ಗುರುವಾರ, ಆಗಸ್ಟ್ 29, 2013

‘ಪ್ರಭಾತ್ ಕಲಾವಿದರು’ ಪ್ರಖ್ಯಾತಿಯ ಗೋಪೀನಾಥ ದಾಸರು

ಪ್ರಭಾತ್ ಕಲಾವಿದರುಪ್ರಖ್ಯಾತಿಯ  ಗೋಪೀನಾಥ ದಾಸರು

ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಟಿ ವಿ  ಗೋಪಿನಾಥ ದಾಸರು ಪ್ರಸಿದ್ಧ ಹೆಸರು.  ಅವರು ಸ್ಥಾಪಿಸಿದ ಕನ್ನಡ ನಾಡಿನ ಹೆಮ್ಮೆಯ ನೃತ್ಯ ನಾಟಕ ಪರಿವಾರವಾದ ಪ್ರಭಾತ್ ಸಂಸ್ಥೆಒಂದು ಜೀವಂತ ವಾಹಿನಿಯಾಗಿ ಎಂಟು ದಶಕಗಳನ್ನೂ ಮೀರಿ  ಭೋರ್ಗರೆಯುತ್ತಿದೆ. ಹಲವಾರು ಪೀಳಿಗೆಗಳನ್ನು ದಾಟಿ ನಡೆದಿದೆ. ಹರಿಕಥಾರತ್ನ ಟಿ.ವಿ.ಗೋಪೀನಾಥ ದಾಸರು ತಮ್ಮ ಸಹೋದರರೊಂದಿಗೆ ಸುಮಾರು 1930ರಲ್ಲಿ ಪ್ರಭಾತ್  ಕಲಾಸಂಘಎನ್ನುವ ಸಂಸ್ಥೆಯ ಹೆಸರಿನಡಿ ಪೌರಾಣಿಕ ನಾಟಕಗಳನ್ನು ಆಡಿದರು. ನಂತರದ ವರ್ಷಗಳಲ್ಲಿ ಈ ‘ಪ್ರಭಾತ್  ಕಲಾ ಸಂಘ’ವು  ‘ಪ್ರಭಾತ್  ಕಲಾವಿದರು’ ಎನ್ನುವ ಹೆಸರನ್ನು ಪಡೆಯಿತು.

ಹರಿಕಥಾ ದಾಸವಂಶವೆಂದು ಪ್ರಖ್ಯಾತವಾದ ವಂಶದಲ್ಲಿ ಗೋಪೀನಾಥ ದಾಸರು ಜೂನ್ 20, 1914ರ ವರ್ಷದಲ್ಲಿ  ವೆಂಕಣ್ಣದಾಸರು - ಭಾಗೀರಥಿ ದೇವಿ ದಂಪತಿಗಳ ಎರಡನೆಯ ಮಗನಾಗಿ ಜನಿಸಿದರು.  ಚಿಕ್ಕವಯಸ್ಸಿನಿಂದಲೂ ಅವರು ಗೋಪಣ್ಣಎಂದೇ ಆತ್ಮೀಯವಾಗಿ ಕರೆಯಲ್ಪಡುತ್ತಿದ್ದರು.  ಹರಿಕಥಾ ಕಲೆಯನ್ನೇ ರೂಢಿಸಿಕೊಂಡಿದ್ದ ಗೋಪಣ್ಣನಿಗೆ ತಂದೆಯಂತೆ ನಾಟಕ ಸಂಗೀತ ಕಲಿಯುವ ಗೀಳು ಅಂಟಿಕೊಂಡಿತ್ತು. ಈ ದಿಸೆಯಲ್ಲಿ ಮಗನ ಆಸಕ್ತಿಯನ್ನು ಗಮನಿಸಿದ ವೆಂಕಣ್ಣದಾಸರು ಮೈಸೂರಿನ ವೀಣೆ ಶೇಷಣ್ಣನವರ ನೇರ ಶಿಷ್ಯರಾಗಿದ್ದ ಲಕ್ಷ್ಮೀನಾರಣ್ಣಪ್ಪನವರ ಮಗ, ಪ್ರಸಿದ್ಧ ವೈಣಿಕ ಎಲ್‌. ರಾಜಾರಾಯರಲ್ಲಿ ವೀಣೆ ಹಾಗೂ ಗಾಯನ ಶಿಕ್ಷಣವನ್ನು  ಕೊಡಿಸಿದರು. ರಾಜಾರಾಯರ ಪಾಠವೆಂದರೆ ತುಂಬಾ ಕಟ್ಟು ನಿಟ್ಟಿನದು. ಅಂಥ ಸಶ್ರಮ ಶಿಕ್ಷಣ ಪಡೆದ ಗೋಪಣ್ಣ ಒಳ್ಳೆಯ ಗಾಯಕ ಹಾಗೂ ವೈಣಿಕರಾಗಿ ರೂಪುಗೊಂಡರು. 

ತಂದೆ ಹಾಗೂ ಚಿಕ್ಕಪ್ಪ ವೇಣುಗೋಪಾಲದಾಸರಿಂದ ಹರಿಕಥೆ ಹಾಗೂ ಮಧ್ವಶಾಸ್ತ್ರ ಸಿದ್ಧಾಂತ ಅಭ್ಯಸಿಸಿದ ಗೋಪೀನಾಥ ದಾಸರು ವರದಾಚಾರ್ಯರ ಗರಡಿಯಲ್ಲಿ ನಾಟಕರಂಗದಲ್ಲೂ ಪಳಗಿ ಬಾಲನಟರಾಗಿ ಮೆರೆದರು. ನೋಡುವುದಕ್ಕೂ ತುಂಬಾ ಲಕ್ಷಣವಂತ.  ಸಂಗೀತ ಜ್ಞಾನವನ್ನು ಚೆನ್ನಾಗಿಯೇ ರೂಢಿಸಿಕೊಂಡಿದ್ದ ಗೋಪಣ್ಣನಿಗೆ ಬೆಂಗಳೂರಿನ ಸುಲ್ತಾನ್‌ಪೇಟೆಯಲ್ಲಿದ್ದ ಆರ್ಯಬಾಲಿಕಾ ಪಾಠ ಶಾಲೆಯಲ್ಲಿ ಸಂಗೀತ ಮೇಷ್ಟ್ರಾಗಿ ಕೆಲಸ ದೊರೆಯಿತು. ಚಲನಚಿತ್ರ ರಂಗದ ಖ್ಯಾತ ತಾರೆ ಎಂ.ವಿ. ರಾಜಮ್ಮ, ಗಮಕ ವಿದುಷಿ ಶಕುಂತಲಾಬಾಯಿ ಪಾಂಡುರಂಗರಾವ್‌ ಆಗ ಇವರ ವಿದ್ಯಾರ್ಥಿನಿಯರಾಗಿದ್ದರು. ಆಗ ಗೋಪೀನಾಥ ದಾಸರಿಗೆ ಕೇವಲ ಹತ್ತೊಂಬತ್ತು ವರ್ಷ.

ಮುಂದೆ ಇವರಿಗೆ ಮಲ್ಲೇಶ್ವರದ ಶಾಲೆಯೊಂದಕ್ಕೆ ವರ್ಗವಾಗಿ ಅಲ್ಲಿ ಸಂಗೀತದ ಕುರಿತು ಅನೇಕ ಸುಧಾರಣೆಗಳನ್ನು ತಂದರು. ಅಲ್ಲಿದ್ದಾಗ  ಶಾಲೆ ತಪ್ಪಿಸಿ ನಾಟಕದ ಖಯಾಲಿ ಹತ್ತಿಸಿಕೊಂಡು ಅಡ್ಡಾಡುತ್ತಿದ್ದರು.  ಇಂಥ ಸಂದರ್ಭದಲ್ಲಿ ಅವರಿಗೆ  ಕಲ್ಚರ್ಡ್ ಕಮೆಡಿಯನ್‌’  ಹಿರಣ್ಣಯ್ಯನವರ ಗೆಳೆತನವಾಯಿತು. ಅಣ್ಣ ಕರಿಗಿರಿ, ಹಿರಣ್ಣಯ್ಯ, ಗೋಪಣ್ಣ ಸುತ್ತಮುತ್ತಲಿನ ತುಂಟ ಹುಡುಗರಾದರು.

ತಂದೆಯವರು ನಿಧನರಾದಾಗ ಗೋಪಣ್ಣ ತಮ್ಮ ಸಹೋದರರೊಂದಿಗೆ ಹರಿಕಥೆ ಕಾರ್ಯಕ್ರಮ ನಡೆಸುತ್ತಿದ್ದರು.  ಅಂದಿನ ಕಾಲದಲ್ಲಿ ದ್ವನಿ ವರ್ಧಕಗಳು ಬಳಕೆಗೆ ಬಂದಿದ್ದವಾದರೂ ಲಭ್ಯವಿದ್ದ ವ್ಯವಸ್ಥೆಗಳಲ್ಲಿ ಇದ್ದ ತೊಂದರೆಗಳನ್ನು ನಿವಾರಿಸಿಕೊಳ್ಳಲು  ಸಹೋದರರು ಸೇರಿ ಪ್ರಭಾತ್ ಸೌಂಡ್ ಸಿಸ್ಟಂಸ್ಸ್ಥಾಪಿಸಿದರು. 

ನಾಟಕ ಕ್ಷೇತ್ರದಲ್ಲೂ ಸಾಕಷ್ಟು ಪಳಗಿ ಅಲ್ಲಿನ ತಾಂತ್ರಿಕ ತೊಂದರೆಗಳನ್ನು ಕಂಡಿದ್ದ ಗೋಪಣ್ಣ ರಂಗಭೂಮಿಯಲ್ಲಿ ಬಳಸುವ ಪರದೆಗಳು, ಸೈಡ್‌ವಿಂಗ್ಸ್‌, ಸೀನರಿಗಳೇ ಅಲ್ಲದೆ ಪೌರಾಣಿಕ ನಾಟಕಗಳಿಗೆ ಬೇಕಾಗುವ ಕಿರೀಟ, ಭುಜಕೀರ್ತಿಗಳು, ಆಯುಧಗಳು, ಪೋಷಾಕುಗಳು ಇತ್ಯಾದಿ ಸೌಲಭ್ಯಗಳನ್ನು ಒದಗಿಸಲು ಮುಂದಾದರು. ಹರಿಕಥೆ ಮಾಡುವವರಿಗೆ ಗಾಯನದ ಜೊತೆಗೆ ಭಾಷಾಜ್ಞಾನವೂ ಇರುವುದು ಸಹಜ. ಅಂತೆಯೇ ರಂಗನಟರೂ ಸಹ, ತಾವು ಸೇವೆ ಸಲ್ಲಿಸುತ್ತಿದ್ದ  ನಾಟಕ ಕಂಪೆನಿಗಳು ಆರ್ಥಿಕ ಅಡಚಣೆಗಳಿಂದಲೋ ಇನ್ನಾವುದೋ ತೊಂದರೆಗಳಿಂಧ ಮುಚ್ಚಲ್ಪಟ್ಟಾಗ ಹರಿಕಥಾ ಕ್ಷೇತ್ರಕ್ಕೆ ಧುಮುಕಿರುವ ನಿದರ್ಶನಗಳೆಷ್ಟೋ. ಹೀಗೆ ಹರಿಕಥೆಗೂ ನಾಟಕರಂಗಕ್ಕೂ ಒಂದು ರೀತಿಯ ನಂಟು ಇದ್ದೇ ಇತ್ತು. ಹರಿಕಥೆ ನಾಟಕ ಎರಡೂ ಕ್ಷೇತ್ರದಲ್ಲಿ ನುರಿತಿದ್ದು ಒಳ್ಳೆಯ ಭಾಷಾ ಸಂಪತ್ತನ್ನು ಹೊಂದಿದ್ದ ಗೋಪೀನಾಥ ದಾಸರು ಅನೇಕ ನಾಟಕಗಳಿಗೆ ಸಂಭಾಷಣೆ ಹಾಡುಗಳನ್ನು ರಚಿಸಿ ನಟವರ್ಗವನ್ನೂ ತಾವೇ ಸೇರಿಸಿ, ನಾಟಕ-ರೂಪಕ ಮೊದಲಾದುವುಗಳನ್ನು ನಿರ್ದೇಶಿಸಿ ಹೆಚ್ಚಿನಂಶ ಕಿರಿಯರಿಗೆ ಉತ್ತೇಜನ ನೀಡುವಲ್ಲಿ ಯಶಕಂಡರು. ಹೀಗೆ ಕಿರಿಯರ ನಾಟಕ ತಂಡ ತಲೆಯೆತ್ತಿತು.

ಗೋಪೀನಾಥ ದಾಸರ  ಕರ್ನಾಟಕ ವೈಭವ, ಸಿಂಡ್ರೆಲಾ, ಪುಣ್ಯಕೋಟಿ ಮುಂತಾದ ನಾಟಕಗಳು ಪ್ರದರ್ಶನಗೊಂಡ ಕಡೆಯಲ್ಲೆಲ್ಲಾ ಶತದಿನಗಳನ್ನಾಚರಿಸಿದವು. ಕೇವಲ ಕರ್ನಾಟಕವೇ ಅಲ್ಲದೆ ಹೊರ ರಾಜ್ಯಗಳಲ್ಲೂ ಯಶಸ್ವೀ ಪ್ರದರ್ಶನ ನಡೆದು ರಾಜಧಾನಿ ದೆಹಲಿಗೂ ಕಾಲಿಟ್ಟು ಅಲ್ಲೂ ಹೆಸರು ಗಳಿಸಿ ರಾಷ್ಟ್ರ ಅಂತರಾಷ್ಟ್ರೀಯ ಪ್ರಖ್ಯಾತಿ ಗಳಿಸಿದವು. ಹೀಗೆ ಪ್ರಭಾತ್‌ ಸೌಂಡ್‌ ಸಿಸ್ಟಂಆಗಿ ಹುಟ್ಟಿಕೊಂಡದ್ದು ತನ್ನ ಆಜಾನುಬಾಹು ಕೈಗಳನ್ನು ಎಲ್ಲಡೆ ಚಾಚಿ ಪ್ರಭಾತ್‌ ಕಲಾ ಸಂಸ್ಥೆಯಾಗಿ ಮಾರ್ಪಟ್ಟ ಈ ಸಂಸ್ಥೆಯ ಪ್ರಮುಖ ರೂವಾರಿಯಾದವರು ಗೋಪೀನಾಥ ದಾಸರು.

1969ರ ನಂತರ ಪ್ರಭಾತ್  ಕಲಾವಿದರು ತಂಡವು ಗೋಪೀನಾಥ ದಾಸರ ನೇತೃತ್ವದಲ್ಲಿ ಬ್ಯಾಲೆ ಶೈಲಿಯ ನಾಟಕಗಳು ಪ್ರದರ್ಶಿಸಲು ತೊಡಗಿತು. ಈ ನವ-ವಿಧಾನಗಳಿಂದ ಭಾರತೀಯ ನೃತ್ಯ ರೂಪಕಗಳು ಹೆಗ್ಗಳಿಕೆಯನ್ನು ಸಾಧಿಸಿದವು.  ಗೋವಿನ ಕಥೆ, ಕಿಂದರ ಜೋಗಿ ಇವು ಜಾನಪದದ ಕಥೆಗಳಾದರೆ, ಧರ್ಮಭೂಮಿ, ಕರ್ನಾಟಕ ವೈಭವ ಮುಂತಾದವುಗಳು ಇತಿಹಾಸದ ಹಿನ್ನಲೆಯ ವಸ್ತುಗಳಾಗಿದ್ದವು. ಆದರೂ ಅವರು ಪೌರಾಣಿಕ ಕಥೆಗಳನ್ನು ಕೈ ಬಿಟ್ಟಿರಲಿಲ್ಲ. ಮೋಹಿನಿ ಭಸ್ಮಾಸುರ, ಭಗವದ್ಗೀತೆ ಮುಂತಾದ ಪುರಾಣ ವಸ್ತುಗಳ ಆಯ್ಕೆಯೂ ಇತ್ತು.

ಇವುಗಳೊಂದಿಗೆ ಪಾಶ್ಚಿಮಾತ್ಯ ಕಥಾಹಂದರವನ್ನು ಹೊಂದಿದ ಸಿಂಡ್ರೆಲಾ ನೃತ್ಯ ನಾಟಕ ಹೊಸ ರೀತಿಯಲ್ಲಿ ಪ್ರಯೋಗವಾಗಿ ನೂರಾರು ಪ್ರದರ್ಶನಗಳನ್ನು ಕಂಡಿತು. ಅದು ಇಂದಿಗೂ ಮುಂದುವರೆದಿದ್ದು  ಜನವರಿ 29, 2007ರಂದು 1001ನೇ ಪ್ರದರ್ಶನ ಕಂಡಿತು. ಕರ್ನಾಟಕದಲ್ಲಿ ಇದು ಒಂದು ದಾಖಲೆ ಎನ್ನುವುದನ್ನು ಮರೆಯಲಾಗದು. ರೇಷ್ಮೆ ವಸ್ತ್ರದ ಉಗಮದ ಕಥಾವಸ್ತುವನ್ನೊಳಗೊಂಡ ಕ್ರೌನ್ ಆಫ್ ಕ್ರಿಯೇಷನ್ (ದಿವ್ಯ ಸೃಷ್ಟಿ)’, ಪರಿಸರದ ಪ್ರಾಮುಖ್ಯತೆಯನ್ನು ಹೇಳುವ ಅಭಿಜ್ಞಾನಯಶಸ್ವಿಯಾಗಿ ಹೊರಬಂದ ಇತರ ಪ್ರಮುಖ  ಕಾರ್ಯಕ್ರಮಗಳಲ್ಲಿ  ಕೆಲವು.

1982ರ ನಂತರ, ಸಂಸ್ಥೆಯ ರೂವಾರಿ ಗೋಪೀನಾಥ ದಾಸರು ದಿವಂಗತರಾದ ಮೇಲೆ, ಅವರ ಹಿರಿಯ ಮಗನಾದ ಟಿ.ಜಿ. ವೆಂಕಟೇಶಾಚಾರ್ ಮತ್ತು ಸಹೋದರರು ಓಡುತ್ತಿದ್ದ ಪ್ರಭಾತ್ ಸಂಸ್ಥೆಯ ರಥದ ಚುಕ್ಕಾಣಿ ಹಿಡಿದು ಶ್ರೀನಿವಾಸ ಕಲ್ಯಾಣ, ಶ್ರೀ ಕೃಷ್ಣ ವೈಜಯಂತಿ, ಶ್ರೀ ರಾಮ ಪ್ರತಿಕ್ಷಾ, ಮಹಿಷಾಸುರ ಮರ್ಧಿನಿ ಮುಂತಾದ ನೃತ್ಯನಾಟಕಗಳ ಯಶಸ್ವಿ ಪ್ರಯೊಗಗಳನ್ನು ಮಾಡಿದ್ದಾರೆ. ಈ ಕಾರ್ಯಕ್ರಮಗಳೆಲ್ಲಾ 5,000ಕ್ಕೂ ಮೇಲ್ಪಟ್ಟು ಪ್ರದರ್ಶನಗಳನ್ನು ಕಂಡಿವೆ.

ಪ್ರಭಾತ್  ಕಲಾವಿದರು ಕರ್ನಾಟಕವಲ್ಲದೆ ದೇಶಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹಲವಾರು ಕಾರ್ಯಕ್ರಮಗಳು ಹಿಂದಿ, ಆಂಗ್ಲ, ತೆಲುಗು, ತಮಿಳು, ಸಂಸ್ಕೃತ ಭಾಷೆಗಳಿಗೂ ಭಾಷಾಂತರಗೊಂಡು ಆಯಾ ಪ್ರಾಂತ್ಯಗಳಲ್ಲಿ ಪ್ರದರ್ಶನಗಳನ್ನು ಕಂಡಿವೆ. ಇದೂ ಅಪರೂಪವಾದ ದಾಖಲೆ. ದೆಹಲಿಯಲ್ಲಿ ಪ್ರತಿ ವರ್ಷವೂ ನಡೆಯುತ್ತಿದ್ದ ಇಂಡಸ್ಟ್ರಿಯಲ್ ಟ್ರೆಂಡ್ ಫೇರ್‌ನಲ್ಲಿ ಏಳು ವರ್ಷಗಳೂ ಸತತವಾಗಿ ವಿಭಿನ್ನ ಪ್ರದರ್ಶನಗಳನ್ನು ನೀಡಲಾಗಿದೆ. ಸಿಂಗಪುರ, ಮಲೇಶಿಯಾ ದೇಶಗಳಲ್ಲಿ ಬ್ಯಾಲೆ ಪ್ರದರ್ಶನಗಳು ನಡೆದಿವೆ. 1993ರಲ್ಲಿ ಅಮೇರಿಕಾದ ಬೇರೆ ಬೇರೆ ನಗರಗಳಲ್ಲಿ ಪ್ರದರ್ಶನಗಳನ್ನು ನೀಡಿ ಜನಮನ್ನಣೆ ಪಡೆದಿದೆ.  ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನಗಳಲ್ಲಿ ಕೂಡಾ ಪ್ರಭಾತ್  ಕಲಾವಿದರ ತಂಡ ಪ್ರದರ್ಶನಗಳನ್ನು ನೀಡಿದೆ.

ಸಿದ್ಧಾಪುರದಲ್ಲಿ ಹರಿಕಥಾ ಕ್ಷೇತ್ರಕ್ಕೆ ಕಾಲಿಟ್ಟ ಗೋಪೀನಾಥ ದಾಸರು ಸಿಂಗಪುರದ  ತನಕ ತನ್ನದಾಪುಗಾಲನ್ನು ವಿಸ್ತರಿಸಿ ಗೌರವ ಡಾಕ್ಟರೇಟ್‌ ಪಡೆದ ಪ್ರಥಮ ಹರಿಕಥಾ ವಿದ್ವಾಂಸ ಎಂಬ ಹಿರಿಮೆಗೆ ಪಾತ್ರರಾದ ಕಲಾತಪಸ್ವಿ.  ಗೋಪೀನಾಥ ದಾಸರು  ತಮ್ಮ ಸಹೋದರರೊಂದಿಗಿನ ಅವಿಭಕ್ತ ಕುಟುಂಬದ ಸಂಪೂರ್ಣ ಹೊಣೆಗಾರಿಕೆ ಹೊತ್ತಿದ್ದರು. ಕಾರಣ ಅವರ ಸಹನಶೀಲತೆ, ಸದಾ ಹಸನ್ಮುಖ.   ಕಷ್ಟವೋ ನಷ್ಟವೋ, ಅದಕ್ಕಾಗಿ ಮುಖಸಿಂಡರಿಸಿಕೊಂಡವರಲ್ಲ. ದೇಹಿ ಎಂದು ಬಂದವರಿಗೆ ನಾಸ್ತಿ ಎನ್ನದೆ ಕೈಲಾದ ಸಹಾಯ ಮಾಡುತ್ತಿದ್ದ ದಾನಶೂರ. ತಮ್ಮ ನಾಟಕಗಳನ್ನೆಲ್ಲ ಅನೇಕ ಬಾರಿ ಸಹಾಯಾರ್ಥಪ್ರದರ್ಶನವಾಗಿ ನೀಡಿ ಅನೇಕ ಸಂಘ ಸಂಸ್ಥೆಗಳಿಗೆ ನೆರವಾದವರು. ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದ ಅಶಕ್ತ ಕಲಾವಿದರನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಅನ್ನ ಹಾಕಿ, ಬಟ್ಟೆ ಕೊಟ್ಟು, ಕೈಗೂ ಅಷ್ಟಿಷ್ಟು ಪುಡಿಗಾಸುಕೊಟ್ಟು ಪೋಷಿಸಿದವರು. ಕರ್ನಾಟಕ  ಸರ್ಕಾರ ಇವರಿಗೆ ಗೌರವ ಸನ್ಮಾನವನ್ನು ಘೋಷಿಸಿದಾಗ ಅದನ್ನು ನಯವಾಗಿ ನಿರಾಕರಿಸಿ ತಮಗಿಂತ ಹಿಂದುಳಿದ, ಬಡ ಕಲಾವಿದರಿಗೆ ಅದನ್ನು ನೀಡುವಂತೆ ಸಲಹೆ ಮಾಡಿದ ವಿಶಾಲ ಹೃದಯಿ.

ಗೋಪೀನಾಥ ದಾಸರು ಪ್ರಸಿದ್ಧ ಕಲಾವಿದರಾದ ವೀಣಾ ಬಾಲಚಂದರ್ಚಿಟ್ಟಿಬಾಬುಬಾಲಮುರಳಿ ಕೃಷ್ಣ, ಕೆ ಜೆ ಏಸುದಾಸ್ ಮುಂತಾದವರ ಜೊತೆಗೆ ಕೂಡಾ ಕಾರ್ಯನಿರ್ವಹಿಸಿದ್ದಾರೆ.  ಗೋಪೀನಾಥ ದಾಸರ ಸಂಯೋಜನೆಯಾದ ನರಸಿಂಹ ಸುಪ್ರಭಾತಕ್ಕೆ ಸ್ವಯಂ  ಬಾಲಮುರಳಿ ಕೃಷ್ಣ  ಧ್ವನಿ ನೀಡಿದ್ದಾರೆ.


ಈ ಮಹಾನ್ ಸಾಹಸಿ ತಮ್ಮ ಜೀವನ ಪರ್ಯಂತ ಅವಿರತವಾಗಿ ದುಡಿದು 1982ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಗೋಪೀನಾಥ ದಾಸರ  ಶರೀರ ಹೋಯಿತು. ಅವರ ಶಾರೀರದ ಕಂಪು ಇಂದೂ ಹರಿಕಥಾ ಕ್ಷೇತ್ರದಲ್ಲಿ ಶಾಶ್ವತವಾಗಿ ಹರಡಿದೆ. ವೀಣೆಯ ನಾದ ಸಂಗೀತ ಲೋಕದಲ್ಲಿ ಝೇಂಕರಿಸುತ್ತಿದೆ. ರಂಗಶಾಲೆಯ ಮೂಲಕ ಹಲವರ ಹೆಸರು ರಂಗುರಂಗಾಗಿ ನಾಟಕ ಕ್ಷೇತ್ರದಲ್ಲಿ ವರ್ಣರಂಜಿತವಾಗಿದೆ. ಅಂತೆಯೇ ಅವರೇ ಕಟ್ಟಿ ಬೆಳೆಸಿದ ಪ್ರಭಾತ್‌ ಸಂಸ್ಥೆಯ ಮೂಲಕ ಅವರ ಹೆಸರು ಚಿರಂತನವಾಗಿ ಹಚ್ಚ ಹಸಿರಾಗಿ ನಿಂತಿದೆ.  ಅದನ್ನು ಕಂಡಾಗ ಗೋಪೀನಾಥ ದಾಸರ  ಧೀಮಂತ ವ್ಯಕ್ತಿತ್ವವೇ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: Prabhat Kalavidaru, Gopinatha Das

ಕಾಮೆಂಟ್‌ಗಳಿಲ್ಲ: