ಭಾನುವಾರ, ಸೆಪ್ಟೆಂಬರ್ 1, 2013

ಚಿಂದೋಡಿ ಲೀಲಾ

ಚಿಂದೋಡಿ ಲೀಲಾ

ಕನ್ನಡದ ಮಹಾನ್ ರಂಗಕಲಾವಿದೆ ಚಿಂದೋಡಿ ಲೀಲಾ ಈ ಲೋಕವನ್ನಗಲಿದ ದಿನ ಜನವರಿ 21, 2010.  ತನ್ನ ಏಳನೆ ವಯಸ್ಸಿನಲ್ಲೇ ರಂಗಪ್ರವೇಶಿಸಿದ ಚಿಂದೋಡಿ ಲೀಲಾ ಅವರು ಸಾಧಿಸಿದ ಪರಿ ಅನನ್ಯವಾದದ್ದು.  ಚಿಂದೋಡಿ ಲೀಲಾ ಅವರು ತಮ್ಮ ತಂದೆಯವರಾದ ಚಿಂದೋಡಿ ವೀರಪ್ಪನವರು ಸ್ಥಾಪಿಸಿದ್ದ ಕರಿಬಸವರಾಜೇಂದ್ರ ನಾಟಕ ಮಂಡಳಿಯನ್ನು ನಿರಂತರವಾಗಿ ಯಶಸ್ಸಿನಲ್ಲಿ ಮುನ್ನಡೆಸಿ ತಮ್ಮ ನಿಧನಕ್ಕೆ ಕೆಲ ವರ್ಷಗಳ ಹಿಂದೆ, ಅಂದಿನ ರಾಷ್ಟ್ರಪತಿಗಳಾದ ನಾಡಿನ ಹೆಮ್ಮೆಯ ಪುತ್ರ ಅಬ್ದುಲ್ ಕಲಂ ಅವರ ಸಮ್ಮುಖದಲ್ಲಿ ಎಂಭತ್ತನೇ ವಾರ್ಷಿಕೋತ್ಸವ ನಡೆಸಿ ತಮ್ಮ ಸಂಸ್ಥೆಯಲ್ಲಿ ತನ್ನೊಡನೆ ದುಡಿದ ಪ್ರತಿ ಕಲಾವಿದನನ್ನೂ ಗೌರವಿಸಿದ ಔನ್ನತ್ಯ ಮೆರೆದಿದ್ದರು. 

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನದಲ್ಲಿ ಜಿ. ಎಚ್ ನಾಯಕ ಹೀಗೆ ಹೇಳುತ್ತಾರೆ.  'ಪೊಲೀಸನ ಮಗಳು’ 4500 ಪ್ರಯೋಗಗಳನ್ನು ಕಂಡ ಕನ್ನಡ ನಾಟಕ ಮಾತ್ರವಲ್ಲ, ಜಗತ್ತಿನಲ್ಲಿಯೇ ಅಷ್ಟು ಪ್ರಯೋಗಗಳನ್ನು ಕಂಡ ನಾಟಕವೆಂದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಅದರಲ್ಲಿ ಲೀಲಾ ಅವರೇ ಪೊಲೀಸನ ಮಗಳ ಪಾತ್ರದಲ್ಲಿದ್ದರು. ಆಗ ಅವರಿಗೆ ಅರುವತ್ತೆರಡೊ ಅರುವತ್ಮೂರೊ ವರ್ಷ. ಆ ವಯಸ್ಸಿನಲ್ಲಿ ಅವರು ಮದುವೆಯಾಗಲಿರುವ ಪ್ರಾಯದ ಹೆಣ್ಣಿನ ಪಾತ್ರದಲ್ಲಿ ಅಭಿನಯ ನೀಡಿದ್ದರು. ಅವರ ವಯಸ್ಸೆಷ್ಟೆಂಬುದರ ನೆನಪು ಒಂದಷ್ಟು ಹೊತ್ತು ನಮ್ಮ ಮನಸ್ಸಿನಲ್ಲಿ ಎಣಿಕೆಗೊಂಡಿದ್ದರೂ ಬಲು ಬೇಗ ಅವರ ಅಭಿನಯದಲ್ಲಿ ತನ್ಮಯರಾಗಿಬಿಟ್ಟೆವು. ಚಿಂದೋಡಿ ಲೀಲಾ ನಿಜವಾದ ಜನ್ಮಜಾತ ಪ್ರತಿಭೆಯ ರಂಗ ಕಲಾವಿದೆ ಎಂಬುದು ನಮಗೆ ಮನವರಿಕೆಯಾಗಿತ್ತು.  ಕೇವಲ ಎರಡನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಲೀಲಾ ಕರ್ನಾಟಕ ರಂಗಭೂಮಿಯಲ್ಲಿ ಆರು ದಶಕಗಳಿಗಿಂತ ಹೆಚ್ಚು ಕಾಲ ಲಕ್ಷಾಂತರ ಪ್ರೇಕ್ಷಕರನ್ನು ರಂಜಿಸಿ ಮೆರೆದ ಕಥೆ ನಾಟಕ ರಂಗಭೂಮಿಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂಥದು. ಲೀಲಾ ಅವರ ಆ ಸಾಧನೆ ಸಾಮಾನ್ಯವಾದುದಲ್ಲ. ಲೀಲಾ ಕಲಾವಿದೆ ಮಾತ್ರವಲ್ಲ, ಬೆಳಗಾವಿಯಲ್ಲಿ ಮರಾಠಿಗರ ಕಿರುಕುಳಗಳನ್ನು ದಿಟ್ಟವಾಗಿ ಎದುರಿಸಿ ಅಲ್ಲಿಯೇ ಕನ್ನಡ ನಾಟಕವನ್ನು ಆಡಿದ ಮತ್ತು ಶಾಶ್ವತ ರಂಗಮಂದಿರವನ್ನು ನಿರ್ಮಿಸಿದ ಧೀರ ಮಹಿಳೆ. ಅವರು ಶಿವಾಜಿ ನಾಟಕವನ್ನು ಅಭಿನಯಿಸಿ ಮರಾಠಿಗರನ್ನೂ ಒಲಿಸಿಕೊಂಡರು. ಬೆಳಗಾವಿಯ ನಗರಸಭೆಗೂ ಆಯ್ಕೆಯಾಗಿದ್ದರು.  ಅವರು ನಾವಿರುವವರೆಗೂ ಹಿತವಾದ ನೆನಪಾಗಿ ನಮ್ಮೊಡನೆ ಉಳಿದಿರುತ್ತಾರೆ.

2010ರ ವರ್ಷದಲ್ಲಿ  ನಿಧನರಾದಾಗ ಚಿಂದೋಡಿ ಲೀಲಾ ಅವರಿಗೆ ಎಪ್ಪತ್ಮೂರು ವರ್ಷವಿರಬೇಕು.  ಅದರಲ್ಲಿ ಬಹಳಷ್ಟು ವರ್ಷಗಳನ್ನು ರಂಗಭೂಮಿಯಲ್ಲಿ ಕಳೆದವರು ಆಕೆ.  ಪೊಲೀಸನ ಮಗಳುನಾಟಕದಂತೆಯೇ ಹಿಂದಿನ ದಿನಗಳಲ್ಲಿ ಹಳ್ಳಿಯ ಹುಡುಗಿಕೂಡಾ ಅಪಾರ ಜನಪ್ರಿಯವಾಗಿತ್ತು.  ಹಲವು ಚಲನಚಿತ್ರಗಳಲ್ಲೂ ಚಿಂದೋಡಿ ಲೀಲಾ ಅಭಿನಯಿಸಿದ್ದರು. ಕಿತ್ತೂರು ಚೆನ್ನಮ್ಮ’, ‘ಶ್ರೀ ಕೃಷ್ಣದೇವರಾಯ’,  ‘ಶರಪಂಜರ’, ‘ತುಂಬಿದ ಕೊಡ’  ಸಿನಿಮಾಗಳಲ್ಲಿನ ಅವರ ವಿಶಿಷ್ಟ ಅಭಿನಯ ಅವಿಸ್ಮರಣೀಯ.  ಚಿಂದೋಡಿ ಲೀಲಾ ಅವರೇ  ನಿರ್ಮಿಸಿದ ಗಾನಯೋಗಿ ಪಂಚಾಕ್ಷರಿ ಗವಾಯಿಚಲನಚಿತ್ರ ಅವರಿಗಿದ್ದ ಉತ್ತಮ ಅಭಿರುಚಿಗೆ ಸಾಕ್ಷಿಯಾಗಿ ನಿಂತಿದೆ.  ಸಂಗೀತ ಪ್ರಧಾನವಾದ ಆ ಚಿತ್ರದಲ್ಲಿ ಹಂಸಲೇಖ ಅವರು ನೀಡಿದ ಸಂಗೀತ ರಾಷ್ಟ್ರಪ್ರಶಸ್ತಿ ಗಳಿಸಿತು.

ರಂಗಕ್ಷೇತ್ರದಲ್ಲಿನ ಅವರ ಸಾಧನೆಗೆ  ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಇದಲ್ಲದೆ ಕರ್ನಾಟಕ ಸರ್ಕಾರದ ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ನಾಟಕ ಮತ್ತು ಸಂಗೀತ ಅಕಾಡೆಮಿ ಪ್ರಶಸ್ತಿ, ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣದೇವರಾಯ ಪ್ರಶಸ್ತಿ, ನಾಡೋಜ ಪ್ರತಿಷ್ಠಾನದ ಕಾತ್ಯಾಯಿನಿ ಪ್ರಶಸ್ತಿಗಳು ಸೇರಿದಂತೆ ಹತ್ತು ಹಲವು ಪುರಸ್ಕಾರಗಳೂ ಚಿಂದೋಡಿ ಲೀಲಾ ಅವರಿಗೆ ಸಂದವು.

ಹಲವು ವರ್ಷಗಳ ಕಾಲ ನಾಟಕ ಅಕಾಡೆಮಿಯನ್ನೂ ನಡೆಸಿ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸಹಾ ಚಿಂದೋಡಿ ಲೀಲಾ ಅವರು ಕಾರ್ಯ ನಿರ್ವಹಿಸಿದರು.  ಕರ್ನಾಟಕದ ವಿವಿದೆಡೆಗಳಲ್ಲಿ ಮೂಡಿದ ಶಾಶ್ವತ ರಂಗಭೂಮಿಗಳಿಗೆ ಲೀಲಾ ಪ್ರಮುಖ ಕಾರಣಕರ್ತೆಯಾದರು.

ಅವರು ಅಷ್ಟೊಂದು ವರ್ಷ ರಂಗಭೂಮಿಯಲ್ಲಿದ್ದರೂಆ ಕ್ಷೇತ್ರದಲ್ಲಿನ ಕಷ್ಟ ನಷ್ಟಗಳನ್ನೂ ಮೀರಿ  ಆ ಕ್ಷೇತ್ರದ ಬಗ್ಗೆ ಹೊಂದಿದ್ದ ಕಡಿಮೆಯಾಗದಿದ್ದ ಅವರ ಪ್ರೀತಿ ಕಾಳಜಿಗಳು ಅಚ್ಚರಿ ಹುಟ್ಟಿಸುವಂತಿದೆ.   ನಮ್ಮ ಕೆಲಸದಲ್ಲಿ ಅಪರೂಪಕ್ಕೊಮ್ಮೆ ಆಸಕ್ತಿ ಹೊಂದಿ ಮಿಕ್ಕ ಸಮಯದಲ್ಲಿ ಯಾಂತ್ರಿಕವಾಗಿ ಬದುಕು - ವೃತ್ತಿಗಳನ್ನು ಸವೆಸುವ  ಇಂದಿನ ಸಾಮಾನ್ಯ ಯುಗದಲ್ಲಿ ಚಿಂದೋಡಿ ಲೀಲ ಅಂತಹ ಕರ್ಮಯೋಗಿಗಳು ಒಂದು ದಂತ ಕಥೆಯಾಗಿ ಕಾಣುತ್ತಾರೆ.”  ಅವರಂತೆ ತಮ್ಮ ಕಾಯಕವನ್ನು ಪ್ರೀತಿಸುವವರು ಮಾತ್ರ ಶಾಶ್ವತ ಕಲಾವಿದರಾಗಿ ಜೀವಿಸಿ ಕಲಾರಸಿಕರ ಹೃದಯದಲ್ಲಿ ಅಮರರಾಗಲು ಸಾಧ್ಯ.


ಈ ಮಹಾನ್ ರಂಗಕರ್ಮಯೋಗಿ ಚಿಂದೋಡಿ  ಲೀಲಾ ಎಂಬ ಮಹಾನ್ ಚೇತನಕ್ಕೆ ನಮೋನ್ನಮಃ.

Tag: Chindodi Leela

ಕಾಮೆಂಟ್‌ಗಳಿಲ್ಲ: