ಸೋಮವಾರ, ಆಗಸ್ಟ್ 26, 2013

ಎನ್. ಆರ್. ನಾರಾಯಣಮೂರ್ತಿ

ಎನ್. ಆರ್. ನಾರಾಯಣಮೂರ್ತಿ

ಆಗಸ್ಟ್ 19ರಂದು  ಸುಧಾ ಮೂರ್ತಿಗಳಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ನೆನೆಸಿಕೊಂಡೆವು. ಆಗಸ್ಟ್ 20 ಅವರ ಪತಿ ನಾರಾಯಣಮೂರ್ತಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸುವ ಸಂದರ್ಭವಾಗಿದೆ. 

ನಾರಾಯಣಮೂರ್ತಿಯವರು ಆಗಸ್ಟ್ 20, 1946ರ ವರ್ಷದಲ್ಲಿ ಜನಿಸಿದರು.  ನಾಗವಾರ ರಾಮರಾಯ ನಾರಾಯಣಮೂರ್ತಿಗಳನ್ನು ಇಂದು ಲೋಕದಲ್ಲಿ ಅರಿಯದವರಿಲ್ಲ.  ಹಿಂದೆ ನಾವು ಎಪ್ಪತ್ತು ಎಂಭತ್ತರ ದಶಕದಲ್ಲಿ ದೇಶದ ರಾಜಧಾನಿಯಾದ ನವದೆಹಲಿಯಲ್ಲಿ ಸುತ್ತುವಾಗ, ನಮ್ಮ ಮುಖಚರ್ಯೆ ಹಾವಭಾವ ನೋಡಿದ ಜನ, ನಮ್ಮನ್ನು ‘ಎಲ್ಲಿಂದ ಬಂದಿರಿ?’ ಎಂದು ಕೇಳುವಾಗ, ನಾವು  ಬೆಂಗಳೂರಿನವರು’ ಎಂದರೆ ಅರ್ಥವಾಗುತ್ತಿರಲಿಲ್ಲ.  ಅವರಿಗೆ ದಕ್ಷಿಣ ಭಾರತೀಯರೆಂದರೆ ಮದ್ರಾಸಿ ಎಂಬುದು ಒಂದೇ ಗೊತ್ತಿದ್ದದ್ದು.  ಒಮ್ಮೆ ಹಲವು ವರ್ಷಗಳ ಹಿಂದೆ ಅಬುಧಾಬಿ - ದುಬೈನಲ್ಲಿ ಸಂಚರಿಸುವಾಗ ಒಬ್ಬ ಸುಡಾನ್ ದೇಶದ ವ್ಯಕ್ತಿ ಕೇಳಿದ ‘ತಾವು ಎಲ್ಲಿಯವರು?’ ಎಂದು.  ‘ನಾನು ಭಾರತದಲ್ಲಿ ಬೆಂಗಳೂರಿನವನು’ ಎಂದಾಗ ತಕ್ಷಣ ಹೇಳಿದ, “, ಸಾಫ್ಟ್ವೇರ್ ತಂತ್ರಜ್ಞಾನದ ಬುದ್ಧಿವಂತರ ಊರಿನವರು ನೀವು ಅಂತ.  ತಕ್ಷಣವೇ ಮನ ನಾರಾಯಣಮೂರ್ತಿ ಎಂಬ ಮಹಾನ್ ಮೂರ್ತಿಗೆ ಧನ್ಯವಾದ ಅರ್ಪಿಸಿತು.  ಇಂದು ಬೆಂಗಳೂರು ಎಂದರೆ ಯಾರೂ ಮದ್ರಾಸಿ ಎಂದು ತಡಕಾಡುವುದಿಲ್ಲ! 

ನಾರಾಯಣ ಮೂರ್ತಿ ಅವರನ್ನು ಅಧ್ಯಯನ ಮಾಡುವುದೆಂದರೆ ಒಂದು ಸಂಸ್ಕೃತಿಯನ್ನು ಅಧ್ಯಯನ ಮಾಡುವಂತೆ.  ಇತ್ತೀಚಿನ ವರ್ಷದಲ್ಲಿ ನಾರಾಯಣ ಮೂರ್ತಿಯವರ  ‘A Better India, A Better World’ ಪುಸ್ತಕ ಓದುತ್ತಿದ್ದೆ.  ನನಗೆ ಎಲ್ಲಕ್ಕಿಂತ ಗಮನ ಸೆಳೆದದ್ದು ಅವರು ಸಂಸ್ಕೃತಿಗೆ ಕೊಡುವ ಬೆಲೆ.  ಪ್ರಾಮಾಣಿಕವಾಗಿ ತಮ್ಮ ಮುಂದೆ ಹೇಳಬೇಕೆಂದರೆ ನನಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಡಗಿರುವ ಈ ಸುಂದರ  ಅಷ್ಟ ಪುಷ್ಪಗಳ ಪರಿಚಯ  ದೊರೆತಿದ್ದು ಈ ಪುಸ್ತಕದಲ್ಲೇ.

ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಂ ಇಂದ್ರಿಯ ನಿಗ್ರಹಃ
ಸರ್ವಭೂತದಯಾಪುಷ್ಪಂ ಸತ್ಯಪುಷ್ಪಂ ವಿಶೇಷತಃ
ಜ್ಞಾನಪುಷ್ಪಂ ತಪಃಪುಷ್ಪಂ ಕ್ರಿಯಾಪುಷ್ಪಂ ತಥೈವ ಚ
ಧ್ಯಾನಂಚೈವಾಷ್ಟಮಂ ಪುಷ್ಪಂ ಏಭಿಸ್ತುಷ್ಯತಿ ಕೇಶವಃ.

ಕೆಲವು ವರ್ಷದ ಹಿಂದೆ  ಎನ್.ಡಿ.ಟಿ.ವಿ ಸಂಸ್ಥೆ ಆಯ್ದ ಆಹ್ವಾನಿತರಿಗೆ ಭಾರತದ ಮೇರುಸದೃಶ ಸಾಂಸ್ಥಿಕ ನಿರ್ವಾಹಕರಾದ ರತನ್ ಟಾಟಾ ಮತ್ತು ನಾರಾಯಣ ಮೂರ್ತಿ ಅವರೊಂದಿಗೆ ವಿಚಾರ ವಿನಿಮಯದ ಕಾರ್ಯಕ್ರಮವೊಂದನ್ನು  ಏರ್ಪಡಿಸಿತ್ತು.  ಕೊನೆಯಲ್ಲಿ ಒಬ್ಬರು ಕೇಳಿದ ಪ್ರಶ್ನೆ ಹೀಗಿತ್ತು.  “ಯಶಸ್ಸಿಗೆ ನಿಮ್ಮ ಸೂತ್ರವೇನು?

ರತನ್ ಟಾಟಾ ಅವರು ಮೊದಲು ಉತ್ತರಿಸಿದರು.  ನಿಮಗೆ ಸಾಕಷ್ಟು ಅದೃಷ್ಟ ಇರಬೇಕು”.  ಎರಡನೇ ಉತ್ತರ ನಾರಾಯಣ ಮೂರ್ತಿ ಅವರದ್ದು.  ನಿಜ ನಿಮಗೆ ಸಾಕಷ್ಟು ಅದೃಷ್ಟ ಬೇಕು.  ಆದರೆ, ಆ ಅದೃಷ್ಟ ನಿಮ್ಮ ಮುಂದೆ ಬಂದಾಗ, ನಿಮ್ಮ ಬುದ್ಧಿ ಮತ್ತು ಮನಗಳು ಅದನ್ನು ಸ್ವೀಕರಿಸಲು ಸಿದ್ಧವಾಗಿರಲಿ”.  ಇದು ನಾರಾಯಣ ಮೂರ್ತಿಯವರು ಚಿಂತಿಸುವ ವಿಶಿಷ್ಟ ಹೊಸ ದಿಕ್ಕು. 

ನಾರಾಯಣ ಮೂರ್ತಿಯವರು ಮೈಸೂರಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಅಲ್ಲಿನ ಎನ್. ಐ. ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು.  ಮುಂದೆ ಅವರು ಐ.ಐ.ಟಿ ಕಾನ್ಪುರದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ನಡೆಸಿದರು.  1969ರಲ್ಲಿ ಐ.ಐ.ಟಿ  ಕಾನ್ಪುರದಿಂದ ಹೊರಬಂದ ನಾರಾಯಣ ಮೂರ್ತಿ ಅವರು ಮೊದಲು ಐ.ಐ.ಎಮ್ ಅಹಮದಾಬಾದಿನಲ್ಲಿ ಮುಖ್ಯ ವ್ಯವಸ್ಥಾಪಕ ಪ್ರೋಗ್ರಾಮರ್ ಹುದ್ಧೆಯಲ್ಲಿದ್ದು  ಅಲ್ಲಿ ಇ.ಸಿ.ಐ.ಎಲ್ ಸಂಸ್ಥೆಗಾಗಿ ಬೇಸಿಕ್ ಕಂಪ್ಯೂಟರ್ ಭಾಷೆಗಾಗಿನ ಸಂವಾದಕವಾದ ಇಂಟರ್ಪ್ರಿಟರ್ ಅನ್ನು ಸಿದ್ಧಗೊಳಿಸಿಕೊಟ್ಟರು. 

ಮುಂದೆ ನಾರಾಯಣ ಮೂರ್ತಿಯವರು ಪುಣೆಯಲ್ಲಿನ ಪಟ್ನಿ ಕಂಪ್ಯೂಟರ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಟೆಲ್ಕೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಧಾ ಅವರನ್ನು ಪ್ರೇಮವಿವಾಹವಾದರು.  1981ರಲ್ಲಿ ಬೆಂಗಳೂರಿನಲ್ಲಿ ತಮ್ಮ ಪತ್ನಿಯ ಬೆಂಬಲದೊಂದಿಗೆ ನಾರಾಯಣಮೂರ್ತಿ ಅವರು, ಇಂದು ವಿಶ್ವಪ್ರಸಿದ್ಧವಾದ ಇನ್ಫೋಸಿಸ್ ಸಂಸ್ಥೆಗೆ ಚಾಲನೆ ನೀಡಿದರು.  ತಮ್ಮ ಈ ಸಂಸ್ಥೆಗೆ ಇನ್ನೂ ಆರು ಮಂದಿ ಗೆಳೆಯರನ್ನು ಕೂಡಾ ನಾರಾಯಣ ಮೂರ್ತಿಗಳು ಪಾಲುದಾರರಾಗಲು ಆಹ್ವಾನಿಸಿದರು.  ಮುಂದೆ ಇಪ್ಪತ್ತೊಂದು ವರ್ಷಗಳವರೆಗೆ ಅದರ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿಗಳಾಗಿದ್ದ ಮೂರ್ತಿ ಅವರು ಇನ್ಫ್ಪೋಸಿಸ್ ಸಂಸ್ಥೆಯನ್ನು ಉತ್ತುಂಗದ ಹಾದಿಗೆ ಮಾರ್ಗದರ್ಶಿಸಿ ಮುಂದೆ ಆ ಪದವಿಯನ್ನು ನಂದನ್ ನೀಲೇಕಣಿ ಅವರಿಗೆ ಹಸ್ತಾಂತರಿಸಿದರು.  ಮುಂದೆ ಅದರ ಅಧಿಕಾರವರ್ಗದಲ್ಲಿ ಸಲಹೆಗಾರರಾಗಿ ಮುಂದುವರೆದ ನಾರಾಯಣ ಮೂರ್ತಿ ತಮಗೆ ಅರವತ್ತೈದು ವರ್ಷ ತುಂಬಿದಾಗ  ಆ ಸಂಸ್ಥೆಯ ಮುಖ್ಯಸ್ಥರ ಹುದ್ದೆಯಿಂದ ಹೊರಬಂದಿದ್ದರು.  ಆದರೆ ಮುಂದೆ ಆದ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್ ಸಂಸ್ಥೆಯ ಆಡಳಿತ ಮಂಡಳಿ ಪುನಃ ನಾರಾಯಣ ಮೂರ್ತಿಯವರನ್ನು  ನೇತೃತ್ವ ವಹಿಸಬೇಕೆಂದು ಕೋರಿಕೊಂಡಿದ್ದರಿಂದ ಆ ಹುದ್ದೆಗೆ ಕೇವಲ ಒಂದು ರೂಪಾಯಿ ಸಂಬಳ ಪಡೆಯುವ ಉದ್ಯೋಗಿಯಾಗಿ ಬಂದು, ಅದನ್ನು ಮತ್ತೊಬ್ಬರಿಗೆ ವಹಿಸಿಕೊಟ್ಟು ಪುನಃ ನಿವೃತ್ತಿಗೆ ಹಿಂದಿರುಗಿದ್ದಾರೆ.

ನಾರಾಯಣ ಮೂರ್ತಿಯವರು ಐ.ಐ.ಟಿ ಕಾನ್ಪುರದಲ್ಲಿದ್ದಾಗ ಅಲ್ಲಿ ಅಮೇರಿಕದ ಕಂಪ್ಯೂಟರ್ ವಿಜ್ಞಾನಿಯೊಬ್ಬರು ಮಾಡಿದ ಪ್ರಭಾವಪೂರ್ಣ ಉಪನ್ಯಾಸದಿಂದ ಪ್ರೇರಿತರಾಗಿ ತಕ್ಷಣವೇ ಅಲ್ಲಿನ ಗ್ರಂಥಾಲಯಕ್ಕೆ ಹೋಗಿ ಆ ಉಪನ್ಯಾಸಗಾರರು ಹೇಳಿದ ಸಂಶೋಧನಾ ಪ್ರತಿಗಳನ್ನೆಲ್ಲಾ ಓದಿದ ದೆಸೆಯಿಂದಾಗಿ ಮುಂದೆ ತಾವು ಕೂಡಾ  ಕಂಪ್ಯೂಟರ್ ವಿಜ್ಞಾನದಲ್ಲಿ ತಮ್ಮ ಪಯಣವನ್ನು ಮುಂದುವರೆಸುವ ದೃಢ ನಿಶ್ಚಯವನ್ನು ತಾಳಿದರು.  ಒಬ್ಬ ಉತ್ತಮಭಾಷಣಕಾರ ತನ್ನ ಮಾತಿನಿಂದ ಹೇಗೆ ಮತ್ತೊಬ್ಬರನ್ನು ಪ್ರೇರೇಪಿಸಬಹುದು ಎಂಬುದಕ್ಕೆ ಇದನ್ನು ಆಗಾಗ ಉದಾಹರಣೆಯಾಗಿ ಬಳಸುವ ನಾರಾಯಣ ಮೂರ್ತಿಗಳು ತಾವೂ ಕೂಡ ಮತ್ತೊಬ್ಬರ ಜೀವನಕ್ಕೆ ಹೇಗೆ ಪ್ರೇರಕರಾಗಿರಬೇಕು ಎಂಬುದನ್ನು ಅರಿತ ರೀತಿಯ ಮೂಲ ಕೂಡಾ ಇಲ್ಲೇ ಇದೆ.  ಹಾಗಾಗಿ ನಾರಾಯಣಮೂರ್ತಿಗಳು  ತಮ್ಮ ನಡೆ, ನುಡಿ, ಸಚ್ಚಾರಿತ್ರ್ಯದಲ್ಲಿ ಎಂದೂ ಜಾಗರೂಕರು. 

1974ರ ವರ್ಷದಲ್ಲಿ ನಾರಾಯಣ ಮೂರ್ತಿಗಳು ಪ್ಯಾರಿಸ್ ನಗರದಿಂದ ತಮ್ಮ ನೆಲೆಯಾದ ಮೈಸೂರಿಗೆ ಬರುವ ಕಾತರ ಆಕಾಂಕ್ಷೆಗಳಿಂದ ಪಯಣಿಸುತ್ತಿದ್ದರು.  ಆ ಹಾದಿಯಲ್ಲಿ ಅವರು ಯುಗೊಸ್ಲೋವಿಯಾ ಮತ್ತು ಬಲ್ಗೇರಿಯ ದೇಶಗಳ ಗಡಿ ಪ್ರದೇಶವಾದ ನಿಸ್ ಎಂಬ ರೈಲ್ವೇ ನಿಲ್ದಾಣದಿಂದ ರೈಲು ಪ್ರಯಾಣ ಆರಂಭಿಸಿದ ಸಂದರ್ಭದಲ್ಲಿ ಅವರು ಇದ್ದ ರೈಲ್ವೇ ಭೋಗಿಯಲ್ಲಿ ಇದ್ದದ್ದು ಒಂದಿಬ್ಬರು ಪಯಣಿಗರು ಮಾತ್ರ.  ತಮ್ಮ ಬಳಿಯೇ ಕುಳಿತಿದ್ದ ವಿದೇಶಿ ಮಹಿಳೆಯೊಡನೆ ಇವರು  ಸಂಭಾಷಿಸುತ್ತಿದ್ದುದನ್ನು ಕಂಡು, ಅಲ್ಲಿದ್ದ ಒಬ್ಬನೇ ಒಬ್ಬ ಇತರ ಪ್ರಯಾಣಿಕ, ಅದು  ಬಲ್ಗೇರಿಯಾ ಕಮುನಿಸ್ಟ್ ಸರ್ಕಾರದ ವಿರುದ್ಧದ ಮಾತುಕತೆ ಎಂದು  ತಪ್ಪು ಮಾಹಿತಿ ನೀಡಿದ ಕಾರಣವಾಗಿ  ಅಲ್ಲಿನ ಸರ್ಕಾರ ನಾರಾಯಣ ಮೂರ್ತಿಗಳನ್ನು ಸೆರೆವಾಸದಲ್ಲಿರಿಸಿಬಿಟ್ಟಿತು.  ಮೂರುದಿನಗಳ ಕಾಲ ಆಹಾರ ನೀರು ವ್ಯವಸ್ಥೆ ಇಲ್ಲದೆ ಅತ್ಯಂತ ಶೀತಮಯವಾಗಿದ್ದ ಸಣ್ಣ ಕೋಣೆಯಲ್ಲಿ ನಾರಾಯಣಮೂರ್ತಿ ಕಳೆದರು.  ಮುಂದೆ ಪುನಃ ಎಳೆದುಕೊಂಡು ಹೋಗಿ ಮತ್ತೊಂದು ರೈಲಿನಲ್ಲಿ ದಬ್ಬಲ್ಪಟ್ಟ ನಾರಾಯಣ ಮೂರ್ತಿ ಅವರಿಗೆ, ಇಪ್ಪತ್ತು ಗಂಟೆಗಳ ಪಯಣದ ನಂತರದಲ್ಲಿ ಸಿಗುವ ಇಸ್ತಾನ್ಬುಲ್ ತಲುಪಿದ ನಂತರ ‘ನಿನಗೆ ಬಿಡುಗಡೆ’ ಎಂದು ಹೇಳಿದ ಪೋಲಿಸ್ ಪೇದೆ, ಕಡೆಗೆ ನುಡಿದನಂತೆ ನೀನು ನಮ್ಮ ದೇಶದ ಮಿತ್ರವಾದ ಭಾರತದ ಪ್ರಜೆಯಾದ್ದರಿಂದ ನಿನಗೆ ಬಿಡುಗಡೆಯ ಸೌಭಾಗ್ಯ ಸಿಗುತ್ತಿದೆ ಎಂದು.  “ಈ ಸುದೀರ್ಘ ಘೋರ ಅನುಭವ ನನಗೆ ಪ್ರಜಾಪ್ರಭುತ್ವದ ಹೊರತಾಗಿ ಬೇರಿನ್ಯಾವುದೇ ರಾಜಕೀಯ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದಂತೆ ಮಾಡಿತು” ಎನ್ನುತ್ತಾರೆ ಮೂರ್ತಿ. 

1981ರಲ್ಲಿ ಇನ್ಫೋಸಿಸ್ ಸಂಸ್ಥೆ ಹುಟ್ಟುಹಾಕಿದ ನಂತರದಲ್ಲಿ ವ್ಯಾಪಾರಕ್ಕೆ ಅತ್ಯಂತ ಕಠಿಣವಾಗಿದ್ದ ಭಾರತದಲ್ಲಿ ಸಾಕಷ್ಟು ಕಷ್ಟದ ಒಂದು ದಶಕವನ್ನು ಅನುಭವಿಸಿದ್ದ ನಾರಾಯಣಮೂರ್ತಿ ಮತ್ತು ಅವರ ಇನ್ಫೋಸಿಸ್ ಸಂಸ್ಥಾಪಕ  ತಂಡದ ಸಭೆ ಸೇರಿತ್ತು.  ಮುಖ್ಯ ವಿಷಯವೆಂದರೆ, ಶ್ರೀಮಂತ  ವಿದೇಶೀ ಸಂಸ್ಥೆಯೊಂದು ಒಂದು ಮಿಲಿಯನ್ ಡಾಲರ್ ಕ್ರಯಕ್ಕೆ ಇನ್ಫೋಸಿಸ್ ಸಂಸ್ಥೆಯನ್ನು ಕೊಳ್ಳಲು ಮುಂದೆ ಬಂದಿತ್ತು.  ಇಷ್ಟೊಂದು ಹಣದ ಆಹ್ವಾನವನ್ನು  ತಿರಸ್ಕರಿಸುವುದು ಸುಲಭದ ಮಾತಾಗಿರಲಿಲ್ಲ.  ಎಲ್ಲರೂ ಅವರವರ ಅಭಿಪ್ರಾಯ ಹೇಳಿ ಮುಗಿಸಿದರು.  ಕಡೆಗೆ ನಾರಾಯಣ ಮೂರ್ತಿಗಳ ನಿರ್ಧಾರದ ಮಾತು ಹೊರಬಂತು.  “ಗೆಳೆಯರೇ, ನಿಮಗೆ ನಿಮ್ಮ ಷೇರುಗಳನ್ನು ಮಾರುವ ಇಚ್ಛೆಯಿದ್ದಲ್ಲಿ ನಾನೇ ಎಲ್ಲವನ್ನೂ ಕೊಂಡುಕೊಳ್ಳುತ್ತೇನೆ, ಈ ಸಂಸ್ಥೆಯನ್ನು ನಾನು ಮಾರಲು ಸಿದ್ಧನಿಲ್ಲ.”  ಈ ಘಟನೆಯ ಬಗ್ಗೆ ಹೇಳುವಾಗ ಮೂರ್ತಿ ಹೇಳುತ್ತಾರೆ, “ಈ ಮಾತನ್ನು ಹೇಳಿದಾಗ ನನ್ನ ಜೇಬಿನಲ್ಲಿ ಕಿಲುಬು ಕಾಸೂ ಕೂಡಾ ಇರಲಿಲ್ಲ.  ಆದರೆ ನನ್ನಲ್ಲಿ ದೃಢ ವಿಶ್ವಾಸವಿತ್ತು ಎಂದು.  ನಾರಾಯಣ ಮೂರ್ತಿಗಳ ಮಾತನ್ನು ಕೇಳಿ ಅವರಲ್ಲಿದ್ದ ವಿಶ್ವಾಸವನ್ನು ಕಂಡು ಅವರ ಉಳಿದ ಗೆಳೆಯರೆಲ್ಲರೂ ಸಂಸ್ಥೆಯನ್ನು ಮಾರದೆ ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪಗಳಿಂದ  ಮುನ್ನಡೆಯಲು ನಿರ್ಧರಿಸಿದರು. 

ಈ ಮಾತನ್ನು ನಾರಾಯಣಮೂರ್ತಿ ಅವರು ಬರೆದಿದ್ದು 2007ರ ವರ್ಷದಲ್ಲಿ.  ಅದು ಹೀಗಿದೆ ಈ ಹದಿನೇಳು ವರ್ಷಗಳಲ್ಲಿ ಇನ್ಫೋಸಿಸ್ ಸಂಸ್ಥೆ ಮೂರು ಬಿಲಿಯನ್ ಅಮೇರಿಕನ್ ಡಾಲರ್ ವಾರ್ಷಿಕ ಆದಾಯದ ಸಂಸ್ಥೆಯಾಗಿದ್ದು 800 ಅಮೇರಿಕನ್ ಡಾಲರ್ ಮಿಲಿಯನ್ನುಗಳಿಗೂ ಮೀರಿದ ನಿವ್ವಳ ಲಾಭ ಗಳಿಸುವ ಸಂಸ್ಥೆಯಾಗಿ ಬೆಳೆದಿದೆ.  ನಮ್ಮ ಸಂಸ್ಥೆಯ ಬಂಡವಾಳಕ್ಕೆ ಕ್ರೋಡೀಕರಿಸಿದ ಹಣ ಒಟ್ಟು 28 ಬಿಲಿಯನ್ ಅಮೇರಿಕನ್ ಡಾಲರುಗಳನ್ನೂ ಮೀರಿದ್ದು ಅದು ಅಂದು ಮಾರಾಟಕ್ಕೆ ಆಹ್ವಾನ ಪಡೆದಿದ್ದ ಒಂದು ಮಿಲಿಯನ್ ಡಾಲರ್ ಹಣಕ್ಕಿಂತ 28000 ಪಾಲು ಹೆಚ್ಚಿನದ್ದಾಗಿದೆ.   ಇದೆಲ್ಲಕ್ಕೂ ಮೀರಿದ ಸಂಗತಿ ಎಂದರೆ ಇನ್ಬ್ಫೋಸಿಸ್ ಸಂಸ್ಥೆ ಈ ಹಾದಿಯಲ್ಲಿ 70,000ಕ್ಕೂ ಹೆಚ್ಚು ಶ್ರೀಮಂತ ಉದ್ಯೋಗಗಳನ್ನು ನಿರ್ಮಿಸಿದೆ, ಎರಡು ಸಾವಿರಕ್ಕೂ ಹೆಚ್ಚು ಅಮೇರಿಕನ್ ಡಾಲರ್ ಕೋಟ್ಯಾಧಿಪತಿಗಳನ್ನೂ, ಇಪ್ಪತ್ತು ಸಾವಿರಕ್ಕೂ ಹೆಚ್ಚು ಭಾರತೀಯ ರೂಪಾಯಿಯ ಕೋಟ್ಯಾಧಿಪತಿಗಳನ್ನೂ ನಿರ್ಮಿಸಿದೆ.” 

1995ರ ವರ್ಷದಲ್ಲಿ  ಇನ್ಫೋಸಿಸ್ ಸಂಸ್ಥೆಯ ಗ್ರಾಹಕರಲ್ಲಿ ಪ್ರಮುಖವಾದ ಒಂದು ಪ್ರತಿಷ್ಠಿತ ವಿದೇಶೀ ಸಂಸ್ಥೆ ಕಠಿಣ ರೀತಿಯಲ್ಲಿ ಚೌಕಾಸಿ ವ್ಯವಹಾರಕ್ಕೆ ತೊಡಗಿ ಹಲವಾರು ನಿಬಂಧನೆಗಳನ್ನು ಒಡ್ಡಿತು.  ಆ ವ್ಯವಹಾರ ದಕ್ಕಬೇಕೆಂದಿದ್ದರೆ ಗ್ರಾಹಕರ ಆ ನಿಬಂಧನೆಗಳನ್ನು ಒಪ್ಪದೆ ಬೇರೆ ವಿಧಿಯಿರಲಿಲ್ಲ.  ಆದರೆ ನಾರಾಯಣ ಮೂರ್ತಿಗಳು ವಿಚಲಿತರಾಗಲಿಲ್ಲ.  ಅಂತಹ ನಿರ್ಧಾರ ಸಂಸ್ಥೆಯ ಹಣಕಾಸಿನ ಪರಿಸ್ಥಿತಿಯ ಮೇಲೆ ತೀವ್ರವಾದ ಪರಿಣಾಮ ಬೀರುವಂತದ್ದು ಎಂಬ ಅರಿವಿದ್ದರೂ ನಾರಾಯಣಮೂರ್ತಿ ಅವರು ಆ ಗ್ರಾಹಕ ಸಂಸ್ಥೆಯ ನಿಬಂಧನೆಗಳಿಗೆ ತಲೆಬಾಗದೆ ಆ ವ್ಯವಹಾರವನ್ನು ಕೈ ಬಿಡುವ ನಿರ್ಧಾರ ಕೈಗೊಂಡರು ಮಾತ್ರವಲ್ಲ, ಆ ಸಂಸ್ಥೆ ಇಚ್ಛೆಪಡುವ ಹೊಸ ಮಾರಾಟಗಾರ ಸಂಸ್ಥೆಗೆ ತಾನು ಆಗ ನಿರ್ವಹಿಸುತ್ತಿದ್ದ ಕೆಲಸವನ್ನು ಗೌರವಯುಕ್ತವಾಗಿ ಹಸ್ತಾಂತರಿಸುವ ಆಶ್ವಾಸನೆಯನ್ನೂ ನೀಡಿದರು.   

ಅಂದಿನ ಆ ನಿರ್ಧಾರ ಇನ್ಫೋಸಿಸ್ ಸಂಸ್ಥೆಯ ಮುಂದಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು.   ಕಾರಣ ಏನು ಗೊತ್ತೆ  ಇನ್ಫೋಸಿಸ್ ಸಂಸ್ಥೆ ಯಾವುದೇ ಒಬ್ಬ ಗ್ರಾಹಕ, ಒಂದು  ತಂತ್ರಜ್ಞಾನ, ಒಂದು ದೇಶ, ಒಂದೇ ರೀತಿಯ ಕೆಲಸ ಅಥವಾ ಒಬ್ಬ ಕೆಲಸಗಾರನ ಮೇಲೆ ಪೂರ್ಣ ಅವಲಂಬತವಾಗಿಲ್ಲದಂತೆ ಕಾರ್ಯನಿರ್ವಹಿಸುವ ಸಿದ್ಧಾಂತವನ್ನು ತನ್ನ ನೀತಿಯಾಗಿ ಅಳವಡಿಸಿಕೊಂಡಿತು.  ಒಂದು ದೊಡ್ಡ ವಿಪ್ಪತ್ತು ನಮಗೆ ಹೇಳಿಕೊಟ್ಟ ಪಾಠವಿದು.  ಇನ್ಫೋಸಿಸ್ ಈ ವಿಪ್ಪತ್ತು ರಹಿತ ಸೇವಾ ದಕ್ಷತೆಯನ್ನು ಅಳವಡಿಸಿಕೊಂಡಿರುವ ಕಾರಣದಿಂದಾಗಿ, ಅದು ನಿರಂತರ ಸಮತೋಲನದಲ್ಲಿರುವ ಆದಾಯ ಮತ್ತು ಲಾಭಗಳ ಹಾದಿಯಲ್ಲಿ ನಡೆಯುವಂತಾಗಿದೆ ಎನ್ನುತ್ತಾರೆ ನಾರಾಯಣಮೂರ್ತಿ. 

ಉತ್ತಮವಾದ ಗುಣಮಟ್ಟದ ಕಲಿಕೆ ಹಾಗೂ ಕಲಿಕೆಯ ಅಳವಡಿಕೆ, ಜೀವನ ನಮ್ಮ ಮುಂದೆ ಒಡ್ಡುವ ಅವಕಾಶಗಳ ಬಗೆಗೆ ಮುಕ್ತವಾಗಿರುವಿಕೆ, ಹೊಸ ಹೊಸ ಸವಾಲುಗಳನ್ನು ಅಪ್ಪಿಕೊಳ್ಳುವ ಮನೋಧರ್ಮ, ಭಾರತೀಯ ಅಧ್ಯಾತ್ಮಿಕತೆ ಬೋಧಿಸುವ ಆತ್ಮಜ್ಞಾನದ ಅರಿವು  ಇವು ನಮ್ಮ ಬೆಳವಣಿಗೆಗೆ ಅತೀ ಮುಖ್ಯ ಎಂಬುದು ನಾರಾಯಣಮೂರ್ತಿಯವರ ಹಿತನುಡಿ.

ಒಂದು ದಿನ ನಾವು ಈ ಜೀವನದಲ್ಲಿ ಯಶಸ್ವಿಯಾದೆವು, ನಾವು ಒಂದಿಷ್ಟು ಗಳಿಸಿದೆವು ಎಂಬುದರ ಅಂತಿಮ ಘಟ್ಟವೆಂದರೆ, ನಮ್ಮ ಆ ಗಳಿಕೆಯ ರೂಪ ಸಂಪತ್ತಿನದೇ ಇರಲಿ, ಬುದ್ಧಿವಂತಿಕೆ ಎಂಬ ತಿಳುವಳಿಕೆಯ ಜ್ಞಾನವೇ ಇರಲಿ, ಅಧ್ಯಾತ್ಮವೇ ಇರಲಿ, ಅದಕ್ಕೆ ನಾವು ಕೇವಲ ತಾತ್ಕಾಲಿಕ ಹಕ್ಕುದಾರರು ಮಾತ್ರವಾಗಿದ್ದೇವೆ.  ನಾವು ಗಳಿಸಿದ ಸಂಪತ್ತಿನ ಉತ್ಕೃಷ್ಟ ಉಪಯೋಗವೆಂದರೆ ಅದನ್ನು ನಮಗಿಂತ ಕೆಳಭಾಗ್ಯರ ಜೊತೆಯಲ್ಲಿ ಹಂಚಿಕೊಳ್ಳುವುದಾಗಿದೆ.” 

ನನ್ನ ನಂಬಿಕೆಯೆಂದರೆ ನಾವೆಲ್ಲರೂ ನಾವು ಬೆಳೆಸದ ಯಾರೋ ಬೀಜ ಬಿತ್ತಿ ನೀರುಣಿಸಿದ  ಮರಗಳಿಂದ ಹಣ್ಣನ್ನು ಕಿತ್ತು ತಿನ್ನುತ್ತಿದ್ದೇವೆ.  ಈ ಕಾಲಚಕ್ರದ ತಿರುಗುವಿಕೆಯಲ್ಲಿ ಇಂದು, ನಾವು ನಮ್ಮ ಜೀವಿತ ಕಾಲದಲ್ಲಿ ತಿನ್ನಲು ಸಾಧ್ಯವಾಗದಿದ್ದರೂ ಸಹಾ ಈ ಬದುಕೆಂಬ ನಂದನವನದಲ್ಲಿ ನಮಗೆ ಸಾಧ್ಯವಿರುವ  ಎಲ್ಲಾ ತರಹದ ಫಲ ಕೊಡುವ ವೃಕ್ಷಗಳನ್ನೂ ಮುಂದಿನ ಜನಾಂಗಕ್ಕಾಗಿ ನೆಟ್ಟು ಬೆಳೆಸುವುದು ನಮ್ಮ ಆದ್ಯ ಕರ್ತ್ಯವ್ಯವಾಗಿದೆ. 

ಇದು ನಾರಾಯಣ ಮೂರ್ತಿಗಳು ಅವರ ಪುಸ್ತಕದಲ್ಲಿ ಮತ್ತು ಹಲವು ಸಂದರ್ಭಗಳಲ್ಲಿ ಮಾಡಿರುವ ಉಪನ್ಯಾಸಗಳಲ್ಲಿ  ಆಡಿರುವ ಕೆಲವೊಂದು ಮಾತುಗಳಲ್ಲಿ ನನ್ನ ಅರ್ಥೈಕೆಗೆ ಸಿಕ್ಕ ಕೆಲವೊಂದು ಪುಷ್ಪಗಳು.

ನಾರಾಯಣಮೂರ್ತಿ ಅವರಿಗೆ ಪದ್ಮವಿಭೂಷಣದವರೆಗೆ ಭಾರತೀಯ ಗೌರವಗಳು, ಅಂತರರಾಷ್ಟ್ರೀಯ ಪ್ರತಿಷ್ಠಿತ ಗೌರವಗಳು ಅರಸಿಕೊಂಡು ಬಂದಿವೆ.  ಅವರ ಮಾರ್ಗದರ್ಶನ ಮತ್ತು ನಿರ್ದೇಶನ ಪಡೆಯಲು ಬಹಳಷ್ಟು ಸರ್ಕಾರಗಳು, ಉದ್ಯಮಗಳು, ವಿಶ್ವವಿದ್ಯಾಲಯಗಳು ನಿರಂತರ ಅವರ ಹಿಂದೆ ನಡೆದಿವೆ.   ಇದು ನಮ್ಮ ನಾಡಿಗೆ ಸಂದ ಶ್ರೇಷ್ಠ ಗೌರವ ಕೂಡಾ ಆಗಿದೆ.

ಒಂದು  ವಿಚಾರವನ್ನು  ಇಲ್ಲಿ  ಹೇಳಲೇಬೇಕು.  ನಾರಾಯಣ ಮೂರ್ತಿ  ಅವರು  ಮನಸ್ಸು  ಮಾಡಿದ್ದರೆ  “ಇನ್ಫೋಸಿಸ್  ಸಂಸ್ಥೆಯನ್ನು ಭಾರತದಲ್ಲಿರುವ  ಹಲವು  ದೊಡ್ಡ  ಸಂಸ್ಥೆಗಳಂತೆ  ತಮ್ಮ  ಕೌಟುಂಬಿಕ  ಹಿಡಿತದ ಒಂದು  ಸಂಸ್ಥೆಯನ್ನಾಗಿಸುವುದು  ಸಾಧ್ಯವಿತ್ತು.  ಆದರೆ  ಹಾಗೆ  ಮಾಡದೆ  ಆ  ಸಂಸ್ಥೆಯ ಮೇಲೆ  ತಮ್ಮ  ಅಥವಾ  ತಮ್ಮ  ಕುಟುಂಬದ ಯಾವುದೇ  ಹಿಡಿತವೂ ಇಲ್ಲದಂತೆ  ಮುಕ್ತ  ಸಾಮೂಹಿಕ  ಬಂಡವಾಳ ಹೂಡಿಗರ  ಆಡಳಿತ  ಸಂಸ್ಥೆಯಾಗಿ ರೂಪಿಸಿರುವ ಪ್ರಾಜ್ಞ  ನಿರ್ಧಾರ, ನಿಜಕ್ಕೂ  ನಾರಾಯಣ ಮೂರ್ತಿಯವರ  ಹಿರಿಮೆಯಾಗಿದೆ”.   

ಈ ನಾರಾಯಣ ಮೂರ್ತಿ ಎಂಬ ಸಜ್ಜನನಿಗೆ, ಮಹಾನ್ ಸಾಧಕನಿಗೆ ನಾವು ಹೇಗೆ ತಾನೇ ಕೃತಜ್ಞತೆ ಹೇಳಲು ಸಾಧ್ಯ.   ಬಹುಃಶ ಅವರು ಹೇಳಿರುವ ಮಾತುಗಳ ಮನನ, ಮತ್ತು ಸಾಧ್ಯವಾದರೆ ಹಾಗೆ ಬದುಕಲು ನಡೆಸುವ ಪ್ರಯತ್ನ ಮಾತ್ರವೇ ಇಂತಹ ಮಹನೀಯನಿಗೆ ನಾವು ಸಲ್ಲಿಸಬಹುದಾದ ಗೌರವವಾಗಬಹುದೇನೋ.  
  
ನಾರಾಯಣ ಮೂರ್ತಿ ಅವರಿಗೆ ಹೃತ್ಪೂರ್ವಕ ಗೌರವಗಳು ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.   ಸರ್ ನಿಮ್ಮ ಮಾರ್ಗದರ್ಶನ ನಮ್ಮ ಜನಾಂಗಕ್ಕೆ ಮತ್ತು ಮುಂದಿನ ಪೀಳಿಗೆಗಳಿಗೆ ನಿರಂತರವಾಗಿ ಬೆಳಕು ತೋರುತ್ತಲಿರಲಿ.


Tag: N. R. Narayana Murthy, ಎನ್.ಆರ್. ನಾರಾಯಣಮೂರ್ತಿ 

ಕಾಮೆಂಟ್‌ಗಳಿಲ್ಲ: