ಶನಿವಾರ, ಆಗಸ್ಟ್ 31, 2013

ಡಾ. ನಳಿನಿ ಮೂರ್ತಿ

ಡಾ. ನಳಿನಿ ಮೂರ್ತಿ

ವಿಜ್ಞಾನ ಸಂಶೋಧಕಿ, ಸಂವಹನ ತಂತ್ರಜ್ಞೆ, ಕನ್ನಡದ ಬರಹಗಾರ್ತಿ, ಕಲೋಪಾಸಕಿ ಡಾ. ನಳಿನಿಮೂರ್ತಿಯವರು  ಫೆಬ್ರುವರಿ 24, 1937ರಂದು ಚಿತ್ರದುರ್ಗದಲ್ಲಿ ಜನಿಸಿದರು. ತಂದೆ ಎಂ.ಆರ್. ಸೀತಾರಾಮ್, ವಿದ್ಯುತ್ ಇಲಾಖೆಯಲ್ಲಿ ಇಂಜಿನಿಯರ್  ಆಗಿದ್ದರು. ತಾಯಿ ಅನ್ನಪೂರ್ಣ.  ನಳಿನಿ ಅವರ ಪ್ರಾರಂಭಿಕ ವಿದ್ಯಾಭ್ಯಾಸ ಶಿಂಷಾದಲ್ಲಿ ನೆರವೇರಿತು.  ಗಣಿತದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮರಾಗಿ ಪದವಿಯನ್ನು ಗಳಿಸಿದ ನಳಿನಿಮೂರ್ತಿಯವರು ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೇರಿ ಎಲೆಕ್ಟ್ರಿಕಲ್ ಕಮ್ಯೂನಿಕೇಶನ್ ಓದಿದರು.  ಜೊತೆಗೆ ಇಂಡಿಯನ್ ಸರ್ವೀಸ್ ಪರೀಕ್ಷೆಯಲ್ಲೂ ತೇರ್ಗಡೆಯಾದರು.

ಪತಿ ಎಸ್ ನರಸಿಂಹಮೂರ್ತಿಯವರೊಡನೆ ಜರ್ಮನಿಗೆ ಪಯಣಿಸಿದ ನಳಿನಿ ಮೂರ್ತಿಯವರು ಇಂಗ್ಲೆಂಡಿನ ಮ್ಯಾಂಚೆಸ್ಟರಿನಲ್ಲಿ ಎಂಟೆಕ್ ಪದವಿ ಪಡೆದರು.  ನಂತರ ವಾಪಸ್ಸಾಗಿ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ ಸಂಶೋಧನಾ ಕಾರ್ಯಕ್ಕಿಳಿದರು.  ಇಷ್ಟಾದರೂ ಇನ್ನೂ ಸಾಧಿಸಬೇಕೆಂಬ ತುಡಿತ ಅವರಲ್ಲಿ ನಿರಂತರವಾಗಿ  ತುಂಬಿತ್ತು.  ಪುನಃ ವಿದೇಶ ಪ್ರವಾಸ ಕೈಗೊಂಡು 1967ರ ವರ್ಷದಲ್ಲಿ ಕೆನಡಾದ ಪ್ರಮುಖ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪಿ.ಎಚ್.ಡಿ ಪದವಿ ಗಳಿಸಿದರು. 

ವಿದೇಶದಲ್ಲಿ ನೆಲೆಸಿದ್ದರೂ, ತಮ್ಮ ಅಪಾರ ಶೈಕ್ಷಣಿಕ ಮತ್ತು ವೈಜ್ಞಾನಿಕ  ಸಂಶೋಧನೆಗಳ ಮಧ್ಯದಲ್ಲಿಯೂ ಡಾ. ನಳಿನಿಮೂರ್ತಿಯವರು ಕನ್ನಡಕ್ಕೆ ಅಪೂರ್ವ ಕಥೆ, ಕಾದಂಬರಿಗಳನ್ನು ನೀಡಿದರು.  ಇವುಗಳಲ್ಲಿ ಬಿಸಿಲು ಮಳೆ, ಬೀಸಿ ಬಂದ ಬಿರುಗಾಳಿ, ಹೊಸಬಾಳು, ಮಕ್ಕಳಿಗಾಗಿ ಗಣಕದ ಕಥೆ, ಗಣಕ ಎಂದರೇನು, ಕಿರು ಕಾದಂಬರಿ ಬಂಗಾರದ ಜಿಂಕೆ, ಊರ್ಮಿಳಾ, ಪ್ರತಿಜ್ಞೆ ಪ್ರಮುಖವಾದವು.  ಡಾ. ನಳಿನಿಮೂರ್ತಿಯವರು ತಮ್ಮ ಪತಿ ನರಸಿಂಹಮೂರ್ತಿಯವರ ಜೊತೆಗೂಡಿ ಬರೆದಿದ್ದ ಸಾಹಿತ್ಯ, ವಿಜ್ಞಾನ ಲೇಖನಗಳು ಸಾಹಿತ್ಯ ವಿಜ್ಞಾನಎಂಬ ಕೃತಿರೂಪವಾಗಿ  ಪ್ರಕಟಗೊಂಡಿದೆ.

ಇಷ್ಟೆಲ್ಲವನ್ನೂ ತಮ್ಮ ಕಿರುಬಾಳಿನಲ್ಲೇ ಸಾಧಿಸಿದ ಡಾ. ನಳಿನಿಮೂರ್ತಿಯವರು ತಮ್ಮ ಐವತ್ತೈದನೆಯ ವಯಸ್ಸಿನಲ್ಲಿ (ಅಕ್ಟೋಬರ್ 20, 1992ರ ವರ್ಷದಲ್ಲಿ) ಕೆನಡಾದಲ್ಲಿ ನಿಧನರಾದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಆಧಾರ: ಕಣಜ

Tag: Dr. Nalini Murthy

ಕಾಮೆಂಟ್‌ಗಳಿಲ್ಲ: