ಭಾನುವಾರ, ಸೆಪ್ಟೆಂಬರ್ 1, 2013

ಶತಾಯುಷಿ ಮಹಾನ್ ಕಲಾವಿದ ಏಣಗಿ ಬಾಳಪ್ಪ

ಶತಾಯುಷಿ ಮಹಾನ್ ಕಲಾವಿದ ಏಣಗಿ ಬಾಳಪ್ಪ

ಧೋ ಎಂದು ಒಂದೆ ಸಮನೇ ಸುರಿದ ಮಳೆ ಅದೇ ತಾನೇ ನಿಂತಿತ್ತು. ಊರ ಮುಂದಿನ ಕಾಲುವೆ ಭರ್ತಿ ತುಂಬಿ ಹರಿಯುತ್ತಿತ್ತು. ಅದೇ ವೇಳೆ ಐದಾರು ವರ್ಷದ ಮಗುವೊಂದು ಬೈಲಹೊಂಗಲ ಸಂತೆಗೆ ಹೋಗಿದ್ದ ತನ್ನ ತಾಯಿ ಬರುವ ದಾರಿಕಾಯುತ್ತ ಪುಟ್ಟ ಹೆಜ್ಜೆ ಹಾಕುತ್ತಾ ಜಾರಿ ಪಕ್ಕದ ಕಾಲುವೆಗೆ ಬಿದ್ದು ತೇಲಿ ಹೊರಟಿತ್ತು. ಆ ಬಾಲಕ ಕೊಚ್ಚಿ ಹೋಗುವುದನ್ನು ಕಂಡ ಜನ ಆತನನ್ನು ಸಾಹಸಪಟ್ಟು ಕಾಪಾಡಿದರು. ನಂತರ ಏ ಬಾಳಪ್ಪ ನೀನು ನೂರುವರ್ಷ ಕಾಲ ಬಾಳಪ್ಪ ಎಂದು ಹರಸಿದರು.

ಅಂದು ಸಾವಿನೊಡನೆ ಸೆಣಸಿ ಬಂದ ಬಾಲಕ ಊರಿನ ಜನರ ಹರಕೆಯಂತೆ ನೂರುವರ್ಷ ಬಾಳುವುದಷ್ಟೇ ಅಲ್ಲ ನೂರಾರು ಕಾಲ ಬಾಳುವಂತೆ ಕೀರ್ತಿಶೇಷನಾದ. ನಟ ಸಾಮ್ರಾಟನಾದ. ತನ್ನ ಹೆಸರಿನೊಂದಿಗೆ ಹುಟ್ಟೂರಿನ ಕೀರ್ತಿಯನ್ನೂ, ರಂಗಭೂಮಿಯನ್ನೂ ಬೆಳಗಿಸಿ ಇದೀಗ ಶತಾಯುಷಿಯಾಗಿರುವ ಏಣಗಿ ಬಾಳಪ್ಪನವರದು ನಿಜವಾಗಿಯೂ ಸಾರ್ಥಕ ಬಾಳು.  ಏಣಗಿ ಬಾಳಪ್ಪ ಅವರು ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ ಸಂಪೂರ್ಣ ರಂಗಕರ್ಮಿ, ರಂಗಭಂಡಾರಿ.  ಆಗಸ್ಟ್ 31 ಅವರ ಜನ್ಮದಿನ.  ಅವರಿಗೀಗ 100 ವರ್ಷ.  ನಮ್ಮ ನಡುವೆ ಓಡಾಡಿಕೊಂಡಿರುವ ಈ ಅಭಿನವ ಬಸವಣ್ಣ ನಮ್ಮ ಸಾಂಸ್ಕೃತಿಕ ಲೋಕದ ಶತಮಾನದ ಸಡಗರವೂ ಹೌದು. 

ಬೆಂಕಿಯಲ್ಲಿ ಅರಳಿದ ಬದುಕು ಬಾಳಪ್ಪನವರದು. ತುಟಿ ಬಿಚ್ಚಿ ಅಮ್ಮಾ ಎನ್ನುವ ಮೊದಲೇ ಅಪ್ಪನ ಸಾವು. ಲೋಕಜ್ಞಾನ ಬರುವ ಮೊದಲೇ ಒಡಹುಟ್ಟಿದ ಅಣ್ಣ-ಅಕ್ಕನ ಸಾವು. ಕಿತ್ತು ತಿನ್ನುವ ಬಡತನ, ತಾಯಿ ಮತ್ತು ತಾನು ಇಬ್ಬರೂ ಕೂಡಿ ದುಡಿದರೂ ಒಬ್ಬರ ಕೂಲಿ ಕೊಡಲು ನಿರಾಕರಿಸಿದ ಸಾಹುಕಾರ. ಅರೆಹೊಟ್ಟೆಯಲ್ಲೇ ದಿನದೂಡಿ, ಸಮಸ್ಯೆಗಳನ್ನು ಮೆಟ್ಟಿ ನಿಂತು ರಂಗಕ್ಷೇತ್ರದಲ್ಲಿ ಪರ್ವತದೆತ್ತರಕ್ಕೆ ಬೆಳೆದು ನಿಂತ ಬಾಳಪ್ಪ 'ನಾಟ್ಯಭೂಷಣ'ರಾದರು.

ಒಂದು ಶತಮಾನ ಕಾಲದ ರಂಗಭೂಮಿಯ ಏರಿಳಿತಗಳಿಗೆ ಸಾಕ್ಷಿಯಾಗಿರುವ ಬಾಳಪ್ಪನವರ ಬದುಕಿನ ಪುಟ ತಿರುವಿದಷ್ಟು ಸಾಧಕರಿಗೆ ಸ್ಫೂರ್ತಿಯ ಸೆಲೆ ಸಿಕ್ಕುತ್ತವೆ.

ಆಕಸ್ಮಿಕವಾಗಿ ರಂಗ ಏರಿದ ಬಾಳಪ್ಪನವರಿಗೆ ಕಲೆಯ ಹಿನ್ನೆಲೆಯೇನೂ ಇರಲಿಲ್ಲ. ಮಧುರವಾಗಿದ್ದ ಅವರ ಧ್ವನಿ ನಿಧಾನವಾಗಿ ಈ ಜಾಡು ಹಿಡಿಯುವಂತೆ ಮಾಡಿತು. ಭಜನಾ ಪದಗಳು, ಶಾಲಾ ಪದ್ಯಗಳನ್ನು ಹಾಡುತ್ತಿದ್ದರು. ಅವರ ಹಾಡು ಊರಿನಲ್ಲಿ ನಾಟಕವಾಡುತ್ತಿದ್ದ ಯುವಕರ ಮನಸೆಳೆದದ್ದೇ ತಡ; ತಾವಾಡುತ್ತಿದ್ದ 'ಮಾರ್ಕಂಡೇಯ' ಮತ್ತು 'ಲವಕುಶ' ಬಯಲಾಟದಲ್ಲಿ ಬಾಳಪ್ಪನಿಗೆ ಬಾಲಕನ ಪಾತ್ರ ಕೊಟ್ಟರು. ಸರಿ ಅಂದು ಅಂಟಿದ ಬಣ್ಣದ ನಂಟು.   8ನೇ ವಯಸ್ಸಿನಲ್ಲೇ ಗರುಡ ಸದಾಶಿವರಾಯರ 'ಪಾದುಕಾ ಪಟ್ಟಾಭಿಷೇಕ' ನಾಟಕದಲ್ಲಿ ಭರತನ ಪಾತ್ರ ದೊರಕಿಸಿತು. ಅದು ಪ್ರಸಿದ್ಧಯೂ ಆಯಿತು. ಒಳ್ಳೆಯ ಗುರುಗಳನ್ನು ದೊರಕಿಸಿತು. 12ನೇ ವಯಸ್ಸಿಗೆ ನಟನೆಯಲ್ಲಿ ಪ್ರಬುದ್ಧತೆ ಪಡೆದು 25ನೇ ವಯಸ್ಸಿಗೇ ಸ್ವಂತ ನಾಟಕ ಕಂಪನಿ ಕಟ್ಟಿದ ಈ ಧೀಮಂತ ಕಲಾವಿದ,  1930 ರಿಂದ ಆರಂಭಿಸಿದ ರಂಗಸಂಚಾರದಲ್ಲಿ ನೂರಾರು ಪ್ರದರ್ಶನಗಳು, ಹಲವಾರು ಪಾತ್ರಗಳಲ್ಲಿ ಮಿಂಚಿ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಕಲಾರಸಿಕರ ಮನಸೂರೆಗೊಳ್ಳುತ್ತಾ ಸಾಗಿದ ಹಾದಿಯಲ್ಲಿ 1983ರ ವರೆಗೆ ತಿರುಗಿ ನೋಡಲೇ ಇಲ್ಲ.

'ಕಲಾವೈಭವ ನಾಟ್ಯ ಸಂಘ ಬೆಳಗಾವಿ(ಕರ್ನಾಟಕ)' ಹೆಸರಿನ ಸ್ವಂತ ನಾಟಕ ಕಂಪನಿ ಕಟ್ಟಿದ ಬಾಳಪ್ಪನವರು ನವ್ಯ ಪ್ರಯೋಗಗಳ ಮೂಲಕ ರಂಗಭೂಮಿಗೆ ಹೊಸ ಆಯಾಮ ನೀಡಿದರು. ಛೋಟಾ ಗಂಧರ್ವರ ಜತೆಗೆ ಕಲಾ ಪ್ರದರ್ಶನದ ಅವಕಾಶ ಪಡೆದರು. ಬಣ್ಣದ ಬದುಕಿನಲ್ಲಿ ಅನೇಕ ಕಷ್ಟ-ನಷ್ಟ, ಸ್ತುತಿ-ನಿಂದೆಗಳನ್ನು ಜೀರ್ಣಿಸಿಕೊಂಡರು. ನಂಬಿದವರಿಂದಲೇ ಅಪವಾದ, ಆರೋಪಕ್ಕೊಳಗಾದರು. ಆದರೂ ಬೆಸರಿಸಿಕೊಳ್ಳದೇ ರಂಗಭೂಮಿಯಲ್ಲಿ ಅಪಾರ ಎತ್ತರಕ್ಕೇರಿದರು.

ಈ ಎತ್ತರಕ್ಕೇರಲು ಪ್ರೋತ್ಸಾಹಿಸಿದ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳನ್ನು ಮನಸಾರೆ ಸ್ಮರಿಸುತ್ತಾರೆ. ಒಮ್ಮ ಅವರ ಕಂಪನಿ ನಿಂತಾಗ ಸಂಭಾವನೆ ನೀಡಲಾಗದ್ದಕ್ಕೆ ಅನ್ನ ಮಾಡುವ ತಪೇಲಿ ಕೊಟ್ಟರು. ಅದು ಮುಂದೆ ಅಕ್ಷಯಪಾತ್ರೆಯಾಯಿತು ಎಂದು ನೆನಪಿಸಿಕೊಳ್ಳುತ್ತಾರೆ.

ಮೂರು ಮದುವೆ

ತಾಂತ್ರಿಕವಾಗಿ ಬಾಳಪ್ಪನವರದ್ದು ಮೂರು ಮದುವೆ. ಒಬ್ಬ ಪತ್ನಿ ಚಿಕ್ಕವರಿರುವಾಗಲೇ ಮೃತಪಟ್ಟಿದ್ದರು. ವಯಸ್ಸಿಗೆ ಬಂದಾಗ ಸಾವಿತ್ರಮ್ಮನ ಜತೆಗೆ ಸಪ್ತಪದಿ ತುಳಿದರು. ಮುಂದೆ ಲಕ್ಷ್ಮೀಬಾಯಿಯವರನ್ನು ಮನೆ ತುಂಬಿಸಿಕೊಂಡರು. ಒಟ್ಟು 9 ಮಕ್ಕಳು, ಮೊಮ್ಮಕ್ಕಳು-ಮರಿಮಕ್ಕಳು ಒಳಗೊಂಡ ತುಂಬು ಪರಿವಾರ ಅವರದ್ದು. ಪತ್ನಿ ಸಾವಿತ್ರಮ್ಮ ಮತ್ತು ಇತ್ತೀಚೆಗೆ ಮಗ ನಟರಾಜನನ್ನು ಕಳೆದುಕೊಂಡ ನೋವು ಇದೆ ಎನ್ನುತ್ತಾರೆ.

ನಿಗರ್ವಿ ವ್ಯಕ್ತಿತ್ವ

ಬಾಳಪ್ಪನವರನ್ನು ಕಡುಬಡತನ ಕಿತ್ತು ತಿಂದಂತೆ ಸುಖದ ಸುಪತ್ತಿಗೆಯ ಅನುಭವವೂ ಆಗಿದೆ. ಆದರೆ ಒಂದಿಷ್ಟೂ ಗರ್ವವನ್ನು ಹತ್ತಿರ ಸುಳಿಯಗೊಂಡದ ಅವರು ರಂಗದ ಗುಂಗಿನಲ್ಲಿ ಸಂಸಾರಿಕ ಕರ್ತವ್ಯ ಮರೆತಿರಲಿಲ್ಲ. ತಮಗೆ ಜೀವನವಿಡೀ ಸಾಥ್ ನೀಡಿದ ಇಬ್ಬರು ಪತ್ನಿಯರನ್ನು ಮನದುಂಬಿ ಹರಸುತ್ತಾರೆ. ಸಾವಿತ್ರಮ್ಮ ಆರೋಗ್ಯ, ಆಸ್ತಿ ಕಾಯ್ದರೆ; ಲಕ್ಷ್ಮೀಬಾಯಿ ಕಲೆಯನ್ನು ಕಂಪನಿಯನ್ನು ಉಳಿಸಿದರು. ತಾಯಿ ಬಾಳಮ್ಮ ಇದಕ್ಕೆ ಬೆನ್ನೆಲುಬಾಗಿ ನಿಂತರು. ಹೀಗಾಗಿ ಬಾಳಪ್ಪ ಬದುಕಿದ ಎನ್ನುತ್ತಾರೆ.

ಪಾಲುದಾರನೊಮ್ಮೆ ಇವರನ್ನು ಕಂಪನಿಯಿಂದ ಹೊರಹಾಕಲು ಸಂಚು ಮಾಡಿ ಮೂರು ದಿನ ಕೋಣೆಯಲ್ಲಿ ಉಪವಾಸ ಕೂಡಿ ಹಾಕಿದ್ದ ಸಂದರ್ಭದಲ್ಲಿ ಹಾಗೂ ಕಂಪನಿಗೆ ಹಣ ಹೂಡಿದ್ದವರು ಕೊಟ್ಟ ನೋಟಿಸ್‌ನಿಂದ ಕಂಪಿಸಿಹೋದ ಆಪತ್ಕಾಲದಲ್ಲಿ ಸಾವಿತ್ರಮ್ಮ ತೋರಿದ ಧೈರ್ಯ, ತವರಿನ ಆರ್ಥಿಕ ನೆರವು, ಅಂದು ಮಾನಕಾಪಾಡಿದ ಸಂಗಾತಿಯ ಬೆಂಬಲವನ್ನು ಬಹುವಾಗಿ ಸ್ಮರಿಸುತ್ತಾರೆ.

ಹಾಡಬೇಕು ಹೌದೆನ್ನಿಸಿಕೊಳ್ಳಬೇಕೆಂಬ ಹುಚ್ಚು ಹುರುಪು, ಶಬಾಷ್‌ಗಿರಿ-ಒನ್ಸ್‌ ಮೋರ್‌ಗಳ ಒತ್ತಾಸೆಯಲ್ಲೇ ಬದುಕಿನೆಲ್ಲ ನೋವುಗಳನ್ನು ಮರೆತಿದ್ದಾರೆ. ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ಅವರು ನಡೆದಾಡುವ ರಂಗಭೂಮಿಯಾಗಿ ಗೋಚರಿಸುತ್ತಿದ್ದಾರೆ.

1935ರಲ್ಲಿ ಬಾಳಪ್ಪ ಸಾಂಗ್ಲಿಯಲ್ಲಿದ್ದಾಗ ಇವರ ರಂಗಗೀತೆ ಕೇಳಲು ಪ್ರಖ್ಯಾತ ರಂಗಕರ್ಮಿ ದೀನಾನಾಥ ಮಂಗೇಶ್ಕರ ಅವರು ತಮ್ಮ ಮಕ್ಕಳಾದ ಆಶಾ ಹಾಗೂ ಲತಾ ಮಂಗೇಶ್ಕರರನ್ನು ಕರೆದುಕೊಂಡು ಬಂದಿದ್ದರಷ್ಟೇ ಅಲ್ಲ ಬಾಳಪ್ಪನವರ ಕಲೆ ಮೆಚ್ಚಿ ಶ್ಲಾಘಿಸಿದರು. ಜತೆಗೆ ತಾವು ತೆಗೆಯುತ್ತಿದ್ದ ಭಕ್ತ ಪುಂಡಲೀಕ ಸಿನೇಮಾದಲ್ಲಿ ಒಂದು ಪಾತ್ರ ಮಾಡಲು ಆಹ್ವಾನವಿತ್ತರು. ಕಾರಣಾಂತರಗಳಿಂದ ಅದು ನೆರವೇರದೇ ಹೋಯಿತು ಎಂದು ವಿಷಾದಿಸುತ್ತಾರೆ.

ಯಶಸ್ಸಿನ ಶಿಖರಕ್ಕೇರಿದರೂ ಬಾಳಪ್ಪನವರು ನಂಬಿಕೊಂಡಿದ್ದ ಮೌಲ್ಯಗಳನ್ನು ಎಂದೂ ಬಿಟ್ಟು ಕೊಟ್ಟಿರಲಿಲ್ಲ. ಇಳಿ ವಯಸ್ಸಿನಿಂದಾಗಿ ಇನ್ನು ಕಂಪನಿ ನಡೆಸುವುದು ಕಷ್ಟಸಾಧ್ಯವೆನಿಸಿದ ತಕ್ಷಣ 1983ರಲ್ಲಿ ಕಲಾವಿದರಿಗೆ ಕೊಡಬೇಕಾದ್ದನ್ನು ಕೊಟ್ಟು ತಮ್ಮ ನಾಟಕ ಕಂಪನಿಯ ಅಂಕದ ಪರದೆ ಎಳೆದರು. ಅಲ್ಲಿಗೆ ಮಹತ್ವದ ರಂಗ ಅಧ್ಯಾಯವೊಂದು ನೇಪಥ್ಯಕ್ಕೆ ಸರಿಯಿತು.


ಅಭಿನಯ ಬಸವಣ್ಣ

ಅದೇ ಬಸವಣ್ಣನ ನಾಟಕ ಆಡುತ್ತಿದ್ದಾಗ ಒಮ್ಮೆ ಮನೆಯಲ್ಲಿ ಚಿಕ್ಕ ಮಗಳ ಆರೋಗ್ಯ ತೀರಾ ಕಳವಳಕಾರಿಯಾಗಿತ್ತು. ಮನೆಯಿಂದ ಓಡಿ ಬಂದ ವ್ಯಕ್ತಿ ಬಾಳಪ್ಪನವರಿಗೆ ವಿಷಯ ಮುಟ್ಟಿಸಿದರು. ಆದರೆ ನಾಟಕ ಅತ್ಯಂತ ಏರುಸ್ಥಿತಿಯಲ್ಲಿದ್ದುದರಿಂದ ಅರ್ಧಕ್ಕೇ ಬಿಟ್ಟು ಹೋಗುವಂತಿರಲಿಲ್ಲ. ವೇಷಧಾರಿಯಾಗಿಯೇ ರಂಗ ಮಂಚದಲ್ಲಿ ಧ್ಯಾನಾಸಕ್ತರಾದರು. ಮಗಳನ್ನು ಬದುಕಿಸಿಕೊಡು ಎಂದು ದೇವರಲ್ಲಿ ಮೊರೆ ಇಟ್ಟರು. ಇದನ್ನು ಗಮನಿಸಿದ ಸಹ ಕಲಾವಿದರು. ಆಭಾಸವಾಗದಂತೆ ಒಳ ಕರೆದೊಯ್ದರು. ಆಶ್ಚರ್ಯವೆಂದರೆ ಇವರ ಪ್ರಾರ್ಥನೆ ದೇವರಿಗೆ ಸಲ್ಲಿತ್ತು. ಮಗಳು ಚೇತರಿಸಿಕೊಂಡಳು.

ಬಸವೇಶ್ವರ ನಾಟಕ ಆಗಿನ ಮಠಾಧೀಶರ ಚಿಂತನೆಯ ಕಟ್ಟುಪಾಡುಗಳನ್ನೇ ಮುರಿಯಿತು. ಅವರೆಲ್ಲ ತಾವು ಥೇಟರ್‌ಗೆ ಹೋಗಬಾರದು ಎಂದುಕೊಂಡಿದ್ದ ನಿಬಂಧನೆಯಿಂದ ಹೊರ ಬಂದು ನಾಟಕ ನೋಡಿ ಭಾವುಕರಾದರು. ಒಮ್ಮೆ ಧಾರವಾಡ ಜಿಲ್ಲೆಯ ಗುಡ್ಡದ ಮಲ್ಲಾಪುರ ಗ್ರಾಮದ ಜಾತ್ರೆಗೆ ಬಂದಿದ್ದ ಮುರುಘಾಮಠದ ಮೃತ್ಯುಂಜಯ ಸ್ವಾಮಿಗಳು ನಾಟಕ ನೋಡಿದರು. ಅನುಭವ ಮಂಟಪದ ಸನ್ನಿವೇಶ ಸಂದರ್ಭದಲ್ಲಿ ಇರುವಿಕೆಯನ್ನೇ ಮರೆತು ರಂಗಮಂಚಕ್ಕೆ ಸಾಷ್ಟಾಂಗ ನಮಸ್ಕಾರ ಹಾಕಿದ್ದರು. ಇದು ಎಲ್ಲರಿಗೂ ಗಾಬರಿ ತರಿಸಿತ್ತು. ದೊಡ್ಡ ಸುದ್ದಿಯಾಯಿತು.

ಬಾಳಪ್ಪನವರು ಬಸವಣ್ಣನ ವೇಷ ಹಾಕಿದರೆ ಸಾಕ್ಷಾತ್ ಬಸವಣ್ಣನೇ ಆಗಿರುತ್ತಿದ್ದರು. ಪ್ರೇಕ್ಷಕರು ಸಾಲು ಹಚ್ಚಿ ನಮಸ್ಕರಿಸಲು ಬರುತ್ತಿದ್ದರು. ಒಮ್ಮೆ ಇದೇ ವೇಷದಲ್ಲಿದ್ದು, ಪಾತ್ರದ ಬಿಡುವಿನಲ್ಲಿ ಮರೆಗೆ ನಿಂತು ಚಹಾ ಸೇವನೆ ಮಾಡುತ್ತಿದ್ದಾಗ ಅದನ್ನು ಪ್ರೇಕ್ಷಕರು ಕಿಂಡಿಯ ಮೂಲಕ ನೋಡಿ ಅಲ್ನೋಡು ಬಸವಣ್ಣ ಚಹಾ ಕುಡಿಯುತ್ತಿದ್ದಾನೆ ಎನ್ನುವುದನ್ನು ಕೇಳಿಸಿಕೊಂಡು ನಂತರ ಅವರು ತನ್ನಿಂದಾಗಿ ಬಸವಣ್ಣನಿಗೆ ಕೆಟ್ಟ ಹೆಸರು ಬರಬಾರದೆಂದು ಚಹಾ ಕುಡಿಯುವುದನ್ನೇ ಬಿಟ್ಟು ಬಿಟ್ಟರು.

ಸ್ತ್ರೀಯನ್ನೂ ನಾಚಿಸುವ ಪಾತ್ರ

ಬಾಳಪ್ಪನವರು ಪ್ರೇಕ್ಷಕರ ಮೇಲೆ ಬೀರಿದ ಪ್ರಭಾವ ಅಗಾಧ. 1942ರಲ್ಲೊಮ್ಮೆ ಬೈಲಹೊಂಗಲ ತಾಲೂಕಿನ ಎಂ.ಕೆ. ಹುಬ್ಬಳ್ಳಿಯ ಸಂಕ್ರಮಣ ಜಾತ್ರೆಯಲ್ಲಿ 'ಪಠಾಣಿ ಪಾಶ' ನಾಟಕ ಪ್ರದರ್ಶನ ನಡೆದಿತ್ತು. ಬಾಳಪ್ಪನವರು ವೃಂದಾ ಹೆಸರಿನ ಸ್ತ್ರೀ ವೇಷದಲ್ಲಿದ್ದರು. ಬ್ರಿಟಿಷ್ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ಆಗಿನ ಪೊಲೀಸರು ಒಮ್ಮೆಲೇ ನುಗ್ಗಿ ಪ್ರದರ್ಶನ ನಿಲ್ಲಿಸಿದರು. ಕಂಗಾಲಾದ ಬಾಳಪ್ಪನವರು ವೇಷದಲ್ಲಿಯೇ ಠಾಣೆಗೆ ಹೋಗಿ ಸಬ್ ಇನ್‌ಸ್ಪೆಕ್ಟರರನ್ನು ಕಂಡು ನಾಟಕ ಆಡಲು ಅನುಮತಿ ಕೇಳಿದರು. ತಂಗಿ, ಹಂಗ ಮಾಡಾಕ ಬರೂದಿಲ್ಲ ಎಂದು ನಿರಾಕರಿಸಿದರು. ಎಷ್ಟೋ ಹೊತ್ತಿನವರೆಗೆ ಮನವರಿಕೆ, ಸಂಭಾಷಣೆ ನಡೆಸಿದರೂ ಸ್ತ್ರೀ ವೇಷದ ಬಾಳಪ್ಪ ಪುರುಷ ಎಂಬುದು ಅಧಿಕಾರಿಗೆ ಗೊತ್ತೇ ಆಗಲಿಲ್ಲ. ಕೊನೆಗೆ ಆತವ್ವಾ ನಾಟಕ ಆಡೋಗ್ರಿ ಎಂದು ಹುಕುಂ ಕೊಟ್ಟ.


ಪರದೆ ಹಿಂದಿನ ಸೀನರಿ

* 70 ರ ದಶಕದಲ್ಲಿ ಲಕ್ಷ್ಮೇಶ್ವರದಲ್ಲಿ ಕಂಪನಿ ಮುಕ್ಕಾಮು ಇದ್ದಾಗ ಸಾಲ ಕೊಟ್ಟಿದ್ದವರಿಗೆ ಮರಳಿ ನೀಡಲಾಗದ್ದಕ್ಕೆ ನಾಳೆ ನಿಮ್ಮ ನಾಟಕ ಬಂದ್ ಎಂದು ಎಚ್ಚರಿಕೆ ಕೊಟ್ಟಿದ್ದರು. ಆಕಾಶ ಕುಸಿದು ಬಿದ್ದಂತಾದ ಬಾಳಪ್ಪನವರು ಕಲಾವಿದರ ಉದರ ಪೋಷಣೆ ನೆನೆದು ನಡುಗಿದ್ದರು. ಆದರೆ, ದೇವರ ರೂಪದಲ್ಲಿ ಬಂದ ಮತ್ತೊಬ್ಬ ವ್ಯಾಪಾರಿ ಇವರಿಗೆ ಬೇಕಿರುವಷ್ಟು ಹಣವನ್ನು ಕಾಣಿಕೆ ರೂಪದಲ್ಲಿ ನೀಡಿ ಕಂಪನಿಯ ಜೀವ ರಕ್ಷಿಸಿದ್ದ.

* ಸ್ವಾತಂತ್ರ್ಯ ಹೋರಾಟಗಾರರಿಗೆ ಬಾಳಪ್ಪನವರ ನಾಟಕ ಕಂಪನಿ ಆಶ್ರಯ ತಾಣ. ರಾತ್ರಿ ಬಿಟಿಷ್ ಪೊಲೀಸರು ಬೆನ್ನು ಹತ್ತಿದರೆ ಅವರೆಲ್ಲ ಬಾಳಪ್ಪನವರ ನಾಟಕ ಹೊಕ್ಕು ಬಣ್ಣ ಬಳಿದು, ಗಡ್ಡ-ಮೀಸೆ ಹಚ್ಚಿಕೊಂಡು ಪಾತ್ರದವರಾಗಿ ಆಕ್ಷಣದ ಸಂಕಷ್ಟದಿಂದ ಪಾರಾಗುತ್ತಿದ್ದರು. ಹೀಗಾಗಿ ಬ್ರಿಟಿಷ್ ಸರಕಾರದ ಒಂದು ಕಣ್ಣು ಇವರ ಮೇಲಿತ್ತು. ವಾಲಿ ಚೆನ್ನಪ್ಪರಂಥ ಘಟಾನುಘಟಿ ಇದರ ಲಾಭ ಪಡೆದಿದ್ದಾರೆ.

* ತಮ್ಮ ಕಂಪನಿಗೆ ಪೇಂಟ್ ಮತ್ತು ರಂಗಪರಿಕರ ತರಲು ಆಗಾಗ ಮುಂಬಯಿಗೆ ಹೋಗುತ್ತಿದ್ದ ಬಾಳಪ್ಪನವರು ಅಲ್ಲಿ ಪೃಥ್ವಿರಾಜ್ ಕಪೂರ್ ನಡೆಸುತ್ತಿದ್ದ 'ಪೈಸಾ' ನಾಟಕ ಪ್ರದರ್ಶನ ನೋಡಿ ಪ್ರಭಾವಕ್ಕೊಳಗಾಗಿದ್ದರು. ಪೃಥ್ವಿರಾಜ್ ಕಪೂರ್ ತಮ್ಮ ನಾಟಕ ಮುಗಿದ ನಂತರ ಥೇಟರ್ ಮುಂದೆ ಜೋಳಿಗೆ ಹಾಕಿಕೊಂಡು ನಿಲ್ಲುತ್ತಿದ್ದರು. ಜನ ನೀಡುತ್ತಿದ್ದ ಹಣವನ್ನು ಅವರು ಸಾಮಾಜಿಕ ಕೆಲಸಕ್ಕೆ ವಿನಿಯೋಗಿಸುತ್ತಿದ್ದರು. ಬಾಳಪ್ಪನವರು ಇದನ್ನು ತಮ್ಮ ಬಸವಣ್ಣನ ನಾಟಕದಲ್ಲಿ ಏಕೆ ಅಳವಡಿಸಬಾರದು ಎಂದು ಯೋಚಿಸಿ ಜಾರಿಗೆ ತಂದರು. ಇಲ್ಲಿ ಸಂಗ್ರಹವಾದ ಹಣವನ್ನು ಬಸವನಬಾಗೇವಾಡಿಯ ಬಸವಣ್ಣನ ದೇವಾಲಯದ ಜೀರ್ಣೋದ್ದಾರ ಮತ್ತು ವಚನ ಪಿತಾಮಹ ಫ.ಗು. ಹಳಕಟ್ಟಿ, ಸರ್ವಜ್ಞನ ವಚನ ಸಂಶೋಧಕ ಉತ್ತಂಗಿ ಚನ್ನಬಸಪ್ಪನವರಿಗೆ ನೀಡಿದ್ದಾರೆ. ಪಾದಯಾತ್ರೆ ನಡೆಸಿ ವಿಜಾಪುರ ಜಿಲ್ಲೆಯ ಬರಗಾಲ, ಕೃಷ್ಣಾ ತಟದ ನೆರೆ ಹಾವಳಿಯ ಸಂತೃಸ್ತರಿಗೆ ನೆರವಾಗಿದ್ದಾರೆ.

* ಬಾಳಪ್ಪನವರು ಬಾಳಪ್ಪನವರು ಆಯಾ ಕಾಲದ ಸನ್ನಿವೇಶಗಳ ಮೇಲೆ ಪ್ರಭಾವ ಬೀರಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ಚನ್ನಮ್ಮ ಮತ್ತು ಚಲೇಜಾವ್, ಕರ್ನಾಟಕ ಏಕೀಕರಣದಲ್ಲಿ ಏಕೀಕರಣ ನಾಟಕ ಆಡಿದ್ದಾರೆ. ಗೋಕಾಕ ಚಳವಳಿಯಲ್ಲಿ ಡಾ. ರಾಜಕುಮಾರ್ ಚಿತ್ರರಂಗದಿಂದ ನುಗ್ಗಿದರೆ, ಬಾಳಪ್ಪನವರು ರಂಗಭೂಮಿಯಿಂದ ನುಗ್ಗಿ ಜೈಲುವಾಸ ಅನುಭವಿಸಿದ್ದಾರೆ.

* 1931 ರಲ್ಲಿ ಕಂಪನಿಯೊಂದು ಹಾನಿಗೀಡಾಗಿ ಮುಚ್ಚಿದಾಗ, ಹಿರಿಯ ಕಲಾವಿದರು ಇವರನ್ನು ಬಳಸಿಕೊಂಡು ಬೇರೆ ರೀತಿಯಲ್ಲಿ ನಾಟಕ ಪ್ರದರ್ಶನ ನೀಡಿ ಊರಿಗೆ ಹೋಗಲು ಹಣ ಹೊಂದಿಸಿಕೊಂಡರು. ಇವರಿಗೆ ಏನನ್ನೂ ಕೊಡದೇ ಟಿಕೇಟ್‌ಗೆ ರೊಕ್ಕ ನೀಡಿರುವುದಾಗಿ ಹೇಳಿ ರೈಲು ಹತ್ತಿಸಿದರು. ಚಕ್ಕರ್ ಬಂದು ಹಿಡಿದಾಗಲೇ ಅವರಿಗೆ ವಾಸ್ತವಗೊತ್ತಾಗಿತ್ತು. ಸತ್ಯ ಹೇಳಿ ಕಣ್ಣೀರಿಟ್ಟರು. ಪ್ರಯಾಣಿಕರು ನೆರವಿಗೆ ಬಂದು ಹಾಡು ಹೇಳಿಸಿದರು. ಜತೆಗೆ ರೊಕ್ಕ ಕೊಟ್ಟರು. ಅದನ್ನೇ ತಂದು ತಾಯಿಗೆ ಕೊಟ್ಟರೆ ಅವರು ಬೀಕ್ಷೆ ಬೇಡಿದೆ ಎಂದು ಕೆಂಡಮಂಡಲವಾದರು. ಊರವರು ಸೇರಿ ಸಮಾಧಾನ ಪಡಿಸಬೇಕಾಯಿತು.

* ಬಾಳಪ್ಪನವರು ಕರ್ನಾಟಕದಲ್ಲಷ್ಟೇ ಅಲ್ಲ, ಮಹಾರಾಷ್ಟ್ರದಲ್ಲೂ ಪ್ರಸಿದ್ಧರು. ಇಚಲಕರಂಜಿ, ಮಿರಜ್, ಸಾಂಗ್ಲಿ, ಕೊಲ್ಲಾಪುರ, ಸೊಲ್ಲಾಪುರ, ಗಡಹಿಂಗ್ಲಜದಲ್ಲಿ ಇವರ ಅಪಾರ ಅಭಿಮಾನಿ ಬಳಗವಿದೆ. ಮಹಾರಾಷ್ಟ್ರದ ಹೆಸರಾಂತ ಛೋಟಾ ಗಂಧರ್ವರ ಜತೆಗೆ ನಾಟಕವಾಡಿದ್ದಾರೆ. ಇವರ 300 ರಂಗಗೀತೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧ್ವನಿಮುದ್ರಣ ಮಾಡಿಕೊಂಡಿದೆ. ವಾರ್ತಾ ಇಲಾಖೆಯವರು ಸಾಕ್ಷ್ಯಾಚಿತ್ರ ತಯಾರಿಸಿದ್ದಾರೆ. ಇವರ ಕುರಿತು ಐದು ಪುಸ್ತಕಗಳು ಪ್ರಕಟವಾಗಿವೆ.

* ಬಾಳಪ್ಪನವರ ಕಲಾವೈಭವ ನಾಟ್ಯ ಸಂಘ ಬೆಳಗಾವಿ (ಕರ್ನಾಟಕ)ದ ಮೇಲೆ ಜಕಬಾಳ ಎಂಬವರು ಪಿಎಚ್‌ಡಿ ಮಾಡಿದ್ದಾರೆ.  ಸಂಘದ 'ಬೆಳಗಾವಿ-ಕರ್ನಾಟಕ' ಶಬ್ದ ಮರಾಠಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಏನೇ ಬೆದರಿಕೆ ಬಂದರೂ ಜಗ್ಗದೆ ಕನ್ನಡತನ ಮೆರೆದರು. ಮಹಾಜನ್ ಕಮಿಟಿ ಮುಂದೆ ಹಾಜರಾಗಿ ಬೆಳಗಾವಿ ಕರ್ನಾಟಕದ್ದು ಎಂದು ಪ್ರತಿಪಾದಿಸಿದರು.

* ಈಗ ಏಣಗಿ ಬಾಳಪ್ಪನವರ ಶತಮಾನೋತ್ಸವ ಆರಂಭವಾಗಿದೆ.  8ನೇ ವಯಸ್ಸಿನಿಂದ 1983ರ ವರೆಗೆ ಬಣ್ಣ ಹಚ್ಚಿರುವ ಅಜ್ಜ ಸುಮಾರು 70 ವರ್ಷಗಳ ಕಾಲ ರಂಗಮಂಚದ ಮೇಲೆ ಕುಣಿದಿದ್ದಾರೆ. ಪ್ರಯೋಗಶೀಲತೆಯ ಪ್ರದರ್ಶನ ಮಾಡಿದ್ದಾರೆ. ಎಲ್ಲ ಭಾಷಿಕ ಕಲಾವಿದರನ್ನು ಬೆಳೆಸಿದ್ದಾರೆ.  ಈಗ ದೃಷ್ಟಿ ಮತ್ತು ಶ್ರವಣ ಕೆಲ ಮಟ್ಟಿಗೆ ಕೈಕೊಟ್ಟಿದೆ.   ಕಳೆದ ಕೆಲವು ತಿಂಗಳುಗಳಿಂದ ನರಗಳ ಸಮಸ್ಯೆಯಿಂದಾಗಿ ಸಣ್ಣ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ. 

ಆಡಿದ ಪ್ರಮುಖ ನಾಟಕಗಳು

ಜಗಜ್ಯೋತಿ ಬಸವೇಶ್ವರ, ಕಿತ್ತೂರ ಚನ್ನಮ್ಮ, ಮಾವಬಂದ್ನಪೋ ಮಾವ, ಅಕ್ಕಮಹಾದೇವಿ, ಕುಂಕುಮ, ದೇವರಮಗು, ಶಾಲಾ ಮಾಸ್ತರ, ಹೇಮರೆಡ್ಡಿ ಮಲ್ಲಮ್ಮ, ರಾಜಾ ಹರಿಶ್ಚಂದ್ರ, ರಾಮಾಯಣ.

ಚಲನ ಚಿತ್ರದ ನಂಟು

ಮಾಡಿ ಮಡಿದವರು, ಜನುಮದ ಜೋಡಿ, ಗಡಿಬಿಡಿ ಕೃಷ್ಣ, ಗಾನಯೋಗಿ ಪಂಚಾಕ್ಷರಿ ಗವಾಯಿ, ಪರೀಕ್ಷೆ

ವೈಯಕ್ತಿಕ ಪರಿಚಯ

ಹೆಸರು - ಬಾಳಪ್ಪ ಕರಬಸಪ್ಪ ಏಣಗಿ
ತಂದೆ-ತಾಯಿ - ಕರಬಸಪ್ಪ ಮತ್ತು ಬಾಳಮ್ಮ
ಹುಟ್ಟೂರು - ಸವದತ್ತಿ ತಾಲೂಕಿನ ಏಣಗಿ
ಜನ್ಮದಿನ - 1914 ಆಗಸ್ಟ್ 31
ಶಿಕ್ಷಣ - ಕನ್ನಡ 3ನೇ ಇಯತ್ತೆ
ಹವ್ಯಾಸ - ಈಗಲೂ ಪತ್ರಿಕೆ, ಪುಸ್ತಕ ಓದು, ಸಂಗೀತ ಕೇಳುವುದು, ಸರಳ ವಿಹಾರ, ಮೊಮ್ಮಕ್ಕಳು, ಮರಿಮಕ್ಕಳೊಂದಿಗೆ ಸಮಯ ಕಳೆಯುವುದು.
ಪತ್ನಿ - ಸಾವಿತ್ರಮ್ಮ ಮತ್ತು ಲಕ್ಷ್ಮೀದೇವಿ
ಮಕ್ಕಳು - ಮೊದಲ ಪತ್ನಿಯಿಂದ ಡಾ. ಬಸವರಾಜ ಏಣಗಿ, ಎಂಜಿನಿಯರ್ ಸುಭಾಷ್ ಏಣಗಿ, ನ್ಯಾಯವಾದಿ ಮೋಹನ ಏಣಗಿ, ಬಿಎಸ್‌ಸಿ ಅಗ್ರಿ ಮಾಡಿರುವ ಅರವಿಂದ ಏಣಗಿ, ರುದ್ರಮ್ಮ, ಶಕುಂತಲಾ, ಪುಷ್ಪಾ, ಎರಡನೇ ಪತ್ನಿಯಿಂದ ನಟ ದಿ. ಏಣಗಿ ನಟರಾಜ ಮತ್ತು ಭಾಗ್ಯಶ್ರೀ.

ಪ್ರಮುಖ ಪ್ರಶಸ್ತಿಗಳು
* ನಾಟ್ಯ ಗಂಧರ್ವ -1968,
* 'ಬಸವತತ್ವ ಭೂಷಣ'-1969
* ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-1970, 71, 72, 76
* ಕರ್ನಾಟಕ ರಾಜ್ಯ ಪ್ರಶಸ್ತಿ (ನಾಟಕ ಕಲೆ)-1973
* ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ 'ನಾಟಕ ಕಲಾ ನಿಪುಣ'-1978
* ಕೇಂದ್ರ ಸಂಗೀತ ನಾಟಕ ಅಕಾಡೆಮಿ-1994
* ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ-1994
* ಚಾಳುಕ್ಯ ಪ್ರಶಸ್ತಿ-2002
* ಹಂಪಿ ವಿವಿಯಿಂದ ನಾಡೋಜ ಪ್ರಶಸ್ತಿ-2005
* ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ-2006
* ಧಾರವಾಡ ಕವಿವಿಯಿಂದ ಗೌರವ ಡಾಕ್ಟರೇಟ್-2006


“ಪಾಶ್ಚಿಮಾತ್ಯದ ಅನುಕರಣೆಯಿಂದ ನಾವು ಮೂಲತನವನ್ನು ಕಳೆದುಕೊಳ್ಳುತ್ತಿದ್ದೇವೆ. ಸಾಧನೆಗೆ ಕಷ್ಟಪಡಬೇಕು. ಅದು ಈಗಿನವರಿಗೆ ಬೇಡವಾಗಿದೆ. ಶೀಘ್ರ ಹಣ, ಸುಖ, ಹೆಸರು ಬೇಕಿದೆ. ಇದು ಹೇಗೆ ಸಾಧ್ಯ? ಕಲಾವಿದ ಯಾವ ಪಾತ್ರ ಮಾಡುತ್ತಾನೋ ಆ ಪಾತ್ರವೇ ತಾನಾಗಬೇಕು. ವ್ಯಕ್ತಿ ಪಾತ್ರವಾಗಿ ಜೀವ ತಳೆಯಬೇಕು. ಅಷ್ಟು ತಲ್ಲೀನತೆ ಹೊಂದಬೇಕು. ಆಗಲೇ ಪಾತ್ರಕ್ಕೆ ನ್ಯಾಯ ಸಿಗುತ್ತದೆ.” ಎನ್ನುತ್ತಾರೆ ಏಣಗಿ ಬಾಳಪ್ಪ.


ಏಣಗಿ ಬಾಳಪ್ಪನವರ ಕುರಿತು ಮಾಸ್ಟರ್ ಹಿರಣ್ಣಯ್ಯನವರು ಹೀಗೆ ಹೇಳುತ್ತಾರೆ:  “ನಡೆದಾಡುವ ಬಸವಣ್ಣನಂತೆ ಇರುವವರು ಏಣಗಿ.  ಒಂದು ಆದರ್ಶವಾದ ವೃತ್ತಿ ನಾಟಕ ಕಂಪನಿಯ ಮಾಲೀಕ ಹೇಗಿರಬೇಕೆಂದು ತೋರಿಸಿಕೊಟ್ಟವರು.  ತನ್ನ ಮೇಲೆ ಎಷ್ಟೇ ಸಾಲಸೋಲಗಳಿದ್ದರೂ ರಂಗಕ್ಕೆ ಬಂದ ಮೇಲೆ ಪಾತ್ರದೊಳಗೆ ಪರಕಾಯ ಪ್ರವೇಶಿಸುತ್ತಿದ್ದವರು.  ತನ್ನ ನೋವು ಸಂಕಷ್ಟಗಳನ್ನು ಪ್ರೇಕ್ಷಕರೆದುರು ಅವರೆಂದೂ ಪ್ರದರ್ಶಿಸುತ್ತಿರಲಿಲ್ಲ.  ಏಣಗಿ ಹೇಗೆ ಶ್ರೇಷ್ಠ ನಟ, ನಿರ್ದೇಶಕನೋ, ತೂಕದ ಹಾಡುಗಾರಿಕೆಯೂ ಅವರದ್ದಾಗಿತ್ತು.  ರಾಗಸಂಚಾರದಲ್ಲಿ ಒಂದು ಭಾವ ಇತ್ತು.  ಬಹುಶಃ ಇದೆಲ್ಲಾ ನಮ್ಮ ಕಾಲದ ಕಲಾವಿದರ ಒಂದು ವಿಶೇಷತೆ.  ಇಂಥ ಪುಣ್ಯಾತ್ಮನಿಗೆ ಇನ್ನೂ ಪದ್ಮಪ್ರಶಸ್ತಿ ಸಿಗದಿರುವುದು ದುರಂತ.  ಎಂತೆಂಥವರಿಗೇ ಪ್ರಶಸ್ತಿ ಕೊಡ್ತಾರೆ ಸ್ವಾಮೀ, ಇಡೀ ಬದುಕನ್ನೇ ರಂಗಭೂಮಿಗಾಗಿ ಅರ್ಪಿಸಿದ, ಎಷ್ಟೋ ಕಲಾವಿದರನ್ನು ರಂಗಕ್ಕೆ ತಂದ, ಅನೇಕರಿಗೆ ಬದುಕನ್ನು ಕೊಟ್ಟ ಏಣಗಿಯವರಿಗೆ ಪದ್ಮ ಪ್ರಶಸ್ತಿ ಕೊಡಲೇಬೇಕು.”

ಈ ಶತಾಯುಷಿ ಮಹಾನುಭಾವರ ಹಿರಿತನದ ಬದುಕು ಸಹ್ಯವಾಗಿರಲಿ.  ಅವರು ಈ ನಾಡಿಗೆ ನೀಡಿದ ಸ್ಫೂರ್ತಿ ನಮ್ಮನ್ನೆಲ್ಲಾ ಕಾಯಲಿ ಎಂದು ಆಶಿಸುತ್ತಾ ಈ ಮಹಾನುಭಾವ ಏಣಗಿ ಬಾಳಪ್ಪನವರಿಗೆ ಸಾಷ್ಟಾಂಗ ನಮಿಸುತ್ತಿದ್ದೇನೆ.


ಲೇಖನ ಕೃಪೆ: ರಾಜು ಉಸ್ತಾದ್ ಬೆಳಗಾವಿ ಅವರ  ಜುಲೈ 28, 2012ರ  ವಿಜಯಕರ್ನಾಟಕದಲ್ಲಿನ ಲೇಖನದೊಂದಿಗೆ,  ಸೆಪ್ಟೆಂಬರ್ 1, 2013ರ ವಿಜಯವಾಣಿ ಪತ್ರಿಕೆಯಲ್ಲಿನ ಆಧಾರದ ಮೇಲೆ ಸಣ್ಣ ಮಾಹಿತಿ ಮಾರ್ಪಾಡುಗಳನ್ನು ಮಾಡಿದ್ದೇನೆ.  

Tag: Enagi Balappa

ಕಾಮೆಂಟ್‌ಗಳಿಲ್ಲ: