ಬುಧವಾರ, ಆಗಸ್ಟ್ 28, 2013

ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆ

ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆ

ಇಂದು ವಿಶ್ವಮಾನವ, ವಿಶ್ವವಿಜೇತ, ವೀರಸಂನ್ಯಾಸಿ ‘ಸ್ವಾಮಿ ವಿವೇಕಾನಂದ’ರ ಪುಣ್ಯಸ್ಮರಣೆಯ ದಿನ.  ಸ್ವಾಮಿ ವಿವೇಕಾನಂದರು  ಈ ಲೋಕವನ್ನಗಲಿದ್ದು ಜುಲೈ 4, 1902ರಂದು.  ಅವರು ಈ ಲೋಕವನ್ನಗಲಿ ನೂರ ಹನ್ನೊಂದು  ವರ್ಷಗಳಾದವು.  ಅವರು ಜನಿಸಿದ್ದು ಜನವರಿ 12, 1863ರಂದು.   ಇದೇ ನಾವು ಹುಟ್ಟಿರುವ ಈ ಪುಣ್ಯಭೂಮಿ - ಭರತಭೂಮಿಯಲ್ಲಿ.

ಸ್ವಾಮಿ ವಿವೇಕಾನಂದರ ಬಗ್ಗೆ ಈ ದೇಶದ ಮಹಿಮಾನ್ವಿತರ ಮಾತುಗಳು ಹೀಗಿವೆ.

“ನೀವು ಭಾರತವನ್ನು ಅರಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ.  ಅವರಲ್ಲಿ ಎಲ್ಲವೂ ರಚನಾತ್ಮಕವಾದುದು.  ನೇತ್ಯಾತ್ಮಕವಾದುದು ಯಾವುದೂ ಇಲ್ಲ” – ರವೀಂದ್ರನಾಥ ಠಾಕೂರ್

“ನಾನು ಸ್ವಾಮೀಜಿಯವರ ಕೃತಿಗಳನ್ನು ಅಮೂಲಾಗ್ರವಾಗಿ ಓದಿದ್ದೇನೆ.  ಅವುಗಳ ಅಧ್ಯಯನದ ನಂತರ ಭಾರತದ ಬಗೆಗಿದ್ದ ನನ್ನ ಪ್ರೀತಿ ಸಾವಿರ ಪಾಲು ಹೆಚ್ಚಿತು” – ಮಹಾತ್ಮ ಗಾಂಧಿ

“ಸ್ವಾಮೀಜಿಯವರ ನುಡಿಗಳಿಂದ ನಮ್ಮ ದೇಶದ ಜನ ಹಿಂದೆಂದೂ ಕಾಣದ ಆತ್ಮ ಗೌರವವನ್ನೂ, ಆತ್ಮವಿಶ್ವಾಸವನ್ನೂ ಹಾಗೂ ಆತ್ಮಬಲವನ್ನೂ ಪಡೆದಿದ್ದಾರೆ” – ಸುಭಾಷ್ ಚಂದ್ರಬೋಸ್

“ಸ್ವಾಮೀಜಿಯವರ ತಪಃಪೂರ್ಣವಾದ ಶಕ್ತಿವಾಣಿ ಒಂದು ಅಮೃತದ ಮಡು! ಇದರಲ್ಲಿ ಮಿಂದರೆ ಪುನೀತರಾಗುತ್ತೇವೆ.  ಇದು ಜ್ಯೋತಿಯ ಖನಿ.  ಹೊಕ್ಕರೆ ಪ್ರಬುದ್ಧರಾಗುತ್ತೇವೆ” – ಕುವೆಂಪು

“ಮತ್ತೊಮ್ಮೆ ಮೂಡಿ ಬಾ”

ಭೋರ್ಗರೆವ ಕಡಲಿನೊಡಳಿಗೆ ಧುಮುಕಿ
ತೆರೆಗಳ ಸೀಳಿ, ನಡುಗಡ್ಡೆಯಲಿ ನಿಂತು
ಭಾರತದ ಕನಸ ಕಂಡವ ನೀನು.  ನಿನ್ನ
ವರ್ಷಕಾಲ ರುದ್ರ – ರಮಣೀಯ ಛಂದೋಗತಿಗೆ
ಮೂಕವಾಗಿದೆ ಲೋಕ! ಭೋರೆಂದು ಮಳೆ ಹೊಯ್ದ,
ಹೊಳೆ – ಹಳ್ಳಗಳಲಿ ನೊರೆಗರೆದು, ಹೊಲ – ಗದ್ದೆ
ಗಳಲ್ಲಿ ಸೊಂಪಾಗಿ ಹಸುರು ತಾಗಿದ ಹಾಗೆ
ನಿನ್ನ ಮಾತಿನ ರೀತಿ.  ನುಡಿದ ನುಡಿಯೊಂ-
ದೊಂದು ಸಿಡಿಲ ಕಿಡಿ; ನಡೆ, ಪೌರುಷದ
ತೇರು ಹರಿದಂತೆ,  ನಮ್ಮ ಇಂದಿನ ಬದುಕೊ,
ವಿವೇಕ – ಆನಂದ ಎರಡೂ ಇರದ ಕುಹಕದ
ಸಂತೆ.  ಮತ್ತೊಮ್ಮೆ ಮೂಡಿ ಬಾ, ದಿವ್ಯ ನಿರ್ಭಯ
ಧೀರ ಗುರುಮೂರ್ತಿ.  ಬೇಕಾಗಿದೆಯಯ್ಯ, ನಮ್ಮ
ಈ ಸತ್ತ ದೇಶಕ್ಕೆ ನಿನ್ನ ಸಾತ್ವಿಕ ಸ್ಫೂರ್ತಿ

-ಜಿ. ಎಸ್. ಶಿವರುದ್ರಪ್ಪ


ಸ್ವಾಮಿ ವಿವೇಕಾನಂದರ ಬಗ್ಗೆ ನಾವು ಹೇಳುವುದಕ್ಕಿಂತ ಅವರನ್ನು ಕೇಳುವುದೇ ಸರಿಯಾದದ್ದು.  ಬನ್ನಿ ರಾಷ್ಟ್ರಕವಿ ಕುವೆಂಪು ಅವರು ಹೇಳುವ ಹಾಗೆ, ಅವರು ನಮಗೆ ನೀಡಿರುವ ಜ್ಞಾನ ಜ್ಯೋತಿಯ ಖನಿಯಲ್ಲಿ ಒಂದಷ್ಟು ಹೊಕ್ಕು ಪ್ರಬುದ್ಧತೆಯನ್ನು ಬೇಡೋಣ.  ಈ ಭಕ್ತಿಭಾವಗಳೊಂದಿಗೆ ಸ್ವಾಮಿ ವಿವೇಕಾನಂದರ  ಹಲವು ಮನೋಜ್ಞ ಮಾತುಗಳನ್ನು  ತಮ್ಮೊಡನೆ ನೆನಪಿಸಿಕೊಳ್ಳ ಬಯಸುತ್ತೇನೆ.

• ಯಾವುದಕ್ಕೂ ಅಂಜದಿರು; ಅಧ್ಭುತ ಕಾರ್ಯವನ್ನೆಸಗುವೆ.  ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ.  ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ.  ನಿರ್ಭೀತಿಯೇ ಕ್ಷಣಮಾತ್ರದಲ್ಲಿ ಸ್ವರ್ಗವನ್ನು ಸಾಧಿಸಿಕೊಡಬಲ್ಲದು.  ಆದುದರಿಂದ ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು.

• ನೀವು ಪ್ರತಿಯೊಬ್ಬರೂ, ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸದ ಜವಾಬ್ಧಾರಿಯೆಲ್ಲವೂ ಇದೆಯೇನೋ ಎಂಬಂತೆ ಕೆಲಸ ಮಾಡಿರಿ.  ಐವತ್ತಕ್ಕೂ ಹೆಚ್ಚು ಶತಮಾನಗಳು ನಿಮ್ಮನ್ನು ನೋಡುತ್ತ ನಿಂತಿವೆ.  ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ.  ನೀವು ನಿಮ್ಮ ಕೆಲಸಮಾಡಿಕೊಂಡು ಮುನ್ನಡೆಯಿರಿ.

• ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ.  ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು –ಇದೇ ಧರ್ಮದ ಸರ್ವಸ್ವ.

• ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ.

• ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.

• ಯಾರಿಗೆ ತನ್ನಲ್ಲಿಯೇ  ನಂಬಿಕೆಯಿಲ್ಲವೋ ಅವನೇ ನಾಸ್ತಿಕ.  ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು.  ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನೇ ನಾಸ್ತಿಕನೆಂದು.

• ಈ ಜಗತ್ತಿನ ಇತಿಹಾಸವೆಲ್ಲಾ  ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸವಾಗಿದೆ.  ಆ ಶ್ರದ್ಧೆ ಮಾತ್ರವೇ  ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸಬಲ್ಲದು.  ಆಗ ನೀವೇನನ್ನೇ  ಬೇಕಾದರೂ ಸಾಧಿಸಬಲ್ಲಿರಿ.

• ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು.  ‘ನಾನು ಸಮುದ್ರವನ್ನೇ ಪಾನಮಾಡುತ್ತೇನೆ’ ಎಂದು ಪ್ರಯತ್ನಶೀಲನು ಹೇಳುತ್ತಾನೆ.  ‘ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ’ ಎನ್ನುತ್ತಾನವನು.  ನೀವು ಇಂತಹ ಶಕ್ತಿಯನ್ನೂ ಛಾತಿಯನ್ನೂ ಪಡೆದಂತವರಾಗಿ; ಇದಕ್ಕಾಗಿ ಕಷ್ಟಪಟ್ಟು ದುಡಿಯಿರಿ.   ನೀವು ಖಂಡಿತವಾಗಿ ಗುರಿ ಸೇರುವಿರಿ.

• ಪ್ರತಿಯಾಗಿ ಏನನ್ನೂ ಬಯಸಬೇಡಿ.    ಹೆಚ್ಚು ಕೊಟ್ಟಷ್ಟೂ ನಿಮಗೇ ಹೆಚ್ಚು ಹೆಚ್ಚು ಬರುತ್ತದೆ.

• ವಿಕಾಸವೇ ಜೀವನ; ಸಂಕೋಚವೇ ಮರಣ.  ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.

• ಬುದ್ಧಿ ಶ್ರೇಷ್ಠವಾದುದು ನಿಜ.  ಆದರ ಕಾರ್ಯವ್ಯಾಪ್ತಿ ಸೀಮಿತವಾದುದು.  ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ; ಹೃದಯವೇ ಸ್ಫೂರ್ತಿಯ ಮೂಲ.

• ಮಗು, ಪ್ರೀತಿಗೆ ಸೋಲೆಂಬುದೇ ಇಲ್ಲ;   ಇಂದೋ, ನಾಳೆಯೋ ಅಥವಾ ಯುಗಾಂತರದಲ್ಲೋ ಸತ್ಯ ಗೆದ್ದೇ ತೀರುವುದು.  ಪ್ರೀತಿ ಖಂಡಿತ ಜಯ ಗಳಿಸುತ್ತದೆ.  ನೀವು ನಿಮ್ಮ ಮಾನವಬಂಧುಗಳನ್ನು ಪ್ರೀತಿಸುತ್ತೀರೇನು? ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ

• ಜೀವನದಲ್ಲಿ ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕವೇ.  ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬದುಕುಳಿದಿರುತ್ತಾರೆ.  ಉಳಿದವರು ಬದುಕಿದ್ದರೂ ಸತ್ತಂತೆಯೇ.

• ಎದ್ದೇಳಿ ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ?  ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ?  ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.

• ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ.  ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ.

• ಎಲ್ಲವನ್ನೂ ದೂರ ಎಸೆಯಿರಿ.  ನಿಮ್ಮ ಮುಕ್ತಿಯ ಬಯಕೆಯನ್ನು ಕೂಡ.  ಇತರರಿಗೆ ಸಹಾಯಮಾಡಿ.

• ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು.  ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು.  ಪ್ರಾಣಿಗಳು ಸಂಪೂರ್ಣವಾಗಿ ಉದ್ವೇಗದ ಅಧೀನದಲ್ಲಿರುವುವು.

• ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ,  ಆದರ್ಶವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ.  ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು.

• ಜೀವನವೆಂಬುದು ಕಠಿಣ ಸತ್ಯ.  ಧೈರ್ಯವಾಗಿ ಅದನ್ನು ಎದುರಿಸಿ.  ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ.  ಅದು ಅಭೇದ್ಯವಾಗಿರಬಹುದು.  ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.

• ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ.  ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ.

• ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

• ಹೇಡಿಗಳು ಮಾತ್ರ, ಬಲಹೀನರು ಮಾತ್ರವೇ ಪಾಪವನ್ನು ಮಾಡುವುದು. ಅವರು ಮಾತ್ರವೇ ಸುಳ್ಳು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ.  ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ.  ಧೀರರಾಗಿರಿ, ನೀತಿವಂತರಾಗಿರಿ, ಸಹಾನುಭೂತಿಯುಳ್ಳವರಾಗಿರಿ.

• ಸತ್ಯನಿಷ್ಠೆ, ಪಾವಿತ್ರ್ಯ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು.  ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವೆಲ್ಲವನ್ನೂ ಎದುರಿಸಬಲ್ಲ.

• ಮೊದಲು ಸಚ್ಚಾರಿತ್ರ್ಯವನ್ನು ಬೆಳೆಸಿಕೊಳ್ಳಿ.  ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯವೇ ಇದು.

• ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.

• ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ.  ಇದರಿಂದ ಮಹತಕಾರ್ಯ ಸಂಭವಿಸುತ್ತದೆ.

• ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿ ನಿಮ್ಮ  ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ನಾವು ನಮ್ಮ  ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿದಷ್ಟೂ  ಕರ್ತವ್ಯಭಾರದಿಂದ ಪಾರಾಗುತ್ತೇವೆ.

• ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ:
1.ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ
2.ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ
3.ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುವವರಿಗೆ ಸಹಾಯ ಮಾಡುವಿಕೆ.

• ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಿತ.

• ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು.  ಮತ್ಯಾರೂ ಅಲ್ಲ.  ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳಬೇಕಾದವರು ನಾವೇ.

• ನಿಮಗಾಗಿ ಏನನ್ನೂ ಬಯಸಬೇಡಿ.  ಎಲ್ಲವನ್ನೂ ಇತರರಿಗಾಗಿ ಮಾಡಿ.  ಭಗವಂತನಲ್ಲೇ ಇರುವುದು  ಅವನಲ್ಲೇ ಬಾಳುವುದು, ಅವನೆಡೆಗೆ ಸಾಗುವುದು ಅಂದರೆ ಇದೇ.

• ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ.  ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?

• ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ.  ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು.

• ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ.  ಯಾವ ಶಕ್ತಿಯೂ ಅದನ್ನು ತಡೆಯಲಾರದು.  ಅವುಗಳಿಗೆ ನೀವು ಚಾಲನೆ ನೀಡಿದಲ್ಲಿ  ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು.  ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕೃತ್ಯಗಳಿಂದ ಪಾರಾಗಬಹುದು.

• ನಿಮ್ಮೊಳಗಿರುವುದನ್ನು ಪ್ರಯತ್ನಪೂರ್ವಕವಾಗಿ ಹೊರಹೊಮ್ಮಿಸಿ.  ಆದರೆ ಅನುಕರಿಸಬೇಡಿ.  ಇತರರಿಂದ ಒಳ್ಳೆಯದನ್ನೆಲ್ಲವನ್ನೂ ಸ್ವೀಕರಿಸಿ.

• ಇತರರಿಗೆ ಸ್ವಾತ್ಯಂತ್ರ್ಯವನ್ನು ಕೊಡಲು ಇಚ್ಚಿಸದವನು ಸ್ವಾತ್ಯಂತ್ರ್ಯಕ್ಕೆ ಯೋಗ್ಯನಲ್ಲವೇ ಅಲ್ಲ.

• ವೈಯಕ್ತಿಕವಾಗಿ ಯಾರೊಬ್ಬರನ್ನು ಪ್ರೀತಿಸುವುದೂ ಬಂಧನ.  ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ.  ಆಗ ಎಲ್ಲ ಆಸೆಗಳೂ ಬಿದ್ದುಹೊಗುತ್ತವೆ.

• ಮಹಾಮೂರ್ಖನು ಕೂಡ ತನಗಿಷ್ಟವಾದ ಕಾರ್ಯವನ್ನು ಸಾಧಿಸಬಲ್ಲ.  ಆದರೆ ಯಾರು ಯಾವುದೇ ಕೆಲಸವನ್ನಾದರೂ ತನಗೆ ಇಷ್ಟವಾಗುವಂತೆ ಮಾಡಬಲ್ಲನೋ ಅವನೇ ಬುದ್ಧಿವಂತ.

• ಮೊದಲು ಆಳಾಗುವುದನ್ನು ಕಲಿಯಿರಿ. ಆಗ ನಾಯಕನ ಅರ್ಹತೆ ನಿಮಗೆ ತಾನೇ ತಾನಾಗಿ ಬರುತ್ತದೆ.

• ಒಂದು ಸಾಮಾನ್ಯ ಕೆಲಸವನ್ನೂ ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.

• ದೈಹಿಕವಾಗಿ ಮತ್ತು ಮಾನಸಿಕವಾಗಿ ಒಬ್ಬ ವ್ಯಕ್ತಿಯು ಪರಿಶುದ್ಧನಾಗಿರದಿದ್ದರೆ, ಅವನು ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರನ್ನು ಪೂಜಿಸುವುದರಿಂದ ಯಾವ ಪ್ರಯೋಜನವೂ ಆಗದು.

• ನೀವು ಆಧ್ಯಾತ್ಮಿಕರಾಗದೆ ಭಾರತದ ಪುನರುದ್ಧಾರ ಅಸಾಧ್ಯ.  ಇದನ್ನು ಗಮನದಲ್ಲಿಟ್ಟುಕೊಳ್ಳಿ;  ನೀವು ಆಧ್ಯಾತ್ಮ ಬಿಟ್ಟು ಭೋಗಪ್ರಧಾನ ಪಾಶ್ಚಾತ್ಯ ನಾಗರೀಕತೆಯನ್ನು ಬೆಂಬತ್ತಿದರೆ, ಅದರ ಪರಿಣಾಮವಾಗಿ ಇನ್ನು ಮೂರೇ ತಲೆಮಾರುಗಳಲ್ಲಿ ನಿಮ್ಮ ಜನಾಂಗ ನಾಶವಾಗುತ್ತದೆ.

• ಅವಿದ್ಯಾವಂತರಿಗೆ ಬೆಳಕು ತನ್ನಿ, ವಿದ್ಯಾವಂತರಿಗೆ ಹೆಚ್ಚು ಬೆಳಕು ತನ್ನಿ.  ಏಕೆಂದರೆ ವಿದ್ಯೆಯ ಮಧ ಇಂದು ಹೆಚ್ಚು ಭಯಂಕರವಾಗಿದೆ.

• ಇರುವ ಏಕಮಾತ್ರ ದೇವತೆಯೂ, ನಾನು ನಂಬುವ ಏಕಮಾತ್ರ  ದೇವತೆಯೂ ಆದ ಜೀವ ಸಮಷ್ಟಿಯ ಆರಾಧನೆಗಾಗಿ ನನಗೆ ಎಷ್ಟು ಜನ್ಮಗಳಾದರೂ ಪ್ರಾಪ್ತವಾಗಲಿ, ಎಂತಹ ದುಃಖಗಳಾದರೂ ಒದಗಲಿ.   ಎಲ್ಲಕ್ಕಿಂತ ಹೆಚ್ಚಾಗಿ, ದುಷ್ಟ ನಾರಾಯಣ, ಆರ್ತ ನಾರಾಯಣ, ಸಮಸ್ತ ಜನಾಂಗದ ದರಿದ್ರ ನಾರಾಯಣ,  ಈ ನಾರಾಯಣನೇ ನನ್ನ ವಿಶೇಷ ಆರಾಧ್ಯದೇವತೆ.

• ನನ್ನ ಧೀರಪುತ್ರರೇ, ನೀವೆಲ್ಲರೂ ಮಹತ್ಕಾರ್ಯವನ್ನು ಸಾಧಿಸುವುದಕ್ಕೆ ಹುಟ್ಟಿರುವಿರೆಂದು ನಂಬಿ.  ನಾಯಿಮರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ.  ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ.  ಎದ್ದು ನಿಂತು ಕಾರ್ಯೋನ್ಮುಖರಾಗಿ.

“ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಭೋಧತ" - ಎಚ್ಚರಗೊಳ್ಳಿ, ಜಾಗೃತರಾಗಿ, ಎಲ್ಲಕ್ಕಿಂತ ಮಹತ್ವವಾದುದಕ್ಕೆ ನಿಮ್ಮನ್ನು ಅನುವುಗೊಳಿಸಿಕೊಳ್ಳಿ.

“ಹೇ ಸೂರ್ಯನೇ! ಸತ್ಯವನ್ನು ಸ್ವರ್ಣ ಮಂಡಲದಿಂದ ಮುಚ್ಚಿರುವೆ. ಆ ಆವರಣವನ್ನು ಆಚೆ ಸರಿಸು. ನಿನ್ನಲ್ಲಿರುವ ಸತ್ಯವನ್ನು ನನಗೆ ನೋಡಲು ಸಾಧ್ಯವಾಗಲಿ.  ನಿನ್ನಲ್ಲಿರುವ ಸತ್ಯವನ್ನು ನಾನರಿತೆ.  ನಿನ್ನ ಕಿರಣದ ಮತ್ತು ಕಾಂತಿಯ ನಿಜವಾದ ಅರ್ಥ ನನಗೆ ತಿಳಿಯಿತು.  ನಿನ್ನಲ್ಲಿ ಹೊಳೆಯುವುದನ್ನು ನೋಡಿದೆ.  ನಿನ್ನಲ್ಲಿರುವ ಸತ್ಯವನ್ನು ಅರಿತೆ.  ನಿನ್ನಲ್ಲಿ ಯಾವುದಿರುವುದೋ ಅದೇ ನನ್ನಲ್ಲಿಯೂ ಇರುವುದು.  ಅದೇ ನಾನು”  (ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ೨)

ಸ್ವಾಮಿ ವಿವೇಕಾನಂದರ ದಿವ್ಯಚರಣಗಳಿಗೆ ಸಾಷ್ಟಾಂಗ ನಮನಗಳು.  ಸ್ವಾಮೀಜಿ ನಿಮ್ಮ ಕೃಪಾಕಿರಣ ನಮ್ಮನ್ನುದ್ಧರಿಸಲಿ.

Tag: Swami Vivekananda Punya Smarane

ಕಾಮೆಂಟ್‌ಗಳಿಲ್ಲ: