ಶುಕ್ರವಾರ, ಆಗಸ್ಟ್ 30, 2013

ಬಿ. ಆರ್. ಅಂಬೇಡ್ಕರ್

ಬಿ. ಆರ್. ಅಂಬೇಡ್ಕರ್

ಭೀಮರಾವ್ ರಾಮಜಿ ಅಂಬೇಡ್ಕರ್ ಅವರು ಜನಿಸಿದ ದಿನ 14 ಏಪ್ರಿಲ್ 1891.  ಮಧ್ಯಪ್ರದೇಶ ರಾಜ್ಯಕ್ಕೆ ಸೇರಿರುವ ಮಾಹೊವ್ ಗ್ರಾಮ ಅವರು ಹುಟ್ಟಿದ ಸ್ಥಳ.  ಅವರ ತಂದೆ ಮಾಲೋಜಿ ಸಕ್ಪಾಲ್ ಮತ್ತು ತಾಯಿ ಭೀಮಾಬಾಯಿ ಅವರಿಗೆ ಅಂಬೇಡ್ಕರ್  ಹದಿನಾಲ್ಕನೆಯ ಸಂತಾನ.  ಭೀಮರಾವ್ ಸಕ್ಪಾಲ್ ಅಂಬವಾಡೇಕರ್ ಎಂಬ ಅವರ ವಂಶೀಯ ಹೆಸರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಎನ್ನುವ ಅವರಿದ್ದ ಹಳ್ಳಿಯನ್ನು ಸೂಚಿಸುತ್ತದೆ.  ಅವರನ್ನು ಶಾಲೆಯಲ್ಲಿ ಪ್ರೀತಿಯಿಂದ ಕಂಡ ಮಹದೇವ್ ಅಂಬೇಡ್ಕರ್ ಎಂಬ ಬ್ರಾಹ್ಮಣ ಶಿಕ್ಷಕರು ಅವರ ಹೆಸರನ್ನು ಶಾಲೆಯ ದಾಖಲೆಗಳಲ್ಲಿ ಅಂಬೇಡ್ಕರ್ ಎಂದು ಮೂಡಿಸಿದರು.

ಅಸ್ಪೃಶ್ಯರೆಂದು ಪರಿಗಣಿತವಾದ ವರ್ಗದಲ್ಲಿದ್ದವರಿಗೆ ಅಂದಿನ ದಿನಗಳಲ್ಲಿ ವಿದ್ಯಾಭ್ಯಾಸ ದೊರಕಿಸಿಕೊಳ್ಳುವುದು ಸಾಧ್ಯವಿಲ್ಲದ ವಿಷಯವಾಗಿತ್ತು.  ಅಂಬೇಡ್ಕರ್ ಅವರ ತಂದೆ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ತನ್ನ ಮಕ್ಕಳಿಗೆ ವಿದ್ಯಾಭ್ಯಾಸ ದೊರಕಬೇಕೆಂಬ ಅಭಿಲಾಷೆಯಿಂದ ತಮ್ಮ ಹುದ್ದೆಯ ಪ್ರಭಾವವನ್ನು ತಂದು ಮಕ್ಕಳನ್ನು ಶಾಲೆಗೇನೋ ಸೇರಿಸಿದರು. ಆದರೆ ಈ ಹುಡುಗರಿಗೆ ಎಲ್ಲರೊಂದಿಗೆ ಒಟ್ಟಿಗೆ ಕುಳಿತುಕೊಳ್ಳುವ ಸಾಧ್ಯತೆಗಳಿರಲಿಲ್ಲ.  ಎಲ್ಲೋ ಮೂಲೆಯಲ್ಲೋ ತುಂಬಾ ದೂರದಲ್ಲಿ ಕುಳಿತು ಶಾಲೆಯಲ್ಲಿ ಭಾಗಿಯಾಗಬೇಕಿತ್ತು.  ಶಾಲೆಯಲ್ಲಿ ಇವರೇನಾದರೂ ನೀರು ಕುಡಿಯಬೇಕೆಂದರೆ ಶಾಲೆಯ ಜವಾನ ಮೇಲಿನಿಂದ ಇವರಿಗೆ ನೀರು ಬಿಡಬೇಕಿತ್ತು. ಜವಾನ ಏನಾದರೂ ರಜೆ ಇದ್ದಲ್ಲಿ ಇವರಿಗೆ ನೀರು ಕುಡಿಯುವುದಕ್ಕೂ ರಜೆ.  ಮುಂದೆ ಅಂಬೇಡ್ಕರ್ ಅವರ ತಂದೆ ನಿವೃತ್ತರಾದ ಸಮಯದಲ್ಲಿ ಅವರ ಕುಟುಂಬ ಮಹಾರಾಷ್ಟ್ರದ ಸತಾರ ಪ್ರಾಂತ್ಯಕ್ಕೆ ಬಂದು ನೆಲೆಸಿತು.  ಆ ಸಮಯದಲ್ಲಿ ಅಂಬೇಡ್ಕರ್ ಅವರ ತಾಯಿ ನಿಧನರಾದರು.  ಅವರೊಂದಿಗೆ ಜನಿಸಿದ್ದ ಒಟ್ಟು ಹದಿನಾಲ್ಕರಲ್ಲಿ ಉಳಿದವರು ಐದು ಜನ ಮಾತ್ರ.  ಅವರ ಮನೆಯಲ್ಲಿ ಓದನ್ನು ಮುಂದುವರೆಸಿದವರು ಅಂಬೇಡ್ಕರ್ ಮಾತ್ರ. 

ಅಂಬೇಡ್ಕರ್ ಅವರಿಗೆ ತಾಯಿಯಿಲ್ಲದ ಬದುಕಿನಲ್ಲಿ ಉಂಟಾದ ನೋವುಗಳು ಅಪಾರವಾಗಿತ್ತು.  ಓದಿನಲ್ಲಿ ಆಸಕ್ತಿ, ಶ್ರದ್ಧೆ, ಸಾಮರ್ಥ್ಯಗಳು ತುಂಬಿತುಳುಕುತ್ತಿದ್ದರೂಕಲಿಕೆಯ ಕ್ಷೇತ್ರವನ್ನೂಳಗೊಂಡಂತೆ ಸುತ್ತಲಿನ ಜನಾಂಗದ ಪಕ್ಷಪಾತದ ಅಸಹ್ಯ ಪ್ರವೃತ್ತಿಗಳು, ಬೆಳೆಯುವ ಅವರ ಮನಸ್ಸಿನಲ್ಲಿ ಜಿಗುಪ್ಸೆಯನ್ನೇ  ಮೂಡಿಸಿತೆನ್ನಬೇಕು.    ಅಂತಹ ಕಟು ಅನುಭವಗಳು ಕೇವಲ ಅನುಭಾವೀ ಹೃದಯಗಳಿಗೇ ಅರ್ಥವಾಗುವಂತಹವು!   ಮುಂಬೈಗೆ ಬದಲಾದ ಅವರ ವಾಸದಲ್ಲಿ  ಅಂದಿನ ದಿನದಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ ಕಾಲೇಜು ತಲುಪಿದ ಮೊದಲ ಅಸ್ಪೃಶ್ಯ ಜನಾಂಗದ ವ್ಯಕ್ತಿ ಅಂಬೇಡ್ಕರ್.  ಇದು ಆ ಜನಾಂಗದಲ್ಲಿ ಸಂಭ್ರಮವನ್ನೇ ಸೃಷ್ಟಿಸಿದ್ದರಲ್ಲಿ ಅಚ್ಚರಿಯೇನಿಲ್ಲ.  ಅದು ಸಾರ್ವಜನಿಕ ಸಮಾರಂಭವೊಂದನ್ನೇ  ಸೃಷ್ಟಿಸಿ ಕೃಷ್ನೋಜಿ ಅರ್ಜುನ್ ಕೆಲುಸ್ಕರ್ ಎಂಬ ಅವರ ಅಧ್ಯಾಪಕರು ಅವರಿಗೆ ಗೌತಮ ಬುದ್ಧನ ಕುರಿತಾದ ಪುಸ್ತಕವನ್ನು ಪುರಸ್ಕಾರವಾಗಿ ನೀಡಿದರು.  ಮುಂದೆ ಗೌತಮ ಬುದ್ಧನ ಬೋಧನೆಗಳು  ಅವರ ಬದುಕಿನ ಮೇಲೆ ಬೀರಿದ ಪ್ರಭಾವಗಳ ನೆಲೆಯನ್ನು  ನಾವಿಲ್ಲಿ  ಗುರುತಿಸಬಹುದಾಗಿದೆ. 

ಬರೋಡಾದ ಮಹಾರಾಜರು ನೀಡಿದ ವಿದ್ಯಾರ್ಥಿವೇತನದ ಸಹಾಯದ ಮೂಲಕ ಅಂಬೇಡ್ಕರ್ 1912ರ ವರ್ಷದಲ್ಲಿ ಮುಂಬೈ ವಿಶ್ವವಿದ್ಯಾಲಯದ ಅರ್ಥ ಶಾಸ್ತ್ರ ಮತ್ತು ರಾಜ್ಯಶಾಸ್ತ್ರದ ಪದವಿಯನ್ನು ಪಡೆದರು.  ಮುಂದೆ 1913ರಲ್ಲಿ ಬರೋಡಾ ರಾಜ್ಯದ ಮಾಸಿಕ ಹನ್ನೊಂದೂವರೆ ಪೌಂಡುಗಳ ವಿದ್ಯಾರ್ಥಿವೇತನ ಪಡೆದು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ  ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಚರಿತ್ರೆ, ತತ್ವಶಾಸ್ತ್ರ ಮತ್ತು ಸಾಂಸ್ಕೃತಿಕ ಶಾಸ್ತ್ರಗಳ ಅಧ್ಯಯನಗಳನ್ನೊಳಗೊಂಡ ಸ್ನಾತಕೋತ್ತರ ಪದವಿ ಪಡೆದರು.  ಅಂದಿನ ದಿನಗಳಲ್ಲಿ ತಮ್ಮ ಬಹುತೇಕ ವೇಳೆಯನ್ನು ಅವರು ಅಲ್ಲಿನ ಅಮೂಲ್ಯಗ್ರಂಥ ಭಂಡಾರದಲ್ಲಿನ ಪುಸ್ತಕಗಳ ರಾಶಿಯಲ್ಲಿ  ಕೆಳೆದುದಾಗಿ ತಿಳಿದುಬರುತ್ತದೆ.  ಆ ವರ್ಷದಲ್ಲಿ ಅವರು ಸಲ್ಲಿಸಿದ ಪ್ರಬಂಧ ಪ್ರಾಚೀನ ಭಾರತದಲ್ಲಿ ವಾಣಿಜ್ಯಎಂಬ ವಿಷಯದ ಕುರಿತಾಗಿತ್ತು.  ಚಾರಿತ್ರಿಕವಾಗಿ ಭಾರತದ ಸಾಧನೆ’, ‘ಭಾರತದಲ್ಲಿನ ಜಾತಿ ಪದ್ಧತಿಗಳುಮುಂತಾದವು ಅವರು ಸಲ್ಲಿಸಿದ ಇತರ ಪ್ರಬಂಧ ಮಂಡನೆಗಳಾಗಿವೆ.  1916ರಲ್ಲಿ ಅವರು ಲಂಡನ್ನಿನ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದ ಅಧ್ಯಯನ ಪೀಠದಲ್ಲಿ  ಡಾಕ್ಟರೇಟ್  ಪದವಿಗಾಗಿ ಪ್ರಬಂಧವನ್ನು ಮಂಡಿಸುವ ಸಿದ್ಧತೆಯಲ್ಲಿದ್ದರು.  1917ರಲ್ಲಿ ಅವರಿಗೆ ಸಲ್ಲುತ್ತಿದ್ದ ವಿದ್ಯಾರ್ಥಿವೇತನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ  ಅವರು ಭಾರತಕ್ಕೆ ಹಿಂದಿರುಗಬೇಕಾಯಿತಾದರೂ ಅವರಿಗೆ ಡಾಕ್ಟರೇಟ್ ಪ್ರಬಂಧ ಸಲ್ಲಿಸಲು ನಾಲ್ಕು ವರ್ಷಗಳ ಕಾಲಾವಕಾಶವನ್ನು ನೀಡಲಾಯಿತು.  ದುರದೃಷ್ಟವಶಾತ್ ಅವರು ಅತ್ಯಂತ ಶ್ರದ್ಧೆಯಿಂದ ರಚಿಸಿದ  ಪ್ರಬಂಧದ ಗ್ರಂಥಗಳನ್ನು ಲಂಡನ್ನಿಗೆ ಕೊಂಡೊಯ್ಯುತ್ತಿದ್ದ ಹಡಗು, ಯುದ್ಧ ಸಮಯದಲ್ಲಿ ಜರ್ಮನಿಯ ಜಲಾಂತರ್ನೌಕೆಗೆ ಆಹುತಿಯಾಯಿತು. 

ಮುಂದೆ ಭಾರತಕ್ಕೆ ಬಂದು ಕಾನೂನಿನ ಅಭ್ಯಾಸದ ಜೊತೆಗೆ ಪತ್ರಕರ್ತರಾಗಿ ಕೆಲಸ ಮಾಡಿಕೊಂಡಿದ್ದ ಅಂಬೇಡ್ಕರ್, ಜೊತೆಜೊತೆಗೆ  ಭಾರತದಲ್ಲಿದ್ದ ಜಾತಿ ಪದ್ಧತಿಯ ಭೇದಗಳ ನಿಟ್ಟಿನಲ್ಲಿ ಹಿಂದುಳಿದ ಜನಾಂಗಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತಾರಾದರು.  ಅವರು 1922ರ ವೇಳೆಗೆ ಮತ್ತೊಮ್ಮೆ ಇಂಗ್ಲೆಂಡಿಗೆ ತೆರಳಿ ಅರ್ಥಶಾಸ್ತ್ರದ ಎಂ.ಎಸ್.ಸಿ ಮತ್ತು ಅರ್ಥಶಾಸ್ತ್ರದಲ್ಲಿನ ಡಾಕ್ಟರೇಟ್ ಪ್ರಬಂಧವನ್ನು ಲಂಡನ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು.  ಮುಂದೆ ಅವರು ಮುಂಬೈನಲ್ಲಿ ಕಾನೂನು ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 

ಮುಂಬೈನಲ್ಲಿ ತಮ್ಮ ವೃತ್ತಿಯಲ್ಲಿ ತೊಡಗಿಕೊಳ್ಳುವುದರ ಜೊತೆ ಜೊತೆಗೆ, ಸಮಾಜದ ಅಸ್ಪೃಶ್ಯ ಮತ್ತು ಶೋಷಿತ ಜನಾಂಗಗಳ ಕಲ್ಯಾಣದ ಗುರಿಯತ್ತ ಗಮನಹರಿಸಿದ ಅಂಬೇಡ್ಕರ್ ಬಹಿಷ್ಕೃತ ಹಿತಕಾರಿಣಿ ಸಭಾವನ್ನು ಪ್ರಾರಂಭಿಸಿದರು.  1927ರಿಂದ 1932ರ ಅವಧಿಯಲ್ಲಿ ಅವರು  ಅಹಿಂಸಾತ್ಮಕ ಅಂದೋಳನಗಳ ಮುಂದಾಳತ್ವ ವಹಿಸಿ, ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ ಬಾವಿಗಳಿಂದ ನೀರು ಸೇದುವ ಹಕ್ಕು ಮುಂತಾದವುಗಳಿಗಾಗಿ ಹೋರಾಡಿದರು.  ಇವುಗಳಲ್ಲಿ ನಾಸಿಕದಲ್ಲಿಯ ಕಾಳಾರಾಮನ ದೇವಸ್ಥಾನಕ್ಕೆ ಹರಿಜನರ ಪ್ರವೇಶ  ಮತ್ತು ಮಹಾಡದ ಚೌಡಾರ್ ಕೆರೆ ನೀರನ್ನು ಉಪಯೋಗಿಸುವುದರಲ್ಲಿ  ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಅವರು  ಅಂದೋಲನಗಳು ಗಮನಾರ್ಹವಾಗಿವೆ. ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆ ನೀರಿನ ಚಳುವಳಿಯು, ಅನೇಕ ವರ್ಷಗಳ ನಂತರ, ಕೆಳವರ್ಗಗಳ ಪರವಾಗಿ ವಿಜಯ ತಂದುಕೊಟ್ಟಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮನುಸ್ಮೃತಿಯೇ ಮೂಲ ಕಾರಣ ಎಂಬ ಅಂಬೇಡ್ಕರ್ ಅವರ ತೀರ್ಮಾನದ ಹಿನ್ನಲೆಯಲ್ಲಿ, ಈ ಚಳುವಳಿಯ ಸಂದರ್ಭದಲ್ಲಿ ಮನುಸ್ಮೃತಿಯ ಕೃತಿಯನ್ನು ದಹನ ಮಾಡಲಾಯಿತು.

1925ರಲ್ಲಿ ಅಂಬೇಡ್ಕರ್ ಅವರು ಸೈಮನ್ ಕಮಿಷನ್ ಜೊತೆಗೆ ಕಾರ್ಯನಿರ್ವಹಿಸಲು ಬಾಂಬೆ ಪ್ರೆಸಿಡೆನ್ಸಿ ಸಮಿತಿಗೆ ನಿಯೋಜಿಸಲ್ಪಟ್ಟರು.  ಸೈಮನ್ ಕಮಿಷನ್ ಭಾರತದಾದ್ಯಂತ ವಿರೋಧವನ್ನು ಅನುಭವಿಸಿತಾದರೂ ಅಂಬೇಡ್ಕರ್ ಅವರು ಭಾರತಕ್ಕೆ ಮುಂದೆ ಸಂವಿಧಾನಕ್ಕೆ ಉಪಯುಕ್ತವಾಗುವಂತಹ ಹಲವಾರು ವಿಧೇಯಕಗಳನ್ನು ಈ ಕಾಲಘಟ್ಟದಲ್ಲಿ  ಸಿದ್ಧಪಡಿಸಿಕೊಂಡರು. 

ಮೊದಲೇ ತಮ್ಮ ಚಟುವಟಿಕೆಗಳಿಂದ ಸಂಪ್ರದಾಯಶೀಲ ಹಿಂದೂಗಳ ಸಾಕಷ್ಟು ಅಸಮಾಧಾನವನ್ನು ಗಳಿಸಿದ್ದ ಅಂಬೇಡ್ಕರ್, 1931-32ರಲ್ಲಿ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ,  ‘ಭಾರತವು  ದ್ವೇಷಿಸುವ ವ್ಯಕ್ತಿಯಾದರು.  ಅಂಬೇಡ್ಕರ್ ದಲಿತರಿಗಾಗಿ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ನಿಗದಿಪಡಿಸಬೇಕು ಎಂದು  ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು. ಮಹಾತ್ಮ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಧೋರಣೆ ಈ ಚಿಂತನೆಗೆ ಸಹಮತ ಹೊಂದಿರಲಿಲ್ಲ. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯವನ್ನು ನಿರ್ಮೂಲನ ಮಾಡುವುದಕ್ಕೆ ಗಾಂಧೀಜಿಯವರು ಬದ್ಧರಾಗಿದ್ದರು. ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ  ಗಾಂಧೀಜಿ  ಪ್ರಮುಖರಾಗಿದ್ದರು.  ಆದರೂಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದು ಎಂಬುದು ಅವರ ನಿಲುವಾಗಿತ್ತು. 1932ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು.  ಇದನ್ನು ಪ್ರತಿಭಟಿಸಿದ ಗಾಂಧಿಯವರು  ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೆಸ್ ಮತ್ತು ಸನಾತನ ಹಿಂದೂ ಮುಖಂಡರು ಪಾರಸ್ಪರಿಕವಾಗಿ ಚರ್ಚಿಸಿ, ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು. ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷವು, ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು.

1935ರಲ್ಲಿ ಅಂಬೇಡ್ಕರ್ ಅವರು ಮುಂಬೈನ ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲರಾಗಿ ನಿಯೋಜಿತರಾಗಿ ಎರಡು ವರ್ಷದ ಅವಧಿಯವರೆಗೆ ಆ ಕಾರ್ಯವನ್ನು ನಿರ್ವಹಿಸಿದರು.  ಮುಂಬೈನಲ್ಲಿ ತಮ್ಮ ಮನೆಯ ನಿರ್ಮಾಣದಲ್ಲಿ ತೊಡಗಿದ ಅವರ ಬಳಿ ಸುಮಾರು 50,000 ಪುಸ್ತಕಗಳ ಬೃಹತ್ ಸಂಗ್ರಹವಿತ್ತು.  ಆ ಸಮಯದಲ್ಲಿ ಅವರ ಪತ್ನಿ ತಮ್ಮ ಜೀವಿತದ ಕೊನೆಯ ಗಳಿಗೆಗಳನ್ನು ಎದುರು ನೋಡುತ್ತಿದ್ದು ಪಂಡರಾಪುರದ ದೇವಸ್ಥಾನಕ್ಕೆ ಹೋಗುವ ಆಸೆ ವ್ಯಕ್ತಪಡಿಸಿದರಂತೆ.  ಅದಕ್ಕೆ ಅಂಬೇಡ್ಕರ್ ನಮ್ಮನ್ನು ಅಸ್ಪೃಶ್ಯರೆಂದು ಕಂಡ ಆ ಜನರದೇವಸ್ಥಾನಕ್ಕೆ ಹೋಗುವ ಬದಲು ಬೇರೊಂದು ಪಂಡರಾಪುರವನ್ನು ಸೃಷ್ಟಿಸುತ್ತೇನೆಎಂದರಂತೆ.  ಯವೊಲಾದಲ್ಲಿ ನಡೆದ  ಧರ್ಮ ಬದಲಾವಣೆಯ ಸಮಾವೇಶದಲ್ಲಿ ಮಾತನಾಡಿದ ಅವರು ತಮ್ಮ ಅನುಯಾಯಿಗಳಿಗೆ ಹಿಂದೂ ಧರ್ಮವನ್ನು ತೊರೆಯಲು ಕರೆ ನೀಡಿದರು.

1936ರಲ್ಲಿ ಅಂಬೇಡ್ಕರ್ ಅವರು ಸ್ವತಂತ್ರ ಕಾರ್ಮಿಕ ಪಕ್ಷವನ್ನು ಸ್ಥಾಪಿಸಿದರು.  ಅದು 1937ರ ಕೇಂದ್ರೀಯ ಶಾಸನ ಸಭೆಗೆ ನಡೆದ ಚುನಾವಣೆಗಳಲ್ಲಿ ಹದಿನೈದು ಸ್ಥಾನಗಳನ್ನು ಗಳಿಸಿತು.  ಭಾರತದಲ್ಲಿ ಜಾತಿ ಪದ್ಧತಿಯ ನಿರ್ಮೂಲನೆಯ ಕುರಿತಾದ ತಮ್ಮ ಪುಸ್ತಕದಲ್ಲಿ ಅವರು  ಹಿಂದೂ ಧರ್ಮದ ಪುರೋಹಿತಶಾಹಿ ನೀತಿಗಳು ಮತ್ತು ಜಾತಿವಾದಗಳಲ್ಲಿ ಅಡಗಿರುವ   ದುರಾಚಾರಗಳ ಬಗ್ಗೆ ತೀವ್ರವಾದ  ಟೀಕಾಪ್ರಹಾರಗಳನ್ನು ನಡೆಸಿದರು.  ಅಂಬೇಡ್ಕರ್ ಅವರು ಭದ್ರತಾ ಸಮಿತಿಯ ಸದಸ್ಯರಾಗಿಯೂ  ಮತ್ತು ವೈಸರಾಯ್ ಅವರ ಸಂಪುಟದಲ್ಲಿನ ಕಾರ್ಮಿಕ ಸಚಿವರಾಗಿಯೂ  ನೇಮಿಸಲ್ಪಟ್ಟರು. ಗಾಂಧೀ ಮತ್ತು ಕಾಂಗ್ರೆಸ್ಸಿಗರು  ಅಸ್ಪೃಶ್ಯರ ಕುರಿತಾಗಿ ತೋರುತ್ತಿರುವ ನಿಲುವುಗಳು  ಕೇವಲ ತೋರಿಕೆಯದಾಗಿದ್ದು ಅಸ್ಪೃಶ್ಯತಾ ನಿವಾರಣೆಯಲ್ಲಿ ಅವರಿಗಿರುವ ಕಾಳಜಿಗಳು ನಿರಾಶಾದಾಯಕವಾದದ್ದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.   ಶೂದ್ರ್ರರೆಂದರೆ ಯಾರು?” ಎಂಬ ತಮ್ಮ ಕೃತಿಯಲ್ಲಿ ವರ್ಣಪದ್ಧತಿಯ ನಾಲ್ಕನೆಯ ವಿಭಾಗದವರು ಶೂದ್ರರೆಂದೂ, ಹಾಗೆಂದ ಮಾತ್ರಕ್ಕೆ ಶೂದ್ರರು ಅಸ್ಪೃಶ್ಯರಲ್ಲ ಎಂಬ ತರ್ಕಗಳನ್ನು  ಪ್ರತಿಪಾದಿಸಿದರು.  ತಾವು ನಿರ್ಮಿಸಿದ ರಾಜಕೀಯ ಸಂಘಟನೆಯನ್ನು ಅಖಿಲ ಭಾರತ ಹಿಂದುಳಿದ ವರ್ಗಗಳ ಫೆಡರೇಶನ್ ಆಗಿ ಪರಿವರ್ತಿಸಿದ ಅಂಬೇಡ್ಕರ್ 1946ರ ಕೇಂದ್ರೀಯ ಶಾಸನಸಭೆಗಾಗಿ ನಡೆದ ಚುನಾವಣೆಗಳಲ್ಲಿ ಕೇವಲ ಅತ್ಯಲ್ಪವಾದ ಸಾಧನೆಗೆ ತೃಪ್ತಿಪಡಬೇಕಾಯಿತು.  

ಸ್ವಾತಂತ್ರ್ಯದ ಸಂದರ್ಭದಲ್ಲಿ ನೆಹರೂ ಅವರಿಂದ ಕಾನೂನು ಸಚಿವರಾಗಲು ಆಹ್ವಾನ ಪಡೆದ ಅಂಬೇಡ್ಕರ್ ಅವರು, ಭಾರತದ ಸಂವಿಧಾನ ರೂಪಿಸುವ ಜವಾಬ್ಧಾರಿಯನ್ನು ಹೊತ್ತು ಅಪಾರ ಶ್ರಮವಹಿಸಿ ದೇಶಕ್ಕೆ ಸಂವಿಧಾನವನ್ನು ಕಟ್ಟಿಕೊಟ್ಟರು.  ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ. ಇಡೀ ವಿಶ್ವದಲ್ಲಿ  ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥವಾಗಿವೆ ಎಂಬ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ.

ಮುಂದೆ ತಮ್ಮ ಜೀವಿತಾವಧಿಯ ಹೆಚ್ಚಿನ ಸಮಯದಲ್ಲಿ ಹಿಂದುಳಿದ ವರ್ಗಗಳ ಜನರನ್ನು ಬೌದ್ಧರನ್ನಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಅಂಬೇಡ್ಕರ್, ಚರಿತ್ರೆಯಲ್ಲಿ ಹಿಂದೆ ಎಂದೂ ಸಂಭವಿಸಿರಲಿಲ್ಲವೇನೋ ಎನ್ನುವಷ್ಟು  ಜನರಿಗೆ  ಬೌದ್ಧ ಧರ್ಮದ ದೀಕ್ಷೆ ತೊಡಿಸಿದರು.

ತಮಗೆ ಹಲವಾರು ದೈಹಿಕ ತೊಂದರೆಗಳು ಇದ್ದ ಸಂದರ್ಭದಲ್ಲಿಯೂಹಿಂದುಳಿದ ವರ್ಗಗಳ ಜನರನ್ನು ಬೌದ್ಧದರ್ಮೀಯರಾಗಿಸುವ ಕಾರ್ಯದಲ್ಲಿ ಭರದಿಂದ ನಿರತರಾಗಿದ್ದ ಅಂಬೇಡ್ಕರ್ 6ನೆ ಡಿಸೆಂಬರ್ 1956ರಂದು ಈ ಲೋಕವನ್ನಗಲಿದರು.  ಅವರಿಗೆ ಅವರು ನಿಧನರಾದ ಎಷ್ಟೋ ವರ್ಷಗಳ ನಂತರ 1990ರ ವರ್ಷದಲ್ಲಿ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯ ಘೋಷಣೆ ಮಾಡಲಾಯಿತು. 

ಈ ದೇಶದಲ್ಲಿ ಮೂಡಿದ್ದ ಅನಿಷ್ಟ ಜಾತಿಪದ್ಧತಿಗಳ ಸೆಲೆಯಿಂದ ಮೇಲೆದ್ದು ಬಂದ ಕುಸುಮವಾಗಿ, ತನ್ನಂತೆ ಬಳಲಿ ಬಸವಳಿದು ಹೊರದಾರಿ ಕಾಣದೆ ಹೆಣಗುತ್ತಿದ್ದ  ಅಸಂಖ್ಯಾತ ಜೀವಿಗಳಿಗೆ ಆಶಾಕಿರಣವಾಗಿ ಬಾಳಿದ ಈ ಜೀವ, ಹಲವು ನಿಟ್ಟಿನಲ್ಲಿ ಮಹೋನ್ನತ ಪ್ರಾಜ್ಞತೆಯಲ್ಲಿ ಬೆಳಗಿರುವುದೂ; ತನ್ನ ಕಷ್ಟದ ಹಾದಿಯಲ್ಲಿ ಇದ್ದ ಮಿತಿಗಳಲ್ಲಿನ ಪರಿಣಾಮಗಳಿಂದಾಗಿ ನಿಷ್ಠುರವಾದ ಹಾದಿಯನ್ನು ಹಿಡಿದಿರುವುದನ್ನು ಕಾಣಬಹುದಾದರೂ ಅದು ಒಂದು ವ್ಯವಸ್ಥೆಯನ್ನು ಬದಲಿಸುವಲ್ಲಿ ಮಾಡಿದ ಒಂದು ಹೋರಾಟವೆಂದು ಪರಿಗಣಿಸುವುದು ಅವಶ್ಯವೆನಿಸುತ್ತದೆ.  ಅವರು ಕಾಲವಾಗಿ ಇಷ್ಟೊಂದು ವರ್ಷಗಳ ನಂತರದ ಇಂದಿನ ದಿನದಲ್ಲೂ ಜಾತಿಪದ್ಧತಿಯ ವಿಷಮ ಬೀಜಗಳು ಅಡಗಿಲ್ಲ ಎಂದ ಮೇಲೆ ಅಂಬೇಡ್ಕರ್ ಅವರನ್ನು  ಒಂದೇ ನಿಟ್ಟಿನಲ್ಲಿ ನಿಷ್ಠುರವಾದಿ ಎಂದು ಕರೆಯುವುದು ಅಸಮರ್ಪಕವಾದೀತು.  ಗಾಂಧೀಜಿಯವರು  ಅವರು ಹಿಂದೂಧರ್ಮದ ಒಳಗಿದ್ದುಕೊಂಡೇ ಹಿಂದೂ ಧರ್ಮೀಯರ ಮನಃಪರಿವರ್ತನೆಯ ಮೂಲಕ ಜಾತೀಯತೆಯ ತಾರತಮ್ಯಗಳನ್ನು ಹೋಗಲಾಡಿಸಬೇಕೆಂದು ಬಯಸಿದ್ದ  ಕ್ರಿಯೆ ಒಂದು ನಿಟ್ಟಿನ ಪ್ರಯತ್ನವಾಗಿದ್ದರೆ, ಅಂಬೇಡ್ಕರ್ ಅವರದ್ದು ಹೊರಗೆ ನಿಂತು ಹಿಂದೂ ಧರ್ಮದ ಅಹಿತಕರ ಪ್ರವೃತ್ತಿಗಳನ್ನು ವಿರೋಧಿಸುವ ಕ್ರಿಯೆಯಾಗಿದೆ.  ಇವೆರಡರ ಮಹದುದ್ದೇಶವೂ ಒಂದೇ ಆಗಿತ್ತು ಎಂಬುದು ಇಲ್ಲಿ ಮಹತ್ವದ ಅಂಶ ಎಂಬುದನ್ನು ಇಂದಿನವರು ಗಮನಕ್ಕೆ ತಂದುಕೊಳ್ಳಬೇಕಾಗಿದೆ.  ಗಾಂಧೀಜಿ ಅವರದ್ದು ಅಹಿಂಸಾ ಮಾರ್ಗ ಅದೇ ಸರಿ ಇತ್ತು, ಅದೇ ಮಾರ್ಗದಲ್ಲಿ ಮೇಲ್ವರ್ಗಗಳ ಪರಿವರ್ತನೆಗೆ ತೊಡಗಬೇಕಿತ್ತು ಎಂಬ ಭಾವ ಮೇಲ್ವರ್ಗದ ಇಂದಿನ ಜನರಲ್ಲಿ ಮೂಡಿಬರಬಹುದಾದರೂ ಅದರಿಂದ  ಹಿಂದುಳಿದ ಜನಾಂಗಗಳು ಇಂದು  ಸಾಧಿಸಿರುವ ವಿವಿಧ ಕ್ಷೇತ್ರಗಳ ಪ್ರಗತಿ, ಅದೇ ಮನಃಪರಿವರ್ತನೆಯ ಮೂಲಕ ಸಾಧ್ಯವಿತ್ತು ಎಂದು ಹೇಳುವುದು ಕಷ್ಟ. 

ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟರ ಪಟ್ಟಿಯನ್ನು ತಮ್ಮ ಇಷ್ಟಾನುಕೂಲತೆಗಳಗಳಿಗೆ ಮತ್ತು ರಾಜಕೀಯ ಸ್ವಾರ್ಥಗಳಿಗೆ ಇಷ್ಟ ಬಂದ ಹಾಗೆ ಸೃಷ್ಟಿಸಿಹಿಗ್ಗಿಸಿ ಹೊಸ ಹೊಸ ವಾಖ್ಯೆ ನೀಡುವವರಿಗೆ ಮತ್ತು ಅದರಿಂದ ಕೇವಲ ತಾವು ಮಾತ್ರ ರಾಜಕೀಯ ಲಾಭ ಪಡೆಯುತ್ತಿರುವವರಿಗೆ  ಇಂದು ಅಂಬೇಡ್ಕರ್ ಇದ್ದಿದ್ದರೆ ಹೇಗೆ ಪ್ರತಿಕ್ರಯಿಸುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗೆ ನೋಡಿದರೆ ಅಂಬೇಡ್ಕರ್ ಸೃಷ್ಟಿಸಿದ್ದ ಸಂವಿಧಾನದಲ್ಲಿ ಕೂಡಾ ಹಿಂದುಳಿದವರಿಗಾಗಿ ಪ್ರತ್ಯೇಕ ರಾಜಕೀಯ ಕ್ಷೇತ್ರಗಳ ಸೃಷ್ಟಿ ಕೂಡ ಕೇವಲ ಹತ್ತು ವರ್ಷಗಳ ಅವಧಿಗೆ ಎಂದಾಗಿದ್ದು, ಅದನ್ನು ಅವಶ್ಯಕತೆ ಇದ್ದ ಪಕ್ಷದಲ್ಲಿ ಮಾತ್ರ ಹತ್ತು ವರ್ಷಗಳ ನಂತರದಲ್ಲಿ ಮುಂದುವರೆಸತಕ್ಕದ್ದು ಎಂಬ ಇಂಗಿತವಿದೆ.

ಹೀಗೆ ಭಾರತೀಯ ಬದುಕಿನಲ್ಲಿ ಒಂದು ವಿಶಿಷ್ಟ ಕ್ರಾಂತಿಯಾಗಿ ಹೊರಹೊಮ್ಮಿದ ಅಂಬೇಡ್ಕರ್ ತಮ್ಮ ಧ್ಯೇಯ, ಉದ್ದೇಶ, ಜನಕಲ್ಯಾಣ, ಸಾಧನೆ ಮತ್ತು ಕೊಡುಗೆಗಳಿಗಾಗಿ ಸದಾ ಸ್ಮರಣೀಯರು.  ಈ ಮಹಾಪುರಷನಿಗೆ ನಮ್ಮ ನಮನಗಳು.


(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)


Tag: B. R. Ambedkar

ಕಾಮೆಂಟ್‌ಗಳಿಲ್ಲ: