ಶುಕ್ರವಾರ, ಆಗಸ್ಟ್ 30, 2013

ಎ. ವಿ. ನಾವಡ

ಎ. ವಿ. ನಾವಡ

ಭಾಷಾವಿಜ್ಞಾನಿ, ಕೋಶವಿಜ್ಞಾನಿ, ಸಂಶೋಧಕ, ಜಾನಪದ ವಿದ್ವಾಂಸ, ಹರಿದಾಸ ಸಾಹಿತ್ಯ ಸಾಧಕರಾದ  ಪ್ರೊ. ಎ.ವಿ. ನಾವಡ ಅವರು ಏಪ್ರಿಲ್ 28, 1946ರಂದು  ಮಂಗಳೂರು ಸಮೀಪದ ಕೋಟೆಕಾರು ಎಂಬಲ್ಲಿ ಜನಿಸಿದರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ ಮತ್ತು ತಾಯಿ ಪಾರ್ವತಿ. ಪ್ರಾರಂಭಿಕ ಶಿಕ್ಷಣವನ್ನು  ಆನಂದಾಶ್ರಮದ ಶಾಲೆಯಲ್ಲಿ ನಡೆಸಿದ ನಾವಡರು  ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿಯನ್ನೂ  ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ಪಡೆದರು.

ನಾವಡರು ಉದ್ಯೋಗಕ್ಕಾಗಿ ಸೇರಿದ್ದು ಕುಂದಾಪುರದ ಭಂಡಾರ್‌ಕರ್ಸ್‌ ಕಾಲೇಜು.   1970ರಿಂದ-94ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ 24 ವರ್ಷ ಸೇವೆ ಸಲ್ಲಿಸಿದರು. 1994ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ ಅಧ್ಯಯನ ಪೀಠದ ಅಧ್ಯಕ್ಷರಾಗಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದರು. ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕರಾಗಿ ಹಲವಾರು ಮಹತ್ವದ ಯೋಜನೆಗಳ ರೂವಾರಿ ಎನಿಸಿದರು. ಉಡುಪಿಯ ಗೋವಿಂದಪೈ ಸಂಶೋಧನ ಕೇಂದ್ರದ ತುಳು ನಿಘಂಟು ಯೋಜನೆಯ ಮುಖ್ಯ ಸಂಪಾದಕರಾಗಿ ಗಣನೀಯ ಸೇವೆ ಸಲ್ಲಿಸಿದರು. ಜಾನಪದ, ವಿಜ್ಞಾನ, ಕೋಶ ವಿಜ್ಞಾನ, ಭಾಷಾ ವಿಜ್ಞಾನ ಮುಂತಾದವು ಅವರ  ಆಸಕ್ತಿಯ ಕ್ಷೇತ್ರಗಳಾಗಿದ್ದವು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮಾಡಿದರು.

ಪ್ರೊ. ನಾವಡರು ಹಲವಾರು ಗಣನೀಯ ಕೃತಿಗಳನ್ನು ರಚಿಸಿದ್ದಾರೆ. ಮಕ್ಕಳ ಸಾಹಿತ್ಯ-ರಾಜಹಂಸ, ಮಧುಚಂದ್ರ, ಪೇಟೆಗೆ ಬಂದ ಪುಟ್ಟಿ . ಸಂಶೋಧನ ಪ್ರಬಂಧಗಳು-ವಿವಕ್ಷೆ, ಒಂದು ಸೊಲ್ಲು ನೂರು ಸೊರ, ಜಾನಪದ-ವೈದ್ಯರ ಹಾಡುಗಳು, ಜಾನಪದ ಸಮಾಲೋಚನೆ, ಜಾನಪದ ಕೈಪಿಡಿ, ತುಳು ಜಾನಪದ ಗೀತೆಗಳು. ಸಂಪಾದಿತ-ವಾಙ್ಞಯ ತಪಸ್ವಿ, ನೇತ್ರಾವತಿ, ತುರಾಯಿ, ಬೆಳ್ಳಿ ಮಿನುಗು, ಹರಿದಾಸರ ಕೀರ್ತನೆಗಳಲ್ಲಿ-ಸಾವಿರ ಕೀರ್ತನೆಗಳು, ಸಾವಿರಾರು ಕೀರ್ತನೆಗಳು, ಶ್ರೀ ವಾದಿರಾಜರ ಶ್ರೀಕೃಷ್ಣ ಬಾಲಲೀಲೆ, ದಾಸರು ಕಂಡ ಪಾಂಡುರಂಗ ವಿಠಲ, ಈಸಬೇಕು ಇದ್ದು ಜೈಸಬೇಕು ಮುಂತಾದವು ಪ್ರೊ. ನಾವಡ ಅವರ ಕೃತಿಗಳು .

‘ವಿವಕ್ಷೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಪ್ರಶಸ್ತಿ ‘ಕಾಡ್ಯನಾಟ ಪಠ್ಯ ಮತ್ತು ಪ್ರದರ್ಶನ’ ಕೃತಿಗೆ ಆರ್ಯಭಟ ಪ್ರಶಸ್ತಿ. ಗುಂಡ್ಮಿ ಜಾನಪದ ಪ್ರಶಸ್ತಿ, ಫಿನ್‌ಲ್ಯಾಂಡಿನ ಅಂತಾರಾಷ್ಟ್ರೀಯ ಜಾನಪದ ಸಂಘದ ಗೌರವ ಸದಸ್ಯತ್ವ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜಾನಪದ ತಜ್ಞ ಪ್ರಶಸ್ತಿ, ಕು.ಶಿ. ಹರಿದಾಸಭಟ್ಟರ ಜಾನಪದ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಸಾಹಿತ್ಯ ದಂಪತಿ ಪುರಸ್ಕಾರ, ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಬಹುಮಾನ ಮುಂತಾದ ಹಲವಾರು ಗೌರವಗಳು ಪ್ರೊ. ನಾವಡ ಅವರಿಗೆ ಸಂದಿವೆ..

ಪ್ರೊ. ನಾವಡರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು.

ಮಾಹಿತಿ ಆಧಾರ: ಕಣಜ.

Tag: A. V. Navada

ಕಾಮೆಂಟ್‌ಗಳಿಲ್ಲ: