ಮಂಗಳವಾರ, ಆಗಸ್ಟ್ 27, 2013

ಮುಖ್ಯಮಂತ್ರಿ ಚಂದ್ರು

ಮುಖ್ಯಮಂತ್ರಿ ಚಂದ್ರು

ಮುಖ್ಯಮಂತ್ರಿಗಳಿರಲಿ, ಪ್ರಧಾನ ಮಂತ್ರಿಗಳೇ ವಾರಕ್ಕೊಬ್ಬರು ಬದಲಾದ ನಿದರ್ಶನಗಳ ದೇಶ ನಮ್ಮದು.  ಇನ್ನು ನಮ್ಮ ರಾಜ್ಯಮಟ್ಟದಲ್ಲಂತೂ  ಬದಲಾವಣೆ ಎಂಬುದಕ್ಕೆ ಮತ್ತೊಂದು ಹೆಸರೇ ‘ಮುಖ್ಯಮಂತ್ರಿ’ ಎನಿಸಿದೆ.  ನಾವು ಮಾಜಿ ಎನಿಸಿಕೊಂಡರೂ ಪರವಾಗಿಲ್ಲ ಒಂದು ದಿನವಾದರೂ ಮುಖ್ಯಮಂತ್ರಿ ಆಗಬೇಕು ಎಂಬ ಬಯಕೆ ಹೊತ್ತವರು ದಿನೇ ದಿನೇ ಹುಟ್ಟಿಕೊಂಡು ಸ್ವಯಂ ಅಭಿವೃದ್ಧಿ ಹೊಂದುತ್ತಿದ್ದಾರೆ.  ಅದಕ್ಕಾಗಿ ಉಪ ಮುಖ್ಯಮಂತ್ರಿ, ಮರಿ ಮುಖ್ಯಮಂತ್ರಿ, ಕಿರಿ ಮುಖ್ಯ ಮಂತ್ರಿ, ಕಿರಿ ಕಿರಿ ಮುಖ್ಯ ಮಂತ್ರಿ ಇತ್ಯಾದಿ ಹೊಸ ಹೊಸ ಪಟ್ಟಗಳಲ್ಲಿ ಸಹಾ ರಾಜಕಾರಣಿಗಳು ತುಂಬಿ ತುಳುಕುತ್ತಿದ್ದಾರೆ.  ಆದರೆ ಒಬ್ಬರೇ ಒಬ್ಬರು ಮಾತ್ರ ತಮ್ಮ ಕಲಾ ಪ್ರೇಮಿಗಳ ಹೃದಯ ರಾಜ್ಯದಲ್ಲಿ ಮೂರ್ನಾಲ್ಕು ದಶಕಗಳಿಂದ ಮುಖ್ಯಮಂತ್ರಿಯಾಗಿ ಶಾಶ್ವತ ಸ್ಥಾನ ಉಳಿಸಿಕೊಂಡಿದ್ದಾರೆ.   ಅವರೇ ಕನ್ನಡದ ರಂಗಭೂಮಿ ಮತ್ತು ಚಲನಚಿತ್ರಗಳ ಪ್ರಖ್ಯಾತ ಕಲಾವಿದ ಮುಖ್ಯಮಂತ್ರಿ ಚಂದ್ರು.

ಚಂದ್ರು ಮೂಲ ಹೆಸರು ಚಂದ್ರಶೇಖರ್. ರಂಗಭೂಮಿ, ಕಿರುತೆರೆ ಮಾತ್ರವಲ್ಲದೆ ರಾಜಕೀಯದಲ್ಲೂ ಮಿಂಚಿದ ಚಂದ್ರು ನೆಲಮಂಗಲ ತಾಲೂಕಿನ ಹೊನ್ನಸಂದ್ರದಲ್ಲಿ ಆಗಸ್ಟ್ 28, 1953ರಂದು ಜನಿಸಿದರು.   ಮನೆಯಲ್ಲಿ ಬಡತನ ಜೊತೆಗೆ ಮಗ ತುಂಬಾ ತುಂಟ.  ಹೀಗಾಗಿ ತಂದೆ ತಾಯಂದಿರು ಮಗನನ್ನು ಸಿದ್ಧಗಂಗಾ ಮಠಕ್ಕೆ ಸೇರಿಸಿದರು.  ಬಿಎಸ್ಸಿ ಓದಿದರು.
ಒಮ್ಮೆ ‘ಹುತ್ತವ ಬಡಿದರೆ’ ನಾಟಕದಲ್ಲಿ, ಅಭಿನಯಿಸಬೇಕಿದ್ದ  ಒಬ್ಬ ಪಾತ್ರಧಾರಿ ಬರಲಿಲ್ಲದ ಕಾರಣ ನಿರ್ದೇಶಕ ಪ್ರಸನ್ನರು ಚಂದ್ರಶೇಖರ್  ಅವರಿಂದ ಒಂದು ಪಾತ್ರ ಮಾಡಿಸಿದರು.  ಹೀಗೆ ರಂಗಭೂಮಿಗೆ ಬಂದರು ಚಂದ್ರು.  ಹೀಗೆಯೇ ರಂಗಭೂಮಿಯಲ್ಲಿ ಅಲ್ಲಲ್ಲಿ ಅಭಿನಯಿಸುತ್ತಿದ್ದ ಅವರಿಗೆ ಮುಖ್ಯಮಂತ್ರಿ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರಧಾರಿ ಲೋಹಿತಾಶ್ವ ಅನಾರೋಗ್ಯಕ್ಕೆ ಒಳಗಾದದ್ದರಿಂದ ಮುಖ್ಯಮಂತ್ರಿ ಪಾತ್ರ ಮಾಡಬೇಕಾಗಿಬಂದು  ಅದರಲ್ಲಿ  ಅವರು ತುಂಬಾ ಜನಪ್ರಿಯತೆ ಪಡೆದರು.  ಹೀಗೆ  ರಂಗಭೂಮಿಗೆ ಒಗ್ಗಿಕೊಂಡ  ಚಂದ್ರಶೇಖರ್  ನಾಟಕದ ಡಿಪ್ಲೋಮಾ ಪಡೆದರು.  ಕೆಲಕಾಲ ಅವರು  ಬೆಂಗಳೂರು ವಿಶ್ವವಿದ್ಯಾಲಯಲದಲ್ಲಿ ಉದ್ಯೋಗಿಯಾಗಿದ್ದರು.

'ಮುಖ್ಯಮಂತ್ರಿ' ನಾಟಕದ ಪಾತ್ರಕ್ಕೆ ಅವರು ಜೀವ ತುಂಬಿ ಪ್ರಖ್ಯಾತಿ ಪಡೆದ ಹಿನ್ನಲೆಯಲ್ಲಿ ಚಂದ್ರಶೇಖರ್  ‘ಮುಖ್ಯಮಂತ್ರಿ ಚಂದ್ರು’ ಎಂದೆನಿಸಿದರು.  ಚಂದ್ರಶೇಖರ್ ಅವರು ಚಲನಚಿತ್ರ ಕ್ಷೇತ್ರಕ್ಕೆ ಅಡಿಯಿಟ್ಟಾಗ ಆ ವೇಳೆಯಲ್ಲಿ ಮತ್ತೊಬ್ಬ ಚಂದ್ರಶೇಖರ್ (ಎಡಕಲ್ಲು ಗುಡ್ಡದ ಮೇಲೆ) ಇದ್ದರು. ಹಾಗಾಗಿ ಚಲನಚಿತ್ರ ರಂಗದಲ್ಲೂ ಇವರ ಹೆಸರು  'ಮುಖ್ಯಮಂತ್ರಿ ಚಂದ್ರು' ಎಂದು ಖಾಯಂ ಆಯಿತು.

ರಂಗಭೂಮಿಯ ಸ್ನೇಹಿತರಿಂದ ಉತ್ತೇಜಿತರಾಗಿ 1975ರಲ್ಲಿ ‘ತಾಯಿ’ ನಾಟಕದಲ್ಲಿ ಸಮುದಾಯದ ಪ್ರಸನ್ನರು ನೀಡಿದ ಪಾತ್ರದಿಂದ ಚಂದ್ರು ಅಪಾರ ಯಶಸ್ಸು ಪಡೆದರು.   ಮುಖ್ಯಮಂತ್ರಿ ನಾಟಕದಲ್ಲಿ ಅಭಿನಯದಿಂದ ಬಂದ ಪ್ರಸಿದ್ಧಿ ಜೊತೆಗೆ ‘ಮುಖ್ಯಮಂತ್ರಿ ಚಂದ್ರು’ ಎಂಬ ಖಾಯಂ ಹೆಸರು ಬಂದದ್ದು ಈಗ ಇತಿಹಾಸ.  ಅವರು  ಬಿ.ವಿ. ರಾಜಾರಾಂ ಜೊತೆ ಸೇರಿ ನಿರ್ದೇಶಿಸಿದ ನಾಟಕ ಅಚಲಾಯತನ. ನಂತರ ಹಲವಾರು ನಾಟಕಗಳ ನಿರ್ದೇಶನ ಮಾಡಿದ ಚಂದ್ರು ಅವರ  ಮೋಡಗಳು, ಮೂಕಿ ಟಾಕಿ, ಎಲ್ಲಾರು ಮಾಡುವುದು. ಗರ್ಭಗುಡಿ, ಕತ್ತಲೆ ದಾರಿದೂರ, ಕಾಲಿಗುಲ, ಭರತಪ್ಪನ ಸೊಂಟಕ್ಕೆ ಗಂಟೆ, ಕೇಳು ಜನಮೇಜಯ,  ಕಂಬಳಿಸೇವೆ, ಹೋಂ ರೂಲು ಮುಂತಾದುವು ಜನಪ್ರಿಯವೆನಿಸಿದವು. ಮುಖ್ಯಮಂತ್ರಿ, ತಾಯಿ, ಕತ್ತಲೆ ದಾರಿದೂರ, ಘಾಸಿರಾಂ ಕೊತ್ವಾಲ್‌, ಕಾಲಿಗುಲ, ನಮ್ಮೊಳಗೊಬ್ಬ ನಾಜೂಕಯ್ಯ, ಆಸ್ಫೋಟ ಮುಂತಾದ ನಾಟಕಗಳ ಪ್ರಮುಖ ಪಾತ್ರಧಾರಿಯಾಗಿದ್ದ ಚಂದ್ರು ಅವರನ್ನು ಮುಂದೆ ಚಿತ್ರರಂಗ ತನ್ನವರನ್ನಾಗಿಸಿಕೊಂಡಿತು.

ಮುಖ್ಯಮಂತ್ರಿ ಚಂದ್ರು ಅವರದ್ದು   ಮೂಕಾಭಿನಯದಲ್ಲಿ ಅನನ್ಯ ಪ್ರತಿಭೆ.   ಕೋಲ್ಕತ್ತಾದ ಮೈಮ್‌ ಇನ್‌ಸ್ಟಿಟ್ಯೂಟ್‌ನ ಜೋಗೇಶ್‌ ದತ್ತಾ, ಅಮೆರಿಕದ ಅಡಂ ಅಬ್ರಹಾಂ, ವಿ. ರಾಮಮೂರ್ತಿ ಮುಂತಾದ ಮಹನೀಯರುಗಳ ಮಾರ್ಗದರ್ಶನ. ಅವರಿಗೆ ದೊರಕಿತು.    ಲಂಡನ್‌, ಪ್ಯಾರಿಸ್‌, ರೋಂ, ಸ್ವಿಜರ್‌ಲ್ಯಾಂಡ್‌, ಆಮ್‌ಸ್ಟರ್‌ಡಾಂ, ಬೆಲ್ಜಿಯಂ, ಸಿಂಗಪೂರ್, ಹಾಂಗಾಕಾಂಗ್‌ ಮುಂತಾದ ವಿಶ್ವದೆಲ್ಲೆಡೆಯ ಪ್ರಮುಖ ನಗರಗಳಲ್ಲಿ ಅವರ ಮೂಕಾಭಿನಯ ಪ್ರದರ್ಶನ ಜನಪ್ರಿಯಗೊಂಡಿದೆ.

ಮುಖ್ಯಮಂತ್ರಿ ಚಂದ್ರು ಅವರು ಇತ್ತೀಚಿನವರೆಗೆ  ನಟಿಸಿರುವ ಚಿತ್ರಗಳ ಸಂಖ್ಯೆ ನಾನೂರಕ್ಕೂ ಹೆಚ್ಚಿನದು.  'ಹೊಸ ಮೇಡಂ', 'ಫಣಿಯಮ್ಮ' ಚಿತ್ರಗಳಲ್ಲಿ ಕಾಣಿಸಿಕೊಂಡ ಮುಖ್ಯಮಂತ್ರಿ ಚಂದ್ರು ಅವರ ಅಭಿನಯ ಸಾಮರ್ಥ್ಯವನ್ನು ಒರೆಗಲ್ಲಿಗೆ ಹಚ್ಚಿದ ಚಿತ್ರ 'ಮುಯ್ಯಿ'.   ಹೊಸ ಬಗೆಯ ಸಂಭಾಷಣೆ ಶೈಲಿಯಿಂದ ಪ್ರೇಕ್ಷಕರ ಗಮನಸೆಳೆದ ಚಂದ್ರು ಚಿತ್ರರಂಗದ   ಹಾಸ್ಯ ಕಲಾವಿದರಾಗಿ,  ಖಳ ಪಾತ್ರಧಾರಿಯಾಗಿ, ಪೋಷಕ ಪಾತ್ರಧಾರಿಯಾಗಿ ಗಳಿಸಿದ ಜನಪ್ರಿಯತೆ ಅಪಾರವಾದದ್ದು.   ಚಕ್ರವ್ಯೂಹ, ಮಾಲಾಶ್ರೀ ಮಾಮಾಶ್ರೀ,  ಗುಂಡನ ಮದುವೆ,   ಎದುರುಮನೆ ಗಂಡ ಪಕ್ಕದಮನೆ ಹೆಂಡತಿ, ಗಣೇಶನ ಮದುವೆ, ಗೌರಿ ಗಣೇಶ, ಸೂರ್ಯವಂಶ, ಗೋಲ್ ಮಾಲ್ ರಾಧಾಕೃಷ್ಣ   ಮುಂತಾದ ಅನೇಕ ಚಿತ್ರಗಳಲ್ಲಿ ಚಂದ್ರು ಅವರ ಅಭಿನಯ ಜನಪ್ರಿಯ.  ಅವರ ಅಭಿನಯ ಕಿರುತೆರೆಯಲ್ಲೂ ಸಾಕಷ್ಟು ಹರಿದಿದೆ.

ರಾಮಕೃಷ್ಣ ಹೆಗ್ಗಡೆ ಅವರ ಒತ್ತಾಯದ ಮೇರೆಗೆ ಗೌರಿಬಿದನೂರಿನಿಂದ ಒಮ್ಮೆ  ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಮುಖ್ಯಮಂತ್ರಿ ಚಂದ್ರು ಮುಂದಿನ ದಿನಗಳಲ್ಲಿ  ಭಾಜಪದ ಸಕ್ರಿಯ ಕಾರ್ಯಕರ್ತರಾಗಿ ಮುಂದುವರೆದವರು.   ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಮುಖ್ಯಮಂತ್ರಿ ಚಂದ್ರು   ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಶರಾಗಿ ಸಹಾ ಸೇವೆ ಸಲ್ಲಿಸುತ್ತಿದ್ದಾರೆ.  ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಉಳಿದ ಅಕಾಡೆಮಿಗಳಿಗೆಲ್ಲ ಅಧ್ಯಕ್ಷರು ಬದಲಾದರೂ ಮುಖ್ಯಮಂತ್ರಿ ಚಂದ್ರು ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಮುಂದುವರೆದಿದ್ದಾರೆ.

ನಾಟಕ ಆಕಾಡೆಮಿ ಪ್ರಶಸ್ತಿ, ರಂಗಭೂಮಿ ಮತ್ತು ಚಲನಚಿತ್ರ ಪ್ರಶಸ್ತಿಗಳೇ  ಮುಂತಾದ ಅನೇಕ ಪ್ರಶಸ್ತಿ  ಗೌರವಗಳು ಮುಖ್ಯಮಂತ್ರಿ ಅವರಿಗೆ ಸಂದಿವೆ.  ಗುಲ್ಬರ್ಗಾ ವಿಶ್ವವಿದ್ಯಾಲಯವು ಡಾಕ್ಟರೇಟ್ ಗೌರವವನ್ನು ಪ್ರಧಾನಿಸಿದೆ.  ಮುಖ್ಯಮಂತ್ರಿ  ಚಂದ್ರು ಅವರಿಂದ  ಕಲಾರಂಗಕ್ಕೆ, ಕನ್ನಡ ಭಾಷೆಗೆ ಮತ್ತು ಸಮಾಜಕ್ಕೆ ಉತ್ತಮ ಸೇವೆ ಲಭ್ಯವಾಗುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟು ಹಬ್ಬದ ಆತ್ಮೀಯ ಶುಭ ಹಾರೈಕೆಗಳನ್ನು ಸಲ್ಲಿಸೋಣ.

Tag: Mukhyamantri Chandru

ಕಾಮೆಂಟ್‌ಗಳಿಲ್ಲ: