ಶನಿವಾರ, ಆಗಸ್ಟ್ 31, 2013

ನಮ್ಮ ನಡುವೆ ಇರುವ ನಿಷ್ಠಾವಂತ ಸಜ್ಜನ ನರಸಿಂಹ

ಎಂ. ನರಸಿಂಹ

ಬದುಕಿನಲ್ಲಿ ನಾವು ಕೆಲವರನ್ನು ಕಂಡೊಡನೆ ಅವರು ವಿಶಿಷ್ಟರು ಎನಿಸಿಬಿಡುತ್ತದೆ.  ಅವರ ಅಂತರಾಳದಲ್ಲಿನ ಆತ್ಮೀಯ ಕಾಂತಿ, ಅವರು ರೂಢಿಸಿಕೊಂಡು ಬಂದಿರುವ ತಪಸ್ಸಿನ ಜೀವನ, ಮಾಗಿದ ಅವರ ಬದುಕಿನ ಅನುಭವಗಳು, ಬದುಕಿನಲ್ಲಿ ವ್ಯಾಪಾರೀತನದ ಲವಲೇಶವೂ ಇಲ್ಲದ ಅವರ ಮುಗ್ಧತೆಗಳು  ನಮ್ಮಲ್ಲಿ ಅವರ ಬಗ್ಗೆ ನಮಗೇ ಅರಿವಿಲ್ಲದಂಥಹ ಗೌರವ ಭಾವಗಳನ್ನು ಹುಟ್ಟಿಸಿಬಿಡುತ್ತವೆ.    ಅಂತಹ ಭಾವವನ್ನು ನನ್ನಲ್ಲಿ ಹುಟ್ಟಿಸಿದವರು ನಾನು ನಿಮಗೆ ಈಗ ಹೇಳುತ್ತಿರುವ ಶ್ರೀಯುತ ಎಂ. ನರಸಿಂಹ.  ಯಾವಾಗಲೂ ಬಿಳಿ ಬಟ್ಟೆ ಧರಿಸುವ ನರಸಿಂಹರ ಮನ, ಕೆಲಸ, ವ್ಯಕ್ತಿತ್ವ ಎಲ್ಲವೂ ಅಷ್ಟೇ ಪರಿಶುದ್ಧ.

ನಾವಿಬ್ಬರೂ ಒಂದೇ ಎಚ್ ಎಮ್ ಟಿ ಸಂಸ್ಥೆಯ ವಿವಿಧ ಕಚೇರಿಗಳಲ್ಲಿ ಕೆಲಸಮಾಡುತ್ತಿದ್ದವರು.  ಆದರೆ ನರಸಿಂಹರೊಡನೆ ಮಾತನಾಡುವ  ಪರಿಚಯ  ದೊರಕಲು ಹಲವು ವರ್ಷಗಳೇ  ಬೇಕಾಯಿತು.  ಒಮ್ಮೆ ಅವರ ಬಗ್ಗೆ ನನಗೆ ನನ್ನ ಗೆಳೆಯರು ನೀಡಿದ  ಮಾಹಿತಿಯಿಂದ, ಓ ಇದ್ದರೆ ಹೀಗಿರಬೇಕೆಂದು ಪ್ರಭಾವಿತನಾಗಿಬಿಟ್ಟೆ.  ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕ್ರಿಯಾಶೀಲರು ಮಾತ್ರವಲ್ಲ, ಬೆಂಗಳೂರಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವುದರಲ್ಲಿ ಪ್ರತಿಷ್ಟಿತ ಹೆಸರಾದ ಉದಯಭಾನು ಕಲಾ ಸಂಘದ ಸಂಸ್ಥಾಪಕರೆಂದು ಕೇಳಿ ಅವರ ಬಗ್ಗೆ ನನ್ನಲ್ಲಿ ಅಪಾರ ಗೌರವ  ಮೂಡಿಬಿಟ್ಟಿತು.  ಅಂದಿನಿಂದ ಅವರ ಬಳಿ ಹೋಗಿ ನಮಸ್ಕಾರ ಸಾರ್ ಎಂದು ಹೇಳಿ ಅವರಿಂದ ನಮಸ್ಕಾರ ಚೆನ್ನಾಗಿದ್ದೀರ ಎಂದು ಸುಶ್ರಾವ್ಯ ಧ್ವನಿಯಲ್ಲಿನ ಆತ್ಮೀಯ ಭಾವದಲ್ಲಿ  ಕೇಳಿಸಿಕೊಳ್ಳುವುದರಲ್ಲಿ ಅದೆಂತದ್ದೋ ಸುಖವಿತ್ತು.

ಪ್ರಾರಂಭದಲ್ಲಿ ನಮ್ಮಲ್ಲಿದ್ದ ಕನ್ನಡ ಸಂಪದದಲ್ಲಿ ಅವರು ಉಪಾಧ್ಯಕ್ಷರಾಗಿದ್ದರೂ ಅದನ್ನು ನಂತರದಲ್ಲಿ ತ್ಯಜಿಸಿಬಿಟ್ಟಿದ್ದರು.  ಮುಂದೆ ನಾನು ಕಾರ್ಯದರ್ಶಿಯಾಗುವ ಸಂದರ್ಭದಲ್ಲಿ ನರಸಿಂಹ ಅವರು ಕೂಡಾ ನಮ್ಮ ಎಚ್ ಎಮ್ ಟಿ ಕನ್ನಡ ಸಂಪದದ ಅಧ್ಯಕ್ಷರಾಗಿ ನಾವಿಬ್ಬರೂ ಒಟ್ಟಿಗೆ ಕೆಲಸಮಾಡುವಂತಾಗಿದ್ದು ನನ್ನ ಬದುಕಿನ ವಿಶಿಷ್ಟ ಸೌಭಾಗ್ಯಗಳಲ್ಲೊಂದು.  ನರಸಿಂಹ ಮತ್ತು ಕನ್ನಡ ಸಂಪದದಿಂದ ನಾನು ಬದುಕಿನಲ್ಲಿ ಪಡೆದ ಸೌಭಾಗ್ಯಗಳು ವರ್ಣಿಸಲು ಅಸದಳವಾಗಿದ್ದು ಅದು ಅಂತರಾಳದಲ್ಲಿ ಮಾತ್ರ ಮಾತಿಲ್ಲದೆ ಸುಪ್ತವಾಗಿರಬಲ್ಲಂತದ್ದು.  ಒಂದು ಕನ್ನಡ ಸಂಘವಾಗಿ ನಾವಿದ್ದ ಕನ್ನಡ ಸಂಪದ ಕೇವಲ ರಾಜ್ಯೋತ್ಸವ ಜಾತ್ರೆಗಳಂತ ಸಮಾರಂಭಗಳಿಗೆ ಮೀಸಲಾಗದೆ ಉತ್ತಮ ಕನ್ನಡ ಚಿಂತನೆಯ ಪ್ರತಿರೂಪವಾಗಿ ಬೆಳೆದು, ಅದು ನಮ್ಮೆಲ್ಲರನ್ನು ಮುಂದೆಯೂ ಬೆಳೆಸಿ ಪೋಷಿಸುತ್ತಿರುವ ರೀತಿಗೆ ನಾವು ದೇವರಿಗೆ ಎಷ್ಟು ಕೃತಜ್ಞರಾಗಿದ್ದರೂ ಕಡಿಮೆಯೇ.  ಅದೇ ಪ್ರೀತಿ ಭಕ್ತಿಗಳು ಇಂದು ಈ ಫೇಸ್ ಬುಕ್ ಆವರಣದಲ್ಲಿನ ಕನ್ನಡ ಸಂಪದದಲ್ಲಿ ಕೂಡಾ ನನ್ನಂತವರು ಅಳಿಲು ಸೇವೆ ಸಲ್ಲಿಸಲು ಪ್ರೇರಣೆಯಾಗಿದೆ.
ನಮ್ಮ ನರಸಿಂಹರು ಮೂಲತಃ ತಮಿಳುನಾಡಿನಿಂದ ಕರ್ನಾಟಕಕ್ಕೆ ವಲಸೆ ಬಂದವರು.  ಅವರ ಅಪ್ಪ ಅಮ್ಮ ಹೊಲಗದ್ದೆಗಳಲ್ಲಿ ಕೂಲಿ ಮಾಡಿದವರಾದರೂ ಮಗ ಮುಂದೆ ಬರಬೇಕೆಂಬ ಆಶಯ ಹೊತ್ತವರು.  ನರಸಿಂಹ ಕೂಡ ಬಾಲ್ಯದಲ್ಲಿ ನಾವು ಆಡಲು ಉಪಯೋಗಿಸುತ್ತಿದ್ದಂಥಹ  ವೇಳೆಯನ್ನು ಹೊಲಗದ್ದೆಗಳ ದುಡಿಮೆಯಲ್ಲಿ ಕಳೆದು ನಂತರದ ಅವಧಿಯಲ್ಲಿ ಕಲಿಕೆಗೆ ವಿನಿಯೋಗಿಸಿ ಪದವಿ ಪಡೆದರು.  ಹೀಗೆ ಓದಿ ಬೆಂಗಳೂರು ಸೇರಿದ ನರಸಿಂಹರು ಬೆಂಗಳೂರಿನ ಎಚ್ ಎಮ್ ಟಿ ಸಂಸ್ಥೆ ಸೇರಿದರು.
ಹೀಗೆ ಜೀವನದಲ್ಲಿ ಒಂದು ನೆಲೆ ಸೇರಿದ ನರಸಿಂಹರಿಗೆ ತಾನು ದಡ ಸೇರಿದರೆ ಸಾಲದು, ನಾನು ಇಲ್ಲಿ ಪಡೆದದ್ದಕ್ಕೆ ಏನನ್ನಾದರೂ ಮಾಡಬೇಕೆಂಬ ತುಡಿತ ನಿರಂತರವಾಗಿ ಕಾಡುತ್ತಿತ್ತು.  ಬದುಕಿನಲ್ಲಿ ಅಂತಹ ತುಡಿತವಿದ್ದವರಿಗೆ ದೇವರು ತನ್ನದೇ ಆದ ದ್ವಾರಗಳನ್ನು ತೆರೆಯುತ್ತಾನೆ.  ನರಸಿಂಹ ಅವರಿಗೆ ತೆರೆದ ದ್ವಾರ ಯಾವುದಿರಬಹುದು ಊಹಿಸಬಲ್ಲಿರಹೇಳಿದರೆ ಅಚ್ಚರಿ ಎನಿಸಬಹುದು.  ಅವರಿಗೆ ತೆರೆದ ದ್ವಾರ ಯಾವುದೇ ಕೈಗಾರಿಕಾ ಉದ್ಯೋಗಿಯ ಎದೆ ನಡುಗಿಸಬಲ್ಲಂತಹ ಕಂಪೆನಿಯ ಲಾಕ್ ಔಟ್.  ಆದರೆ ನರಸಿಂಹರು ಇದನ್ನೇ ಅವರ ಬದುಕಿನ ಮೂಲ ಆಶಯಗಳಿಗೆ ದ್ವಾರವಾಗಿಸಿಕೊಂಡುಬಿಟ್ಟರು
1964ರಲ್ಲಿ ಎಚ್ ಎಮ್ ಟಿ ಸಂಸ್ಥೆ ಕೆಲವೊಂದು ಘಟನಾವಳಿಗಳ ಹಿನ್ನಲೆಯಲ್ಲಿ ಬೀಗಮುದ್ರೆ ಹಾಕಿದಾಗ, ಆಗ ಸಿಕ್ಕ ಬಿಡುವಿನ ವೇಳೆಯನ್ನು ನರಸಿಂಹ ಒಂದು ಮಹತ್ಕಾರ್ಯವಾಗಿ ಮೂಡಿಸಿಬಿಟ್ಟರು.  ಅವರು ಅಂದು ಹುಟ್ಟು ಹಾಕಿದ  ಈ ಸಸಿ ಐವತ್ತು ವರ್ಷಗಳ ನಂತರದಲ್ಲಿ ಸಹಾ ಬೆಂಗಳೂರಿನ ಗವೀಪುರದ ಗುಟ್ಟಹಳ್ಳಿ ದೇವಾಲಯದ ಬಳಿ ಇರುವ ಉದಯಭಾನು ಕಲಾ ಸಂಘದ ರೂಪದಲ್ಲಿಅದರ ಮಹತ್ತರ ಸಾಧನೆಗಳಿಂದ ಇಂದೂ ಕಂಗೊಳಿಸುತ್ತಿದೆ.  ಈ ಉದಯಭಾನು ಕಲಾ ಸಂಘವನ್ನು ತಮ್ಮ ಗೆಳೆಯ ವೆಂಕಟಪ್ಪ ಎಂಬುವರೊಂದಿಗೆ ಸೇರಿ ಹುಟ್ಟು ಹಾಕಿದವರು ನರಸಿಂಹ.  ಅಂದಿನ ದಿನದಲ್ಲಿ ಅವರು ಒಂದು ಸಣ್ಣ ಕೋಣೆಯಲ್ಲಿ ವಾಚನಾಲಯ ಪ್ರಾರಂಭಿಸಿದಾಗ ಅದು ಇಷ್ಟೊಂದು ವ್ಯಾಪ್ತಿಯ ಇಷ್ಟೊಂದು ಸದ್ಪ್ರಭಾವ  ಬೀರುವ ಕಾರ್ಯವಾಗಿ ಹೊರಹೊಮ್ಮಬಹುದೆಂಬ ಕಲ್ಪನೆ ನರಸಿಂಹ ಮತ್ತು ವೆಂಕಟಪ್ಪ ಗೆಳೆಯರಿಗೆ ಇದ್ದಿರಲಾರದು.  ನಾವು ಮಾಡುವ ಕೆಲಸ ಮತ್ತು  ನಮ್ಮ ಉದ್ದೇಶ ಉತ್ತಮವಾಗಿದ್ದರೆ ಅದು ಪಡೆಯುವ ವ್ಯಾಪ್ತಿ ಮಹಾವೈಶಾಲ್ಯದ್ದು  ಎಂಬುದು ಉದಯಭಾನು ಕಲಾ ಸಂಘ ಬೆಳೆದು ನಿಂತಿರುವುದರ ಮೂಲಕ ಸಾಕ್ಷೀಭೂತವಾಗಿದೆ. ಐವತ್ತು ವರ್ಷಗಳನ್ನು ದಾಟಿರುವ ಈ ಉದಯಭಾನು ಕಲಾ ಸಂಘ ಕಳೆದ ವರ್ಷ  ಸುವರ್ಣ ಮಹೋತ್ಸವವನ್ನು ಆಚರಿಸಿದೆ.
ಅಂದು ಸಂಘ ಪ್ರಾರಂಭಿಸಿದ್ದ ವಾಚನಾಲಯಕ್ಕೆ ಅಂದಿನ ಯುವ ಬರಹಗಾರರಾದ ಯು. ಆರ್. ಅನಂತಮೂರ್ತಿ ಮತ್ತು ಹಿರಿಯರಾದ ವಿನಾಯಕ ಕೃಷ್ಣ ಗೋಕಾಕರಂತಹವರು ನಿರಂತರವಾಗಿ ಭೇಟಿ ನೀಡುತ್ತಿದ್ದರು.   ಮುಂದೆ ಈ ಮಹನೀಯರು ಉದಯಭಾನು ಕಲಾ ಸಂಘದ ಪ್ರಕಟಣೆಗಳಲ್ಲಿ ನಿರಂತರವಾಗಿ ತಮ್ಮ ಲೇಖನಗಳನ್ನು ಅಲಂಕರಿಸಿದ್ದಾರೆ.   ಐದು ದಶಕಗಳ ದಾಟಿರುವ  ಈ ಪಯಣದಲ್ಲಿ ಉದಯಭಾನು ಕಲಾ ಸಂಘವು ಸಾರ್ವಜನಿಕ ಜೀವನದಲ್ಲಿ ಕನ್ನಡ ಸಾಹಿತ್ಯ  ಮತ್ತು ಸಂಸ್ಕೃತಿಗಳ ಪ್ರಸಾರ ಕಾರ್ಯದ ಜೊತೆಗೆ ಆರ್ಥಿಕವಾಗಿ  ದುರ್ಬಲವಾದ ಜನರಿಗಾಗಿ ಆರೋಗ್ಯ ಮತ್ತು ಶಿಕ್ಷಣವನ್ನು ನೀಡುವಂತಹ ಮಹತ್ತರ ಸಂಸ್ಥೆಯಾಗಿ ಸಹಾ ಬೆಳೆದು ನಿಂತಿದೆ.  ಉದಯಭಾನು ಸಂಸ್ಥೆಯ ಮೂಲಕವಾಗಿ ಒಂದು ಸಾವಿರಕ್ಕೂ ಹೆಚ್ಚು ಗ್ರಾಮಾಂತರ ಪ್ರದೇಶದ ಬಡ  ಮಕ್ಕಳು ಎಂಟನೆ ತರಗತಿಯಿಂದ ಪಿ.ಯು. ಸಿ ವರೆಗಿನ ಶಿಕ್ಷಣ ಸೌಲಭ್ಯವನ್ನು ಉಚಿತವಾಗಿ ಪಡೆಯುತ್ತಿರುವುದು ಸಂಘ ಮಾಡುತ್ತಿರುವ ಉತ್ಕೃಷ್ಟ ಕೆಲಸವಾಗಿದೆ.  ಈ ಕೆಲಸದಲ್ಲಿ 50ಕ್ಕೂ ಹೆಚ್ಚು ಜನ ಅಧ್ಯಾಪನ ನಡೆಸುತ್ತಿದ್ದಾರೆ.  ಉದಯಭಾನು ಕಲಾ ಸಂಘ ಜನರ ಆರೋಗ್ಯ ಅಭಿವೃದ್ಧಿ ಕಾರ್ಯದಲ್ಲಿ ಕೂಡಾ ಮಹತ್ಕಾರ್ಯ ನಡೆಸುತ್ತಿದ್ದು ನಿರಂತರವಾಗಿ ವೈದಕೀಯ ಸೌಲಭ್ಯ, ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಗಳನ್ನು ಬಡಜನರಿಗಾಗಿ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಸಂಸ್ಥೆ ಕಂಪ್ಯೂಟರ್ ತಂತ್ರಜ್ಞಾನ, ಅಕೌಂಟೆನ್ಸಿ ಮುಂತಾದ ವಿಚಾರಗಳಲ್ಲಿ ಡಿಪ್ಲೋಮಾ ತರಗತಿಗಳನ್ನೂ, ಕನ್ನಡ ಸಾಹಿತ್ಯದ ಕುರಿತಾಗಿ ಸ್ನಾತಕೋತ್ತರ ಅಧ್ಯಯನ ಸೌಲಭ್ಯಗಳನ್ನೂ ನೀಡುತ್ತಿದೆ. ವಿಜ್ಞಾನದ ಕುರಿತಾದ ಕಮ್ಮಟಗಳನ್ನುನಡೆಸುವುದರ ಜೊತೆಗೆ ಶ್ರೇಷ್ಠ  ಪ್ರಕಟಣೆಗಳನ್ನೂ ಮಾಡುತ್ತಿದೆ.    ಇವೆಲ್ಲಕ್ಕೂ ಮಿಗಿಲಾಗಿ ತಾನು ಮಾಡುತ್ತಿರುವ ಸಕಲ ಕಾರ್ಯಗಳನ್ನೂ ಕನ್ನಡದ ವಾತಾವರಣದಲ್ಲಿ, ಸೌಜನ್ಯತೆಯಲ್ಲಿ, ಸಮಾಜದ ಕುರಿತಾದ ಆತ್ಮೀಯ ಕಾಳಜಿಗಳಿಂದ ಮಾಡುತ್ತಿದೆ.  

ಸಾಹಿತ್ಯಕ ಪರಿಚಾರಿಕೆಯ ಕಾರ್ಯದಲ್ಲಿ ನಿರಂತರವಾಗಿ ತನ್ನ ಸಾಧನೆಯನ್ನು ಮುಂದುವರೆಸಿರುವ ಉದಯಭಾನು ಕಲಾ ಸಂಘ ತನ್ನ  ಗ್ರಂಥಾಲಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದೆ.  ಸಂಘದ ವಾಚನಾಲಯದಲ್ಲಿ ಎಲ್ಲ ರೀತಿಯ ಉತ್ತಮ ಕನ್ನಡ ಪತ್ರಿಕೆ, ನಿಯತಕಾಲಿಕಗಳೂ ಸಹಾ ಲಭ್ಯ.
ಉದಯಭಾನು ಕಲಾ ಸಂಘ ಹಲವಾರು ಪ್ರಕಟಣೆಗಳನ್ನು ಕೈಗೊಂಡಿದೆ. ನಿರಂತರವಾಗಿ ಪ್ರಕಟವಾಗುತ್ತಿರುವ ಕಲಾ ವಿಕಾಸಕನ್ನಡ ಸಾಹಿತ್ಯ ಲೋಕದ ಅಗ್ರಗಣ್ಯರ ಲೇಖನಗಳನ್ನು ಅಲಂಕರಿಸಿಕೊಂಡಿದೆ.  ಸಂಘದ ಮತ್ತೊಂದು ಪ್ರಕಟಣೆಯಾದ ಬೆಂಗಳೂರು ದರ್ಶನಬೆಂಗಳೂರಿನ ಸಾಂಸ್ಕೃತಿಕ  ಲೋಕದ ಪ್ರತಿಫಲನವಾಗಿದೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಈ ಕೃತಿ ಪರಿಷ್ಕೃತಗೊಂಡು 3 ಬೃಹತ್ ಸಂಪುಟಗಳಲ್ಲಿ ಮೂರು ಸಾವಿರ ಪುಟವನ್ನೂ ಮೀರಿ ತುಂಬು ತುಳುಕಿ ಹೊರಬಂದಿದೆ.  ಅದು  ಸಿ.ಡಿ. ರೂಪದಲ್ಲಿ ಕೂಡಾ ಹೊರಬಂದಿದೆ. ಉದಯಭಾನು ಕಲಾ ಸಂಘ ಪ್ರಕಟಿಸಿದ ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಎಂಬ ಗ್ರಂಥ ಸಾಹಿತ್ಯಕ ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ಉಪಯೋಗವಾಗುವಂತಹ ಮಹತ್ಕೊಡುಗೆಯಾಗಿದೆ.  ಕಳೆದ ಶತಮಾನದ ಎರಡನೇ ದಶಕದಲ್ಲಿ ಕನ್ನಡದ ಪ್ರಪ್ರಥಮ ವಿಜ್ಞಾನ ಸಾಹಿತಿಗಳೆಂದು ಗೌರವಯುತರಾಗಿರುವ ಬೆಳ್ಳಾವೆ ವೆಂಕಟನಾರಣಪ್ಪನವರ 'ವಿಜ್ಞಾನ' ಪತ್ರಿಕೆಯ 24 ಸಂಪುಟಗಳನ್ನು ವಿಜ್ಞಾನ ಪರಿಷತ್ತಿನ ಸಹಯೋಗದಲ್ಲಿ ಹೊರತಂದಿದೆ. 
ಕಾಲಾನುಕಾಲದಲ್ಲಿ ಅ.ನ. ಕೃಷ್ಣರಾಯ, ಎಂ. ಎಚ್. ಕೃಷ್ಣಯ್ಯ, ಹಾ.ಮಾ. ನಾಯಕ್, ಜಿ. ನಾರಾಯಣ, ಎಲ್. ಎಸ್. ಶೇಷಗಿರಿರಾವ್, ಅ. ರಾ. ಮಿತ್ರರಂತಹ  ಅನೇಕ ಹಿರಿಯ   ಮಹನೀಯರ ಮಾರ್ಗದರ್ಶನ ಹಾಗೂ ಸಾಹಿತ್ಯಕ ಸೇವೆ ಸಂಘಕ್ಕೆ ಸಂದಿದೆ.  ಇತ್ತೀಚಿನ ದಿನಗಳಲ್ಲಿ ಬಿ. ಕೃಷ್ಣ ಅವರ ಅಧ್ಯಕ್ಷತೆ ಹಾಗೂ ಅನೇಕ ಸಜ್ಜನ ಕ್ರಿಯಾಶೀಲ ಪದಾಧಿಕಾರಿಗಳ ಜೊತೆ ಜೊತೆಗೆ ಪಿ.ವಿ. ನಾರಾಯಣ, ಅನಂತರಾಮು, ಅಪ್ಪಣ್ಣಯ್ಯ, ಬೆ. ಗೋ. ರಮೇಶ್ ಮುಂತಾದ ಅನೇಕ ವರಿಷ್ಠ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ವರಿಷ್ಠರು ಈ ಸಂಸ್ಥೆಯ ಶ್ರೇಷ್ಠ ಉದ್ದೇಶಗಳಿಗಾಗಿ ಹೆಗಲು ನೀಡುತ್ತಿದ್ದಾರೆ. 

ಉದಯಭಾನು ಕಲಾ ಸಂಘ ಹಲವಾರು ವರ್ಷಗಳಿಂದ  ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ನಡೆಸಿಕೊಂಡು ಬಂದಿದೆ.  ಉದಯಭಾನು ಕಲಾ ಸಂಘದಲ್ಲಿನ ಸ್ವಯಂ ಸೇವಕರ  ಸಾಮಾಜಿಕ ಕಳಕಳಿಯ ಫಲವಾಗಿ  ಸಂಘ ಕಾರ್ಯ ನಿರ್ವಹಿಸುತ್ತಿರುವ  ಕೆಂಪೇಗೌಡ ನಗರಕ್ಕೆ ಪಾಲಿಕೆಯ ಪ್ರೌಢಶಾಲೆ, ಉತ್ತಮ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಮತ್ತು ಉತ್ತಮ ಆಟದ ಮೈದಾನ ಮೂಡಲು ಸಹಾಯಕವಾಗಿದೆ.  ಉದಯಭಾನು ಕಲಾ ಸಂಘದ ಹೆಸರಿನಲ್ಲಿ ಸುವ್ಯವಸ್ಥಿತ ಆಟದ ಮೈದಾನ ಸಹಾ ನಗರಪಾಲಿಕೆಯ ವತಿಯಿಂದ ನಿರ್ಮಾಣವಾಗಿದೆ.

ನರಸಿಂಹ ಅವರಿಗೆ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಗೌರವಗಳು ಸಂದಿವೆ.  ಅವರು ಇವುಗಳ ಹಿಂದೆ ಎಂದೂ ಹೋದವರಲ್ಲ ಎಂಬುದು ಅವರನ್ನು ಬಲ್ಲ ಎಲ್ಲ ಸಹೃದಯರಿಗೂ ತಿಳಿದಿರುವ ವಿಷಯ.    ನರಸಿಂಹರವರಿಗೆ ಸಾಂಸ್ಕೃತಿಕ ವಲಯ, ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ಸಕ್ರಿಯರಾಗಿರುವ ಅಗ್ರರು ನೀಡುವ ಮರ್ಯಾದೆಯನ್ನು ಅವರ ಸನಿಹದಲ್ಲಿ ಹಲವು ಬಾರಿ ಇದ್ದ ನಾನು ಕಣ್ಣಾರೆ ಕಂಡಿದ್ದೇನೆ.  ಆದರೆ ಅದ್ಯಾವುದನ್ನೂ ತಮ್ಮ ವೈಯಕ್ತಿಕ ಲಾಭವಾಗಿ ಎಂದೂ ಪರಿವರ್ತಿಸಲು ಪ್ರಯತ್ನಿಸದ ನರಸಿಂಹರು ಈಗಲೂ ಅದೇ ಸಾಧಾರಣ ಜೀವನದ ನಡಿಗೆ, ಮಹಾನಗರ ಪಾಲಿಕೆ ಬಸ್ಸುಗಳಲ್ಲಿ ಪಯಣ  ಹಾಗೂ ಹನುಮಂತನಗರದಲ್ಲಿರುವ ತಮ್ಮ ಸಾಧಾರಣ ಗೃಹದಲ್ಲಿ ತಮ್ಮ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.

ಅವರ ಕನಸೆಲ್ಲವೂ ಇತರರಿಗಾಗಿ.  ತಮ್ಮ ಉದಯಭಾನು ಕಲಾ ಸಂಘಕ್ಕಾಗಿ ಬ್ರಹತ್ ಕಟ್ಟಡ, ಅದರಲ್ಲಿ ಬಡಜನರಿಗಾಗಿ ಹೆಚ್ಚು ಸೌಲಭ್ಯಗಳು, ಕನ್ನಡ ಮತ್ತು ಕನ್ನಡ ಸಂಸ್ಕೃತಿಯ ಬೆಳವಣಿಗೆಗಾಗಿ ಮಾಡಬೇಕಾದ ವ್ಯವಸ್ಥೆಗಳು, ಪ್ರಕಟಣೆಗಳುಕಾರ್ಯಗಳು ಹೀಗೆ ಪಟ್ಟಿ ದೊಡ್ಡದಾಗಿದೆ.  ತಮಿಳಿನ ವಾತಾವರಣದಲ್ಲಿ ಬಡತನದಲ್ಲಿ ಹುಟ್ಟಿ, ಕನ್ನಡ ನಾಡಿನಲ್ಲಿ ಅಪಾರ ಕನ್ನಡ, ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಜ್ಞಾನ ವಾಗ್ಮೀಯತೆ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಅದನ್ನೇ ತಮ್ಮ ಉಸಿರಾಗಿಸಿಕೊಂಡು ತಮ್ಮ ಹೊರಗಿನ ಪ್ರಪಂಚದಲ್ಲೂ ಅದನ್ನು ಪಸರಿಸುತ್ತಿರುವ ಈ ನಿಷ್ಠಾವಂತ ನರಸಿಂಹರ ಬಗ್ಗೆ ಎಷ್ಟು ಹೇಳಿದರೂ ಸಾಲದೆನಿಸುತ್ತದೆ.

ಕನ್ನಡ ಸಂಪದಪುಟದಲ್ಲಿ ಹಲವಾರು ಮಹನೀಯರನ್ನು ಪರಿಚಯಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ನರಸಿಂಹರ ಬಗ್ಗೆ ಹೇಳಬೇಕೆಂದು ಆಸೆಯಾಯಿತು. ಈ ಆಸೆಯಿಂದ ಒಮ್ಮೆ ಅವರಿಗೆ ದೂರವಾಣಿ ಮಾಡಿ ಅವರ ಹುಟ್ಟಿದ ದಿನಾಂಕದ ಬಗ್ಗೆ ಕೇಳಿದೆ.  ಅದೇನೋ ಸರಿಯಾಗಿ ಗೊತ್ತಿಲ್ಲ. ಶಾಲೆಗೆ ಸೇರಿಸುವಾಗ ಫೆಬ್ರವರಿ 12 ಎಂದು ಹೇಳಿರುವುದು ನೆನಪು ಎಂದರು.ಅದನ್ನೇ ಆಧಾರವಾಗಿಟ್ಟುಕೊಂಡು ನರಸಿಂಹರ ಬಗ್ಗೆ ನನಗೆ ಗೊತ್ತಿರುವ ಕೆಲವು ಮಾತನ್ನು ಹೇಳಲು ಪ್ರಯತ್ನಿಸಿದ್ದೇನೆ. ಕಳೆದ ಬಾರಿ  ಅವರನ್ನು ಭೇಟಿಯಾದಾಗ  ಅವರು  ‘ಉದಯಭಾನು ಕಲಾಸಂಘ’ದ ವಿಸ್ತೃತ ಕಟ್ಟಡದ ಬಗ್ಗೆ ಉತ್ಸಾಹದಿಂದ ಹೇಳುತ್ತಿದ್ದರು.  ಸಾರ್ ಆ ಕಟ್ಟಡ ಖಂಡಿತ  ಬರುತ್ತದೆ.  ನಿಮ್ಮಂತಹವರು ಮುಂದಿನ ಪೀಳಿಗೆಲ್ಲೂ ಉದಯಿಸುವುದ್ದಕ್ಕೂ  ಏನಾದರೂ  ವ್ಯವಸ್ಥೆ ಆಗುವಂತಿದ್ದರೆ ಚೆನ್ನಾಗಿತ್ತು ಅಂದೆ!   ಇಂತಹ ನರಸಿಂಹರು ನಮ್ಮ ಲೋಕದಲ್ಲಿ ಎಷ್ಟಿದ್ದರೂ ಸಾಲದು ಎಂದೆನಿಸುತ್ತದೆ.  ಈ ನರಸಿಂಹರೊಡನೆ ಕಳೆದ ಕೆಲವೊಂದು ಕ್ಷಣಗಳು ನನ್ನ ಬಾಳನ್ನು ಕೂಡಾ ಒಂದಷ್ಟು ಬೆಳಗಿಸಿದೆ.  ಈ ನೆನಪಲ್ಲಿ ಮೂಡಿದ ನರಸಿಂಹರಿಗೆ ಗೌರವಾರ್ಪಣೆಯಾಗಿದೆ ಈ ಲೇಖನ.


ನೀವೂ  ಒಮ್ಮೆ ಸಾಧ್ಯವಾದರೆ, ಗವೀಪುರದ ಗುಟ್ಟಹಳ್ಳಿ ದೇವಸ್ಥಾನದ ಬಳಿ ಚೌಲ್ಟ್ರಿ ಎದುರಿರುವ ಉದಯಭಾನು ಕಲಾ ಸಂಘದಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವ ನರಸಿಂಹರನ್ನು ಭೇಟಿಯಾಗಿ.  ನಿಮಗೂ ಆ ಕನ್ನಡ ಪ್ರೇಮ ಸಂಸ್ಕೃತಿಗಳ ಸಿಂಚನ ಖಂಡಿತ ದೊರೆಯುತ್ತದೆ ಎಂದು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ.

Tag: M. Narasimha

ಕಾಮೆಂಟ್‌ಗಳಿಲ್ಲ: