ಶನಿವಾರ, ಆಗಸ್ಟ್ 31, 2013

ಜಯಮಾಲ

ಜಯಮಾಲ

ನಮ್ಮ ಇಂದಿನ ಯುಗದ ಕನ್ನಡದ ಹೆಣ್ಣುಮಕ್ಕಳ ಸಾಧನೆಯ, ಧೈರ್ಯ, ಸಾಹಸಗಳ ವಿಷಯವನ್ನು ನೆನೆಯುವಾಗ ಆ ಪಟ್ಟಿಯಲ್ಲಿ ಜಯಮಾಲ ಅವರು ಕೂಡಾ ಸೇರ್ಪಡೆಯಾಗುತ್ತಾರೆ. ಫೆಬ್ರುವರಿ 28 ಅವರ ಹುಟ್ಟುಹಬ್ಬ.

ದಕ್ಷಿಣ ಕನ್ನಡದಿಂದ ಚಿತ್ರರಂಗಕ್ಕೆ ಆಗಮಿಸಿದ ಜಯಮಾಲ ಅವರು ಅಂದಿನ ದಿನಗಳಲ್ಲಿ ಡಾ. ರಾಜ್ ಕುಮಾರ್ ಅವರೊಡನೆ ಪ್ರಮುಖ ಚಿತ್ರಗಳಾದ ಪ್ರೇಮದ ಕಾಣಿಕೆ, ಗಿರಿಕನ್ಯೆ, ಶಂಕರ್ ಗುರು, ಬಡವರ ಬಂಧು, ದಾರಿ ತಪ್ಪಿದ ಮಗ, ಬಭ್ರುವಾಹನ ಮುಂತಾದವುಗಳಲ್ಲಿ ನಟಿಸಿ ಪ್ರಸಿದ್ಧರಾದರು. ನಂತರದಲ್ಲಿ ಅವರು ಅಂದಿನ ಕನ್ನಡದ ಎಲ್ಲ ಪ್ರತಿಷ್ಟಿತ ನಾಯಕನಟರೊಂದಿಗೆ ನಟಿಸಿದರು. ತಾವು ಪ್ರಖ್ಯಾತರಾಗಿದ್ದ ಅಂದಿನ ದಿನಗಳಲ್ಲಿ ಕೂಡಾ ಕೇವಲ ಗ್ಲಾಮರ್ ಪಾತ್ರಗಳಿಗೆ ನಿಲ್ಲದೆ ಪಿ.ಲಂಕೇಶ್, ಚಂದ್ರಶೇಖರ ಕಂಬಾರ ಮುಂತಾದ ಬುದ್ಧಿಜೀವಿಗಳ ಜತೆ ಹೊಸ ಅಲೆಯ ಸಿನಿಮಾಗಳಲ್ಲಿ ನಟಿಸಿದರು. ಕನ್ನಡದಲ್ಲಷ್ಟೇ ಅಲ್ಲದೆ ತುಳು, ತೆಲುಗು, ಹಿಂದಿ ಚಿತ್ರಗಳಲ್ಲೂ ಅವರು ನಟಿಸಿದ್ದರು.

ಮುಂದೆ ಬದುಕಿನ ಕಾಲಚಕ್ರ ಗತಿಯಲ್ಲಿ ಹಲವು ರೀತಿಯ ತಿರುವುಗಳನ್ನು ಉಂಡ ಜಯಮಾಲ ಅವರು ನಿರ್ಮಾಪಕಿಯಾಗಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ತಾಯಿ ಸಾಹೇಬಚಿತ್ರ ನಿರ್ಮಿಸಿ ರಾಷ್ಟ್ರೀಯ ಪ್ರಶಸ್ತಿಗಳಿಸಿದರು. ಅದೇ ಚಿತ್ರದ ಅವರ ಮನೋಜ್ಞ ಅಭಿನಯಕ್ಕಾಗಿ ಆಯ್ಕೆಸಮಿತಿ ಪ್ರಕಟಿಸಿದ ವಿಶೇಷ ಜ್ಯೂರಿ ಪುರಸ್ಕಾರವನ್ನು ಸಹಾ ಸ್ವೀಕರಿಸಿದರು. ಅವರ ನಿರ್ಮಾಣದ ತುತ್ತೂರಿಮಕ್ಕಳ ಚಿತ್ರ ಸಹಾ ರಾಷ್ಟ್ರಪಶಸ್ತಿ ಪಡೆದದ್ದು ಜಯಮಾಲ ಅವರ ಅಭಿರುಚಿ ಮತ್ತು ವಿಶೇಷ ಪ್ರಯತ್ನಗಳಲ್ಲಿನ ಕುಶಲತೆಗೆ ಮೆರುಗು ತಂದಿದೆ. ಇತ್ತೀಚಿನ ವರ್ಷದಲ್ಲಿ ಅವರು ಕಿರುತೆರೆಯಲ್ಲಿನ ಪ್ರಯತ್ನಗಳಲ್ಲೂ ತೊಡಗಿದ್ದಾರೆ.

ಅಧ್ಯಯನದಲ್ಲಿ ಕೂಡಾ ತಮ್ಮ ಆಸಕ್ತಿಗಳನ್ನು ಉಳಿಸಿಕೊಂಡಿರುವ ಜಯಮಾಲ ಅವರು, ‘ಕರ್ನಾಟಕದ ಗ್ರಾಮೀಣ ಮಹಿಳೆಯರ ಪುನಶ್ಚೇತನ ಎಂಬ ವಿಷಯದ ಕುರಿತು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪಡೆದ ಮೊದಲ ನಟಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಈ ಸಾಧನೆಯ ಹಿನ್ನಲೆಯಲ್ಲಿ ಅವರು ಕರ್ನಾಟಕದಲ್ಲಿ ನಡೆಸಿದ ವಿಸ್ತಾರಪೂರ್ಣ ಸಂಚಾರ, ಅಧ್ಯಯನ ಮತ್ತು ಜನಸಾಮಾನ್ಯರೊಡನೆ ನಡೆಸಿದ ಸಹಜೀವನಗಳು ಶ್ಲಾಘನೀಯವಾದದ್ದಾಗಿದೆ.

ಚಿತ್ರರಂಗದಂತಹ ಕ್ಷೇತ್ರದಲ್ಲಿ ಘಟಾನುಘಟಿಗಳ ಜೊತೆಗೆ ಪೈಪೋಟಿಗೆ ನಿಂತು ಮೊದಲು ಚಲನಚಿತ್ರ ವಾಣಿಜ್ಯ ಮಂಡಳಿಯ ಕೋಶಾಧ್ಯಕ್ಷರಾಗಿ ಮತ್ತು ಮುಂದೆ ಅದರ ಅಧ್ಯಕ್ಷರಾಗಿ ಕೊಡಾ ಕೆಲಸ ಮಾಡಿದ ಜಯಮಾಲ ಅವರ ಧೈರ್ಯ ಸಾಹಸ ಮತ್ತು ಶ್ರಮಪೂರ್ಣ ಮನೋಭಾವಗಳು ಮೆಚ್ಚತಕ್ಕಂತಹವು. ಜಯಮಾಲ ಅವರ ಪುತ್ರಿ ಸೌಂದರ್ಯ ಅವರು ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.


ಜಯಮಾಲ ಅವರ ಕ್ರಿಯಾಶೀಲ ಪ್ರಯತ್ನಗಳು ಹೆಚ್ಚಿನ ಸಾರ್ಥಕತೆಯ ದಿಕ್ಕಿನಲ್ಲಿ ನೆಲೆಗಾಣಲಿ ಎಂದು ಹಾರೈಸುತ್ತಾ ಈ ಶ್ರಮಜೀವಿಗೆ ಹುಟ್ಟುಹಬ್ಬದ ಶುಭಾಶಯ ಹೇಳೋಣ.

Tag: Jayamala

1 ಕಾಮೆಂಟ್‌:

Jayaram Navagrama ಹೇಳಿದರು...

ಜಯಮಾಲಾ ಹೇಗೆ ಇಷ್ಟೆಲ್ಲಾ ಸಾಧಿಸಿದರು? ನಮ್ಮ ಕಡೆ ಅವರು ಬಂದಿದ್ದಾಗ ನಮ್ಮವರು ಅವರನ್ನು ನೋಡಿ ಮಾತಾಡಿದ್ದಾರೆ.(ನಾನು ನೋಡಿಲ್ಲ ಇನ್ನೂ) ಅವರು ಅಲ್ಲಿ ಕುಟುಂಬದ ಸಾಮಾನ್ಯ ಹೆಣ್ಣಾಗಿ ಬೆರೆಯುತ್ತಾರೆಯೇ ಹೊರತು ತಾನೊಬ್ಬ ನಟಿ ಎಂಬ ಎಕ್ಸ್ಟ್ರಾ ಪೊಗರು ಅವರಲ್ಲಿ ಎಂದೂ ಕಂಡಿಲ್ಲ ಅಂತಾರೆ ನಮ್ಮ ಜನ. ಇಂತಹ ವಿಶಿಷ್ಟ ಗುಣ ಸರ್ವರೊಡನೆ ಬೆರೆಯಬಹುದು. ಸಾಧನೆ ಮಾಡಬಹುದು.