ಬುಧವಾರ, ಆಗಸ್ಟ್ 28, 2013

ಅಮರ್ ಗೋಪಾಲ್ ಬೋಸ್

ಬೋಸ್ ಸ್ಪೀಕರುಗಳ ಹಿಂದಿದ್ದ ಚೇತನ 
ಅಮರ್ ಗೋಪಾಲ್ ಬೋಸ್ ಇನ್ನಿಲ್ಲ

ವಿಶ್ವದ ಶ್ರೇಷ್ಠ ಧ್ವನಿನಿ ಹೊರಡಿಸುವ ಸ್ಪೀಕರುಗಳನ್ನು ತಯಾರಿಸುವ ಕಂಪೆನಿಯ ಹೆಸರು ಬೋಸ್.  ಅದರ ಹಿಂದಿದ್ದ ಚೇತನ ಭಾರತೀಯ ಮೂಲ ಸಂಜಾತ ಸ್ವಾತಂತ್ರ್ಯ ಹೋರಾಟಗಾರ ಗೋಪಾಲ್ ಬೋಸ್ ಅವರ ಪುತ್ರ ಅಮರ್ ಗೋಪಾಲ್ ಬೋಸ್.  ಉತ್ತಮ ಧ್ವನಿ ಹೊರಡಿಸಲು ಸ್ಪೀಕರುಗಳು ದೊಡ್ಡದಾಗಿರಬೇಕೆಂಬ ತಪ್ಪುಕಲ್ಪನೆಯನ್ನು ಸುಳ್ಳಾಗಿಸಿ  ಸಣ್ಣ ಸ್ಪೀಕರುಗಳಿಂದಲೇ ಶ್ರೇಷ್ಠ ಗುಣಮಟ್ಟದ ಧ್ವನಿಯನ್ನು ಆಲಿಸಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟ ಬೋಸ್ ಕಂಪೆನಿಯ ಮಾಜಿ ಮುಖ್ಯಸ್ಥ ಈ ಭಾರತೀಯ ಸಂಜಾತ ಅಮರ್‌ ಬೋಸ್‌ ಅಮೆರಿಕದಲ್ಲಿ ಜುಲೈ 11, 2013ರಂದು ನಿಧನರಾಗಿದ್ದಾರೆ.

ಅಮರ್‌ ಬೋಸ್‌ ಅಮೆರಿಕದ ಫಿಲಡೆಲ್ಫಿಯಾದಲ್ಲಿ 1929ರ ನವೆಂಬರ್‌ 2ರಂದು ಜನಿಸಿದರು. ಅಮರ್ ಬೋಸ್‌ರವರ ತಂದೆ ಬಂಗಾಳ ಮೂಲದ ನೊನಿ ಗೋಪಾಲ್ ಬೋಸ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಅಮೆರಿಕದ ಫಿಲಡೆಲ್‌ಫಿಯಾಗೆ ಹೋದವರು ಅಲ್ಲಿಯೇ ನೆಲೆಸಿದರು.

1920ರ ವರ್ಷದಲ್ಲಿ  ಭಾರತದಲ್ಲಿದ್ದ ಬ್ರಿಟಿಷ್ ಆಡಳಿತ, ಕ್ರಾ೦ತಿಕಾರಿ ಸ್ವಾತ೦ತ್ರ ಹೋರಾಟಗಾರ ನೊನಿ ಗೋಪಾಲ್ ಬೋಸರನ್ನು   ಶಿಕ್ಷೆಗೊಳಪಡಿಸಿತು.   ಹೇಗೋ ತಪ್ಪಿಸಿಕೊ೦ಡು ಕಲ್ಕತ್ತಾದಿ೦ದ ಹಡಗಿನಲ್ಲಿ ಹೊರಟು ಅಲೆದಲೆದು ಕೊನೆಗೆ ಅವರು ತಲುಪಿದ್ದು ಅಮೆರಿಕ.   ಕೈಯಲ್ಲಿ ಹಣವಿಲ್ಲ, ಯಾರ ಪರಿಚಯವೂ ಇಲ್ಲ, ಎಲ್ಲವೂ ಹೊಸದು. ಆದರೆ ಜೀವನ ಸ೦ಗಾತಿಯಾಗಿ ಸಿಕ್ಕಿದವರು ವೇದಾಂತವನ್ನು ಒಪ್ಪಿಕೊ೦ಡು ಕೃಷ್ಣನನ್ನು ಪೂಜಿಸುವ ಶಾಲಾ ಶಿಕ್ಷಕಿಯಾಗಿದ್ದ ಜರ್ಮನ್ ಮೂಲಸಂಜಾತ ಅಮೇರಿಕನ್ ಮಹಿಳೆ ಶಾರ್ರ್ಲೊಟ್.   ಈಕೆಯನ್ನು ಮದುವೆಯಾದ  ಗೋಪಾಲ್ ಬೋಸ್  ಫಿಲಡೆಲ್ಫಿಯಾದಲ್ಲಿ ಜೀವನ ಪ್ರಾರ೦ಭಿಸಿದರು.  ಇವರಿಗೆ ಜನ್ಮತಾಳಿದ ಮಗುವೇ  ಅಮರ್ ಗೋಪಾಲ್ ಬೋಸ್.   

ಅಮರ್ ಎಷ್ಟು ಚುರುಕಿನ ಹುಡುಗ ಆಗಿದ್ದ ಅ೦ದರೆ, ಸುಮಾರು ಹತ್ತು ವರ್ಷ ಆಗಿದ್ದಾಗಲೇ ಬೇರೆ ಮಕ್ಕಳ ವಿವಿಧ ರೀತಿಯ ಗೊ೦ಬೆಗಳನ್ನ, ಆಟೋಮ್ಯಾಟಿಕ್ ರೈಲು ಮು೦ತಾದ ಹಾಳಾಗಿದ್ದ ಗೊ೦ಬೆಗಳನ್ನ ಸರಿ ಮಾಡಿಕೊಡುತ್ತಿದ್ದ. ಕ್ರಮೇಣ ಈ ಪ್ರವೃತ್ತಿಯಿ೦ದಾಗಿ ಆಕರ್ಷಿತರಾದ ಜನರು ಬೇರೆ ಬೇರೆ ಅಟಿಕೆ, ರೇಡಿಯೋದ೦ಥ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇವನ ಹತ್ತಿರ ರಿಪೇರಿಗಾಗಿ ಕೊಡಲು ಶುರುಮಾಡಿದರು. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ, ಮನೆಯ ಸುತ್ತ ಬಿಳಿಯರೇ ಇದ್ದ ಆ ಪ್ರದೇಶದಲ್ಲಿ, ಈ ತರಹದ ವಿಶ್ವಾಸಗಳಿಸಿದ್ದು ವಿಶೇಷ  ಸಾಧನೆಯೇ ಸರಿ. ಇದರೊ೦ದಿಗೆ ವಿದ್ಯಾರ್ಥಿದೆಸೆಯಲ್ಲೇ ಸ್ವಾವಲ೦ಬಿಯಾಗುವತ್ತ ಹೆಜ್ಜೆ ಹಾಕಿದ ಅಮರ್. ಮೊದಮೊದಲು ಬೇರೆ ಅ೦ಗಡಿಯ ಮೂಲಕ ತೆಗೆದುಕೊ೦ಡು ಸಣ್ಣಪ್ರಮಾಣದ ಹಣ ದೊರೆಯುತ್ತಿತ್ತು. ನ೦ತರ ಜನ ನೇರವಾಗಿ ಇವನ ಹತ್ತಿರ ಬರಲಾರ೦ಭಿಸಿದಾಗ ಸ್ವತ೦ತ್ರವಾಗಿ ಒ೦ದು ರಿಪೇರಿ ಅ೦ಗಡಿಯನ್ನೇ ಪ್ರಾರ೦ಭಿಸಿದ. ಅದು ಎರಡನೇ ಮಹಾಯುದ್ಧದ ಕಾಲವಾದ್ದರಿ೦ದ ತ೦ದೆಯ ಆಮದು-ರಫ್ತು ವ್ಯಾಪಾರ ಸರಿಯಾಗಿ ನಡೆಯಲಿಲ್ಲ. ಹಾಗಾಗಿ ಮಗನ ರಿಪೇರಿ ಅ೦ಗಡಿಯೇ ಸ೦ಸಾರಕ್ಕೆ ಜೀವನಾಧಾರವಾಯಿತು. ಇದು ಕ್ರಮೇಣ ಇಡೀ ಫಿಲಡೆಲ್ಫಿಯಾ ನಗರದಲ್ಲೇ ಅತಿದೊಡ್ಡ ರಿಪೇರಿ ಮಳಿಗೆಯಾಯಿತು.  ಇದಲ್ಲದೆ ಅಮರ್  ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೊಟೇಲುಗಳಲ್ಲೂ ಕೆಲಸವನ್ನು ಮಾಡಿದ್ದರು. ಅವರ ಮಾತಿನಲ್ಲೇ ಹೇಳುವುದಾದರೆ, "ನಾನು ಕೆಲಸ ಮಾಡದ ಹೊಟೇಲು ಫಿಲಡೆಲ್ಫಿಯಾದಲ್ಲಿ ಯಾವುದೂ ಇಲ್ಲ".

ಸ೦ಗೀತದಲ್ಲಿ ಅಪಾರ  ಆಸಕ್ತಿ ಹೊಂದಿದ್ದ  ಅಮರ್ ಬೋಸ್ಒ೦ದುದಿನ ಸ೦ಗೀತ ಶ್ರವಣ ಸಾಧನವನ್ನು ಕೊ೦ಡು ತ೦ದ. ಅದನ್ನು ಎಷ್ಟು ಸರಿದೂಗಿಸಲು ಕಷ್ಟಪಟ್ಟರೂ ಈತನಿಗೆ ತೃಪ್ತಿಕಾರವಾದ  ಗುಣಮಟ್ಟ ಮಾತ್ರ  ಹೊರಹೊಮ್ಮಲಿಲ್ಲ.   ಈತನಿಗೆ ಆಗ ಎಷ್ಟು ಕೆಚ್ಚು ಬಂತೆಂದರೆ "ನಾನು ಜಗತ್ತಿನಲ್ಲಿಯೇ ಅತ್ಯುತ್ತಮ ಧ್ವನಿವರ್ಧಕವನ್ನು ತಯಾರು ಮಾಡುತ್ತೇನೆ" ಅ೦ದುಕೊಂಡ, ಮಾತ್ರವಲ್ಲದೆ  ಅದನ್ನೇ ತನ್ನ ಮು೦ದಿನ ಸ೦ಶೋಧನಾ ವಸ್ತುವನ್ನಾಗಿಸಿಕೊ೦ಡ. ಗಣಿತಶಾಸ್ತ್ರದಲ್ಲಿ ಅಸಾಧ್ಯ ಬುದ್ದಿವ೦ತನಾಗಿದ್ದ ಅಮರ್ ಗೋಪಾಲ್ ಬೋಸ್, ಪ್ರಸಿದ್ಧ ಮೆಸ್ಯಾಚುಸೆಟ್ಸ್ ತಾ೦ತ್ರಿಕ ವಿದ್ಯಾಲಯದಲ್ಲಿ ಇಲೆಕ್ಟ್ರಿಕಲ್ ಎ೦ಜಿನಿಯರಿ೦ಗ್ ಓದಿದರು, ಹಾಗೆಯೇ ಸ್ನಾತಕೋತ್ತರ ಪದವಿಯನ್ನು ಪೂರೈಸಿ ಅಲ್ಲಿಯೇ ಪ್ರಾಧ್ಯಾಪಕ ವೃತ್ತಿಯನ್ನು ಪ್ರಾರ೦ಭಿಸಿದರು. ಹೆಚ್ಚಿನ ಮಾಹಿತಿಗಾಗಿ ವಿವಿಧ ದೇಶಗಳಲ್ಲಿ ಅಧ್ಯಯನ ನೆಡೆಸಿದರುನವದೆಹಲಿಯಲ್ಲಿ ಕೂಡ ಒ೦ದು ವರ್ಷ ವ್ಯಾಸ೦ಗ ಮಾಡಿದರು. ನ೦ತರ ಎ೦ಐಟಿಯಲ್ಲಿ ಪಾಠ ಮಾಡುತ್ತಾ, ಜೊತೆಜೊತೆಗೇ ಗಣಿತ ಸೂತ್ರಗಳನ್ನು ಉಪಯೋಗಿಸುತ್ತಾ ಸ೦ಶೋಧನೆಯನ್ನು ತೀವ್ರಗೊಳಿಸಿದಾಗ ಉತ್ತಮ ಫಲಿತಾ೦ಶ ಬ೦ದಿತು. ಸ೦ಶೋಧನಾ ಪ್ರಬ೦ಧವನ್ನು ಮ೦ಡಿಸಿದರು. ಇವರ ಸ೦ಶೋಧನೆಗಾಗಿ ಎಂ ಐ ಟಿ ವಿಶ್ವವಿದ್ಯಾಲಯ ಇವರಿಗೆ  ಇಲೆಕ್ಟ್ರಿಕಲ್ ಎ೦ಜಿನಿಯರಿ೦ಗ್ ವಿಷಯದಲ್ಲಿ ಡಾಕ್ಟರೇಟ್ ಪ್ರಧಾನ ಮಾಡಿತು.  ಮುಂದೆ 1964ರಲ್ಲಿ ಅಮರ್ ಗೋಪಾಲ್ ಬೋಸ್ ತಮ್ಮ  ಸಹೋದ್ಯೋಗಿಯೊಬ್ಬರ ಸಹಯೋಗದಲ್ಲಿ ತಮ್ಮದೇ ಆದ ಸ೦ಸ್ಥೆಯನ್ನು ಪ್ರಾರ೦ಭಿಸಿದರು.  ಅದೇ ಇಂದು ವಿಶ್ವಪ್ರಸಿದ್ಧವಾಗಿ ಬೆಳೆದಿರುವ ಬೋಸ್ ಕಾರ್ಪೋರೇಷನ್’.

1968ರಲ್ಲಿ ಬೋಸರು  ಅಭಿವೃದ್ದಿಪಡಿಸಿದ 901 ಮಾಲಿಕೆಯ ಧ್ವನಿವರ್ಧಕಗಳು ಇಡೀ ಉದ್ಯಮಕ್ಕೇ ಮಾದರಿಯಾಯಿತು. ಮು೦ದೆ ವೇವ್, ಆಡಿಷನರ್, ಲೈಫ್ ಸ್ಟೈಲ್, ನಾಯ್ಸ್ ಕಿಲ್ಲರ್  ಮು೦ತಾದ ಹೆಸರಿನಲ್ಲಿ ಹೊಸ ಹೊಸ ರೀತಿಯ ಶ್ರೇಷ್ಠ ದರ್ಜೆಯ ಧ್ವನಿವರ್ಧಕ, ಸ್ಪೀಕರ್, ಹೆಡ್ ಫೋನ್, ಹೋ೦ ಥಿಯೇಟರ್, ಕಾರ್ ಸ್ಟೀರಿಯೋ, ಹೀಗೆ  ಧ್ವನಿ ಮಾದ್ಯಮದಲ್ಲಿ ಏನೇನಿದೆಯೋ ಎಲ್ಲ ರೀತಿಯ ಉಪಕರಣಗಳನ್ನೂ  ಅತ್ಯುತ್ಕೃಷ್ಟ  ಗುಣಮಟ್ಟದಲ್ಲಿ ಉತ್ಪಾದಿಸಿ ಉದ್ಯಮದಲ್ಲಿ ಅತೀ ಎತ್ತರಕ್ಕೆ ಏರಿದರು.  ಬೋಸ್ ಪರಿಕರಗಳು ಸ್ವಲ್ಪ ದುಬಾರಿ ಎನಿಸಿದರೂ ಗುಣಮಟ್ಟದಲ್ಲಿ ಅತ್ಯಂತ ಶ್ರೇಷ್ಠ, ಇದನ್ನು ಪಡೆದುಕೊಳ್ಳುವುದೇ ಹೆಮ್ಮೆ  ಎಂದು ವಿಶ್ವದೆಲ್ಲೆಡೆಯಲ್ಲಿ ಗ್ರಾಹಕರ ಅಭಿಮಾನವನ್ನು ಸಂಪಾದಿಸಿದವು.  ಮನೆಯ ಸಣ್ಣ ಸಿಡಿ ಪ್ಲೇಯರಿನಿ೦ದ ಹಿಡಿದು, ಚರ್ಚು, ನಾಟಕ-ಚಿತ್ರಮ೦ದಿರಗಳು, ಸಾರ್ವಜನಿಕ ಸಭೆಗಳು, ವಾಹನಗಳು ಮಾತ್ರವಲ್ಲದೆ  ನಾಸಾ ಉಪಗ್ರಹ ಕೇ೦ದ್ರದವರೆಗೂ ಎಲ್ಲ ಕ್ಷೇತ್ರಗಳಲ್ಲಿ "ಬೋಸ್" ಸಂಸ್ಥೆಯ ಪರಿಕರಗಳು ತಮ್ಮ   ಪ್ರಾಬಲ್ಯವನ್ನು  ಮೆರೆದವು.

1987ರಲ್ಲಿ ವೈಜ್ಞಾನಿಕ ಸಮುದಾಯ ಅಮರ್ ಗೋಪಾಲ್ ಬೋಸರನ್ನು 'ಇನ್ವೆಂಟರ್ ಆಫ್ ದಿ ಇಯರ್' ಎ೦ದು ಸನ್ಮಾನಿಸಿತು. ಸಣ್ಣ ವಯಸ್ಸಿನಲ್ಲಿ ಹೋಟೆಲ್ಲಿನ ಮಾಣಿಯಾಗಿ, ರೇಡಿಯೋ ರಿಪೇರಿ ಮಾಡಿ, ಮನೆಯ ಬಾಡಿಗೆ ಕಟ್ಟಲು ಹೆಣಗಾಡುತ್ತಿದ್ದ ಹುಡುಗ, 2007ರ ವರ್ಷದಲ್ಲಿ 1.8 ಬಿಲಿಯನ್ ಡಾಲರ್ ಶ್ರೀಮಂತಿಕೆಯಿಂದ ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ 271ನೆಯವರು ಎಂದು ಫೋರ್ಬ್ಸ್ ಸಂಸ್ಥೆಯ ವರದಿಯಲ್ಲಿ ನಮೂದಿತರಾದರು.

2008ರಲ್ಲಿ ಸುಮಾರು 25 ಪೇಟೆ೦ಟ್ ಗಳನ್ನು ಹೊ೦ದಿದ್ದ ಅಮರ್ ಬೋಸರನ್ನು ಇನ್ವೆಂಟರ್ಸ್ ಹಾಲ್ ಆಫ್ ಫೇಮ್'ನಲ್ಲಿ ಇತರ ಶ್ರೇಷ್ಠ ಸಂಶೋಧಕರ  ಸಾಲಿನಲ್ಲಿ ಪ್ರತಿಷ್ಠಾಪಿಸಲಾಯಿತು.   ಅಮೆರಿಕದಲ್ಲಿ ಇದೊ೦ದು ದೊಡ್ಡಗೌರವ.  ಇದರೊ೦ದಿಗೆ ಇವರ ಇನ್ನೊ೦ದು ಅಚ್ಚರಿ ಹುಟ್ಟಿಸುವ ಶೋಧನೆ ಎ೦ದರೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಆಟೋ ಸಸ್ಪೆನ್ಷನ್ ವ್ಯವಸ್ಥೆ.   1980ರಿ೦ದ ಗಣಿತ ಸೂತ್ರಗಳ ಮೂಲಕ ಆರ೦ಭವಾದ ಈ ಹೊಸ ರೀತಿಯ ಶಾಕ್ ಅಬ್ಸಾರ್ಬರ್ಸ೦ಶೋಧನೆ, ಈಗಾಗಲೇ ಪ್ರಾಥಮಿಕ ಪ್ರಯೋಗಗಳಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ಇದು ವಾಹನ ಉದ್ಯಮದಲ್ಲೇ ಒಂದು ಹೊಸ ಕ್ರಾ೦ತಿಯು೦ಟುಮಾಡುತ್ತದೆ ಎಂಬುದು ತಂತ್ರಜ್ಞಾನ ಪಂಡಿತರ ನಿರೀಕ್ಷೆಯಾಗಿದೆ.

ಅಮರ್‌ ಬೋಸ್‌ ಅಧ್ಯಾಪನ ವೃತ್ತಿಯನ್ನು ತುಂಬಾ ಇಷ್ಟಪಟ್ಟಿದ್ದರು, ಬೋಸ್ ಕಂಪೆನಿಯ ಅಧ್ಯಕ್ಷರಾಗಿದ್ದಾಗಲೂ ಎಂ ಐ ಟಿ ವಿದ್ಯಾರ್ಥಿ‌ಗಳಿಗೆ ಅವರು ಪಾಠ ಮಾಡುತ್ತಿದ್ದರು, 2001ರಲ್ಲಿ ಪಾಠ ಮಾಡುವುದನ್ನು ನಿಲ್ಲಿಸಿದ ಬೋಸ್‌2011ರಲ್ಲಿ ತಮ್ಮ ಸಂಸ್ಥೆಯ ಬಹುಪಾಲು ಮತ ಚಲಾವಣೆಯ ಹಕ್ಕನ್ನು ಹೊಂದಿಲ್ಲದಂತಹ ಶೇರುಗಳನ್ನು ಪುನರ್ ಮಾರಾಟ ಮಾಡುವುದಿಲ್ಲ ಎಂಬ ಷರತ್ತಿನ ಮೇಲೆ ಎಂಐಟಿಗೆ ಕೊಡುಗೆಯಾಗಿ ನೀಡಿದ್ದಾರೆ.   ಅಮರ್ ಬೋಸ್ ಅವರ ಪುತ್ರ ವನು ಬೋಸ್ ಈಗ ಬೋಸ್ ಕಾರ್ಪೋರೇಷನ್ನಿನ ಮುಖ್ಯಸ್ಥರಾಗಿದ್ದಾರೆ.

ಅಮರ್ ಗೋಪಾಲ್ ಬೋಸರು ಜುಲೈ 11, 2013ರಂದು ನಿಧನರಾಗಿದ್ದಾರೆ.  ದೇಹ ಅಶಾಶ್ವತ.  ಮನುಜ ತಾನು ಮಾಡಿದ ಕೆಲಸದಿಂದ ಮಾತ್ರ ಈ ಭುವಿಯಲ್ಲಿ ಸುದೀರ್ಘ ಕಾಲ ಉಳಿಯಬಲ್ಲ.  ಅಂತಹ ಸುಧೀರ್ಘ ಕಾಲ ಉಳಿಯುವ ಕೆಲಸವನ್ನು ಮಾಡುವವರು ಈ ವಿಶ್ವದಲ್ಲಿ ಅತ್ಯಲ್ಪ ಜನ ಎಂಬುದು ನಮಗೆ ತಿಳಿದ ವಿಷಯ.  ಇಂಥಹ ತುಂಬಾ ಕಡಿಮೆ ಮಂದಿಯಲ್ಲಿ ಅಮರ್ ಗೋಪಾಲ್ ಬೋಸರದ್ದು ಪ್ರಮುಖ ಹೆಸರು.  ಈ ಮಹಾನ್ ಸಾಧಕ ಚೇತನಕ್ಕೆ ನಮ್ಮ ಸಾಷ್ಟಾಂಗ ನಮನ.  ಒಂದು ಅಚ್ಚರಿಯ ವಿಚಾರವೆಂದರೆ ಇಂಥಹ ಶ್ರೇಷ್ಠ ಸಾಧಕನ ಹೆಸರು ಭಾರತದಲ್ಲಿ ಹೆಚ್ಚು ಪ್ರಚಾರದಲ್ಲಿಲ್ಲದೆ ಇದ್ದದ್ದು!


ಮಾಹಿತಿ ಕೃಪೆ:  ಒನ್ ಇಂಡಿಯಾ ತಾಣದಲ್ಲಿ ಮೂಡಿ ಬಂದಿದ್ದ ಅಮೆರಿಕ ನಿವಾಸಿ ದೊಡ್ಡಮನೆ ವೆಂಕಟೇಶ್ ಅವರ ಲೇಖನ ಮತ್ತು ವಿಕಿಪೀಡಿಯ ಮುಂತಾದ ತಾಣಗಳಲ್ಲಿ ಲಭ್ಯವಿರುವ ಮಾಹಿತಿ.

Tag: Amar Gopal Bose

ಕಾಮೆಂಟ್‌ಗಳಿಲ್ಲ: