ಗುರುವಾರ, ಆಗಸ್ಟ್ 29, 2013

ಶೆರ್ಲಾಕ್ ಹೋಮ್ಸ್ ಸೃಷ್ಟಿಕರ್ತ ಕೊನನ್ ಡೋಯ್ಲ್‌

ಶೆರ್ಲಾಕ್ ಹೋಮ್ಸ್ ಸೃಷ್ಟಿಕರ್ತ ಕೊನನ್ ಡೋಯ್ಲ್‌

‘ಶೆರ್ಲಾಕ್ ಹೋಮ್ಸ್’ ಪತ್ತೇದಾರಿ ಕಥೆ ಕಾದಂಬರಿಗಳ ಕುರಿತು ಕೇಳದವರೇ ಇಲ್ಲ.  ಇದರ ಕರ್ತೃ ಸರ್ ಆರ್ಥರ್ ಇಗ್ನಾಷಿಯಸ್ ಕೊನನ್ ಡೋಯ್ಲ್‌.  ವೃತ್ತಿಯಿಂದ ವೈದ್ಯರಾದ ಕೊನನ್ ಡೋಯ್ಲ್‌ ಮೇ 22, 1859ರಂದು ಸ್ಕಾಟ್ಲೆಂಡಿನಲ್ಲಿ  ಜನಿಸಿದರು.  ಕಾಲ್ಪನಿಕ ಕಥೆಗಳು ಮತ್ತು ಪ್ರೊಫೆಸರ್ ಚಾಲೆಂಜರ್ಸ್ ಸಾಹಸಕಥೆಗಳಲ್ಲಿ ಮೂಡಿಬರುವ ರೋಚಕ ನಿರೂಪಣೆಗಳಿಗಾಗಿ ಕೊನನ್ ಡೋಯ್ಲ್‌ ವಿಶ್ವವಿಖ್ಯಾತರಾಗಿದ್ದಾರೆ.  ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದ ಅವರು ರೋಗಿಗಳ ಶುಶ್ರೂಷೆ ಮಾಡಿದ್ದಕ್ಕಿಂತ ಕಥೆ ಬರೆದದ್ದೇ ಹೆಚ್ಚು.

ಕೊನನ್ ಡೋಯ್ಲ್‌ ಅವರಿಗಿದ್ದ ಕಥಾ ವಿಶ್ಲೇಷಣಾ ಚತುರತೆ, ತರ್ಕ ತೀಕ್ಷ್ಣತೆ ಮತ್ತು ವೈಜ್ಞಾನಿಕ ತಳಹದಿಯ ಮಾನಸಿಕ ಅನ್ವೇಷಕ ಪ್ರವೃತ್ತಿಗಳು ಅವರ ಕೃತಿಗಳಲ್ಲಿ ಕೌತುಕಗುಣವನ್ನು ಅಪರಿಮಿತವಾಗಿ ತುಂಬಿದವು.     ಅವರ A Study in Scarlet,  The Sign of the Four, The Hound of the Baskervilles,  The Valley of Fear  ಮುಂತಾದ ಕಾದಂಬರಿಗಳು ಹಲವಾರು ಪತ್ರಿಕೆಗಳಲಿ ಧಾರಾವಾಹಿಗಳಾಗಿ ಪ್ರಕಟಗೊಂಡು ಪ್ರಖ್ಯಾತವಾಗಿದ್ದವು.  ಅವರ ಕಥೆಗಳು The Adventures of Sherlock Holmes, The Memoirs of Sherlock Holmes,   The Return of Sherlock Holmes, The Reminiscences of Sherlock Holmes, The Case-Book of Sherlock Holmes ಮುಂತಾದ ಕಥಾಸಂಕಲನಗಳಲ್ಲಿ ಪ್ರಕಟಗೊಂಡಿವೆ.  ಅವರ ಕಥೆಗಳು ರಂಗ ಮತ್ತು ಚಿತ್ರಪ್ರದರ್ಶನಗಳಿಗೆ ಕೂಡಾ ಅಳವಡಿಕೆಗೊಂಡಿವೆ.  ಅವರ ಒಟ್ಟು ಪ್ರಕಟಿತ  ಗ್ರಂಥಗಳ ಸಂಖ್ಯೆ 57.

ಕೊನನ್ ಡೋಯ್ಲ್‌ 1930ರ ವರ್ಷದಲ್ಲಿ ನಿಧನರಾದರು.  ವಿಶ್ವದಾದ್ಯಂತ ಮೂಡಿಬಂದ ಪತ್ತೇದಾರಿ ಕಥೆಗಳಿಗೆ ಪ್ರೇರಕವಾಗಿ ಅವರ ಹೆಸರು ಶಾಶ್ವತವಾಗಿ ಉಳಿದಿವೆ.

Tag: Sherlock Holmes, Conon Doyle

ಕಾಮೆಂಟ್‌ಗಳಿಲ್ಲ: