ಬುಧವಾರ, ಆಗಸ್ಟ್ 28, 2013

ಸುಬ್ರಾಯ ಚೊಕ್ಕಾಡಿ


ಸುಬ್ರಾಯ ಚೊಕ್ಕಾಡಿ

ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ ಜೂನ್ 29, 1940ರ ವರ್ಷದಲ್ಲಿ ಜನಿಸಿದರು. ಅವರ ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯನವರು ಮತ್ತು  ತಾಯಿ ಸುಬ್ಬಮ್ಮನವರು. ಅವರ ಪ್ರಾಥಮಿಕ ಶಿಕ್ಷಣ ಚೊಕ್ಕಾಡಿಯಲ್ಲಿ ನೆರವೇರಿತು. ಹೈಸ್ಕೂಲು ಓದಿದ್ದು ಪಂಜ ಎಂಬಲ್ಲಿ. ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಕನ್ನಡದಲ್ಲಿ ಎಂ.ಎ ಪದವಿ ಪಡೆದರು. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕಲರವ, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಅವರಿಗೆ ಕವನ ಕಟ್ಟುವ ಕಾಯಕ ಪ್ರಾರಂಭವಾಗಿತ್ತು.

ಸುಬ್ರಾಯ ಚೊಕ್ಕಾಡಿಯವರು ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಶಿಕ್ಷಕ ವೃತ್ತಿ. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39ವರ್ಷಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ತಾವು ಎಳೆವೆಯಿಂದಲೇ ಅನುಭವಿಸಿದ ಕಷ್ಟ ಕಾರ್ಪಣ್ಯದ ದಿನಗಳು, ನೋವಿನ, ಅವಮಾನದ, ಅಸಹಾಯಕತೆಯ ಘಟನೆಗಳಿಗೆ ಅವರು  ಪ್ರತಿಭಟನೆಯ ರೂಪ ನೀಡಿದ್ದು ಮೂರ್ತ ಕಾವ್ಯರೂಪದಲ್ಲಿ. ಹೀಗೆ ತಮ್ಮ ಅಂತರಂಗವನ್ನು ಸಂಕೇತ, ಪ್ರತಿಮೆ, ರೂಪಕಗಳ ಮೂಲಕ ಹೊರಹಾಕಿದಾಗ ಕವಿಯೊಬ್ಬನ ಆವಿರ್ಭಾವವಾಯಿತು. ಹೀಗೆ ಮೂಡಿಬಂದ ಕವನಗಳು ನಾಡಿನ ಪ್ರಮುಖ ಪತ್ರಿಕೆಗಳೆಲ್ಲದರಲ್ಲೂ ಪ್ರಕಟಗೊಂಡವು.  ಜನಮನಗಳಲ್ಲೂ ನಲಿದವು. 

ಸುಬ್ರಾಯ ಚೊಕ್ಕಾಡಿಯವರು ರಚಿಸಿದ  ಕವನ ಸಂಕಲನಗಳಲ್ಲಿ ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ. ಗೀತೆಗಳು-ಹಾಡಿನ ಲೋಕ, ಬಂಗಾರದ ಹಕ್ಕಿ ಪ್ರಮುಖವಾದದ್ದು. 1970ರಲ್ಲಿ ಪ್ರಕಟವಾದ ಅವರ ಮೊದಲ ಕವನ ಸಂಕಲನ ತೆರೆಬಳಿಕ ಬಂದ ಇನ್ನಿತರ ಒಂಭತ್ತು ಕವನ ಸಂಕಲನಗಳು ಸೇರಿ ಒಟ್ಟು ಹತ್ತು ಕವನ ಸಂಕಲನಗಳು ಚೊಕ್ಕಾಡಿಯ ಹಕ್ಕಿಗಳುಎಂಬ ಅವರ 2010ರಲ್ಲಿ ಪ್ರಕಟವಾದ ಸಮಗ್ರ ಕಾವ್ಯ ಸಂಗ್ರಹದಲ್ಲಿ ದೊರಕುತ್ತವೆ. ಇದಲ್ಲದೆ ಅವರು ಒಂದು ಕಾದಂಬರಿ (ಸಂತೆಮನೆ) ಕಥಾ ಸಂಕಲನ (ಬೇರುಗಳು) ನಾಲ್ಕು ವಿಮರ್ಶಾ ಸಂಕಲನಗಳು (ದ.ಕ. ಕಾವ್ಯ ಸಮೀಕ್ಷೆ ಒಳಹೊರಗು, ಕೃತಿ ಶೋಧ, ಸಮಾಲೋಕ) ಹಾಗೂ ಒಂದು ಸಂಪಾದಿತ ಕೃತಿ (ದ.ಕ. ಕಾವ್ಯ) ಪ್ರಕಟಿಸಿದ್ದಾರೆ. 

ಸುಬ್ರಾಯ ಚೊಕ್ಕಾಡಿಯವರ ಬರಹಗಳ ಆಧಾರಿತ ಕ್ಯಾಸೆಟ್ ಹಾಗೂ ಸಿಡಿಗಳಲ್ಲಿ ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ ಪ್ರಖ್ಯಾತಗೊಂಡಿವೆ.    ಅವರು  ಕೆಲವು ಚಲನಚಿತ್ರಗಳಿಗೂ  ಗೀತೆಗಳನ್ನು ಬರೆದಿದ್ದಾರೆ.   “ನನಗೆ  ಕಾವ್ಯದ ಎಲ್ಲ ರೀತಿಗಳ ಬಗ್ಗೆಯೂ, ಪ್ರೀತಿ, ಗೌರವ ಇದೆ. ಗಂಭೀರ ಕವಿತೆ ಮೇಲು, ಲಘು ಕವಿತೆ ಇಲ್ಲವೇ ಹಾಡು ಕೀಳು ಎಂದು ತಾನು ಭಾವಿಸಲಾರೆಎಂದು ಚೊಕ್ಕಾಡಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಚೊಕ್ಕಾಡಿ ಅವರ  ಕಾವ್ಯಬೆಳವಣಿಗೆಯನ್ನು ವ್ಯಾಖ್ಯಾನಿಸುವ  ವಿಮರ್ಶಕ  ಎಸ್. ಆರ್.  ವಿಜಯಶಂಕರ್  ಅವರು  “ಯಕ್ಷಗಾನದ ವಾತಾವರಣದಿಂದ ಬಂದ ಚೊಕ್ಕಾಡಿ ತಮ್ಮ ಕಾವ್ಯ ವ್ಯವಸಾಯದ ಮೊದಲ ಹಂತಗಳಲ್ಲಿ ಅಡಿಗರಿಂದ ಪ್ರಭಾವಿತರಾದರು. ಮುಂದೆ ಅಡಿಗರ ಕಾವ್ಯ ಮಾರ್ಗದಿಂದ ಬೇರೆಯಾಗಲು ಹೊಸ ದಾರಿಗಳನ್ನು ಅರಸಿದರು.  ಒಂದು ರೀತಿಯಲ್ಲಿ ಚೊಕ್ಕಾಡಿ ತಮ್ಮ ಸ್ವಂತಿಕೆಯ ಹುಡುಕಾಟದ ಮಾರ್ಗದಲ್ಲಿ ನವೋದಯ, ನವ್ಯ, ಪ್ರಗತಿ ಶೀಲ, ಬಂಡಾಯ, ಬಂಡಾಯೋತ್ತರ ಹೀಗೆ ವಿವಿಧ ಕಾವ್ಯ ಚಳವಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ, ಬೇರ್ಪಡಿಸುತ್ತಾ ತಮ್ಮದೇ ಹಾದಿಯಲ್ಲಿ ಪಯಣಿಸುವ ಪ್ರಯತ್ನ ಮಾಡುತ್ತಾ ಹೋದರು. ಈ ಪಯಣದಲ್ಲಿ ಚೊಕ್ಕಾಡಿಯವರು ಅನೇಕ ರೀತಿಯ ಹಾಗೂ ವಿವಿಧ ಮನೋಸ್ಥಿತಿಗಳ ಕವನಗಳನ್ನು ರಚಿಸಿದರು”  ಎನ್ನುತ್ತಾರೆ.

ನನ್ನ ಪುಟ್ಟ ಪ್ರಪಂಚಎಂಬ ಕವನದಲ್ಲಿ ಚೊಕ್ಕಾಡಿ  ಹೀಗೆ ಹೇಳುತ್ತಾರೆ:
ಮರಗಿಡ ಪ್ರಾಣಿ ಪಕ್ಷಿಗಳ ನನ್ನ
ಪುಟ್ಟ ಪ್ರಪಂಚದ ಒಳಗೆ ಒಮ್ಮೊಮ್ಮೆ
ಮನುಷ್ಯರೂ ನುಸುಳಿಕೊಳ್ಳುತ್ತಾರೆ ಅನಾಮತ್ತಾಗಿ- ಸುತ್ತ ಸೇರಿದ್ದ
ಮರಗಿಡ ಬಳ್ಳಿಗಳು, ಅಳಿಲು, ಗುಬ್ಬಿ, ಬೆಳಕ್ಕಿಗಳು ಸುತ್ತ
ಮಾಯೆಯ ಬಟ್ಟೆ ನೇಯುತ್ತಿರಲು ಅಪರಿಚಿತರಾಗಮನಕ್ಕೆ
ಗಡ ಬಡಿಸಿ, ಚೆಲ್ಲಾಪಿಲ್ಲಿಯಾಗುತ್ತಾವೆ

ಸುಬ್ರಾಯ ಚೊಕ್ಕಾಡಿಯವರಿಗೆ ಸಂದ ಗೌರವ ಪ್ರಶಸ್ತಿಗಳಲ್ಲಿ 65ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಸುಳ್ಯ ತಾಲ್ಲೂಕು 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದಕ್ಷಿಣ ಕನ್ನಡ  ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ, ಸಾಹಿತ್ಯಕಲಾನಿ ಪ್ರಶಸ್ತಿ, ಕರ್ನಾಟಕಶ್ರೀ, ಕೆ. ಎಸ್.  ನರಸಿಂಹಸ್ವಾಮಿಗಳ  ಹೆಸರಿನಲ್ಲಿ  ನೀಡಲಾಗುವ  ಕಾವ್ಯಶ್ರೀ  ಪ್ರಶಸ್ತಿ, ಮತ್ತು  2016ರ  ವರ್ಷದಲ್ಲಿ  ಸಂದ  ಕರ್ನಾಟಕ  ಸಾಹಿತ್ಯ ಅಕಾಡೆಮಿಯ  ಗೌರವ   ಮುಖ್ಯವಾದುವು.  ಈ ಗೌರವಾನ್ವಿತ ವ್ಯಕ್ತಿತ್ವಕ್ಕೆ ಹಿರಿಮೆಗೆ ಅರ್ಪಿತವಾದ  ಗೌರವಗ್ರಂಥ ಮುಕ್ತ ಹಂಸ.

ಸುಬ್ರಾಯ ಚೊಕ್ಕಾಡಿಯವರ ಶಿಷ್ಯರಾದ ಹಲವಾರು ಗೆಳೆಯರು ಹೇಳುವುದನ್ನು ಕೇಳಿದ್ದೇನೆ ಎಷ್ಟು ಸವಿಯಾದ ನೆನಪು ಅದುಎಂದು.  ಆ ಮಾತು ಕೇಳಿದಾಗಲೆಲ್ಲಾ ಆ ಕಾಲದ ಸಹೃದಯ ಶಿಕ್ಷಕ ವೃಂದವನ್ನು ನೆನೆದಾಗ ಸ್ವತಃ ಸುಬ್ರಾಯ ಚೊಕ್ಕಾಡಿಯವರ ಕವನ ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂಥ ದಿನಗಳವು ಇನ್ನೆಂದೂ ಬಾರವುನೆನಪಾಗುತ್ತದೆ.

ಈ ಹಿರಿಯ ಸಹೃದಯರ ಜೀವನ ಸುಖ ಸಂತಸ ಸೌಭಾಗ್ಯಗಳಿಂದ ನಳನಳಿಸುತ್ತಿರಲಿ ಎಂಬುದು ಅವರ ಅಭಿಮಾನಿಗಳೆಲ್ಲರ ಆತ್ಮೀಯ ಹಾರೈಕೆ.

ಚಿತ್ರ ಕೃಪೆ:  ಶಿವ ಸುಬ್ರಮಣ್ಯ

Tag: Subraya Chokkadi

ಕಾಮೆಂಟ್‌ಗಳಿಲ್ಲ: