ಗುರುವಾರ, ಆಗಸ್ಟ್ 29, 2013

ಡಾ. ಸತೀಶ್ ಶೃಂಗೇರಿ

ಡಾ. ಸತೀಶ್ ಶೃಂಗೇರಿ 

ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ದಿವಂಗತ ಡಾ. ಸತೀಶ್ ಶೃಂಗೇರಿ ಅವರು ಜನಿಸಿದ ದಿನ ಮೇ 1, 1968.  ನಾವು ಫೇಸ್ಬುಕ್ಕಿಗೆ ಬಂದ ದಿನಗಳಿಂದ ಕಳೆದ ಸೆಪ್ಟೆಂಬರ್ ಮಾಸದಲ್ಲಿ ಅವರು ಈ ಲೋಕಕ್ಕೆ ವಿದಾಯ ಹೇಳಿದ ಸಂದರ್ಭದವರೆವಿಗೂ ನಮ್ಮನ್ನು ಫೇಸ್ಬುಕ್ಕಿನ ಇಷ್ಟಾನಿಷ್ಟಗಳ ನಡುವೆಯೂ ಇಲ್ಲಿಯೇ ಇರಬೇಕೆಂಬ ಹಂಬಲ ಹುಟ್ಟಿಸಿದ ಪ್ರಮುಖ ಅಂಶಗಳಲ್ಲಿ ಡಾ. ಸತೀಶ್ ಶೃಂಗೇರಿ ಅವರ ಕಾರ್ಟೂನುಗಳು ಅತ್ಯಂತ ಪ್ರಮುಖವಾದದ್ದು ಎಂದು ನಂಬಿದವ ನಾನು.

ಕಳೆದ ವರ್ಷ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರು ಈ ಲೋಕದಲ್ಲಿದ್ದರು.  ಆ ಸಂದರ್ಭದ ನನ್ನ ಲೇಖನದಲ್ಲಿ ನಾನು ಹೀಗೆ ಬರೆದಿದ್ದೆ.  “ಇಂದು ನಮ್ಮ ಸತೀಶ್ ಶೃಂಗೇರಿ ಅವರ ಹುಟ್ಟಿದ ಹಬ್ಬ.   ಫೇಸ್ಸ್ಬುಕ್ಕಿಗರಾದ ನಮಗಂತೂ ಬೆಳಗಿನ ಸುಪ್ರಭಾತ ಇವರ ಸುಂದರ ಕಾರ್ಟೂನುಗಳಿಂದಲೇ.”  ಅವರ ಸುಪ್ರಭಾತಗಳು ನಮ್ಮಿಂದ ಮರೆಯಾಗಿ ಏಳೆಂಟು ತಿಂಗಳುಗಳು ಕಳೆದು ಹೋದವು.  ನಾವು ಫೇಸ್ಬುಕ್ಕಿನಲ್ಲಿದ್ದೇವೆ ನಿಜ.  ಆದರೆ ಅದಕ್ಕಿದ್ದ ಒಂದು ಸೌಂಧರ್ಯದ ಪ್ರಭೆ ಖಂಡಿತವಾಗಿಯೂ ಸಾಕಷ್ಟು ಮಸಕಾಯಿತು.

“ನಮ್ಮ ರಾಜಕಾರಣಿಗಳು ಜನರಿಗೆ ಕೆಲಸ ಮಾಡುವುದಿಲ್ಲ.  ಅವರು ವ್ಯಂಗ್ಯಚಿತ್ರಗಾರರಿಗೆ ಕೆಲಸ ಮಾಡುತ್ತಾರೆ.  ನಾನು ಅವರಿಂದ ಪ್ರೇರಿತನಾಗಿದ್ದೇನೆ”  ಎನ್ನುತ್ತಿದ್ದರು ಸತೀಶ್.   ಹಾಗಾಗಿಯೇ ನಾವು ರಾಜಕಾರಣಿಗಳತ್ತ ನೋಡುವುದಕ್ಕೂ ಹೆಚ್ಚು .  ಸತೀಶರಂತಹ ಕಾರ್ಟೂನು ಸೃಷ್ಟಿಕರ್ತರನ್ನು ತವಕಿಸುತ್ತಿದ್ದೆವು.  ಅವರಿಂದ ನಮಗೆ ಈ ರಾಜಕಾರಣದ ಬೇಳೆಕಾಳುಗಳೆಲ್ಲಾ ಸುಲಭವಾಗಿ ಅರ್ಥವಾಗುತ್ತಿದ್ದವು.  ಈ ರೀತಿ ನಡೆಯುವ  ಬದುಕಿನ ಅರ್ಥೈಕೆ  ಒಂದು ರೀತಿಯ ಆರ್ತನಾದ ಎಂಬುದು ಹೌದಾಗಿದ್ದರೂ ಆಂತರ್ಯದಾಳದಿಂದ ಒಂದು ಮುಗುಳುನಗೆ ಚಿಮ್ಮುತ್ತಿದ್ದುದಂತೂ ನಿಜ.  ಹಾಗಾಗಿ ಸತೀಶ್ ಶೃಂಗೇರಿ ಅಂತಹವರ ಕಾರ್ಟೂನುಗಳನ್ನು ನೋಡಿದ ಮೇಲೆ ಪತ್ರಿಕೆಯ ಮುಖಪುಟಗಳನ್ನು ಓದಿ ಹಾಗಲಕಾಯಿ ಮುಖ ಮಾಡಿಕೊಳ್ಳುವ ಅವಶ್ಯಕತೆಯೇ ಬರುತ್ತಿರಲಿಲ್ಲ.  ಆ ರಾಜಕೀಯದ ಕಸದಿಂದ ಒಂದು ಮುಗುಳ್ನಗುವನ್ನು ಹೊರಸೂಸುವ ಈ ಸತೀಶರ  ಆಧ್ಯಾತ್ಮ ಇದೆಯಲ್ಲ, ಅದು ಮಾತ್ರ ಸರಿಸಾಟಿಯಿಲ್ಲದ್ದಾಗಿತ್ತು.

ಈಗಾಗಲೇ ಹೇಳಿದಂತೆ ನಾವು ಫೇಸ್ ಬುಕ್ಕಿಗೆ ಬಂದು ಉಪಯೋಗವೆನಿಸಿದ್ದ ಮಹತ್ವದ ಅಂಶಗಳಲ್ಲಿ ನಮ್ಮ ಸತೀಶ್ ಶೃಂಗೇರಿ ಅವರ ಕಾರ್ಟೂನ್  ಪ್ರಮುಖವಾಗಿತ್ತು.  ಒಂದು ದಿನ ಅವರ ಹೊಸ ಕಾರ್ಟೂನ್ ನೋಡದಿದ್ರೆ ಅವರ ಪುಟಕ್ಕೆ  ಹೋಗಿ 'ಏನು, ಇನ್ನೂ ಇವತ್ತಿನ ಕಾರ್ಟೂನ್ ಬಂದೇ ಇಲ್ಲ' ಅಂತ ದಾಳಿ ಮಾಡುತ್ತಿದ್ದೆ.  ಆ ಪುಣ್ಯ ಜೀವಿ ಒಂದಿಷ್ಟೂ ಬೇಸರಿಸದೆ ಯಃಕಶ್ಚಿತ್ ನನ್ನ ದಾಳಿಗೂ ಪ್ರೀತಿಯಿಂದ ಸಮಜಾಯಿಷಿ ಕೊಡ್ತಾ ಇದ್ದರು.

ವೃತ್ತಿಯಿಂದ ಡಾಕ್ಟರ್ ಆಗಿದ್ದ ಸತೀಶ್ ಶೃಂಗೇರಿ  ತಾವು ಮೂಡಿಸುತ್ತಿದ್ದ  ಮಂದಹಾಸಗಳ ಮೂಲಕ ಡಾಕ್ಟರುಗಳನ್ನೆಲ್ಲಾ ನಿರುದ್ಯೋಗಿಗಳನ್ನಾಗಿಸುವಷ್ಟು ಶಕ್ತರಿದ್ದರು.  ಹಾಗಾಗಿ ನಾವು ಅವರ ದಿನಕ್ಕೊಂದು ಗುಳಿಗೆ ತೊಗೊಂಡ್ರೆ ಸಾಕು ಉಳಿದ ಗುಳಿಗೆಗಳಿಗೆ ಗೋಲಿ ಹೊಡೆಯಬಹುದು ಎಂದು ಈ ಹಿಂದೆ ಬರೆದಿದ್ದೆ.

ಶೃಂಗೇರಿ ಅವರ ರೇಖೆಗಳು ವ್ಯಕ್ತಿಚಿತ್ರಗಳಾಗಿ ಪಡೆಯುತ್ತಿದ್ದ ಮೋಹಕತೆ, ಅದು ದೈನಂದಿನ ಘಟನಾವಳಿಗಳಿಗೆ ಹೊಂದುವಂತೆ ತಾದ್ಯಾತ್ಮ, ಉಕ್ಕಿಸುತ್ತಿದ್ದ  ನಗೆ, ಹಲವು ಪುಟಗಳಲ್ಲಿ ಹೇಳಬಹುದಾದುದನ್ನು ಒಂದೆರಡು ರೇಖೆಗಳಲ್ಲಿ ದಾಖಲಾಗಿಸುತ್ತಿದ್ದ  ಚಾಣಾಕ್ಷತನ ಇವುಗಳ ಬಗ್ಗೆ ಎಷ್ಟು ಚಿಂತಿಸಿದರೂ ಕಡಿಮೆಯೇ.

ಸಾಮಾನ್ಯವಾಗಿ ನುರಿತ ವೃತ್ತಿಪರರೆಲ್ಲಾ ತಮ್ಮ ಕೌಶಲ್ಯವನ್ನು ಗುಟ್ಟಾಗಿಡುವುದರಲ್ಲಿ ಚಾಣಾಕ್ಷರು.  ಆದರೆ ಸತೀಶ್ ವ್ಯಂಗ್ಯಚಿತ್ರ  ಕೌಶಲ್ಯವನ್ನು ಹೊಂದಬಯಸುವವರಿಗೆ ಮುಕ್ತವಾಗಿ ತಮ್ಮ 'ಆರ್ಟೂನ್' ಕೃತಿಯ ಮೂಲಕ ಆ ಜ್ಞಾನವನ್ನು ತೆರೆದಿಟ್ಟವರು.

ಪುರಾಣ ಪ್ರಸಿದ್ಧವಾದ ಶೃಂಗೇರಿಯನ್ನು ತಮ್ಮ ಕಲೆಯ ಮೂಲಕ ಮತ್ತಷ್ಟು ಶೋಭಾಯಮಾನವಾಗಿಸಿದ್ದ ಸತೀಶ್ ಶೃಂಗೇರಿ ಅವರ ಈ ಕಾಯಕ, ಕೇವಲ ಕಲಾ ಕೌಶಲ್ಯಕ್ಕೆ ಮಾತ್ರ ಸೀಮಿತವಾಗದೆ, ಜನಪರ ಕಾಳಜಿ, ಪರಿಸರ ಪ್ರಜ್ಞೆ,  ನೈತಿಕತೆಯ ಪರಿಧಿಗಳಲ್ಲಿ ಸುಸಂಸ್ಕೃತವಾದ ಅಭಿವ್ಯಕ್ತಿಗಳಾಗಿದ್ದಂತಹವು.

ನಮಗೆ ಅಂದಿನ ದಿನಗಳಲ್ಲಿ ಆರ್ ಕೆ ಲಕ್ಷ್ಮಣ್, ಸ್ವಾಮಿ, ಮೂರ್ತಿ,  ಪ್ರಾಣ್ ಅಂತಹ ವ್ಯಂಗ್ಯಚಿತ್ರಕಾರರ ಅಭಿವ್ಯಕ್ತಿಗಳು ಅವುಗಳನ್ನು ತಪ್ಪಿಸದೇ ನೋಡುವಂತಹ ಅಭಿರುಚಿಯನ್ನು ಬೆಳೆಸಿದ್ದವು.  ಮುಂಬಂದ ವರ್ಷಗಳಲ್ಲಿ  ಹಾಸ್ಯ ನೋಟದ ದೃಷ್ಟಿಯಲ್ಲಿ ಅಲ್ಲಲ್ಲಿ ವ್ಯಂಗ್ಯಚಿತ್ರಗಳನ್ನು ಹಾದುಹೋಗುತ್ತಿದ್ದರೂ ಅವು ನಮ್ಮವು ಎಂಬ ಭಾವ ಎಲ್ಲೋ ಕಡಿಮೆಯಾಗುತ್ತಿದೆ ಎಂಬ ಯಾಂತ್ರಿಕ ಪ್ರವೃತ್ತಿ ನಮ್ಮಲ್ಲಿ ಮೂಡತೊಡಗಿತ್ತು.  ಫೇಸ್ ಬುಕ್ ನಲ್ಲಿ ಬಂದ ಮೇಲೆ ಸತೀಶ್ ಶೃಂಗೇರಿ ಅವರನ್ನೊಳಗೊಂಡ ಹಾಗೆ ಹಲವಾರು ಕಲಾವಿದರ  ವ್ಯಂಗ್ಯಚಿತ್ರಗಳು ಮತ್ತೊಮ್ಮೆ ನಮ್ಮಂತಹವರನ್ನು  ಈ ಸುಂದರ ಕಲೆಗೆ ಹತ್ತಿರವಾಗಿಸಿದ್ದವು.  ಅಷ್ಟೇ ಅಲ್ಲ ಈ ಪ್ರವೃತ್ತಿಯಿಂದಾಗಿ,  ನಾವು ಕಣ್ಣು ಹಾಯಿಸುವ ವೃತ್ತ ಪತ್ರಿಕೆಗಳು, ನಿಯತಕಾಲಿಕಗಳಲ್ಲಿ ಸಹಾ ವ್ಯಂಗ್ಯಚಿತ್ರಗಳತ್ತ ಕಣ್ಣು ಹಾಯಿಸುವ ಪ್ರವೃತ್ತಿ ತಾನೇ ತಾನಾಗಿ ಮೂಡತೊಡಗಿದ್ದವು.

ಇಷ್ಟು ದೊಡ್ಡ ಸಾಧಕರಾಗಿದ್ದೂ ನಮಗೆಲ್ಲ ಆತ್ಮೀಯ ಸ್ನೇಹವನ್ನು  ಕೊಟ್ಟು ಪ್ರೀತಿ ಗೌರವಗಳಿಂದ ನಮ್ಮೆಲ್ಲರನ್ನೂ ಕಾಣುತ್ತಿದ್ದ  ಡಾ. ಸತೀಶ್ ಶೃಂಗೇರಿ ಅವರ ಕುರಿತ ನಮ್ಮ ಹೃದಯಾಂತರಾಳದ ಭಾವಗಳು ಅನಂತವಾದದ್ದು.

ಸತೀಶ್ ಶೃಂಗೇರಿ ಅವರು ಇಂದು ನಮ್ಮೊಡನಿಲ್ಲ.  ಅವರು ಸೆಪ್ಟೆಂಬರ್ 27, 2012ರಂದು ಈ ಲೋಕವನ್ನಗಲಿದರು.   ಆದರೆ ಆ ಅನುಭಾವ ನಮ್ಮೊಡನೆ ನಿರಂತರವಾಗಿದೆ. ಈ  ಚೇತನಕ್ಕೆ ನನ್ನ ಭಕ್ತಿಪೂರ್ವಕ ನಮನಗಳು.

Tag: Dr. Satish Sringeri

ಕಾಮೆಂಟ್‌ಗಳಿಲ್ಲ: