ಭಾನುವಾರ, ಸೆಪ್ಟೆಂಬರ್ 1, 2013

ಸ್ವಾಮಿಯೇ ಶರಣಂ ಅಯ್ಯಪ್ಪ: ಅಯ್ಯಪ್ಪನ ಆರಾಧನೆಯ ಅಂತರಂಗಸ್ವಾಮಿಯೇ ಶರಣಂ ಅಯ್ಯಪ್ಪ: ಅಯ್ಯಪ್ಪನ ಆರಾಧನೆಯ ಅಂತರಂಗ
-ಗುರುರಾಜ ಪೋಶೆಟ್ಟಿಹಳ್ಳಿ

ಆಧುನಿಕ ಕಾಲದ ಧಾರ್ಮಿಕ ವಲಯದಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿಸಿದ್ದು ಅಯ್ಯಪ್ಪ ಪಂಥ. ಪ್ರತಿ ವರ್ಷ ನವೆಂಬರ್ ಎರಡನೇ ವಾರದಿಂದ ಎರಡು ತಿಂಗಳ ಕಾಲ ದೇಶದ ಎಲ್ಲೆಡೆಯಲ್ಲೂ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಅಯ್ಯಪ್ಪ ನವಾಕ್ಷರಿ ಮಂತ್ರ ಮುಗಿಲು ಮುಟ್ಟುತ್ತದೆ.

ಯಾರು ಈ ಅಯ್ಯಪ್ಪ?

ಕಲಿಯುಗ ವರದನ್, ಧರ್ಮಶಾಸ್ತ, ಭೂತನಾಥನ್, ತಾರಕಬ್ರಹ್ಮ, ಮಣಿಕಂಠ ಮೊದಲಾದ ಹೆಸರುಗಳಿಂದ ಈತ ಪ್ರಸಿದ್ಧಿ. ಅಯ್ಯಪ್ಪ ಎನ್ನುವ ಉಲ್ಲೇಖ ಪುರಾಣಗಳ ಪುಟಗಳಲ್ಲಿ ಇಲ್ಲವಾದರೂ ಅಲ್ಲಿ ಬರುವ ಹರಿಹರ ಪುತ್ರನೇ ಅಯ್ಯಪ್ಪ ಎಂಬ ಪ್ರತೀತಿ ಇದೆ.

ಸಂಸ್ಕೃತದ ಗೌರವ ಸೂಚಕ ಆರ್ಯಪುತ್ರ ಎಂಬ ಶಬ್ದವೇ ಆಡುಭಾಷೆಯಲ್ಲಿ ಅಯ್ಯಪ್ಪನಾಗಿರಬೇಕು. ವಿಷ್ಣು ಮಾಯೆಯಿಂದ ಮೋಹಿನಿಯಲ್ಲಿ ಶಿವಾಂಶದಿಂದ ಜನಿಸಿದ ಶಾಸ್ತಾರನನ್ನು ಸಾಕ್ಷಾತ್ ತಾರಕ ಬ್ರಹ್ಮನನ್ನಾಗಿ ಕಲ್ಪಿಸಿ ಮಹಿಷಿ ಮರ್ದನ ಮಾಡಿ, ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯೇ ಈತನ ಅವತಾರದ ರಹಸ್ಯ.

ಪರಶುರಾಮ ಕ್ಷೇತ್ರವೆನಿಸಿದ ಕೇರಳದ ಶಬರಿಮಲೆಯಲ್ಲಿ ದುರ್ಗಮ ಅರಣ್ಯದ ನಡುವೆ ಪಾಂಡಲಮ್ ರಾಜ ರಾಜಶೇಖರ ನಿರ್ಮಿಸಿದ ಗುಡಿಯೊಂದರಲ್ಲಿ ಪಂಚಲೋಹದ ಚಿನ್ಮುದ್ರೆಯ ಅಯ್ಯಪ್ಪ ವಿಗ್ರಹ ಕಂಗೊಳಿಸುತ್ತದೆ. ಅಭಯಹಸ್ತ, ಮಂದಹಾಸದ ಮುಖಾರವಿಂದ, ವಿಗ್ರಹದ ಸುತ್ತ ದಿವ್ಯಜ್ಯೋತಿಯ ಪ್ರಭಾವಳಿ, ದರ್ಶನ ಮಾತ್ರದಿಂದ ದಟ್ಟ ಅರಣ್ಯದ ಕಲ್ಲುಮುಳ್ಳು ದಾರಿಯ ಕಠಿಣ ಶ್ರಮವನ್ನೆಲ್ಲ ಇಂಗಿಸಿ ಕೋಟಿ ಭಕ್ತರ ಹೃದಯಕ್ಕೆ ಸಿಂಚನ ನೀಡುವ ಲೋಹ ಚುಂಬಕ ವ್ಯಕ್ತಿತ್ವ ಈ ಅಯ್ಯಪ್ಪನದು.

ಶಬರಿಮಲೆ ಶ್ರೇಷ್ಠತ್ವ

ಪುಣ್ಯ ಸ್ಥಳಗಳಲ್ಲಿ ಏಳು ಅರ್ಹತೆಗಳಿದ್ದರೆ ಬಹಳ ಜಾಗೃತ ಸ್ಥಳವೆಂದು ವೇದವಾಕ್ಕು ಇದೆ. ಅವುಗಳಲ್ಲಿ ಒಂದಾದರೂ ಇರಲೇಬೇಕು. ಸ್ವಯಂ ಸೃಷ್ಟಿಯ ಅಥವಾ ಭಗವಂತನ ಜ್ಯೋತಿರ್ಲಿಂಗವಾಗಿರಬೇಕು. ಅಥವಾ ಮಹಾಯಾಗ ನಡೆದ ಜಾಗವಾಗಿರಬೇಕು. ಭಕ್ತಿ ಮಾರ್ಗದಲ್ಲಿ ಧರ್ಮಯುದ್ಧ ನಡೆದ ಸ್ಥಳವಾಗಿರಬೇಕು.  ಮುನಿಪುಂಗವರ ತಪೋಭೂಮಿಯಾಗಿರಬೇಕು. ಯೋಗಿಗಳು ವಾಸಿಸಿದ ಸ್ಥಳವಾಗಿರಬೇಕು. ದೇವತೆಗಳಿಂದ ಶ್ರೇಷ್ಠತೆ ಪಡೆದ ಭೂಮಿ ನದಿಗಳ ಸಂಗಮ ಸ್ಥಾನವಾಗಿರಬೇಕು.

ಈ ಮೇಲಿನ 7ರಲ್ಲಿ ಒಂದಿದ್ದರೆ ಅದು ತೀರ್ಥ ಕ್ಷೇತ್ರವಾಗುತ್ತೆ. ಇಂತಹ ಸ್ಥಳಕ್ಕೆ ಯಾತ್ರೆ ಮಾಡುವುದು, ದರ್ಶನ ಮಾಡುವುದೂ ಜೀವಾತ್ಮನ ಎಲ್ಲಾ ಪಾಪಗಳನ್ನು ಭಸ್ಮ ಮಾಡುತ್ತದೆ. ಕೋಟಿ ಪುಣ್ಯ ಬರುತ್ತದೆ. ಶನಿಗ್ರಹದ ತೊಂದರೆ ಇದ್ದರೆ ಅದೂ ಸಹ ಬಿಡುಗಡೆಯಾಗುತ್ತದೆ. ಪರಶುರಾಮ ಕ್ಷೇತ್ರವೆನಿಸಿದ ಶಬರಿಮಲೆಯ ವಿಶಿಷ್ಟತೆ ಹೇಳತೀರದು.

ಹರಿತತ್ವ ಎಂಬುದು ಸ್ತ್ರೀತತ್ವ ಅಥವಾ ಪ್ರಕೃತಿ ತತ್ವವಾಗುತ್ತದೆ. ಹಾಗೇ ಹರತತ್ವ ಎನ್ನುವುದು ಪುರುಷ ತತ್ವ ಅಥವಾ ಕಾರಣ ತತ್ವವಾಗುತ್ತದೆ ಎಂಬುದರ ಹಿನ್ನೆಲೆಯಲ್ಲಿ ಅಯ್ಯಪ್ಪನ ಕಲ್ಪನೆಯಲ್ಲಿ ಸಮಷ್ಟಿ ಚಿತ್ರಣ ಇರುವುದನ್ನು ನಾವು ಗಮನಿಸಬಹುದು.

ಇರುಮುಡಿ: ವೈಜ್ಞಾನಿಕ ಹಿನ್ನೆಲೆ

ಅಯ್ಯಪ್ಪ ವ್ರತಧಾರಿಗಳ ಒಂದು ಅವಿಭಾಜ್ಯ ಅಂಗ. ಈ ಗಂಟಿನಲ್ಲಿ ಎರಡು ಭಾಗಗಳಿರುತ್ತದೆ. ಒಂದು ಭಾಗದಲ್ಲಿ ಪೂಜಾ ದ್ರವ್ಯಗಳು ಮತ್ತೊಂದರಲ್ಲಿ ಯಾತ್ರೆಗೆ ಆವಶ್ಯಕವಾದ ಸಾಮಗ್ರಿಗಳು. ಇದು ಭಕ್ತನೊಬ್ಬನ ಅಧ್ಯಾತ್ಮಿಕ ಮತ್ತು ಭೌತಿಕ ಘಟಕಗಳ ಸಂಕೇತ.

ಮನುಷ್ಯನ ದೈಹಿಕ ಮತ್ತು ಮಾನಸಿಕ ವರ್ತನೆಗಳು ವ್ಯಕ್ತಿಯ ಮೆದುಳನ್ನೇ ಅವಲಂಬಿಸಿರುತ್ತದೆ. ಅದರಲ್ಲಿರುವ ಸೆರೆಬ್ಲಮ್ ಮತ್ತು ಸೆರೆಬ್ರಲ್ ಕೋಟೆಕ್ಸ್ ಎಂಬುದು ಮೆದುಳಿನಲ್ಲಿರುವ ಎರಡು ವ್ಯವಸ್ಥೆ.

ಇರುಮುಡಿ ಕಟ್ಟಿ ಅದನ್ನು ತಲೆಯ ಮೇಲಿಟ್ಟುಕೊಳ್ಳುವ ವಿಧಾನದಿಂದ ಇವೆರಡು ಗ್ರಂಥಿಯು ಸರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ.

ಒಂದು ಗಂಟಲ್ಲಿ ಅಕ್ಕಿ ಬರುವಂತೆ ಮಾಡಿ ಅದನ್ನು ತಲೆಯ ಮೇಲೆ ಇಡಲಾಗುತ್ತದೆ. ಇನ್ನೊಂದು ಗಂಟಲ್ಲಿ  ಕಾಯಿ ಬರುವಂತೆ ಮಾಡಿ ಅದನ್ನು ತಲೆಯಿಂದ ಭುಜದ ಮೇಲೆ ಇಳಿ ಬಿಡುವಂತೆ ಕಟ್ಟಲಾಗುತ್ತದೆ. ಒಂದು ಗ್ರಂಥಿಯು ಮನುಷ್ಯನ ಅಧ್ಯಾತ್ಮಿಕ ಹಾಗೂ ಮಾನಸಿಕ ಭಾವನೆಯನ್ನು ಸಮತೋಲನದಲ್ಲಿರುವಂತೆ ಮಾಡುತ್ತದೆ. ತುಂಬಾ ದಿನಗಳವರೆಗೆ ಯಾತ್ರೆಯಲ್ಲೇ ಇರುವುದರಿಂದ ಸರಿಯಾದ ಆಹಾರ ಸಿಗದೇ ಇರುವುದರಿಂದ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ.   ಈ ರೀತಿಯಲ್ಲಿ ಇರುಮುಡಿ ಕಟ್ಟುವ ವಿಧಾನದಲ್ಲೂ ಆರೋಗ್ಯ ಕಾಪಾಡಿಕೊಳ್ಳುವ ಗುಟ್ಟು ಆ ಕಾಲದಲ್ಲೇ ತಿಳಿದಿದ್ದರು ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ.

ಇರುಮುಡಿಯಲ್ಲಿ ಏನೇನು ಇರುತ್ತದೆ

ಇರುಮುಡಿ ಎಂದರೆ ಹೆಸರೇ ಹೇಳುವಂತೆ ಎರಡು ಮುಡಿ ಎಂದರ್ಥ. ಮುಂದಿನ ಭಾಗದಲ್ಲಿ ತುಪ್ಪದ ಕಾಯಿ ಇರುತ್ತದೆ. ಭೂಮಿಯಲ್ಲಿ ಸಿಗುವ ಎಲ್ಲಕ್ಕಿಂತ ಶುದ್ಧವಾದದ್ದು ತೆಂಗಿನಕಾಯಿ. ಅದು ಶುದ್ಧತೆಯ ಸಂಕೇತ. ಅದಲ್ಲಿರುವ ಹಳೆಯದನ್ನು ತೆಗೆದು ಹಾಕಿ ಹೊಸದಾಗಿ ತುಪ್ಪವನ್ನು ತುಂಬಿಸಲಾಗುತ್ತದೆ. ನಮ್ಮ ಮನಸ್ಸಿನಲ್ಲಿರುವ ಹಳೆಯದನ್ನೆಲ್ಲಾ ತೆಗೆದು ಹೊಸತನ್ನು ತುಂಬುವ ಪ್ರತೀಕ.

ಮುಂದಿನ ಭಾಗದಲ್ಲಿ ಬೆಲ್ಲ, ಮೆಣಸು, ಅರಿಶಿನವೂ ಇರುತ್ತದೆ. ಎಲ್ಲಾ ವಸ್ತುಗಳು ಅಲ್ಲಿನ ಎಲ್ಲಾ ಕಾರ್ಯಕ್ಕೂ  ಉಪಯುಕ್ತವಾಗುತ್ತದೆ. ಅರಿಶಿನ ಮಾಳಿಗಪುರಂ ದೇವಿಗೆ ಅರ್ಪಿಸಲಾಗುತ್ತದೆ. ಮೆಣಸು ಎರುಮೇಲಿಗೆ ಸೇರಿದರೆ, ಬೆಲ್ಲವನ್ನು ಪಾಯಸ ಹಾಗೂ ಅಯ್ಯಪ್ಪನ ನೈವೇದ್ಯಕ್ಕೆ ಬಳಸಿಕೊಳ್ಳುತ್ತಾರೆ.

ಹಿಂದೆಲ್ಲ ಇರುಮುಡಿಯನ್ನು ಅಡಿಕೆ ಹಾಳೆಯಲ್ಲಿ ಕಟ್ಟುತ್ತಿದ್ದರು. ಈಗ ಇದರಲ್ಲೂ ಹೊಸತನ ಬಂದಿದೆ. ಇರುಮುಡಿ ಶಬರಿಮಲೆಯ ಸಂಪ್ರದಾಯ. ಈ ರೀತಿ ಸಂಪ್ರದಾಯ ಇನ್ಯಾವ ದೇವಸ್ಥಾನದಲ್ಲೂ ಕಂಡು ಬರುವುದಿಲ್ಲ.

ದೀಕ್ಷಾವಸ್ತ್ರ

ಪ್ರಪಂಚದ ಸೃಷ್ಟಿಯ ಐದು ಮೂಲಗಳಲ್ಲಿ ಗುಣ, ರೂಪ, ಭಾವ, ಕ್ರಿಯೆ ಹಾಗೂ ಬಣ್ಣ ಮುಖ್ಯವಾದುದು. ಪ್ರತಿ ಸೃಷ್ಟಿಯ (ರೂಪ) ಗುಣಗಳು ಅದರ ಬಣ್ಣಕ್ಕೆ ಅನುಗುಣವಾಗಿರುತ್ತದೆ. ಬಣ್ಣಗಳಲ್ಲಿ ಮೂಲಬಣ್ಣಗಳು ಶ್ವೇತ (ಆಕಾಶ), ಹಳದಿ (ವಾಯು), ಕೆಂಪು (ಅಗ್ನಿ), ನೀಲಿ (ಜಲ) ಮತ್ತು ಹಸಿರು (ಪ್ರಕೃತಿ). ಇವೆಲ್ಲಕ್ಕಿಂತ ಮುಖ್ಯವಾದುದು ಕಪ್ಪು. ಏಕೆಂದರೆ ಬ್ರಹ್ಮಾಂಡದ ಬಣ್ಣ ಕಪ್ಪು. ಹಾಗೆ ಕೃಷ್ಣನ ಹಾಗೂ ಕಾಳಿಮಾತೆಯ ಬಣ್ಣವೂ ಕಪ್ಪು. ವ್ರತಧಾರಿಗಳು ಕಪ್ಪು, ನೀಲಿ, ಢಕೇಸರಿ (ಕಾವಿ) ಬಣ್ಣದ ಪಂಚೆಯನ್ನು ತೊಡಬೇಕು.

ಬಾಹ್ಯವಾದ ಈ ವಸ್ತ್ರ ಸ್ವಾಮಿಗಳ ಆಂತರಿಕ ಭಾವನೆಗಳ ಪ್ರತೀಕ. ಕಪ್ಪು, ಸಾವು ನೋವುಗಳ ಸಂಕೇತ. ಪ್ರಪಂಚದ ಆಸೆ ಆಮಿಷಗಳಿಗೆ ಅಯ್ಯಪ್ಪ ವ್ರತಧಾರಿ ಜೀವಂತನಲ್ಲ. ಅದನ್ನೆಲ್ಲ ತ್ಯಾಗ ಮಾಡಿ ಅವುಗಳ ಪಾಲಿಗೆ ಈತ ಸತ್ತಂತೆ ಎಂಬುದು ಶೋಕಸೂಚಕವಾದ ಈ ಕಪ್ಪು ವಸ್ತ್ರದ ಸಂದೇಶ. ಸರ್ವ ವ್ಯಾಪಕವಾದ ಆಕಾಶದ ಬಣ್ಣ. ಇದು ಭಗವಂತನ ಸರ್ವ ವ್ಯಾಪಕತೆಯ ಸಂಕೇತ. ಕಾವಿ ಬಣ್ಣ ತ್ಯಾಗದ ಪ್ರತೀಕ. ಎಲ್ಲವನ್ನೂ ಸುಟ್ಟು ಬಿಡುತ್ತದೆ. ತ್ಯಾಗದಿಂದ ಅಮೃತತ್ವ ಪ್ರಾಪ್ತಿ ಆನಂದದ ಲಾಭ.

ಶಬರಿಮಲೆ ಹೆಸರು ಬಂದಿದ್ದು ಹೇಗೆ..?

ರಾಮಾಯಣದಲ್ಲಿ ಶ್ರೀರಾಮನ ಭಕ್ತಳಾದ ಶಬರಿ ವನವಾಸಕ್ಕೆ ಬಂದಿದ್ದ ರಾಮನ ದರ್ಶನ ಪಡೆಯಬೇಕು ಎಂದು ನಿರ್ಧರಿಸಿದ್ದಳು. ಬೆಟ್ಟ ಸುತ್ತಿ ಬರುವ ರಾಮನ ದಣಿವಿಗೆ ಬುಟ್ಟಿಯ ತುಂಬಾ ಬೋರೆಹಣ್ಣನ್ನು ಇಟ್ಟುಕೊಂಡು ಕಾಯುತ್ತಿರಲು ಸೀತೆಯ ಅನ್ವೇಷಣೆಯಲ್ಲಿ ದುಃಖಿತನಾದ ರಾಮನನ್ನು ಆದರಪೂರ್ವಕವಾಗಿ ತನ್ನ ಕುಟೀರಕ್ಕೆ ಬರ ಮಾಡಿಕೊಂಡು ಧನ್ಯತೆಯನ್ನು ಅನುಭವಿಸಿದಳು.

ರಾಮನ ಅತಿಥಿ ಸತ್ಕಾರಕ್ಕೆ ಬೋರೆಹಣ್ಣನ್ನು ಕಚ್ಚಿ ಸಿಹಿ ಇದೆಯೇ ಎಂದು ಪರೀಕ್ಷಿಸಿ ಒಳ್ಳೆಯ ಹಣ್ಣನ್ನು ಕೊಡುತ್ತಿದ್ದಳು. ಈ ರೀತಿಯ ಕಲ್ಮಶವಿರದ ಭಕ್ತಿಯಿಂದ ಇಳಿವಯಸ್ಸಿನಲ್ಲೂ ಆ ದಟ್ಟ ಅರಣ್ಯದಲ್ಲಿಯೇ ಕುಳಿತು ಕಾಯುತ್ತಿದ್ದಳು. ಹಾಗಾಗಿ ಆ ಬೆಟ್ಟಕ್ಕೆ ಶಬರಿಮಲೆ ಎಂಬ ಹೆಸರು ಬಂತು.

ಪವಿತ್ರ ಹದಿನೆಂಟು ಮೆಟ್ಟಿಲು

ವಿಶ್ವದ ಕ್ಷೇತ್ರಾರಾಧನೆಗಳಲ್ಲಿ ಸುಂದರವಾದ ಚಿಂತನಾರೂಪ ಪವಿತ್ರ ಹದಿನೆಂಟು ಮೆಟ್ಟಿಲು. ಸುತ್ತ ಇರುವ ಹದಿನೆಂಟು ಬೆಟ್ಟಗಳನ್ನೂ ಪ್ರತಿನಿಧಿಸುತ್ತದೆ. ನೂರಾ ಎಂಟರಲ್ಲಿರುವ ಶೂನ್ಯವನ್ನು ತೆಗೆದರೆ ಮತ್ತು ಎಂಟು ಹತ್ತಿರವಾಗುತ್ತದೆ. ಜೀವಾತ್ಮ ಮತ್ತು ಪರಮಾತ್ಮಗಳು ಸುಲಭವಾಗಿ ಕೂಡುತ್ತದೆ.

ಮೊದಲ ಐದು ಮೆಟ್ಟಿಲುಗಳು ಪಂಚೇಂದ್ರಿಯಗಳನ್ನು, ಅನಂತರ ಎಂಟು ಮೆಟ್ಟಿಲು ಅಷ್ಟರಾಗಗಳು (ಕಾಮ, ಕ್ರೋಧ, ಮದ, ಮೋಹ, ಮಾತ್ಸರ್ಯ, ಲೋಭ, ಅಸೂಯೆ, ಡಂಭ) ಪ್ರತಿನಿಧಿಸುತ್ತದೆ. ಅನಂತರದ ಮೂರು ಮೆಟ್ಟಿಲುಗಳು ಮೂರು ಗುಣಗಳನ್ನು (ಸತ್ವ, ರಜಸ್ಸು, , ತಮಸ್ಸು) ಸೂಚಿಸುತ್ತದೆ. ಕೊನೆಯ ಎರಡು ಮೆಟ್ಟಿಲುಗಳು ವಿದ್ಯೆ ಮತ್ತು ಅವಿದ್ಯೆಯ ಸಂಕೇತ. ಈ ಹದಿನೆಂಟು ಮೆಟ್ಟಿಲುಗಳನ್ನು ಹತ್ತುವುದರಿಂದ ಪ್ರಾಪಂಚಿಕ ಬಂಧಗಳನ್ನು ಕಳಚಿಕೊಂಡು ಸರ್ವಶಕ್ತನಾದ ಸೃಷ್ಟಿಕರ್ತನಿಗೆ ಹತ್ತಿರವಾಗುತ್ತೇವೆ ಎಂಬ ನಂಬಿಕೆ ಇದೆ.

ದೇಶ ವಿದೇಶಗಳಿಂದ ಕೋಟಿ ಕೋಟಿ ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ಶಬರಿಮಲೆಯ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯದ ಸಂಕೇತ. ವ್ರತಧಾರಿಗಳ ಮಾನಸಿಕ ಕಲ್ಮಶಗಳನ್ನೆಲ್ಲ ದಹಿಸಿ, ಅವರನ್ನು ಪುನೀತರನ್ನಾಗಿಸುವ ಮಹಾಮಹಿಮ ಆತ.


ಕೃಪೆ: ಕನ್ನಡಪ್ರಭ

Tag: Swamiye Sharanam Ayyappa, Swami Sharanam Ayyappa

ಕಾಮೆಂಟ್‌ಗಳಿಲ್ಲ: