ಮಂಗಳವಾರ, ಆಗಸ್ಟ್ 27, 2013

ಮಧುರಚೆನ್ನ

ಮಧುರಚೆನ್ನ

ಜನರಾಡಿಕೊಳಬಹುದು ನನಗು ನಿನಗೂ ಕೂಡೆ
ಅವರೇನು ಬಲ್ಲರೋ ಒಳನಿಧಾನ,
ನನಗೆ ನೀನತಿ ಮಧುರ, ನಿನಗೆ ನಾ ಬಲುಚೆನ್ನ
ಹೀಗಂತಲೇ ನಾವು ಮಧುರಚೆನ್ನ.

ಇದು ಚೆನ್ನಮಲ್ಲಪ್ಪ ಎಂಬ ಮಹನೀಯರು ಮಧುರಚೆನ್ನ ಎಂಬ ಎಲ್ಲರಿಗೂ ಬೇಕಾದ ವ್ಯಕ್ತಿಗಳಾಗಿ, ಮಧುರ ಕವಿಗಳಾದ ಹಿರಿಮೆಯ ರೀತಿ.  ಕನ್ನಡ ನವೋದಯದ ಪ್ರಾರಂಭಿಕ ಕಾಲದಲ್ಲಿನ ಮಹತ್ವದ ಬರಹಗಾರರಾದ ಮಧುರಚೆನ್ನರು 1903 ಜುಲೈ 31ರಂದು ಜನಿಸಿದರು.  ಅವರು ಹುಟ್ಟಿದ ಊರು ಹಲಸಂಗಿಯ ನೆರೆ ಊರಾದ ಹಿರೇಲೋಣಿಯಾದರೂ ಅವರು ಬದುಕೆಲ್ಲ ಕಳೆದದ್ದು ಹಲಸಂಗಿಯಲ್ಲಿಯೇ.  ಅವರು 1921ರಲ್ಲಿ ಮುಲ್ಕೀ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದರಾದರೂ ಅವರ ಶಾಲೆಯ ಓದು ಅಲ್ಲಿಗೇ  ಮುಕ್ತಾಯಗೊಂಡಿತು.  ಅವರ ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಮುಂತಾದವುಗಳೆಲ್ಲ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳಾಗಿವೆ.  

ವಿಜಾಪುರದಲ್ಲಿ ಶ್ರೀ ಕೊಣ್ಣೊರ ಹಣಮಂತರಾಯರ ಸನ್ನಿಧಾನವನ್ನು ಕೆಲಕಾಲ ಪಡೆದ ಮಧುರಚೆನ್ನರು ಕೊಣ್ಣೊರರು ಹೊರಡಿಸುತ್ತಿದ್ದ ಕಾವ್ಯಗುಚ್ಛಪತ್ರಿಕೆಗೆ ಪ್ರಾಚೀನ ಕವಿತೆಗಳ ಸರಳಾನುವಾದ ಬರೆದರು.  ಈ ಕಾಲದಲ್ಲಿಯೇ ಅವರು ಬೇಂದ್ರೆಯವರನ್ನು ಕಂಡದ್ದು. ಜಯಕರ್ನಾಟಕಪತ್ರಿಕೆಯ ಸಂಬಂಧವನ್ನು ಬೆಳೆಸಿಕೊಂಡದ್ದು.  ಇಲ್ಲಿಂದ ಪ್ರಾರಂಭವಾದ ಅವರ ಸಾಹಿತ್ಯಕ ಕಾರ್ಯ ಅವರ ಜೀವನದುದ್ದಕ್ಕೂ ಬೆಳೆಯುತ್ತಾ ಹೋಯಿತು.

ಮಧುರ ಚೆನ್ನರ ಬದುಕಿನ ಇನ್ನೊಂದು ಆಯಾಮವೆಂದರೆ ಅವರ ಆಧ್ಯಾತ್ಮಿಕ ಸಾಧನೆ:

ಹನ್ನೆರಡು ತುಂಬಿಲ್ಲ ಕನ್ನಕ್ಕಿ ನಾನಂದು
ನನ್ನ ನಲ್ಲನ ಕತೆಗೆ ಮರುಳುಗೊಂಡೆ
ಇನ್ನೇನು ಹೇಳುವೆನು ಇಂದಿಗಿಪ್ಪತ್ತಾರು
ಈಸೊಂದು ದಿನಕರಗಿ ಗೊತ್ತುಗೊಂಡೆ

ಎಂದು ನನ್ನನಲ್ಲದಲ್ಲಿ ಮಧುರಚೆನ್ನರು ತಮ್ಮ ಆತ್ಮಕಥೆಯನ್ನು ಹೇಳಿಕೊಂಡಿದ್ದಾರೆ.   ಅವರು ತಮ್ಮ ಹನ್ನೆರಡನೆಯ ವಯಸ್ಸಿನ ಸುಮಾರಿಗೆ ದೇವರನ್ನು ಕಾಣುವ ಹಂಬಲವುಳ್ಳವರಾದರು.  ಸುಮಾರು ಹದಿನಾಲ್ಕು ವರ್ಷಗಳ ಸಾಧನೆಯಲ್ಲಿ ಹೋರಾಡಿ ಅವನನ್ನು ಅರಿತುಕೊಂಡರು.  ಅನಂತರದಲ್ಲಿಯೂ ತಮ್ಮ ಸಾಧನೆಯನ್ನು ಮುಂದುವರೆಸಿದ ಅವರು ತಮ್ಮ ಧ್ಯೇಯವನ್ನು ಈಡೇರಿಸಿಕೊಂಡರು.  ಅವರ ಆಧ್ಯಾತ್ಮಿಕ ಸಾಧನೆಯ ಕಥನ ಅವರ ಗದ್ಯಕೃತಿಗಳಾದ ಪೂರ್ವರಂಗ’, ‘ಕಾಳರಾತ್ರಿ’, ‘ಬೆಳಗುಮತ್ತು ಆತ್ಮಸಂಶೋಧನೆಇವುಗಳಲ್ಲಿ ಮನೋಜ್ಞವಾಗಿ ಪ್ರಕಟಗೊಂಡಿದೆ.

ಮಧುರ ಚೆನ್ನರ ನನ್ನನಲ್ಲಮರೆಯಲಾಗದ ಅನುಭಾವ ಗೀತ.  ಈ ಸಂಕಲನದಲ್ಲಿ ನನ್ನನಲ್ಲ’, ‘ಮಧುರಗೀತಎಂಬ  ಎರಡು ಪ್ರಮುಖ ನೀಳ್ಗವಿತೆಗಳಿದ್ದು ಉಳಿದದ್ದು ಭಾವಗೀತೆಗಳಾಗಿವೆ.  ನನ್ನನಲ್ಲಅವರ ಹದಿನಾಲ್ಕು ವರ್ಷಗಳ ಆಧ್ಯಾತ್ಮಿಕ ಸಾಧನೆಯನ್ನು ಚಿತ್ರಿಸುತ್ತದೆ.

ಯಾರ ಕೇಳಿದರಿಲ್ಲ ಯಾರು ಹೇಳಿದರಿಲ್ಲ
ಯಾರ ಬಳಿಯಲಿ ಅತ್ತುಕರೆದರಿಲ್ಲ
ಯಾರ ಕಡೆಗೇನುಂಟು ಮೀರಿಮಿಕ್ಕಿದ ಮಾತು
ಯಾರ ಬಳಿಗು ನೆಲೆಕಾಣಲಿಲ್ಲ

ಹೀಗೆ ಸಾಗುವ ಅವರ ಹುಡುಕಾಟ ಮುಂದೆ ಉತ್ಕಟ ಭಾವದ ಅನುಭಾವವನ್ನು ಚಿತ್ರಿಸುವುದು ಹೀಗೆ:

ಬಂತು ಬಂತೆಲೆ ಬಂತು, ಬಂತು ಘನಸಿರಿ ಬಂತು
ಬಂತೆಂದರೂ ಇದ್ದುದಿದ್ದೇ ಇತ್ತು,
ಬಂತು ಬೆಳಗೆಂಬಂತೆ ಬಂತು ಹೊಳೆ ಬಂದಂತೆ
ಇದ್ದದ್ದೆ ತುಂಬಿ ತುಳುತುಳುಕುತ್ತಿತ್ತು.

ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ
ನಿಶ್ಯಬ್ದವಿದ್ದರೂ ಮೌನವಲ್ಲ,
ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ
ನಿಸ್ಸೀಮವೆಂದರೂ ಶೂನ್ಯವಲ್ಲ.

ಇಲ್ಲಿಯ ಅನುಭಾವದ ಅಭಿವ್ಯಕ್ತಿ ಶಬ್ದಕ್ಕೆ ಮೀರಿದ ಅನುಭವವನ್ನು ವ್ಯಕ್ತಪಡಿಸುತ್ತದೆ.  ಈ ಕುರಿತು ಡಾ. ವಿ. ಕೃ. ಗೋಕಾಕರು ಹೇಳುತ್ತಾರೆ:   “.... ಆತ್ಮದ ದಿವ್ಯ ಅರುಣೋದಯದ ಶ್ರೀಮದ್ಗಂಭೀರ ವರ್ಣನೆ ಈ ಅದ್ಭುತ ಶಬ್ದ-ರಂಗದ ನಿಶ್ಯಬ್ದತೆಯನ್ನು ಅನುಭವಿಸಿಯೇ ನೋಡಬೇಕು.  ಇಲ್ಲಿ ಅನುಭವದ ಆಳ ದರ್ಶನ ಧಬೆಧಬೆಯಾಗಿ ಧುಮ್ಮಿಕ್ಕಿದೆ.  ಆ ಧವಲಗಂಗೆಯ ಧಾವವನ್ನು ನಿಂತು ನೋಡಬೇಕು

ಮಧುರಚೆನ್ನರ ಇನ್ನೊಂದು ನೀಳ್ಗವನ ಮಧುರಗೀತ.  ಇಂದೊಂದು ಸ್ನೇಹಸೂಕ್ತ, ಸಖ್ಯಯೋಗ ಗೀತ.  ಈ ಕವಿತೆಯಲ್ಲಿ ಪ್ರೇಮ, ಮೋಹ ಗೆಳೆತನದ ಆದರ್ಶ ಮುಂತಾದವುಗಳೆಲ್ಲ ನಿರೂಪಿತವಾಗಿವೆ. 

ದೇವಲೀಲೆಯೋ ಕಾಣೆ ಕರ್ಮಜಾಲವೋ ಕಾಣೆ
ಅದು ನಮ್ಮ ಬುದ್ಧಿಯಾಚೆಗಿನ ಮಾತು,
ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು
ಭವದಲ್ಲಿ ಕಾಣೆ ಮನಗಂಡ ಮಾತು.

ಮಧುರಚೆನ್ನರ ದೇವತಾ ಪೃಥಿವಿದ. ರಾ ಬೇಂದ್ರೆಯವರು ನುಡಿದಂತೆ ಕೃತಿ  ಸತಿಯ ಶಿರೋರತ್ನ.  ಈ ಕವಿತೆಯ ವಸ್ತು ಮಧುರಚೆನ್ನರು ತಮ್ಮ ಬೆಳಗುಕೃತಿಯಲ್ಲಿ ತಿಳಿಸಿಕೊಟ್ಟಂತೆ ಪರ್ಯಾಯದಿಂದ (indirectly) ಈಶ ಪ್ರೇರಕತ್ವವನ್ನು ಒಪ್ಪಿಕೊಂಡ ಜೀವವು ಈಗ ತೀರ ಪ್ರತ್ಯಕ್ಷವಾಗಿ (directly) ಮತ್ತು ಅವಿಚ್ಚಿನ್ನವಾಗಿ ಅದನ್ನು ಅನುಭವಿಸಲೆಳಸುತ್ತಿದೆಎಂಬ ಸಾಧನೆಯ ಒಂದು ಹಂತವನ್ನು ಒಳಗೊಂಡಿದೆ.  ಅಂದರೆ ಪೃಥ್ವಿಯ ದೈವತ್ವ ಮತ್ತು ತಾಯ್ತನಗಳನ್ನು ಶ್ರದ್ಧೆಯಿಂದ ಒಪ್ಪಿಕೊಂಡ ಕವಿ ಒಂದು ಹಸಿವೆಯನ್ನು ಹಿಂಗಿಸಿಕೊಂಡು ಇನ್ನೊಂದು ಹಸಿವೆಗೆ (ಕೇವಲದ ಹಸಿವೆಗೆ) ಬಾಯ್ದೆರೆದಿದ್ದಾನೆ.

ಹಸವೀಗಿ ಮೊಲೆಯುಂಡೆ ಕಸಿವೀಸಿಗೇನುಳ್ಳೆ
ಹಾಲೊಲ್ಲೆ ಸಾಕು ಬಿಗಿದಪ್ಪೆ | ತಾಯಮ್ಮ
ಮಲಗಿರುವ ತಾಯಿ ಪೃಥಿವಿ||

ಮೊಲೆಹಾಲು ರುಚಿಗೊಂಡು ಮನದ್ಹಾಲ ಬಯಸೀನ
ಗುಟುಗುಟುಕಿಗೊಮ್ಮೆ ಮಿಕಿಮಿಕಿ ಏಳಮ್ಮ
ಮಲಗಿರುವ ತಾಯಿ ಪೃಥಿವಿ ||

ದೈವತ್ವದ ಬಾಹ್ಯಸ್ವರೂಪದ ಸೌಂದರ್ಯವನ್ನು ಅನುಭವಿಸಿದ ಕವಿ, ಅದಕ್ಕೆ ಮಿಗಿಲಾಗಿ ಅಂತರಂಗದ ಐಸಿರಿಯನ್ನು ಕಾಣಲು ಹಂಬಲಿಸುತ್ತಿರುವುದು ಇಲ್ಲಿ ಕಂಡುಬರುತ್ತದೆ.

ಮಧುರಚೆನ್ನರ ಇನ್ನುಳಿದ ಭಾವಗೀತಗಳಲ್ಲಿ ಸಲಿಗೆಯ ಸಲ್ಲಾಪ’, ‘ನೋಂಪಿ’, ‘ಕೆಸರೊಳಗಿನ ಕಮಲ’, ‘ಸುಖದುಃಖ’, ‘ಸುಖ ಜೀವನ’, ‘ಧ್ರುವ’, ‘ಉಷಾದೇವಿ’, ‘ರೋಹಿಣಿ’, ‘ಮಾವಿನಗೊಲ್ಲೆಮುಂತಾದವುಗಳು ಭಾವ, ಭಾಷೆ, ಲಯ ಮುಂತಾದವುಗಳಿಂದ ಕನ್ನಡದ ಅತ್ಯುತ್ತಮ ಭಾವಗೀತಗಳ ಮಾಲಿಕೆಗೆ ಸೇರುತ್ತವೆ.   ಹೊಸಗನ್ನಡ ಕಾವ್ಯಕ್ಕೆ ಜಾನಪದ ಸತ್ವವನ್ನು ತುಂಬಿ, ಆತ್ಮಚಿಂತನೆಯ ಅನುಭಾವ ಮಾರ್ಗದಲ್ಲಿ ಅದನ್ನು ನಡೆಸಿಕೊಂಡು ಹೋಗಿ, ಕೃತಕೃತ್ಯರಾದ ಮಧುರಚೆನ್ನರು ಕೆಲವೇ ಕೃತಿಗಳನ್ನು ನೀಡಿದ್ದರೂ ಅವುಗಳ ಚೆಲುವು ಎಂದಿಗೂ ಮಾಸದಂತಹುದುಎಂಬ ಚೆನ್ನವೀರ ಕಣವಿಯರ ವಿಮರ್ಶೆ ಸಕಲರೂ ಒಪ್ಪಿಕೊಳ್ಳುವಂತಹದಾಗಿದೆ.

ಮಧುರಚೆನ್ನರ ಗದ್ಯಕೃತಿಗಳಲ್ಲಿ ಪೂರ್ವರಂಗ’ ‘ಕಾಳರಾತ್ರಿ’, ‘ಬೆಳಗುಮತ್ತು ಆತ್ಮ ಸಂಶೋಧನೆಇವು ಆಧ್ಯಾತ್ಮಿಕ ಸಾಧನೆಯನ್ನು ಚಿತ್ರಿಸುವ ಸೃಜನಶೀಲ ಕೃತಿಗಳೆಂದೆನಿಸಿವೆ.   ಪೂರ್ಣಯೋಗದ ಪಥದಲ್ಲಿ’, ‘ಕನ್ನಡಿಗರ ಕುಲಗುರುಇತ್ಯಾದಿಗಳು ಅವರ ಚಿಂತನಶೀಲ ಗದ್ಯಕೃತಿಗಳು.  ವಿಸರ್ಜನರವೀಂದ್ರನಾಥ ಠಾಗೂರರ ನಾಟಕದ ಅನುವಾದ.  ಮಾತೃವಾಣಿಶ್ರೀಮಾತೆಯವರ ವರ್ಡ್ಸ್ ಆಫ್ ದಿ ಮದರ್ಅನುವಾದವಾಗಿದೆ. 

ಬೇರೆ ಬೇರೆ ಪತ್ರಿಕೆಗಳಲ್ಲಿ ಚದರಿಹೋದ ತಮ್ಮ ಸಂಶೋಧನಾತ್ಮಕವಾದ ಒಟ್ಟು ಹದಿನಾಲ್ಕು ಲೇಖನಗಳನ್ನು ಮಧುರಚೆನ್ನರು ಪ್ರಕಟಿಸಿದ್ದು, ‘ವಿಜಾಪುರ ಶಾಸನ’,  ‘ಅಭಿನವ ಪಂಪ ಮಹಾಕವಿ ಬರೆದ ವಿಜಾಪುರ ಶಿಲಾಲಿಪಿ’, ‘ಪ್ರಾಚೀನ ಕಾಲದ ಒಬ್ಬ ನಟಶ್ರೇಷ್ಠ ಹಾಗೂ ಒಬ್ಬ ಕವಿ’, ‘ಅರ್ಜುನವಾಡದ ಶಾಸನಈ ಮುಂತಾದವುಗಳು ನಮ್ಮ ಸಾಹಿತ್ಯ ಚರಿತ್ರೆಯ ಮೇಲೆ ಹೊಸ ಬೆಳಕು ಬೀರಿವೆ.  ಅರವಿಂದ ಸಾಹಿತ್ಯ, ಶರಣ ಸಾಹಿತ್ಯ, ಜನಪದ ಸಾಹಿತ್ಯ, ಭಾಷಾಶಾಸ್ತ್ರ ಇತ್ಯಾದಿ ವಿಷಯಗಳನ್ನು ಕುರಿತು ಅವರು ಬರೆದ ಹಲವು ಲೇಖನಗಳು ಆಯಾ ಕ್ಷೇತ್ರಗಳಲ್ಲಿ ಕಾರ್ಯಮಾಡುವವರಿಗೆ ಅತ್ಯಂತ ಉಪಯುಕ್ತ ಸಾಮಗ್ರಿಯಾಗಿವೆ. 

ಹಲಸಂಗಿ ವಿಜಾಪುರ ಜಿಲ್ಲೆಯ ಉತ್ತರದ, ಸೊಲ್ಲಾಪುರ ಗಡಿ ಪ್ರದೇಶಕ್ಕೆ ಹತ್ತಿರದಲ್ಲಿರುವ ಒಂದು ಸಣ್ಣ ಹಳ್ಳಿ.  ಈ ಹಳ್ಳಿಯಲ್ಲಿಯೇ ಒಂದು ಗೆಳೆಯರ ಗುಂಪನ್ನು ಅವರು ಕಟ್ಟಿಕೊಂಡಿದ್ದರು.  ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ ಧೂಲ್ಲಾ ಇವರೆಲ್ಲ ಅಲ್ಲಿಯ ಸಾಹಿತ್ಯ ಸ್ನೇಹಿತರು.  ಸ್ನೇಹಿತರು ಎನ್ನುವುದಕ್ಕಿಂತ ಸೋದರರು ಎಂದು ಕರೆಯುವುದೇ ಹೆಚ್ಚು ಸೂಕ್ತವಾದದ್ದು.  ಈ ಹಲಸಂಗಿ ಗೆಳೆಯರು ನವೋದಯ ಸಾಹಿತ್ಯಕ್ಕೆ ತಮ್ಮ ಕೊಡುಗೆಗಳನ್ನು ನೀಡಿದ್ದಲ್ಲದೆಪ್ರಪ್ರಥಮವಾಗಿ ಜನಪದ ಸಾಹಿತ್ಯದಲ್ಲಿ ಅಮೂಲ್ಯವಾದ ಕೆಲಸವನ್ನು ಮಾಡಿದ್ದಾರೆ.  ಗರತಿಯ ಹಾಡು’, ‘ಮಲ್ಲಿಗೆ ದಂಡೆ’, ‘ಜೀವನ ಸಂಗೀತಈ ಜನಪದ ಹಾಡುಗಳ, ಲಾವಣಿಗಳ ಸಂಗ್ರಹಗಳು ಇಂದಿಗೂ ಅನುಪಮ ಕೊಡುಗೆಗಳಾಗಿ ಉಳಿದಿವೆ.

ಧಾರವಾಡ ಗೆಳೆಯರ ಗುಂಪಿನ ಗೆಳೆಯರೂ ಆಗಿದ್ದ ಹಲಸಂಗಿ ಗೆಳೆಯರು ತನ್ಮೂಲಕವೂ ನಾಡುನುಡಿಯ ಸೇವೆ ಮಾಡಿದ್ದಾರೆ.  ಹಲಸಂಗಿ ಗೆಳೆಯರಲ್ಲಿಯೇ ಮಧುರಚೆನ್ನರದು ಅದಮ್ಯ ವ್ಯಕ್ತಿತ್ವ.  ಸಾಹಿತ್ಯಕ ಹಿರಿಮೆಯಿಂದ, ಗೆಳೆಯ ಗುಂಪಿನ ಬಾಂಧವ್ಯದಿಂದ, ಅರವಿಂದ ಮಂಡಳದ ಸತ್ಸಂಗದಿಂದ ಅವರು ತಮ್ಮ ಪ್ರಭಾವಮುದ್ರೆಯನ್ನು ಮೂಡಿಸಿದ್ದಾರೆ.  ಬೇಂದ್ರೆ ಒಂದು ಪದ್ಯದಲ್ಲಿ ಮಧುರಚೆನ್ನರನ್ನು ನೆನೆದುಕೊಳ್ಳುತ್ತ, ಅವರ ಅಸದೃಶ ಗೆಳೆತನವನ್ನು ಕುರಿತು ಆಡಿದ ಮಾತು ಎಂದೆಂದೂ ಮರೆಯದಂತಹದಾಗಿದೆ:

ಮಧುರಗೀತವ ಹಾಡಿ ನನ್ನನಲ್ಲನ  ಒಲಿಸಿ
ಹಲಸಂಗಿ ನಾಡಿನಲ್ಲಿ ನೆಲೆಸಿ ನಿಂತ
ನನ್ನ ಚೆನ್ನನಿಗೆಣೆಯಾ ಗೆಣೆಯರಾರೀಹರು
ಅವನೆ ಅವನಿಗು ಹೆಚ್ಚು ಅವನಿಗಿಂತ

ಮಧುರ ಚೆನ್ನರು 1952 ಆಗಸ್ಟ್ 15ರಂದು ಈ ಲೋಕವನ್ನಗಲಿದರು.  ಇನ್ನೂ ಐವತ್ತು ವರುಷವೂ ತುಂಬುವುದಕ್ಕೆ ಮುಂಚೆಯೇ ಅಸ್ತಮಿಸಿದ ಅವರ ಬಾಳು ಪೂರ್ಣತ್ವದಿಂದ ಶೋಭಿತಗೊಂಡದ್ದು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಮಾಹಿತಿ ಆಧಾರ: ಸಾಲು ದೀಪಗಳು ಕೃತಿಯಲ್ಲಿ ಜಿ. ಪಿ. ಕಾಪಸೆ ಅವರ ಲೇಖನ.

ಚಿತ್ರಕೃಪೆ: ಕೆಂಡಸಂಪಿಗೆ

Tag: Madhurachanna, Madhurachenna

ಕಾಮೆಂಟ್‌ಗಳಿಲ್ಲ: