ಶುಕ್ರವಾರ, ಆಗಸ್ಟ್ 30, 2013

ಅರ್ಚನಾ ಉಡುಪ

ಅರ್ಚನಾ ಉಡುಪ
-ವಿನಯ್ ಶಿವಮೊಗ್ಗ

ಚಿಕ್ಕಂದಿನಿಂದಲೆ ಅರ್ಚನಾ ಉಡುಪ ಕುಟುಂಬದಲ್ಲಿ ಹಾಡುಹಕ್ಕಿಯೆಂದೇ ಚಿರಪರಿಚಿತಳು. ಯಾವುದೇ ಮದುವೆ, ಮುಂಜಿ ಸಮಾರಂಭಗಳಲ್ಲಿ ಈ ಪುಟ್ಟ ಬಾಲಕಿಯ ಹಾಡಿನದೇ ಕಲರವ, ಅಷ್ಟು ಸಣ್ಣ ವಯಸ್ಸಿಗೆ ಸಿದ್ಧಿಸಿದ  ರಾಗ, ಭಾವ, ತಾಳ ಪಕ್ವತೆಯ ಸವಿದು ಆಶೀರ್ವದಿಸಿದ ಮಂದಿ ಹಲವರು. ಅಂದಿನಿಂದ ಶುರುವಾದ ನಾದೋಪಾಸನೆ, ಇಂದು ರಾಜ್ಯ ಸರ್ಕಾರ ನೀಡುವ ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿ ಗೆಲ್ಲುವಲ್ಲಿಗೆ ಮುಂದುವರೆದಿದೆ.

ಅರ್ಚನಾ ಉಡುಪಗೆ ಸರಿಗಮದ ಶ್ರೀಕಾರ ಮಾಡಿಸಿದವರು ಅವರ ತಂದೆ ಹಾಗು ಗಾಯಕ ನಗರ ಶ್ರೀನಿವಾಸ ಉಡುಪ. ತಮ್ಮ ಕನಸನ್ನು ಮಗಳ ಸಂಸ್ಕಾರದಲ್ಲಿ ಬಿತ್ತಿ ಈ ಮಟ್ಟದ ಗಾಯಕಿಯಾಗಿ ಬೆಳೆಯುವಲ್ಲಿ ಸದಾ ಬೆಂಗಾವಲಾಗಿ ನಿಂತವರು. ಅರ್ಚನಾಗೆ ಮೊದಲ ಗುರು ಹಾಗು ವಿಮರ್ಶಕ  ಅವರೇ. ಮದುವೆಯಾದ ನಂತರ ಸೊಸೆಯಾಗಿ ಸೇರಿದ್ದು ಕನ್ನಡದ ಸಿರಿ ಕಂಠದ ಗಾಯಕ ಶಿವಮೊಗ್ಗ ಸುಬ್ಬಣ್ಣರ ಮನೆಗೆ (ಹಿನ್ನೆಲೆ ಗಾಯನಕ್ಕಾಗಿ ಮೊದಲ ರಾಷ್ಟ್ರ ಪ್ರಶಸ್ತಿ ಕನ್ನಡಕ್ಕೆ ತಂದ ಗರಿಮೆ). ಗಂಡನ ಮನೆಯಲ್ಲೂ ಸಂಗೀತಕ್ಕೆ ಪೂರಕವಾದ ವಾತಾವರಣ ಪಡೆದ ಅರ್ಚನಾ ಅದೃಷ್ಟವಂತೆ.

ಎಲ್ಲರಿಗೂ ಗೊತ್ತಿರುವಂತೆ 'ಝೀ ಟಿವಿ ಸರೆಗಮ' ಗೆಲುವು ಅರ್ಚನಾ, ಕನ್ನಡದ ಯುವಪೀಳಿಗೆಯ ಯಶಸ್ವಿ ಗಾಯಕಿ ಆಗುವಲ್ಲಿ ಪ್ರಮುಖ ಮೆಟ್ಟಿಲಾಯಿತು. ಶಾಸ್ತ್ರಿಯ ಸಂಗೀತ, ಚಿತ್ರಗೀತೆಯಲ್ಲಿ ಸೈ ಎನಿಸಿಕೊಂಡ ಇವರು ಸುಗಮ ಸಂಗೀತ ಕ್ಷೇತ್ರದಲ್ಲಿ ಬಹಳ ಜನಪ್ರಿಯರು. ಮೈಸೂರು ಅನಂತ ಸ್ವಾಮಿ ಮತ್ತು ಸಿ. ಅಶ್ವಥ್‌ರಂಥ ಅತಿರಥ ಮಹಾರಥರ ಮಾರ್ಗದರ್ಶನದಲ್ಲಿ ಅನೇಕ ಕವಿಗಳ ಗೀತೆಗಳಿಗೆ ಜೀವ ತುಂಬಿದ್ದಾರೆ. ಖ್ಯಾತ ನಾಮರಾದ ಹರಿಹರನ್, ಜೇಸುದಾಸ್, ಸೋನು ನಿಗಮ್, ಷಾನ್, ಜಗಜೀತ್ ಸಿಂಗ್, ಮನ್ನಾಡೆ ಹಾಗು ಎಸ್.ಪಿ. ಬಾಲಸುಬ್ರಮಣ್ಯರೊಂದಿಗೆ ದನಿಗೂಡಿಸಿ ಅನೇಕ ಸಮಾರಂಭಗಳಲ್ಲಿ ಸಮನಾಗಿ ವೇದಿಕೆ ಹಂಚಿಕೊಂಡ ಹೆಗ್ಗಳಿಕೆ ನಮ್ಮ ಈ ಕನ್ನಡತಿಯದು. ಇವರಿಗೆ ಗಜಲ್ ಎಂದರೆ ವಿಶೇಷ ಆಸಕ್ತಿ. ಪ್ರಾದೇಶಿಕ ಟಿವಿ ಚಾನೆಲ್‌ಗಳ ಸಂಗೀತಾಧಾರಿತ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಕನ್ನಡಿಗರ ಮನೆ, ಮನ ತಲುಪಿದರು. ತಮ್ಮ ಕನಸಿನ 'ಗಾಂಧಾರ' ಸಂಸ್ಥೆಯನ್ನು ಹುಟ್ಟುಹಾಕಿ ಹಲವು ಗುಣಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. 'ಬಾಳೆ ಗಾಯನ', 'ಸೂಫಿಯಾನ ಶರೀಫ್‌' ಪ್ರಯೋಗದ ಮೂಲಕ ಸಂಗೀತ ಸಂಯೋಜಕಿಯಾಗಿಯೂ ಪ್ರಬುದ್ಧತೆ ಮೆರೆದಿದ್ದಾರೆ.

ಬರಗೂರು ರಾಮಚಂದ್ರಪ್ಪನವರ 'ಭಾಗೀರಥಿ' ಚಲನಚಿತ್ರದ ಹಿನ್ನೆಲೆ ಗಾಯನಕ್ಕಾಗಿ ರಾಜ್ಯ ಸರ್ಕಾರದ 2012ನೇ ಸಾಲಿನ ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ಭಾಜನರಾಗಿರುವ ಅರ್ಚನಾ, ಯಶಸ್ಸಿನ ಮತ್ತೊಂದು ಮಜಲನ್ನು ಏರಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಬೈಟು ಕಾಫಿಯೊಡನೆ ಮಾತನಾಡಿದ್ದಾರೆ.

ಪ್ರಶಸ್ತಿ ಸುದ್ದಿ ತಿಳಿದ ತಕ್ಷಣ ಮನಸ್ಸಿಗೆ ಅನ್ನಿಸಿದ್ದು?
ಅನಿರೀಕ್ಷಿತ, ಸಂತೋಷ, ಧನ್ಯತೆ, 28 ವರ್ಷಗಳ ತಪಸ್ಸಿಗೆ ಸಂದ ಫಲ.

ನಿಮ್ಮ ತಂದೆಯ ಅನಿಸಿಕೆ?

ಅವರು ಎಮೋಷನಲ್ ಆಗಿಬಿಟ್ಟರು. ನನ್ನ ಸಾಧನೆಯ ಬಗ್ಗೆ ಅಪಾರ ಖುಷಿ, ಹೆಮ್ಮೆ.

ಈ ಚಿತ್ರದ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹಾಗೂ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಬಗ್ಗೆ?

ಬರಗೂರು ತುಂಬಾ ಮೇರು ವ್ಯಕ್ತಿತ್ವದವರು. ಕನ್ನಡ ಸಾಹಿತ್ಯಲೋಕದ ಗೌರವಾನ್ವಿತ ಬರಹಗಾರರು. ಮನೋಹರ್ ಸಜ್ಜನರು, ನಮ್ಮ ನೆಲದ ಪ್ರತಿಭೆಗಳಿಗೆ ಯಾವಗಲೂ ಪ್ರೋತ್ಸಾಹಿಸಿದ್ದಾರೆ. 'ಭಾಗೀರಥಿ' ಚಿತ್ರದ ಈ ಅರ್ಥಪೂರ್ಣ, ಸಂವೇದನಾಶೀಲ ಹಾಡನ್ನು ಹಾಡಲು ಅವಕಾಶ ಕೊಟ್ಟಿದ್ದಕ್ಕೆ ನನ್ನ ಹೃದಯದಾಳದಿಂದ ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ.

ಇಬ್ಬಿಬ್ಬರು ರಾಷ್ಟ್ರ ಹಾಗು ರಾಜ್ಯ ಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕ ಮತ್ತು ಗಾಯಕಿ ಇರುವ ವಿಶೇಷ ಕುಟುಂಬ ನಿಮ್ಮದು!

(ನಗು) ಅದೊಂದು ಸುಯೋಗವೇ ಸರಿ. ಮನೆಯಲ್ಲಿ ನಮ್ಮದು ನಲ್ಮೆಯ ಮಾವ- ಸೊಸೆ ಸಂಬಂಧ.

ಈ ಬಾರಿಯ ಪ್ರತಿಷ್ಠಿತ ರಾಜ್‌ಕುಮಾರ್ ಪ್ರಶಸ್ತಿ ಹಿರಿಯ ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖರಿಗೆ ಲಭಿಸಿದೆ. ಅವರೊಂದಿಗಿನ ನಿಮ್ಮ ಒಡನಾಟದ ನೆನಪು?

ಹಂಸಲೇಖ ನಮ್ಮ ಚಿತ್ರೋದ್ಯಮದ ಮಹಾನ್ ಪ್ರತಿಭೆ. ಚಿತ್ರ ಸಂಗೀತ ಮತ್ತು ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದು ಕೊಟ್ಟವರು. ಅವರ ಅನೇಕ ಚಿತ್ರಗಳಲ್ಲಿ ನನಗೆ ಹಾಡಲು ಅವಕಾಶ ಕೊಟ್ಟಿದ್ದಾರೆ. ಅವರಿಗೆ ಈ ಪ್ರಶಸ್ತಿ ಸಂದಿರುವುದು ನಿಜಕ್ಕೂ ಸಂತೋಷದ ಸಂಗತಿ.

ಮುಂದಿನ ಯೋಜನೆಗಳು?

ಸಂಗೀತವೇ ನನಗೆ ಸರ್ವಸ್ವ. ಕನಸುಗಳು ತುಂಬಾ ಇದೆ. ಸಾಧನೆ ಮಾಡಬೇಕಾದ್ದು ಬಹಳವಿದೆ. ಸೃಜನಾತ್ಮಕವಾಗಿ ಸಂಗೀತ ಪಯಣ ಮುಂದುವರಿಸುತ್ತೇನೆ.

ಕೃಪೆ: ಕನ್ನಡಪ್ರಭ

Tag: Archana Udupa

ಕಾಮೆಂಟ್‌ಗಳಿಲ್ಲ: