ಬುಧವಾರ, ಆಗಸ್ಟ್ 28, 2013

ಸೋನು ನಿಗಮ್

ಸೋನು ನಿಗಮ್

ಸೋನು ನಿಗಮ್ ಅವರು ಜನಿಸಿದ್ದು ಜುಲೈ 30, 1973ರಲ್ಲಿ.  ಸೋನು ನಿಗಮ್ ಎಂಬ ಮುದ್ದು ಮುಖ, ಸೋನು ನಿಗಮ್ ಎಂಬ ಪ್ರೀತಿಯ ಇನಿದನಿ ಭಾರತೀಯ ಹೃನ್ಮನಗಳಲ್ಲಿ ಬೆರೆತಿರುವ ರೀತಿ ವೈಶಿಷ್ಟ್ಯಪೂರ್ಣವಾದುದು.

ಮೂರು ವರ್ಷದ ಬಾಲಕನಾಗಿದ್ದ ಸೋನು ನಿಗಮ್ ಆರ್ಕೆಸ್ಟ್ರಾ ನಡೆಸುತ್ತಿದ್ದ ತಮ್ಮ ತಂದೆಯವರೊಡನೆ ವೇದಿಕೆಯಲ್ಲಿ 'ಕ್ಯಾ ಹುವಾ ತೇರಾ ವಾದಾ" ಎಂದು ಹಾಡಿದ್ದ.  ಮುಂದೆ ಸೋನು ನಿಗಮ್ ಎಲ್ಲರ ಮನೆ ಮಾತಾಗಿದ್ದು 'ZeeTv'ಯ  ಪ್ರಸಿದ್ಧ ಸಂಗೀತ ಸರಣಿ 'ಸರಿಗಮಪ' ಮೂಲಕ.  ಅಲ್ಲಿ ಅವರು ಹಾಡುತ್ತಿದ್ದ ಮಹಮ್ಮದ್ ರಫಿ ಅವರ ಹಾಡುಗಳು, ಗಾಯನದಲ್ಲಿ ಅಮರರಾದ ರಫಿ ಅವರನ್ನೇ ಈ ಧರೆಗೆ ಕರೆತಂದ ಭಾಸವನ್ನು ನೀಡುತ್ತಿತ್ತು.  ಆತನ ಗಾಯನವಿರಲಿ, ಆತನ ಮುದ್ದು ಮುಖ, ಅದಕ್ಕೆ ತಕ್ಕ ಸೌಜನ್ಯ, ಸಜ್ಜನಿಕೆಗಳು ಆತನನ್ನು ಭಾರತದ ಯುವ ಕಣ್ಮಣಿಯಾಗಿಸಿಬಿಟ್ಟಿತ್ತು. 

ಮುಂದೆ ಸೋನು ನಿಗಮ್ ಚಿತ್ರರಂಗದ ಹಿನ್ನೆಲೆಗಾಯಕರಾಗಿ ಜನಪ್ರಿಯತೆ ಪಡೆದದ್ದು ಇನ್ನೊಂದು ಮಜಲು.  ಆದರೆ ಆತ ಹಾಡುಗಾರನಾಗಿ ಜನಪ್ರಿಯನಾಗುವುದಕ್ಕೆ ಮೊದಲೇ, ದೂರದರ್ಶನದ ಪ್ರಿಯಮೂರ್ತಿಯಾಗಿ ಮತ್ತು ಸವಿ ಸಜ್ಜನನಾಗಿ ಸರಿಗಮಪದಲ್ಲಿ ಅಂದು ಕಂಡ ಬಗೆ 'ಸರಿಗಮಪದನಿಸ' ಎಂಬ ಸುಸ್ವರಗಳಷ್ಟೇ ಆಪ್ತವಾದದ್ದು.

ಇಂದಿನ ಹಿನ್ನಲೆಗಾಯಕರು ಅದೆಷ್ಟು ಸಾವಿರ ಸಾವಿರ ಹಾಡುಗಳನ್ನು ಹಾಡುತ್ತಾರೋ ಲೆಖ್ಖ ಇಡುವುದು ಕಷ್ಟವಾದದ್ದು.  ಸೋನು ನಿಗಮ್ ಹಾಡಿರುವ ಕೆಲವೊಂದು ಹಾಡುಗಳನ್ನು ನೆನೆಯುವುದಾದರೆ, ಕಲ್ ಹೋ ನಹೋತನ್ಹಾಯಿ, ಮೈ ಹೂ ನಾ, ಪಿಯಾ ಬೋಲೆ, ಕಬಿ ಅಲ್ವಿದ ನಾ ಕೆಹೆನಾ, ಮೈ ಅಗರ್ ಕಹೂ ಹಾಡುಗಳು ತಕ್ಷಣಕ್ಕೆ ನೆನಪಿಗೆ ಬರುತ್ತವೆ. 

ಇಂದು ಹಿಂದೀ ಚಿತ್ರದ ಹಾಡುಗಾರರು ನಮ್ಮ ಕನ್ನಡ ಚಿತ್ರರಂಗವನ್ನು ಇನ್ನಿಲ್ಲದಂತೆ  ವ್ಯಾಪಿಸಿಬಿಟ್ಟಿದ್ದಾರೆ.  ಅದರ ಗುಣಾವಲೋಕನಗಳ ಚರ್ಚೆ ಮಾಡದೆ ಉತ್ತಮತೆ ಮತ್ತು ನಾದದ ಬಗೆಗಿನ ಗೌರವದಲ್ಲಿ ಮಾತನಾಡಬೇಕೆಂದರೆ ಸೋನು ನಿಗಮ್ ಅವರ 'ಮುಂಗಾರು ಮಳೆಯೇ', 'ಅನಿಸುತಿದೆ ಏಕೋ ಇಂದು' , ‘ಬಾ ಮಳೆಯೇ ಬಾ’, ‘ನಿನ್ನಿಂದಲೇ, ನಿನ್ನಿಂದಲೇ’  ಮುಂತಾದ ಹಾಡುಗಳು ಕನ್ನಡಿಗರಿಗೆ ಮುದ ನೀಡಿವೆ. 


ಸೋನು ನಿಗಮ್ ಹಲವಾರು ಉತ್ತಮ ಗೀತೆಗಳನ್ನು ಹಾಡಿದ್ದಾರೆ, ಅವರು ಈಗೆಷ್ಟು ಹಾಡಿದ್ದಾರೋ ಅದಕ್ಕಿಂತ ಬಹಳಷ್ಟು ಉತ್ತಮವಾಗಿ ಹಾಡಬಲ್ಲರು.  ಅದಕ್ಕೂ ಮಿಗಿಲಾಗಿ ಅವರು ಇಂದಿನ ಮಾಡರ್ನ್ ಸ್ಟೈಲುಗಳಲ್ಲಿ ತಮ್ಮನ್ನು ಹೇಗೆ ಹೇಗೆ ತೋರಿಸಿಕೊಳ್ಳಲು ಬಯಸುತ್ತಾರೋ ಅದೆಲ್ಲಕ್ಕೂ ಮಿಗಿಲಾಗಿ ಅವರು ಸಹಜವಾಗಿಯೇ ಸುಂದರವಾಗಿರಬಲ್ಲರು.  ಅದರ ಅರಿವು ಅವರಲ್ಲಿ ಜಾಗೃತವಾಗಿರಲಿ, ಅವರಿಂದ ಉತ್ತಮ ಗಾಯನ ಹೊಮ್ಮಿಸುವ ಸಾಹಿತ್ಯ, ಸಂಗೀತ ನಿರ್ದೇಶನ ಮತ್ತು ಉತ್ತಮ ಸಂಗೀತಾಭಿಮಾನಿಗಳು ಹೆಚ್ಚಲಿ ಎಂದು ಆಶಿಸುತ್ತಾ ಹುಟ್ಟು ಹಬ್ಬ ಆಚರಿಸುತ್ತಿರುವ ಸೋನು ನಿಗಮ್ (ಅವರ ನ್ಯೂಮರಾಲಜಿ ನಂಬಿಕೆಯ ಪ್ರಕಾರ 'ಸೋನು  ನಿಗಾಮ್') ಅವರಿಗೆ ಶುಭ ಕೋರೋಣ.

Tag: Sonu Nigam

ಕಾಮೆಂಟ್‌ಗಳಿಲ್ಲ: