ಸೋಮವಾರ, ಆಗಸ್ಟ್ 26, 2013

ಕಡೆಂಗೋಡ್ಲು ಶಂಕರಭಟ್ಟ

ಕಡೆಂಗೋಡ್ಲು ಶಂಕರಭಟ್ಟ

ಆಧುನಿಕ ಕನ್ನಡ ಸಾಹಿತ್ಯದ ಮಹತ್ವದ ಕವಿಗಳಲ್ಲಿ ಕಡೆಂಗೋಡ್ಲು ಶಂಕರಭಟ್ಟರು ಪ್ರಮುಖರು.  ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂದ ಸುಮಾರು ಎಂಟು ಮೈಲು ದೂರದ ಪೆರುವಾಯಿ ಗ್ರಾಮದ ಕಡೆಂಗೋಡ್ಲು ಎಂಬ ಊರಿನಲ್ಲಿ.  ಶಂಕರಭಟ್ಟರ ಜನ್ಮದಿನ 1904 ಆಗಸ್ಟ್ 10. 

ಶಂಕರಭಟ್ಟರ ಬಂಧುವಾದ, ಕನ್ನಡ ಸಾಹಿತ್ಯದ ಹಿರಿಯ ಸಂಶೋಧಕರಾದ ಮುಳಿಯ ತಿಮ್ಮಪ್ಪಯ್ಯನವರು ಶಂಕರ ಭಟ್ಟರ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ಕೊಟ್ಟರು.  ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯ ಶಾಲೆಯಲ್ಲಿ ಮುಗಿಸಿದ ಶಂಕರಭಟ್ಟರು ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಅಭ್ಯಾಸವನ್ನು ನಡೆಸಿದರು.  ಮಂಗಳೂರಿನಲ್ಲಿ ಮುಳಿಯ ತಿಮ್ಮಪ್ಪಯ್ಯನವರ ಮನೆಯಲ್ಲಿ ವಾಸವಾಗಿದ್ದ ಶಂಕರಭಟ್ಟರಿಗೆ ಸಾಹಿತ್ಯದ ಪರಿಸರ ಸಹಜವಾಗಿಯೇ ಪ್ರಾಪ್ತವಾಯಿತು.  ಕೆನರಾ ಹೈಸ್ಕೂಲಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ ಅಚ್ಯುತ ಬಾಳಿಗರ ಪ್ರಭಾವ ವಿದ್ಯಾರ್ಥಿ ಶಂಕರಭಟ್ಟರ ಸಾಹಿತ್ಯ ಶಕ್ತಿಯನ್ನು ಹೆಚ್ಚಿಸಿತು. 

ಕಾಲೇಜು ಪ್ರವೇಶಿಸುವ ಸಂದರ್ಭದಲ್ಲಿ ಭಾರತಸ್ವಾತಂತ್ರ ಸಂಗ್ರಾಮದ ಕರೆಗೆ ಓಗೊಟ್ಟು ತಮ್ಮ ಶಾಲಾ ಶಿಕ್ಷಣವನ್ನು ಕೈಬಿಟ್ಟ ಭಟ್ಟರು, ಗಾಂಧೀಜಿಯವರು ಮಂಗಳೂರಿಗೆ ಬಂದು ಸಾರ್ವಜನಿಕ ಸಭೆಯಲ್ಲಿ ನೀಡಿದ ಸತ್ಯಾಗ್ರಹ ಸಂದೇಶದಿಂದ ಪ್ರಭಾವಿತರಾದರು.  ದಕ್ಷಿಣ ಕನ್ನಡದಲ್ಲಿ ಕಾರ್ನಾಡ್ ಸದಾಶಿವರಾಯರ ಸ್ವಾತಂತ್ರ್ಯ ಹೋರಾಟದ ಆದರ್ಶದಿಂದ ಪ್ರಭಾವಿತರಾದ ಶಂಕರಭಟ್ಟರು ರಾಜಕೀಯ ಅಂದೋಲನಕ್ಕೆ ಧುಮುಕಿ ಸ್ವಯಂಸೇವಕರಾಗಿ ಸತ್ಯಾಗ್ರಹದಲ್ಲಿ ಭಾಗವಹಿಸಿದರು.  ಮುಂದೆ ಅವರು ಮಂಗಳೂರಿನ ಗುಜರಾತ್ ವಿದ್ಯಾಪೀಠದಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿದರು.  ಬಳಿಕ ಧಾರವಾಡದ ಶಿಕ್ಷಣ ಸಮಿತಿಯ ಸ್ನಾತಕಪರೀಕ್ಷೆಯಲ್ಲಿ ಉಚ್ಚ ಶ್ರೇಣಿಯಲ್ಲಿ ತೇರ್ಗಡೆಯಾದರು.

ಕಾರ್ನಾಡ್ ಸದಾಶಿವರಾಯರು ಮಂಗಳೂರಿನಲ್ಲಿ ಸ್ಥಾಪಿಸಿದ ತಿಲಕ ವಿದ್ಯಾಲಯವೆಂಬ ರಾಷ್ಟ್ರೀಯ ಪಾಠಶಾಲೆಯಲ್ಲಿ ಶಂಕರಭಟ್ಟರು ಅಧ್ಯಾಪಕರಾಗಿ ಸೇರಿದರು.  ಆ ಶಾಲೆಯ ಆರಂಭದಿಂದ ಅದು ಮುಚ್ಚುವವರೆಗೂ ಶಂಕರಭಟ್ಟರು ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದರು.    1929ರಲ್ಲಿ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜ್ ಎಂಬ ಮಹಿಳಾ ವಿದ್ಯಾಸಂಸ್ಥೆಯಲ್ಲಿ ತೆರವಾದ ಕನ್ನಡ ಪ್ರಾಧ್ಯಾಪಕರ ಹುದ್ದೆಗೆ ಅರ್ಹರನ್ನು ನೇಮಿಸಲು ಸಂಸ್ಥೆಯವರು ಪಂಜೆ ಮಂಗೇಶರಾಯರನ್ನು ವಿನಂತಿಸಿಕೊಂಡಾಗ ಪಂಜೆಯವರು ಸೂಚಿಸಿದ್ದು ಶಂಕರ ಭಟ್ಟರ ಹೆಸರನ್ನು.  1929ರಿಂದ 1964ರ ವರೆಗೆ 35 ವರ್ಷಗಳ ಕಾಲ ಶಂಕರಭಟ್ಟರು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸಾವಿರಾರು ಮಂದಿ ವಿದ್ಯಾರ್ಥಿನಿಯರಲ್ಲಿ ಕನ್ನಡದ ಒಲವನ್ನು ಮೂಡಿಸಿದರು.

ಪತ್ರಿಕೋದ್ಯಮ ಕಡೆಂಗೋಡ್ಲು ಶಂಕರಭಟ್ಟರ ಒಲವಿನ ಕ್ಷೇತ್ರಗಳಲ್ಲಿ ಒಂದು.  ನವಯುಗ’, ‘ರಾಷ್ಟ್ರಬಂಧು’, ‘ರಾಷ್ಟ್ರಮತಮುಂತಾದ ಪತ್ರಿಕೆಗಳಲ್ಲಿ ಅವರು ಮಹತ್ವದ ಸೇವೆ ಸಲ್ಲಿಸಿದರು.

ಕಡೆಂಗೋಡ್ಲು ಶಂಕರ ಭಟ್ಟರ ಸಾಹಿತ್ಯ ಸೃಷ್ಟಿಯು ಸಾಹಿತ್ಯ ಪ್ರಕಾರದ ವಿವಿಧ ಮುಖಗಳಲ್ಲಿ ಕಾಣಿಸಿಕೊಂಡಿದೆ.  ಘೋಷಯಾತ್ರೆ, ಗಾಂಧಿ ಸಂದೇಶ, ವಸ್ತ್ರಾಪಹರಣ, ಕಾಣಿಕೆ, ನಲ್ಮೆ, ಹಣ್ಣುಕಾಯಿ, ಪತ್ರಪುಷ್ಪ ಇವು ಕಡೆಂಗೋಡ್ಲು ಅವರ ಕಾವ್ಯ ಸಂಕಲನಗಳು.

ಉಷೆ, ಹಿಡಂಬೆ, ವಿರಾಮ, ಯಜ್ಞಕುಂಡ, ಅಜಾತಶತ್ರು, ಗುರುದಕ್ಷಿಣೆ, ಮಹಾಯೋಗಿ ಇವು ಕಡೆಂಗೋಡ್ಲು ಅವರ ಪ್ರಕಟಿತ ನಾಟಕಗಳು. 

ಧೂಮಕೇತು, ದೇವತಾ ಮನುಷ್ಯ, ಲೋಕದ ಕಣ್ಣು ಇವು ಭಟ್ಟರ ಸಾಮಾಜಿಕ ಕಾದಂಬರಿಗಳು.  ಗಾಜಿನ ಬಳೆ, ಹಿಂದಿನ ಕತೆಗಳು, ದುಡಿಯುವ ಮಕ್ಕಳು ಇವು ಕಡೆಂಗೋಡ್ಲು ಅವರ ಸಣ್ಣ ಕಥೆಗಳ ಮೂರು ಸಂಕಲನಗಳು. 

ವಾಙ್ಮಯ ತಪ್ಪಸ್ಸುಭಟ್ಟರ ಸಾಹಿತ್ಯ ವಿಮರ್ಶೆ ಮತ್ತು ಉಪನ್ಯಾಸಗಳ ಸಂಕಲನ.  ಸ್ವರಾಜ್ಯ ಯುದ್ದಇದು ಮೋತಿಲಾಲ್ ನೆಹರೂ ಅವರ ಭಾಷಣದ ಅನುವಾದ.  ಇದಲ್ಲದೆ ಅವರ ಅನೇಕ ಲಲಿತ ಪ್ರಬಂಧಗಳು, ಸಂಕೀರ್ಣ ಲೇಖನಗಳು, ಗ್ರಂಥ ವಿಮರ್ಶೆಗಳು, ಬಿಡಿ ಕವನಗಳು, ಬಿಡಿ ಕಥೆಗಳು  ಕನ್ನಡ ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಮೂಡಿಬಂದಿವೆ.  ಅವರ ಹೆಣ್ಣುಎಂಬ ಕವನ 'ನಡೆದು ಬಂದ ದಾರಿಸಂಪುಟದಲ್ಲಿ ಅಚ್ಚಾಗಿದೆ.  ಪತ್ರಕರ್ತನಾಗಿ ರಾಷ್ಟ್ರಬಂಧುಮತ್ತು ರಾಷ್ಟ್ರಮತದಲ್ಲಿ ಅವರು ಬರೆದ ಲೇಖನಗಳು, ಅಂಕಣಗಳು ಬೇರೆಯೇ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ.  ಇಷ್ಟಲ್ಲದೆ ಕಡೆಂಗೋಡ್ಲು ಶಂಕರಭಟ್ಟರ ಅಪ್ರಕಟಿತ ಕಾದಂಬರಿಗಳು, ನಾಟಕಗಳು ಸಾಕಷ್ಟು ಸಂಖ್ಯೆಯಲ್ಲಿ ಉಪಲಬ್ಧವಾಗಿವೆ. 

1968ರ ಮೇ 17ರಂದು ತಮ್ಮ ಮನೆ ಕಡೆಂಗೋಡ್ಲುವಿನಿಂದ ಮಂಗಳೂರಿಗೆ ಪ್ರಯಾಣ ಹೊರಟಿದ್ದ ಶಂಕರ ಭಟ್ಟರು, ಬಸ್ಸು ಸುಮಾರು ಒಂದೆರಡು ಮೈಲು ದೂರ ಕ್ರಮಿಸಿದಾಗ ಹೃದಯ ಸ್ತಂಭನವಾಗಿ ಬಸ್ಸಿನಲ್ಲಿಯೇ ನಿಧನರಾದರು.

ದೇಶದ ಆಸಾಮಾನ್ಯ ಭಕ್ತರಾಗಿ, ಸ್ವಯಂಸೇವಕರಾಗಿಸಾಹಿತಿಗಳಾಗಿ, ಪತ್ರಕರ್ತರಾಗಿ, ಶಿಕ್ಷಕರಾಗಿ, ಮಹಾನ್ ವಿದ್ವಾಂಸರಾಗಿ ಕಡೆಂಗೋಡ್ಲು ಶಂಕರಭಟ್ಟರ ದಿವ್ಯ ಸೇವೆಯನ್ನು ನೆನೆಯುತ್ತ ಅವರು ಹುಟ್ಟಿದ ಈ ದಿನದಂದು ಅವರಿಗೆ ಗೌರವದ ನಮನ ಸಲ್ಲಿಸೋಣ.

(ಆಧಾರ: ಬಿ.ಎ. ವಿವೇಕ ರೈ ಅವರ ಕಡೆಂಗೋಡ್ಲು ಶಂಕರ ಭಟ್ಟರ ಕುರಿತಾದ ಲೇಖನ)

ಫೋಟೋ ಕೃಪೆ: www.kamat.com

Tag: Kadengodlu Shankara Bhatta, Kadengodlu Shankar Bhat

ಕಾಮೆಂಟ್‌ಗಳಿಲ್ಲ: