ಬುಧವಾರ, ಆಗಸ್ಟ್ 28, 2013

ಸುನಿಲ್ ಗವಾಸ್ಕರ್

ಸುನಿಲ್ ಗವಾಸ್ಕರ್

ಸುನಿಲ್ ಮನೋಹರ್ ಗವಾಸ್ಕರ್ ಹುಟ್ಟಿದ್ದು ಜುಲೈ 10, 1949ರಲ್ಲಿ.  ಕ್ರಿಕೆಟ್ ಕ್ರೀಡೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕ್ರಿಕೆಟ್ ಶ್ರೇಷ್ಠರ ಸಾಲಿಗೆ ಸೇರಿದವರೀತ.  ಬ್ಯಾಟಿಂಗ್ ಮಾಡುವಾಗ ಅವರು ಚೆಂಡನ್ನು ಆಚೆ ಈಚೆ ಅಟ್ಟುವುದಿರಲಿ, ಬ್ಯಾಟಿಂಗ್ ಕ್ರೀಸ್ ಸುತ್ತ ಮುತ್ತಲಿನ ನಾಲ್ಕೈದು ಅಡಿ ಪರಿಧಿಯಲ್ಲಿ ಇರುವ ಪುಟ್ಟು ಪುಟಾಣಿ ಕಲ್ಲುಗಳನ್ನೆಲ್ಲಾ ಬಿಡಿ ಬಿಡಿಯಾಗಿ ಒಂದೊದಾಗಿ ಪೂರ್ತಿಯಾಗಿ ಭೂಮಿಯ ಒಳಗೆ ತಳ್ಳುವವರೆಗೆ  ಔಟೇ ಆಗುತ್ತಿರಲಿಲ್ಲ!".   ಒಮ್ಮೆ ಅವರು ಆಸ್ಟ್ರೇಲಿಯಾದಲ್ಲಿ ಸೆಂಚುರಿ ಭಾರಿಸಿದಾಗ ಅದರ ವರದಿ ಹೆಚ್ಚು ಕಡಿಮೆ ಈ ಸಾರಾಂಶದಲ್ಲಿತ್ತು.  "ಇಂದು ಮೈದಾನದಲ್ಲಿ ಇದ್ದದ್ದು ಮುನ್ನೂರಿಪ್ಪತ್ತು ಜನ, ಪಕ್ಷಿಗಳು ನೂರ ಎಂಟು, ಗವಾಸ್ಕರ್ ಗಳಿಸಿದ ರನ್ನುಗಳು 121.  ಯಾರು ಇದ್ದಾರೆ, ಯಾರು ಇಲ್ಲ ಎಂಬಂತಹ ಯಾವುದೇ ಅಂಶಗಳಿಗೂ ಮಹತ್ವ ಕೊಡದೆ, ತಮ್ಮ ಆಟವನ್ನು ಗಂಭೀರವಾಗಿ ಆಡಿದ ಈತನ ತಾಳ್ಮೆ ಸಾಮರ್ಥ್ಯಗಳೇ ಒಂದು ಅಚ್ಚರಿ!".

ಒಮ್ಮೆ ಗವಾಸ್ಕರ್ ಅವರನ್ನು ಕೇಳಲಾಯಿತು, "ತಮ್ಮ ಮೂರು ಪ್ರಮುಖ ಸಾಮರ್ಥ್ಯಗಳೇನು?".  ಆತ ತಕ್ಷಣವೇ ಉತ್ತರಿಸಿದರು, "concentration, concentration, concentration".  ಇಡೀ ವಿಶ್ವದಲ್ಲಿ ಎಲ್ಲ ಬಗೆಯ ಆಟಗಾರರೂ ವೇಗದ ಬೌಲಿಂಗಿಗೆ ಸುಲಭದಲ್ಲಿ ತುತ್ತಾಗುತ್ತಿದ್ದ ಸಂದರ್ಭದಲ್ಲಿ ಸುದೃಢವಾಗಿ ನಿಂತು ಆ ಬೌಲಿಂಗ್ ನಿಭಾಯಿಸುತ್ತಿದ್ದ ಆತನ ಶಕ್ತಿ ಅಚಲವಾದದ್ದು".  ಮೊದಲ ಟೆಸ್ಟ್ ಸರಣಿಯಲ್ಲೇ ಬಲಿಷ್ಟ ಬೌಲಿಂಗ್ ತಂಡವಾಗಿದ್ದ ವೆಸ್ಟ್ ಇಂಡೀಜ್ ವಿರುದ್ಧ ಅದ್ಭುತವಾಗಿ ಆಡಿ ಭಾರತಕ್ಕೆ ವಿದೇಶೀ ನೆಲದಲ್ಲಿ ಪ್ರಪ್ರಥಮ ಜಯ ತಂದುಕೊಟ್ಟಿದ್ದು, ಡಾನ್ ಬ್ರಾಡ್ ಮನ್ ಗಳಿಸಿದ ಶತಕಗಳ  ದಾಖಲೆ ಮುರಿದು 34 ಶತಕ ಗಳಿಸಿದ್ದು, ಹತ್ತು ಸಾವಿರ ರನ್ನುಗಳ ಗಡಿ ದಾಟಿದ ವಿಶ್ವದ ಪ್ರಥಮ  ಬ್ಯಾಟ್ಸ್ ಮನ್ ಆಗಿದ್ದು, 1985ರ ವರ್ಷದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಪ್ರುಡೆನ್ಷಿಯಲ್ ಕಪ್ ಪಂದ್ಯಗಳಲ್ಲಿ ಉತ್ತಮ ನಾಯಕತ್ವ ತೋರಿ ಭಾರತ ತಂಡವನ್ನು ಅಜೇಯವಾಗಿ ಟೂರ್ನಿ ಗೆಲ್ಲುವಂತೆ ಮಾಡಿದ್ದು, ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಪ್ರಾರಂಭಿಕ ಟೆಸ್ಟ್ ಆಟಗಾರನಾಗಿದ್ದು ಇವೆಲ್ಲಾ ಖಂಡಿತವಾಗಿ ಭಾರತಕ್ಕೆ ಕ್ರಿಕೆಟ್ಟಿನಲ್ಲಿ  ಸಂದ ಹಿರಿಮೆಯ ಅಂಶಗಳು.

ವಿಶ್ವದ ಶ್ರೇಷ್ಠ ಆಟಗಾರರೆಲ್ಲಾ ಕೆರ್ರೀ ಪ್ಯಾಕರ್ ಸೀರೀಸ್ ಕ್ರಿಕೆಟ್ಟಿನಲ್ಲಿ ಆಡಿದಾಗ ಎಷ್ಟೇ ಪ್ರಲೋಭನೆಯಿದ್ದರೂ ಅದರಲ್ಲಿ ಪಾಲ್ಗೊಳ್ಳದೆ ಇದ್ದದ್ದು ಆತನ ನಿಷ್ಠೆಯೇ ಹೌದು.  ಆ ಸಮಯದಲ್ಲಿ ಆಡಿದ ತಂಡಗಳ ವಿರುದ್ಧವೆಲ್ಲಾ ಸೆಂಚುರಿ ಭಾರಿಸಿ ತಮ್ಮ ಶತಕಗಳ ಸಂಖ್ಯೆಯನ್ನು ಕೂಡಾ ಹೆಚ್ಚು ಮಾಡಿಕೊಂಡರು ಗವಾಸ್ಕರ್.

ಗವಾಸ್ಕರ್ ಅವರ ಅಂದಿನ ತಾಂತ್ರಿಕ ಶ್ರೇಷ್ಠತೆ, ಅವರಿಗಿದ್ದ ಬ್ಯಾಟಿಂಗ್ ಸಾಮರ್ಥ್ಯ ಏನೇ ಇದ್ದರೂ ಕ್ರಿಕೆಟ್ ಆಟದಲ್ಲಿ ಟೆಸ್ಟ್ ಕ್ರೀಡೆ ಎಂಬುದು ಐದು ದಿನಗಳ ನೀರಸ ಪಂದ್ಯಗಳು ಎಂದು ಭಾವ ಮೂಡಿಸಿದ್ದರಲ್ಲಿ ಅವರ ನಾಯಕತ್ವದ  ದಿನಗಳು ಪ್ರಮುಖವಾದದ್ದು.  ಮುಂದೆ ಕ್ರಿಕೆಟ್ ಆಟ ತ್ವರಿತ ಗತಿ ಪಡೆದುಕೊಂಡಾಗ ಗವಾಸ್ಕರ್ ಕೂಡ ತಮ್ಮ ಶೈಲಿಯನ್ನು ಬದಲಿಸಿಕೊಂಡರಾದರೂ 1975ರ ವಿಶ್ವಕಪ್ ಪಂದ್ಯವೊಂದರಲ್ಲಿ ಇಂಗ್ಲೆಂಡ್ ತಂಡ 60 ಓವರುಗಳಲ್ಲಿ 334 ರನ್ನು ಗಳಿಸಿದರೆ, ವೆಂಕಟ ರಾಘವನ್ ಅವರನ್ನು ನಾಯಕನನ್ನಾಗಿ ಮಾಡಿದರು ಎಂಬ ಕೋಪಕ್ಕೆ 174 ಬಾಲುಗಳನ್ನಾಡಿ 36ರನ್ನುಗಳನ್ನು ಗಳಿಸಿ ಔಟಾಗದೆ ಉಳಿದ ಅವರ ರೀತಿ ನೀತಿಗಳು ಅವರ ವೃತ್ತಿ ಜೀವನದಲ್ಲಿ ಖಂಡಿತವಾಗಿ ಒಂದು ಕಪ್ಪು ಚುಕ್ಕೆ.  ಜೊತೆಗೆ ಭಾರತದ ಯುವ ನಾಯಕ ಕಪಿಲ್ ಜೊತೆ ಆಡುವಾಗ ಗವಾಸ್ಕರ್ ತೋರುತ್ತಿದ್ದ ಕಿರಿ ಕಿರಿ ಕೂಡಾ ಜಗಜ್ಜಾಹೀರು.

ಈ ಎಲ್ಲಾ ಪರಿಧಿಗಳ ಆಚೆಯಲ್ಲಿ ಕೂಡಾ ವಿಶ್ವದ ಉತ್ತಮ ಬೌಲರುಗಳಾದ ರಾಬರ್ಟ್ಸ್, ಇಮ್ರಾನ್ ಖಾನ್ ಅಂತಹ ಬೌಲರುಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿ ಕಲಾತ್ಮಕವಾಗಿ ಆಟವಾಡಿದ  ಅವರ ಶಕ್ತಿ ಸಾಮರ್ಥ್ಯಗಳು ಮತ್ತು ತಾಂತ್ರಿಕ ಕೌಶಲ್ಯಗಳು ಪ್ರಶ್ನಾತೀತ.  ಆತ ಬರೆದ ಪುಸ್ತಕಗಳು, ಪತ್ರಿಕೆಗೆ ಬರೆದ ಅಂಕಣಗಳು, ದೂರದರ್ಶನಗಳಲ್ಲಿ ಕಾರ್ಯಕ್ರಮ ನಡೆಸುವುದು ಮತ್ತು ವೀಕ್ಷಕ ವಿವರಣೆ ನೀಡುವ ಪರಿ ಇವುಗಳೆಲ್ಲಾ ಆತನ ಸಾಮರ್ಥ್ಯಗಳನ್ನು ಎತ್ತಿ ಹೇಳುತ್ತವೆ.

ಹೀಗೆ ವಿವಿಧ ಪರಿಧಿಗಳ ವಿಶಿಷ್ಟತೆಯ ಭಾರತದಲ್ಲಿನ ಸಾರ್ವಕಾಲಿಕ ಕ್ರೀಡಾ ಶ್ರೇಷ್ಠರಲ್ಲಿ ಒಬ್ಬರಾಗಿರುವ ಸುನಿಲ್ ಗವಾಸ್ಕರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.Tag: Sunil Gavaskar

ಕಾಮೆಂಟ್‌ಗಳಿಲ್ಲ: