ಶನಿವಾರ, ಆಗಸ್ಟ್ 31, 2013

ಒಂದು ಘಟನೆಯ ಹಿನ್ನೆಲೆ!

ಒಂದು ಘಟನೆಯ ಹಿನ್ನೆಲೆ!

ಅದೊಂದು ಪ್ರಶಾಂತವಾದ ಮುಂಜಾನೆ.  ಹಿಮದ ಮಂಜಿನಿಂದ ಆವೃತವಾದ ನಗರದ ಆವರಣದೊಳಗೆ ಆಗತಾನೇ ಸೂರ್ಯದೇವ ಆಕಾಶದಲ್ಲಿ ಇಣುಕಲು ಹರಸಾಹಸ ಮಾಡುತ್ತಿದ್ದ.  ಆ ಸುಸಜ್ಜಿತ ನಗರದ ಮೆಟ್ರೋ ನಿಲ್ದಾಣದ ಶುಭ್ರ ಪ್ರಶಾಂತ ವಾತಾವರಣದಲ್ಲಿ ಜನಸಂದಣಿ ಕ್ರಮೇಣವಾಗಿ ಅಷ್ಟಿಷ್ಟು ಮೂಡತೊಡಗಿತ್ತು.  ರೈಲು ಬಂದಾಗಲೂ ಜನ ಯಾವುದೇ ಆತುರವಿಲ್ಲದೆ ಕ್ರಮ ಬದ್ಧತೆಯಿಂದ ಸಾಕಷ್ಟು ಸ್ಥಳವಿದ್ದ ಬೋಗಿಗಳಲ್ಲಿ,  ತಮಗಿಚ್ಚೆ ಬಂದ ಆಸನಗಳನ್ನು ಆಯ್ದುಕೊಂಡು ತಮ್ಮದೇ ಲೋಕಕ್ಕೆ ಜಾರಿದ್ದರು.

ಕೆಲವರು ರೈಲಿನ ಕಿಟಕಿಯಾಚೆಗಿನ ಪ್ರಕೃತಿಯಲ್ಲಿ ತಮ್ಮನ್ನು ವಿಲೀನಗೊಳಿಸುತ್ತಿದ್ದರೆ, ಕೆಲವರು ಅರ್ಧ ನಿದ್ರೆ-ಅರ್ಧ ಧ್ಯಾನದ ತೆರನಾದ ಅಂತರ್ಮುಖತೆಯತ್ತ  ಕಣ್ಣುರೆಪ್ಪೆಗಳನ್ನು ಮುಚ್ಚಿದ್ದರು.  ಕೆಲವರು ಅಂದಿನ ದಿನಪತ್ರಿಕೆಯ ಹಲವು ಪ್ರಮುಖ ಸುದ್ಧಿಗಳತ್ತ ತಮ್ಮ ಗಮನ ಹರಿಸುತ್ತಿದ್ದರೆ, ಇನ್ನು ಕೆಲವರು ತಮ್ಮ ಕಚೇರಿಗೆ ಅಗತ್ಯದ ಯಾವುದೋ ಚಿಂತನೆಗೆ ತೊಡಗಿದವರಂತೆ ಪುಸ್ತಕ ಲೇಖನಿಗಳನ್ನು ತೆರೆದಿಟ್ಟುಕೊಂಡು ತಮ್ಮದೇ ಲೋಕದಲ್ಲಿ ತೇಲುವಂತಿತ್ತು.

ಹೀಗಿದ್ದ ಆ ಸುಸಜ್ಜಿತ ನಗರಿಯ ಸುಂದರ ಮುಂಜಾನೆಯ ಸೌಂದರ್ಯಕ್ಕೆ ಬಿರುಗಾಳಿಯ ಸೊಂಕೋ ಎಂಬಂತೆ,  ನಿಲ್ದಾಣವೊಂದರಲ್ಲಿ ರೈಲು ನಿಂತೊಡನೆಯೇ ಒಬ್ಬ ವ್ಯಕ್ತಿ ತನ್ನ ಕೆಲವು ಮಕ್ಕಳೊಡನೆ ಹತ್ತಿಕೊಂಡ.  ತಮ್ಮದೇ ವಿಹಾರದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಮಕ್ಕಳು ರೈಲಿನಲ್ಲಿ ಬಂದೊಡನೆಯೇ ಸಿಕ್ಕಿದ್ದ ಆಸನಗಳ ಮೇಲೆಲ್ಲಾ ಕುಣಿದು ಕುಪ್ಪಳಿಸಿದ್ದೇನು, ಕಣ್ಣು ಮುಚ್ಚಿದವರ ಮುಂದೆ ಕೋತಿಗಳಂತೆ ಕಿರುಚಿದ್ದೇನು,  ಓದುತ್ತಿದ್ದವರ ಪತ್ರಿಕೆಗಳು ಹಾರಿಹೋಗುವಂತೆ ಎಳೆದು ಹಾರಿದ್ದೇನು..., ಒಮ್ಮೆಲೆ ಪ್ರಶಾಂತವಾಗಿದ ಆ ವಾತಾವರಣದಲ್ಲಿ  ಒಂದು ಅಸಹನೀಯ ದಾಂಧಲೆಯೇ ಸೃಷ್ಟಿಯಾಗಿಹೋಗಿತ್ತು.  ಆ ಮಕ್ಕಳ ಜೊತೆಗಿದ್ದ, ಆ ತಂದೆಯಾದರೋ, ಕಣ್ತೆರೆದರೂ ಯಾವುದೂ ಕಾಣದಿದ್ದ, ಏನೂ ಕೇಳಿಸದಂತಿದ್ದ ತನ್ನದೇ ಅಂತರ್ಮುಖಿತ್ವದಲ್ಲಿ  ಹುದುಗಿಹೋದಹಾಗಿತ್ತು!.

ಎಲ್ಲರಿಗೂ ಈ ಮಕ್ಕಳ ಅಪ್ಪನ ಮೇಲೆ ಒಂದು ರೀತಿಯ ಅಘೋಷಿತ ಮುನಿಸು, ಅಸಹನೆಗಳು ಭುಗಿಲೆದ್ದಿವೆಯೇನೋ ಎಂಬಂತಹ ಛಾಯೆಗಳು ಎಲ್ಲೆಲ್ಲೂ ಪ್ರತಿಧ್ವನಿಸುವಂತಿತ್ತು.  ಈತನಿಗೆ ಬಂದಿರುವುದೇನು ರೋಗ ಎಂಬುದು ಒಂದು ರೀತಿಯ ಅವ್ಯಕ್ತ ವಾಖ್ಯೆ ಅಲ್ಲಿ ಎಲ್ಲರ ಮನದಲ್ಲಿ ತುಂಬಿತ್ತೆ?   ನಮ್ಮಂತಹವರ ಮನದಲ್ಲಿ ಹಾಗೇ ಮೂಡಿದ್ದರಲ್ಲಿ ಅದು ಅಸಹಜವೇನೂ ಅಲ್ಲ.  ನಮ್ಮ ಊರಿನಲ್ಲಾಗಿದ್ದರೆ ಅದೊಂದು ಕೋಲಾಹಲಕ್ಕೂ ಎಡೆ ಕೊಡುತ್ತಿತ್ತೇನೋ!

ಅಂತೂ ಆ ಮಕ್ಕಳ ತಂದೆಯ  ಸನಿಹದಲ್ಲಿದ್ದ ಒಬ್ಬ ವ್ಯಕ್ತಿ ತಮ್ಮ ಗಂಭೀರ ಪ್ರವೃತ್ತಿಯ ಮುತ್ಸದ್ದೀತನದ ಮುಸುಕಿನಲ್ಲಿ ತಮ್ಮ ಧ್ವನಿಯನ್ನು ಮುಂದುಮಾಡಿದರು.  “ಮಾನ್ಯರೆ, ನಿಮ್ಮ ಮಕ್ಕಳು ಇಷ್ಟೆಲ್ಲಾ ದಾಂಧಲೆ ಎಬ್ಬಿಸುತ್ತಿದ್ದರೂ, ತಾವು  ಅವರನ್ನು ಸಂಯಮದಲ್ಲಿರಿಸದಿರುವುದು ಸರಿಯಲ್ಲ ಎಂದು ನನಗನ್ನಿಸುತ್ತಿದೆ”.

ಈ ಮಾತುಗಳನ್ನು ಕೇಳಿ ಆ ಮಕ್ಕಳ ತಂದೆ ನಿಧಾನವಾಗಿ ನುಡಿದ,  “ತಾವು  ಹೇಳುತ್ತಿರುವುದು  ನಿಜ. ನಾನು ಈ ಮಕ್ಕಳನ್ನು ಸಂಯಮದಲ್ಲಿರಿಸುವುದು ಹೇಗೆ, ಅವರಿಗೆ ನಿಜ ಸಂಗತಿ ತಿಳಿಸಿ ಸಂತೈಸುವುದು ಹೇಗೆ, ಇವೆರಡೂ ಅರ್ಥವಾಗದ ಗೊಂದಲದಲ್ಲಿ ಸಿಲುಕಿಬಿಟ್ಟಿದ್ದೇನೆ.  ನಾನು ಈಗ ತಾನೇ ಆಸ್ಪತ್ರೆಯಿಂದ ಹೊರಬರುತ್ತಿದ್ದೇನೆ.  ಈ ನನ್ನ ಮಕ್ಕಳಿಗೆ  ತಾಯಿಯಾದ ನನ್ನ ಪತ್ನಿ ಒಂದು ತಾಸಿನ ಹಿಂದೆ ನಿಧನಳಾಗಿದ್ದಾಳೆ.   ನನ್ನಲ್ಲಿ ನಿಮ್ಮ ಕ್ಷಮೆ ಇರಲಿ”.

ಈ ಸನ್ನಿವೇಶವನ್ನು “ನಮ್ಮ ನಡತೆಗಳ ಹಿನ್ನೆಲೆ (paradigm)’ ಎಂದು  ವರ್ಣಿಸುವ ಸ್ಟೀಫನ್ ಕೋವೆ ಹೇಳುತ್ತಾರೆ.  “ಆ ಮಕ್ಕಳ ತಂದೆಯನ್ನು ಹೀಗೇ ಪ್ರಶ್ನೆ ಮಾಡಿದವನು ನಾನೇ.  ಇಷ್ಟು ಹೊತ್ತೂ ಆ ಮಕ್ಕಳ ತಂದೆಯನ್ನು ಒಬ್ಬ ಖಳರೂಪದಲ್ಲಿ   ನೋಡುತ್ತಿದ್ದ ನನ್ನ ಮನಸ್ಸು, ಈ ಹಿನ್ನೆಲೆಯನ್ನು ತಿಳಿದ ಕೂಡಲೇ “ಓ, ಹೌದೆ, ನನ್ನನ್ನು ಮನ್ನಿಸಿ, ನನ್ನಿಂದ ಏನಾದರೂ ನಿಮಗೆ ಸಹಾಯವಾಗಬಹುದೇ” ಎಂಬ ಸಜ್ಜನತೆಗೆ ಧಾವಿಸಿ ಬಂತು.  ಅದೇ ಅದಕ್ಕೆ ಹಿಂದಿನ ಒಂದು   ಕ್ಷಣದಲ್ಲಿ,  ನಾನೂ ಒಬ್ಬ ಸಾಮಾನ್ಯನಂತೆ, ನನ್ನ ಬುದ್ಧಿವಂತಿಕೆಯ ನಿರ್ಣಯಗಳೆಂಬ ಬಣ್ಣದ ಕನ್ನಡಕದಿಂದ ಆ ವ್ಯಕ್ತಿಯನ್ನು ನೋಡತೊಡಗಿದ್ದೆ.  ಆ ವ್ಯಕ್ತಿ ನನಗನ್ನಿಸುವ ಸಹಜತೆಯಲ್ಲಿಲ್ಲದಿದ್ದಾಗ,  ಆತನ ಆ ನಿಸ್ತೇಜ ನಡವಳಿಕೆಗೂ ಬೇರೊಂದು  ಹಿನ್ನಲೆ ಇದ್ದಿರಬಹುದು ಎಂದು  ಅರ್ಥೈಸುವ ಶುದ್ಧ ಮನಸ್ಸು ನನಗೆ  ಪ್ರಾಪ್ತವಾಗಿರಲೇ  ಇಲ್ಲ.    ನನಗೆ ಈ ಘಟನೆ ಕಲಿಸಿದ ಪಾಠ ಅತ್ಯಂತ ಮಹತ್ವದ್ದು.”  

(ಆಧಾರ: ಸ್ಟೀಫನ್ ಕೋವೆ ಅವರ ಸೆವೆನ್ ಹ್ಯಾಬಿಟ್ಸ್ ಆಫ್ ಹೈಲಿ ಎಫ್ಫೆಕ್ಟಿವ್ ಪೀಪಲ್)

Tag: Ondu Ghataneya Hinnele

ಕಾಮೆಂಟ್‌ಗಳಿಲ್ಲ: