ಶನಿವಾರ, ಆಗಸ್ಟ್ 31, 2013

ಪೇಜಾವರ ಸದಾಶಿವರಾಯರು

ಪೇಜಾವರ ಸದಾಶಿವರಾಯರು

ಕವನ, ಹರಟೆ, ಲಲಿತಪ್ರಬಂಧ, ವಿಮರ್ಶೆ, ನಾಟಕ ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ಪ್ರತಿಭೆಯುಳ್ಳವರಾಗಿದ್ದ ಪೇಜಾವರ ಸದಾಶಿವರಾಯರು 1913ರ ಮಾರ್ಚ್ 8ರಂದು ದಕ್ಷಿಣ ಕನ್ನಡ ಜಿಲ್ಲೆಯ ಪೇಜಾವರದಲ್ಲಿ ಜನಿಸಿದರು.  ಮುಂದೆ  ಕಟೀಲಿನಲ್ಲಿ ನೆಲೆಸಿದರು.   ತಂದೆ ಶಾಮರಾವ್, ಮತ್ತು ತಾಯಿ ಸೀತಮ್ಮನವರು.

ಸದಾಶಿವರಾಯರು ಪ್ರಾಥಮಿಕ ಹಂತದ ಶಿಕ್ಷಣವನ್ನು ಹೊಳೆಯಾಚೆ ಇದ್ದ ಎಕ್ಕಾರಿನ ಶಾಲೆಯಲ್ಲಿ ಪಡೆದರು. ಹೈಸ್ಕೂಲು ಶಿಕ್ಷಣ ನಡೆದದ್ದು ಮುಲ್ಕಿಯಲ್ಲಿ. ಮಂಗಳೂರಿನ ಆಲೋಶಿಯಸ್ ಕಾಲೇಜಿನಲ್ಲಿ ಕಾಲೇಜು ವಿದ್ಯಾಭ್ಯಾಸ ನಡೆಸಿದ ಸಮಯದಲ್ಲಿ  ಸದಾಶಿವರರಾಯರ ಪ್ರತಿಭೆಯನ್ನು ಗಮನಿಸಿ, ಇವರಲ್ಲಿದ್ದ ಕನ್ನಡ ಸಾಹಿತ್ಯದ ಆಸಕ್ತಿಗೆ ನೀರೆರೆದು ಪೋಷಿಸಿದವರು ಸೇಡಿಯಾವು ಕೃಷ್ಣಭಟ್ಟರು ಹಾಗೂ ಮುಳಿಯ ತಿಮ್ಮಪ್ಪಯ್ಯನವರು. ಸದಾಶಿವರಾಯರು ತಾವಷ್ಟೇ ಕವಿತೆಗಳನ್ನು ರಚಿಸುತ್ತಿದ್ದುದಲ್ಲದೆ ಇತರರನ್ನೂ ಬರೆಯಲು ಪ್ರೇರೆಪಿಸುತ್ತಿದ್ದರು.

ಜೆ.ವಾಮನಭಟ್ಟ, ಕುಡ್ಪಿವಾಸುದೇವ ಶೆಣೈ, ಎಸ್.ಪಿ.ಭಟ್ಟ, ಜಿ.ಟಿ.ಆಚಾರ್‌ ಮುಂತಾದವರುಗಳೊಡನೆ ಸೇರಿ ಮಂಗಳೂರಿನಲ್ಲಿ  ಮಿತ್ರಮಂಡಲಿಯನ್ನು ಸ್ಥಾಪಿಸಿ, ಈ ಗುಂಪಿನಿಂದ ಅಳಿಲು ಸೇವೆಎಂಬ ಕವನ ಸಂಕಲನ ಹೊರತಂದರು.   ನಂತರದಲ್ಲಿ  ಸದಾಶಿವರಾಯರಿಗೆ ಕವನ ಸಂಕಲನವನ್ನು  ತರಲು ಜವಾಬ್ಧಾರಿ  ವಹಿಸಿದಾಗ, ‘ಅಲರುಎಂಬ ಸಂಗ್ರಹವನ್ನು  ಪ್ರಕಟಿಸಿದರು. ಅವರು ಹದಿನೇಳರ ಹರೆಯದಲ್ಲಿಯೇ ಕವನ ಬರೆದಿದ್ದಷ್ಟೇ ಅಲ್ಲದೆ ಸಂಪಾದಕರ ಜವಾಬ್ದಾರಿಯನ್ನೂ ಹೊತ್ತಿದ್ದರು. ಸಂಕಲನದ ಪೀಡಿಕೆಯಲ್ಲಿ ವ್ಯಾಟನ್ ಕವಿಯ ಸುಪ್ರಸಿದ್ಧ ಸಾಲುಗಳನ್ನು ಉದಹರಿಸಿರುವುದನ್ನು ಓದಿದವರಿಗೆ, ಸದಾಶಿವರಾಯರಿಗೆ 17ರ ಹರೆಯಲ್ಲಿಯೇ ಕಾವ್ಯ ಪ್ರೌಢಿಮೆ ಸಿದ್ಧಿಸಿತ್ತು ಎಂಬುದು ಅರ್ಥವಾದೀತು.

1927ರಿಂದ 1935ರವರೆಗೆ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿದ್ದುಕೊಂಡು ಎಂಜನಿಯರಿಂಗ್ ಪದವಿಗಾಗಿ ಓದಿದ ಸದಾಶಿವರಾಯರುಮಂಗಳೂರಿನಲ್ಲಿದ್ದಾಗ ಇಟಲಿಯಿಂದ ಬಂದಿದ್ದ ಡಾ.ಫೆಸ್ಸಿ  ಎಂಬ ನಿಕಟವರ್ತಿಗಳ ಪ್ರೇರಣೆಯಿಂದ ಇಟಲಿ ದೇಶದಲ್ಲಿ ಆಟೋಮೊಬೈಲ್ ಎಂಜನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದರು.  ಇಟಲಿಗೆ ಶಿಕ್ಷಣಾರ್ಥಿಯಾಗಿ ಹೋಗುವವರು ಮದುವೆಯಾಗಿರಲೇಬೇಕೆಂಬ ನಿಬಂಧನೆಯಿದ್ದುದರಿಂದ ಮದುವೆಯಾದ ಎರಡನೆಯ ವರ್ಷ 1936ರಲ್ಲಿ ಇಟಲಿಯ ಮಿಲಾನ್‌ಗೆ ತೆರಳಿದರು. ಮಿಲಾನ್‌ನಲ್ಲಿದ್ದರೂ ಕನ್ನಡ ಪತ್ರಿಕೆಗಳಾದ ತ್ರಿವೇಣಿ, ಪ್ರಭಾತ, ಜಯಕರ್ನಾಟಕ ಮುಂತಾದ ಪತ್ರಿಕೆಗಳನ್ನು ತರಿಸಿಕೊಂಡು ಓದಿ, ಆಗಾಗ್ಗೆ ಪತ್ರಿಕೆಗಳಿಗೆ ಬರಹಗಳನ್ನೂ ಕಳುಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಇಂಗ್ಲೆಂಡಿನಲ್ಲಿದ್ದ ಗೋಕಾಕರನ್ನು ಭೇಟಿಮಾಡಿದ ನಂತರ, ತಾವು ಬರೆದ ಕವನಗಳನ್ನು ಅವರಿಗೆ ಕಳುಹಿಸಿಕೊಟ್ಟಿದ್ದರು.  ಈ ಬರಹಗಳನ್ನು ಓದಿದ ಗೋಕಾಕರು ನಾನೂ ಸಹ ಈ ರೀತಿ ಬರೆಯಲಾರೆಮುಂದುವರೆಸಿ ಎಂದು ಪ್ರಶಂಸಿಸಿ ಪತ್ರ ಬರೆದಿದ್ದರು.

ಸದಾಶಿವರಾಯರು  ರಚಿಸಿದ ನಾಟಕಗಳಾದ ಸರಪಣಿ, ಬೀದಿಗಿಳಿದ ನಾರಿ, ಜೀವನ ಸಂಗೀತ ಎಂಬ ನಾಟಕಗಳು ತ್ರಿವೇಣಿ ಪತ್ರಿಕೆಯಲ್ಲಿ ಪ್ರಕಟಗೊಂಡವು. ಕ್ಷತ್ರಿಯ ರಮಣಿ (ಐತಿಹಾಸಿಕ), ಚಂಡಮಾರುತ, ಬಿರುಸು, ಸೂಜಿಕಲ್ಲು ಮುಂತಾದ ಸ್ವತಂತ್ರ ಕಥೆಗಳಲ್ಲದೆ ಅಂಧಶಿಲ್ಪ ಮತ್ತು ಶ್ರೀಗಂಧ ಎಂಬ ಎರಡು ರೂಪಾಂತರ ಕಥೆಗಳನ್ನೂ ಬರೆದರು. 

ಸದಾಶಿವರಾಯರು  ಬರೆದ ಬಹುತೇಕ ಕವಿತೆಗಳಲ್ಲಿ  ರಾಷ್ಟ್ರಭಕ್ತಿ, ಪ್ರಕೃತಿ, ಬದುಕು ಸಾವುಗಳ ಚಿತ್ರಣಗಳು ತುಂಬಿವೆ. ನಾಟ್ಯೋತ್ಸವ ಎಂಬ ಕವನದಲ್ಲಿ ಬೇರೆ ಬೇರೆ ದೇಶಗಳಿಂದ ಇಟಲಿಗೆ ಬರುವ ಸುಂದರಿಯರ ನರ್ತನವನ್ನು ಚಿತ್ರಿಸಿದ್ದಾರೆ. ಹೀಗೆ ಅವರು ಬರೆದ 84 ಕವನಗಳು. ವರುಣಎಂಬ ಸಂಕಲನದಲ್ಲಿ ಸೇರಿವೆ. ಇಟಲಿಯಲ್ಲಿದ್ದರೂ ಕನ್ನಡದ ಬಗ್ಗೆ ಆಸ್ಥೆ ವಹಿಸಿದ್ದ ಸದಾಶಿವರಾಯರಿಗೆ ವಾಮನ ಭಟ್ಟರು ತಮ್ಮ ಕೋದಂಡನ ಉಪನ್ಯಾಸಗಳುಎಂಬ ಕೃತಿಯನ್ನು ಅರ್ಪಣೆ ಮಾಡಿದ್ದಾರೆ.

ಸದಾಶಿವರಾಯರು ಇಟಲಿಯಿಂದ ಜೆ.ವಾಮನಭಟ್ಟರಿಗೆ ಬರೆದ ಪತ್ರದಲ್ಲಿ ಡಿ.ವಿ.ಜಿ., ಬೇಂದ್ರೆ, ಗೋಕಾಕ ಮೊದಲಾದವರ ಕೆಲ ಕೃತಿಗಳನ್ನು ಕಳುಹಿಸುವಂತೆ ವಿನಂತಿಸಿದ್ದು, ಅವುಗಳನ್ನು ಇಟಾಲಿಯನ್ನರಿಗೆ ಪರಿಚಯಿಸುವ ಆಶಯ ವ್ಯಕ್ತಪಡಿಸಿದ್ದರು. ಆದರೆ ಇದ್ದಕ್ಕಿದಂತೆ 1939ರ ಏಪ್ರಿಲ್‌ನಲ್ಲಿ ಅವರಿಗೆ  ಪೆರಿಟೊನೈಟಿಸ್ ಖಾಯಿಲೆ ಕಾಣಿಸಿಕೊಂಡಿತು. ಇದು ‌ಪ್ರಾಣಾಂತಿಕ ಖಾಯಿಲೆ ಅಲ್ಲದಿದ್ದರೂ ಯೂರೋಪಿನಲ್ಲಿ ಪರಿಣಾಮಕಾರಿ ಚಿಕಿತ್ಸೆ ಸಿದ್ಧವಿರಲಿಲ್ಲ. ಚಿಕಿತ್ಸೆ ದೊರಕಿದಾಗಗ ಕೊಂಚ ಗುಣಮುಖರಾದಂತೆ ಕಂಡುಬಂದಾಗ, ತಮ್ಮ ಪ್ರೀತಿಯ  ರಂಗಮಂದಿರಗಳಿಗೂ ಭೇಟಿನೀಡಿದ್ದರು. ಆದರೆ ಪುನಃ ರೋಗ ಉಲ್ಬಣಿಸಿ, ಜೀನಿವಾದ ಬಳಿಯ ವಿಶ್ರಾಂತಿ ಧಾಮದಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದರು. ಸೆಪ್ಟೆಂಬರ್‌ ವೇಳೆಗೆ ದೈಹಿಕವಾಗಿ ನಿತ್ರಾಣಗೊಂಡಿದ್ದರ ಜೊತೆಗೆ ಸಾವಿರಾರು ಮೈಲಿ ದೂರದಲ್ಲಿರುವ ತಂದೆ ತಾಯಿ, ಬಂಧುಗಳು, ಪ್ರೀತಿಯ ಹೆಂಡತಿ, ಮಗು ಯಾರೂ ತನ್ನ ಬಳಿ ಇಲ್ಲವೆಂಬ ಮಾನಸಿಕ ಕ್ಲೇಶೆಗೊಳಗಾಗಿ ಚಿಕಿತ್ಸೆ ಪರಿಣಾಮಕಾರಿಯಾಗದೆ ರಾಯರು ಅಕ್ಟೋಬರ್‌ 18, 1939ರಂದು ಕೊನೆಯುಸಿರೆಳೆದರು.

ಅತ್ಯಂತ ಪ್ರತಿಭಾನ್ವಿತರಾಗಿದ್ದು ಕನ್ನಡ ಸಾಹಿತ್ಯಕ್ಕೆ ಉಜ್ವಲ ಭವಿಷ್ಯವನ್ನು ರೂಪಿಸಬಲ್ಲವರಾಗಿದ್ದ ಪೇಜಾವರ ಸದಾಶಿವರಾಯರು ಕೇವಲ ತಮ್ಮ 26ನೆಯ ವಯಸ್ಸಿನಲ್ಲಿಯೇ ಸಾಹಿತ್ಯ ಲೋಕದಿಂದ ವಿರಮಿಸಿದ್ದು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಎಂಬುದು ವಿದ್ವಾಂಸರ ಅಭಿಪ್ರಾಯ. ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಆಧಾರ: ಕಣಜ

Tag: Pejawara Sadashiva Rao

ಕಾಮೆಂಟ್‌ಗಳಿಲ್ಲ: