ಶನಿವಾರ, ಆಗಸ್ಟ್ 31, 2013

ಟಿ. ವಿ. ಶಂಕರನಾರಾಯಣನ್

ಟಿ. ವಿ. ಶಂಕರನಾರಾಯಣನ್

ಇತ್ತೀಚೆಗೆ  ಮೈಸೂರಿನಲ್ಲೊಂದು ಸಂಗೀತ ಕಾರ್ಯಕ್ರಮ.  ಅದೊಂದು ಅಪೂರ್ವ ಅನುಭವ.  ಆ ಕಾರ್ಯಕ್ರಮ ನಡೆಸಿಕೊಟ್ಟವರು ಪದ್ಮಭೂಷಣ ಟಿ. ವಿ. ಶಂಕರನಾರಾಯಣನ್ ಅವರು.  ಕರ್ಣಾಟಕ ಸಂಗೀತದಲ್ಲಿ ಶಂಕರನಾರಾಯಣನ್ ಅವರದು ಒಂದು ರೀತಿಯ ಸುಮಧುರ ಸಂಚಾರವಿದ್ದಂತೆ.  ಬಹುಷಃ ಶಂಕರನಾರಾಯಣನ್ ಅವರಿಗೆ ಈ ಕಲೆ ಅವರ ಚಿಕ್ಕಪ್ಪನವರಾದ ಕರ್ಣಾಟಕ ಸಂಗೀತದ ಮೇರು ಶಿಖರರೆನಿಸಿದ್ದ ಮದುರೈ ಮಣಿ ಅಯ್ಯರ್ ಅವರಿಂದಲೇ ಕರಗತವಾಗಿದೆ  ಎನಿಸುತ್ತದೆ.  ಮಧುರೈ ಮಣಿ ಅಯ್ಯರ್ ಅವರ ಸಂಗೀತವನ್ನು ಕಿವಿಗೆ ಹಾಕಿಕೊಂಡಿದ್ದವರಿಗೆ ಶಂಕರನಾರಾಯಣನ್ ಅವರ ಸಂಗೀತ ಅದರ ಸಾಮ್ಯತೆಯನ್ನು ತಂದುಕೊಡುವಂತಿದೆ.      

ಟಿ. ವಿ. ಶಂಕರನಾರಾಯಣನ್ ಅವರು ಮಾರ್ಚ್ 7, 1945ರಲ್ಲಿ ತಂಜಾವೂರು ಜಿಲ್ಲೆಗೆ ಸೇರಿದ ಗ್ರಾಮವೊಂದರಲ್ಲಿ ಜನಿಸಿದರು.  ಬಾರ್ ಕೌನ್ಸಿಲ್ಗೆ ಸ್ವರ್ಣಪದಕದೊಂದಿಗೆ ಪ್ರವೇಶಿಸಿ ಕಾನೂನು ವ್ಯವಹಾರದಲ್ಲಿ ತೊಡಗಿ ಎರಡು ವಾರವೂ ಕಳೆದಿರಲಿಲ್ಲ, ಅವರ ಚಿಕ್ಕಪ್ಪನವರಿಂದ ಕರೆಬಂತು.  ನಿಜ ಹೇಳು ನೀನು ಹಾಡಿ ಎಷ್ಟು ದಿನ ಆಯ್ತು.  ಬಹಳ ದಿನಗಳಿಂದ ನೀನು ಒಂದು ಕಿಂಚಿತ್ತೂ ಕೂಡಾ  ಧ್ವನಿ ಹೊರಡಿಸಿಲ್ಲ. ಇದು ಅಕ್ಷಮ್ಯ ಅಪರಾಧ.  ಮೊದಲು ನಿನ್ನ ಕೆಲಸಕ್ಕೆ ಗಂಟೂ ಮೂಟೆ ಕಟ್ಟಿ ಸಂಗೀತದಲ್ಲಿ ತಲ್ಲೀನನಾಗು ಎಂದು ಆದೇಶಿಸಿದರು.  ಹೀಗಾಗಿ ಸಂಗೀತಕ್ಕೊಬ್ಬರು ಮಹಾನ್ ಕಲಾವಿದರು ದಕ್ಕಿದರು. 

1968ರ ವರ್ಷದಲ್ಲಿ ಕಚೇರಿ ನೀಡಲು ಪ್ರಾರಂಭಿಸಿದ ಶಂಕರನಾರಾಯಣರು ಕ್ರಮೇಣವಾಗಿ ಕರ್ನಾಟಕ ಸಂಗೀತ ಕ್ಷೇತ್ರದ ಪ್ರಧಾನ ಗಾಯಕಾರಾಗಿ ರೂಪುಗೊಂಡರು.  ತಮ್ಮ ಚಿಕ್ಕಪ್ಪನವರಂತೆಯೇ ಸಾಹಿತ್ಯ ಶುದ್ಧಿಯಿಂದ ಕೂಡಿದ  ಭಾವುಕಭರಿತ ಗಾಯನದಿಂದ ಅಸಂಖ್ಯಾತ ಸಂಗೀತ ಪ್ರೇಮಿಗಳನ್ನು ಗಳಿಸಿದರು.  ಭಾರತ ಮತ್ತು ವಿದೇಶಗಳಲ್ಲಿ ಅಸಂಖ್ಯಾತ ಕಾರ್ಯಕ್ರಮಗಳನ್ನು ನೀಡಿರುವುದರ ಜೊತೆಗೆ ಹಲವಾರು ಪ್ರಸಿದ್ಧ ಆಲ್ಬಂಗಳನ್ನು ಕೂಡಾ ಹೊರತಂದಿದ್ದಾರೆ.    


ಪದ್ಮಭೂಷಣ ಪ್ರಶಸ್ತಿ, ಸಂಗೀತ ಕಲಾನಿಧಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಟಿ. ವಿ. ಶಂಕರನಾರಾಯಣನ್ ಅವರನ್ನು ಅರಸಿ ಬಂದಿವೆ.

Tag: T. V. Shanakaranarayanan

ಕಾಮೆಂಟ್‌ಗಳಿಲ್ಲ: