ಶುಕ್ರವಾರ, ಆಗಸ್ಟ್ 30, 2013

ನಾಡಿಗೇರ ಕೃಷ್ಣರಾಯರು


ನಾಡಿಗೇರ ಕೃಷ್ಣರಾಯರು

ಕನ್ನಡದ ಪ್ರಸಿದ್ಧ ಬರಹಗಾರ, ಪತ್ರಕರ್ತ, ಕನ್ನಡದ ಮಹಾನ್ ಸೇವಕರಲ್ಲಿ ಒಬ್ಬರಾದ ನಾಡಿಗೇರ ಕೃಷ್ಣರಾಯರು 1908ರ ಮಾರ್ಚ್ 25ರಂದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಜನಿಸಿದರು. ಇವರ ತಾಯಿ ಕಾಮಾಕ್ಷಮ್ಮ; ತಂದೆ ದತ್ತಾತ್ರೇಯ. ಫಿಫ್ತ್ ಫಾರಂ ನಂತರ ಓದಿಗೆ ಶರಣು ಹೊಡೆದು, ಜವಳಿ ಅಂಗಡಿ ಗುಮಾಸ್ತ, ಹೋಟೆಲ್‌ನಲ್ಲಿ ದಿನಗೂಲಿ, ಹೀಗೆ ಏನೇನೋ ಆಗಿ ಕಡೆಗೆ ಬಂದು ಸೇರಿದ್ದು ಪತ್ರಿಕೋದ್ಯಮಕ್ಕೆ. ನಾಡಿಗೇರ ಕೃಷ್ಣರಾಯರು ಲೋಕಮತ’, ‘ಸಂಯುಕ್ತ ಕರ್ನಾಟಕ’, ‘ಕಥಾಂಜಲಿ’, ‘ಪ್ರಜಾಮತ’, ‘ದೇಶಬಂಧುಮುಂತಾದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದರು. ಇವರು ರಚಿಸಿದ ಕೃತಿಗಳ ಸಂಖ್ಯೆ ಸುಮಾರು 65ಕ್ಕೂ ಹೆಚ್ಚು.  

ನಾಡಿಗೇರರು ಕನ್ನಡಕ್ಕೆ ಹಲವು ರೀತಿಯಲ್ಲಿ ದುಡಿದರು.  ಇದನ್ನು ಅ. ನ. ಕೃಷ್ಣರಾಯರು ಹೀಗೆ ಗುರುತಿಸುತ್ತಾರೆ.

ಪತ್ರಿಕೋದ್ಯಮಿಯಾಗಿ ಕಟ್ಟಿದನು ಗೆಜ್ಜೆ
ಕಾದಂಬರಿಗಳನು ಬರೆದು ಹಾಕಿದನು ಹೆಜ್ಜೆ
ನಗೆಹರಟೆಗಳ ರಚಿಸಿ ಬಾರಿಸಿದ ಡೋಲು
ಇವನ ಜೀವನ ಹಿರಿದು, ಇವಗಿಲ್ಲ ಸೋಲು.

ಪತ್ರಿಕೆಗಳ ಸಂಪಾದಕರಾಗಿ ನಾಡಿಗೇರರು ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿದರು.  ಆ ಪ್ರತಿಭೆಗಳನ್ನು ಬೆಳೆಸಿದರು.  ಅ. ನ. ಕೃಷ್ಣರಾಯರ ನೇತೃತ್ವದ ಕನ್ನಡ ಚಳುವಳಿಯಲ್ಲಿ ಅವರು ಸಕ್ರಿಯರಾಗಿ ಭಾಗವಹಿಸಿದರು.  ನಾಡಿಗೇರರ ಕೆಲವು ಕೃತಿಗಳು ಮೆಲ್ಲೋಗರ’, ‘ಹರಕು ಮುರುಕು’, ‘ಅಡ್ಡಾದಿಡ್ಡಿ’, ‘ತಲೆಹರಟೆ’, ‘ಎದಿರೇಟು’, ‘ಅದಲು ಬದಲು’, ‘ರಾಜ ರಾಣಿ ಗುಲಾಮ’, ‘ಕಮಲೆಯ ಕನಸು’, ‘ಕಸದ ಬುಟ್ಟಿ’, ‘ಪ್ರಣಯ ಕತೆಗಳುಮುಂತಾದವು.  

ಒಂದು ರೀತಿಯಲ್ಲಿ ನಾಡಿಗೇರರು ತಮ್ಮ ಬರಹಗಳಲ್ಲಿ ಸ್ವಯಂ ಪಾತ್ರಧಾರಿಯಂತಿರುತ್ತಾರೆ.  ಅವರ ಕುಟುಂಬದ ಸದಸ್ಯರೇ ಪಾತ್ರಧಾರಿಗಳಾಗಿರುತ್ತಾರೆ ಎಂಬಂಥಹ ಭಾವ ಮೂಡುತ್ತದೆ.  ಇದು ಅವರು ಓದುಗನೊಡನೆ ಬೆಳೆಸುವ ಆಪ್ತತೆಯ ಪರಿ.  ತಮ್ಮನ್ನೇ ಎಲ್ಲಾ ವಿಡಂಭನೆಗಳಿಗೂ ತಳ್ಳಿಕೊಳ್ಳುವ ಅಪೂರ್ವ ಪರಿ ಅವರ ಹಾಸ್ಯ ಬರಹಗಳಲ್ಲಿ ಕಾಣಬರುತ್ತದೆ.    ರಾಮಾಯಣದಲ್ಲಿ ವಿಡಂಬನೆ ಹುಡುಕುವಾಗಲೂ ತಮ್ಮನ್ನು ತಂದುಕೊಳ್ಳುತ್ತಾರೆ.  ಒಮ್ಮೆ ಅವರು ರಾಮಾಯಣ ನಾಟಕಕ್ಕೆ ಹೋದರು.  ಅಲ್ಲಿ ರಾವಣ ಬಂದು ರಾಮನಿಲ್ಲದ ವೇಳೆಯಲ್ಲಿ ಸೀತೆಯನ್ನು ಹೊತ್ತು ಕೊಂಡು ಹೋದ.  ಇತ್ತ ಕಡೆ ತನ್ನ ಕುಟೀರಕ್ಕೆ ಹಿಂದಿರುಗಿದ ರಾಮ ಬಿದ್ದು ಬಿದ್ದು ಎದೆಬಡಿದುಕೊಂಡು ಅತ್ತ.  ಇಲ್ಲಿ ನಾಡಿಗೇರರ ಪ್ರವೇಶ.  ಆ ಸೀತೆ ನಾಟಕ ಪಾತ್ರಧಾರಿ ಎಷ್ಟು ದಡೂತಿ, ಎಷ್ಟು ಕೆಟ್ಟದಾಗಿದ್ದಳು ಎಂದರೆ, ನಾನೇ ಏನಾದ್ರೂ ರಾಮ ಆಗಿದ್ದಿದ್ರೆ ಆ ರಾವಣ ಎಲ್ಲೇ ಇದ್ರೂ ಹುಡುಕಿ ಕರೆದುಕೊಂಡು ಬಂದು ಎರಡು ಪ್ಲೇಟ್ ಕೇಸರಿ ಬಾತ್ ಕೊಡಿಸ್ತಾ ಇದ್ದೆ ಹೀಗೆ ಸಾಗುತ್ತದೆ ನಾಡಿಗೇರರ ಹಾಸ್ಯ. 

ಬಾಡಿಗೆ ಮನೆಯಲ್ಲಿದ್ದ ನಾಡಿಗೇರರಿಗೆ ಮನೆ ಬಾಡಿಗೆಗೆ ಕೊಡುವುದೇ ಕಷ್ಟವಾಗಿತ್ತು.  ಆದರೆ ಮನೆ ಕಟ್ಟುವುದಕ್ಕೆ ಅವರು ಹೇಳುವ ತಾಪತ್ರಯ ಏನು ಗೊತ್ತೆಅದಕ್ಕೆ ಈ villa ಅಂತ ಹೆಸರಿಡಬೇಕಲ್ಲ.  ಯಾವ ವಿಲ್ಲಅಂತ ಇಡಬೇಕು ಅನ್ನೋದು ಅವರ ಸಮಸ್ಯೆ.  ಆನಂದವಿಲ್ಲ’, ಜ್ಞಾನವಿಲ್ಲ’, ಸೌಂಧರ್ಯವಿಲ್ಲ ಎಂಬಂತಹ ವಿಲ್ಲಾಗಳನ್ನು ಹೆಸರಾಗಿ ಹೇಗೆ ತಾನೇ ಇಡುವುದುನಾಡಿಗೆರರು ಹೋಗಿ ಬಿಟ್ಟರು ಎಂಬುದಕ್ಕೆ ಆಸ್ತಿಕ ಸಂಘದವರು ಸಂತೋಷಿಸಿದ್ದು; ನಾನು ಸತ್ತರೆ ಈ ಪುತ್ಥಳಿಯನ್ನು ಮಾತ್ರ ನಿಲ್ಲಿಸಬೇಡಿ, ಕಾಗೆ ಇನ್ನಿತರ ಪಕ್ಷಿಗಳು ಅದರ ಮೇಲೆ ಗಲೀಜು ಮಾಡಿದರೆ ತಡಕೊಳ್ಳಲಿಕ್ಕೆ ಕಷ್ಟ; ಮನೆಗೆ ಹೆಣ್ಣು ನೋಡಲು ಬಂದ ಗಂಡಿನ ಬಗ್ಗೆ ಮೂಗು ಮಾತಾಡಬೇಡ ಎಂದು ಪುಟ್ಟ ಮಗನಿಗೆ ಲಂಚ ಕೊಟ್ಟು ಮಲಗಿಸಿದ್ದರೆ ಸದ್ದಿಲ್ಲದೆ ಎದ್ದು ಬಂದ ಮಗ ನೀನು ಅವರ ಮೂಗಿನ ಮಾತಾಡಬೇಡ ಅಂದೆ, ಅವರಿಗೆ ಮೂಗೇ ಇಲ್ವಲ್ಲಪ್ಪಅನ್ನೋದು;   ಚೇಚಿ ಎಂಬ ಮೈದುನನ  ಮದುವೆಗೆ ಏನು ಉಡುಗೊರೆ ಕೊಡಬೇಕು ಎಂದು ನಿರ್ಣಯಿಸುವಲ್ಲಿ ಮದುವೆಗೆ ಹೋಗಲಿಕ್ಕೆ ಹೆಂಡತಿ ಒಳ್ಳೇ ಸೀರೆ ಇಲ್ಲ ಎಂಬ ಪ್ರಸಂಗಕ್ಕೆ ತಿರುಗಿ ಕೊನೆಗೆ ಸೀರೆ ಕೊಳ್ಳುವಲ್ಲಿ ಇದ್ದ ಹಣವೆಲ್ಲಾ ಖರ್ಚಾಗಿ ಉಡುಗೊರೆ ಕೊಳ್ಳಲಿಕ್ಕೆ ಹಣವಿಲ್ಲದೆ ಹೋಗುವುದು; ತಮ್ಮನ್ನು ತಾವು ಕಾಫಿ ಸಮುದ್ರದಲ್ಲಿ ಈಜುಗಾರನೆಂದು ಕೊಳ್ಳುವುದು  ಹೀಗೆ ನೂರಾರು ಪ್ರಸಂಗಗಳು ನಾಡಿಗೇರರ ನಗೆಬರಹಗಳಲ್ಲಿ ಹರಿದು ಹೋಗುತ್ತವೆ.  ಅವರು ಬರೆದಿರುವ ನಗೆಬರಹಗಳು ಸಾವಿರಕ್ಕೂ ಹೆಚ್ಚಿನದು.  ಆದರೆ ಪುಸ್ತಕರೂಪದಲ್ಲಿ ಬಂದದ್ದು ಕೆಲವೇ ಕೆಲವು.  

1954ರಲ್ಲಿ ಸಿ.ವಿ.ರಾಜು ನಿರ್ಮಿಸಿದ ನಟಶೇಖರ ಚಿತ್ರಕ್ಕೆ ಸಂಭಾಷಣೆ ಮತ್ತು 15 ಹಾಡುಗಳನ್ನು ಬರೆದರು.ಇದೇ ನಿರ್ಮಾಪಕರ ಭಕ್ತ ಮಲ್ಲಿಕಾರ್ಜುನ ಚಿತ್ರಕ್ಕೆ 8 ಹಾಡುಗಳನ್ನು ಬರೆದರು.


ಈ ಅಪ್ರತಿಮ ಕನ್ನಡ ಸೇವಕರು 1992ರ ವರ್ಷದಲ್ಲಿ ಈ ಲೋಕವನ್ನಗಲಿದರು.

Tag: Nadiger Krishna Rao

ಕಾಮೆಂಟ್‌ಗಳಿಲ್ಲ: