ಗುರುವಾರ, ಆಗಸ್ಟ್ 29, 2013

ಕಯ್ಯಾರ ಕಿಞ್ಞಣ್ಣ ರೈ

ಕನ್ನಡದ ಮಹಾನ್ ಧ್ವನಿ ಕಯ್ಯಾರ ಕಿಞ್ಞಣ್ಣ ರೈ

ಕನ್ನಡ ಪರ ಅಸಾಮಾನ್ಯ ಧ್ವನಿಯಾಗಿದ್ದವರು ಮಹಾನ್ ಕನ್ನಡ ಹೋರಾಟಗಾರ, ಕವಿ, ಶತಾಯುಷಿ ಕಯ್ಯಾರ ಕಿಞ್ಞಣ್ಣ ರೈ.  ಕಯ್ಯಾರ ಕಿಞ್ಞಣ್ಣ ರೈ ಎಂದರೆ ಕನ್ನಡದ ಬಗೆಗಿನ ಅಪಾರ ಪ್ರೀತಿ, ಕಾಳಜಿಗಳಿಗೆ ಒಂದು ಮಹತ್ವದ ಹೆಸರು.  ನೂರು  ವರ್ಷ  ಬಾಳಿ ಕಳೆದ  ವರ್ಷದ  ಆಗಸ್ಟ್ನಲ್ಲಿ  ಈ ಲೋಕವನ್ನಗಲಿದ ಅವರು   ಕಾಸರಗೋಡು ಕರ್ನಾಟಕದ ಕೈತಪ್ಪಿ ಕೇರಳಕ್ಕೆ ಸೇರಿಕೊಂಡುದರ ಬಗೆಗೆ ಅವರು ನಿರಂತರ ಅತೃಪ್ತರಾಗಿದ್ದವರು.  ಆದರೆ ಆ ಅತೃಪ್ತಿ ಕೇವಲ ನೀರಸವಾಗದೆ ಹತ್ತು ಹಲವು ಮುಖಗಳಲ್ಲಿ ಕನ್ನಡದ ಪ್ರೀತಿಯಾಗಿ, ಕನ್ನಡಿಗರನ್ನು ಎಚ್ಚರಿಸುವ ಧ್ವನಿಯಾಗಿ, ಕಾಯಕದಲ್ಲಿ ನಿರಂತರ ಸೃಜನಶೀಲವಾಗಿ ನಡೆಯಿತು. 

ಕಯ್ಯಾರ ಕಿಞ್ಞಣ್ಣ ರೈ ಈಗ ಕೇರಳ ರಾಜ್ಯಕ್ಕೆ ಸೇರಿರುವ  ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ 1915 ಜೂನ್ 8 ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ.

ರೈಯವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿಗಳ ಜೊತೆಗೆ  ಬಿ.ಎ. ಮತ್ತು  ಅಧ್ಯಾಪಕ ತರಬೇತಿ ಪಡೆದರು. ಮುಂದೆ ಎಂ.ಎ ಪದವಿಧರರೂ ಆದ ಕಿಞ್ಞಣ್ಣ ರೈ ಅವರು  ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಹಲವಾರು ವರ್ಷಗಳ ಅಧ್ಯಾಪನ ನಡೆಸಿ ನಿವೃತ್ತರಾದರು.

ಕಯ್ಯಾರ ಕಿಞ್ಞಣ್ಣ ರೈಯವರು ಸ್ವಾತಂತ್ರ್ಯಸಂಗ್ರಾಮದಲ್ಲಿನ ಹೋರಾಟ. ಹರಿಜನ ಸೇವಕ ಸಂಘಟನೆಯಲ್ಲಿ ದುಡಿತ ಮತ್ತು ಕನ್ನಡದ ಬಗೆಗಿನ ಪ್ರೀತಿಗಳಲ್ಲಿ ಚಿರಸ್ಮರಣೀಯರು.  ಸ್ವಲ್ಪ ಕಾಲ ಸ್ಥಳೀಯ ಪಂಚಾಯತಿಯ ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದ್ದ ಕಯ್ಯಾರ ಕಿಞ್ಞಣ್ಣ ರೈ ಅವರು  ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು.

ಕಯ್ಯಾರ ಕಿಞ್ಞಣ್ಣ ರೈ ಅವರ ಸಾಹಿತ್ಯಕ ಸಾಧನೆ ವಿವಿಧ ರೂಪಗಳಲ್ಲಿದ್ದು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಪ್ರಕಟಿಸಿದ್ದರು.  ಕಾರ್ನಾಡ ಸದಾಶಿವರಾವ್, ರತ್ನರಾಜಿ, ಎ. ಬಿ. ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನೂ ಹಾಗು ಕಥಾಸಂಗ್ರಹಗಳನ್ನೂ ಪ್ರಕಟಿಸಿದ್ದರು.  ರಾಷ್ಟ್ರಕವಿ ಗೋವಿಂದ ಪೈಯವರ ಬಗೆಗೆ ಮೂರು ಗ್ರಂಥಗಳನ್ನು ಬರೆದಿದ್ದರು. ಪಂಚಮಿ ಮತ್ತು ಆಶಾನ್ರೂ ಖಂಡಕಾವ್ಯಗಳು ಎನ್ನುವ ಎರಡು ಅನುವಾದ ಕೃತಿಗಳನ್ನು ರಚಿಸಿದ್ದರು. ಸಾಹಿತ್ಯದೃಷ್ಟಿ ಎನ್ನುವ ಲೇಖನಸಂಕಲನ ಪ್ರಕಟಿಸಿದ್ದರು. ಮಕ್ಕಳ ಪದ್ಯಮಂಜರಿ ಎನ್ನುವ ಮಕ್ಕಳ ಕವನ ಸಂಕಲನ ರಚಿಸಿದ್ದರು. ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ 'ಪರಶುರಾಮ' ಬರೆದುಕೊಟ್ಟಿದ್ದರು. ನವೋದಯ ವಾಚನಮಾಲೆ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಪುಸ್ತಕಗಳನ್ನು, ವ್ಯಾಕರಣ ಮತ್ತು ಪ್ರಬಂಧ ಎನ್ನುವ ನಾಲ್ಕು ಕೃತಿಗಳನ್ನು ಹೊರತಂದಿದ್ದರು. 'ವಿರಾಗಿಣಿ' ಎನ್ನುವದು ರೈ ಅವರು ಬರೆದ ನಾಟಕ.  'ದುಡಿತವೆ ನನ್ನ ದೇವರು' ಎನ್ನುವದು ರೈಯವರ ಅತ್ಮಕಥನ. ಇದಲ್ಲದೆ ವಿವಿಧ ಪತ್ರಿಕೆಗಳಿಗೆ ಇವರು ಬರೆದ ಲೇಖನಗಳ ಸಂಖ್ಯೆಯೆ ಐದುಸಾವಿರದಷ್ಟಾಗುತ್ತದೆ.

ತಮ್ಮ ಅಧ್ಯಾಪನ ಮತ್ತು ವಿಫುಲ ಬರವಣಿಗೆಯ ಜೊತೆಗೆ ಪತ್ರಿಕಾ ಸಂಪಾದನೆಯಲ್ಲೂ ತಮ್ಮ ಶ್ರಮದಾನ ನೀಡಿದ್ದ ಕಿಞ್ಞಣ್ಣ ರೈ  ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. 

ಕಯ್ಯಾರ ಕಿಞ್ಞಣ್ಣ ರೈ ಅವರಿಗೆ 1969ರಲ್ಲಿ  ಶ್ರೇಷ್ಠ ಅಧ್ಯಾಪಕ ಎಂದು ರಾಷ್ಟ್ರಪ್ರಶಸ್ತಿ ಲಭಿಸಿತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸಹ ಅದೇ ವರ್ಷ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿತು. ಕರ್ನಾಟಕರ ರಾಜ್ಯೋತ್ಸವ ಪ್ರಶಸ್ತಿ, 1997ರಲ್ಲಿ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ, ನಾಡೋಜ ಪ್ರಶಸ್ತಿ, ಕರ್ನಾಟಕ ಸರ್ಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಮುಂತಾದವು ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಸಂದ ಪ್ರಮುಖ ಗೌರವಗಳು.


ಈ ಮಹಾನ್  ಕನ್ನಡಪ್ರಿಯ ವಿದ್ವಾಂಸರಾದ  ಕಯ್ಯಾರ ಕಿಞ್ಞಣ್ಣ ರೈ ಅವರು  ತಮ್ಮ  ಶತಾಯುಷ್ಯವನ್ನು  ಪೂರೈಸಿದ ಎರಡು  ತಿಂಗಳಲ್ಲಿ   ಆಗಸ್ಟ್ 9, 2015ರ ದಿನದಂದು   ಈ  ಲೋಕದ  ತಮ್ಮ  ಬದುಕಿಗೆ  ವಿದಾಯ  ಹೇಳಿದರು.    ಈ ಮಹಾನ್ ಜೀವ ಕನ್ನಡಿಗರನ್ನು ನಿರಂತರವಾಗಿ ಪ್ರೇರೇಪಿಸುತ್ತಿರಲಿ.

Tag: Kayyara Kiyyinna Rai,  Kayyara Kinhanna rai, Kayyara Kinyanna Rai, Kaiyyaara Kiyyiina Rai 

ಕಾಮೆಂಟ್‌ಗಳಿಲ್ಲ: