ಶುಕ್ರವಾರ, ಆಗಸ್ಟ್ 30, 2013

ಜೇಡರ ದಾಸಿಮಯ್ಯ

ಜೇಡರ ದಾಸಿಮಯ್ಯ

ಭಕ್ತಿಯಿಲ್ಲದ ಬಡವ ನಾನಯ್ಯಾ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ಚೆನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತನರು  ನೆರೆದು ಭಕ್ತಿಭಿಕ್ಷವನ್ನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು, ಕೂಡಲ ಸಂಗಮದೇವಾ

ಬಸವಣ್ಣನವರು ಈ ವಚನದಲ್ಲಿ ತಮ್ಮ ಸಮಕಾಲೀನ ಹಿರಿಯ ಶರಣರನ್ನು ಮನಸಾರೆ ಸ್ತುತಿಸಿದ್ದಾರೆ. ಅವರಲ್ಲಿ ಜೇಡರ ದಾಸಿಮಯ್ಯನು  ಒಬ್ಬ ಶ್ರೇಷ್ಠ ಅನುಭಾವಿ  ಹಾಗೂ ಹಿರಿಯ ವಚನಕಾರನಾಗಿದ್ದಾನೆ. ದಾಸಿಮಯ್ಯ ದಾಸಯ್ಯ ದಾಸಿಮಾರ್ಯ, ದೇವರ  ದಾಸಿಮಯ್ಯ ಮುಂತಾದ  ಹೆಸರುಗಳಿಂದ ಅವನನ್ನು ಕರೆದಿದ್ದಾರೆ. ದಾಸಿಮಯ್ಯನು ಬಸವಣ್ಣನವರ  ಮೇಲೆ ವಿಶೇಷ ಪರಿಣಾಮ ಬೀರಿದ  ಶರಣನು.

ಶರಣರ ಹೃದಯದಂತಿದ್ದ  ಬಸವಣ್ಣನವರು ಸ್ಥಾಪಿಸಿದ  ಅನುಭವ ಮಂಟಪದಲ್ಲಿ  ವೈಚಾರಿಕ ವಿನಿಮಯ ನಡೆಸುತ್ತಿದ್ದರು. ಕೆಳವರ್ಗದವರನ್ನು ಆರ್ಥಿಕ  ಸಾಮಾಜಿಕ ಶೈಕ್ಷಣಿಕವಾಗಿ ಮೇಲೆತ್ತಲು  ಸಮಾಜದ ಒಳಿತಿಗಾಗಿ ಮೂಢಾಚಾರ ಶುಷ್ಕಾಚಾರಗಳನ್ನು ತಡೆಯಲು  ಕುಲ ಜಾತಿ ಕಸಬು ಮೊದಲಾದ ಬೇಧಭಾವ ಅಳಿಸಲು ಕಾರ್ಯ  ತತ್ಪರರಾಗಿದ್ದರು. ಅವರ ವೈಚಾರಿಕ ಪ್ರಜ್ಞೆಯೇ ವಚನಗಳ ಮುಖಾಂತರ ಹೊರ ಹೊಮ್ಮಿತು. ಅಂಥ ವಚನಗಳನ್ನು ರಚಿಸಿದವರಲ್ಲಿ ಜೇಡರ ದಾಸಿಮಯ್ಯನು ಎತ್ತರದ  ಸ್ಥಾನದಲ್ಲಿ  ನಿಲ್ಲುತ್ತಾನೆ.   ಅವನ ವಿಷಯ  ಹಲವಾರು ಕಾವ್ಯಗಳಲ್ಲಿ ಬಂದಿದೆ.

ಸುಪ್ತ ತೀರ್ಥಗಳ ನಿಸರ್ಗ ಸೌಂದರ್ಯದ ನಡುವಿರುವ ಮುದನೂರು ಕಲಬುರ್ಗಿ ಜಿಲ್ಲೆಯ ಒಂದು ಹಳ್ಳಿ ಅದು ದಾಸಿಮಯ್ಯನ ಜನ್ಮಸ್ಥಳವು. ಆ ಊರಲ್ಲಿ ರಾಮನಾಥ ದೇವಾಲಯವಿದ್ದು  ರಾಮನಾಥನೇ ದಾಸಿಮಯ್ಯನ ಆರಾಧ್ಯ ದೈವವು ಅವನ ವಚನಾಂಕಿತ  ರಾಮನಾಥ ಎಂದಿದೆ. ಅವನ ತಂದೆಯ ಹೆಸರು ರಾಮಯ್ಯ  ತಾಯಿ ಶಂಕರಿ.   ಅವರ ಮನೆತನದ ಉದ್ಯೋಗ ನೇಕಾರಿಕೆ.  ನೇಯ್ಕೆ  ಕಾಯಕದಲ್ಲಿದ್ದರೂ ದಾಸಿಮಯ್ಯನಿಗೆ ಆತ್ಮಜ್ಞಾನದ ಹಸಿವು  ಬಹಳವಾಗಿತ್ತು ಅದಕ್ಕಾಗಿ  ಶ್ರೀಶೈಲಕ್ಕೆ  ಹೋಗುತ್ತಾನೆ. ಪಂಡಿತಾರಾಧ್ಯ  ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಸಾಧನೆ ಮಾಡಿ ಶಿವಜ್ಞಾನ  ಸಂಪನ್ನನಾಗುತ್ತಾನೆ.

ಶಿವಜ್ಞಾನ ಸಂಪನ್ನನಾದ ದಾಸಿಮಯ್ಯನು ಲೋಕ ಕಲ್ಯಾಣದ ಕೈಂಕರ್ಯ ತೊಟ್ಟು  ಚಾಲುಕ್ಯ ರಾಜ್ಯದ  ಪೊಟ್ಟಲ ಕೆರೆಯತ್ತ ಸಾಗುತ್ತಾನೆ  ದಾರಿಯಲ್ಲಿ  ಶಿವಾನುಭವ ಗೋಷ್ಠಿಗಳನ್ನು  ಮಾಡುತ್ತ ಸಾವಿರಾರು ಜನರಿಗೆ ಶಿವದೀಕ್ಷೆ ನೀಡುತ್ತಾನೆ.  ಹಿಂಸಾವೃತ್ತಿಯಲ್ಲಿ  ತೊಡಗಿದ್ದ ಬೇಡ ಜನಾಂಗಕ್ಕೆ  ಬುದ್ದಿ  ಹೇಳಿ ಅವರ  ಮನ ಪರಿವರ್ತಿಸಿ  ದೀಕ್ಷೆ ನೀಡಿ ಸನ್ಮಾರ್ಗಕ್ಕೆ ಹಚ್ಚುತ್ತಾನೆ. ನಂದಿ ಗ್ರಾಮದಲ್ಲಿ  ಎದುರಾದ  ವೈದಿಕರೊಡನೇ ವಾದ ವಿವಾದ ಮಾಡಿ ಜಯಸುತ್ತಾನೆ ಗೌಡಗೆರೆಗೆ ಬಂದು ಅಲ್ಲಿ ಅಸಂಖ್ಯಾತ ರೈತ ಜನಕ್ಕೆ ಜ್ಞಾನ ಬೋಧೆ ಮಾಡುತ್ತಾನೆ.

ಪೊಟ್ಟಲಕೆರೆಗೆ ಬಂದು ಅಲ್ಲಿಯ  ಎಲ್ಲ ಜೈನ  ಪಂಡಿತರನ್ನು ವಾದದಲ್ಲಿ  ಸೋಲಿಸುತ್ತಾನೆ. ಅವರಿಗೆಲ್ಲ ಶಿವದೀಕ್ಷೆ ನೀಡುತ್ತಾನೆ. ಅಲ್ಲಿಯ ರಾಜ 2ನೇ ಜಯಸಿಂಹ ಮತ್ತು ರಾಣಿ ಸುಗ್ಗಲೆ ಇವನಿಂದ ಶಿವದೀಕ್ಷೆ  ಪಡೆಯುತ್ತಾರೆ. ನಂತರ ದಾಸಿಮಯ್ಯನು  ತನ್ನ ಊರಾದ ಮುದನೂರಿಗೆ ಬಂದು ನೇಯ್ಗೆ  ಕಾಯಕ ಮಾಡಿಕೊಂಡು ಜನರಿಗೆ ಶಿವಾನುಭವ ನೀಡುತ್ತಾ ಜೀವನ ಸಾಗಿಸುತ್ತಾನೆ.

ಶರಣರು ದಂಪತ್ಯ ಜೀವನಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ.  ಮೋಳಿಗೆಯ ಮಾರಯ್ಯ ಮಹಾದೇವಿ ಹಡಪದ  ಅಪ್ಪಣ್ಣ ಲಿಂಗಮ್ಮ  ಬಸವಣ್ಣ ನೀಲಾಂಬಿಕೆ ಆಯ್ದಕ್ಕಿ ಮಾರಯ್ಯ ಲಕ್ಕಮ್ಮ ಹರಳಯ್ಯ ಕಲ್ಯಾಣಮ್ಮ ಮೊದಲಾದವರು ಆದರ್ಶ ಶರಣ ದಂಪತಿಗಳಾಗಿದ್ದಾರೆ.  ಪ್ರಾಯಕ್ಕೆ ಬಂದಿದ್ದ ದಾಸೀಮಯ್ಯನು ಮದುವೆಯಾಗುವ ಇಚ್ಛೆ ಉಳ್ಳವನಾಗಿ ಹೆಣ್ಣಿನ ಅನ್ವೇಷಣೆಯಲ್ಲಿ ತೊಡಗುತ್ತಾನೆ.

ಮಳಲಕ್ಕಿ ಪಾಯಸ :-ದಾಸಿಮಯ್ಯನು ಕಬ್ಬಿನ ಜಲ್ಲೆ ಮಳಲಕ್ಕಿಯಿಂದ ನೀರು ಮತ್ತು ಸೌದೆ ಉಪಯೋಗಿಸದೆ ಪಾಯಸ ಮಾಡಿಕೊಡುವಂಥ ಜಾಣ ಕನ್ಯೆಯನ್ನು  ವಿವಾಹವಾಗುವ ಷರತ್ತಿನ ಮೇಲೆ  ಕೈಯಲ್ಲಿ ಕಬ್ಬಿನ ಜಲ್ಲೆ ಹಾಗೂ  ಮಳಲು ಮಿಶ್ರಿತ ಅಕ್ಕಿ ಗಂಟನ್ನು ಹಿಡಿದು ಕೊಂಡು  ಕನ್ಯಾನ್ವೇಷಣೆಗೆ  ಹೊರಡುತ್ತಾನೆ.  ಹನ್ನೆರಡು  ವರ್ಷ ಕಳೆದರೂ  ಅಂಥ ಕನ್ಯೆ ಸಿಗುವುದಿಲ್ಲ.  ಕಡೆಗೆ ಗೊಬ್ಬೂರಿಗೆ ಬಂದು ಮಲ್ಲನಾಥ ಶಿವಯೋಗಿ ದಂಪತಿಗಳಿಗೆ ತನ್ನ ಅಭಿಲಾಷೆಯನ್ನು ತಿಳಿಸುತ್ತಾನೆ. ಅವನ ಶರತ್ತು ಕೇಳಿ  ಅಂಥ  ಕನ್ಯೆ  ನಿನಗೆ  ಈ ಜನ್ಮದಲ್ಲಿ ಸಿಗಲಾರಳು ಎನ್ನುತ್ತಿರುವಾಗಲೇ  ಅವರ ಮಾತನ್ನು  ಆಲಿಸಿದ ಅವರ ಮಗಳು ದುಗ್ಗಳೆ ಅದೇಕೆ  ಸಿಗಲಾರಳು? ಮಳಲಕ್ಕಿ  ಪಾಯಸ ನಾನು ಮಾಡಿಕೊಡುವೆನೆಂದು ದಾಸಿಮಯ್ಯನ  ಸವಾಲು ಸ್ವೀಕರಿಸುತ್ತಾಳೆ. ದುಗ್ಗಳೆಯು ಕಬ್ಬುಗಳನ್ನು ತರಿಸಿ ಬುಡದ ಭಾಗ ಹಾಗೂ ತುದಿ ಭಾಗಗಳನ್ನು ಬೇರೆ ಬೇರೆ ಮಾಡಿ ಸಿಹಿರಸ ಹಾಗೂ ಸಪ್ಪೆರಸಗಳನ್ನು  ಬೇರೆ ಬೇರೆ ಪಾತ್ರೆಗಳಲ್ಲಿ ಸಂಗ್ರಹಿಸುತ್ತಾಳೆ. ಕಬ್ಬಿನ ಸಿಪ್ಪೆ  ಒಣಗಿಸಿ ಬೆಂಕಿ  ಹೊತ್ತಿಸಿ ಸಪ್ಪೆ ಸರದ ಪಾತ್ರೆಯಲ್ಲಿ ಮರಳು ಮಿಶ್ರಿತ  ಅಕ್ಕಿ ಹಾಕಿ ಕುದಿಸಲು  ಪಾಕ ಸಿದ್ಧವಾಗುತ್ತದೆ. ಅದನ್ನು ಜಾಲಾಡಿ  ತಳದಲ್ಲಿ ಮರಳು ಉಳಿಯುವಂತೆ  ಮಾಡಿ ಮೇಲಿನ  ಪಾಕವನ್ನು ಸಿಹಿ ರಸದ ಪಾತ್ರೆಯಲ್ಲಿ ಕೂಡಿಸಿ ತಯಾರಾದ  ಪಾಯಸವನ್ನು ದಾಸಿಮಯ್ಯನಿಗೆ ಕೊಡುತ್ತಾಳೆ.  ಹೀಗೆ  ನೀರು ಮುಟ್ಟದೆ ಸೌದೆ  ಉಪಯೋಗಿಸದೆ ಮಳಲಕ್ಕಿ ಪಾಯಸ ತಯಾರಿಸಿಕೊಟ್ಟ ಚಿಕ್ಕ ಹುಡುಗಿ ದುಗ್ಗಳೆಯ ಜಾಣತನಕ್ಕೆ ಎಲ್ಲರೂ ಬೆರಳು ಕಚ್ಚುತ್ತಾರೆ. ಅವಳನ್ನು  ಕೊಂಡಾಡುತ್ತಾರೆ.  ದಾಸಿಮಯ್ಯನು ದುಗ್ಗಳೆಯನ್ನು  ವಿವಾಹವಾಗುತ್ತಾನೆ. ಅವರಿಬ್ಬರು ನೇಯ್ಗೆ  ಕಾಯಕ  ಮಾಡಿಕೊಂಡು ಅನ್ಯೌನ್ಯತೆಯಿಂದ ಜೀವನ  ಸಾಗಿಸುತ್ತಾರೆ.

ಸತವನಿಧಿ ಪಡೆದ ಪ್ರಸಂಗ:- ನೇಯ್ಗೆ  ಕಾಯಕದಲ್ಲಿ ಪರಿಣಿತನಾದ ದಾಸಯ್ಯನು ಹನ್ನೆರಡು ವರ್ಷ ಕಷ್ಟಪಟ್ಟು  ಒಂದು ಸುಂದರವಾದ ಬಹುಬೆಲೆಯುಳ್ಳ ಹೊದೆಯುವ  ವಸ್ತುವನ್ನು ನೇಯ್ದಿರುತ್ತಾನೆ. ಅದನ್ನು ಮಾರಲು  ಸಂತೆಗೆ ಒಯ್ಯುತ್ತಾನೆ. ಬಹು ಬೆಲೆಯುಳ್ಳ ಆ ವಸ್ತ್ತ್ರವನ್ನು  ಕೊಳ್ಳಲು ಯಾರೂ ಬರಲಿಲ್ಲ. ದಾಸಿಮಯ್ಯ ಮನೆಗೆ ಮರಳಿ ಬರುವಾಗ  ಒಬ್ಬ ಜಂಗಮನು  ಆ ದಿವ್ಯಾಂಬರವನ್ನು  ಬೇಡುತ್ತಾನೆ. ದಾಸಿಮಯ್ಯ ಒಂದೂ ವಿಚಾರಿಸದೆ ಅದನ್ನು ಜಂಗಮನಿಗೆ  ಕೊಟ್ಟು  ಬಿಡುತ್ತಾನೆ. ಜಂಗಮನು ಆ ದಿವ್ಯಾಂಬರವನ್ನು ದಾಸಿಮಯ್ಯನ  ಎದುರಿಗೆ  ಹರಿದು ಚೂರು ಮಾಡಿ ಗಾಳಿಯಲ್ಲಿ ತೂರುತ್ತಾನೆ. ದಾಸಿಮಯ್ಯ ಸ್ವಲ್ಪವೂ ವಿಚಲಿತನಾಗಲಿಲ್ಲ ಅವನು ಜಂಗಮನನ್ನು  ಮನೆಗೆ  ಕರೆದುಕೊಂಡು ಹೋಗಿ ಸತ್ಕರಿಸುತ್ತಾನೆ.  ದಂಪತಿಗಳ  ಜಂಗಮ ನಿಷ್ಠೆಗೆ  ಸಂಪ್ರೀತನಾಗಿ ಜಂಗಮನಾಗಿ  ಬಂದ ಶಿವನು  ತನ್ನ ನಿಜರೂಪ ತೋರಿ ಅವರಿಗೆ ತವನಿಧಿ (ಅಕ್ಷಯ ಪಾತ್ರೆ) ದಯಪಾಲಿಸಿ ಬಯಲಾಗುತ್ತಾನೆ. ತವನಿಧಿ ಪಡೆದುಕೊಂಡ ಆ ದಂಪತಿಗಳು ದೀನ ದಲಿತರಿಗೆ  ಶರಣರಿಗೆ ದಾಸೋಹ ಮಾಡುತ್ತ ಕಾಲ ಕಳೆಯುತ್ತಿದ್ದರು.

ಸಂಸಾರ ಶ್ರೇಷ್ಠವೊ, ಸನ್ಯಾಸ ಶ್ರೇಷ್ಠವೊ: ಒಮ್ಮೆ ಇಬ್ಬರು ಸಾಧಕ ಚರಮೂರ್ತಿ ಯುವಕರಲ್ಲಿ ಸಂಸಾರ ಹಾಗೂ ಸನ್ಯಾಸ ಇವುಗಳಲ್ಲಿ ಯಾವುದು ಶ್ರೇಷ್ಠವೆಂಬ  ವಿಷಯದಲ್ಲಿ ವಾದ ವಿವಾದ ನಡೆಯುತ್ತದೆ. ಇದರ ಪರಾಮರ್ಶೆಗೆ ಅವರಿಬ್ಬರು ಅನುಭಾವಿ ಶರಣ ದಾಸಿಮಯ್ಯನಲ್ಲಿಗೆ ಬರುತ್ತಾರೆ. ಅವರಿಗೆ ಆದಾರಾತಿಥ್ಯ ಮಾಡಿ ಕೂಡ್ರಿಸಿದ ದಾಸಯ್ಯನು ಎಳೆ ಬಿಸಿಲಿನಲ್ಲಿ ಕುಳಿತು ಕಾಯಕ ನಿರತನಾಗಿ ದುಗ್ಗಳೆಗೆ ದೀಪ ಹಚ್ಚಿ ತರಲು  ಹೇಳುತ್ತಾನೆ. ದುಗ್ಗಳೆ ದೀಪ ಹಚ್ಚಿ ತಂದು ಬಿಸಿಲಲ್ಲಿ  ಕುಳಿತ ದಾಮಯ್ಯನ ಮುಂದಿಡುತ್ತಾಳೆ ತಲೆಗೆ ಹೊದ್ದುಕೊಳ್ಳಲು  ವಸ್ತ್ತ್ರ ತೆಗೆದುಕೊಡಲು ಹೇಳುತ್ತಾನೆ. ಅವನ ಹೆಗಲ ಮೇಲೆಯೇ ಇದ್ದ ವಸ್ತ್ತ್ರವನ್ನು  ದುಗ್ಗಳೆ ತೆಗೆದು ಅವನ  ತಲೆಯ ಮೇಲಿರಿಸುತ್ತಾಳೆ. ಕುಡಿಯಲು ತಂದಿಟ್ಟ  ತಂಗಳು ಅಂಬಲಿ  ಬಾಯಿ ಸುಟ್ಟಿತು  ಆರಿಸಿಕೊಡು ಎಂದು ಹೇಳಲು ದುಗ್ಗಳೆ ಅಂಬಲಿಗೆ ಗಾಳಿ ಹಾಕುತ್ತಾಳೆ ಇದನ್ನೆಲ್ಲ ನೋಡುತ್ತ ಕುಳಿತಿದ್ದ ಆ ಸಾಧಕ  ಯುವಕರು ಮುಸಿಮುಸಿ  ನಗುತ್ತಿರುತ್ತಾರೆ. ಆಗ ದಾಸಿಮಯ್ಯನು ಸಾಧಕರೆ ಇದಿರು ನುಡಿಯದೆ  ಸಂಸಾರದ ಒಳ ಅರಿವನ್ನು ಅರಿತು ಸೇವೆ ಮಾಡಿಕೊಂಡಿರಬಲ್ಲ  ನಮ್ಮ ದುಗ್ಗಳೆಯಂಥ ಸತಿ ಇದ್ದರೆ  ಸಂಸಾರ ಲೇಸು  ಇಲ್ಲದಿದ್ದರೆ  ಸನ್ಯಾಸ ಲೇಸು ಎಂದು ಹೇಳುತ್ತಾನೆ. ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’  ಇದು ದಾಸಿಮಯ್ಯನ ನುಡಿ.

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗದ ಮರೆಸುವಳು

ದುಗ್ಗಳೆಯ ತಂದು ಬದುಕಿದೆನು  ಕಾಣಾ  ರಾಮನಾಥಾ ಆದರ್ಶ ಸತಿ ದುಗ್ಗಳೆಯನ್ನು ಮನಸಾರೆ ಹೊಗಳುತ್ತಾನೆ.

ದಾಸಿಮಯ್ಯನು 176 ವಚನಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ರೂಪಾಲಂಕಾರ ವಿಶೇಷವಾಗಿದ್ದು ಸರಳತೆ ಸಂಕ್ಷಿಪ್ತತೆ ಸಾಹಿತ್ಯಿಕ ಗುಣ ಹಾಗೂ ಮೌಲ್ಯಗಳಿಂದ ಕೂಡಿವೆ.

ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ
ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ
ಇರಿಯಬಲ್ಲರೆ ನೂರಕ್ಕೊಬ್ಬ ಸಹಸ್ರಕ್ಕೊಬ್ಬ
ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ ರಾಮನಾಥ

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ,
ಸುಳಿದು ಬೀಸುವ ಗಾಳಿ ನಿಮ್ಮ ದಾನ
ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ …..

ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದಿತ್ತೆ?
ಒಡೆಯರ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ?
ಕಡೆಯಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ
ನೀನಿಕ್ಕಿದ ತೊಡಕನೀ ಲೋಕದ
ಜಡರೆತ್ತ ಬಲ್ಲರೈ ರಾಮನಾಥ?

ಒಂದೇ ಅರಿವು, ಒಂದೇ ನಡೆ
ಒಂದೇ ಸ್ಥಾನದೊಳಗೆ
ಪ್ರಸಾದದಂತವನರಿದೊಡೆ
ನಿಶ್ಚಿಂತ ಪರಶಿವನು ರಾಮನಾಥ

ಮುಂತಾದ ಹಸಿಗೋಡೆಯಲ್ಲಿ ಹರಳು ಎಸೆದಂತೆ ಅರ್ಥಪೂರ್ಣ ವಚನಗಳಿಂದ ದಾಸಿಮಯ್ಯನು ಮುಂದಿನ ಶರಣರಿಗೆ ಮಾರ್ಗದರ್ಶಿಯಾಗಿದ್ದಾನೆ.

ಲೇಖಕರು:  ಆರ್.ಎಸ್. ಚಾಪಗಾವಿ,  ಬೆಳಗಾವಿ.

Tag: Jedara Daseemaiah

ಕಾಮೆಂಟ್‌ಗಳಿಲ್ಲ: