ಭಾನುವಾರ, ಸೆಪ್ಟೆಂಬರ್ 1, 2013

ರುಡ್ಯಾರ್ಡ್ ಕಿಪ್ಲಿಂಗ್

ರುಡ್ಯಾರ್ಡ್ ಕಿಪ್ಲಿಂಗ್

ಪ್ರುಖ್ಯಾತ ಕತೆಗಾರ, ‘ಜಂಗಲ್ ಬುಕ್ಅಂತಹ ಕೃತಿಗಳ ಸೃಷ್ಟಿಕರ್ತ, ನೊಬೆಲ್ ಪಾರಿತೋಷಕ ಸಂಮಾನಿತ  ರುಡ್ಯಾರ್ಡ್ ಕಿಪ್ಲಿಂಗ್ ಅವರು ನಮ್ಮ ಭಾರತದ ಬ್ಯಾಕ್ ಯಾರ್ಡಿನವರು.  ಅವರು ಜನಿಸಿದ್ದು ಭಾರತದಲ್ಲಿ.     ಬೊಂಬಾಯಿನ ವಿ.ಟಿ. ರೈಲು ನಿಲ್ದಾಣದ  ಸಮೀಪದ 'ಜೆ.ಜೆ.ಸ್ಕೂಲ್ ಆಫ್ ಆರ್ಟ್ ಮಹಾವಿದ್ಯಾಲಯ'ದ ಶಿಕ್ಷಕರ ವಸತಿಗೃಹದಲ್ಲಿ ಅವರು ಡಿಸೆಂಬರ್ 30, 1865ರ ವರ್ಷದಲ್ಲಿ ಜನಿಸಿದರು.

ರುಡ್ಯಾರ್ಡ್ ಕಿಪ್ಲಿಂಗರ ತಂದೆ ಲಾಕ್ ವುಡ್ ಕಿಪ್ಲಿಂಗ್ ಅವರು ಜೆ. ಜೆ. ಸ್ಕೂಲ್ ಆಫ್ ಆರ್ಟ್ ಶಿಕ್ಷಣ ಮಹಾಕಲಾಸಂಸ್ಥೆಯಲ್ಲಿ ಶಿಕ್ಷಕರಾಗಿದ್ದು ಮುಂದೆ ಪ್ರಿನ್ಸಿಪಾಲರೂ ಆದರು. ಅವರು ಪ್ರಖ್ಯಾತ ವರ್ಣಚಿತ್ರ ಕಲಾಕಾರಶಿಲ್ಪಿ, ಉಪನ್ಯಾಸಕರೆಂದು ಪ್ರಸಿದ್ಧಿ ಪಡೆದಿದ್ದರು.  ತಾಯಿ, 'ಆಲಿಸ್ಪ್ರಖ್ಯಾತ ಕಲಾಕಾರರಾದ ಪೇಂಟರ್ ಎಡ್ವರ್ಡ್ ಬರ್ನ್-ಜೋನ್ಸ್ ಅವರ ಸಂಬಂಧಿಯಲ್ಲದೆಮ್ಯಾಗ್ಡೊನಾಲ್ಡ್ ಸೋದರಿಯರೆಂದು ಪ್ರಖ್ಯಾತರಾದ ನಾಲ್ವರಲ್ಲಿ  ಒಬ್ಬರು.  ಈ ದಂಪತಿಗಳು ಬೊಂಬಾಯಿಗೆ 1865 ರಲ್ಲಿ ಬಂದರು. 1875ರಲ್ಲಿ ಅವರು  ಲಾಹೋರಿನ ಮೇಯೋ ಸ್ಕೂಲ್ ಆಫ್ ಅರ್ಟ್ ಮ್ಯೂಸಿಯೆಮ್ನಲ್ಲಿ 'ಕ್ಯುರೇಟರ್' ಆಗಿ ಕಾರ್ಯನಿರ್ವಹಿಸಲಾರಂಭಿಸಿದರು.  

ಲಾಹೋರಿನಲ್ಲಿ ತಾವು ವಾಸಿಸುತ್ತಿದ್ದ ಮನೆಯ ಬಗ್ಗೆ ರುಡ್ಯಾರ್ಡ್ ಕಿಪ್ಲಿಂಗರು ತಮ್ಮ 'ಕಿಮ್' ಎಂಬ  ಕಥಾಸಂಕಲನದಲ್ಲಿ ಸಾಕಷ್ಟು ವಿವರಗಳನ್ನು ನೀಡಿದ್ದಾರೆ. ಆ ಮನೆಯನ್ನು 'ವಂಡರ್ ಹೌಸ್' ಅಥವಾ 'ಅಜೀಬ್ ಘರ್' ಎಂದು ಅವರು ಪ್ರೀತಿಯಿಂದ ವರ್ಣಿಸಿದ್ದಾರೆ. 13ನೆಯ ವಯಸ್ಸಿನಲ್ಲೇ ಅವರು ಬರೆಯಲು ಆರಂಭಿಸಿದ್ದರು.  ಅವರ 6ನೆಯ ವಯಸ್ಸಿನಿಂದ ಐದು ವರ್ಷಗಳ ಅವಧಿಯಕಾಲ, ಅವರನ್ನು ಇಂಗ್ಲೆಂಡಿನ ಶಾಲೆಯೊಂದರಲ್ಲಿ ಓದಲು ಬಿಡಲಾಗಿತ್ತು.   ಇಂಗ್ಲೆಂಡಿನಲ್ಲಿನ ಓದಿನ ದಿನಗಳು ಅವರಿಗೆ ಪ್ರಿಯವಾಗಿರಲಿಲ್ಲ ಎಂಬ ಮಾತುಗಳು ಅವರ ಕೃತಿ 'ಬ್ಯಾ ಬ್ಯಾ ಬ್ಲ್ಯಾಕ್ ಶೀಪ್'ನಲ್ಲಿ ಕಾಣಬರುತ್ತವೆ.  ಮಿಲಿಟರಿಯಲ್ಲಿ ತರಬೇತಿ ಪಡೆಯಲು ಯುನೈಟೆಡ್ ಸರ್ವೀಸಸ್ ಕಾಲೇಜಿಗೆ ಸೇರಿದ್ದರೂ ಕಣ್ಣಿನ ತೊಂದರೆ, ಜೊತೆಗೆ ಆ ಕುರಿತಾದ ನಿರಾಸಕ್ತಿಗಳು ಅವರನ್ನು ಬೇರೆಡೆಗೆ ತಿರುಗುವಂತೆ ಮಾಡಿದವು.  ಈ ಕುರಿತಾದ ಮಾಹಿತಿಗಳು ದಿ ಲೈಟ್ ದಟ್ ಫೈಲ್ಡ್’  ಎಂಬ ಕಥಾನಕ ಮತ್ತು ಅವರ ಆತ್ಮಚರಿತ್ರೆಗಳಲ್ಲಿ ಕಾಣಬರುತ್ತವೆ.

1882ರಲ್ಲಿ ಕಿಪ್ಲಿಂಗ್ ಭಾರತಕ್ಕೆ ಹಿಂತಿರುಗಿದರು. 1882ರಿಂದ 1887ರ ಅವಧಿಯಲ್ಲಿ  ಲಾಹೋರ್ ನಗರದಲ್ಲಿ 'ಸಿವಿಲ್ ಮತ್ತು ಮಿಲಿಟರಿ ಗೆಝೆಟ್' ಪತ್ರಿಕೆಗಾಗಿ  ವಿವಿಧ ವೃತ್ತಿಗಳಲ್ಲಿ ದುಡಿದರು.  ಮುಂದೆ  ಅಲಹಾಬಾದಿನಲ್ಲಿ 'ಪಯೊನೀರ್' ಪತ್ರಿಕೆಗೆ  ಸಂಪಾದಕರಾಗಿ ಕೆಲಸಮಾಡಿದರು. ಅವರ ಕವನಗಳು, ಸಣ್ಣ ಕಥೆಗಳು ವಿಶ್ವದೆಲ್ಲೆಡೆಯ ಇಂಗ್ಲೀಷ್ ಓದುಗರಿಗೆ ಪ್ರಿಯವಾದವು.  ಅವರ ಪ್ರಾರಂಭಿಕ ಬರಹಗಳಲ್ಲಿ ಚಾರ್ಲ್ಸ್ ಡಿಕನ್ಸ್ ಅವರ ಛಾಪನ್ನು  ಕಾಣಬಹುದು.

ಮಡದಿಯ ಜೊತೆ, ಅಮೆರಿಕಕ್ಕೆ ಹೋಗಿ 'ವರ್ ಮೌಂಟ್' ನಗರದಲ್ಲಿ ವಾಸ್ತವ್ಯಹೂಡಿದರು. ಅಲ್ಲಿನ ಜೀವನ ಪದ್ಧತಿ ಅವರಿಗೆ ಏಕೋ ಸರಿಬೀಳಲಿಲ್ಲ. 'ವರ್ ಮೌಂಟ್' ನಲ್ಲಿ ಅವರ ಇಬ್ಬರು ಹೆಣ್ಣುಮಕ್ಕಳು, 'ಜೊಸೆಫೈನ್' ಹಾಗೂ 'ಎಲ್ಸಿ', ಜನಿಸಿದರು. ಅಲ್ಲೇ ಬರೆದ ಪುಸ್ತಕಗಳು, 'ಜಂಗಲ್ ಬುಕ್' ಮತ್ತು 'ಕ್ಯಾಪ್ಟನ್ ಕರೇಜಿಯಸ್'.  ದುರದೃಷ್ಟವಶಾತ್, ಕಿಪ್ಲಿಂಗ್ ರವರ ಹಿರಿಯ 6 ವರ್ಷದ ಮಗಳು  ಜೋಸೆಫೈನ್ ಆ ನಗರದಲ್ಲಿ ತೀರಿಕೊಂಡಳು.  ಆ ದುಃಖದಿಂದ  ಕಿಪ್ಲಿಂಗ್ ದಂಪತಿಗಳು ವಾಪಸ್ ಇಂಗ್ಲೆಂಡಿಗೆ ಬಂದು ವಾಸ್ತವ್ಯ ಮಾಡಿದರು. ಮುಂದಿನ ಜೀವನದಲ್ಲಿ ಉದಾತ್ತಧ್ಯೇಯದ ವ್ಯಕ್ತಿತ್ವವನ್ನು  ಬೆಳೆಸಿಕೊಂಡರು.   ಕೆಲಕಾಲ ಆಫ್ರಿಕಾದಲ್ಲೂ ಇದ್ದರು. 

ರುಡ್ಯಾರ್ಡ್ ಕಿಪ್ಲಿಂಗ್ ಅವರು ತಮ್ಮ ಅಪಾರ ಸಾಹಿತ್ಯರಚನೆ, ಭಾರತ, ಆಫ್ರಿಕ, ಬರ್ಮಾದೇಶಗಳ ದುರ್ಗಮ ಕಾಡುಗಳಲ್ಲಿ ಕಾಡುಮೃಗಗಳ ಮಧ್ಯೆ ತಿರುಗಾಟ, ವಿಷಯಸಂಗ್ರಹಣೆ, ಸಂಪಾದನೆಗಾಗಿನ ಶ್ರಮಭರಿತ ಮತ್ತು ಕಲಾತ್ಮಕ ದುಡಿಮೆಗಾಗಿ  ವಿಶ್ವದಾದ್ಯಂತ ಗೌರವಿಸಲ್ಪಟ್ಟರು.  ಅವರು ಬರೆದ ಹಲವಾರು ಜನಪ್ರಿಯ ಕಾಂದಂಬರಿ ಕಥೆಗಳಲ್ಲಿ 1884ರಲ್ಲಿ ಪ್ರಕಟಗೊಂಡ 'ಜಂಗಲ್ ಬುಕ್ಪ್ರಮುಖವಾದುದು.  1902ರಲ್ಲಿ ಪ್ರಕಟಗೊಂಡ  'ಜಸ್ಟ್ ಸೊ ಸ್ಟೋರೀಸ್' ಎಂಬುದು  "ಪ್ರಾಣಿಗಳು ಈಗಿರುವಹಾಗೆ ಇರಲು ಹೇಗೆ ಸಾಧ್ಯವಾಯಿತು" ಎನ್ನುವುದರ ಬಗ್ಗೆ, ಬರೆದ 'ವಿಚಾರಾತ್ಮಕ ಕೃತಿ'.  ರುಡ್ಯಾರ್ಡ್ ಕಿಪ್ಲಿಂಗ್ ಅವರ ಪುಸ್ತಕಗಳಿಗಾಗಿ ಅವರ ತಂದೆ 'ಜಾನ್ ಲಾಕ್ ವುಡ್ ಕಿಪ್ಲಿಂಗ್' ಅವರೇ ಚಿತ್ರಗಳನ್ನು ರಚಿಸಿದ್ದರು.   ಕಿಮ್ಅವರ ಪ್ರಭಾವಿ ಪುಸ್ತಕಗಳಲ್ಲೊಂದು ಎಂದು ಪರಿಗಣಿತವಾಗಿದೆ. 

'ಭಾರತ'ದಲ್ಲಿ ಜನಿಸಿದ ಇಂಗ್ಲೀಷ್ ನಾಗರಿಕರಾದ 'ರುಡ್ಯಾರ್ಡ್ ಕಿಪ್ಲಿಂಗ್', ಪ್ರತಿಷ್ಠಿತ 1907ರ ವರ್ಷದ ಪ್ರತಿಷ್ಠಿತ 'ನೋಬೆಲ್ ಪ್ರಶಸ್ತಿ' ಗೌರವಕ್ಕೆ  ಪಾತ್ರರಾದರು. ನೈಟ್ ಹುಡ್’, ‘ಆರ್ಡರ್ ಆಫ್ ಮೆರಿಟ್ಹಾಗೂ ಪೊಯಟ್ ಲಾರೆಲ್' ಮುಂತಾದ ಮನ್ನಣೆಗಳನ್ನು ಅವರು ತೆಗೆದುಕೊಳ್ಳಲಿಲ್ಲ. ಮುಂದೆ 1926ರಲ್ಲಿ ರಾಯಲ್ ಸೊಸೈಟಿ ಫಾರ್ ಲಿಟರೇಚರ್ ಪ್ರಶಸ್ತಿಗಳನ್ನು ಒಲ್ಲೆ ಎನ್ನಲಾಗದೆ ಪಡೆದರು.  ಅವರು ಅನೇಕ ರೀತಿಯ ಕತೆಗಳನ್ನು ಬರೆದಿದ್ದರೂ ಮಕ್ಕಳಿಗಾಗಿ ರಚಿಸಿದ ಪ್ರಾಣಿಗಳ ಕುರಿತಾದ ಬರಹಗಳೇ ಅವರಿಗೆ ಹೆಚ್ಚು ಕೀರ್ತಿ ತಂದವು.

The Story of the Gadsbys, Plain Tales from the Hills, The Phantom Rickshaw and other Eerie Tales, The Light that Failed, Mandalay(ಕಾವ್ಯ), Gunga Din (ಕಾವ್ಯ), Many Inventions (ಸಣ್ಣ ಕಥೆಗಳು), The Jungle Book  (ಸಣ್ಣ ಕಥೆಗಳು), The Second Jungle Book (ಸಣ್ಣ ಕಥೆಗಳು), ‘If’ -the essence of the message of The Gita in English, The Seven Seas, Captains Courageous, Recessional, The Day's Work, Stalky & Co., The White Man's Burden, Kim, Just So Stories, Puck of Pook's Hill , Rewards and Fairies, Life's Handicap (ಸಣ್ಣ ಕಥೆಗಳು), The Gods of the Copybook Headings, A Book Of Words, Limits and Renewals ಮುಂತಾದವು ಅವರ ಕೃತಿಗಳು


ರುಡ್ಯಾರ್ಡ್ ಕಿಪ್ಲಿಂಗ್ ಅವರು ತಮ್ಮ ಮಗನನ್ನು ಪ್ರಥಮ ಮಹಾಯುದ್ಧದಲ್ಲಿ ಕಳೆದುಕೊಂಡರು.  ಜನವರಿ 18, 1936ರಲ್ಲಿ ಅವರು ಈ ಲೋಕವನ್ನಗಲಿದರು.

Tag: Rudyard Kipling

ಕಾಮೆಂಟ್‌ಗಳಿಲ್ಲ: