ಶುಕ್ರವಾರ, ಆಗಸ್ಟ್ 30, 2013

ಬಿ.ಹನುಮಂತಾಚಾರ್

ಬಿ.ಹನುಮಂತಾಚಾರ್

ಬಿ. ಹನುಮಂತಾಚಾರ್ಯರು ಯೂನಿವಾಕ್ಸ್ ವಾದ್ಯದ ವಾದಕರಾಗಿ ಸಂಗೀತ ಲೋಕದಲ್ಲಿ ಮತ್ತು ಸಿನಿಮಾ ಸಂಗೀತದಲ್ಲಿ ಹೇಗೆ ಪ್ರಸಿದ್ಧರೋ ಹಾಗೆಯೇ ರಂಗಭೂಮಿಯಲ್ಲಿ ಮತ್ತು ಚಲನಚಿತ್ರಗಳಲ್ಲಿ ಹಾಸ್ಯ ನಟರಾಗಿ ಸಹಾ ಪ್ರಸಿದ್ಧರಾಗಿದ್ದವರು.  ಕನ್ನಡ ಚಲನಚಿತ್ರಗಳಲ್ಲಿ ಹನುಮಂತಾಚಾರ್ಯರು ತಮ್ಮ ಉತ್ತರ ಕರ್ನಾಟಕದ ಭಾಷಾಶೈಲಿಯಿಂದ ಬಹು  ಜನಪ್ರಿಯರಾಗಿದ್ದರು.  ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕವಾಗಿ ನೆನಪಿನಲ್ಲಿ ಉಳಿಯುವ  ಭಕ್ತ ಕನಕದಾಸಚಿತ್ರದಲ್ಲಿಹನುಮಂತಾಚಾರ್ಯರ ಯೂನಿವಾಕ್ಸ್ ವಾದ್ಯದ ಬಳಕೆ ಆ ಚಿತ್ರದ ಪ್ರಮುಖ ಹಾಡಾದ ಈತನೀಗ ವಾಸುದೇವನುಗೀತೆಗೆ ವಿಶೇಷ ಮೆರುಗು ನೀಡಿದ್ದು ಆ ಗೀತೆ ಇಂದಿಗೂ ಕೂಡಾ ಜನಮಾನಸದಲ್ಲಿ ಸ್ಥಿರವಾಗಿದೆ.  ಅದೇ ಚಿತ್ರದಲ್ಲಿ ಹನುಮಂತಾಚಾರ್ಯರ ಅಭಿನಯ ಕೂಡಾ ಜನಪ್ರಿಯವಾದದ್ದು.

ಬಿ ಹನುಮಂತಾಚಾರ್ಯರು ಜನಿಸಿದ್ದು ಮಾರ್ಚ್ 22, 1922ರಲ್ಲಿ.  ಬಳ್ಳಾರಿಯಲ್ಲಿ ಜನಿಸಿದ ಆಚಾರ್ ಅವರು ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ಮನೆಮಾತಾಗಿದ್ದರು.  ಇದೇ ನಂಟು ಅವರನ್ನು ಚಿತ್ರರಂಗಕ್ಕೂ ಕರೆದು ತಂದಿತ್ತು.  ಅವರು ನಟಿಸಿದ ಮೊದಲ ಚಿತ್ರ ದೇವಕನ್ನಿಕ’.  ಗುಣಸಾಗರಿ, ಭಕ್ತ ವಿಜಯ, ವಿಜಯನಗರದ ವೀರಪುತ್ರ, ಕಿತ್ತೂರು ಚೆನ್ನಮ್ಮ, ಮಕ್ಕಳ ರಾಜ್ಯ, ಸ್ವಪ್ನ, ಮನಸ್ಸಿನಂತೆ ಮಾಂಗಲ್ಯ, ಮಹಾಪ್ರಚಂಡರು, ಪ್ರೇಮ ಮತ್ಸರ ಇವು ಹನುಮಂತಾಚಾರ್ ಅವರು ನಟಿಸಿದ ಕೆಲವು ಚಿತ್ರಗಳಲ್ಲಿ ಸೇರಿವೆ.

ಯೂನಿವಾಕ್ಸ್ ಎಂಬುದು  ವಿಶಿಷ್ಟ ವಾದ್ಯವಾಗಿದ್ದು ಒಂದೇ ವಾದ್ಯದಲ್ಲಿ 8-10 ಬಗೆಯ ವಾದ್ಯಗಳ ಧ್ವನಿಯನ್ನು ಹೊರಹೊಮ್ಮಿಸುವುದು ಇದರ ವೈಶಿಷ್ಟ್ಯ.  ಇದು ಅರವತ್ತು ಎಪ್ಪತ್ತರ  ದಶಕಗಳಲ್ಲಿ  ಹಿಂದಿ ಚಲನಚಿತ್ರಗಳಲ್ಲಿ ಬಹಳ ಬಳಕೆಯಲ್ಲಿತ್ತು.  ಈ ವಾದ್ಯದ ಆಕರ್ಷಣೆಗೆ ಸಿಲುಕಿದ ಹನುಮಂತಾಚಾರ್ ಅವರು ಮುಂಬಯಿಯಲ್ಲಿ ವಾಸ್ತವ್ಯ ಹೂಡಿ ಈ ವಾದ್ಯದಲ್ಲಿ ಪರಿಣತಿ ಸಾಧಿಸಿದರು.  ಸುಮಾರು ಎಪ್ಪತ್ತಕ್ಕೂ ಹೆಚ್ಚು ಕನ್ನಡ ಚಲನಚಿತ್ರ್ಗಗಳಲ್ಲಿ ಈ ವಾದ್ಯದ ಬಳಕೆ ಮಾಡಿದರು.  ಜೊತೆಗೆ ಈ ವಾದ್ಯದ ಮೂಲಕ ನಾಡಿನಾದ್ಯಂತ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ಸಹಾ ನಡೆಸಿ ಪ್ರಖ್ಯಾತರಾದರು.  ಮುಂದೆ ಕ್ಯಾಸೆಟ್ ಯುಗದಲ್ಲಿ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿನ ಅನೇಕ ಭಕ್ತಿ ಗೀತೆಗಳ ಸಂಗೀತ ನಿರ್ದೇಶಕರಾಗಿ ನೂರಾರು ಭಕ್ತಿಗೀತೆಗಳ ಕ್ಯಾಸೆಟ್ಟುಗಳನ್ನು ಹೊರತಂದರು.  ಈ ನಿಟ್ಟಿನಲ್ಲಿ ಡಾ. ರಾಜಕುಮಾರ್  ಅವರ ಬಹಳಷ್ಟು ಭಕ್ತಿಗೀತೆಗಳನ್ನು ಹನುಮಂತಾಚಾರ್ಯರು ನಿರ್ದೇಶಿಸಿದ್ದರು.  


ಕಾಲ ಬದಲಾದಂತೆ ಹೊಸ ಹೊಸ ವಾದ್ಯಗಳು ಬಂದು ಹಳೆಯ ವಾದ್ಯಗಳು ಮತ್ತು ವಿಶಿಷ್ಟ ಪ್ರತಿಭೆಗಳಿಗೂ ತೆರೆಮೂಡುತ್ತ ಬಂದವು.  ಕಡೆಗೊಂದು ದಿನ 1987ರ ವರ್ಷದಲ್ಲಿ ಹನುಮಂತಾಚಾರ್ಯರು ತಮ್ಮ ಇಹಲೋಕದ ಬದುಕಿಗೂ ತೆರೆಯೆಳೆದು ಅಸ್ತಮಿಸಿದರು.  ಕಲೆಗಾಗಿ, ತಮ್ಮ ಹೊಟ್ಟೆ ಪಾಡಿಗಾಗಿಶ್ರದ್ಧೆಯಿಂದ ಸಾಹಸಪೂರ್ಣವಾಗಿ ಕಷ್ಟಪಟ್ಟು ಬದುಕಿದ ಇಂತಹವರ ಬದುಕು ಉಲ್ಲೇಖನೀಯವಾದದ್ದು.

Tag: B. Hanumanthachar

ಕಾಮೆಂಟ್‌ಗಳಿಲ್ಲ: