ಬುಧವಾರ, ಆಗಸ್ಟ್ 28, 2013

ಕೈಲಾಶ್ ಖೇರ್

ಕೈಲಾಶ್ ಖೇರ್

ಜಾನಪದ ಸೊಗಡಿನ ಕಂಚುಕಂಠದ ಧ್ವನಿಯ ಕೈಲಾಶ್ ಖೇರ್ ಚಲನಚಿತ್ರರಂಗದ ಪ್ರಖ್ಯಾತ ಹಾಡುಗಾರ.  ಉತ್ತರ ಪ್ರದೇಶದ ಮೀರತ್ ಪಟ್ಟಣದಲ್ಲಿ ಜುಲೈ 7, 1973ರಲ್ಲಿ ಜನಿಸಿದ ಕೈಲಾಶ್ ಖೇರ್ ಕನ್ನಡ ಚಿತ್ರರಂಗವೂ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಅಪಾರ ಬೇಡಿಕೆಯುಳ್ಳ ಗಾಯರಾಗಿದ್ದಾರೆ. 

ಕೈಲಾಶ್ ಖೇರ್ ಅವರಿಗೆ ತಮ್ಮ ತಂದೆ ಪಂಡಿತ್ ಮೆಹರ್ ಸಿಂಗ್ ಖೇರ್ ಅವರು ಹಾಡುತ್ತಿದ್ದ ಜಾನಪದ ಗೀತೆಗಳೇ ಬಾಲ್ಯದ ಸ್ಫೂರ್ತಿ.  ಮುಂದೆ ಅವರು ಖವ್ವಾಲಿ ಗಾಯಕ ನುಸರತ್ ಫತೇಹ್ ಅಲಿ ಖಾನ್ ಮತ್ತು ಶಾಸ್ತ್ರೀಯ ಸಂಗೀತ ವಿದ್ವಾಂಸರಾದ ಪಂಡಿತ್ ಕುಮಾರ್ ಗಂಧರ್ವರನ್ನು ತಮ್ಮ ಆದರ್ಶ ಸ್ಫೂರ್ತಿಗಳಾಗಿ ಮಾಡಿಕೊಂಡರು.  ನಾಲ್ಕು ವರ್ಷದ ವಯಸ್ಸಿನಿಂದಲೇ ಹಾಡುವುದನ್ನು ತನ್ನ ಗೀಳಾಗಿರಿಸಿಕೊಂಡಿದ್ದ ಕೈಲಾಶ್, ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ಗುರುವನ್ನು ಅರಸುತ್ತಾ ಮನೆಬಿಟ್ಟು ಹೊರಟುಬಿಟ್ಟರು.  ಈ ಹುಡುಕಾಟದ ಸಮಯದಲ್ಲಿ ಬದುಕುಳಿಯುವುದಕ್ಕಾಗಿ, ಅವರಿವರಿಗೆ ಒಂದಷ್ಟು ತನಗೆ ಗೊತ್ತಿದ್ದನ್ನು ಹೇಳಿಕೊಟ್ಟು ತಿಂಗಳಿಗೆ 150ರೂಪಾಯಿ ಸಂಪಾದನೆಯಲ್ಲಿ ಬಹಳಷ್ಟು ಕಾಲ ಕಷ್ಟಪಟ್ಟರು.  ಈ ಬಡತನದ ಹುಡುಕಾಟದಲ್ಲಿ ಅವರಿಗೆ ಗುರುವನ್ನು ಹುಡುಕಿಕೊಳ್ಳುವುದು ಸಾಧ್ಯವಾಗದೆಹಾಡುಗಳನ್ನು ಕೇಳುತ್ತಲೇ ಸಂಗೀತ ಕಲಿಯಲುತೊಡಗಿದರು. 

ಮುಂದೆ ಕೈಲಾಶ್ ಸಂಗೀತದ ಆಸೆ ಬಿಟ್ಟು ಬದುಕು ಸಾಗಿಸುವುದಕ್ಕಾಗಿ ಸೀರೆ ನಿರ್ಯಾತ ವ್ಯಾಪಾರಕ್ಕೆ ಕೈ ಹಾಕಿದರೆ ಅದು ಕೂಡಾ 1999ರ  ವರ್ಷದಲ್ಲಿ ಮುಳುಗಿ ಹೋಗಿ, ಒಂದಾರು ತಿಂಗಳು ಸಿಂಗಾಪುರ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಹೇಗೋ ಕಾಲ ತಳ್ಳಿದರು.  ಮುಂದೆ ದೆಹಲಿಗೆ ಬಂದು ಅಂಚೆ ತೆರಪಿನ ಶಿಕ್ಷಣದ ಮೂಲಕ ಪದವೀಧರರಾದರು.

2001ರ ವರ್ಷದಲ್ಲಿ ಮುಂಬೈಗೆ ಬಂದು ಸಂಗೀತ ಲೋಕದಲ್ಲಿ ತಮ್ಮ ಪ್ರಯತ್ನವನ್ನು ಪ್ರಾರಂಭಿಸಿದರು. ಮುಂಬೈನಲ್ಲಿದ್ದ ಇವರ ಕೆಲವು ಗೆಳೆಯರು ಇವರನ್ನು ಸಂಗೀತ ನಿರ್ದೇಶಕ ರಾಮ್ ಸಂಪತ್ ಅವರಿಗೆ ಪರಿಚಯಿಸಿದರು.  ಇವರಿಗೆ ಮೊದಲಿಗೆ ಹಾಡಲು ಅವಕಾಶ ದೊರೆತಿದ್ದು ನಕ್ಷತ್ರ ಡೈಮಂಡ್ಸ್ಜಾಹಿರಾತಿನ ಒಂದು ತುಣುಕು ಸಂಗೀತದಲ್ಲಿ.    ಇದರಿಂದ ಅವರಿಗೆ ಪ್ರಸಿದ್ಧಿ ಬರದಿದ್ದರೂ ಜೀವನ ನಡೆಸಲು ಒಂದೈದು ಸಾವಿರ ರೂಪಾಯಿ ಜೀವನಾಂಶ ದೊರಕಿತು.  ಮುಂದೆ ರೇಡಿಯೋ ಮತ್ತು ದೂರದರ್ಶನಗಳ ಹಲವಾರು ಜಾಹೀರಾತುಗಳಲ್ಲಿ ಇವರ ಧ್ವನಿ ಮೂಡಿಬಂತು.  ಈ ಸಮಯದಲ್ಲಿ ಕೈಲಾಶ್ ಖೇರ್ ತುಂಬಾ ಕಷ್ಟಪಟ್ಟು ತನ್ನ ಜೀವನವನ್ನು ಸಾಗಿಸಬೇಕಿತ್ತು.

ಕೈಲಾಶ್ ಖೇರ್ ಅವರಿಗೆ ಮೊದಲು ಹಾಡಲು ಅವಕಾಶ ನೀಡಿದ ಚಿತ್ರ ಅಂದಾಜ್’.  ಮುಂದೆ ಅವರು ವೈಸಾ ಭಿ ಹೋತಾ ಹೈ ಭಾಗ 2ಚಿತ್ರದಲ್ಲಿ ಎ. ಆರ್. ರೆಹಮಾನರಿಗಾಗಿ ಹಾಡಿದ ಅಲ್ಲಾಹ್ ಕೆ ಬಂದೆಗೀತೆ ಅವರಿಗೆ ಅಪಾರ ಜನಪ್ರಿಯತೆ ತಂದಿತು.  ಅವರ ವೈಶಿಷ್ಟ್ಯಪೂರ್ಣ ಹಿನ್ನೆಲೆಗಾಯನ ಮಂಗಲ್ ಪಾಂಡೆ: ದಿ ರೈಸಿಂಗ್ಚಿತ್ರದಲ್ಲಿ ಹಲವಾರು ಹಾಡುಗಳನ್ನು ಮಾರ್ಧನಿಸಿತು.  ಹೀಗೆ ಅವರು 2004ರ ವೇಳೆಗೆ ದೇಶದಲ್ಲಿ ತಮ್ಮ ವಿಶಿಷ್ಟ ಧ್ವನಿಯಿಂದ ಪ್ರಸಿದ್ಧ ಹೆಸರಾಗಿಬಿಟ್ಟಿದ್ದರು.  ಮುಂದೆ ಓ ಸಿಕಂದರ್’, ‘ತೇರೀ ದಿವಾನಿ’, ‘ಯಾ ರಬ್ಬಾಮುಂತಾದ ಗೀತೆಗಳು ಒಂದಾದ ಮೇಲೊಂದು ಜನಪ್ರಿಯಗೊಂಡವು.  ಫನಾ ಚಿತ್ರದ  ಗಾಯನ ಅವರಿಗೆ  ಪ್ರಸಿದ್ಧಿಗಳ  ಸಂಕೇತವೆಂದು  ಪರಿಗಣಿತಗೊಂಡಿರುವ    ಫಿಲಂಫೇರ್  ಹಾಗೂ  ಇನ್ನಿತರ  ಪ್ರಶಸ್ತಿಗಳನ್ನು  ತಂದಿತು. ಅವರು ಇದುವರೆಗೆ ಸುಮಾರು 700ಕ್ಕೂ ಹೆಚ್ಚು ಹಿಂದೀ ಚಲನಚಿತ್ರಗೀತೆಗಳನ್ನೂ ಒಳಗೊಂಡ ಹಾಗೆ ಹದಿನೆಂಟು ಭಾಷೆಗಳಲ್ಲಿ ತಮ್ಮ ಗಾಯನದಿಂದ ಜನಪ್ರಿಯರಾಗಿದ್ದಾರೆ.  ಸಹಸ್ರಾರು ಜಾಹೀರಾತುಗಳಿಗೂ ತಮ್ಮ ಧ್ವನಿ ನೀಡಿದ್ದಾರೆ.   

ಕೈಲಾಶ್ ಖೇರ್ ಅವರು ಕನ್ನಡದಲ್ಲೂ ಹಲವಾರು ಹಾಡುಗಳನ್ನು ಹಾಡಿದ್ದು ಅವುಗಳಲ್ಲಿ ಜಂಗ್ಲಿ, ಜಾಕಿ, ಸಿದ್ಲಿಂಗು, ಕೃಷ್ಣನ್  ಲವ್ ಸ್ಟೋರಿ ಮುಂತಾದ ಚಿತ್ರಗಳಲ್ಲಿನ ಅವರ ಗೀತೆಗಳು ಜನಪ್ರಿಯವಾಗಿವೆ. 

ದೂರದರ್ಶನದ ಕೆಲವೊಂದು ಹಿಂದೀ ಧಾರಾವಾಹಿಗಳಿಗೆ ಗೀತೆಗಳನ್ನು ಸಂಯೋಜಿಸಿ ಜನಪ್ರಿಯತೆ ಪಡೆದ  ಕೈಲಾಶ್ ಖೇರ್ ಚಾಂದಿನಿ ಚೌಕ್ ಟು ಚೈನಾ, ದಶವಿದಾನಿಯಾ, ಸೇಕ್ರೆಡ್ ಎವಿಲ್, ಸಂಗೀನಿ ಮುಂತಾದ ಹಲವಾರು ಚಿತ್ರಗಳಲ್ಲಿ ಸಂಗೀತ ನಿರ್ದೇಶನ, ಗೀತರಚನೆಯನ್ನೂ ಮಾಡಿದ್ದಾರೆ.  ಅಣ್ಣಾ ಹಜಾರೆ ಆಂದೋಲನಕ್ಕಾಗಿ ಅವರು ಅಂಬರ್ ತಕ್ ನಾರಾ ಗುಂಜೇಗಗೀತೆಯನ್ನು ಹಾಡಿದರು.  ತಮ್ಮ ಸಹೋದರರು ಮತ್ತು ಹಲವು ಗೆಳೆಯರೊಡನೆ ಸೇರಿ ಕೈಲಾಶ್ ಖೇರ್ ಹಲವಾರು ಸಂಗೀತದ ಆಲ್ಬಂಗಳನ್ನು  ಕೂಡಾ ಹೊರತಂದಿದ್ದಾರೆ.  ಕೈಲಾಸಎಂಬ ಸಂಗೀತ ತಂಡವನ್ನು ಕಟ್ಟಿ ವಿಶ್ವದಾದ್ಯಂತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.   ಹಲವಾರು ರಿಯಾಲಿಟಿ ಷೋಗಳಲ್ಲಿ ತೀರ್ಪುಗಾರರಾಗಿ ಮಿಂಚಿದ್ದಾರೆ.  ಪ್ರಧಾನ  ಮಂತ್ರಿಗಳ  ಸ್ವಚ್ಛ  ಭಾರತ  ಆಂದೋಲನದ  ರಾಯಭಾರಿಯೂ  ಆಗಿದ್ದಾರೆ.

ಕೈಲಾಶ್ ಖೇರ್ ಅವರ ಕುರಿತು ಮಹಾನ್ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಹೀಗೆ ಹೇಳುತ್ತಾರೆ.  ಹೇಗೆ ನಾನು ಅವರ ಬಗ್ಗೆ ಕೇಳಿಪಟ್ಟೆ ಎಂಬುದು ನನಗೆ ನೆನಪಿದೆ. ನಾನು ನಮ್ಮ ಗೀತಕಾರರಾದ ಮೆಹಬೂಬ್ ಅವರಿಗೆ ನಯವಲ್ಲದ ಮತ್ತು ಸುದೃಢ ಹೊಸ ಧ್ವನಿಯನ್ನು ಹೊಂದಿರುವ ವ್ಯಕ್ತಿಗಾಗಿ ಕೇಳಿದೆ.   ಇದಕ್ಕೆ ಪ್ರತಿಕ್ರಿಯಿಸಿದ ಅವರು ಅದಕ್ಕೆ ತಕ್ಕವ ಕೈಲಾಶ್ ಮಾತ್ರ!ಎಂದು ನುಡಿದು ಆತನನ್ನು ನನ್ನ ಬಳಿ ಕಳುಹಿಸಿದರು.  ಆತನ  ಧ್ವನಿಯನ್ನು ಕೇಳಿದ ತಕ್ಷಣವೇ, ಅತೀ ಅದ್ಭುತವಾದ ಮತ್ತು ತನ್ನದೇ ಆದ ವೈಶಿಷ್ಟ್ಯತೆಯುಳ್ಳ ಧ್ವನಿ  ಇಲ್ಲಿದೆ ಎಂದು ನನಗೆ ಮನವರಿಕೆಯಾಯಿತು.  ನಾನು, ಕೈಲಾಶ್ ಖೇರ್ ಅವರ ಧ್ವನಿಯು ಎಲ್ಲೆಡೆ ಇರುವ ಕೊರತೆಯೊಂದನ್ನು  ತುಂಬಿಕೊಡುವಂತದ್ದು ಎಂದು ಹೇಳಲಿಚ್ಚಿಸುತ್ತೇನೆ ಅದು ಶುದ್ಧಾತ್ಮ ಸ್ವರೂಪದ್ದು!   ಅಲ್ಲಾಹ್ ಕೆ ಬಂದೆಗೀತೆಯು ನನ್ನ ಸಾರ್ವಕಾಲಿಕ ಮೆಚ್ಚಿನ ಗೀತೆಗಳಲ್ಲಿ ಒಂದಾಗಿದೆ.


ಹೀಗೆ ಕೇವಲ ತಮ್ಮ ಪ್ರತಿಭೆಯಿಂದ ಕಷ್ಟಪಟ್ಟು ಮುಂದೆ ಬಂದ ವಿಶಿಷ್ಟ ಧ್ವನಿಯ ಕೈಲಾಶ್ ಖೇರ್ ಅವರ ಸಾಧನೆ ಮಾಯಾಲೋಕವೆಂಬ ಚಿತ್ರರಂಗದಲ್ಲಿ ವಿಸ್ಮಯಕಾರಿಯಾದದ್ದು ಮತ್ತು ಮಹತ್ವಪೂರ್ಣವಾದದ್ದು.  ಈ ವಿಶಿಷ್ಟ ಕಲಾವಿದರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

Tag: Khailash Kher

ಕಾಮೆಂಟ್‌ಗಳಿಲ್ಲ: