ಶುಕ್ರವಾರ, ಆಗಸ್ಟ್ 30, 2013

ಪಂಡಿತ್ ರವಿಶಂಕರ್

ಸಿತಾರ್ ಮಾಂತ್ರಿಕ ಪಂಡಿತ್  ರವಿಶಂಕರ್

ಪೂರ್ವ ಪಶ್ಚಿಮಗಳೆರಡನ್ನೂ ಸಂಗೀತದಲ್ಲಿ ಸಮ್ಮಿಲನಗೊಳಿಸಿದ ಪಂಡಿತ್ ರವಿಶಂಕರರು  ಸಂಗೀತದ ರಾಯಭಾರಿಯಾಗಿ ವಿಶ್ವವ್ಯಾಪಿಯಾದವರು.  ಏಪ್ರಿಲ್ 7, 1920ರಂದು  ಜನಿಸಿದ ರವಿಶಂಕರರು   ಸಂಗೀತದ ಆರಾಧಕರಾಗಿ, ಕಾರ್ಯಕ್ರಮ ನೀಡುವವರಾಗಿ, ಸಂಯೋಜಕರಾಗಿ, ಶಿಕ್ಷಕರಾಗಿ ಮತ್ತು ಬರಹಗಾರರಾಗಿ  ಸಾಧಿಸಿದ ಉತ್ತುಂಗತೆ ಅನಂತವಾದದ್ದು.  ಭಾರತೀಯ ಹಿಂದಾಸ್ಥಾನಿ  ಸಂಗೀತವನ್ನು ಪಾಶ್ಚಾತ್ಯರಿಗೆ ಪ್ರಿಯವಾಗಿಸುವಲ್ಲಿ ಅವರು ಮಹತ್ವದ ಕೆಲಸ ಮಾಡಿದ್ದಾರೆ.  ಈ ಕೆಲಸಕ್ಕೆ ಪೂರ್ವಭಾವಿಯಾಗಿ ಅವರು ತಮ್ಮ ಗುರು ಬಾಬಾ ಅಲ್ಲಾದೀನ್ ಖಾನ್ ಅವರಿಂದ ಪಡೆದ ಹಲವಾರು ವರ್ಷಗಳ ಶಿಕ್ಷಣ ಮತ್ತು ಭಾರತದಲ್ಲಿ ನಡೆಸಿದ ಸಾಧನೆ ನಿಷ್ಠಾವಂತವಾದದ್ದು.

ರವಿಶಂಕರ್ ಅವರು ನಡೆಸಿದ ಜಗತ್ಪ್ರಸಿದ್ದ ವಾದ್ಯ ಗೋಷ್ಠಿಗಳಲ್ಲಿ ಯೆಹೂದಿ ಮೆನನ್ ಅವರ ವಯಲಿನ್ ನಾದದ ಜೊತೆಗಿನ ಸಿತಾರ್ ನಾದಸಂಯೋಜನೆ, ಪ್ರಸಿದ್ಧ ವೇಣುವಾದಕ ಜೀನ್ ಪಯರ್ ರಾಮ್ ಪಾಲ್ ಅವರಿಗಾಗಿ ನೀಡಿದ ಸಂಗೀತ, ಶಾಕುಚಿ ಮತ್ತು ಮುಸುಮಿ ಮಿಯಾಷಿತ ಸಂಗೀತ ಪ್ರಾಕಾರಗಳ ಗುರುವರ್ಯರೆನಿಸಿರುವ  ಹಾಸನ್ ಯಮಮೊಟೋ ಅವರಿಗಾಗಿ ಸಂಗೀತ ಸಂಯೋಜನೆ ಮತ್ತು ಫಿಲಿಪ್ ಗ್ಲಾಸ್ ಅವರಿಗಾಗಿ ಪ್ಯಾಸ್ಸೇಜಸ್ ಸೃಜನೆಗಳು ಸೇರಿವೆ.  ಜಗತ್ಪ್ರಸಿದ್ಧ ಜಾರ್ಜ್ ಹ್ಯಾರಿಸನ್ ಅವರು ರವಿಶಂಕರ್ ಕುಟುಂಬ ಮತ್ತು ಗೆಳೆಯರುಮತ್ತು ಭಾರತೀಯ ಹಬ್ಬಗಳುಎಂಬ ಎರಡು ಜನಪ್ರಿಯ ಆಲ್ಬಂಗಳನ್ನು ರವಿಶಂಕರ್ ಅವರ ನಿರ್ದೇಶನದಲ್ಲಿ ನಿರ್ಮಿಸಿ ತಾವೂ ಪಾಲ್ಗೊಂಡಿದ್ದಾರೆ.  ಅರವತ್ತರ ದಶಕದಲ್ಲೇ ರವಿಶಂಕರ್ ಅವರು ಮೋಂಟೆರೀ ಪಾಪ್ ಫೆಸ್ಟಿವಲ್, ಕನ್ಸರ್ಟ್ ಫಾರ್ ಬಾಂಗ್ಲಾದೇಶ್ ಮತ್ತು ದಿ ವುಡ್ ಸ್ಟಾಕ್ ಫೆಸ್ಟಿವಲ್ ಎಂಬ ಮೂರು ಪ್ರಸಿದ್ಧ ಕಾರ್ಯಕ್ರಮಗಳನ್ನು ನೀಡಿದ್ದರು.

ರವಿಶಂಕರ್ ಅವರು ಭಾರತ, ಕೆನಡಾ, ಯೂರೋಪ್ ಮತ್ತು ಅಮೆರಿಕಾ ದೇಶಗಳಲ್ಲಿನ  ಬ್ಯಾಲೆಟ್, ವಿವಿಧ ಪ್ರಸಿದ್ಧ ರಂಗಪ್ರದರ್ಶನಗಳು ಮತ್ತು   ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.  ರವಿಶಂಕರ್ ಅವರು ಚಿತ್ರಸಂಗೀತ ನೀಡಿರುವ ಪ್ರಮುಖ ಚಲನಚಿತ್ರಗಳಲ್ಲಿ ಚಾರ್ಲಿ, ಗಾಂಧೀ, ಅಪು ಟ್ರಿಯಾಲಜಿ ಸೇರಿವೆ.

ರವಿಶಂಕರ್ ಅವರು ಅಮೇರಿಕನ್ ಆರ್ಟ್ಸ್ ಅಂಡ್ ಲೆಟರ್ಸ್ ಅಕಾಡೆಮಿಯ ಗೌರವಾನ್ವಿತ ಸದಸ್ಯರಾಗಿದ್ದು, ಯುನೈಟೆಡ್ ನೇಷನ್ಸ್ ಇಂಟರ್ ನ್ಯಾಷನಲ್ ರೋಸ್ಟರಮ್ ಕಂಪೋಸರ್ಸ್ ಗಣ್ಯರ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ.  ಭಾರತದಲ್ಲಿ ಪದ್ಮಭೂಷಣ, ಪದ್ಮವಿಭೂಷಣ, ಭಾರತರತ್ನ, ದೇಶಿಕೋತ್ತಮ ಪ್ರಶಸ್ತಿಗಳಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮ್ಯೂಸಿಕ್ ಕೌನ್ಸಿಲ್ ಯುನೆಸ್ಕೋ ಪ್ರಶಸ್ತಿ, ಮ್ಯಾಗ್ಸೆಸೆ ಪ್ರಶಸ್ತಿ, ಎರಡು ಗ್ರಾಮಿ ಪ್ರಶಸ್ತಿ, ಫುಕೊಕಾ ಪ್ರಶಸ್ತಿ, ಪೋಲಾರ್ ಮ್ಯೂಸಿಕ್ ಪ್ರಶಸ್ತಿ,  ಕ್ರಿಸ್ಟಲ್ ಪ್ರಶಸ್ತಿ ಮತ್ತು ಇವೆಲ್ಲವುಗಳನ್ನೂ ಮೀರಿದ ವಿಶ್ವ ರಾಯಭಾರಿಪ್ರಶಸ್ತಿಗಳನ್ನು ಸಾಧಿಸಿದ್ದಾರೆ.

ಪಾಕಿಸ್ತಾನದೊಂದಿಗೆ ನಡೆದ ಬಾಂಗ್ಲವಿಮೋಚನಾ ಹೋರಾಟದ ಸಂದರ್ಭದಲ್ಲಿ ಬಾಂಗ್ಲಾದೇಶದಿಂದ ಬಂದ ಅಪಾರ ನಿರಾಶ್ರಿತರಿಗಾಗಿ ಜಾರ್ಜ್ ಹ್ಯಾರಿಸನ್ ಜೊತೆಗೂಡಿ ವಿಶ್ವಮಟ್ಟದ ಸಂಗೀತ ಕಾರ್ಯಕ್ರಮ ನೀಡಿ ಹಣ ಸಂಗ್ರಹಿಸಿಕೊಟ್ಟರು.  ಇದು ಮುಂದೆ ವಿಶ್ವದೆಲ್ಲೆಡೆಯ ಹಲವು ರೀತಿಯ ಸಹಾಯಾರ್ಥ ಪ್ರದರ್ಶನಗಳಿಗೆ ನಾಂದಿ ಹಾಡಿತು.

1987ರ ವರ್ಷದಲ್ಲಿ ತನು ಮನಎಂಬ ಹೆಸರಿನಲ್ಲಿ ಬಿಡುಗಡೆಯಾದ ವೈಯಕ್ತಿಕ ಸಂಗೀತ ಮುದ್ರಿಕೆ, ರವಿಶಂಕರ್ ಅವರನ್ನು ನ್ಯೂ ಏಜ್ಸಂಗೀತಗಾರರು  ಎನ್ನುವ ವಿಶಿಷ್ಟ ಸಂಗೀತ ಪರಂಪರೆಗೆ ಸೇರ್ಪಡೆಗೊಳಿಸಿತು.  ಈ ಮುದ್ರಿಕೆಗಾಗಿ ಹಲವಾರು ಶಾಸ್ತ್ರೀಯ ವಾದ್ಯಗಳು ಮತ್ತು ಆಧುನಿಕ ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನವನ್ನು ರವಿಶಂಕರ್ ಸೇರ್ಪಡೆಗೊಳಿಸಿದ್ದಾರೆ.

ವಿಶ್ವದೆಲ್ಲೆಡೆ ಪಂಡಿತ್ ರವಿಶಂಕರ್ ಅವರು ಗಳಿಸಿರುವ ಕೀರ್ತಿ, ಗೌರವ ಮತ್ತು ಶಿಷ್ಯವೃಂದ ಅಪಾರವಾದದ್ದು.  ಯೆಹೂದಿ ಮೆನನ್ ಹೇಳುತ್ತಾರೆ ರವಿಶಂಕರ್ ಅವರು ನನಗೆ ಅತ್ಯಂತ ಮಹತ್ವದ ಬಳುವಳಿ ನೀಡಿದ್ದು ಅದು ನನ್ನ ಸಂಗೀತಕ್ಕೆ ಹೊಸ ಆಯಾಮ ನೀಡಿದೆ.  ಅವರೊಬ್ಬ ಜೀನಿಯಸ್, ಮಾನವತಾವಾದಿ.   ಅವರನ್ನು ಮೊಸಾರ್ಟ್ಸ್ ಅಂತಹವರಿಗೆ ಮಾತ್ರ ಹೋಲಿಸಲು ಸಾಧ್ಯ”.  ಜಾರ್ಜ್ ಹ್ಯಾರಿಸನ್ ಹೇಳುತ್ತಾರೆ ರವಿಶಂಕರ್ ಅವರು ವಿಶ್ವ ಸಂಗೀತದ ಗಾಡ್ ಫಾದರ್”.

ತಮ್ಮ ಸಿತಾರಿನ   ನಾದವನ್ನು ಜಗತ್ತಿನೆಲ್ಲೆಡೆ ತುಂಬಿದ ಭಾರತರತ್ನ ಪಂಡಿತ್ ರವಿಶಂಕರರು ಡಿಸೆಂಬರ್ 11, 2012ರಂದು ತಮ್ಮ  92ನೆಯ ವಯಸ್ಸಿನಲ್ಲಿ  ಈ ಲೋಕವನ್ನಗಲಿದರು.  ಈ ಮಹಾನ್ ನಾದ ಚೇತನಕ್ಕೆ ನಮ್ಮ ನಮನ.


Tag: Pandit Ravishankar

ಕಾಮೆಂಟ್‌ಗಳಿಲ್ಲ: