ಶುಕ್ರವಾರ, ಆಗಸ್ಟ್ 30, 2013

ಬುಲೆಟ್ ಪ್ರಕಾಶ್


ಬುಲೆಟ್ ಪ್ರಕಾಶ್

ಏಪ್ರಿಲ್ 2ರಂದು  ಕನ್ನಡದ ಜನಪ್ರಿಯ ಹಾಸ್ಯನಟರಾದ ಬುಲ್ಲೆಟ್ ಪ್ರಕಾಶ್ ಹುಟ್ಟಿದ ಹಬ್ಬ ಅಂತ ಸಿನಿಮಾ ಪತ್ರಿಕೆಯಲ್ಲಿ ಓದಿದ್ದ ನೆನಪು.    ಬುಲ್ಲೆಟ್ ಪ್ರಕಾಶರ ಹಲವಾರು ಹಾಸ್ಯದ ತುಣುಕುಗಳನ್ನು ನೋಡಿ ನಾವೆಲ್ಲಾ ನಕ್ಕಿದ್ದೇವೆ.  ರಂಗಾಯಣ ರಘು ಜೊತೆ ನಿರ್ಮಾಣ, ನಿರ್ದೇಶನ ಕೂಡಾ ಮಾಡಿದ ಈ ಹುಡುಗನ ಕನ್ನಡ ಕ್ರಿಯಾಶೀಲತೆ ಮೆಚ್ಚುವಂತದ್ದು. 

ಮೊದಲು ‘ಎ. ಕೆ. 47’ ಚಿತ್ರದಲ್ಲಿ ಖಳರಾಗಿ ಬಂದ ಬುಲೆಟ್ ಪ್ರಕಾಶ್ ಮುಂದಿನ ದಿನಗಳಲ್ಲಿ ಹಾಸ್ಯನಟರಾಗಿ ಜನಪ್ರಿಯರಾಗಿದ್ದಾರೆ.  ಅವರು ನಟಿಸಿದ ಚಿತ್ರಗಳ ಸಂಖ್ಯೆ ಸುಮಾರು 300ರ ಸಮೀಪದ್ದು.  ಕನ್ನಡವಲ್ಲದೆ ಕೆಲವೊಮ್ಮೆ ಹೊರ ಭಾಷಾ ಚಿತ್ರಗಳಲ್ಲೂ ನಟಿಸಿ ಬಂದಿದ್ದಾರೆ.   ಕೋಮಲ್, ಕೋಕಿಲ, ಬುಲೆಟ್, ಟೆನ್ನಿಸ್, ಮಂಡ್ಯ, ಶರಣ್  ಇಂಥಹ ಹುಡುಗರ ಹಾಸ್ಯ ಕನ್ನಡಿಗರನ್ನು ಇನ್ನೂ ಚಲನಚಿತ್ರಗಳತ್ತ ಕಣ್ಣುಹಾಯಿಸುವಲ್ಲಿ ಸಾಕಷ್ಟು ಪ್ರೇರಕವಾಗಿವೆ. ಸಾಕಷ್ಟು  ಈ ಕಷ್ಟಪಟ್ಟು ದುಡಿಯುವ ಹುಡುಗರಿಗೆ ನಾವು ಬೆನ್ನು ತಟ್ಟಲೇ ಬೇಕು.

ಇಂದಿನ ದಿನದ ಹಲವಾರು ಚಿತ್ರಗಳಲ್ಲಿ ಕಾಣಬರುವ ಈ ಹಾಸ್ಯನಟರಿಗೆ ತಾವೂ ನಾಯಕನಟರಾಗಬೇಕೆಂಬ ಹಂಬಲ, ಅದಕ್ಕಾಗಿ ತಾವೂ ನಿರ್ಮಾಣಮಾಡುವ ಹಂಬಲಗಳು ಕಾಣಬರುತ್ತಿವೆ.  ಬುಲೆಟ್ ಪ್ರಕಾಶ್ ಅವರೂ  ‘ಪರಾರಿ’ ಎಂಬ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ‘ಐತಲಕ್ಕಡಿ’ ಅಂತಹ ಚಿತ್ರದ ನಿರ್ಮಾಣದಲ್ಲೂ ಭಾಗವಹಿಸಿದ್ದಿದೆ. ಬುಲೆಟ್ ಪ್ರಕಾಶ್ ಚುನಾವಣಾ ರಂಗದಲ್ಲಿ ಕೂಡಾ ಕೆಲಕಾಲ ಚಾಲ್ತಿಯಲ್ಲಿದ್ದರು. ರಾಜಕೀಯ ಮತ್ತು ಚಿತ್ರನಿರ್ಮಾಣದ ಪ್ರಯತ್ನಗಳು ಅವರಿಗೆ ಲಾಭಕ್ಕಿಂತ ಕೈಕಚ್ಚಿದ್ದೇ ಹೆಚ್ಚು.  ಆದರೂ ರಾಜಕೀಯದಲ್ಲಿ ಮಿನುಗಬೇಕೆಂಬ ಕನಸು ಅವರಲ್ಲಿ ಇನ್ನೂ ಇದೆಯಂತೆ. 


‘ಗಾತ್ರವೂ ಆನೆಯಂತೆ, ಬದುಕು ಆನೆಯಂತೆ’ ಎಂದು ತಮ್ಮ ಬದುಕನ್ನು ವಿಶ್ಲೇಷಿಸಿಕೊಳ್ಳುವ  ಬುಲೆಟ್ ಪ್ರಕಾಶ್ ತಮ್ಮ ಮೇಲಿನ ವಿಡಂಬನೆಯನ್ನು ನಗುನಗುತ್ತಾ ಸ್ವೀಕರಿಸಿದವರು.  ಸೈಕಲ್ ಮೇಲೆ ಶೂಟಿಂಗಿಗೆ ಬರುತ್ತಿದ್ದ ಈತನನ್ನು ಗೆಳೆಯರು ಬುಲೆಟ್ ಪ್ರಕಾಶ್ ಎಂದರು.  ಅದೇ ಆತನ ಹೆಸರಾಯಿತು.  ತನ್ನ ಅಂತರಂಗವನ್ನೆಲ್ಲಾ ತನ್ನ ದೊಡ್ಡ ದೇಹದಲ್ಲಿ ಬಚ್ಚಿಟ್ಟುಕೊಂಡು ಪ್ರೇಕ್ಷಕರಿಗೆ ನಗೆ ನೀಡುವ  ಬುಲ್ಲೆಟ್ ಪ್ರಕಾಶ್ ಅವರಿಗೆ ಎಲ್ಲಾ ತೆರನಾದ ಸಂತೋಷ, ಯಶಸ್ಸು ಸಿಗಲಿ.

Tag: Bullet Prakash

ಕಾಮೆಂಟ್‌ಗಳಿಲ್ಲ: