ಶನಿವಾರ, ಆಗಸ್ಟ್ 31, 2013

ಡಾ. ಶಾಂತಿಸ್ವರೂಪ್ ಭಟ್ನಾಗರ್

ಡಾ. ಶಾಂತಿಸ್ವರೂಪ್ ಭಟ್ನಾಗರ್

ಭಾರತದ ಮಹಾನ್ ವಿಜ್ಞಾನಿ ಸರ್ ಶಾಂತಿ ಸ್ವರೂಪ್ ಭಟ್ನಾಗರ್ ಅವರು ಫೆಬ್ರುವರಿ 21, 1894ರಂದು ಜನಿಸಿದರು. ಬ್ರಹ್ಮ ಸಮಾಜದ ಅನುಯಾಯಿಗಳಾಗಿದ್ದ ಅವರ ತಂದೆ ಪರಮೇಶ್ವರಿ ಸಹಾಯ್ ಭಾಟ್ನಾಗರ್ ಅವರು ಶಾಂತಿ ಸ್ವರೂಪರು ಎಂಟು ತಿಂಗಳ ಮಗುವಾಗಿದ್ದಾಗಲೇ ನಿಧನರಾದರು.  ಹೀಗಾಗಿ ಶಾಂತಿ ಸ್ವರೂಪ್ ಭಾಟ್ನಾಗರ್ ತಮ್ಮ ತಾಯಿಯ ತವರುಮನೆಯಲ್ಲಿ ಬಾಲ್ಯವನ್ನು ಕಳೆದರು.  ಅವರ ತಾತನವರು ಎಂಜಿನಿಯರ್ ಆಗಿದ್ದು ಬಾಲಕ ಶಾಂತಿ ಸ್ವರೂಪನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತಾದ ಆಸಕ್ತಿ ಮೂಡಲು ಪ್ರೇರಕರಾದರು.  ಪುಟ್ಟವಯಸ್ಸಿನಲ್ಲೇ ಯಂತ್ರರೂಪದ ಬೊಂಬೆಗಳನ್ನು ಮಾಡುವುದು, ಎಲೆಕ್ಟ್ರಾನಿಕ್ ಬ್ಯಾಟರಿಗಳು ಮತ್ತು  ಹಳೆಯ ಟೆಲಫೋನಿನಂತಹ ವಸ್ತುಗಳೊಡನೆ ಕುತೂಹಲಿಯಾಗಿ ಆಡುವುದು ಇವೆಲ್ಲಾ ಬಾಲಕ ಶಾಂತಿ ಸ್ವರೂಪನಿಗೆ ಆಸಕ್ತಿಯ ವಿಷಯಗಳಾಗಿದ್ದವು.   ತಮ್ಮ ತಾಯಿಯ ತವರುಮನೆಯಿಂದ ಕಾವ್ಯರಚನೆಯಲ್ಲೂ ಅವರಿಗೆ ಪ್ರೇರಣೆ ದೊರಕಿ ಪುಟ್ಟ ವಯಸ್ಸಿನಲ್ಲೇ ಕರಾಮತಿಎಂಬ ಏಕಾಂಕ ನಾಟಕವನ್ನು ಬರೆದು ಬಹುಮಾನ ಪಡೆದಿದ್ದರು.  ಮುಂದೆ ಅವರು ಹಿಂದಿಯಲ್ಲಿ ಕುಲಗೀತ್ಅಂತಹ ಸುಂದರ ಕಾವ್ಯವನ್ನು ಸಹಾ ಸೃಷ್ಟಿಸಿದರು.

ಭಾರತದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರದಲ್ಲಿ ಫೆಲೋಶಿಪ್ ಪಡೆಯಲು ಇಂಗ್ಲೆಂಡಿಗೆ ತೆರಳಿದ ಶಾಂತಿ ಸ್ವರೂಪ್ ಭಾಟ್ನಾಗರ್ ಲಂಡನ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದರು.  ಭಾರತಕ್ಕೆ ಬಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು.  1943ರಲ್ಲಿ ಅವರಿಗೆ ರಾಯಲ್ ಸೊಸೈಟಿಯ ಫೆಲೋಶಿಪ್ ದೊರಕಿತು.

ಡಾ.ಶಾಂತಿಸ್ವರೂಪ್ ಭಟ್ನಾಗರ್ ಅವರು  ನಡೆಸಿದ ಪ್ರಮುಖ ಸಂಶೋಧನೆಗಳು ಕಲಾಯ್ಡ ಮತ್ತು ದ್ಯುತಿ ರಾಸಾಯನ ವಿಜ್ಞಾನಕ್ಕೆ (colloid & photochemistry) ಸಂಬಂಧಿಸಿವೆ. ಸುಲಭ ಬೆಲೆಯಲ್ಲಿ ಆಕರ್ಷಕ ಕೃತಕ ಆಭರಣಗಳನ್ನು ತಯಾರಿಸಿದರು. ಕಬ್ಬಿನ ನಾರು, ವನಸ್ಪತಿ ನಾರುಗಳ ಬಗ್ಗೆ ಸಂಶೋಧನೆ ನಡೆಸಿದರು. ಕೃತಕ ರಾಳಗಳನ್ನು ತಯಾರಿಸಿದರು. ತೈಲ ಬಾವಿಗಳಿಂದ ಶುದ್ಧ ರೂಪದಲ್ಲಿ ಎಣ್ಣೆ ತೆಗೆಯಲು ಉಪಕರಣವನ್ನು ನಿರ್ಮಿಸಿ ತೈಲ ಶುದ್ದೀಕರಣವನ್ನು ಸರಳಗೊಳಿಸಿದರು.  ಕಾಂತೀಯ ರಾಸಾಯನಿಕ ವಸ್ತುಗಳ ಬಗ್ಗೆ ಸಂಶೋಧನೆ ನಡೆಸಿ ಉದ್ಗ್ರಂಥವನ್ನು ರಚಿಸಿದರು.  2ನೇ ಮಹಾಯುದ್ಧದಲ್ಲಿ ಬಳಕೆಯಾದ ವಿಷಾನಿಲದ ಪರಿಣಾಮಗಳನ್ನು ತಡೆಗಟ್ಟಲು ರಾಸಾಯನಿಕ ದ್ರವ್ಯವೊಂದನ್ನು ಕಂಡು ಹಿಡಿದರು. ಏರ್‌ಫೋಮ್ ಲೋಷನ್ ಎಂಬ ಬಟ್ಟೆಯ ವಾರ್ನಿಷನ್ನು ಕಂಡು ಹಿಡಿದರು. ಹೀಗೆ ಅನೇಕ ವಸ್ತುಗಳನ್ನು ಅವರು  ತಯಾರಿಸಿದರು.

ಬ್ರಿಟಿಷ್ ಸರ್ಕಾರವು ಡಾ. ಶಾಂತಿ ಸ್ವರೂಪ್ ಭಾಟ್ನಾಗರ್ ಅವರಿಗೆ  ನೈಟ್‌ಹುಡ್ ಪ್ರಶಸ್ತಿಯನ್ನು ನೀಡಿತು. ಸ್ವಾತಂತ್ರಾನಂತರದಲ್ಲಿ ಭಾರತ ಸರ್ಕಾರವು ಅವರನ್ನು  CSIR  ಸಂಸ್ಥೆಗೆ ಅಧ್ಯಕ್ಷರನ್ನಾಗಿ ಮಾಡಿತು.  ಅವರು ಭಾರತೀಯ ವ್ಯೋಮಕ್ಷೇತ್ರದ ಅಭಿವೃದ್ಧಿಯಲ್ಲಿ ಮಹಾಪಾತ್ರದಾರಿಯೆನಿಸಿದ್ದಾರೆ.  

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ಹಲವಾರು ವೈಜ್ಞಾನಿಕ ಸಂಶೋಧನಾಲಯಗಳನ್ನು ಸ್ಥಾಪಿಸಿದ ಡಾ. ಶಾಂತಿ ಸ್ವರೂಪ್ ಭಾಟ್ನಾಗರ್ ಅವರು  ಸ್ವತಂತ್ರ ಭಾರತದ ಪ್ರಪ್ರಥಮ ವೈಜ್ಞಾನಿಕ ಶಿಲ್ಪಿಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

1954ರ ವರ್ಷದಲ್ಲಿ ಡಾ. ಶಾಂತಿ ಸ್ವರೂಪ್ ಭಾಟ್ನಾಗರ್ ನಿಧನರಾದರು.  ಈ ಮಹಾನ್ ಸಾಧಕರ ನೆನಪಿನಲ್ಲಿ  ಶಾಂತಿ ಸ್ವರೂಪ ಭಟ್ನಾಗರ್ಪ್ರಶಸ್ತಿಯನ್ನು ಪ್ರತಿವರ್ಷ ವಿಜ್ಞಾನ ಕ್ಷೇತ್ರದಲ್ಲಿನ ಸಾಧಕರಿಗೆ ನೀಡಲಾಗುತ್ತಿದೆ.


Tag: Dr. Shanti Swaroop Bhatnagar

ಕಾಮೆಂಟ್‌ಗಳಿಲ್ಲ: