ಬುಧವಾರ, ಆಗಸ್ಟ್ 28, 2013

ವಿ ಕೆ ಆರ್ ವಿ ರಾವ್

ವಿ ಕೆ ಆರ್ ವಿ ರಾವ್

ಕನ್ನಡಿಗರಾದ ವಿಜಯೇಂದ್ರ ಕಸ್ತೂರಿ ರಂಗ ವರದರಾಜ ರಾವ್ ಅವರು ಭಾರತ ದೇಶ ಕಂಡ ಪ್ರಬುದ್ಧ ಅರ್ಥ ಶಾಸ್ತ್ರಜ್ಞ, ರಾಜಕಾರಣಿ, ಪ್ರಾಧಾಪಕ, ಶಿಕ್ಷಣ ತಜ್ಞರು, ಆಡಳಿತಗಾರ, ಮಹಾನ್ ಸಂಸ್ಥೆಗಳ ನಿರ್ಮಾತೃ.  ಅವರು ಜುಲೈ 8, 1908ರಂದು ಕಾಂಚೀಪುರದಲ್ಲಿ ಕಸ್ತೂರಿ ರಂಗಾಚಾರ್ ಮತ್ತು ಭಾರತಿ ಬಾಯ್ ದಂಪತಿಗಳ ಪುತ್ರರಾಗಿ ಜನಿಸಿದರು.

ತಿರುವನಂತಪುರ ಮತ್ತು ಚನ್ನೈಗಳಲ್ಲಿ ರಾವ್ ಅವರ  ಶಿಕ್ಷಣ ನೆರವೇರಿತು.   1934-35ರ ಅವಧಿಯಲ್ಲಿ ಅವರು ಧಾರವಾಡ ವಿಶ್ವವಿದ್ಯಾಲಯದಲ್ಲಿ ಹಾಗೂ ನಂತರದಲ್ಲಿ ಆಂಧ್ರಪ್ರದೇಶದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು.  1937ರ ವರ್ಷದಲ್ಲಿ ಅವರು ಕೇಂಬ್ರಿಡ್ಜ್ನಲ್ಲಿ  ಪಿ ಎಚ್ ಡಿ ಪಡೆದರು.   ನಂತರದಲ್ಲಿ ಅಹಮದಾಬಾದ್ ಮತ್ತು ದೆಹಲಿವಿಶ್ವವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿಸಿದರು.   ಭಾರತದ ವಿವಿಧ ವಿಶ್ವವಿದ್ಯಾಲಯಗಳು ಮಾತ್ರವಲ್ಲದೆ ವಿದೇಶದ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ವಿಶ್ವವಿದ್ಯಾಲಯಗಳು ಅವರನ್ನು ಸನ್ಮಾನಿಸಿದವು.   1967 ಮತ್ತು 1971ರ ಚುನಾವಣೆಗಳಲ್ಲಿ ಬಳ್ಳಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.  ಈ ಎರಡೂ ಅವಧಿಯಲ್ಲಿಯೂ ಕೇಂದ್ರ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು.   1974ರ ವರ್ಷದಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಂದಿತು.

ರಾವ್ ಅವರ ಮಹತ್ವಪೂರ್ಣ ಕೊಡುಗೆ ಎಂದರೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು.  ಅವುಗಳಲ್ಲಿ ಪ್ರಮುಖವೆಂದರೆ ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್, ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ (ISEC), ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್, ಆಗ್ರೋ ಎಕನಾಮಿಕ್ ಸೆಂಟರ್ಸ್ ಅಂಡ್ ಪಾಪ್ಯುಲೇಶನ್ ರಿಸರ್ಚ್ ಸೆಂಟರ್ಸ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಫಾರಿನ್ ಟ್ರೇಡ್.  ಅವರು ದೆಹಲಿ ಕರ್ನಾಟಕ ಸಂಘದ ಮೂರನೆಯ ಅಧ್ಯಕ್ಷರಾಗಿದ್ದರು.

ಹಲವಾರು ಪ್ರಸಿದ್ಧ ಗ್ರಂಥಗಳನ್ನು ರಚಿಸಿರುವ ವಿ ಕೆ ಆರ್ ವಿ ರಾವ್ ಅವರ ಪ್ರಮುಖ ಕೃತಿಗಳೆಂದರೆ Taxation of Income in India (1931), An essay on India’s National Income -1925-29 – (1936); The National Income of British India (1940); India and International Currency Plans (1945); Post-War Rupee (1948); Gandhian Alternative to Western Socialism (1970); Values and Economic Development – The Indian Challenge (1971); the Nehru Legacy (1971); Swami Vivekananda – Prophet of Vedantic Socialism (1978); Many Languages and One Nation – the Problem of Integration (1979); India’s National Income 1950-80 (1983) Food, Nutrition and Poverty (1982); Indian socialism: Retrospect and Prospect (1982) ಮುಂತಾದವು.

ವಿ ಕೆ ಆರ್ ವಿ ರಾವ್ ಅವರು ನಿರ್ವಹಿಸಿದ ಕೆಲವೊಂದು ಪ್ರತಿಷ್ಠಿತ ಜವಾಬ್ಧಾರಿಗಳೆಂದರೆ: ಆಹಾರ ವಿಭಾಗಕ್ಕೆ ಯೋಜನಾ ಸಲಹೆಗಾರರು, ಅಮೆರಿಕದಲ್ಲಿ ಭಾರತ ಸರಕಾರದ ಆಹಾರ ಮತ್ತು ಆರ್ಥಿಕ ಸಲಹೆಗಾರರು, ದೆಹಲಿ ಅರ್ಥಶಾಸ್ತ್ರ ಶಾಲೆಯ ನಿರ್ದೇಶಕರು, ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿಗಳು, ಆರ್ಥಿಕ ಪ್ರಗತಿ ಸಂಸ್ಥೆಯ ನಿರ್ದೇಶಕರು, ಯೋಜನಾ ಆಯೋಗದ ಸದಸ್ಯರು, 1967-69 ಅವಧಿಯಲ್ಲಿ ಕೇಂದ್ರ ಸಾರಿಗೆ ಮತ್ತು ಶಿಪ್ಪಿಂಗ್ ಖಾತೆಯ ಮಂತ್ರಿಗಳು, 1969-71 ಅವಧಿಯಲ್ಲಿ ಶಿಕ್ಷಣ ಮತ್ತು ಯುವಜನ ಖಾತೆ ಸಚಿವರುಬೆಂಗಳೂರಿನ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ ನಿರ್ದೇಶಕರು, ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ತಜ್ಞರು ಮುಂತಾದವು.    ಇವಲ್ಲದೆ ಅವರು ಅನೇಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.  ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಯು ಎನ್ ಡಿ ಪಿ (ಯುನೈಟೆಡ್ ನೇಷನ್ಸ್ ಡೆವೆಲಪ್ಮೆಂಟ್ ಪ್ರೋಗ್ರಾಂ) ಸ್ಥಾಪನೆಯಲ್ಲಿ ವಿ ಕೆ ಆರ್ ವಿ ರಾವ್ ಅವರು ಒಬ್ಬ ಪ್ರಧಾನ ಪಾತ್ರಧಾರಿಗಳಾಗಿದ್ದಾರೆ. 

ಈ ಮಹಾನ್ ಸಾಧಕರು ಜುಲೈ 25, 1991ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ಗೌರವಗಳು.


(ನಮ್ಮ 'ಕನ್ನಡ  ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ  www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ).

Tag: V. K. R. V. Rao, VKRV Rao

ಕಾಮೆಂಟ್‌ಗಳಿಲ್ಲ: