ಗುರುವಾರ, ಆಗಸ್ಟ್ 29, 2013

ನರ್ಗಿಸ್

ನರ್ಗಿಸ್

ಭಾರತೀಯ ಚಲನಚಿತ್ರರಂಗವನ್ನು ಬೆಳಗಿದ ತಾರೆಯರಲ್ಲಿ ನರ್ಗಿಸ್ ದತ್ ಪ್ರಕಾಶಮಾನರೆನಿಸಿದವರು.  ಅವರ ಮೂಲ ಹೆಸರು ಫತೀಮಾ ರಶೀದ್.  ನರ್ಗಿಸ್ ಎಂಬುದು ಪರ್ಷಿಯನ್ ಪದವಾಗಿದ್ದು ಸುಂದರವಾದ ಹೂವಿನ ಅರ್ಥವನ್ನು  ಬಿಂಬಿಸುತ್ತದೆ.

ನರ್ಗಿಸ್ ಅವರು ಜನಿಸಿದ ದಿನ ಜೂನ್ 1, 1929.  ನರ್ಗಿಸ್ ದತ್ತರ ತಂದೆ ಉತ್ತಮಚಂದ್ ಮೋಹನ್ ಚಂದ್ ಅವರು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಪಂಜಾಬಿನ ಶ್ರೀಮಂತ ಬ್ರಾಹ್ಮಣ ಕುಟುಂಬದವರಾಗಿದ್ದರು.  ಅವರ ತಾಯಿ ಜದ್ದಾನ್ ಬಾಯಿ ಅಲಹಾಬಾದಿನಿಂದ ಪಂಜಾಬಿಗೆ ವಲಸೆ ಬಂದ ಮುಸಲ್ಮಾನ ಕುಟುಂಬದಕ್ಕೆ ಸೇರಿದವರಾಗಿದ್ದರು.  ಜದ್ದಾನ್ ಬಾಯಿ ಉತ್ತಮ ಹಿಂದೂಸ್ಥಾನಿ ಸಂಗೀತಗಾರ್ತಿಯಾಗಿದ್ದು ಅಲಹಾಬಾದಿನ ಆಸ್ಥಾನ ಕಲಾವಿದೆಯಾಗಿದ್ದರು.  ಜದ್ದಾನ್ ಬಾಯಿ ತಮ್ಮ ಮಗಳನ್ನು ಮತ್ತು ಬೇರೊಬ್ಬ ಪತಿಗೆ ಜನಿಸಿದ ತಮ್ಮ ಮಗ ಅನ್ವರ್ ಹುಸೇನನ್ನು ಆಗತಾನೇ ಪ್ರವರ್ಧಮಾನದಲ್ಲಿದ್ದ ಭಾರತೀಯ ಚಿತ್ರರಂಗವೆಂಬ ಕಲಾಲೋಕಕ್ಕೆ ಪರಿಚಯಿಸಿದರು.  

1935ರ ವರ್ಷದಲ್ಲಿ ತೆರೆಕಂಡ ತಲಾಶ್-ಎ-ಹಕ್ನರ್ಗಿಸ್ ಬಾಲನಟಿಯಾಗಿ ತಮ್ಮ ಆರನೆಯ ವರ್ಷದಲ್ಲಿ  ಚಿತ್ರರಂಗಕ್ಕೆ ಕಾಲಿಟ್ಟ ಚಿತ್ರ.  ನರ್ಗಿಸ್  ಮುಂದೆ ತಮ್ಮ ಹದಿನಾಲ್ಕರ ಹರಯದಿಂದಲೇ ಪ್ರೌಢ ಪಾತ್ರಗಳಲ್ಲಿ ಅಭಿನಯಿಸತೊಡಗಿದರು.  1942ರಲ್ಲಿ ತೆರೆಗೆ ಬಂದ ತಮನ್ನಾಅವರ ಚಲನಚಿತ್ರ ವೃತ್ತಿಗೆ ಪ್ರಾರಂಭ ಕೊಟ್ಟ ಚಿತ್ರ.  1940ರ ದಶಕದಿಂದ 1960ರ ದಶಕದವರೆವಿಗೆ ವ್ಯಾಪಿಸಿದ್ದ ನರ್ಗಿಸ್ ಅವರ ಚಿತ್ರರಂಗದ ಬದುಕು ಅತ್ಯಂತ ಜನಪ್ರಿಯ ಮತ್ತು ಉತ್ತಮ ವಿಮರ್ಶೆಗೆ ಅರ್ಹವೆನಿಸಿದ ಹಲವಾರು ಚಿತ್ರಗಳನ್ನು ಒಳಗೊಂಡಿವೆ.   ಇವುಗಳಲ್ಲಿ 1949ಬರ್ಸಾತ್ಮತ್ತು  ಅಂದಾಜ್’; 1951ಆವಾರಾಮತ್ತು  ದೀದಾರ್’; 1955ಶ್ರೀ ೪೨೦ಮತ್ತು 1956ಚೋರಿ ಚೋರಿಅತ್ಯಂತ ಜನಪ್ರಿಯ ಚಿತ್ರಗಳಾಗಿದ್ದವು.  ಅವರು ನಟಿಸಿದ ಬಹುತೇಕ ಚಿತ್ರಗಳ ನಾಯಕರು  ಅಂದಿನ ಮೇರು ನಟರೆನಿಸಿದ್ದ ರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್.

1957ರ ವರ್ಷದಲ್ಲಿ ತೆರೆಕಂಡ ಮದರ್ ಇಂಡಿಯಾಚಿತ್ರದಲ್ಲಿ ನರ್ಗಿಸ್  ಅವರ ಅಭಿನಯ ವಿಶ್ವ ಪ್ರಸಿದ್ಧ ಅಕಾಡೆಮಿ ಪ್ರಶಸ್ತಿ ಗಳಿಗೆ ನಾಮಾಂಕಿತಗೊಂಡಿತ್ತು.  ಆ ಚಿತ್ರ ಅವರಿಗೆ ಫಿಲಂ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು.  1958ರ ವರ್ಷದಲ್ಲಿ ನರ್ಗಿಸ್ ಅವರು ಆ ಚಿತ್ರದಲ್ಲಿ ತಮ್ಮೊಂದಿಗೆ ಅಭಿನಯಿಸಿದ್ದ ಸುನಿತ್ ದತ್ ಅವರನ್ನು ವರಿಸಿ ಚಿತ್ರರಂಗದಿಂದ ಬಹುತೇಕವಾಗಿ ತೆರೆಯ ಮರೆಗೆ ಸರಿದರು.  ಆ ನಂತರದಲ್ಲಿ ಸಹಾ ನರ್ಗಿಸ್  ಒಮ್ಮೊಮ್ಮೆ  ಚಿತ್ರರಂಗದಲ್ಲಿ ಕಾಣಿಸಿಕೊಂಡದ್ದುಂಟು.  ಅಂತಹ ಚಿತ್ರಗಳಲ್ಲಿ ಒಂದಾದ 1967ರ ವರ್ಷದಲ್ಲಿ ತೆರೆಕಂಡ ರಾತ್ ಔರ್ ದಿನ್ಚಿತ್ರದ ಅಭಿನಯಕ್ಕೆ ಅವರಿಗೆ ಅದೇ ವರ್ಷ ಆರಂಭವಾದ ಪ್ರಥಮ ರಾಷ್ಟ್ರೀಯ ಪ್ರಶಸ್ತಿ ಸಂದಿತು. 

ತಮ್ಮ ಪತಿ ಸುನಿಲ್ ದತ್ ಅವರೊಡಗೂಡಿ ನರ್ಗಿಸ್ ದತ್ ಅವರು ಅಜಂತಾ ಆರ್ಟ್ಸ್ ಕಲ್ಚರಲ್ ಟ್ರೂಪ್ಸ್ ಸಂಸ್ಥೆಯನ್ನು ಸ್ಥಾಪಿಸಿ ಆ ಕಾಲದ ಶ್ರೇಷ್ಠ ಕಲಾವಿದರು ಮತ್ತು ಗಾಯರನ್ನು ಒಂದುಗೂಡಿಸಿ ಗಡಿಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದರು.  ನರ್ಗಿಸ್ ದತ್  1970ರ ವರ್ಷದಲ್ಲಿ ದೈಹಿಕ  ಮತ್ತು ಮಾನಸಿಕ ವಿಕಲತೆಗಳಿಗೆ ಒಳಗಾದ ಮಕ್ಕಳ ಕ್ಷೇಮಾಭಿವೃದ್ಧಿಗಾಗಿನ ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಇಂಡಿಯಾಸಂಸ್ಥೆಯ ಪ್ರಥಮ ಪೋಷಕರಾಗಿ ಅದಕ್ಕಾಗಿ ಅಹರ್ನಿಶಿ ದುಡಿದು ಸಮಾಜ ಸೇವಕಿ ಎಣಿಸಿದ ಹೃದಯವಂತೆ.  1980ರ ವರ್ಷದಲ್ಲಿ ಅವರು ರಾಜ್ಯ ಸಭೆಯ ಸದಸ್ಯರಾಗಿ ಗೌರವಿಸಲ್ಪಟ್ಟರು.   

ನರ್ಗಿಸರ ಪತಿ ಸುನಿಲ್ ದತ್  ಅವರೂ ಚಿತ್ರರಂಗ, ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಂಭಾವಿತ ವ್ಯಕ್ತಿ ಎನಿಸಿದ್ದರು.    ಸಂಜಯ್, ಪ್ರಿಯಾ ಮತ್ತು ನಮ್ರತಾ ಈ ಮೂವರು ನರ್ಗಿಸ್ ಸುನಿಲ್ ದತ್  ದಂಪತಿಗಳ  ಮೂರು ಮಕ್ಕಳು.   

ನರ್ಗಿಸ್ ಅವರು ಮೇ 7, 1981ರ ವರ್ಷದಲ್ಲಿ ಪಿತ್ತಜನಕಾಂಗದ ಕ್ಯಾನ್ಸರ್ ಕಾಯಿಲೆಗೆ ತಮ್ಮ ಜೀವವನ್ನು ಶರಣಾಗಿಸಿದರು. 1982ರ ವರ್ಷದಲ್ಲಿ ಅವರ ಸ್ಮರಣಾರ್ಥವಾಗಿ ನರ್ಗಿಸ್ ದತ್ ಮೆಮೋರಿಯಲ್ ಕ್ಯಾನ್ಸರ್ ಫೌಂಡೇಶನ್ ಸ್ಥಾಪಿತಗೊಂಡಿತು.  ಅವರು ಚಲನಚಿತ್ರರಂಗ ಮತ್ತು ಸಮಾಜಕ್ಕೆ ಸಲ್ಲಿಸಿದ ಶ್ರೇಷ್ಠ ಸೇವೆಯ ಗೌರವಾರ್ಥವಾಗಿ ನರ್ಗಿಸ್ ದತ್ ರಾಷ್ಟ್ರೀಯ ಭಾವೈಕ್ಯತೆಗಾಗಿನ ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.  


2001ರಲ್ಲಿ ನರ್ಗಿಸ್ ಅವರನ್ನು ಶತಮಾನದ ಶ್ರೇಷ್ಠ ನಟಿ ಎಂದು ಹೆಸರಿಸಲಾಯಿತು.  2011ರಲ್ಲಿ ರೀಡಿಫ್.ಕಾಂ ಸಂಸ್ಥೆ ನರ್ಗಿಸ್ ಅವರನ್ನು ಸಾರ್ವಕಾಲಿಕವಾದ ಶ್ರೇಷ್ಠ ನಟಿ ಎಂದು ಹೆಸರಿಸುತ್ತಾ ವೈವಿದ್ಯತೆ, ಅಭಿವ್ಯಕ್ತಿ, ಪ್ರಸನ್ನತೆ ಮತ್ತು ಅಪ್ಯಾಯಮಾನತೆಗಳ ಸಂಗಮವನ್ನು ಬಿಂಬಿಸುವ ಸಂಭ್ರಮದ ನಟಿ ನರ್ಗಿಸ್ ದತ್’’ ಎಂದು ವರ್ಣಿಸಿತು.  ಟ್ರಿಬ್ಯೂನ್ ಪತ್ರಿಕೆ ನರ್ಗಿಸ್ ಅವರು ಸೌಂಧರ್ಯ ಮತ್ತು ಕಲಾತ್ಮಕತೆಯ ಅಭಿವ್ಯಕ್ತಿ ಇವೆರಡನ್ನೂ ಅತ್ಯಂತ ಪ್ರಶಂಸನೀಯವೆನ್ನುವಂತ ಸುಲಭತೆಯಲ್ಲಿ ನಿರ್ವಹಿಸಿದ ಅಮೋಘ ಪ್ರತಿಭೆಎಂದು ವರ್ಣಿಸಿದೆ.

Tag: Nargis

ಕಾಮೆಂಟ್‌ಗಳಿಲ್ಲ: