ಬುಧವಾರ, ಆಗಸ್ಟ್ 28, 2013

ಎಂ. ಎಚ್. ಕೃಷ್ಣಯ್ಯ


ಎಂ. ಎಚ್. ಕೃಷ್ಣಯ್ಯ

ಪ್ರಸಿದ್ಧ ಸಾಹಿತ್ಯ ವಿಮರ್ಶಕ ಮತ್ತು  ಕಲಾಪ್ರೇಮಿಗಳಾದ  ಪ್ರೊ. ಎಂ. ಎಚ್. ಕೃಷ್ಣಯ್ಯನವರು ಜುಲೈ 21, 1937ರ ವರ್ಷದಲ್ಲಿ  ಮೈಸೂರಿನಲ್ಲಿ ಜನಿಸಿದರು.  ಕೃಷ್ಣಯ್ಯನವರ ತಂದೆ  ಹುಚ್ಚಯ್ಯನವರು ಮತ್ತು ತಾಯಿ ಕೆಂಪಮ್ಮನವರು.  ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ ಮತ್ತು ಎಂ. ಎ. ಪದವಿಗಳನ್ನು ಪಡೆದ ಕೃಷ್ಣಯ್ಯನವರು ಪ್ರಾಧ್ಯಾಪಕರಾಗಿ ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. 

ಕೃಷ್ಣಯ್ಯನವರು ಬರಹಗಾರರು, ಸಂಗೀತಗಾರರು, ಶಿಲ್ಪಿಗಳು, ಕಲಾವಿದರೊಂದಿಗೆ ಬೆರೆತು ಅವರ ಬದುಕನ್ನು ಅರಿತು, ಅವನ್ನು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿರುವುದು ಅವರ ಮಹತ್ವದ ಕೊಡುಗೆಗಳೆನಿಸಿವೆ.  ಪ್ರಸಿದ್ಧ ವಿದ್ವಾಂಸರೂ, ಶಿಸ್ತಿನ ಪ್ರವಚನಕಾರರೂ ಆದ ಕೃಷ್ಣಯ್ಯನವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.  ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್. ಎಮ್. ಹಡಪದ್, ರೂಪಶಿಲ್ಪಿ ಬಸವಯ್ಯ, ಶ್ರಂಗಾರ ಲಹರಿಕಲಾ ದರ್ಶನರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಮುಂತಾದ ಬರಹಗಳು  ಹಾಗೂ ಕುವೆಂಪು ಸಾಹಿತ್ಯ : ಚಿತ್ರ ಸಂಪುಟದಂತಹ ಸಂಪಾದನೆಗಳು ಈ ಕೃತಿಗಳಲ್ಲಿ ಸೇರಿವೆ.  ಅವರ 'ಕಲಾ ದರ್ಶನ' ಕೃತಿ ಕನ್ನಡ ನಾಡಿನಲ್ಲಿ ಗೌರವಾನ್ವಿತ ಸಂಪುಟವೆನಿಸಿವೆ.  ಇತ್ತೀಚೆಗೆ ಉದಯ  ಭಾನು  ಕಲಾ ಸಂಘವು ತನ್ನ  ಸುವರ್ಣ ಮಹೋತ್ಸವ  ಸಂದರ್ಭದಲ್ಲಿ  ಹೊರತಂದ  ಸುಮಾರು  3000 ಪುಟಗಳ ‘ಬೆಂಗಳೂರು ದರ್ಶನ’  ಬೃಹತ್  ಸಂಪುಟಗಳ  ಸಂಪಾದಕರಾಗಿ ಸಹಾ ಅವರು  ತಮ್ಮ  ಮಹತ್ವದ  ಕೊಡುಗೆಯನ್ನು  ನೀಡಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ  ಸಾಹಿತ್ಯ ಅಕಾಡೆಮಿ, ತಂಜಾವೂರಿನಲ್ಲಿ ಕೇಂದ್ರ ಹೊಂದಿರುವ ದಕ್ಷಿಣ ಭಾಗೀಯ ಸಾಂಸ್ಕೃತಿಕ ಕೇಂದ್ರ, ಉದಯಭಾನು ಕಲಾ ಸಂಘ,  ಮುಂತಾದೆಡೆಗಳಲ್ಲಿ ಅವರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದಾರೆ.  ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ ಒಳಗೊಂಡಂತೆ ಹಲವು ರೀತಿಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಪ್ರೊ. ಕೃಷ್ಣಯ್ಯನವರು ತಮ್ಮ ಕಾರ್ಯದಕ್ಷತೆ, ಸರಳ, ಸಜ್ಜನಿಕೆಗಳಿಗೆ ಹೆಸರಾಗಿದ್ದಾರೆ. 

ಕೃಷ್ಣಯ್ಯನವರ ಶೃಂಗಾರ ಲಹರಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಹಂಪಿ  ವಿಶ್ವವಿದ್ಯಾಲಯವು  ‘ನಾಡೋಜ’ ಪ್ರಶಸ್ತಿಯಿತ್ತು  ಸಂಮಾನಿಸಿದೆ.  ಮಾಸ್ತಿ ಪ್ರಶಸ್ತಿ ಅವರಿಗೆ ಸಂದ ಮತ್ತೊಂದು ವಿಶಿಷ್ಟ ಹಿರಿಮೆ. 


ಈ ಮಹಾನ್ ವಿದ್ವಾಂಸರಾದ ಪ್ರೊ. ಎಂ. ಎಚ್. ಕೃಷ್ಣಯ್ಯನವರಿಗೆ ಗೌರವಪೂರ್ಣವಾದ ಹುಟ್ಟು ಹಬ್ಬದ ಶುಭ ಹಾರೈಕೆಗಳು.

Tag: M. H. Krishnaiah

ಕಾಮೆಂಟ್‌ಗಳಿಲ್ಲ: