇಕು. ಗುಣಮಟ್ಟ ಚೆನ್ನಾಗಿರಬೇಕು. ನೋಡಲು ಅಂದವಾಗಿರಬೇಕು. ಇದು ಧಾರಾವಾಹಿ ಎಂಬ ಭಾವನೆಗಳ ಕಾರ್ಖಾನೆಯ ಅಘೋಷಿತ ನಿಯಮ. ಆದರೆ ಎಲ್ಲೋ ಕೆಲವರು ಇದಕ್ಕೆ ಭಿನ್ನವಾಗಿ ಯೋಚಿಸುತ್ತಾರೆ. ಈ ಎಲ್ಲಾ ಅಂಶಗಳನ್ನಿಟ್ಟುಕೊಂಡೇ ಹೊಸತನ್ನು ನೀಡುವ ತುಡಿತದಲ್ಲಿರುತ್ತಾರೆ. ಸೀತಾರಾಂ ಅವರದು ಅಂತಹ ಭಿನ್ನ ವ್ಯಕ್ತಿತ್ವ.

ಧಾರಾವಾಹಿಗಳೂ ರೀಮೇಕ್‌ಗಿಳಿದ ಈ ಹೊತ್ತಿನಲ್ಲಿ ಅದಕ್ಕೆ ಸೆಡ್ಡು ಹೊಡೆದವರು ಅವರು. ಕತೆ ಅವರದ್ದೇ ಆಗಿರುವುದರಿಂದ ಸಹಜವಾಗಿಯೇ ಪಾತ್ರಗಳ ಮೇಲೆ ಹಿಡಿತ ಹೆಚ್ಚು. ಜತೆಗೆ ಬದುಕಿನ ಹೊಯ್ದಾಟಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಸದಾ ಓದುವ ಅಧ್ಯಯನಶೀಲತೆ ಅವರನ್ನು ಯಶಸ್ಸಿನ ಹಾದಿಯಲ್ಲಿ ನಡೆಸಿದೆ.

ವಾಹಿನಿಗಳ ಆಡಳಿತ ವರ್ಗದಿಂದ ಕನ್ನಡಿಗರು ದೂರವಾಗುತ್ತಿರುವ, ಕತೆ ಸಿಕ್ಕರೆ ಸಾಕು ಮತ್ತೆಲ್ಲ ತಾನೇತಾನಾಗಿ ನಡೆಯತ್ತದೆ ಎಂದುಕೊಳ್ಳುವ, ಕಾರ್ಪೊರೇಟ್ ಸಮಾಜದ ಕತೆಗಳೇ ಜನ ಸಾಮಾನ್ಯರ ಬದುಕೆಂದು ಬಿಂಬಿಸುತ್ತಿರುವ ಈ ಹೊತ್ತಿನಲ್ಲಿ ಅವರು ಭಿನ್ನವಾಗಿ ನಿಲ್ಲುತ್ತಾರೆ. ಬೇಡಿಕೆಯ ನಿರ್ದೇಶಕರಾಗಿ ಉಳಿಯುತ್ತಾರೆ. `ಎಲ್ಲ ಮನುಷ್ಯರೊಳಗೆ ಇರುವ ತತ್ವ ಆದರ್ಶಗಳನ್ನು ರುಚಿಕರವಾಗಿ ಪ್ರಾಮಾಣಿಕವಾಗಿ ಹೇಳುತ್ತಾ' ನೋಡುಗರ ಮನ ಗೆಲ್ಲುತ್ತಾರೆ.

ಸಿದ್ಧ ಸೂತ್ರಗಳಿಲ್ಲದ ಧಾರಾವಾಹಿಗಳನ್ನು ಕೊಟ್ಟದ್ದು ಅದನ್ನು ಪ್ರೇಕ್ಷಕರು ಒಪ್ಪುವಂತೆ ಮಾಡಿದ್ದು ಸೀತಾರಾಂ ಹೆಗ್ಗಳಿಕೆ. ಧಾರಾವಾಹಿಗಳನ್ನು ಅಭ್ಯಾಸ ಮಾಡಬಯಸುವವರಿಗೆ ಅವರ ಕೃತಿಗಳು ಒಂದು ಪಾಠ. `ಕನ್ನಡ ಬಾರದ ಮನರಂಜನಾ ದೊರೆಗಳಿಗೆ ಪ್ರೇಕ್ಷಕರನ್ನು ಅಳೆಯುವುದೇ ಗೊತ್ತಿಲ್ಲ. ಎಲ್ಲೋ ಕ್ಲಿಕ್ ಆಗಿದ್ದು ಇಲ್ಲೂ ಗೆಲ್ಲುತ್ತದೆ ಎಂಬುದೇ ಅವರ ಲೆಕ್ಕಾಚಾರ.

ಆದರೆ ಅದೇ ನಿಜವಲ್ಲ. ಕನ್ನಡದವರೇ ವಾಹಿನಿಗಳಲ್ಲಿ ಮುಂದುವರಿದಾಗ ಇಂತಹ ಸಮಸ್ಯೆ ಇರದು. ಮತ್ತೊಂದೆಡೆ ಚಾನೆಲ್‌ನ ಚುಕ್ಕಾಣಿ ಹಿಡಿದವರು ಕೂಡ ಹೂಡಿಕೆದಾರರ ಅಣತಿ ಪಾಲಿಸಬೇಕಿದೆ. ಅವರು ಬಯಸಿದ್ದನ್ನು ಕೊಡುವ ಅನಿವಾರ್ಯತೆ ಇದೆ' ಎಂಬ ಬೇಸರ ಅವರೊಳಗೆ.

ತಮ್ಮ ಧಾರಾವಾಹಿಗಳು ನಗರದ ಮಧ್ಯಮವರ್ಗವನ್ನು ಅಕ್ಷರಸ್ಥರನ್ನು ದಾಟಲೇ ಇಲ್ಲವಲ್ಲ ಎಂಬ ಪ್ರಶ್ನೆಗೆ ಅವರು ಟಿಆರ್‌ಪಿಯತ್ತ ಬೊಟ್ಟು ಮಾಡುತ್ತಾರೆ. ಬೆಂಗಳೂರಿನಲ್ಲಿ ಮಾತ್ರ 1200 ಟಿಆರ್‌ಪಿ ಮೀಟರ್‌ಗಳಿವೆ. ರಾಜಧಾನಿ ಹೊರತುಪಡಿಸಿದರೆ ಬೇರೆ ಕಡೆ ಇವುಗಳ ಅಸ್ತಿತ್ವವಿದೆಯೇ ಎಂಬ ಪ್ರಶ್ನೆ ಏಳುತ್ತದೆ.

ಗುಣಮಟ್ಟದ ವಾರ್ತೆ ನೀಡುವ ಸುದ್ದಿ ವಾಹಿನಿಗಳು ಕೂಡ ಟಿಆರ್‌ಪಿ ಇಲ್ಲದೆ ಸೊರಗಿದ ಉದಾಹರಣೆಗಳಿವೆ. ದೇಶದೆಲ್ಲೆಡೆ ಧಾರಾವಾಹಿ ರೂಪಿಸುವವರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಯಂತ್ರಗಳಿಂದ ದೊರೆಯದ ಮಾನ್ಯತೆ `ಜನಮನದ ಟಿಆರ್‌ಪಿ'ಯಿಂದ ದೊರೆತಿದೆ. ಸಂವಾದ ಕಾರ್ಯಕ್ರಮಗಳಿಂದ ಧಾರಾವಾಹಿಯ ನಿಜವಾದ ಸತ್ವ ತಿಳಿದಿದೆ ಎನ್ನುತ್ತಾರೆ ಅವರು.

`ಮಾಯಾಮೃಗ', `ಮುಕ್ತ', `ಮನ್ವಂತರ' `ಮುಕ್ತ ಮುಕ್ತ' ಹೀಗೆ `ಮ'ಕಾರದ ಬಗ್ಗೆ ಅತೀವ ಮಮಕಾರ ಎಂಬ ಸವಿ ಆರೋಪವೊಂದು ಅವರ ಮೇಲಿದೆ. ಅದನ್ನವರು ಒಪ್ಪುವುದಿಲ್ಲ. ವಾಹಿನಿಯವರ ಇಚ್ಛೆಯಂತೆ ಈ ಹೆಸರು ಇಡಬೇಕಾಯಿತಷ್ಟೇ ಎನ್ನುತ್ತ ಮಕಾರದಿಂದ ಆರಂಭವಾಗುತ್ತಿದ್ದ ಇತರೆ ನಿರ್ದೇಶಕರ `ಮೂಡಲಮನೆ', `ಮುತ್ತಿನತೋರಣ' ಧಾರಾವಾಹಿಗಳನ್ನು ಉದಾಹರಿಸುತ್ತಾರೆ. ತಮ್ಮದೇ ಕಾಲೇಜು ತರಂಗ, ಜ್ವಾಲಾಮುಖಿ, ದಶಾವತಾರ, ಚಿತ್ರಲೇಖದ ಶೀರ್ಷಿಕೆಗಳು `ಮ'ಕಾರದಲ್ಲಿ ಆರಂಭವಾಗಲಿಲ್ಲ ಎಂಬುದನ್ನು ಒತ್ತಿ ಹೇಳುತ್ತಾರೆ.

ಸಾಹಿತಿಗಳು, ರಾಜಕಾರಣಿಗಳು, ಹೋರಾಟಗಾರರು, ಪತ್ರಕರ್ತರು ಸೀತಾರಾಂ ಅವರ ಹಲವು ಧಾರಾವಾಹಿಗಳಲ್ಲಿ ಪಾತ್ರವಹಿಸಿದ್ದಾರೆ. ರಾಜಕಾರಣಿಗಳ ವಿಷಯ ಬಂದಾಗ ಒಂದು ತಮಾಷೆ ನಡೆದಿದ್ದು ಅವರ ನೆನಪಿನಲ್ಲಿದೆ.

ಧಾರಾವಾಹಿಯಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕಾಣಿಸಿಕೊಂಡಿದ್ದ ಅರವಿಂದ ಲಿಂಬಾವಳಿ ಮುಂದೆ ಅದೇ ಖಾತೆ ಪಡೆದರು. ರಮೇಶ್‌ಕುಮಾರ್ ಸ್ಪೀಕರ್ ಆದರು. ಈಗ ಕೆಲವು ರಾಜಕಾರಣಿಗಳು ಅಧಿಕಾರ ಸಿಗಲಿ ಎಂಬ ಆಸೆಯೊಂದಿಗೆ ತಾವೂ ಪಾತ್ರವಹಿಸುತ್ತೇವೆ ಎಂದು ಮುಂಬರುತ್ತಿದ್ದಾರಂತೆ!

`ಮಾಯಾಮೃಗ'ಕ್ಕೆ ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಗೀತೆ ಬರೆದುಕೊಟ್ಟಿದ್ದರು. ಕೇಳಿದ ದಿನವೇ ಮರು ಮಾತನಾಡದೆ ಒಪ್ಪಿದ್ದರು. ಧಾರಾವಾಹಿಗೆಂದು ಬರೆದ ಅವರ ಏಕೈಕ ರಚನೆ ಇದಾಗಿತ್ತು. ಎಚ್.ಎಸ್.ವೆಂಕಟೇಶಮೂರ್ತಿ `ಮುಕ್ತ' ಹಾಗೂ `ಮುಕ್ತ ಮುಕ್ತ' ಎರಡಕ್ಕೂ ಹಾಡು ಬರೆದರು. ಸೀತಾರಾಂ ಧಾರಾವಾಹಿಯ ಆಶಯವನ್ನು ಮಾತಿನಲ್ಲಿ ಹೇಳಿದರೆ, ಕವಿಗಳು ಅದನ್ನು ರೂಪಕಕ್ಕೆ ಇಳಿಸುತ್ತಿದ್ದರು. ಭಾವ ತುಂಬುವ ಕೆಲಸ ಸಂಗೀತ ನಿರ್ದೇಶಕ  ಸಿ.ಅಶ್ವತ್ಥ್ ಅವರದ್ದಾಗಿತ್ತು.

ಮುಕ್ತ ಮುಕ್ತದ ಕತೆ ಮುಗಿದಿರಬಹುದು. ಆದರೆ ಅವರ ಬಳಿ ಕತೆಯ ಬುಗ್ಗೆಯೇ ಇದೆ. ತಮ್ಮಳಗಿನ ಬರಹಗಾರ ಮುಕ್ಕಾಗದಂತೆ ಈ ಬುಗ್ಗೆ ಕಾಪಾಡುತ್ತಿದೆ. ಧಾರಾವಾಹಿಗಿಳಿದಿದ್ದರಿಂದ ನಾಡು ಒಬ್ಬ ನಾಟಕಕಾರನನ್ನು ಕಳೆದುಕೊಂಡಿತಲ್ಲಾ ಎಂದು ಯಾರೂ ವ್ಯಥೆ ಪಡುವಂತಿಲ್ಲ. ಅವೆಲ್ಲವೂ ಧಾರಾವಾಹಿಗಳ ರೂಪದಲ್ಲಿವೆ ಎಂಬ ಉತ್ತರ ಅವರದು.

ಕೃಪೆ: ಪ್ರಜಾವಾಣಿ

Tag: T. N. Sitaram

ಕಾಮೆಂಟ್‌ಗಳಿಲ್ಲ: