ಶುಕ್ರವಾರ, ಆಗಸ್ಟ್ 30, 2013

ರಾಮಚಂದ್ರದೇವ

ರಾಮಚಂದ್ರದೇವ

ಕನ್ನಡದ ಮಹತ್ವಪೂರ್ಣ ಬರಹಗಾರರಲ್ಲೊಬ್ಬರಾದ ಡಾ. ರಾಮಚಂದ್ರದೇವ ಮಾರ್ಚ್ 22, 1948ರಲ್ಲಿ ಜನಿಸಿದರು. ತಮ್ಮ ಊರಾದ ಕಲ್ಮಡ್ಕ ಎಂಬಲ್ಲಿ ಬೋಧಿ ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಪ್ರಕಟಣೆಗಳನ್ನೂ ಸಾಂಸ್ಕ್ರತಿಕ ಕಾಯಕಗಳನ್ನು  ನಡೆಸಿ ವಿಶೇಷ ರೀತಿಯಲ್ಲಿ ಸಾರ್ವಜನಿಕ ಜೀವನದಲ್ಲಿ ಗಮನಸೆಳೆದಿದ್ದ   ರಾಮಚಂದ್ರದೇವ ಅವರು ತಮ್ಮ ಪ್ರಖ್ಯಾತ ನಾಟಕಗಳಿಂದ, ಕಥೆ ಕವನಗಳಿಂದ, ರೂಪಾಂತರಗಳಿಂದ, ವಿಮರ್ಶೆಗಳಿಂದ, ಅಂಕಣಗಳಿಂದ ಮತ್ತು ವಿದ್ವತ್ಪೂರ್ಣ ಉಪನ್ಯಾಸಗಳಿಂದ ಕನ್ನಡ ಜನತೆಗೆ ಚಿರಪರಿಚಿತರಾಗಿದ್ದರು.

ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲೀಷ್‌ ಸಾಹಿತ್ಯದಲ್ಲಿ ಎಂ.ಎ. ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದ ಡಾ. ರಾಮಚಂದ್ರ ದೇವರು ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು. ನಂತರ ಅಮೆರಿಕ ರಾಯಭಾರ ಕಚೇರಿಯ ಲೈಬ್ರರಿ ಆಫ್ ಕಾಂಗ್ರೆಸ್ಸಿಗೆ ಪ್ರತಿನಿಧಿಯಾಗಿ ನೇಮಕಗೊಂಡಿದ್ದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್‌ ಪ್ರಾಧ್ಯಾಪಕರಾಗಿದ್ದರು.   ನಗರ ಜೀವನ ಬಿಟ್ಟು ಗ್ರಾಮೀಣ ಪ್ರದೇಶದ ಕಡೆ ಆಕರ್ಷಿತರಾಗಿದ್ದ ರಾಮಚಂದ್ರ ದೇವ ಅವರು ಹುಟ್ಟೂರು ಕಲ್ಮಡಕ್ಕೆ ತೆರಳಿ ಕೃಷಿ ಚಟುವಟಿಕೆ ಆರಂಭಿಸಿ ಸಾಹಿತ್ಯ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದರು. ಹುಟ್ಟೂರು ಕಲ್ಮಡ್ಕದಲ್ಲಿ ಬೋಧಿ ವೃಕ್ಷ ಎಂಬ ಟ್ರಸ್ಟ್‌ ಸ್ಥಾಪಿಸಿ ಪುಸ್ತಕ ಪ್ರಕಟಣೆ ಆರಂಭಿಸಿದ್ದರು. 

ರಾಮಚಂದ್ರದೇವರ ಕುರಿತಾದ ಬರಹಗಳ ಬಗ್ಗೆ ನಾಡಿನಲ್ಲಿ ಗಣ್ಯರ ಮೆಚ್ಚುಗೆ ನಿರಂತರವಾಗಿ ಹರಿಯುತ್ತಿದೆ.  ಕಥೆಗಾರರಾಗಿ ರಾಮಚಂದ್ರದೇವರು ಬರೆದಿರುವ ಬಹುತೇಕ ಕಥೆಗಳು ಅವರು ಸಮಗ್ರ ಕಥೆಗಳುಕಥಾಸಂಕಲನದಲ್ಲಿವೆ.  ಅವರ ಕಥೆಗಳ ಕುರಿತಾಗಿ   ಪ್ರೊಫೆಸರ್ ಹರಿಯಪ್ಪ ಪೇಜಾವರ ಅವರು ಹೇಳಿರುವ ಮಾತುಗಳು ಕಥೆಗಾರ ರಾಮಚಂದ್ರರ ಬಗ್ಗೆ ಹೆಚ್ಚಿನ ಬೆಳಕು ನೀಡುವಂತದ್ದಾಗಿದೆ.

'ಅರ್ಬುದ ಮತ್ತು ಪುಣ್ಯಕೋಟಿ', ಕನ್ನಡದ ಕಥೆಗಳ ಸಂದರ್ಭದಲ್ಲೇ ಒಂದು ಹೊಸಬಗೆಯ ಕಥೆ. ಅವನ, ಅವಳ, ನಿರೂಪಕನ ವಾಯ್ಸುಗಳನ್ನು ಭೂತ ವರ್ತಮಾನಗಳನ್ನು ತುಂಡುಗಡಿಯದಂತೆ ಒಂದೇ ಬಿಂದುವಿನಲ್ಲಿ ಸಂಧಿಸುವ ಬಗೆ ಕನ್ನಡದ ಕಥಾಜಗತ್ತಿಗೇ ಹೊಸತು ಅನ್ನಿಸುತ್ತದೆ. ಅರ್ಬುದ ಹೆಸರು ಹರಡಿಕೊಳ್ಳುವ ಹಿಂಸೆಯ ಕ್ಯಾನ್ಸರಿನ ಪ್ರತೀಕವಾಗುತ್ತ ಸತ್ಯ ತಲೆಕೆಳಗಾದ, ಹಿಂಸೆ ಭ್ರಷ್ಟಾಚಾರ ವಿಜೃಂಭಿಸುವ, ಮನುಷ್ಯನ ಅಂತರ್ವಾಣಿಗೆ (ಪುಣ್ಯಕೋಟಿಯ ಅಂಬಾದನಿ) ಕುರುಡಾಗುವ ಅಬ್ಬರದ ಸದ್ದಿನ ಬೇಬಲ್  ಗೋಪುರದ ಶಿಖರವೇರುತ್ತಿರುವ ಸ್ಥಿತಿಯ ಮಧ್ಯೆಯೂ ಮತ್ತೆ ಅಂತರ್ವಾಣಿ --ಮನುಷ್ಯ ಸಂಬಂಧಕ್ಕೆ ಹಪಹಪಿಸುವ (ಪೋಸ್ಟ್, ಫೋನ್, ಮೊಬೈಲ್ ಮುಂತಾದ ಆಧುನಿಕ ಸಂಪರ್ಕ ಮಾಧ್ಯಮಗಳ ರೂಪಕದ ಜತೆ) ಮೂಲಕ ಕಥೆ ಕೊನೆಯಾಗುವುದು ಬದುಕಿನ ಬಗ್ಗೆ ಆಶೆ ಹುಟ್ಟಿಸುವಂತಿದೆ. ಇಡೀ ಕಥೆ  ಆಧುನಿಕೋತ್ತರ ರಚನೆಯಾಗಿ ಕಾಣಿಸುತ್ತದೆ. ಬರೆವಣಿಗೆ ಎಲ್ಲೂ ತುಂಡುಗಡಿಯದೆ ನಿಲುಗಡೆ ಆಯ್ತು ಅನ್ನಿಸಿದಾಗಲೂ ಮತ್ತೆ ("ಅರೆ, ಮತ್ತೆ ರಿಂಗಾಗ್ತಿದೆ", ಅಂದರೆ ಮನುಷ್ಯನ--ಸಂಬಂಧಕ್ಕೆ ಹಪಹಪಿಸುವ--ಪಾಡು--) ಮುಂದುವರಿಯುವ ಸೂಚನೆಯಂತಿದೆ. ಇಡಿಯ ಕಥೆಯ ಶೈಲಿಯೇ ಬದುಕಿನ ಅರಾಜಕ, ಹಿಂಸ್ರ, ಗದ್ದಲದ ಬೇಬಲ್ ಗೋಪುರದ ಅಭಿನಯದಂತಿದೆ. ಭಾಷೆಯ ಜೀವಂತ ಬಳಕೆಯ ಬಗ್ಗೆ, ಶಬ್ದಸೂತಕವನ್ನು ಮೀರುವ ಹಂಬಲಕ್ಕೆ ಭಾಷ್ಯ ಬರೆದಂತಿದೆ ಈ ಕಥೆ. ಆಧುನಿಕ ರಾಜಕೀಯ ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ (ಸತ್ಯವನ್ನೇ ಹೇಳಬೇಕಾದ ಮಾಧ್ಯಮಗಳಲ್ಲಿ ಕೂಡ) ಬೇರಿಳಿದ ಭ್ರಷ್ಟಾಚಾರ, ಹಿಂಸಾನಂದದ ಬಗೆಗೂ ಟೀಕೆ ಬರೆದಂತಿದೆ. ಒಟ್ಟಿನಲ್ಲಿ ಇದು ಕಥೆಯಲ್ಲ; ಒಂದು ಆಧುನಿಕ ಕಾವ್ಯವೇ ಆಗಿದೆ.

ಇನ್ನು ಭೇತಾಳ ಕಥೆ. ಬೇರೆ ಬೇರೆ ಪಾತ್ರಗಳ ಮೂಲಕ ಕಥೆ ಹೇಳುವುದು ಕನ್ನಡಕ್ಕೇನೂ ಹೊಸದಲ್ಲ. ಟಾಗೋರ್ ಈ ತಂತ್ರವನ್ನು ಬಹಳ ಚೆನ್ನಾಗಿಯೇ ನಿರ್ವಹಿಸಿದರು ಅನ್ನಿಸುತ್ತದೆ. ನಡುವೆ ನವ್ಯದ ಮತ್ತಿನಲ್ಲಿ  ಈ ತಂತ್ರ ಮೂಲೆಗೆ ಬಿದ್ದಿದ್ದು ಇದೀಗ ಮತ್ತೆ ಮುಂಚೂಣಿಗೆ ಬರುತ್ತಿರುವುದಕ್ಕೆ ಸಾಕ್ಷಿ ಈ ಕತೆ. ಇದೂ ಒಂದು ಆಧುನಿಕ ಕತೆಯೇ. ದಿವ್ಯ ಭವ್ಯ ಎಂದೆಲ್ಲ ಮತ್ತೆ ಪರಂಪರೆಗೇ ಜೋತುಬಿದ್ದ ನಮ್ಮ ಹಿರಿಯ ಬರೆಹಗಾರರ ಮಧ್ಯೆ ರಾಮಚಂದ್ರ ದೇವ ಅವರು ಪೂರ್ವ ಪಶ್ಚಿಮವನ್ನು ಬೆಸೆಯುವ ಮೂಲಕ ಬೇತಾಳಸ್ಥಿತಿಯನ್ನು ಮೀರಲೆತ್ನಿಸುವ ಪಾತ್ರಗಳನ್ನು ಸೃಷ್ಟಿಸಿರುವುದು ಕುತೂಹಲಕಾರಿಯಾಗಿದೆ. ದೇಹ ಮನಸ್ಸನ್ನು ಬೆಸೆಯಲೆತ್ನಿಸುವ, ಕೆಡಹುವ ಹಿಂಸೆಗಿಂತ ಪ್ರಜ್ಞಾಪೂರ್ವಕವಾಗಿ ನಾಗರಿಕತೆಯನ್ನು ಕಟ್ಟುವ, ಎಲ್ಲವನ್ನೂ ಸಮಾನ ನೆಲೆಯಲ್ಲಿ ನೋಡಬೇಕೆನ್ನುವ, ಅಂಚಿನಲ್ಲಿರುವವರ ಬೇತಾಳ ಸ್ಥಿತಿಯನ್ನು ನಿವಾರಿಸಲೆತ್ನಿಸುವ, ಭಾಷೆಯನ್ನು ಸೃಷ್ಟಿಗಾಗಿ, ವಿವೇಚನೆಗಾಗಿ, ಸಂಬಂಧಕ್ಕಾಗಿ ಬಳಸಿಕೊಳ್ಳುವ ಕಾಳಜಿ, ಬದುಕು ಸಾವು ಮುಖ ಮುಖವಾಡದ ಪ್ರೇತಸ್ಥಿತಿ, ಈ ಪ್ರೇತಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸುವ ಸಮಾಜದ ಕಾನೂನು--ಹೀಗೆ ಈ ಎಲ್ಲ ಇವೊತ್ತಿನ ದಿನಮಾನದ ಕಾಳಜಿಗಳನ್ನು ತೆಕ್ಕೆಗೆ ತೆಗೆದುಕೊಂಡ ಈ ಕತೆಯ ಬೀಸು ದೊಡ್ಡದು. ವರದಿ, ಬೇರೆ ಬೇರೆ ಪಾತ್ರಗಳ ಮೂಲಕ ಕಥೆ ಹೇಳುತ್ತರಾಮಚಂದ್ರ ದೇವ ಅವರು  objectivityಯನ್ನು ಸಾಧಿಸುವುದರಿಂದ ಕಥೆಯ ಆಶಯ ಹೆಚ್ಚು ಗಟ್ಟಿಮುಟ್ಟಾಗಿದೆ. ಕಥೆ ಕೂಡಾ ಬೇತಾಳ ಕತೆಯ ತಂತ್ರವನ್ನು ಅಳವಡಿಸಿಕೊಂಡಿದೆ.--(ಮುಖ್ಯವಾಗಿ ತುಕ್ಕಪ್ಪಯ್ಯ).

"ಜೀವಪಕ್ಷಿಯ ಕತೆ"  ಮತ್ತೆ ಓದಿದೆ. ಅವೊತ್ತು ಓದಿ ಪಟ್ಟ ಬೆರಗು ಖುಷಿ ಮತ್ತೆ ಮರುಕೊಳಿಸಿತು. "ಮೂಗೇಲ" ಕಾಫ್ಕಾನ "ಮೆಟಾಮೊರ್ಫೊಸಿಸ್" ನ್ನು ನೆನಪಿಸುತ್ತದೆ ನಿಜ. ಆದರೆ ಅದು ಅಂತಿಮವಾಗಿ ರಾಮಚಂದ್ರದೇವ ಅವರ, ಕನ್ನಡದ್ದೇ ಆಗಿದೆ.

ರಿಸಾರ್ಟ್, ಜೀವಪಕ್ಷಿ, ಅರ್ಬುದ ಮತ್ತು ಪುಣ್ಯಕೋಟಿ, ಬೇತಾಳ ಕಥೆ ಬರೆದ ಮೇಲೆ--ಮತ್ತೆ ಇನ್ನು ಯಾವ ಕಥೆ ಬರೆಯದಿದ್ದರೂ ಪರವಾ ಇಲ್ಲರಾಮಚಂದ್ರದೇವ ಅವರು  ನಮ್ಮ ನಡುವಿನ ಮಹತ್ತ್ವದ ಕಥೆಗಾರರಾಗಿಯೇ ಉಳಿಯುತ್ತಾರೆ.. ಇಂಥಾ ಕತೆಗಳನ್ನು ಓದಿದಾಗ ಬದುಕಿದ್ದು ಸಾರ್ಥಕ ಅನ್ನಿಸುತ್ತದೆ.

ರಾಮಚಂದ್ರದೇವ ಅವರು ಶೆಕ್ಸ್ಪಿಯರ್ ನಾಟಕಮಾಲೆಗಾಗಿ  ಬರೆದ ಹ್ಯಾಮ್ಲೆಟ್; ಅಶ್ವತ್ಥಾಮ, ಹುಲಿಯ ಕಥೆ, ದಂಗೆ, ಪುಟ್ಟಿಯ ಪಯಣ, ಸುದರ್ಶನ, ಡಾಗ್ ಶೋ, ಜರಾಸಂಧ ಮುಂತಾದ ನಾಟಕಗಳು ವಿದ್ವಾಂಸರ ಮೆಚ್ಚುಗೆ ಪಡೆದಿವೆ.  ಅನೇಕ ಪ್ರಯೋಗಗಳನ್ನೂ ಕಂಡಿವೆ.  ರಾಮಚಂದ್ರದೇವ ಅವರು ಅನೇಕ ಕವನಗಳನ್ನೂ ಬರೆದಿದ್ದು, ಏಳುಶತಕೋಟಿ ಪ್ರೇತಗಳನ್ನು ಕುರಿತ ಪ್ರೇತಲೋಕಎಂಬ ಸುದೀರ್ಘ ಕವನವೂ ಸೇರಿದಂತೆ ಅವರ ಐದು ಪ್ರಮುಖ ಕವನಗಳು ಒಂದು ಕವನಸಂಕಲನವಾಗಿ ಹೊರಹೊಮ್ಮಿದೆ.  ಮಾತನಾಡುವ ಮರ’, ‘ಇಂದ್ರಪ್ರಸ್ಥ ಮತ್ತು ಇತರ ಕವನಗಳು’   ರಾಮಚಂದ್ರದೇವ ಅವರ  ಇತರ ಪ್ರಸಿದ್ಧ ಕವನ ಸಂಕಲನಗಳು.

ಮುಚ್ಚು ಮತ್ತು ಇತರ ಲೇಖನಗಳು, ವಡ್ಡಾರಾಧನೆ, ಮಹಾಭಾರತಶಿವರಾಮಕಾರಂತ ಇವೇ ಮುಂತಾದ ವೈವಿಧ್ಯಪೂರ್ಣ ಲೇಖನಗಳನ್ನೂ ರಾಮಚಂದ್ರದೇವ ಬರೆದಿದ್ದಾರೆ.  

ರಾಮಚಂದ್ರದೇವ ಅವರ ಮತ್ತೊಂದು ಮಹತ್ವದ ಕೃತಿ  ಶೇಕ್ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ’  ಪರಿಷ್ಕೃತಗೊಂಡು ವಿಸ್ತೃತವಾಗಿ ಓದುಗರ ಕೈಸೇರಿದೆ.  ಈ ಕೃತಿಯ ಕುರಿತಂತೆ ಡಾ. ಯು. ಆರ್ ಅನಂತಮೂರ್ತಿ ಹೇಳುತ್ತಾರೆ “"ನನಗೆ ತಿಳಿದಂತೆ ಈ ಬಗೆಯ ಕೃತಿ ಕನ್ನಡದಲ್ಲಾಗಲೀ ಇಂಗ್ಲಿಷಿನಲ್ಲಾಗಲೀ ಇದುವರೆಗೆ ಪ್ರಕಟವಾಗಿಲ್ಲ ಮತ್ತು ಇದು ತೌಲನಿಕ ವಿಮರ್ಶೆಗೆ ನೀಡಿದ ಹೊಸ ಕೊಡುಗೆಯಾಗಿದೆ."


ಹೀಗೆ ಕನ್ನಡ ಸಾಹಿತ್ಯಲೋಕದಲ್ಲಿ ಸಾಂಸ್ಕೃತಿಕ ಲೋಕಗಳಲ್ಲಿ ತಮ್ಮ ವಿಶಿಷ್ಟ ಕೊಡುಗೆಗಳಿಂದ ಪ್ರಸಿದ್ಧರಾದ ರಾಮಚಂದ್ರದೇವ ಸೆಪ್ಟೆಂಬರ್ 11, 2013ರಂದು ಈ ಲೋಕವನ್ನಗಳಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: Ramachandra Deva

ಕಾಮೆಂಟ್‌ಗಳಿಲ್ಲ: