ಶುಕ್ರವಾರ, ಆಗಸ್ಟ್ 30, 2013

ಮನ್ನಾಡೆ


ಮನ್ನಾಡೆ

ಮನ್ನಾಡೆ ಎಂದು ಪ್ರಸಿದ್ಧರಾದ ಭಾರತೀಯ ಚಿತ್ರರಂಗದ ಮಹಾನ್ ಹಿನ್ನಲೆಗಾಯಕರಾದ ಪ್ರಬೋಧ ಚಂದ್ರ ದೇ ಅವರು  ಮೇ 1, 1919ರಂದು ಕಲಕತ್ತೆಯಲ್ಲಿ ಜನಿಸಿದರು.  ತಂದೆ ಪೂರ್ಣ ಚಂದ್ರ ಅವರು ಮತ್ತು  ತಾಯಿ ಮಹಾಮಯಾ ದೇ ಅವರು.

ಒಂದು ರೀತಿಯಲ್ಲಿ ಭಾರತೀಯ ಸಂಗೀತ ಅದರಲ್ಲೂ ಚಿತ್ರಸಂಗೀತ ಅಷ್ಟೊಂದು ಭಿನ್ನತೆಗಳಿರುವ ಈ ದೇಶವನ್ನು ಅಪೂರ್ವರೀತಿಯಲ್ಲಿ ಏಕೀರ್ಭವಿಸಿರುವುದು  ಅಚ್ಚರಿಯ ಸಂಗತಿ.  ಮಹಾನ್ ಗಾಯಕರು, ಉತ್ತಮ ಸಂಗೀತ ಇವೆಲ್ಲಾ, ನಮಗೆ ನಮ್ಮ ದೇಶದ ಎಲ್ಲ ವಿಭಿನ್ನ ನೆಲೆ, ಎಲ್ಲೆಗಳೆಲ್ಲವನ್ನೂ ಮೀರಿ ಹತ್ತಿರವಾಗಿಸಿದೆ.  ಈ ನಿಟ್ಟಿನಲ್ಲಿ ನಾವು ಪುಟ್ಟವರಿದ್ದಾಗ ಆಗ್ಗಿಂದಾಗ್ಗೆ ರೇಡಿಯೋದಲ್ಲಿ ಕೇಳಿ ಮುದಗೊಳ್ಳುತ್ತಿದ್ದ  ಕುಹೂ ಕುಹೂ ಎನ್ನುತ ಹಾಡುವ ಚಿನ್ನದ ಕಂಠದ ಕೋಗಿಲೆಯೇ’, ‘ಜಯತೇ ಜಯತೇ ಸತ್ಯಮೇವ ಜಯತೇಮುಂತಾದ  ಮನ್ನಾಡೆ ಅವರ ಗೀತೆಗಳನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ.  ಈ ಹಾಡುಗಳು ನಮ್ಮ ಪುಟ್ಟ ಮನಸ್ಸುಗಳಿಗೆ ಅವು ಯಾವುದೋ ಹೊರಗಿನ ಧ್ವನಿ ಎಂದೆನಿಸಿದರೂ ಅಪ್ಯಾಯಮಾನವಾದ ಆಪ್ತತೆ ಹುಟ್ಟಿಸಿಬಿಟ್ಟಿತ್ತು.

ತಮ್ಮ ಚಿಕ್ಕಪ್ಪ ಕೃಷ್ಣ ಚಂದ್ರದೇ ಅವರಲ್ಲಿ ಸಂಗೀತವನ್ನು ಕಲಿತ ಮನ್ನಾಡೆಯವರು ಮುಂದೆ 1942ರಲ್ಲಿ ಅವರೊಂದಿಗೆ ಮುಂಬೈಗೆ ಬಂದರು.  ಪ್ರಾರಂಭದಲ್ಲಿ ಅವರು ಸಚಿನ್ ದೇವ್ ಬರ್ಮನರಿಗೆ ಸಹಾಯಕರಾಗಿ ದುಡಿದು ನಂತರದಲ್ಲಿ ಬಹುತೇಕ ಸಂಗೀತ ನಿರ್ದೇಶಕರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.    ಹೀಗೆ ಕಾರ್ಯ ನಿರ್ವಹಿಸುತ್ತಲೇ ಹಿಂದೂಸ್ಥಾನಿ ಸಂಗೀತವನ್ನು ಉಸ್ತಾದ್ ಅಮಾನ್ ಆಲಿ ಖಾನ್ ಮತ್ತು ಉಸ್ತಾದ್ ಅಬ್ದುಲ್ ರಹಮಾನ್ ಖಾನರಲ್ಲಿ ಶ್ರದ್ಧೆಯಿಂದ ಮುಂದುವರಿಸಿದರು. 

ಮನ್ನಾಡೆ ಅವರು ಮೊದಲು ಹಿನ್ನಲೆ ಗಾಯನ ನೀಡಿದ್ದು ತಮನ್ನಾಚಿತ್ರದಲ್ಲಿ, ಆಗಿನ ಕಾಲದ ಪ್ರಸಿದ್ಧ ಹಿನ್ನಲೆ ಗಾಯಕಿಯಾದ ಸುರೈಯಾ ಅವರೊಂದಿಗೆ.  ಈ ಚಿತ್ರಕ್ಕೆ ಸಂಗೀತ ನೀಡಿದವರು  ಕೃಷ್ಣ ಚಂದ್ರದೇ ಅವರೇ.  ಈ ಹಾಡು ಪಡೆದ ಯಶಸ್ಸು ಮನ್ನಾಡೆ ಅವರಿಗೆ  ಸಚಿನ್ ದೇವ್ ಬರ್ಮನ್ ಅವರ ಸಂಗೀತ ನಿರ್ದೇಶನದಲ್ಲೂ ಅವಕಾಶ ತಂದು ಕೊಟ್ಟಿತು. ಮುಂದೆ ಅವರು ಬಂಗಾಳಿ, ಮರಾಠಿ ಮತ್ತು ಹಿಂದಿ ಚಿತ್ರರಂಗಗಳಲ್ಲಿ ಸಾವಿರಾರು  ಗೀತೆಗಳನ್ನು ಹಾಡಿದರು.  ಕನ್ನಡ ಮತ್ತು ಮಲಯಾಳದಲ್ಲೂ ಹಲವಾರು ಗೀತೆಗಳನ್ನು ಹಾಡಿದ್ದಾರೆ. 

ಮನ್ನಾಡೆ ಅವರು ಮಹಮ್ಮದ್ ರಫಿ ಅವರೊಂದಿಗೆ ಬರಸಾತ್ ಕಿ ರಾತ್ ಚಿತ್ರದ ಇಷ್ಕ್ ಇಷ್ಕ್’,  ಕಲ್ಪನಾ ಚಿತ್ರದ   ತೂ ಹೈ ಮೇರಾ ಪ್ರೇಮ್ ದೇವತಾ’, ‘ಪರ್ವರಿಶ್ಚಿತ್ರದ ಮಾಮಾ ಓ ಮಾಮಾಮುಂತಾದ ಅನೇಕ  ಗೀತೆಗಳನ್ನು ಹಾಡಿದರು.  ಲತಾ ಮಂಗೇಶ್ಕರ್ ಅವರೊಂದಿಗೆ ನೂರಾರು ಯುಗಳ ಗೀತೆಗಳನ್ನು ಹಾಡಿದರು.  ಇವುಗಳಲ್ಲಿ ಯೇ ರಾತ್ ಭೀಗಿ ಭೀಗಿ’, ‘ಪ್ಯಾರ್ ಹುವಾ ಇಕರಾರ್ ಹುವಾಮುಂತಾದವು ಪ್ರಸಿದ್ಧವಾಗಿವೆ.  ಇದೇ ರೀತಿ ಆಶಾ ಬೋಸ್ಲೆ ಅವರೊಂದಿಗೆ ಸಹಾ ಮನ್ನಾಡೆ ನೂರಾರು ಗೀತೆಗಳನ್ನು ಹಾಡಿದ್ದಾರೆ.  ಮನ್ನಾಡೆ ದೇಶದ ಹೆಸರಾಂತ ಶಾಸ್ತ್ರೀಯ ಗಾಯಕ ಭೀಮಸೇನ್ ಜೋಷಿಯವರೊಂದಿಗೆ ಹಾಡಿದ ಯುಗಳ ಗೀತೆ ಕೇತಕಿ ಗುಲಾಬ್ ಜೂಹಿಯೂ ವಿಶಿಷ್ಟವಾದುದೇ. ಅಲ್ಲದೇ, ಕಿಶೋರ್ ಕುಮಾರ್ ಅವರೊಂದಿಗೂ ಶೋಲೆಸಿನಿಮಾದಲ್ಲಿ ಹಾಡಿರುವ ಯೇ ದೋಸ್ತಿ, ಹಮ್ ನಹಿ ತೋಡೆಂಗೆಹಾಗೂ ಪಡೋಸನ್ಚಿತ್ರದ ಏಕ್ ಚತುರ್ ನಾರ್ಅತ್ಯಂತ ಖುಷಿ ನೀಡುವಂಥವು. 

ಪೂಚೋ ನ ಕೈಸೆ ಮೈನೆ ರೇನ್ ಬಿತಾಯೆ”, “ಎ ಮೆರೆ ವತನ್, ಎ ಮೆರೆ ಬಿಚಡೆ ಚಮನ್’, “ಲಗಾ ಚುನಾರಿ ಮೇ ದಾಗ್’, “ಎ ಮೆರಿ ಜೊಹರಾಜಬಿ’, “ಎ ಮೆರೆ ಪ್ಯಾರೆ ವತನ್’, “ಆಜಾ ಸನಮ್ ಮಧುರ ಚಾಂದಿನಿ ಮೇ ಹಂ’, “ದಿಲ್ ಕಾ ಹಾಲ್ ನಾ ದಿಲ್ವಾಲೆ’, “ಯೇ ರಾತ್ ಭೀಗಿ ಭೀಗಿ’, “ಝನಕ್ ಝನಕ್ ತೆರಿ ಭಾಜೆ ಪೆಹಲಿಯಾ’, “ತೂ ಪ್ಯಾರ್ ಕಾ ಸಾಗರ್ ಹೈ”, “ಜಿಂದಗಿ ಕೈಸಿ ಹೈ ಪಹೆಲಿ’, “ಯಾರಿ ಹಿ ಇಮಾನ್ ಮೆರಾಇಂಥಹ ನೂರಾರು ಗೀತೆಗಳು ಮನ್ನಾಡೆ ಅವರ ಧ್ವನಿಯಲ್ಲಿ ಹರಿದುಬಂದಿವೆ. 

ಸಿನಿಮಾ ಸಂಗೀತವಲ್ಲದೆ ರಬೀಂದ್ರ ಸಂಗೀತ್ ಮತ್ತು ಭಕ್ತಿ ಸಂಗೀತಗಳಲ್ಲೂ ಮನ್ನಾಡೆ ಅವರು ಸಾವಿರಾರು ಗೀತೆಗಳನ್ನು ಹಾಡಿದ್ದಾರೆ.  ಮೇರಾ ನಾಮ್ ಜೋಕರ್, ಮೇರೇ ಹುಜೂರ್ ಮತ್ತು ಬಂಗಾಳದ ನಿಶಿ ಪದ್ಮಾಮುಂತಾದ ಚಿತ್ರಗಳು ಮನ್ನಾಡೆ ಅವರಿಗೆ ರಾಷ್ಟ್ರ ಮಟ್ಟದ ಹಿನ್ನಲೆ ಗಾಯಕ ಪ್ರಶಸ್ತಿಗಳನ್ನು ತಂದಿವೆ.  ಪದ್ಮಶ್ರೀ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳೂ ಮನ್ನಾಡೆ ಅವರಿಗೆ ಸಂದಿವೆ.  ಫಿಲಂ ಫೇರ್ ಅಂತಹ ಪ್ರಶಸ್ತಿಗಳು ವಿವಿಧ ರಾಜ್ಯ ಪ್ರಶಸ್ತಿ ಗೌರವಗಳಂತೂ ಹೇರಳವಾಗಿ ಸಂದಿವೆ. 

ತಮ್ಮ 89ರ ವಯಸ್ಸಿನಲ್ಲೂ ಉಮರ್ಎಂಬ ಚಿತ್ರಕ್ಕೆ 2008ರ ವರ್ಷದಲ್ಲಿ ಮನ್ನಾಡೆ  ಹಿನ್ನಲೆಗಾಯನ ನೀಡಿದ್ದರು. 


ಈ ಮಹಾನ್ ಗಾಯಕರು 2014ರ ಅಕ್ಟೋಬರ 24ರಂದು ನಿಧನರಾದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: Manna Dey

ಕಾಮೆಂಟ್‌ಗಳಿಲ್ಲ: