ಭಾನುವಾರ, ಸೆಪ್ಟೆಂಬರ್ 1, 2013

ಎಸ್. ಆರ್. ವಿಜಯಶಂಕರ್

ಎಸ್. ಆರ್. ವಿಜಯಶಂಕರ್

ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ವಿಮರ್ಶಕ, ಅಂದಿನ ಪ್ರಖ್ಯಾತ ಶಿಕ್ಷಕ, ಪತ್ರಕರ್ತ, ಇಂದಿನ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಧಾನ ಸಂಪರ್ಕಾಧಿಕಾರಿ ಹಾಗೂ  ನನ್ನ ಅಪೂರ್ವ ಗೆಳೆಯರಾದ ಎಸ್. ಆರ್. ವಿಜಯಶಂಕರ ಅವರು ಹುಟ್ಟಿದ ದಿನ ಡಿಸೆಂಬರ್  21, 1957. 

ಎಚ್ ಎಮ್ ಟಿ ಸಂಸ್ಥೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ವಿಜಯಶಂಕರ್ ನಮ್ಮ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಗಿದ್ದವರು.  ಅಲ್ಲಿನ ಕನ್ನಡ ಸಂಪದದಲ್ಲಿ ನಾವುಗಳು ಹುರುಪಿನಿಂದ ಓಡಾಡುವ ಯುವ ಚಿಲುಮೆಗಳಾಗಿದ್ದೆವೇ ವಿನಃ ನನ್ನಂತಹವರಿಗೆ ಸಾಹಿತ್ಯಶಕ್ತಿಯ ಬುನಾದಿ ಇರಲಿಲ್ಲ.  ಅದನ್ನು ತಮ್ಮ ಮಾರ್ಗದರ್ಶನದ ಮೂಲಕ ನಮ್ಮ ಕನ್ನಡ ಸಂಪದದಲ್ಲಿ ಸಮರ್ಪಕವಾಗಿ ತುಂಬಿದವರು ವಿಜಯಶಂಕರ್.  ನಮ್ಮ ಕನ್ನಡ ಸಂಪದದಲ್ಲಿ ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಕುರಿತು ಅವರು ಅಂದು ಹೇಳಿದ ಒಂದು ಮಾತು, ನನ್ನ ಮತ್ತು ನಾನು ಕಾರ್ಯದರ್ಶಿಯಾಗಿದ್ದ ಕನ್ನಡ ಸಂಪದದ ದೃಷ್ಠಿಕೋನದಲ್ಲಿ ಒಂದು ವಿಶಿಷ್ಟ ಬದಲಾವಣೆಯನ್ನು ಕಾಣುವಂತೆ ಮಾಡಿತು.  ನಾವು ಹಬ್ಬ ಸಮಾರಂಭಗಳ celebrationಗಳಿಗೆ  ಕಾದುಕೊಂಡು ಕನ್ನಡದ ಕೆಲಸವನ್ನು ನಡೆಸಬೇಕಿಲ್ಲ.  ಯಾವುದೇ  celebrationಗಳಿಲ್ಲದೆ ಸಹಾ ನಾವು ಅತ್ಯುತ್ತಮ ಕೆಲಸಗಳನ್ನು ಮಾಡಬಹುದುಎಂದು ಹೇಳಿದ ಅವರ ಮಾತು ನನ್ನಲ್ಲಿ ಬದಲಾವಣೆ ತಂದಿತ್ತು.    ಮುಂದಿನ ದಿನಗಳಲ್ಲಿ ನಾನು ಅಂತಹ ಕೆಲಸಗಳಲ್ಲಿ ಹೆಚ್ಚು ಪ್ರವೃತ್ತನಾದೆ. 

ಮುಂದೆ ವಿಜಯಶಂಕರರು ನಾವೆಲ್, ಸಿಸ್ಕೋ ಮುಂತಾದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಈಗ ಇಂಟೆಲ್ ಸಂಸ್ಥೆಯ ಅಂತರರಾಷ್ಟ್ರೀಯ ಮಟ್ಟದ ಹಿರಿಯ  ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿದ್ದಾರೆ.  ಕಾಲಿಗೆ ಚಕ್ರ ಕಟ್ಟಿಕೊಂಡು ವಿಶ್ವದೆಲ್ಲೆಡೆ ನಿರಂತರವಾಗಿ ಚಲಿಸುವ ಕೆಲಸ. ಆದರೆ ಅವರ ಕನ್ನಡದ ಪ್ರೀತಿ, ಸಾಹಿತ್ಯದ ಆಸಕ್ತಿ ಒಂದಿನಿತೂ ಕುಂದಿಲ್ಲ.  ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ವಿವಿಧ ವಿಷಯಗಳಲ್ಲಿನ ಅವರ ಚಿಂತನೆಗಳು ಮತ್ತು ಸಾಹಿತ್ಯದ ವಿಮರ್ಶೆಗಳು ನಿರಂತರ ಬೆಳಕು ಕಾಣುತ್ತಲಿವೆ.  ನೀನಾಸಂಸಾಹಿತ್ಯ ಶಿಬಿರಗಳು ಮತ್ತು ನೀನಾಸಂಸಾಹಿತ್ಯ ಉತ್ಸವಗಳಲ್ಲಿ ಎಷ್ಟೋ ವರ್ಷಗಳಿಂದ ಅವರು ಪ್ರಮುಖ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.   ಅವರ ಪುಸ್ತಕಗಳಾದ ಮನೋಗತ’, ‘ಒಳದನಿ’, ‘ಒಡನಾಟ’, 'ಪ್ರತಿಮಾಲೋಕ', 'ನಿಧಾನಶೃತಿ', 'ನಿಜಗುಣ' ಮುಂತಾದ ಕೃತಿಗಳು ಸಾಹಿತ್ಯಾಸಕ್ತರಲ್ಲಿ ಅಪಾರ ಮೆಚ್ಚುಗೆ ಸ್ಪಂದನೆಗಳನ್ನು ಗಳಿಸಿವೆ.  2012 ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವರ ನಿಜಗುಣಸಾಹಿತ್ಯ ವಿಮರ್ಶಾ ಗ್ರಂಥಕ್ಕೆ  ಸಂದಿದೆ. 

ವಿಜಯಶಂಕರ್ ಬಂಟ್ವಾಳ ತಾಲ್ಲೂಕಿನ ಸರವು ಎಂಬ ಹಳ್ಳಿಯ ಅಡಿಕೆ ವ್ಯವಸಾಯದ ಕುಟುಂಬಕ್ಕೆ ಸೇರಿದವರು.  ಅಂದಿನ ದಿನಗಳಲ್ಲಿ ಒಂದು ಟಾರ್ ರಸ್ತೆ ಕಾಣಬೇಕೆಂದರೆ ಹಲವಾರು ಮೈಲಿ ದೂರ ನಡೆಯಬೇಕಿದ್ದ ಹಳ್ಳಿ.  ತಂದೆಯವರು ಪದವಿ ಪಡೆದರೂ ವ್ಯವಸಾಯಕ್ಕೆ ನಿಂತವರು.  ಮನೆಯಲ್ಲಿದ್ದ ಅಪಾರ ಪುಸ್ತಕಗಳ ಸಂಗ್ರಹವನ್ನು ಜಾಲಾಡಿದ್ದರಿಂದ ಕನ್ನಡ ಚೆನ್ನಾಗಿ ಜೊತೆಗೂಡಿತ್ತು.  ಶಾಲೆಯಲ್ಲಿ ಸಂಸ್ಕೃತ ಕಲಿತರು.  ಹಾಗಾಗಿ ಕಾಲೇಜಿನಲ್ಲಿ ಇಂಗ್ಲಿಷ್ ಓದಿದರು.  ಸುಬ್ಬರಾಯ ಚೊಕ್ಕಾಡಿ ಅವರು ಅವರ ಚಿಕ್ಕಪ್ಪನವರು.   ಅವರ ಮೂಲಕ ಗೋಪಾಲಕೃಷ್ಣ  ಅಡಿಗರು, ಕೆ.ವಿ. ಸುಬ್ಬಣ್ಣ ಇಂತಹ ಸಮುದಾಯ ಅವರಿಗೆ ಹತ್ತಿರವಾಯ್ತು.  ಮೈಸೂರಿನ ಎಂ.ಎ ವ್ಯಾಸಂಗದಲ್ಲಿ ಯು. ಆರ್. ಅನಂತಮೂರ್ತಿ, ಜಿ. ಎಚ್. ನಾಯಕ್, ಪೋಲಂಕಿ ರಾಮಮೂರ್ತಿ, ಎಸ್. ಅನಂತನಾರಾಯಣ ಇವರುಗಳೆಲ್ಲ ಅವರ ಅಧ್ಯಾಪಕರಾಗಿದ್ದರು.  

ಕಾಲೇಜಿನ ದಿನಗಳಲ್ಲೇ ವಿಜಯಶಂಕರ್ ಸ್ಟೂಡೆಂಟ್ಸ್ ಡೆಮೋಕ್ರಾಟಿಕ್ ಲೀಡರ್ ಆಗಿದ್ದರು.  ತುರ್ತು ಪರಿಸ್ಥಿತಿಯ ದಿನಗಳಲ್ಲಿ ಶಾಂತಿಭೂಷಣ ಅವರೊಂದಿಗಿದ್ದರು.  ವಿಜಯಶಂಕರ್ ಅವರ ಮೇಲೆ ಮಾರ್ಕ್ಸ್ ಮತ್ತು ಲೋಹಿಯಾ ಪ್ರಭಾವ ಅಪಾರವಾಗಿದೆ.  "ಯಾವುದೇ ಒಂದು ಚಟುವಟಿಕೆ ಇಲ್ಲವೇ ಕೆಲಸವನ್ನು ಕೈಗೊಂಡಾಗ ಅದನ್ನು ಹಲವಾರು ಹಿನ್ನೆಲೆಗಳಿಂದ ನೋಡಬಹುದು.  ಉದಾಹರಣೆಗೆ ಒಂದು ಕಂಪ್ಯೂಟರ್ ಸಾಫ್ಟ್ವೇರ್ ಬಗ್ಗೆ ನೋಡುವಲ್ಲಿ ಅದಕ್ಕೆ ಒಂದು ಆರ್ಥಿಕ - ವ್ಯಾವಹಾರಿಕ ಹಿನ್ನಲೆ ಇರುತ್ತದೆ.  ಅದಕ್ಕೆ ಇರುವ ತಾಂತ್ರಿಕ ಹಿನ್ನೆಲೆ ಅದರೊಂದಿಗೆ ಬೆರೆತು ಹೋಗಿರುತ್ತದೆ.  ಅದಕ್ಕಿರುವ ಸಾಂಸ್ಕೃತಿಕ ಹಿನ್ನಲೆಯನ್ನು ಲೋಹಿಯಾ ಅಂಬೇಡ್ಕರ್ ಅವರುಗಳಲ್ಲಿ ಕಾಣಬಹುದು.  ಇದನ್ನು ನಾವು sophistication of  applicationನಿಂದ ಅನುಭಾವಿಸುತ್ತೇವೆ" ಎಂದು ವಿಜಯಶಂಕರ್ ಒಮ್ಮೆ ನನ್ನ ಅವರ ನಡುವಿನ ಸಂಭಾಷಣೆಯಲ್ಲಿ  ವಿಶ್ಲೇಷಿಸಿದ್ದುದು ಇಂದೂ ರಿಂಗಣಿಸುತ್ತಿದೆ.  ಅಂತಹ  ಮೋಹಕ  ಮಾತುಕತೆಯ ಧಾಟಿ, ವಿಚಾರಪರ ವಿಶ್ಲೇಷಣೆ ಅವರ ಮಾತುಗಾರಿಕೆಯಲ್ಲಿದೆ.

ಮುಂದೆ ವಿಜಯಶಂಕರ್ ಅವರು ಹೈದರಾಬಾದಿನಲ್ಲಿ ಡಿಪ್ಲೋಮಾ ಇನ್ ಟೀಚಿಂಗ್ ಇಂಗ್ಲೀಷ್ ಮಾಡಿದ್ದರಿಂದ ಭಾಷೆಯ ಹಿಡಿತದಲ್ಲಿ ಉತ್ತಮ ನೆಲೆ ದೊರೆಯಿತು.  ಬಿ.ಜಿ. ಎಲ್ ಸ್ವಾಮಿ, ವೆಂಕಟರಾಂ, ದೇವನೂರು ಮಹಾದೇವ ಅವರ ಸಹಚರ್ಯೆ ಕೂಡಾ ಅವರದಾಗಿತ್ತು.

ಮುಂದೆ ಎಲ್ ಎಲ್ ಬಿ ಮಾಡಿದರು.  ಉಡುಪಿಯ ಕಾಲೇಜಿನಲ್ಲಿ ಅಧ್ಯಾಪಕರಾದರು.  ಅನಂತರ ಬೆಂಗಳೂರಿಗೆ ಬಂದು ಪ್ರಜಾವಾಣಿಮತ್ತು ಡೆಕ್ಕನ್ ಹೆರಾಲ್ಡ್ಗಳಿಗೆ ವರದಿಗಾರರಾಗಿ ಕೆಲಸ ಮಾಡಿದರು.  ಆನಂತರ  ಬಂದದ್ದು ಸಂಸ್ಥೆಗಳ ಸಾರ್ವಜನಿಕ ಸಂಪರ್ಕದ ನೇತೃತ್ವ. 

ಬೆಂಗಳೂರಿನಲ್ಲಿ ವೈ ಎನ್ ಕೆ ಮತ್ತು ಕೆ. ಸತ್ಯನಾರಾಯಣ ಅವರುಗಳು ಹತ್ತಿರವಾಗಿ ಕನ್ನಡ ಪ್ರಭದಲ್ಲಿ ಬರೆಯತೊಡಗಿದರು.  ಈ ಬರವಣಿಗೆ ನಿಂತ ನೀರಾಗದೆ ನಿರಂತರವಾಗಿ ಹರಿದು ಸಾಗುತ್ತಿದೆ.  ಇತ್ತೀಚಿನ ವರ್ಷಗಳಲ್ಲಿ ಅವರ ವೈಚಾರಿಕ ಅಂಕಣಗಳು ವಿಜಯವಾಣಿ ಪತ್ರಿಕೆಯಲ್ಲಿ ನುಡಿಸಸಿಯಾಗಿ  ಕನ್ನಡ ಸಾಹಿತ್ಯ ಓದುಗಬಳಗದಲ್ಲಿ  ಮೂಡಿಬರುತ್ತಿದೆ. 

ವಿಜಯಶಂಕರ್ ಅವರ ಬಳಿ ಮಾತನಾಡುವುದೇ ಒಂದು ವಿಶಿಷ್ಟ ಅನುಭವ.    ಒಮ್ಮೆ ಅವರ ಬಳಿ ಮಾತನಾಡುತ್ತಿದ್ದಾಗ  ವಿಮರ್ಶೆಯ ಬಗ್ಗೆ ಹೇಳುತ್ತಿದ್ದರು.  ಯಾವುದೇ ವ್ಯವಸ್ಥೆಯಲ್ಲಿ ಒಂದು ಶಿಸ್ತು, methodology ಇರುತ್ತೆ.  ಅದಕ್ಕೊಂದು ನಮ್ಮದೇ ಆದ sophistication ಕೂಡ ಇರುತ್ತೆ.  ಇದು ಕಲಿಯುವ ರೀತಿ (paradox of learning).  ನಾವು ಸಮಗ್ರತೆಯನ್ನು ನೋಡಿ ಸ್ವಲ್ಪವನ್ನು ಕಲಿಯಬೇಕಾಗುತ್ತದೆ.  ಅಂತೆಯೇ ಸ್ವಲ್ಪವನ್ನು ನೋಡಿ ಸಮಗ್ರತೆಯನ್ನು ಕಂಡುಕೊಳ್ಳಬೇಕಾಗುತ್ತದೆ.  ಹೀಗೆ ವಿಮರ್ಶೆ ಎಂಬುದು ಅರ್ಥೈಸುವ ವಿಧಾನವಾಗುತ್ತದೆ”.

ವಿಜಯಶಂಕರ್ ಅವರ ಬರಹಗಳಲ್ಲಿ ಕಾಣುವ ವಿಸ್ತಾರ ಓದು, ಸೂಕ್ಷ್ಮಗ್ರಹಿಕೆ, ಬದುಕನ್ನು ನೋಡುವ ದೃಷ್ಠಿ, ಬರಹಗಾರನ ಬರಹಗಳಲ್ಲಿ ಹುಡುಕಲೆತ್ನಿಸುವ ಒಳತೋಟಿಗಳು ಇವೆಲ್ಲಾ ಓದುಗನ ಹೃದಯದಲ್ಲಿ ಪ್ರೀತಿಯನ್ನು ಹುಟ್ಟಿಸುವುದಲ್ಲದೆ ಒಳ್ಳೆಯ ಸಾಹಿತ್ಯದೆಡೆಗೆ ಓದುಗನನ್ನು ಕೈಹಿಡಿದು ಕರೆದೊಯ್ಯುವ ಸಖನಾಗಿ ಸಹಾ ಕಾರ್ಯನಿರ್ವಹಿಸುತ್ತದೆ.  ಬರೀ  ಬರಹದಲ್ಲಷ್ಟೇ ಅಲ್ಲದೆ ನೀನಾಸಂ ಸಾಹಿತ್ಯ ಕಮ್ಮಟಗಳು, ವಿಚಾರ ಸಂಕೀರ್ಣಗಳಲ್ಲಿ  ತಮ್ಮ ಬಿಡುವಿಲ್ಲದ ವೇಳೆಯಲ್ಲಿ ಸಹಾ ಬಿಡುವು ಮಾಡಿಕೊಂಡು ಯುವ ಸಾಹಿತ್ಯಾಸಕ್ತರನ್ನು ಮಾರ್ಗದರ್ಶಿಸುತ್ತಾರೆ ಕೂಡ. 

ವಿಜಯಶಂಕರ್ ತಾವಿರುವ ಐ.ಟಿ. ಕ್ಷೇತ್ರದಲ್ಲಿನ ಸಾಧನೆಗಾಗಿ ದೇಶೀಯ ಹಾಗೂ ಅಂತರರಾಷ್ತ್ರೀಯ ಮಟ್ಟದ  ಅನೇಕ ಸ್ಥಾನಮಾನ ಗೌರವಗಳನ್ನು ಪಡೆದಿದ್ದಾರೆ.  ಭಾರತೀಯ ಮಟ್ಟದಲ್ಲಿನ ಐ.ಟಿ ಕ್ಷೇತ್ರದಲ್ಲಿನ ಹಾರ್ಡ್ವೇರ್ ಸಂಪನ್ಮೂಲ, ತರಬೇತಿ ಮತ್ತು ಸಂಶೋಧನಾ ಕ್ಷೇತ್ರಗಳ ಪ್ರಾತಿನಿಧಿಕ ಸಂಘಟನೆಯಾದ ‘MAIT’, ತನ್ನ ದಕ್ಷಿಣ ಭಾರತ ವಿಭಾಗಕ್ಕೆ ವಿಜಯಶಂಕರರನ್ನು ಅಧ್ಯಕ್ಷರನ್ನಾಗಿಸಿಕೊಂಡಿದೆ.  ಸಾಹಿತ್ಯಕ ಕ್ಷೇತ್ರದಲ್ಲಿ ವಿಜಯಶಂಕರ್ ಅವರನ್ನು ವಿ. ಎಂ. ಇನಾಂದಾರ್ ಪ್ರಶಸ್ತಿ, ಕರ್ನಾಟಕ  ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಮುಂತಾದ ಗೌರವಗಳು ಅರಸಿ ಬಂದಿವೆ.  


ಇಂಥಹ ಸಮರ್ಥ ಸಾಹಿತ್ಯಕ ದೃಷ್ಟಾರರಾದ ವಿಜಯಶಂಕರರ ಸಾಹಿತ್ಯಕ ಮಾರ್ಗದರ್ಶನ ಕನ್ನಡಿಗರಿಗೆ ನಿರಂತರ ದೊರಕುತ್ತಿರಲಿ, ವಿಜಯಶಂಕರರ ಬದುಕಿನಲ್ಲಿ ನಿರಂತರ ಹಸನು ತುಂಬಿರಲಿ ಎಂದು ಹಾರೈಸೋಣ.

Tag: S. R. Vijayashankar

ಕಾಮೆಂಟ್‌ಗಳಿಲ್ಲ: