ಶನಿವಾರ, ಆಗಸ್ಟ್ 31, 2013

ಮಧ್ವಾಚಾರ್ಯರು

ಮಧ್ವಾಚಾರ್ಯರು

ದ್ವೈತವೆಂಬ ತತ್ವವಾದವನ್ನೂ, ಉಡುಪಿಯ ಶ್ರೀಕೃಷ್ಣನನ್ನೂ, ಉಡುಪಿಯ ಅಷ್ಟಮಠಗಳನ್ನೂ, ಅದ್ಭುತ ಜ್ಞಾನಭಂಡಾರವನ್ನೂ ನಮ್ಮ ನಾಡಿಗೆ ಕೊಟ್ಟ ಯತಿವರ್ಯ ಮಧ್ವರು ವಿಜಯದಶಮಿಯ ದಿನದಂದು ಜನ್ಮ ತಳೆದವರು. 

ಒಮ್ಮೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಮಧ್ವರ ಬಾಳಿನಲ್ಲಿ ನಡೆದ  ಒಂದು ಘಟನೆಯನ್ನು ವಿವರಿಸಿದ್ದು ಮನದಲ್ಲಿ ಅಚ್ಚಳಿಯದೆ ನಿಂತಿದೆ.   ಗಂಗೆಯ ತೀರದ ಒಂದು ಊರು.  ಆಚೆಯ ತಡಿಯಲ್ಲಿ ಮುಸ್ಲಿಂ ದೊರೆಯೊಬ್ಬನ (ಈತ ಜಲಾಲುದ್ದೀನ್ ಖಿಲ್ಜಿ ಇರಬೇಕು ಎಂದು ವಿದ್ವಾಂಸರ ಅಭಿಪ್ರಾಯ) ರಾಜ್ಯ. ನದಿಯ ಸುತ್ತ  ಸೈನಿಕರ ಭದ್ರಕಾವಲು. ದಾಟಲು ದೋಣಿಯ ವ್ಯವಸ್ಥೆಯೂ ಇಲ್ಲ. ಎಲ್ಲಿ ನೆರೆಯ ಹಿಂದೂ ರಾಜನ ಗೂಢಚಾರರು ಬಂದುಬಿಡುತ್ತಾರೋ ಎನ್ನುವ ಭಯ!

ಈಚೆಯ ತಡಿಯಲ್ಲಿ ಧೀರ ಸನ್ಯಾಸಿಯೊಬ್ಬರು ಶಿಷ್ಯ ಪರಿವಾರದೊಡನೆ ನಿಂತಿದ್ದಾರೆ. ಮುಂದೆ ಸಾಗುವ ಬಗೆ ಹೇಗೆ? ಶಿಷ್ಯರಿಗೆ ಚಿಂತೆ.

ಶಿಷ್ಯರ ಕಳವಳ ಗುರುವಿಗೆ ಅರಿವಾಯಿತು. ಅವರು ತಮ್ಮ ವ್ಯಕ್ತಿತ್ವದಷ್ಟೆ ಗಂಭೀರವಾದ ದನಿಯಿಂದ ನುಡಿದರು. ಹೆದರಬೇಡಿ. ನಾವು ಸಂಸಾರದ ನದಿಯನ್ನೇ ದಾಟಿಸುವೆವು, ಹೀಗಿರುವಾಗ  ಗಂಗೆಯನ್ನು ದಾಟಿಸಲಾರೆವೆಂದು ತಿಳಿದಿರಾ? ನನ್ನ ಬೆನ್ನ ಹಿಂದೆಯೆ ನೀರಿಗಿಳಿದು ಧೈರ್ಯವಾಗಿ ನಡೆದು ಬನ್ನಿ.

ನೀರಿನಲ್ಲಿ ನಡೆದು ಬರುತ್ತಿದ್ದ ಸಂನ್ಯಾಸಿಗಳನ್ನು ಕಂಡು  ಸೈನಿಕರು ಕೂಗಿದರು ಇತ್ತ ಬರಬೇಡಿ ಬಂದು ಸಾಯಬೇಡಿ

ಇತ್ತಕಡೆಯಿಂದ ಮಧ್ವರು ಕೂಗಿ ಹೇಳಿದರು ಹೆದರಬೇಡಿ!”. 

ಜೊತೆಯಿದ್ದವರೋ ಕೆಲವೊಂದು ಸಂನ್ಯಾಸಿಗಳು.  ಅತ್ತ ಕಡೆಯೋ ಶಸ್ತ್ರಸಜ್ಜಿತ ಸಾವಿರಾರು ಸೈನಿಕರು.  ಆದರೆ ಈ ಸಂನ್ಯಾಸಿ ಹೇಳುತ್ತಿದ್ದಾರೆ ಹೆದರಬೇಡಿಎಂದು.

ಸಿಕ್ಕವರನ್ನೆಲ್ಲಾ ತುಂಡರಿಸಿ ಅತ್ತಕಡೆ ಬಾರದಂತೆ ಮಾಡುತ್ತಿದ್ದ ಸೈನಿಕರಿಗೆ ಈ ಯತಿಯ ಮಾತು ಕೇಳಿ ವಿಸ್ಮಯ.  ಇಂತಹ ನಿರ್ಭಯ ವ್ಯಕ್ತಿತ್ವವನ್ನು ಅವರು ಕಂಡದ್ದೇ ಇಲ್ಲ.  ಏನೂ ಮಾಡುವುದು ತಿಳಿಯದೆ, ದಡಕ್ಕೆ ಸೇರಿದೊಡನೆ ದೊರೆಯ ಬಳಿ ಕರೆದೊಯ್ದು ವಿಷಯ ತಿಳಿಸಿದರು. 

ದೊರೆಗೂ ಅಚ್ಚರಿ.  ಕೇಳಿದ, “ಇಷ್ಟೊಂದು ಸೈನಿಕರಿರುವಾಗ ನಿಮಗೆ ಇಲ್ಲಿಯವರೆಗೆ ಬರಲು ಧೈರ್ಯ ಬಂದದ್ದಾದರೂ ಹೇಗೆ?”

ಆಚಾರ್ಯ ಮಧ್ವರು ನುಡಿದರು ನಿನ್ನ ತಂದೆ ನನ್ನ ತಂದೆ ಒಂದೇ ಆಗಿರುವಾಗ ಹೆದರಿಕೆಯಾದರೂ ನಮಗೇಕೆ?”.  ಆಚಾರ್ಯರ ಮಾತು ಕೇಳಿ ದೊರೆ ದಂಗುಬಡಿದು ಹೋದ. 

ಆಚಾರ್ಯರು ನಗುತ್ತ ವಿವರಿಸಿದರು   ನಿನ್ನ, ನನ್ನ, ನಮ್ಮೆಲ್ಲರ  ದೇವರು ಜಗತ್ತನ್ನೆ ಬೆಳಗುವ ಭಗವಂತ ಅಲ್ಲಿದ್ದಾನೆ. ನಿನಗೆ ಅವನು ಅಲ್ಲಾ. ನನಗೆ ನಾರಾಯಣ. ಯಾವ ಹೆಸರಿನಿಂದ ಕರೆದರೂ ಓಗೊಡುವ ದೇವರು ಒಬ್ಬನೇ. ತಲೆಗೊಬ್ಬ ದೇವರಿಲ್ಲ. ನೀನು, ನಾನು, ನಾವೆಲ್ಲ ಅವನ ರಾಜ್ಯದ ಪ್ರಜೆಗಳು. ಅವನ ಅನುಗ್ರಹದಿಂದಲೇ ನಾವು ದೋಣಿ ಇಲ್ಲದೆ ನದಿಯನ್ನು ದಾಟಿದೆವು; ಕೊಲ್ಲ ಬಂದ ನಿನ್ನ ಸೈನಿಕರ ಮನವೊಲಿಸಿ ಇತ್ತ ಬಂದೆವು. ಇದೆಲ್ಲ ಅವನ ಕರುಣೆ. ನಾವು ನಿನ್ನ ರಾಜ್ಯದ ಮಾರ್ಗವಾಗಿ ಉತ್ತರಕ್ಕೆ ಹೊರಟವರು……..”

ಆ ಗಾಂಭೀರ್ಯ, ಎದೆಗಾರಿಕೆ, ಆತ್ಮಶಕ್ತಿ, ದಿವ್ಯ ತೇಜಸ್ಸು ಕಂಡು, ಆ ಮೋಡಿಯ ಮಾತುಗಳನ್ನು ಕೇಳಿ ಮುಸ್ಲಿಂ ದೊರೆ ಬೆರಗಾದ. ಅಟ್ಟದಿಂದ  ಇಳಿದು ಬಂದು ಸಂನ್ಯಾಸಿಯನ್ನು ಪರಿಪರಿಯಾಗಿ ಸತ್ಕರಿಸಿದ. ತನ್ನ ರಾಜ್ಯದಲ್ಲೇ ಬಹುದೊಡ್ಡ ಜಹಗೀರನ್ನು ಬಿಟ್ಟು ಕೊಡುತ್ತೇನೆ, ಎಲ್ಲ ಸೌಕರ್ಯವನ್ನೂ ಮಾಡಿಕೊಡುತ್ತೇನೆ, ಅಲ್ಲೆ ಆಶ್ರಮ ಕಟ್ಟಿಕೊಂಡಿರುವಂತೆ ಭಿನ್ನವಿಸಿಕೊಂಡ.

ಈ ಧೀರ ಸಂನ್ಯಾಸಿ ರಾಜನ ಈ ಕೊಡುಗೆಯನ್ನು ಸೌಜನ್ಯದಿಂದಲೆ ಬೇಡವೆಂದರು. ಶಿಷ್ಯ ಪರಿವಾರದೊಡನೆ ಉತ್ತರಾಭಿಮುಖವಾಗಿ ಬದರಿಯತ್ತ ಹೊರಟೇಬಿಟ್ಟರು.

ಆಚಾರ್ಯ ಮಧ್ವರು ಅಚ್ಚ ಕನ್ನಡಿಗರು. ಕನ್ನಡನಾಡಿನ ಪಡುಕಡಲ ತೀರದ ಉಡುಪಿಯ ಸಮೀಪದ ಪುಟ್ಟಹಳ್ಳಿ ಪಾಜಕ ಆಚಾರ್ಯರ ಜನ್ಮಭೂಮಿ. ಪಾಜಕ ಪ್ರಾಕೃತಿಕವಾಗಿ ತುಂಬ ಸುಂದರವಾದ ಹಳ್ಳಿ. ಅಕ್ಕಪಕ್ಕದಲ್ಲಿ ಎರಡು ಪುಟ್ಟ ಬೆಟ್ಟಗಳು. ಒಂದರ ತುದಿಯಲ್ಲಿ ತಾಯಿ ದುರ್ಗೆಯ ಪ್ರಾಚೀನ ಗುಡಿ. ಇನ್ನೊಂದು ಬದಿಯ ಬಂಡೆಬೆಟ್ಟದಲ್ಲಿ ಪರಶುರಾಮನ ಗುಡಿ. ಎರಡು ಬೆಟ್ಟಗಳ ಬುಡದಲ್ಲಿ ಸಸ್ಯ ಶ್ಯಾಮಲವಾದ ಪುಟ್ಟಹಳ್ಳಿ ಪಾಜಕ.

ಯಾವ ಭಾಷೆಯಲ್ಲಿ, ಯಾವ ಹೆಸರಿನಲ್ಲಿ ಕರೆದರೂ ಭಗವಂತನಿಗೆ ಕೇಳಿಸುತ್ತದೆ ಎಂದು ಜಗತ್ತಿನ ಮುಂದೆ ಘೋಷಿಸಿದ ಭಾರತೀಯ ಪ್ರವಾದಿ ಆಚಾರ್ಯ ಮಧ್ವರು. ದೇವರನ್ನು ಹೇಗೆ ಕರೆಯಲಿ ಎಂದು ಗೊಂದಲವೇಕೆಬೇಕು.. ಯಾವ ಭಾಷೆಯ ಯಾವ ಹೆಸರಿನಿಂದಲೂ ಅವನನ್ನು ಕರೆಯಬಹುದು. ಏಕೆಂದರೆ ಅವನ ಹೆಸರಿಲ್ಲದ ಯಾವ  ನುಡಿಯೂ ಈ ಜಗತ್ತಿನಲ್ಲಿಲ್ಲ. ನಮ್ಮ ಆಡು ಮಾತಷ್ಟೆ ಅಲ್ಲ ಇಡಿಯ ಪ್ರಕೃತಿಯೇ ಭಗವಂತನ ಗುಣಗಾನಕ್ಕೆ ಶ್ರುತಿ ಹಿಡಿದಿದೆ. ಸಮುದ್ರದ ಮೊರೆತ, ಗಾಳಿಯ ಸುಯಿಲು, ಹಕ್ಕಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು ಜಗತ್ತಿನ ಎಲ್ಲ ನಾದವೂ ಭಗವಂತನ ಗುಣಗಾನ. ಎಲ್ಲ ನಾದದಲ್ಲಿ ಭಗವಂತನ ಹಿರಿಮೆಯನ್ನು, ಎಲ್ಲಡೆಯಲ್ಲೂ ಭಗವಂತನ ಇರವನ್ನು ಕಾಣಲು ಕಲಿಯಿರಿ; ಭಗವನ್ಮಯವಾಗಿ ಬಾಳಿರಿ.

ಭಗವದ್ಗೀಗೀತೆಗೆ ಬರೆದ ಭಾಷ್ಯದಲ್ಲಿ ಅವರು  ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಹೀಗೆ ಸಾರಿದ್ದಾರೆ: ಜಾತಿಪದ್ಧತಿ ಎನ್ನುವುದು ದೇಹಕ್ಕಿಂತ ಹೆಚ್ಚು ಸ್ವಭಾವಕ್ಕೆ ಸಂಬಂಧಿಸಿದ್ದು. ಹುಟ್ಟಿನಿಂದ ಒಬ್ಬನು ಯಾವ ಜಾತಿ ಎನ್ನುವುದು ಮುಖ್ಯವಲ್ಲ. ಅವನ ಸ್ವಭಾವವೇ ಅವನ ಜಾತಿಯ ನಿರ್ಣಾಯಕ. ಮೂಲತಃ ಜಾತಿಪದ್ಧತಿ ಎನ್ನುವುದು ಮನುಷ್ಯನ ಸ್ವಭಾವದ ವಿಭಾಗ. ಅಧ್ಯಾತ್ಮದ ಗಂಧ ಗಾಳಿಯೂ ಇಲ್ಲದ ವೇಷಮಾತ್ರ ಬ್ರಾಹ್ಮಣನಿಗಿಂತ ಆಧ್ಯಾತ್ಮದ ದಾರಿ ತುಳಿದ ಚಂಡಾಲ ಮೇಲು

ಜಾತಿ-ಮತ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಹದಿಮೂರನೆಯ ಶತಕದ ಸಂಪ್ರದಾಯಬದ್ಧ ಭಾರತದಲ್ಲಿ ಬದುಕಿದ್ದ ಆಚಾರ್ಯರು ಇಂಥ ಪ್ರಗತಿಶೀಲ ವಿಚಾರಗಳನ್ನು ಮಂಡಿಸಿದ್ದರು ಎನ್ನುವುದು ತುಂಬಾ ಆಶ್ಚರ್ಯದ ಸಂಗತಿ.

ಭಾರತದ ಆಚಾರ್ಯ ಪುರುಷರ ಮಾಲಿಕೆಯಲ್ಲಿ ಮೂವರು ಹೆಚ್ಚು ಖ್ಯಾತರಾದವರು: ಅದ್ವೈತ ಮತ ಸ್ಥಾಪಕರಾದ ಆಚಾರ್ಯ ಶಂಕರರು, ವಿಶಿಷ್ಟಾದ್ವೈತ ಮತ ಸ್ಥಾಪಕರಾದ ಆಚಾರ್ಯ ರಾಮಾನುಜರು ಮತ್ತು ದ್ವೈತ ಮತ್ತು ಸ್ಥಾಪಕರಾದ ಆಚಾರ್ಯ ಮಧ್ವರು. ಈ ವಿಶ್ವ ಬರಿಯ ಮಾಯೆ; ಭಗವಂತನೊಬ್ಬನೇ ಸತ್ಯ ಎಂದರು ಆಚಾರ್ಯ ಶಂಕರರು.ವಿಶ್ವಾತ್ಮನಾದ ಭಗವಂತನಿಗೆ ಈ ವಿಶ್ವವೆ ಶರೀರವಿದ್ದಂತೆ; ಆದರಿಂದ ಇದು ಸತ್ಯ ಎಂದರು ಆಚಾರ್ಯ ರಾಮಾನುಜರು. ಈ ಜಗತ್ತು ಭಗವಂತನ ಲೀಲಾಸೃಷ್ಟಿ. ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಚಾರ ಮಾಡಬೇಡಿಎಂದು ಆಚಾರ್ಯ ಮಧ್ವರು.

ಪ್ರಾಚೀನ ಗ್ರಂಥಗಳಲ್ಲಿ ಆಚಾರ್ಯ ಮಧ್ವರ ಸಿದ್ಧಾಂತವನ್ನು ದ್ವೈತವಾದ ಎನ್ನುವ ಬದಲು ತತ್ತ್ವವಾದ ಎಂದೇ ಕರೆದಿದ್ದಾರೆ. ಈ ಜಗತ್ತು ಕನಸಿನ ಮಾಯೆಯಲ್ಲ, ಭಗವಂತನು ಜಾದೂಗಾರನೂ ಅಲ್ಲ, ಅವನು ಸತ್ಯಕರ್ಮ. ಇದು ಭಗವಂತನ ಸತ್ಯಸೃಷ್ಟಿ. ಆದರಿಂದ ಇದೂ ಒಂದು ಸತ್ಯತತ್ತ್ವ. ಭಗವಂತನ ಮಹಿಮೆಯನ್ನರಿಯುವ ಶಿಕ್ಷಣ ಶಾಲೆಎನ್ನುವ ವಾದವನ್ನು ಮಂಡಿಸಿದ್ದರಿಂದ ಇದಕ್ಕೆ ತತ್ತ್ವವಾದ ಎಂದು ಹೆಸರಾಯಿತು.

ಆಚಾರ್ಯ ಮಧ್ವರು ತಮ್ಮ ತತ್ತ್ವವಾದದ ಪ್ರಚಾರಕ್ಕಾಗಿ ದೇಶದಾದ್ಯಂತ ಸಂಚರಿಸಿದರು. ಬಯಸಿ ಬಂದ ಮಂದಿಗೆಲ್ಲ ತತ್ತ್ವದ ತನಿರಸವನ್ನು ಉಣಿಸಿದರು. ಪಾಠ ಪ್ರವಚನಗಳಿಂದ ಶಿಷ್ಯರನ್ನು ತರಬೇತುಗೊಳಿಸಿದರು. ಮುಂದಿನ ಪೀಳಿಗೆಗಾಗಿ ನಲ್ವತ್ತು ಗ್ರಂಥಗಳನ್ನು ಬರೆದಿಟ್ಟರು. ಅವು ಮೇಲುನೋಟಕ್ಕೆ ಮಕ್ಕಳಿಗೂ ಅರ್ಥವಾಗುವಂಥ ಸರಳ ಗ್ರಂಥಗಳು; ಓದಿದಷ್ಟೂ ಆಳಕ್ಕೆ ಕೊಂಡೊಯ್ಯಬಲ್ಲ, ಪಂಡಿತರಿಗೂ ದುರೂಹ್ಯವಾದ ಮಹಾಗ್ರಂಥಗಳು.

ಸಂನ್ಯಾಸಿಯಾದ ತರುಣದಲ್ಲೇ ಕನ್ಯಾಕುಮಾರಿ, ರಾಮೇಶ್ವರ, ಅನಂತ ಶಯನ, ಶ್ರೀರಂಗ ಇತ್ಯಾದಿ ದಕ್ಷಿಣದ ಎಲ್ಲ ಕ್ಷೇತ್ರಗಳನ್ನೂ ಸಂದರ್ಶಿಸಿದರು. ಒಟ್ಟು ಮೂರು ಬಾರಿ ಉತ್ತರದ ತುತ್ತತುದಿಯ  ಬದರಿಯ ತನಕ ಸಂಚರಿಸಿ ಬಂದರು. ಉಡುಪಿಯಲ್ಲಿ ಬರೆದ ಪ್ರಥಮ ಕೃತಿ ಗೀತಾ ಭಾಷ್ಯವನ್ನು ಬದರಿಯಲ್ಲಿ ಗುರು ವೇದವ್ಯಾಸರಿಗೆ ಅರ್ಪಿಸಿದರು. ಅಲ್ಲೇ ನಿಂತು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದರು.

ಹೋದೆಡೆಯಲ್ಲೆಲ್ಲ ಅಚಾರ್ಯರ ಅದ್ಭುತ ಪ್ರವಚನವನ್ನು ಕೇಳಿ ಜನ ಮೈಮರೆತರು. ಅತ್ತ ಇಸ್ಲಾಂ ಧರ್ಮ ಭಾರತದ ಮೇಲೆ ದಾಳಿ ನಡೆಸಿತ್ತು. ಸ್ವಲ್ಪ ಮಟ್ಟಿಗೆ ಕ್ರೈಸ್ತ ಧರ್ಮವೂ ಕಾಲೂರಿತ್ತು. ಹೀಗೆ ವಿದೇಶೀಯ ಧರ್ಮಗಳ ಪ್ರಭಾವದಿಂದ ಭಾರತದಲ್ಲಿ ಒಂದು ಬಗೆಯ ಸಂದಿಗ್ಧತೆ ನೆಲೆಸಿತ್ತು. ಜತೆಗೆ ಭಾರತೀಯರಲ್ಲೇ ಹತ್ತು ಹಲವು ಪಂಥಗಳ ಒಳಜಗಳದಿಂದ ಜನಸಾಮಾನ್ಯರಲ್ಲಿ ಒಂದು ಬಗೆಯ ಅತಂತ್ರ ಸ್ಥಿತಿ ನಿರ್ಮಾಣಗೊಂಡಿತ್ತು. ಈ ತಾತ್ತ್ವಿಕ ಅಭದ್ರತೆಯ ವಾತಾವರಣದಲ್ಲಿ ಆಚಾರ್ಯರು ದೇಶದಾದ್ಯಂತ ಸಂಚರಿಸಿ ಜನತೆಯಲ್ಲಿ ಭರವಸೆ ಮೂಡಿಸಿದರು. ಆಚಾರ್ಯರ ವ್ಯಕ್ತಿತ್ವವನ್ನು ಕಂಡು ಜನ ತಲೆದೂಗಿದರು: ಪ್ರವಚನವನ್ನು ಕೇಳಿ ತಲೆಬಾಗಿದರು. ಹೋದೆಡೆಯಲ್ಲೆಲ್ಲ ಶಿಷ್ಯಸಂಪತ್ತು ಬೆಳೆಯಿತು.

ಆಚಾರ್ಯರು ಉಡುಪಿಗೆ ಮರಳಿ ಬಂದಾಗ ತಮ್ಮ ಶಿಷ್ಯನ ಭಾಷ್ಯಕೃತಿಯನ್ನು ಗುರು ಅಚ್ಯುತಪ್ರಜ್ಞರೂ ಓದಿದರು. ಆಚಾರ್ಯರೊಡನೆ ಚರ್ಚೆ ನಡೆಸಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡು ತಾವೂ ಆಚಾರ್ಯರ ಸಿದ್ಧಾಂತದ ಅನುಯಾಯಿಯಾದರು. ಗುರುವಿಗೇ ಸಿದ್ಧಾಂತದ ದೀಕ್ಷೆಕೊಟ್ಟ ಈ ಶಿಷ್ಯ ಜನತೆಯ ಹೃದಯದಲ್ಲಿ ಸ್ಥಿರವಾದ ಸ್ಥಾನವನ್ನು ಪಡೆದರು.

ಪದ್ಮನಾಭತೀರ್ಥರೆಂಬುವರು  ಆಚಾರ್ಯರ ಪ್ರಮುಖ ಶಿಷ್ಯರು. ಅಲ್ಲದೆ ಇನ್ನೂ ಎಂಟು ಮಂದಿ ಆಚಾರ್ಯರ ಅಂತರಂಗ ಶಿಷ್ಯರಿದ್ದರು. ಹೃಷಿಕೇಶತೀರ್ಥ, ನರಸಿಂಹತೀರ್ಥ, ಜನಾರ್ಧನತೀರ್ಥ, ಉಪೇಂದ್ರತೀರ್ಥ, ವಾಮನತೀರ್ಥ, ವಿಷ್ಣುತೀರ್ಥ, ರಾಮತೀರ್ಥ ಮತ್ತು ಅಧೋಕ್ಷಜ ತೀರ್ಥ. ಈ ಎಂಟು ಮಂದಿ ಯತಿಗಳೇ ಮುಂದೆ ಕೃಷ್ಣಪೂಜೆಯ ಹೊಣೆಹೊತ್ತು ಉಡುಪಿಯ ಅಷ್ಟಮಠಗಳ ಮೂಲಪುರುಷರಾದರು.

ಪ್ರಾಚೀನ ದಾಖಲೆಗಳಲ್ಲಿ ಕಂಡುಬರುವಂತೆ ಉಡುಪಿಯಲ್ಲಿ ಕೃಷ್ಣಪ್ರತಿಷ್ಠೆಯ ಕಥೆ ಹೀಗಿದೆ:

ದ್ವಾರಕೆಯಿಂದ ಹಡಗೊಂದು ಹೊರಟಿತು. ಸಾಮಾನಿನ ಜೊತೆಗೆ ಕೆಲವು ಗೋಪಿಚಂದನದ ಗಟ್ಟಿಗಳನ್ನು ಅದರಲ್ಲಿರಿಸಿದ್ದರು. ಉಡುಪಿಯಿಂದ ಮೂರು ಮೈಲಿ ಪಶ್ಚಿಮದಲ್ಲಿ ಮಲ್ಪೆಯ ಸಮುದ್ರತೀರದಲ್ಲಿ ಈ ದೋಣಿ ಸಾಗುತ್ತಿದ್ದಾಗ ಗಾಳಿಯ ಸುಳಿಗೆ ಸಿಕ್ಕ ದೋಣಿ ದಾರಿ ತಪ್ಪಿ ಬಂಡೆಯೊಂದಕ್ಕೆ ಬಡಿಯಿತು. ದೋಣಿ ಒಡೆದು ಸಮುದ್ರತಳವನ್ನು ಸೇರಿತು.

ಒಂದು ದಿನ ಧ್ಯಾನಯೋಗದಿಂದ ಎದ್ದ ಆಚಾರ್ಯರು ಇದ್ದಕ್ಕಿದ್ದಂತೆ ಮಲ್ಪೆಯತ್ತ ಹೊರಟರು. ಸಮುದ್ರತಳದಲ್ಲಿ ಮುಳುಗಿದ್ದ ಭಗವಂತನನ್ನು ಉಪ್ಪುನೀರಿನಿಂದ ತೆಗೆಸಿ ಉಡುಪಿಗೆ ಹೊತ್ತು ತಂದರು. ಜಲಾಧಿವಾಸದ ಅನಂತರ ತನ್ನ ಮಠದಲ್ಲಿ ಪ್ರತಿಷ್ಠಿಸಿದರು. ಹೀಗೆ ಹಲವು ವರ್ಷಗಳ ಕಾಲ ಶ್ರೀಕೃಷ್ಣನನ್ನು ಆಚಾರ್ಯರು ಸ್ವಯಂ ಪೂಜಿಸಿದರು.

ಹೀಗೆ ಏಳು ಶತಕಗಳಿಂದ ಶ್ರೀಕೃಷ್ಣ ಉಡುಪಿಯ ಅಧಿದೈವವಾಗಿ ನಾಡಿನ ಭಕ್ತರಿಗೆ-ಭಾವುಕರಿಗೆ ಅಭೀಷ್ಟ ಪ್ರಧಾನ ದೀಕ್ಷಿತನಾಗಿ ಉಡುಪಿಯಲ್ಲಿ ನೆಲೆಸಿದ್ದಾನೆ. ಇದು ಅತ್ಯಂತ ಪುರಾತನ ಪುರಾವೆಗಳಲ್ಲಿ ದೊರೆಯುವ, ಸಂಪ್ರದಾಯಜ್ಞರು ಒಪ್ಪಿಕೊಂಡು ಬಂದ ಐತಿಹ್ಯ.

ತಮ್ಮ ತತ್ತ್ವವಾದವನ್ನು ಜನರಿಗೆ ತಿಳಿಯಪಡಿಸಲು ಆಚಾರ್ಯರು ಪ್ರಸ್ಥಾನತ್ರಯ’ (ಗೀತೆ, ದಶೋಪನಿಷತ್ತುಗಳು ಮತ್ತು ಬ್ರಹ್ಮಸೂತ್ರ)ಗಳಿಗೆ ಭಾಷ್ಯ ಬರೆದರು. ಮಹಾಭಾರತ, ಪುರಾಣಗಳ ತಾತ್ತ್ವಿಕ ವಿಮರ್ಶೆಗಾಗಿ ಮಹಾಭಾರತ ತಾತ್ಪರ್ಯ ನಿರ್ಣಯಬರೆದರು. ಭಾಗವತಕ್ಕೆ ತಾತ್ಪರ್ಯ ಬರೆದರು. ಋಗ್ವೇದಕ್ಕೆ ಭಾಷ್ಯ ಬರೆದರು. ಯಮಕ ಕಾವ್ಯವೊಂದನ್ನೂ ಹಾಡು ಗಬ್ಬಗಳನ್ನೂ ರಚಿಸಿದರು. ಪುರಾಣ ಶ್ಲೋಕಗಳನ್ನು ಸಂಗ್ರಹಿಸಿ ಕೃಷ್ಣಾಮೃತ ಮಹಾರ್ಣವಬರೆದರು. ವಾಸ್ತುಶಿಲ್ಪ -ಪ್ರತಿಮಾಶಿಲ್ಪದ ಅಪೂರ್ವ ವಿವರಗಳನ್ನೊಳಗೊಂಡ ತಂತ್ರಸಾರಸಂಗ್ರಹಬರೆದರು. ಅಪೂರ್ವ ಗಣಿತ ಗ್ರಂಥ ತಿಥಿ ನಿರ್ಣಯವನ್ನೂ ಬರೆದರು. ಇನ್ನೂ ಅನೇಕ ಗ್ರಂಥಗಳನ್ನು ಬರೆದರು. ಇಷ್ಟೆ ಅಲ್ಲ, ಸಂಗೀತದಲ್ಲೂ ಅವರ ವಿದ್ವತ್ತು ಅಸಾಧಾರಣವಾಗಿತ್ತು. ಶ್ರೇಷ್ಠ ಗೇಯಕಾವ್ಯವಾದ ದ್ವಾದಶ ಸ್ತೋತ್ರಗಳ ರಚನೆ, ಇಷ್ಟೇ ಅಲ್ಲದೆ ಅವರ ಜೀವನದ ಒಂದು ಘಟನೆಯೂ ಇದಕ್ಕೆ ಸಾಕ್ಷಿ ಹೇಳುತ್ತದೆ.

ಗೋವೆಯಿಂದ ಹೊರಟ ಆಚಾರ್ಯರು ಪಶುಪೆ ಎಂಬಲ್ಲಿ ತಂಗಿದ್ದರು. ಆಚಾರ್ಯರ ಕಂಠ ಮಾಧುರ್ಯ ಸಂಗೀತ ಪಾಂಡಿತ್ಯಗಳ ಬಗೆಗೆ ಕೇಳಿ ತಿಳಿದಿದ್ದ ಜನ ಅವರ ಸಂಗೀತವನ್ನೆ ಕೇಳಬಯಸಿದರು. ಜನರ ಬಯಕೆಯಂತೆ ಆಚಾರ್ಯರು ಹಾಡತೊಡಗಿದರು. ಕೇಳಿದ ಜನ ಮೈಮರೆಯುವಂತಹ ಮಾಧುರ್ಯ.

ಹೀಗೆ ಆಚಾರ್ಯರು ತಮ್ಮ ಜೀವನದುದ್ದಕ್ಕೂ ಭಗವಂತನ ಗುಣಗಾನವನ್ನು ಮಾಡಿದರು. ಈ ಕಾರ್ಯಕ್ಕೆ ಎದುರಾದ ಅಡ್ಡಿ-ಆತಂಕಗಳನ್ನು ಧೀರತೆಯಿಂದ ಎದುರಿಸಿದರು. ಚಿಕ್ಕ ಹುಡುಗನಾಗಿದ್ದಾಗಲೆ ತಮ್ಮನ್ನು ಕಡಿಯಲೆಂದು ಬಂದ ಕಾಳಿಂಗ ಸರ್ಪವನ್ನು ಕಾಲಲ್ಲಿ ಹೊಸಕಿ ಹಾಕಿದ ಆಚಾರ್ಯರಿಗೆ ಭಯವೆಂದರೇನೆಂದು ತಿಳಿಯದು. ಅವರು ಯಾವ ಆತಂಕಕ್ಕೂ ಎದೆಗೆಡಲಿಲ್ಲ. ಎಂದೂ ಇನ್ನೊಬ್ಬರಿಗೆ ತಲೆಬಾಗಲಿಲ್ಲ. ತಮ್ಮ ಜೀವನದ ಉದ್ದೇಶ ಅವರಿಗೆ ಸ್ಫುಟವಾಗಿತ್ತು. ಅದನ್ನು ಸಾಧಿಸುವ ಬಗೆಯೂ ತಿಳಿದಿತ್ತು. ತಾವು ಧೀರ ಸಂನ್ಯಾಸಿಯಾಗಿ ಬದುಕಿದರು. ತನ್ನ ಬಳಿ ಬಂದವರಿಗೆಲ್ಲ ಭರವಸೆಯನ್ನು ತುಂಬಿದರು.

79 ವರ್ಷಗಳ ಕಾಲ ಇಂಥ ಸಾರ್ಥಕ ಬದುಕನ್ನು ಬಾಳಿ ಪಿಂಗಲ ಸಂವತ್ಸರದ (ಕ್ರಿ.ಶ. 1317) ಮಾಘ ಶುದ್ಧನವಮಿಯಂದು ಎಲ್ಲ ಶಿಷ್ಯರನ್ನು ಬೀಳ್ಕೊಟ್ಟು  ಬದರಿಗೆಂದು ತೆರಳಿದರು. ಅನಂತರ ಅವರನ್ನು ಎಂದು ಅವರ ಪುಣ್ಯತಿಥಿಯನ್ನಾಗಿ ಆಚರಿಸಲಾಗುತ್ತಿದೆ.

(ಆಧಾರ:  ಬನ್ನಂಜೆ ಗೋವಿಂದಾಚಾರ್ಯರ ಮಾತು ಮತ್ತು ರಾಷ್ಟ್ರೋತ್ತಾನ ಪ್ರಕಟಿಸಿದ ಬರಹ )

ಚಿತ್ರಕೃಪೆ: ಅಮರಚಿತ್ರಕಥಾ

Tag: Madhvacharya, Madhwacharya

ಕಾಮೆಂಟ್‌ಗಳಿಲ್ಲ: