ಶುಕ್ರವಾರ, ಆಗಸ್ಟ್ 30, 2013

ಅಲ್ಲಮ ಪ್ರಭು

ಅಲ್ಲಮ ಪ್ರಭು

ನಮ್ಮ ನಾಡಿನ ಅಧ್ಯಾತ್ಮಚೇತನದ ಜ್ಯೋತಿಯನ್ನು ಪ್ರಕಾಶಗೊಳಿಸಿದ ಅಲ್ಲಮಪ್ರಭುಗಳ ಬಗೆಗೆ ಹಾಗೂ ಆ ವಚನ ಕಾಲದ ನಮ್ಮ ಭವ್ಯ ಪರಂಪರೆಯನ್ನು ನೆನೆಯುತ್ತಿದ್ದರೆ ಮನಸ್ಸು ಪುಳಕಿಸುತ್ತದೆ.

12ನೇ ಶತಮಾನ ಭಾರತದ ಇತಿಹಾಸದಲ್ಲಿ ಧಾರ್ಮಿಕ ಸುವರ್ಣಕಾಲ. ಕರ್ನಾಟಕದ ಮಟ್ಟಿಗೆ ವಿಚಾರಕ್ರಾಂತಿಗೆ, ತನ್ಮೂಲಕ ಸಾಮಾಜಿಕ, ಸಾಹಿತ್ಯಿಕ ಕ್ರಾಂತಿ ವಿಜೃಂಭಿಸಿದ ಕಾಲ. ಕನ್ನಡನಾಡಿನ ಕೇಂದ್ರ ಕಲ್ಯಾಣದಲ್ಲಿ ರಾಜ್ಯವಾಳುತ್ತಿದ್ದ ಬಿಜ್ಜಳ ರಾಜನ ಮಂತ್ರಿಯಾಗಿ ದೇಶವನ್ನು ಸುಭಿಕ್ಷದೆಡೆಗೆ ಕೊಂಡೊಯ್ದ ಭಗವಾನ್ ಬಸವೇಶ್ವರರು ಕ್ರಾಂತಿಯ ಕೇಂದ್ರ ಬಿಂದು. ಈ ಕ್ರಾಂತಿ ದೀಪಕ್ಕೆ ತಾತ್ವಿಕ ನೆಲಗಟ್ಟನ್ನು ನೀಡಿ ಬೆಳಗಿಸಿದವರು ಅನುಪಮ ಚರಿತ ಅಲ್ಲಮಪ್ರಭುದೇವರು. ಬಸವಣ್ಣನವರು ಪ್ರತಿಪಾದಿಸಿದ ಸತ್ಯಶುದ್ಧ ಕಾಯಕ, ದಾಸೋಹಗಳು ಕಲ್ಯಾಣ ರಾಜ್ಯದ ಕೀರ್ತಿಯನ್ನು ನಾಡಿನಾದ್ಯಂತ ಬಿತ್ತರಿಸಿದವು. ಕಲ್ಯಾಣ ರಾಜ್ಯದಲ್ಲಿ ಆರ್ಥಿಕ ಕ್ರಾಂತಿಗೆ ಕಾರಣವಾಯಿತು. ಮೇಲುವರ್ಗದ, ಪುರೋಹಿತಶಾಹಿಗಳ ಸ್ವತ್ತಾಗಿದ್ದ ದೇವರು, ದೇವಾಲಯಗಳನ್ನು ಜನ ಸಾಮಾನ್ಯರ ಬಳಿಗೆ ತಂದು, ಇಷ್ಟ ಲಿಂಗಧಾರಣೆ ಮೂಲಕ ದೇಹವನ್ನೇ ದೇವಾಲಯವನ್ನಾಗಿಸಿದವರು ಭಗವಾನ್ ಬಸವೇಶ್ವರರು. ತಾವೇ ಏರಬಹುದಾಗಿದ್ದ ಶೂನ್ಯಪೀಠವನ್ನು, ಕೆಳವರ್ಗದಿಂದ ಬಂದ ಮದ್ದಳೆಕಾಯಕದ ಅಲ್ಲಮಪ್ರಭು ದೇವರನ್ನು ಪೀಠಾಧ್ಯಕ್ಷರನ್ನಾಗಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.

ವೈರಾಗ್ಯಮೂರ್ತಿ ಅಲ್ಲಮಪ್ರಭು ದೇವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ  ಬಳ್ಳಿಗಾವಿಯಲ್ಲಿ. ತಂದೆ ನಿರಂಹಕಾರಿ, ತಾಯಿ ಸುಜ್ಞಾನಿ. ಕೆಲವು ಚರಿತ್ರಕಾರರು ಅಲ್ಲಮಪ್ರಭು ಹುಟ್ಟಿದ ಊರು ’ಬನವಾಸಿ’ ಎಂದೂ ಹೇಳಿದ್ದಾರೆ. ಭಾರತೀಯ ಪರಂಪರಾಗತ ಪದ್ಧತಿಯಂತೆ ಅಲ್ಲಮ ಪ್ರಭುವನ್ನೂ ಅವತಾರ ಪುರುಷರನ್ನಾಗಿ ಚಿತ್ರಿಸಿದ್ದಾರೆ. ಬಳ್ಳಿಗಾವಿಯ ಘಟಿಕಾಸ್ಥಾನದಲ್ಲಿ ವಿದ್ಯೆ ಪಡೆದ ಅಲ್ಲಮಪ್ರಭು ಮದ್ದಳೆ ನುಡಿಸುವ ಕಾಯಕ ಕೈಗೊಳ್ಳುತ್ತಾನೆ. ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯದ ರಂಗ ಮಂಟಪದಲ್ಲಿ ನೃತ್ಯ ಮಾಡುತ್ತಿದ್ದ ಮಾಯಾದೇವಿಗೆ ಮದ್ದಳೆ ನುಡಿಸುತ್ತಿದ್ದ ಅಲ್ಲಮ ಆಕೆಯ ಪ್ರೇಮಭಿಕ್ಷೆಯನ್ನು ನಿರಾಕರಿಸುತ್ತಾನೆ. ವಿರಾಗ ಜೀವನದತ್ತ ಒಲವು ಹೊಂದಿದ್ದ ಅಲ್ಲಮ ಮಾಯೆಯನ್ನು, ಬಳ್ಳಿಗಾವಿಯನ್ನು ತೊರೆದು ಜಂಗಮನಾಗಿ ದೇಶದ ತುಂಬ ಸಂಚರಿಸುತ್ತಾ, ಹಿಮಾಲಯದಲ್ಲಿ ಮಹಾಮಹಿಮರ ಸಂದರ್ಶನ ಪಡೆದು ಶಿವಯೋಗಿಯಾಗಿ ಅಂತರಂಗದ ಸಾಧನೆಯಲ್ಲಿ ತೊಡಗುತ್ತಾರೆ.

"ತನುವ ತೊಂಟವ ಮಾಡಿ, ಮನವ ಗುದ್ದಲಿಯ ಮಾಡಿ, ಅಗೆದು ಕಳೆದನಯ್ಯಾ ಭ್ರಾಂತಿಯ ಬೇರ, ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ, ಅಖಂಡ ಮಂಡಲವೆಂಬ ಬಾವಿ, ಪವನವೇ ರಾಟಾಳ, ಸುಷುಮ್ನನಾಲದಿಂದ ಉದಕವ ತಿದ್ದಿ ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯ ನಿಕ್ಕಿ, ಆವಾಗಳೂ ಈ ತೋಟದಲ್ಲಿ ಜಾಗರವಿದ್ದ ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ!" ಎಂದಿದ್ದಾರೆ ಅಲ್ಲಮ ಪ್ರಭುದೇವರು.

ಬಳ್ಳಿಗಾವಿಯಲ್ಲಿರುವ ಕೇದಾರೇಶ್ವರ ದೇವಾಲಯದ ಆವರಣದಲ್ಲಿ ಪ್ರಾಚೀನ ವಿಶ್ವವಿದ್ಯಾಲಯ ಕೋಡಿಮಠವಿದ್ದಿತು. ಇಲ್ಲಿಯೇ ಅಲ್ಲಮನ ಬಾಲ್ಯ ವಿದ್ಯಾಭ್ಯಾಸ ನಡೆಯಿತೆಂದೂ ಪಕ್ಕದಲ್ಲಿರುವ ಚಿಕ್ಕದೇವಾಲಯವನ್ನು ನಗರೇಶ್ವರ ದೇವಾಲಯ ಎಂದೂ ಕರೆಯುತ್ತಾರೆ. ಇಲ್ಲಿರುವ 3 ಗರ್ಭ ಗೃಹಗಳಲ್ಲಿ ಮಧ್ಯದಲ್ಲಿ ಪ್ರಭುಲಿಂಗ ಎಡಭಾಗದಲ್ಲಿ ಬ್ರಹ್ಮಲಿಂಗ ಬಲಭಾಗದಲ್ಲಿ ವೀರಭದ್ರ ವಿಗ್ರಹಗಳಿವೆ. ಇಲ್ಲಿ ನಡೆಯುವ ಜಾತ್ರೆಯಲ್ಲಿ "ಪ್ರಥಮ ಕಲ್ಯಾಣದ ಪ್ರಭುದೇವ ಉಘೇ, ಉಘೇ" ಎಂದು ಇಂದಿಗೂ ಘೋಷಿಸುತ್ತಾರೆ. ಬಳ್ಳಿಗಾವಿಯಿಂದ 2 ಕಿ.ಮೀ. ದೂರದಲ್ಲಿ ಗೊಗ್ಗೇಶ್ವರ ದೇವಾಲಯ, ಗೊಗ್ಗಯ್ಯನ ಹೊಂಡ, ಅನಿಮಿಷ ದೇವರ ಗದ್ದುಗೆ ಇವೆ. ಹತ್ತಿರದಲ್ಲೇ ಗೊಗ್ಗಯ್ಯ ಶರಣನ ಸಮಾಧಿ ಇದೆ. ಅನಿಮಿಷಾರಣ್ಯ ಪತ್ರೆ ವನವಿದೆ. ಸಮೀಪದ ಶಿವಪುರದಲ್ಲಿ ಪತ್ರೆ ವನದ ಮಧ್ಯೆ ಅಲ್ಲಮರ ಗದ್ದುಗೆಯೂ ಇದೆ. ಅಲ್ಲಮರ ಮೊದಲು ಅನಿಮಿಷರಿಂದ ಲಿಂಗದೀಕ್ಷೆ ಪಡೆದು, ಅನುಷ್ಠಾನ ಮಾಡಿದ ಸ್ಥಳ ಸ್ಮಾರಕವಾಗಿರಬಹುದು.

"ಕಲ್ಯಾಣವೆಂಬ ಪ್ರಣತೆಯಲ್ಲಿ, ಭಕ್ತಿ ರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿರ್ದುದಯ್ಯಾ ಶಿವನ ಪ್ರಕಾಶ ಆ ಬೆಳಗಿನೊಳಗೊಪ್ಪುತ್ತಿರ್ದರಯ್ಯಾ ಅಸಂಖ್ಯಾತ ಭಕ್ತ ಮಹಾಗಣಂಗಳು" ಎಂದಿದ್ದಾರೆ ಅಲ್ಲಮಪ್ರಭು ದೇವರು. ಬಸವಣ್ಣನವರ ಬದುಕಿನ ಪ್ರಧಾನ ಆಶಯವನ್ನು ಅವರ ಒಂದು ವಚನಗಳಲ್ಲಿ ಕಾಣಬಹುದು. ಮಾನವನು ತನ್ನ ಬದುಕಿನಲ್ಲಿ ಅನುಸರಿಸಬೇಕಾದ ಸಪ್ತ ಶೀಲಗಳನ್ನು ಕುರಿತು, "ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ" ಎಂದಿದ್ದಾರೆ. ಸರಳವಾದ ಪದಗಳಲ್ಲಿ ಜೀವನ ಸೂತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ.

ಅಲ್ಲಮಪ್ರಭು, ಹಠಯೋಗ, ಲಯಯೋಗ, ರಾಜಯೋಗ ಸಾಧಕರಾಗಿ, ಶಿವಯೋಗದ ಸಿದ್ಧಿಯನ್ನು ಪಡೆಯುತ್ತಾರೆ. ಬಳ್ಳಿಗಾವಿ ಸಮೀಪದ ಅನಿಮಿಷಾರಣ್ಯದಲ್ಲಿ ಶಿವಯೋಗ ನಿರತರಾಗಿದ್ದ ಅನಿಮಿಷ ಗುರುಗಳಿಂದ ಲಿಂಗದೀಕ್ಷೆಯನ್ನು ಪಡೆಯುತ್ತಾರೆ. ಪರಿವ್ರಾಜಕರಾಗಿ ನಾಡಿನಲ್ಲೆಲ್ಲ ಸಂಚರಿಸುತ್ತಾ ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ಧರಾಮ, ಗೋರಕನಾಥ ಮುಂತಾದವರಿಗೆ ಶಿವಯೋಗ ಸಾಧನೆಯ ಮಾರ್ಗ ತೋರುತ್ತಾರೆ. ಅಹಂಕಾರವನ್ನು ಜಯಿಸಿದ ಅಲ್ಲಮ ಪ್ರಭುದೇವರು "ನಾನೆಂಬ ಅಹಂಕಾರದಲ್ಲಿ ನಾನುಂಡೆನಾದರೆ ನನಗದೇ ಭಂಗ, ಸ್ತುತಿನಿಂದೆಗೆನೊಂದೆನಾದರೆ, ಅಂಗೈಯಲ್ಲಿರ್ಪ ಗುಹೇಶ್ವರ ಲಿಂಗಕ್ಕೆ ದೂರ" ಎಂದಿದ್ದಾರೆ. "ಕಾಮವನ್ನು ಸುಟ್ಟವನೇ ಯೋಗಿ, ಕಾಮನ ಬಲೆಗೆ ಬಿದ್ದವನೇ ಭೋಗಿ" ಎನ್ನುವ ಅಲ್ಲಮಪ್ರಭು, ಕಾಮನನ್ನು ಗೆದ್ದರೆ ಮಾಯೆಯನ್ನು ಗೆದ್ದಂತೆಯೇ ಸರಿ ಎನ್ನುತ್ತಾರೆ. ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದವರ ಮರಳಿ ಸುಡಲುಂಟೆ ಮರುಳೇ? ಎಂದಿದ್ದಾರೆ. ಅಲ್ಲಮ ಪ್ರಭುವಿನ ಅನುಭಾವ ಜ್ಞಾನ ಪೂರ್ಣವಾದದ್ದು. ಆತ ಯ್ಯೋಮ ಮೂರ್ತಿ, ಪರಿಪೂರ್ಣ ಅನುಭಾವಿ. ಕಾಮವನ್ನು ಗೆದ್ದವನು ಭಕ್ತ. ಗುರು ಕರುಣೆಯಿಂದ ದೇಹ ಶುದ್ಧ, ತನು ಶುದ್ಧ. ಇಷ್ಟಲಿಂಗ ಅನುಷ್ಠಾನದಿಂದ ಪ್ರಾಣಲಿಂಗ, ಭಾವಲಿಂಗದ ಅರಿವು. ಗುರುಲಿಂಗ ಜಂಗಮದಿಂದ ಐಕ್ಯ ಸ್ಥಳವನ್ನು ಸಾಧಿಸಬೇಕು "ಅನುಭಾವದಿಂದ ಹುಟ್ಟಿತ್ತು ಲಿಂಗ, ಅನುಭಾವದಿಂದ ಹುಟ್ಟಿತ್ತು ಜಂಗಮ, ಅನುಭಾವದಿಂದ ಹುಟ್ಟಿತ್ತು ಪ್ರಸಾದ, ಅನುಭಾವದನುವಿನಲ್ಲಿ ಗುಹೇಶ್ವರಲಿಂಗ ಅನುಪಮ ಸುಖಿ" ಎಂದಿದ್ದಾರೆ. "ನಾನೆಂಬುದು ಅಜ್ಞಾನ, ನೀನೆಂಬುದು ಮಾಯೆ, ನಾನೆನ್ನದೆ, ನೀನೆನ್ನದೆ ಬೇಕೆನ್ನದೆ, ಬೇಡವೆನ್ನದೆ, ಅಹುದೆನ್ನದೆ, ಅಲ್ಲವೆನ್ನದೆ, ತನ್ನ ತಾ ತಿಳಿದು ತಾನನ್ಯವಲ್ಲವೆಂದರಿತು ವ್ಯವಹರಿಸುವುದೇ ನಿರ್ಲಿಪ್ತತೆ. ಅದು ಪರಮ ಸುಖದ ಬೀಡು, ಅದೇ ಲಿಂಗಾನಂದ ಮುಕ್ತಿ" ಲಿಂಗ ದೇವನಲ್ಲಿ ನಿಷ್ಠೆ ಉಳ್ಳ ಭಕ್ತ ಐಕ್ಯಸ್ಥಳ ತಲುಪಿದಾಗ ಪರಮಾನಂದ. ಅಲ್ಲಿಂದ ಮುಂದೆ ಪುನರ್‌ಜನ್ಮ ಇಲ್ಲ ಎನ್ನುತ್ತಾರೆ. ಆತ್ಮ ದೇಹದಲ್ಲಿದ್ದರೂ ಅದಕ್ಕೆ ಅಂಟಿಕೊಳ್ಳದಿರುವುದೇ ಶಿವಯೋಗ. ಬಯಲಿನಲ್ಲಿ ಬಯಲಾಗುವುದನ್ನು ಸಾಧಿಸಿದ ಅಲ್ಲಮಪ್ರಭು ಬಯಲದೇಹಿಯಾದ, ಬಯಲ ಜೀವನ, ಬಯಲ ಭಾವನೇ, ಆತನಲ್ಲಿ ಅಳವಟ್ಟವು ಬಯಲಿನೊಳಗೆ ಬಯಲಾಗುವ ರಹಸ್ಯವನ್ನು ಅರಿತು, ಭೋದಿಸಿದ ಪ್ರಭುದೇವರು ತತ್ವ ಪ್ರಸಾರ ಮಾಡುತ್ತಾ ಜಂಗಮವಾಗಿ ಸುಳಿದಾಡಿದರು.

"ಅರಿದೆನೆಂಬುದು ತಾ ಬಯಲು, ಅರಿಯೆನೆಂಬುದು ತಾ ಬಯಲು, ಅರಿವಿನ ಕುರುಹಿನ, ಮರಹಿನೊಳಗೆ ಗುಹೇಶ್ವರನೆಂಬುದು ತಾ ಬಯಲು" ಇಂತಹ ಚಿಕ್ಕ ಪದಗಳನ್ನು ಬಳಸಿ, ಅಧ್ಯಾತ್ಮದ ಉನ್ನತ ಹಂತವನ್ನು ಪರಿಣಾಮಕಾರಿಯಾಗಿ ತಿಳಿಸುವುದು ಅಲ್ಲಮಪ್ರಭುವಿನ ವಿಶಿಷ್ಟತೆ. ನಾವಾಡುವ ಮಾತು ಹೇಗಿರಬೇಕು? ಅಲ್ಲಮ ಪ್ರಭು ನುಡಿದು ಸೂತಕಿಗಳಲ್ಲ, ಭಾವಶುದ್ಧಿಯಿಂದ ನುಡಿದುದೇ ವಚನ. ಶರಣರು ವಚನಕಾರರು, ಕವಿಗಳಲ್ಲ ಪಂಡಿತರಲ್ಲ ಅವರ ಮನದಾಳದ ಭಾವನೆಗಳು ಹರಳುಗಟ್ಟಿದಾಗ ಮೂಡಿದ ಉದ್ಗಾರಗಳೇ ವಚನಗಳಾಗಿ ಕನ್ನಡ ಭಾಷೆಯನ್ನು ಶ್ರೀಮಂತವಾಗಿಸಿವೆ ಎನ್ನುತ್ತಾರೆ ಫ.ಗು.ಹಳಕಟ್ಟಿಯವರು.

ನಮ್ಮ ಕನ್ನಡನಾಡಿನಲ್ಲಿ ಮೂಡಿದ ಒಂದು ಶ್ರೇಷ್ಠ ನೈತಿಕ ಪರಂಪರೆಯ ಮಹಾನ್ ತಪಸ್ವಿಗಳೂ ಮೂಲರೂ ಆದ ಅಲ್ಲಮ ಪ್ರಭು ಚರಣಗಳಲ್ಲಿ ನಮ್ಮ ಭಕ್ತಿಯ ಸಾಷ್ಟಾಂಗ ಪ್ರಣಾಮಗಳು.

ಮಾಹಿತಿ ಕೃಪೆ:  ಜ್ಞಾನಕೋಶ

Tag: Allama Prabhu

ಕಾಮೆಂಟ್‌ಗಳಿಲ್ಲ: