ಶುಕ್ರವಾರ, ಆಗಸ್ಟ್ 30, 2013

ಎಂ.ಪ್ರಭಾಕರ್

ಎಂ.ಪ್ರಭಾಕರ್

ಕಲಾಸರಸ್ವತಿಯ ಕೃಪೆಯಿಂದ ಒಬ್ಬ ಕಲಾವಿದ ಹುಟ್ಟಿಬರುವುದೇ ಒಂದು ಅಪರೂಪದ ಸಂಗತಿ ಎಂದು ಪರಿಗಣಿಸುವಾಗ ಒಂದೇ ಕುಟುಂಬದಲ್ಲಿ ಮೂರು-ನಾಲ್ಕು ಕಲಾವಿದರು ಹುಟ್ಟುವುದಂತೂ ಅಚ್ಚರಿಯ  ವಿಷಯವೇ ಸರಿ. ಇದು ಆಗಿರುವುದು ಭಟ್ಕಳದಲ್ಲಿ. ಈ ಕಲಾ ಗುಚ್ಛದಲ್ಲಿ ಒಂದು ಹೂವಾಗಿ ಏಪ್ರಿಲ್  15, 1922 ರ ವರ್ಷದಲ್ಲಿ ಜನಿಸಿದವರು ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತರಾದ ಎಂ. ಪ್ರಭಾಕರ್ ಅವರು. ಪ್ರಭಾಕರ್ ಅವರ ತಂದೆ ಎಂ. ರಂಗರಾವ್‌ ಅವರು ಸಂಗೀತ, ಸಾಹಿತ್ಯ, ಅಭಿನಯ ಹಾಗೂ ಚಿತ್ರಕಲೆಯಲ್ಲಿ ಅಭಿರುಚಿ ಉಳ್ಳವರಾಗಿದ್ದರೂ, ಒಂದು ಭದ್ರನೆಲೆ ಕಾಣದವರಾಗಿದ್ದುಹತ್ತು  ಮಕ್ಕಳ ದೊಡ್ಡ ಸಂಸಾರದ ಹೊರೆ ಶಾಲಾ ಶಿಕ್ಷಕಿಯಾಗಿದ್ದ ತಾಯಿ ಕಾವೇರಿಬಾಯಿಯವರ ಮೇಲೆ ಬಿದ್ದಿತ್ತು. ಹೀಗೆ ಬಾಲ್ಯವನ್ನು ಪ್ರಭಾಕರ್ ಅವರು ಕಷ್ಟಕೋಟಲೆಗಳ  ನಡುವೆ ಕಳೆದರು. ನಾಲ್ಕನೇ ತರಗತಿಯಲ್ಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ತಂದೆ ಮತ್ತು ಅಣ್ಣ ವಿಮಲಾನಂದದಾಸ್‌ ಅವರ ಜೊತೆಗೆ ಊರಿಗೆ ಬಂದನಾಟಕ ಮಂಡಲಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಹಾಡುವ ಗೀಳು, ಸಂಗೀತದಲ್ಲಿ ಆಸಕ್ತಿ ಅವರಿಗೆ ಹುಟ್ಟಿನಿಂದಲೇ ಬಂದಿತ್ತು. ನಾಟಕಗಳಲ್ಲಿ ಅಣ್ಣನಿಗೆ ಹಾರ್ಮೋನಿಯಂ ನುಡಿಸುವುದು, ಹಾಡುವುದು ಅವರ ಪರಿಪಾಠವಾಯಿತು.

ಪ್ರಭಾಕರ್ ಅವರ ಹಿರಿಯ ಅಣ್ಣ ವಿಮಲಾನಂದದಾಸರು ಪ್ರಖ್ಯಾತ ಕೀರ್ತನಕಾರರು. ಮತ್ತೊಬ್ಬ ಅಣ್ಣ ಜಗನ್ನಾಥರಾವ್‌ ಅವರು ಹಾರ್ಮೋನಿಯಂ ತಯಾರಕರು. ಈಗಲೂ ಪ್ರಭಾಕರ್ ಅವರ ಹತ್ತಿರ ಎಪ್ಪತ್ತು ವರ್ಷಕ್ಕೂ ಹಿಂದಿನ  ಹಳೆಯ ಹಾರ್ಮೋನಿಯಂ ಇದೆ. ಇಬ್ಬರು ಸಹೋದರಿಯರಾದ ಪಂಡರಿಬಾಯಿ ಹಾಗೂ ಮೈನಾವತಿಯವರು ಚಿತ್ರಲೋಕದ ತಾರೆಯರಾಗಿ ಕಂಗೊಳಿಸಿದವರು. ಹೀಗೆ ಕಲೆಯಲ್ಲಿ ಬಹಳ ಶ್ರೀಮಂತವಾದ ಕುಟುಂಬ ಇವರದು.

ನಾಟಕ ಮಂಡಲಿಯಲ್ಲಿ  ಕಾಳಿಂಗರಾಯರು ಸ್ತ್ರೀ ಪಾತ್ರಧಾರಿಯಾಗಿ ಹಾಡುಗಳನ್ನು  ಹಾಡುತ್ತಿದ್ದರು. ಪ್ರಭಾಕರ್ ಅವರಿಗೆ ಅವರ ಜೊತೆ ಸ್ನೇಹ ಬೆಳೆದು ಬಂದದ್ದು  ಮುಂದೆ ಸುಗಮಸಂಗೀತದಲ್ಲಿ ಉಪಯುಕ್ತ ಅನುಭವವೆನಿಸಿತು. ನಾಟಕ ಮಂಡಲಿಯ ಜೊತೆ ರಾಜ್ಯದೆಲ್ಲೆಡೆ ಪ್ರಯಾಣ ಮಾಡಿ ರಂಗಗೀತೆಗಳು, ದೇವರನಾಮಗಳು ಹಾಗೂ ಕೀರ್ತನೆಗಳನ್ನು ಹಾಡಿ ಜನಮೆಚ್ಚುಗೆ ಪಡೆದರು. ತಿರುಗಾಟ ಬೇಸರ ತಂದಿತು. ಹಾಗೆಯೇ ಸಂಗೀತವನ್ನು ಗುರುವಿನ ಮಾರ್ಗದರ್ಶನದಲ್ಲಿ ಕಲಿಯಬೇಕೆಂಬ ಹಂಬಲದಿಂದ ಶಿವಮೊಗ್ಗೆಗೆ ಬಂದರು.

ಸಂಗೀತ ವಿದ್ವಾನ್‌ ಬಿ.ಎಸ್‌. ರಾಮಯ್ಯನವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ನಂತರ ಬೆಂಗಳೂರಿನ ವಿದ್ವಾನ್‌ ಎಲ್‌.ಎಸ್‌. ನಾರಾಯಣ ಸ್ವಾಮಿ ಭಾಗವತರಲ್ಲಿ ಪ್ರೌಢ ಶಿಕ್ಷಣ ಪಡೆದರು. ಪ್ರಭಾಕರ್ ಅವರ ಆಸ್ತಿ ಅವರ ಸಿರಿಕಂಠ ಮತ್ತು ಭಾವಪೂರ್ಣ ಹಾಡುಗಾರಿಕೆ. ತಾವು ಭಾವಪರವಶರಾಗಿ ಹಾಡುತ್ತಿದ್ದಾಗ ಕಣ್ಣೀರಿಡುತ್ತಿದ್ದ ಸಭಿಕರು, ಪಿಟೀಲನ್ನು ಕೆಳಗಿಟ್ಟು ಕಣ್ಣೊರೆಸಿಕೊಳ್ಳುತ್ತಿದ್ದ ಪಕ್ಕವಾದ್ಯದವರನ್ನು ಅವರು ಅಭಿಮಾನ ಗೌರವಗಳಿಂದ  ನೆನೆಯುತ್ತಾರೆ. ಕಲಿತಿದ್ದ ಸಂಗೀತವನ್ನು ಜೀವನಾಧಾರವಾಗಿಸಿಕೊಂಡು ಶಿಷ್ಯರಿಗೆ ಧಾರೆಯೆರೆಯಲು ಪ್ರಾರಂಭಿಸಿದರು.  ಮುಂದೆ ಹಿಂದುಸ್ತಾನಿ ಶೈಲಿಯಲ್ಲಿ ಆಸಕ್ತಿ ಮೂಡಿ ಬೊಂಬಾಯಿಗೆ ಪ್ರಯಾಣ ಬೆಳೆಸಿದರು. ಸಂಗೀತ ಪಾಠಗಳನ್ನು  ಮಾಡಿ ಜೀವನ ಸಾಗಿಸಿದರು. ಒಬ್ಬ ಪ್ರಸಿದ್ಧ ಗವಾಯಿಗಳ ಬಳಿ ಕಲಿಯಲು ವಿಚಾರಿಸಿದಾಗ ಪಾಠಕ್ಕೆ 30 ರೂಪಾಯಿಗಳು ಎಂದಾಗ ಜೀವನವೇ ಕಷ್ಟಕರವಾಗಿದ್ದಾಗ ಅದು ಬಹಳ ದುಬಾರಿ ಎನಿಸಿ ಆ ಕನಸನ್ನು ಅಲ್ಲಿಯೇ ಬಿಟ್ಟು ಹಿಂದಿರುಗಿದರು. ನಂತರ ತಾವೇ ಪುಸ್ತಕಗಳನ್ನು ಕೊಂಡು ಕೀರ್ತನೆಗಳನ್ನು, ವರ್ಣಗಳನ್ನು ಕಲಿತರು. ಸಂಗೀತ ಪಾಠವನ್ನು ವೃತ್ತಿಯನ್ನಾಗಿ ಸ್ವೀಕರಿಸಿದರು. ಕಲಿಯುವಿಕೆಗಿಂತ ಯಾವುದೋ ಸಂಸ್ಕಾರ ನನ್ನನ್ನು ಹಾಡಲು ಪ್ರೇರೇಪಿಸಿದೆ ಎನ್ನುತ್ತಿದ್ದರು.

ಆಕಾಶವಾಣಿ ಪ್ರಾರಂಭವಾದ ದಿನಗಳಲ್ಲಿ ಪ್ರಭಾಕರ್ ಅವರು ಕೀರ್ತನೆಗಳು  ಹಾಗೂ ದೇವರನಾಮಗಳನ್ನು  ಹಾಡುತ್ತಿದ್ದರು. ರಾಜ್ಯದೆಲ್ಲೆಡೆ ಹಾಗೂ ಮುಂಬಯಿ, ಚೆನ್ನೈ, ಆಂಧ್ರಪ್ರದೇಶ, ಕೇರಳ ಎಲ್ಲ ಕಡೆ ಅನೇಕ ಬಾರಿ ಸಂಚರಿಸಿ ಕಾರ್ಯಕ್ರಮಗಳನ್ನು ನೀಡಿದರು. ಆಗ ಗೋಟುವಾದ್ಯ ಕಲಾವಿದರಾಗಿದ್ದ  ವರಾಹಸ್ವಾಮಿ ಅವರು "ನಿನ್ನ ಶಾರೀರ ಬಹಳ ಚೆನ್ನಾಗಿದೆ ಬಹಳ ಅನುಭವಿಸಿ ಹಾಡುತ್ತೀಯ ಕನ್ನಡ ಗೀತೆಗಳನ್ನು ಹಾಡು" ಎಂದು ಪ್ರೇರೇಪಿಸಿದರು. ಹೀಗೆ ಸುಗಮ ಸಂಗೀತ ಹಾಡಲು ಪ್ರಾರಂಭಿಸಿದ ಇವರು ದೊರೆಸ್ವಾಮಿ ಅಯ್ಯಂಗಾರ್, ಎಂ.ಡಿ. ಪಾರ್ಥಸಾರಥಿ, ಎ.ವಿ.ಕೃಷ್ಣಮಾಚಾರ್, ಎಚ್‌.ಆರ್. ಲೀಲಾವತಿ ಮುಂತಾದವರ ಸಂಗೀತ ನಿರ್ದೇಶನದಲ್ಲಿ ಕನ್ನಡಗೀತೆಗಳನ್ನು ಹಾಡಿದರು. ಹಾಗೆಯೇ ಸ್ವತಃ  ತಾವೂ ಕೂಡ ರಾಗಸಂಯೋಜನೆ ಮಾಡತೊಡಗಿದರು. ಕುವೆಂಪು ಅವರ ಗೀತೆಗಳು ಇವರಿಗೆ ಬಹಳ ಅಚ್ಚುಮೆಚ್ಚು. ಹೀಗೆ ಇವರ ಕಂಠಶ್ರೀಯಿಂದ ಹೊರಹೊಮ್ಮಿದ ಹಾಡುಗಳಿಗೆ ಲೆಕ್ಕವಿಲ್ಲ. ನೂರು ಸಲ ಜುಮ್ಮೆನುವುದೀ ಮನ’, ‘ನೀ ಬರುವ ದಾರಿಯಲಿ’, ‘ಅಧರದಿ ನಸುನಗೆ’, ‘ಪಡುವಣ ಬಾನಿನ ನೀಲಿಯ ಹಣೆಯಲಿ’, ಶುಭನುಡಿಯೆ ಶಕುನದ ಹಕ್ಕಿ’, ‘ಹಾಡು ಹಳೆಯದಾದರೇನು ಭಾವ ನವನವೀನ’, ‘ನಗುನಗುತ ಹಗುರವಾಗು’, ‘ಕವಿದ ಕತ್ತಲೆಯಲ್ಲಿ ಕೈಹಿಡಿದು ನಡೆಸಯ್ಯಹೀಗೆ ಇವರ ಕಂಠ ಸಿರಿಯಿಂದ ಹೊಮ್ಮಿದ ಹಾಡುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಎಚ್‌.ಆರ್. ಲೀಲಾವತಿಯವರೊಂದಿಗೆ ಎನ್‌.ಕೆ. ಕುಲಕರ್ಣಿ ಅವರ ಕವನಗಳನ್ನಾಧರಿಸಿದ ನವತಾರಾ ಮಂಡಲಎಂಬ ಸಂಗೀತ ರೂಪಕದಲ್ಲಿ ಮತ್ತು ಎಚ್. ಆರ್. ಲೀಲಾವತಿಯವರ ಸಂಗೀತ ನಿರ್ದೇಶನದಲ್ಲಿ  ವರ್ಷ ವೈಭವಎಂಬ ಸಂಗೀತ ರೂಪಕದಲ್ಲಿ  ಹಾಡಿ ಪ್ರಭಾಕರ್ ಜನಮನ್ನಣೆ ಪಡೆದರು. ಪ್ರಭಾಕರ್ ಅವರ ಕಂಠದ ವಿಶೇಷತೆಯೆಂದರೆ ಅದು ಎಷ್ಟು ಗಂಭೀರತೆಯಿಂದ ಹೊರಹೊಮ್ಮುತ್ತದೆಯೋ ಅಷ್ಟೇ ನವುರಾದ ನುಡಿಕಾರಗಳನ್ನೂ ಸ್ಫುರಿಸು್ೆವಂತದ್ದು.  ಡಿ.ಎಸ್‌.ಕರ್ಕಿ ಅವರ ಕವನದ ಸಾಲು "ಎಲ್ಲಿಹುದೆನಲೇಕೆ ಜೇನು? ನೀ ಪಾನಗೈಯಲು ಬಲ್ಲೆಯಾದರೆ ಜಾಣ ಎಲ್ಲೆಲ್ಲೂ ಇಹುದದು" ಅವರಿಗೆ ತುಂಬಾ ಪ್ರಿಯವಾದದ್ದು.

ಪ್ರಭಾಕರ್ ಅವರ ರಾಗಸಂಯೋಜನೆಯಲ್ಲಿ ಶಾಸ್ತ್ರೀಯ ಸಂಗೀತದ ಸೊಗಡು ಎದ್ದು ಕಾಣುತ್ತದೆ. ಸಾಮಾನ್ಯವಾಗಿ ಒಂದು ಹಾಡು ಒಂದೇ ರಾಗವನ್ನು ಅವಲಂಬಿಸಿರುತ್ತದೆ. ಹಿಂದುಸ್ತಾನಿ ರಾಗಗಳು ಕೂಡ ಅಲ್ಲೊಮ್ಮೆ, ಇಲ್ಲೊಮ್ಮೆ ಕಾಣಸಿಗುತ್ತದೆ. ಸಾಹಿತ್ಯ ಮತ್ತು ಭಾವಪೂರ್ಣ ಹಾಡುಗಾರಿಕೆಗಳು  ಸುಗಮಸಂಗೀತದ ಮುಖ್ಯ ಅಂಶಗಳು. ಉನ್ನತ ಮಟ್ಟದ ಸಾಹಿತ್ಯ ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಸಾಹಿತ್ಯವನ್ನು ಚೆನ್ನಾಗಿ ಅರ್ಥೈಸಿಕೊಂಡು ನಿಧಾನವಾಗಿ ಮೆಲುಕು ಹಾಕಿದಾಗ ಸಂಗೀತ ತಂತಾನೇ ಹೊರಬರುತ್ತದೆ. ಭಾವವಿಲ್ಲದ ಹಾಡು ಹಾಡಲ್ಲ ಎಂಬುದು ಪ್ರಭಾಕರ್ ಅವರ ನಿಲುವು

ಒಬ್ಬ ಕಲಾವಿದ ಪರಿಪೂರ್ಣನಾಗಬೇಕಾದರೆ ಪ್ರತಿಭೆ ಒಂದೇ ಸಾಲದು. ಜೀವನದಲ್ಲಿ ಭದ್ರ ನೆಲೆ, ಅವಕಾಶ, ಪ್ರೋತ್ಸಾಹ, ಅದೃಷ್ಟ ದೇವಿಯ ಕೃಪೆ ಹೀಗೆ ಎಲ್ಲವೂ ಒಲಿದು ಬರಬೇಕು. ಅಪಾರ ಪ್ರತಿಭೆಯನ್ನು ಹೊಂದಿರುವ ಪ್ರಭಾಕರ್ ಅವರಿಗೆ ಇವೆಲ್ಲವೂ ದೊರೆತಿದ್ದರೆ ಪ್ರಾಯಶಃ ಒಬ್ಬ ಕಲಾವಿದನಾಗಿ ಅವರು ಇನ್ನೂ ಬಹಳಷ್ಟು ಸಾಧಿಸಬಹುದಿತ್ತೇನೋ. ಆ ಕೊರಗು ಅವರಿಗಿದೆ. ನಾನು ಯಾವ ಸಾಧನೆಯನ್ನೂ ಮಾಡಿಲ್ಲ ಎಂದು ಮುಗ್ಧತೆಯಿಂದ ನುಡಿಯುವ ಸರಳ, ಸಾತ್ವಿಕ ಜೀವಿಯಾದ ಪ್ರಭಾಕರ್ ಅವರಿಗೆ ಪ್ರಶಸ್ತಿ. ಪುರಸ್ಕಾರಗಳು ತಾವಾಗಿಯೇ ಅರಸಿಕೊಂಡು ಬಂದವು. ಸುಗಮಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಎರಡೂ ಕ್ಷೇತ್ರಗಳಲ್ಲಿ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಅವುಗಳಲ್ಲಿ ಪ್ರಮುಖವಾಗಿ 1980ರಲ್ಲಿ ಮೈಸೂರಿನಲ್ಲಿ ದಿವಂಗತ ಡಾ.ಬಿ. ದೇವೇಂದ್ರಪ್ಪನವರು ಪ್ರಭಾಕರ್ ಅವರಿಗೆ ಗಾಯಕ ರತ್ನಎಂಬ ಬಿರುದನ್ನು ನೀಡಿ ಆಶೀರ್ವದಿಸಿದ್ದಾರೆ.  1986ರಲ್ಲಿ ಕರ್ನಾಟಕ ಗಾನಕಲಾ ಪರಿಷತ್ತು ಶಿವಮೊಗ್ಗೆಯಲ್ಲಿ ನಡೆದ ಸಂಗೀತ ವಿದ್ವಾಂಸರ 16ನೇ ಸಮ್ಮೇಳನದಲ್ಲಿ ಗೌರವಿಸಿ ಸನ್ಮಾನಿಸಿದೆ.  1988-89ರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ಹಾಗೂ 2001ನೇ ಸಾಲಿನ ಸುಗಮಸಂಗೀತದ ಅತ್ಯುನ್ನತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ್‌ ಪ್ರಶಸ್ತಿಗಳೇ ಅಲ್ಲದೆ, ಅನೇಕ ಸ್ಥಳೀಯ ಸಂಘ ಸಂಸ್ಥೆಗಳು ಬಿರುದು ಬಾವಲಿಗಳನ್ನು ನೀಡಿ ಗೌರವಿಸಿವೆ. ಯಾವ ಆಡಂಬರಕ್ಕೂ, ಪ್ರಚಾರಕ್ಕೂ ಹಾತೊರೆಯದ ಇವರು ಎಲೆಮರೆಯ ಕಾಯಿಯಾಗೇ ಉಳಿಯಬಯಸುತ್ತಾರೆ.

ದೀರ್ಘಾವಧಿಯ ಸಂಗೀತ ಶಿಕ್ಷಕ ವೃತ್ತಿಯಿಂದಾಗಿ ನೂರಾರು ಜನ ಶಿಷ್ಯರನ್ನು ತಯಾಸಿದ ಕೀರ್ತಿ ಪ್ರಭಾಕರ್ ಅವರದು.  ಸುಗಮ ಸಂಗೀತದಲ್ಲಿ ಇವರ ಪ್ರಮುಖ ಶಿಷ್ಯರೆಂದರೆ ಬಿ.ಕೆ. ಸುಮಿತ್ರ, ಆರ್. ರಮಾದೇವಿ, ಕಸ್ತೂರಿ ಶಂಕರ್ ಹಾಗೂ ಶಿವಮೊಗ್ಗ ಸುಬ್ಬಣ್ಣ. ಈಗಿನ ಮಕ್ಕಳು ಆತ್ಮಸ್ಥೈರ್ಯದಿಂದ ಹಾಗೂ ಲೀಲಾಜಾಲವಾಗಿ ಹಾಡುವುದನ್ನು ಕೇಳಿರುವ ಇವರು ಇಂದು ಪ್ರತಿಭೆಗೇನೂ ಕೊರತೆ ಇಲ್ಲ ಎನ್ನುತ್ತಾ ಸುಗಮ ಸಂಗೀತಕ್ಕೆ ಉತ್ತಮ ಭವಿಷ್ಯವಿದೆ ಎಂದು ಅಭಿಪ್ರಾಯ ಪಡುತ್ತಾರೆ.  ಮೈಸೂರು ಅನಂತಸ್ವಾಮಿಯವರ ರಾಗಸಂಯೋಜನೆ ಸುಗಮಸಂಗೀತ ಹೆಚ್ಚು ಜನಪ್ರಿಯವಾಗಲು ಸಹಾಯಕವಾಯಿತು ಎಂಬುದು ಅವರ ಅಭಿಪ್ರಾಯ. ನಿಗರ್ವಿಯಾದ ಇವರು ಜೀವನ ಒಡ್ಡಿದ ಕಠಿಣ ಸವಾಲುಗಳನ್ನು ದಾರ್ಶನಿಕ ದೃಷ್ಟಿಯಿಂದ ಸ್ವೀಕರಿಸಿ ಲಘುಹಾಸ್ಯದೊಂದಿಗೆ ತೆಲುಗಿನಲ್ಲಿರುವ ಸಾಲನ್ನು ನೆನಪಿಸಿಕೊಳ್ಳುತ್ತಾರೆ. ವಿರಿಕಿ ವಿದ್ಯಮು ಲೇದು ಗರ್ವಮು ಲೇದು’( 'ಈ ಶಿಕ್ಷಕನಿಗೆ ವಿದ್ಯೆಯೂ ಇಲ್ಲ, ಗರ್ವವೂ ಇಲ್ಲ’). ಇದು ಪ್ರಭಾಕರ್ ರವರ ಮೇರು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.

ಮಧುರ ಗಾನ ಪ್ರವೀಣ ಎಂಬ ಬಿರುದಿಗೆ ಪಾತ್ರರಾದ, ಗಾಯಕರಾಗಿ ರಾಗಸಂಯೋಜಕರಾಗಿ ಹಾಗೂ ಶಿಕ್ಷಕರಾಗಿ ಎಲ್ಲದಕ್ಕೂ ಮಿಗಿಲಾಗಿ ಒಬ್ಬ ಸಹೃದಯಿ ಮಾನವರಾಗಿ ಸುಗಮಸಂಗೀತ ಕ್ಷೇತ್ರದ ಅಗ್ರಗಣ್ಯ ಕಲಾವಿದರಲ್ಲಿ ಒಬ್ಬರಾದ ಪ್ರಭಾಕರ್ ರವರು ಒಬ್ಬ ಪರಿಪೂರ್ಣ ಕಲಾವಿದರೆನಿಸಿದ್ದಾರೆ. ಈ ಹಿರಿಯ ಕಲಾವಿದರಿಗೆ ನಮ್ಮ ನಮನ.

ಆಧಾರ:  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ಪ್ರಕಟಣೆಯಾದ 'ಕಲಾ ಚೇತನ' ಸಂಪಾದಿತ ಕೃತಿಯಲ್ಲಿ ಶ್ರೀಮತಿ ರೋಹಿಣಿ ಮೋಹನ್‌ ಅವರ ಲೇಖನ

ಫೋಟೋ ಕೃಪೆ: ಸುಗಮಸಂಗೀತ.ಕಾಮ್

Tag: M. Prabhakar

ಕಾಮೆಂಟ್‌ಗಳಿಲ್ಲ: