ಬುಧವಾರ, ಆಗಸ್ಟ್ 28, 2013

ಗೀತಾ ಕುಲಕರ್ಣಿ

ಗೀತಾ ಕುಲಕರ್ಣಿ

ಧೈರ್ಯ, ನೇರ ಮಾತುಗಾರಿಕೆ, ಎಂತಹ ಸಂದರ್ಭದಲ್ಲೂ ಎದೆಗುಂದದೆ ನಿಭಾಯಿಸುವ ಛಾತಿಯ ಗುಣದ ಕತೆ-ಕಾದಂಬರಿಕಾರ್ತಿ ಗೀತಾ ಕುಲಕರ್ಣಿಯವರು ಮುಂಬಯಿಯಲ್ಲಿ ಜುಲೈ 4,  1927ರಂದು ಜನಿಸಿದರು. ತಂದೆ ಬಾಂಬೆ ಸರ್ಜಿಕಲ್ಸ್‌ ಕಂಪನಿಯ ಸಂಸ್ಥಾಪಕರಾಗಿದ್ದ ಕೆ. ಟಿ. ಆಳ್ವ. ತಾಯಿ ಕಮಲ ಆಶ್ವ. ತಂದೆ ತಾಯಿಗಳು ಇಟ್ಟ ಹೆಸರು ಅಹಲ್ಯಾ.  ದಕ್ಷಿಣ ಕನ್ನಡ  ಜಿಲ್ಲೆಯ ಮಂಗಳೂರು ತಾಲ್ಲೂಕಿನ ಪಾವೂರು ಇವರ ವಂಶಸ್ಥರ ಸ್ಥಳ. ಮನೆಮಾತು ತುಳು.

ಗೀತಾ ಕುಲಕರ್ಣಿ ಅವರು ಓದಿದ್ದು ಮಂಗಳೂರಿನ ಬೆಸೆಂಟ್‌ ನ್ಯಾಷನಲ್‌ ಹೈಸ್ಕೂಲು, ಉಡಪಿಯ ಕ್ರಿಶ್ಚಿಯನ್‌ ಹೈಸ್ಕೂಲುಗಳಲ್ಲಿ ಎಸ್‌.ಎಸ್‌.ಎಲ್‌.ಸಿ.ವರೆಗೆ. ಶಿವರಾಮ ಕಾರಂತರ ಪುತ್ತೂರಿನ ಬಾಲಭವನದಲ್ಲಿ ಸುಮಾರು 8 ವರ್ಷಗಳ ಕಲಿಕೆ. ಶಾಲೆಯಲ್ಲಿ ಕಲಿತದ್ದಕ್ಕಿಂತ ಜೀವನದ ಪಾಠಶಾಲೆಯಲ್ಲಿ ಕಲಿತದ್ದೇ ಹೆಚ್ಚು.  ಅಕ್ಕ ಲೀಲಾ, ಶಿವರಾಮಕಾರಂತರ ಪತ್ನಿ. ಕಾರಂತರ ಬಳಿ ಭಾವನೆಂಬ ಭಾವಕ್ಕಿಂತ ಗುರುವಿನ ಭಕ್ತಿ. ಕಾರಂತರ ಮುಖಾಂತರವೇ ಧಾರವಾಡದ ಶೇಷಗಿರಿರಾವ್‌ ಕುಲಕರ್ಣಿಯವರನ್ನು ಮದುವೆಯಾದರು. ಕಾರಂತರ ಮದುವೆಯಂತೆಯೇ ಇವರ ಮದುವೆಯ ವಿಚಾರವೂ ಹಲವರ ಟೀಕೆಗೆ ಗುರಿಯಾಗಿತ್ತು.

ಶೇಷಗಿರಿ ಕುಲಕರ್ಣಿಯವರು ಠಾಕೂರರ ಶಾಂತಿನಿಕೇತನದಲ್ಲಿ ಅಧ್ಯಯನ ಮಾಡಿಬಂದಿದ್ದ ಆದರ್ಶ ವ್ಯಕ್ತಿ, ಕವಿ, ಕಾದಂಬರಿಕಾರರಾಗಿ ನವೋದಯದ ಸಂದರ್ಭದಲ್ಲಿ ಮಹತ್ತರ ಪಾತ್ರ ವಹಿಸಿದವರು. ಧಾರವಾಡದ ಗೆಳೆಯರ ಗುಂಪಿನ ಸದಸ್ಯರಲ್ಲೊಬ್ಬರಾಗಿ ಇವರು ಬರೆದಿರುವ ಆತ್ಮಕಥೆ  ನಾನುಕಂಡ ಗೆಳೆಯರ ಗುಂಪುಒಂದು ಅದ್ವಿತೀಯ ಆತ್ಮಕಥನ.

ಕುಲಕರ್ಣಿಯವರನ್ನು ಮದುವೆಯಾದ ನಂತರ ಗೀತಾ ಅವರು  ನೆಲೆ ನಿಂತದ್ದು ಧಾರವಾಡದಲ್ಲಿ. ಧಾರವಾಡದ ರಜತಗಿರಿ ಬಡಾವಣೆಯಲ್ಲಿದ್ದ  ರಾಜಹಂಸಮನೆಯಲ್ಲಿ ರಾಣಿಯಂತೆ ಬದುಕಿದರು. ಸುಂದರವಾದ ಮನೆಯಲ್ಲಿ ಎಲ್ಲವೂ ಒಪ್ಪು- ಓರಣ.  ಮೊದಲಭೇಟಿಯಲ್ಲಿಯೆ ಪರಿಚಿತರಿರಲಿ, ಅಪರಿಚಿತರಿರಲಿ ಬಹುಕಾಲದಿಂದ ಪರಿಚಿತರಂತೆ ವರ್ತಿಸುತ್ತಾ, ಗಡಿಬಿಡಿಮಾಡುತ್ತಾ, ಉಲ್ಲಾಸದಿಂದ ಎಲ್ಲರೊಡನೆ ಬೆರೆಯುತ್ತಾ ನೋಡಿದವರಿಗೆ ಕೊಂಚ ವಿಚಿತ್ರ ಎನ್ನಿಸಬಹುದಾದಷ್ಟು ಸಲಿಗೆಯಿಂದ ವಿಶ್ವಾಸದಿಂದ, ಅಂತಃಕರಣ ತುಂಬಿ ಆದರಿಸುವ ವಿಶಿಷ್ಟಗುಣದ ವ್ಯಕ್ತಿತ್ವ.

ಧಾರವಾಡದಲ್ಲಿ ನೆಲೆನಿಂತ ನಂತರ ಶೇಷಗಿರಿರಾವ್‌ ಕುಲಕರ್ಣಿಯವರ ಮುಖಾಂತರ ಪರಿಚಿತರಾದವರೆಂದರೆ ದ.ಬಾ. ಕುಲಕರ್ಣಿ (ಪ್ರಬಂಧಕಾರರು-ಮನೋಹರ ಗ್ರಂಥಭಂಡಾರದ ಮಾಲೀಕರು). ಕತೆಗಾರ್ತಿ ಕೊಡಗಿನ ಗೌರಮ್ಮನವರು ತೀರಿಕೊಂಡಾಗ, ದ.ಬಾ. ಕುಲಕರ್ಣಿಯವರು ಬರೆದ ಹೃದಯಸ್ಪರ್ಶಿ ಲೇಖನ ನಾ ಕಂಡ ಗೌರಮ್ಮಲೇಖನ ಓದಿ ಪ್ರಭಾವಿತರಾದರು. ದ.ಬಾ. ರವರು ಒಮ್ಮೆ, ಗೌರಮ್ಮನಂತೆ ನೀನೂ ಏಕೆ ಕಥೆ ಬರೆಯಬಾರದು ಎಂದು ಹೇಳಿದ ನಂತರವೇ ಇವರ ಬರವಣಿಗೆಗೆ ಒಂದು ರೀತಿಯ ಚಾಲನೆ ದೊರೆಯಿತು.  ಗೀತಾ ಅವರು  ಬರೆದ ಮೊದಲ ಕಥೆ ಅಂದು-ಇಂದು’  ದ.ಬಾ. ಕುಲಕರ್ಣಿಯವರು ಸಂಪಾದಿಸಿರುವ ಆರತಿಎಂಬ ಕಥಾ ಸಂಗ್ರಹದಲ್ಲಿದೆ.

ಸಣ್ಣ ಕತೆಗಳ ಮುಖಾಂತರ ಸಾಹಿತ್ಯ ರಚನೆಯನ್ನು ಪ್ರಾರಮಭಿಸಿದ ಗೀತಾ ಕುಲಕರ್ಣಿಯವರು ಹಲವಾರು ಕಾದಂಬರಿಗಳು, ಮಕ್ಕಳ ಸಾಹಿತ್ಯ, ವ್ಯಕ್ತಿಚಿತ್ರ, ಪ್ರವಾಸ ಸಾಹಿತ್ಯ, ವಿಡಂಬನೆ ಎಲ್ಲವೂ ಸೇರಿ ಸುಮಾರು 25 ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಸುವರ್ಣೆಯ  ಗ್ರೀನ್‌ ರೂಂಕತೆ ಪ್ರಕಟವಾದ ನಂತರ ಸಾಕಷ್ಟು ಹೆಸರು ತಂದುಕೊಟ್ಟಿದಾದರೂ ನ್ಯಾಯಾಲಯದ ಕಟ್ಟೆಯನ್ನು ಹತ್ತ ಬೇಕಾಯಿತು. ಆದರೆ ಅವರು  ಇದಕ್ಕೆ ಅಧೀರರಾಗಲ್ಲಿಲ್ಲ. ಕೆಚ್ಚು ಇನ್ನೂ ಹೆಚ್ಚಿತು. ಬೆಳಗ್ಗೆ ಕೋರ್ಟಿನ ಕಟಕಟೆಯಲ್ಲಿ ನಿಂತು ಸಂಜೆ ಸಭೆ ಸಮಾರಂಭಗಳಲ್ಲಿ ಸನ್ಮಾನಿತಳಾದಾಗ ಇಂತಹ ವೈರುಧ್ಯಗಳಿಂದ ಬದುಕಿನಲ್ಲಿ ಕಲಿತ ಪಾಠ ಅಪಾರ. ಮೃದುತ್ವವನ್ನು ಮರೆಮಾಡಿದ ಕಾಠಿಣ್ಯ, ಸಂಕೋಚವನ್ನು ಹೊಡೆದೋಡಿಸಿದ ನಿರ್ಭಿಡೆ, ಮಿಥ್ಯಕ್ಕೆ ಅಂಜಿ ಸತ್ಯಕ್ಕೆ ತಲೆಬಾಗುವ ಗುಣಗಳು ಮನೆಮಾಡಿಕೊಂಡು ವ್ಯಕ್ತಿತ್ವಕ್ಕೆ ಹೊಸರೂಪ ನೀಡಿದುವು.

ಹೀಗೆ ಇವರು ಬರೆದ ಹಲವಾರು ಕಥೆಗಳು ತೇಲಿಹೋದ ಮೋಡ, ಮೌನಸಂಧಾನ, ಸುವರ್ಣೆಯ ಗ್ರೀನ್‌ ರೂಂ, ಚಿಪ್ಪಿನೊಳಗಿನ ಮುತ್ತು, ಪಾತಾಳ, ಕಾಡುಗುಲಾಬಿ, ಅಪ್ಪಗೆ ಬರೆಯಬೇಕು ಮುಂತಾದ ಸಂಕಲನಗಳಲ್ಲಿ ಸೇರಿವೆ.  ಕಾದಂಬರಿ ಕಂಬನಿ ಒರೆಸಿದ ಕೈಸುಧಾ ವಾರಪತ್ರಿಕೆಯಲ್ಲಿ, ‘ಗರ್ಭಕಾದಂಬರಿಯು ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಜನಪ್ರಿಯ ಕಾದಂಬರಿಗಳೆನಿಸಿಕೊಂಡವು. ಇತರ ಕಾದಂಬರಿಗಳೆಂದರೆ ಸ್ವಪ್ನಮಂದಿರ, ಶೋಭನ, ದೀಪಮಿಂಚಿತು, ಸಂಬಂಧ, ನೂಲಏಣಿ ಮುಂತಾದವುಗಳು.

ಒಂದು ವಿಡಂಬನಾ ಕೃತಿ ಹುರಿಗಾಳುಮತ್ತು ನಾಟಕ ಸಂಕಲನ ಮೂರು ನಾಟಕಗಳುಅಲ್ಲದೆ ಮಕ್ಕಳ ಸಾಹಿತ್ಯದಲ್ಲೂ ಗೀತಾ ಕುಲಕರ್ಣಿಯವರು  ಸಾಕಷ್ಟು ಕೃಷಿ ಮಾಡಿದ್ದು ಹೂಮನೆ, ನೇಜಿಗುಬ್ಬಚ್ಚಿ, ಹಾರುವ ಕಂಬಳಿ, ಅರವತ್ನಾಲ್ಕು ವಿದ್ಯೆ, ಏಳು ಕನ್ನಿಕೆಯರು, ತುಳುಜಾನಪದ ಕಥೆಗಳು, ಇನ್ನಷ್ಟು ತುಳು ಜಾನಪದ ಕಥೆಗಳು ಮುಂತಾದವುಗಳು  ಈ ನಿಟ್ಟಿನಲ್ಲಿ  ಪ್ರಮುಖ ಪ್ರಕಟಣೆಗಳಾಗಿವೆ.

ಕಲ್ಲುಗಳು ಎಂಬ ನಾಟಕವು ಪತ್ಥರ್ಎಂಬ ಹೆಸರಿನಿಂದ ಹಿಂದಿಗೆ ಅನುವಾದಗೊಂಡಿದೆ. ಚಿಪ್ಪಿನೊಳಗಿನ ಮುತ್ತು ಸೀಂಪ್‌ ಕಾ ಮೋತಿಎಂಬ ಹೆಸರಿನಿಂದ ದೆಹಲಿಯ ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿದೆ.  ಇವರು ರಚಿಸಿದ ವ್ಯಕ್ತಿಚಿತ್ರಗಳೆಂದರೆ ತಿಮ್ಮಪ್ಪನಾಯಕ, ಮಹರ್ಷಿ ಕರ್ವೆ, ಸರೋಜಿನಿನಾಯ್ಡು (ಅನುವಾದ) ಮತ್ತು ಆಣಿ ಮುತ್ತುಗಳು. ಮಲೇಷಿಯ ಪ್ರವಾಸಮಾಡಿ ಬಂದ ನಂತರ ಬರೆದ ಪ್ರವಾಸ ಕಥನ ಹಚ್ಚ ಹಸಿರಿನ ಮಲೇಷಿಯಾ’.

ಕಂಬನಿ ಒರೆಸಿದ ಕೈಕಾದಂಬರಿಯು ಬಿ.ಎಸ್ಸಿ, ಬಿ.ಕಾಂ. ತರಗತಿಗಳಿಗೆ, ‘ಸಂಬಂಧಕಾದಂಬರಿಯು ಬಿ.ಎ. ತರಗತಿಗಳಿಗೆ, ‘ದೀಪ ಮಿಂಚಿತುಕಾದಂಬರಿಯು ಪಿ.ಯು. ತರಗತಿಗಳಿಗೆ, ಮೌನಸಂಧಾನ ಕಥಾ ಸಂಕಲನವು ಬಿ.ಎ. ತರಗತಿಗಳಿಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು.

ಗೀತಾ ಕುಲಕರ್ಣಿಯವರ ಸಮಗ್ರ ಸಾಹಿತ್ಯ ಕುರಿತು ಪ್ರೊ. ಶಾಂತಾ ಇಮ್ರಾಪೂರ ಅವರ ಮಾರ್ಗದರ್ಶನದಲ್ಲಿ ಸರೋಜಿನಿ ಜಾಧವ್‌ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಪಡೆದಿದ್ದಾರೆ.  ಸಾರ್ವಜನಿಕ ಕ್ಷೇತ್ರದಲ್ಲಿಯೂ ಕ್ರಿಯಾಶೀಲರಾಗಿದ್ದ ಗೀತಾ ಕುಲಕರ್ಣಿಯವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆಯಾಗಿ, ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿಗ್ರಂಥಾಲಯದ ಸಗಟು ಪುಸ್ತಕ ಖರೀದಿ ಸಮಿತಿಯ ಸದಸ್ಯರಾಗಿ, ಕೇಂದ್ರಸಾಹಿತ್ಯ ಅಕಾಡಮಿ ಕನ್ನಡ ಸಲಹಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

1976ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಬಹು ಮಹತ್ವದ ಹಿರಿಯ ಸಾಹಿತಿಗಳಾದ ಕುವೆಂಪು ಹಾಗೂ ಮಾಸ್ತಿಯವರೊಡನೆ ಪಡೆದದ್ದೇ ನನ್ನ ಬದುಕಿನ ಭಾಗ್ಯ ಎಂದು ಸಂಭ್ರಮಿಸಿದ್ದರು. ಕಾರಂತರಿಂದ ನೃತ್ಯ, ಅಭಿನಯ, ಸಂಗೀತಗಳಲ್ಲಿ ಪರಿಣತಿ ಪಡೆದಂತೆ ಅಡಿಗೆ, ಅಲಂಕರಣ, ತೋಟಗಾರಿಕೆಯಲ್ಲಿಯೂ ಸಮಾನ ಆಸಕ್ತರಾಗಿದ್ದ ನೇರಮಾತಿನ, ದಿಟ್ಟಸ್ವಭಾವದ, ಅನಿಸಿದ್ದನ್ನು ನಿಸ್ಸಂಕೋಚವಾಗಿ ತಿಳಿಸುವ ಸ್ವಭಾವದ ಗೀತಾಕುಲಕರ್ಣಿಯವರು ಸಾಹಿತ್ಯ ಲೋಕದಿಂದ ಕಣ್ಮರೆಯಾದದ್ದು 1986ರ ಮೇ 25ರಂದು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಫೋಟೋ ಕೃಪೆ: www.kamat.com
ಮಾಹಿತಿ  ಕೃಪೆ:  ಕಣಜ

Tag: Geetha Kulakarni, Gita Kulkarni

ಕಾಮೆಂಟ್‌ಗಳಿಲ್ಲ: