ಶುಕ್ರವಾರ, ಆಗಸ್ಟ್ 30, 2013

ಅಮ್ಮ

ಅಮ್ಮ

ಗರ್ಭದಲ್ಲಿರುವಾಗ ಮಗು ತಾಯಿಯ ಆ ರಕ್ಷಣೆಯನ್ನು ಬಿಟ್ಟು ಹೊರಬರಲಾರೆ ಎಂದು ಅಳುತ್ತದಂತೆ.  ನಾನು ಅಂದು ಹುಟ್ಟಿದಾಗ ನನ್ನ ಅಳುವನ್ನು ನಾನು ನೆನಪಿಟ್ಟುಕೊಂಡಿಲ್ಲ ಎಂಬುದು ಸಹಜ.  ಅದು ತಾಯಂದಿರಿಗೆ ಮಾತ್ರವೇ ತಿಳಿದಿರುವ ವಿಚಾರ.  ಪುಟ್ಟ ಹುಡುಗನಾಗಿದ್ದಾಗ ಅಮ್ಮನ ಜೊತೆಯಿಂದ ಹೊರಗಿರುವುದು ಅಂದರೆ ಅಭದ್ರತೆ ಎಂಬ ಭಾವವಿದ್ದುದು ಮಾತ್ರ ನೆನಪಿದೆ.  ಒಂದು ದಿನ ನನ್ನ ಪುಟ್ಟ ಬಾಲ್ಯದ ಕನಸಿನಲ್ಲಿ ನನ್ನ ಅಮ್ಮ ಎಲ್ಲೋ ದೂರದಲ್ಲಿ ಕೆಲವೊಂದು ಅಡಿಗಳಷ್ಟು ದೂರ ಇದ್ದಳು ಎಂದು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಈಗಲೂ ನೆನಪಿದೆ.  ಹಸಿವಾದಾಗ ಉಣಿಸಿ, ತನ್ನ ಕಷ್ಟಪರಂಪರೆಗಳ ಮಧ್ಯೆ, ಅಷ್ಟೊಂದು ಮಕ್ಕಳ ಕೂಗಿನ ನಡುವೆಯೂ ಒಂದೊಂದೂ ಕೂಗನ್ನು ಆಲಿಸಿ ಅದಕ್ಕೆ ಏನೋ ಒಂದು ಪರಿಹಾರವನ್ನು ಕೊಟ್ಟು ಮುನ್ನಡೆಸಿ ಮಕ್ಕಳನ್ನು ಮುನ್ನಡೆಸಿದ ಆ ತಾಯ ಪ್ರೀತಿಗೆ ಏನು ತಾನೇ ಹೇಳುವುದಾದೀತು.  ತನಗಾಗಿ ಎಂದೂ ಏನನ್ನೂ ಚಿಂತಿಸದೆ, ಮಕ್ಕಳಿಗಾಗೆಂದು  ಹೇಗೋ ಸಾಧ್ಯವಿದ್ದದ್ದನ್ನೆಲ್ಲಾ ಹೊಂದಿಸಿ, ಬೇಯಿಸಿ, ಉಣಿಸಿ, ಜಳಕಿಸಿ, ಬಟ್ಟೆ ಕೊಟ್ಟು, ಓದಿಸಿ, ಬಳಿದು ಹೀಗೆ ಏನೆಲ್ಲಾ ಮಾಡಿ ನಮ್ಮ ನಗೆಯಲ್ಲಿ ತನ್ನ ನಗೆಯನ್ನು ಕಂಡುಕೊಂಡ ಆ ಧನ್ಯತೆಗೆ ಏನು ತಾನೇ ಹೇಳಲು ಸಾಧ್ಯ.

ಹಲವು ನಿರೀಕ್ಷೆ, ಹೊಂದಾಣಿಕೆಗಳಲ್ಲಿ ಸಾಗುವ ಇಂದಿನ ಬದುಕಿನ ಸಂದರ್ಭಗಳಲ್ಲಿ, ನಮ್ಮ  ಸಂಬಂಧಗಳ ಕುರಿತಾಗಿ   ಎಲ್ಲವನ್ನೂ ಒಳಿತಾಗಿಯೇ ಹೇಳುವುದು ಒಂದು ನಾಟಕೀಯ ಸನ್ನಿವೇಶವಾಗಿ ಕಾಣುವಂತದ್ದು.    ನಾವು ಮಕ್ಕಳು ಬೆಳೆದಂತೆಲ್ಲಾ ನಮ್ಮ ಬುದ್ಧಿವಂತಿಕೆಯಲ್ಲಿ, ನಮ್ಮ ವೈಯಕ್ತಿಕ ಚಿಂತನೆಗಳಲ್ಲಿ ಅಮ್ಮ ಮಾಡಿದ್ದರಲ್ಲೂ ತಪ್ಪು ಕಂಡು ಹಿಡಿದಿರುತ್ತೇವೆ.    ನಾವು ಬೆಳೆಯುವುದು ಅಂದರೆ becoming judgemental ಅಥವಾ opinion making ತಾನೇ.  ತಾಯಿ ಕೂಡಾ ಯಾವುದೋ ಮಾತಿನ ಅಥವಾ ಪ್ರವೃತ್ತಿಯ ಚಪಲಕ್ಕೆ ಒಳಗಾಗಿ ಹಾಗೆ ಮಾಡಿರುತ್ತಾಳೆ.  ಅಥವಾ ನಾವು ಹಾಗಿರುವುದರಿಂದ ಆಕೆಯನ್ನೂ ಹಾಗೆಯೇ ಭಾವಿಸಿರುತ್ತೇವೆ.  ಆದರೆ ಆ ಹೃದಯದ ಮಾತಿದೆಯಲ್ಲ್ಲ ಅದು ಬೇರೆಯದ್ದೇ.  ಆ ಹೃದಯವೆಂಬ ಅಂತರಂಗದ ಭಾಷಾರಹಿತ ಪ್ರವಹಿನಿಯಲ್ಲಿ ಮಾತ್ರ, ನಮಗಾಗಿ ಈ ಬದುಕಿನಲ್ಲಿ ಯಾವುದಾದರೂ ಜೀವ ನಿಜವಾಗಿ ಮಿಡಿದಿದ್ದರೆ ಅದು ತಾಯಿ ಮಾತ್ರ.  ಆ ಮಿಡಿತವೆಂಬ ಪ್ರೀತಿಯ ಮುಂದೆ ನಾವೆಂದೆಂದೂ ಹಸು ಕೂಸುಗಳೇ.  ಆ ಮಿಡಿತವನ್ನು ಒಮೊಮ್ಮೆಯಾದರೂ ಕೇಳಿಸಿಕೊಂಡಲ್ಲಿ ನಮ್ಮಲ್ಲಿ ‘ಪ್ರೀತಿ’ ಎಂಬುದರ ಅಸ್ತಿತ್ವದ ಅರಿವಾದೀತು.  ಆ ತಾಯಿ ಎಂಬ ಮಿಡಿತಕ್ಕೆ, ಪ್ರೀತಿಗೆ, ಅಮೂಲ್ಯ ಭಾವಕ್ಕೆ ಧನ್ಯತಾಭಾವದ ನಮನ.

Photo Courtesy: www.rubylane.com

Tag: Amma

ಕಾಮೆಂಟ್‌ಗಳಿಲ್ಲ: