ಶನಿವಾರ, ಆಗಸ್ಟ್ 31, 2013

ರಾಬರ್ಟ್ ಬಾಡೆನ್ ಪೊವೆಲ್

ರಾಬರ್ಟ್ ಬಾಡೆನ್ ಪೊವೆಲ್

ವಿಶ್ವಪ್ರಸಿದ್ಧವಾದ ಸ್ಕೌಟ್ ಚಳುವಳಿಯ ಪ್ರವರ್ತಕರಾದ ಬಾಡೆನ್ ಪೊವೆಲ್ ಅವರು ಫೆಬ್ರುವರಿ 22, 1857ರಂದು ಲಂಡನ್ನಿನಲ್ಲಿ ಜನಿಸಿದರು.  ರಾಬರ್ಟ್ ಬಾಡೆನ್ ಪೊವೆಲ್ ಬ್ರಿಟಿಷ್ ಸೈನ್ಯಾಧಿಕಾರಿಯಾಗಿ ಭಾರತ ಮತ್ತು ಆಫ್ರಿಕಾಗಳಲ್ಲಿ ಸೇವೆ ಸಲ್ಲಿಸಿದ್ದರು.

ತಮ್ಮ ಮಿಲಿಟರಿ ದಿನಗಳ  ಕುರಿತಾಗಿ ಹಲವಾರು ಪುಸ್ತಕಗಳನ್ನು ಬರೆದಿದ್ದ ರಾಬರ್ಟ್ ಬಾಡೆನ್ ಪೊವೆಲ್ ಅವರು  ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳ ಕುರಿತು ಅಪಾರ ಚಿಂತನೆ ನಡೆಸಿ  ಆ ಚಿಂತನೆಗಳನ್ನು ಪ್ರಾಯೋಗಿಕವಾಗಿ ಬ್ರೌನ್ ಸೀ ಎಂಬಲ್ಲಿ ಸ್ಥಳೀಯ ಹುಡುಗರ ಕ್ಯಾಂಪ್ ಒಂದರ ಮೂಲಕ 1907ರ ವರ್ಷದಲ್ಲಿ ಮೊದಲಿಗೆ ಕಾರ್ಯರೂಪಕ್ಕೆ ತಂದರು.  ಇದು ಮುಂದೆ ಸ್ಕೌಟ್ ಚಳುವಳಿಯಾಗಿ ವಿಶ್ವದೆಲ್ಲೆಡೆ ಪ್ರವರ್ತನಗೊಳ್ಳುವಲ್ಲಿ ಪ್ರಮುಖ ಹೆಜ್ಜೆಯೆನಿಸಿತು.

1908ರಲ್ಲಿ ಪೊವೆಲ್ ಅವರು ಸ್ಕೌಟಿಂಗ್ ಫಾರ್ ಬಾಯ್ಸ್ಎಂಬ ಪುಸ್ತಕವನ್ನು ಬರೆದರು. ನೂರೈವತ್ತು ಮಿಲಿಯನ್ ಪ್ರತಿಗಳು ಮಾರಾಟವಾದ ಈ ಪುಸ್ತಕವು ಇಪ್ಪತ್ತನೆಯ ಶತಮಾನದ ಅತ್ಯಂತ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ನಾಲ್ಕನೆಯ ಸ್ಥಾನ ಪಡೆದಿದೆ.   ಮುಂದೆ ಅವರ ಸಹೋದರಿ ಆಗೆನ್ಸ್ ಬಾಡೆನ್ ಪೊವೆಲ್ ಮತ್ತು ಪತ್ನಿ ಆಲೆವರ್ ಸೇಂಟ್ ಕ್ಲೇರ್ ಸೋಮ್ಸ್ ಅವರುಗಳು ಹೆಣ್ಣುಮಕ್ಕಳಿಗಾಗಿ ಗರ್ಲ್ಸ್ ಗೈಡ್ಸ್ ಮೂಮೆಂಟ್ಎಂಬ ಕಾರ್ಯಕ್ರಮವನ್ನು ಪ್ರಸಿದ್ಧಿಗೊಳಿಸಿದರು.

ಮಿಲಿಟರಿ, ಸ್ಕೌಟಿಂಗ್ ಮತ್ತು ಹಲವಾರು ಸಾಹಸ ಕೌತುಕಗಳ ಕುರಿತಾದ  ಮಹತ್ವದ ಪುಸ್ತಕಗಳ ಬರವಣಿಗೆಯ ಜೊತೆಗೆ ರಾಬರ್ಟ್ ಬಾಡೆನ್ ಪೊವೆಲ್ ಅವರು ಚಿತ್ರಕಾರರಾಗಿ ಸಹಾ ಹೆಸರಾಗಿದ್ದರು. ಅವರ ಪ್ರಸಿದ್ಧ ಪುಸ್ತಕಗಳಲ್ಲಿ ಭಾರತದಲ್ಲಿನ ನೆನಪುಗಳ ಕುರಿತಾದ ಇಂಡಿಯನ್ ಮೆಮೊರಿಸ್ಎಂಬ ಪುಸ್ತಕವೂ ಸೇರಿದೆ.   ವಿಶ್ವದಾದ್ಯಂತ ಸ್ಕೌಟ್ಸ್ ಕಾರ್ಯಕ್ರಮಗಳು ಜನಪ್ರಿಯಗೊಂಡು ರಾಬರ್ಟ್ ಬಾಡೆನ್ ಪೋವೆಲ್ಲರಿಗೆ ವಿವಿಧ ದೇಶಗಳಲ್ಲಿ ಗೌರವ, ಬಹುಮಾನ, ಜನಪ್ರಿಯತೆಗಳು ಸಂದವು.  ತಮ್ಮ ಕೊನೆಯ ದಿನಗಳನ್ನು ಕೀನ್ಯಾದಲ್ಲಿ ಕಳೆದ ಪೊವೆಲ್ಲರು 1941ರ ವರ್ಷದಲ್ಲಿ ನಿಧನರಾದರು.


Tag: Robert Baden Powell

ಕಾಮೆಂಟ್‌ಗಳಿಲ್ಲ: