ಶುಕ್ರವಾರ, ಆಗಸ್ಟ್ 30, 2013

ವೈಶಾಲಿ ಕಾಸರವಳ್ಳಿ

ವೈಶಾಲಿ ಕಾಸರವಳ್ಳಿ

ವೈಶಾಲಿ ಎಂಬ ಅನನ್ಯ ಪ್ರತಿಭೆಯನ್ನು ನೆನೆದರೆ ಅವರು ನಮ್ಮೀ ಲೋಕದಿಂದ ಹೊರಗಿದ್ದಾರೆ ಎನಿಸುವುದೇ ಇಲ್ಲ.  ಅವರ ಧ್ವನಿ ಇನ್ನೂ ಎಲ್ಲೋ ನಮ್ಮ ಕಿವಿಯಲ್ಲಿ, ಮನಸ್ಸುಗಳಲ್ಲಿ  ಗುಂಯ್ ಗುಟ್ಟುತ್ತಲೇ ಇದೆ.   ಅಮೆರಿಕ ಅಮೆರಿಕ ಚಿತ್ರದಲ್ಲಿ ಭೂಮಿ ಒಲೆ ಮೇಲ್ ಹಾಲಿಟ್ಟಿದ್ದೀನಿ ನೋಡಮ್ಮಾಎಂದು ತನ್ನ ಮಗಳನ್ನು ಒಳಗೆ ಸಾಗಹಾಕಿ ಆಕೆಯ ಮದುವೆ ಮಾತನ್ನು ಆಡುವ ಒಂದು ರೀತಿಯ ಸಹಜತೆ ಇಂದೂ ನನ್ನಲ್ಲಿ ಬೆರಗು ಹುಟ್ಟಿಸುವಂತೆ ಬೇರು ಬಿಟ್ಟಿದೆ.  ಪ್ರೊಫೆಸರ್ ಹುಚ್ಚೂರಾಯ, ಭೂತಯ್ಯನ ಮಗ ಅಯ್ಯು, ಹೊಂಬಿಸಿಲು, ಫಲಿತಾಂಶ, ಗಣೇಶನ ಮದುವೆ, ಕಿಟ್ಟು ಪುಟ್ಟು, ಗೌರಿ ಗಣೇಶ, ಆಕ್ರಮಣ, ಚಂದ್ರಮುಖಿ ಪ್ರಾಣಸಖಿ ಅಂತಹ ಹಲವಾರು  ಚಿತ್ರಗಳಲ್ಲಿ ಅವರು ಲವಲವಿಕೆಯಿಂದ ಅಭಿನಯಿಸಿದ್ದು ನೆನೆಪಾಗುತ್ತದೆ.   ಹಯವದನ, ಸಂಕ್ರಾಂತಿ ಅಂತಹ ನಾಟಕಗಳಲ್ಲಿ ಅವರು ಮೂಡಿ ಬೆಳೆದದ್ದು ಹವ್ಯಾಸಿ ರಂಗಭೂಮಿಯಲ್ಲಿನ ಬೆಳಕಾದರೆ, ಮಾಯಾಮೃಗ, ಮಾಲ್ಗುಡಿ ಡೇಸ್ ಕಿರುತರೆಯದ್ದು ಮತ್ತೊಂದು ಭವ್ಯತೆ.  ಕಿರು ತೆರೆಯಲ್ಲಿ ನಿರ್ದೇಶಕಿಯಾಗಿ, ಬೆಳ್ಳಿ ತೆರೆಯಲ್ಲಿ ವಿನ್ಯಾಸಕಿಯಾಗಿ ಹೀಗೆ ವಿಧ ವಿಧವಾಗಿ ಕಲಾರಂಗದಲ್ಲಿ ಮೂಡಿಬಂದ ಅವರ ಪರಿ ಅದ್ವಿತೀಯವಾದದ್ದು.  ಇವೆಲ್ಲವನ್ನೂ ಅವರು ಅತ್ಯಂತ ಸರಳವಾಗಿ, ಸಹಜವಾಗಿ ಯಾವುದೇ ತೋರ್ಪಡಿಕೆಯಿಲ್ಲದೆ ಸರಾಗವಾಗಿ ಮಾಡುತ್ತಿದ್ದರೆಂಬುದು ಒಂದು ಅನನ್ಯತೆಯೇ ಸರಿ.

ವೈಶಾಲಿಯವರು 1952ರ ಏಪ್ರಿಲ್ 12ರಂದು ಜನಿಸಿದರು. ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ತಂದೆ ವೆಂಕಟರಾವ್ ಚಿಟ್ಟಿಗೋಪಿಕರ್ ಮಹಾರಾಷ್ಟ್ರದವರು. ಉರ್ದು ಶಾಯಿರಿಪ್ರಿಯರು. ಹುಟ್ಟಿದ್ದು ಕೊಲ್ಲಾಪುರದಲ್ಲಿ. ತಾಯಿ ನಿರ್ಮಲ  ಕರ್ನಾಟಕದವರು. 'ಹಿಂದೂಸ್ತಾನಿ ಕರ್ನಾಟಕ ಸಂಗೀತ' ಕಲಿತಿದ್ದರು. ಹೀಗಾಗಿ ಬೆಳೆದದ್ದು ಓದಿದ್ದೆಲ್ಲಾ ಗುಲ್ಬರ್ಗದಲ್ಲಿನ ಬ್ರಹ್ಮಪುರದ ತವರು ಮನೆಯಲ್ಲಿ. ಬಡತನದಲ್ಲಿಯೇ ಅವರ ಜೀವನ ಸಾಗಿತ್ತು. ಕೆಲ ಕಾಲ 'ಗುಬ್ಬಿ ಕಂಪನಿ'ಯಲ್ಲಿ ತಂದೆಯವರು ಮ್ಯಾನೇಜರ್ ಆಗಿದ್ದರು.  ಹೀಗಾಗಿ ಅವರಿಗೆ ಬಾಲ್ಯದಲ್ಲೇ ಗುಬ್ಬಿ ಕಂಪನಿಯ ನಾಟಕಗಳ  ಪರಿಚಯವಾಗಿದ್ದವು. ಬಿ ವಿ ಕಾರಂತರು ಆಗಿನಿಂದಲೂ ಇವರ ಕುಟುಂಬಕ್ಕೆ ಆಪ್ತ ಪರಿಚಯಸ್ಥರಾಗಿದ್ದರು.  'ದಶಾವತಾರ' ನಾಟಕದಲ್ಲಿ ಬರುವ ನಾಲ್ಕು 'ವೇದ ಶಿಶು'ಗಳ ಪೈಕಿ ಅವರೂ ಒಂದು ಶಿಶುವಾಗಿ ಪಾತ್ರ ಮಾಡಿದ್ದುಂಟು. 'ಸಂತ ತುಕಾರಾಂ' ನಂತಹ ಭಕ್ತಿ ಪ್ರಧಾನ ಚಿತ್ರಗಳನ್ನೇ ಆಗಿನ ಕಾಲದಲ್ಲಿ ನೋಡಬೇಕಿತ್ತು.  ಶಾಲಾ ಕಾಲೇಜು ದಿನಗಳಲ್ಲಿ ನಾಟಕ ಮಾಡಿದ್ದು ಬಿಟ್ಟರೆ ಅಭಿನಯದ ಬಗ್ಗೆ ನನಗೆ ಗೊತ್ತಿರಲಿಲ್ಲ, ಬಿಎಸ್ಸಿ ಮುಗಿಸಿದ್ದ ನನಗೆ ನಟಿಯಾಗುವ ವಿಷಯ ಕನಸಿನಂತಿತ್ತು" ಎನ್ನುತ್ತಿದ್ದರು ವೈಶಾಲಿ.

1972ರಲ್ಲಿ 'ವೈಶಾಲಿಯವರ ಇಡೀ ಕುಟುಂಬ ಗುಲ್ಬರ್ಗ ದಿಂದ ಬೆಂಗಳೂರಿಗೆ ವರ್ಗವಾಯಿತು. ಆಗಾಗ ಮನೆಗೆ ಬಂದು ಕುಟುಂಬದವರಂತೆಯೇ ಆಗಿದ್ದ ಬಿ.ವಿ.ಕಾರಂತರ ಒತ್ತಾಸೆಯ ಮೇರೆಗೆ  ವೈಶಾಲಿ  'ಹವ್ಯಾಸಿ ರಂಗಭೂಮಿ'ಗೆ ಸೇರ್ಪಡೆಯಾದರು. ಆಗ ಬೆಂಗಳೂರಿನಲ್ಲಿ ಕಾರಂತರ ನಾಟಕದ ಅಲೆ ಶುರುವಾಗಿತ್ತು. 'ಟಿ.ಎಸ್.ನಾಗಾಭರಣ', 'ಕೋಕಿಲ ಮೋಹನ್', 'ಸುಂದರರಾಜ್', 'ರತ್ನಮಾಲಾ', 'ಟಿ.ಎಸ್.ರಂಗಾ' ಸೇರಿದಂತೆ 'ಬೆನಕ' (ಬೆಂಗಳೂರು ನಗರ ಕಲಾವಿದರ) ನಾಟಕ ತಂಡ'ವನ್ನು ಬಿ.ವಿ.ಕಾರಂತರು ಕಟ್ಟಿದರು. 'ಜೋಕುಮಾರಸ್ವಾಮಿ', 'ಹಯವದನ', 'ಸಂಕ್ರಾಂತಿ' ಮುಂತಾದ ನಾಟಕಗಳಲ್ಲಿ ವೈಶಾಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದರು. "ನನಗೆ ಅಭಿನಯ ಕಲೆ ಅಂದ್ರೆ ಏನು ಎಂಬುದನ್ನು ಹೇಳಿಕೊಟ್ಟವರು ಕಾರಂತರು. ಶಿಸ್ತು, ಶ್ರದ್ಧೆ, ಏಕಾಗ್ರತೆ, ಕ್ರಿಯಾಶೀಲತೆ, ಸಾಮಾಜಿಕ ಬದ್ಧತೆ ಗುಣಗಳನ್ನು ನಾನು ಕಲಿತದ್ದೇ ಕಾರಂತರಿಂದ" ಎನ್ನುತ್ತಿದ್ದರು ವೈಶಾಲಿ.

ಕಾರಂತರು ನಿರ್ದೇಶಿಸಿದ ಗಿರೀಶ್ ಕಾರ್ನಾಡರ ಹಯವದನ ನಾಟಕದಲ್ಲಿ ಪದ್ಮಿನಿ ಪಾತ್ರ ವೈಶಾಲಿಯವರದು. ತುಂಬಾ ಸವಾಲಿನ ಪಾತ್ರವದು. ಇದರಲ್ಲಿನ ಉತ್ತಮ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂತು. ಹಾಗೆಯೇ ಪಿ.ಲಂಕೇಶರ 'ಸಂಕ್ರಾಂತಿ' ನಾಟಕದಲ್ಲಿ ವಿಭಿನ್ನ 'ಗೌಡ್ತಿ 'ಪಾತ್ರವನ್ನು ಅವರು ಆಯ್ದುಕೊಂಡಿದ್ದರು. ಇದರಲ್ಲಿ 'ಸುಂದರ ರಾಜ್' ಅವರದ್ದು  'ಶೂದ್ರ'ನ ಪಾತ್ರ.  ಅದರಲ್ಲಿನ ಪಾತ್ರಧಾರಿ  ವೈಶಾಲಿ ಒಂದು ಸುಳ್ಳು ಹೇಳಿರುತ್ತಾಳೆ.  ಏನೇ ಸುಳ್ಳು ಹೇಳುತ್ತೀಯ ಎಂದು ಈಕೆಯ  ಕೈ ಹಿಡಿದು ಜಗ್ಗಾಡಿದಾಗ ಬಳೆಗಳೆಲ್ಲ ಚೂರು ಚೂರಾಗಿ ರಕ್ತದ ಕಲೆಗಳಾಗುತ್ತಿತ್ತಂತೆ.  ಆದ್ರೂ ಆ ಪಾತ್ರದೊಳಗಿನ ಪರಕಾಯ ಪ್ರವೇಶದಿಂದಾಗಿ ವೈಶಾಲಿಯವರಿಗೆ ಅಪಾರ ಹೆಸರು ಬಂದಿತ್ತು. 'ಬೆನಕ ತಂಡ'ದಿಂದ ವೈಶಾಲಿ ದೇಶದಾದ್ಯಂತ ಪ್ರವಾಸ ಮಾಡಿದ್ದರು.  ವೈಶಾಲಿಯವರ ಹವ್ಯಾಸಿ ರಂಗಭೂಮಿಯ  ಈ ನಂಟು ಎರಡು ದಶಕಗಳವರೆಗೂ ಬೆಳೆಯಿತು.  ರಂಗಭೂಮಿಯ ದಿಗ್ಗಜರಾದ ಕಾರಂತ್, ಪ್ರಸನ್ನ, ನಾಗೇಶ್,  ಬೆನಿವಿಟ್ಟು, ಕಂಬಾರ,  ಲೋಕನಾಥ್,  ರಣಜಿತ್ ಕಫೂರ್, ಶ್ರೀನಿವಾಸಪ್ರಭು, ಸಿಂಹ ಎಲ್ಲರ ಜೊತೆಯೂ ವೈಶಾಲಿ ಅಭಿನಯಿಸಿದ್ದರು.  ರಂಗಭೂಮಿಯ ಪಾತ್ರಗಳೊಂದಿಗೆ ತಾನು ಹೇಗೆ ಬೆಳೆಯುತ್ತಾ ಬಂದೆ, ಹೇಗೆ ಅರಿವನ್ನು ಸಂಪಾದಿಸಿದೆ ಎಂಬ ಮಧುರ ನೆನಪುಗಳನ್ನು ಅವರು ನಿರಂತರವಾಗಿ ತಮ್ಮ ಜೊತೆಗಿರಿಸಿಕೊಂಡಿದ್ದರು ಮತ್ತು ಆಪ್ತರೊಂದಿಗೆ ಹಂಚಿಕೊಳ್ಳುತ್ತಿದ್ದರು.

1978ರ ವರ್ಷದಲ್ಲಿ ವೈಶಾಲಿ ಗಿರೀಶ್ ಕಾಸರವಳ್ಳಿ ಅವರನ್ನು ವಿವಾಹವಾದರು.  ಗಿರೀಶ್ ಕಾಸರವಳ್ಳಿಯವರು ಒಂದು ಲೇಖನದಲ್ಲಿ ಹೇಳಿರುವಂತೆ ವೈಶಾಲಿ ಅವರಿಗೆ ರಂಗಭೂಮಿಯ ಮೇಲಿನ ಅದರಲ್ಲೂ ಕಾರಂತರ ನಾಟಕಗಳ ಮೇಲಿನ ಪ್ರೀತಿ ಅಪಾರವಾದದ್ದು.  ಹಲವು ಕಾರಣಗಳಿಗಾಗಿ ಭೂತಯ್ಯನ ಮಗ ಅಯ್ಯು ಚಿತ್ರದ ಚಿತ್ರೀಕರಣದ ದಿನಗಳಲ್ಲಿ ವೆತ್ಯಯವಾದಾಗ, ಆ ಚಿತ್ರದಲ್ಲಿನ ತಮ್ಮ ಪಾತ್ರವು ಮೊಟಕಗೊಳ್ಳುವುದನ್ನು ಕೂಡಾ ಲೆಖ್ಖಿಸದೆ ಅವರು ಹಯವದನನಾಟಕಕ್ಕೆ ತಮ್ಮನ್ನು ಮೀಸಲಿರಿಸಿಕೊಂಡವರು.

ದರ್ಶನಗಳು ವೈಶಾಲಿಗೆ ಸಿಕ್ಕಿದ್ದೇ ಕಾರಂತರ ಮುಖೇನ.  ಮುಂದೆ ರಂಗಭೂಮಿಯಲ್ಲಿ ಸಿನಿಮಾ, ಟಿ ವಿ ರಂಗದಲ್ಲಿ ವೈಶಾಲಿಯ ಪಾತ್ರ ನಿರ್ವಹಣೆ, ಪುಟಗಳ ಮೇಲಿದ್ದ ಸಂಭಾಷಣೆಯನ್ನು ಮಾತುಗಳಾಗಿಸುವ ಪರಿ, ಪಾತ್ರಕ್ಕೆ ಜೀವ ತುಂಬುವ ವಿಧಾನ, ಅದಕ್ಕೊಂದು ವ್ಯಕ್ತಿ ವೈಶಿಷ್ಟ್ಯ ಮೆರೆಸುವ ಕ್ರಮ ಇವು ಪ್ರಶಂಸೆಗೆ ಪಾತ್ರವಾಗಿದ್ದರೆ, ಅದಕ್ಕೆಲ್ಲಾ ರಂಗಭೂಮಿ ಒದಗಿಸಿದ  ಈ ಭದ್ರ ಬುನಾದಿಯೇ ಕಾರಣ.  ರಂಗಭೂಮಿ, ಸಿನಿಮಾ, ಟಿ ವಿ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಸೊಗಸು ಹೊರಹೊಮ್ಮುವಂತೆ ಸಂಭಾಷಣೆ ಹೇಳಬಲ್ಲವರು ಕನ್ನಡದಲ್ಲಿ ಬೆರಳೆಣಿಕೆಯ ನಟನಟಿಯರು ಮಾತ್ರ.  ವೈಶಾಲಿ ಅವರಲ್ಲೊಬ್ಬಳು ಎನ್ನುವುದು ನನ್ನ ಅಭಿಪ್ರಾಯಎಂದು ಗಿರೀಶ್ ಕಾಸರವಳ್ಳಿ ತಮ್ಮ ಪತ್ನಿಯ ಬಗ್ಗೆ ಗೌರವಯುತವಾಗಿ ಬರೆದಿದ್ದಾರೆ.  ಇದು ವೈಶಾಲಿ ಅವರ ಬಗೆಗಿನ ಕನ್ನಡ ಕಲಾಭಿಮಾನಿಗಳ  ಹೃದ್ಭಾವವೂ ಹೌದು.  

ಧಾರವಾಡದ ಕನ್ನಡವಾಗಲಿ, ಕುಂದಾಪುರ ಮಂಗಳೂರಿನ ಕನ್ನಡವೇ ಆಗಲಿ, ಒಳನಾಡ ಕನ್ನಡವಾಗಲಿ, ಗ್ರಾಂಥಿಕ ಕನ್ನಡವಾಗಲಿ, ಆ ಪ್ರಾದೇಶಿಕ ಸೊಗಸನ್ನು ಸವಿದು, ಎಲ್ಲ ಸೂಕ್ಷ್ಮತೆಗಳನ್ನು ವೈಶಾಲಿ ತೆರೆದಿಡುತ್ತಿದ್ದರು.  ನಾಯಿ ನೆರಳು ಚಿತ್ರದ ನಾಗಲಕ್ಷ್ಮಿ ಪಾತ್ರಕ್ಕೆ ವೈಶಾಲಿಯವರು  ಕಂಠದಾನ ಮಾಡುವಾಗ, ಅವರು  ಹವ್ಯಕ ಕನ್ನಡವನ್ನು ಕೇಳಿದ್ದೇ ಅಪರೂಪವಾದರೂ  ಇವರು ಹವ್ಯಕರೇ ಇರಬೇಕು ಎನ್ನುವಷ್ಟು ಲೀಲಾಜಾಲವಾಗಿ ಮಾತನಾಡಿ ಡಬ್ಬಿಂಗ್ ಸಮಯದಲ್ಲಿ ಬಾಷೆಯ ಉಚ್ಚಾರಣೆಯ ಉಸ್ತುವಾರಿ ಮಾಡಲು ಬಂದಿದ್ದ ಭಾಷಾ ತಜ್ಞರನ್ನು  ಬೆರಗು ಮಾಡಿದ್ದರುಎಂದು ಗುರುತಿಸುತ್ತಾರೆ ವೈಶಾಲಿ ಅವರ ಆಪ್ತ ಗೆಳತಿಯಾಗಿದ್ದ  ಬರಹಗಾರ್ತಿ ವೈದೇಹಿ.   'ಅನ್ವೇಷಣೆ' ಯಲ್ಲಿ ಸ್ಮಿತಾ ಪಾಟೀಲರಿಗೆ, ಬರಗೂರರ 'ಸೂರ್ಯ'ದಲ್ಲಿ ರೋಹಿಣಿ ಹಟ್ಟಂಗಡಿಗೆ,  'ಮನೆ' ಚಿತ್ರದಲ್ಲಿ ದೀಪ್ತಿ ನಾವಲ್ ಅವರಿಗೆ ಹೀಗೆ ವೈಶಾಲಿ ಅನೇಕ ಪ್ರಮುಖ ಚಿತ್ರಗಳಿಗೆ ಕಂಠದಾನ ಮಾಡಿದ್ದರು.

ಯಾವ ಜನ್ಮದ ಮೈತ್ರಿಯಿಂದ ಆರಂಭವಾದ ಸಿನಿಮಾ ಜೀವನದಲ್ಲಿ ವೈಶಾಲಿ ಸುಮಾರು 70 ಚಿತ್ರಗಳಲ್ಲಿ ಅಭಿನಯಿಸಿದ್ದರು.  ಫಲಿತಾಂಶ, ಕಿಟ್ಟುಪುಟ್ಟು, ಹೊಂಬಿಸಿಲು ಅವರಿಗೆ ಪ್ರಶಸ್ತಿ ಜನಪ್ರಿಯತೆ ತಂದುಕೊಟ್ಟವು.  ಆಕ್ರಮಣ, ಫಣಿ ರಾಮಚಂದ್ರರ ಗಣೇಶ ಸೀರೀಸ್, ಕೂಡ್ಲು ರಾಮಕೃಷ್ಣರ ಯಾರಿಗೂ ಹೇಳ್ಬೇಡಿ, ಮಮತೆಯ ಮಡಿಲು ಚಿತ್ರದ ನರ್ಸ್ ಪಾತ್ರ ಇವೆಲ್ಲವುಗಳು ಅವರ ಚಿತ್ರ ಜೀವನದಲ್ಲಿ ಪ್ರಮುಖವೆಂಬಂತೆ ಕಂಡುಬಂದರೂ ಅವರು ಅಭಿನಯಿಸಿದ ಯಾವುದೇ ಚಿತ್ರವಾದರೂ ವೈಶಾಲಿ ಎಂಬ ವಿಶಿಷ್ಟತೆಯ ಸ್ಟ್ಯಾಂಪ್ ಹೊಂದಿದ್ದವು.  ಇಷ್ಟಾದರೂ ಅವರಿಗೆ ಸಿನಿಮಾ ಪಾತ್ರಗಳಿಗಿಂತ ರಂಗಭೂಮಿ ನೀಡಿದ ಪಾತ್ರಗಳ ಬಗ್ಗೆ ಹೆಚ್ಚು ಮಮತೆಯಿತ್ತು.

ವೈಶಾಲಿ ಅವರಿಗೆ ಜನಪ್ರಿಯತೆ ಹಾಗೂ ಮನಸ್ಸಮಾಧಾನ ತಂದುಕೊಟ್ಟದ್ದು ಟಿ ವಿ ಧಾರಾವಾಹಿಗಳಲ್ಲಿನ ಅಭಿನಯ.  ತೃಪ್ತಿ ಮತ್ತು ಕೀರ್ತಿ ತಂದುಕೊಟ್ಟದ್ದು ಟಿ ವಿ ಧಾರಾವಾಹಿಯ ನಿರ್ದೇಶನ.  ನಮ್ಮ ನಮ್ಮಲ್ಲಿ, ಕಸಮುಸುರೆ ಸರೋಜ, ಮಾಯಾಮೃಗ, ಮಾಲ್ಗುಡಿ ಡೇಸ್ ಮುಂತಾದವುಗಳಲ್ಲಿ ಅಭಿನಯಿಸುವುದರ ಬಗ್ಗೆ ಅವರಲ್ಲಿ ತುಂಬಾ ಸಂತೋಷವಿತ್ತು.   ಗೂಡಿನಿಂದ ಗಗನಕ್ಕೆ, ಮೂಕ ರಾಗ, ಮೂಡಲ ಮನೆ  ಮುಂತಾದ ಧಾರಾವಾಹಿಗಳು ತೋರಿದ ತಾಂತ್ರಿಕ ಕೌಶಲ್ಯ, ನಿರೂಪಣಾ ವಿಧಾನ, ಕಥೆ ಹೇಳುವಲ್ಲಿ ಸೊಗಸುತನ, ಕಲಾತ್ಮಕತೆ  ಇವುಗಳೆಲ್ಲದರಿಂದ ವೈಶಾಲಿ ಅವರು ಎಷ್ಟು ಸಮರ್ಥರು ಎಂಬುದನ್ನು ತೋರುವಂತಿತ್ತು.  ಇವೆಲ್ಲವನ್ನೂ ಅವರು ತೀವ್ರತರವಾದ ಅನಾರೋಗ್ಯದ ದಿನಗಳಲ್ಲಿ ಮಾಡಿದ್ದರು ಎಂಬುದನ್ನು ಯೋಚಿಸಿದಾಗ ಒಬ್ಬ ಮನುಷ್ಯ ತನ್ನ ಪ್ರಕೃತಿಯನ್ನೂ ಮೀರಿ ಏನೇನೆಲ್ಲಾ ಸಾಧಿಸುವುದಕ್ಕೆ ಸಾಧ್ಯವಾಗುವುದಾದರೂ ಹೇಗೆ ಎಂಬ ಅಚ್ಚರಿ ಹುಟ್ಟುತ್ತದೆ.  ಕೇವಲ ಕಾಯಕದಲ್ಲಿನ ಅದಮ್ಯ ಪ್ರೀತಿ ಮಾತ್ರವೇ ದೈಹಿಕವಾದ ಮಿತಿಗಳ ಮೇರೆಯನ್ನೂ ಸಹಾ ಮೀರುವ ಇಂತಹ ಅಪೂರ್ವತೆಯನ್ನು ಸಾಧಿಸಬಲ್ಲದು.

ಕನ್ನಡ ಚಿತ್ರರಂಗದಲ್ಲಿ ಗಿರೀಶ್ ಕಾಸರವಳ್ಳಿ ಅವರ ಅನನ್ಯ ಸಾಧನೆಗಳನ್ನು ತಿಳಿಯದಿರುವವರೇ ಇಲ್ಲ.  ವೈಶಾಲಿ ಅವರು ಗಿರೀಶರ ಕಾರ್ಯಕ್ಷೇತ್ರಕ್ಕಿಂತ ವಿಭಿನ್ನವಾದ ರಂಗಭೂಮಿ ಮತ್ತು ಕಮರ್ಷಿಯಲ್ ಸಿನಿಮಾ ರಂಗಗಳಲ್ಲಿ ಹೆಚ್ಚು ಕಾಣಿಸಿಕೊಂಡವರು.  ಅಂದರೆ ಇವರಿಬ್ಬರೂ ವಿಭಿನ್ನ ರೇಖೆಗಳಿಂದ ತಮ್ಮನ್ನು ಕಾಣಿಸಿಕೊಂಡವರೆ? ಎಂಬ ಪ್ರಶ್ನೆ  ಸಾಮಾನ್ಯ ನೋಟಕ್ಕೆ ಕಾಣಬರುತ್ತದೆ.  ಈಗಾಗಲೇ ಹೇಳಿದಂತೆ ವೈಶಾಲಿ ಗಿರೀಶರ ಆಕ್ರಮಣದಲ್ಲಿ ನಟಿಯಾಗಿ, ಅವರ ಹಲವಾರು ಚಿತ್ರ ಪಾತ್ರಗಳ ಧ್ವನಿಯಾಗಿ, ಅವರ ಬಹುತೇಕ ಚಿತ್ರಗಳ ವಿನ್ಯಾಸಕಾರರಾಗಿ ಕಾರ್ಯನಿರ್ವಹಿಸಿ ರಾಷ್ಟ್ರೀಯ ಮಟ್ಟದ  ಪ್ರಶಸ್ತಿಗಳನ್ನೂ  ಗಳಿಸಿದವರು.   ಬಣ್ಣದ ವೇಷ, ಮನೆ, ಕ್ರೌರ್ಯ, ತಾಯಿ ಸಾಹೇಬ ಮುಂತಾದ ಚಿತ್ರಗಳನ್ನು ಹೆಸರಿಸುವ ಗಿರೀಶ್ ಹೇಳುತ್ತಾರೆ ಈ ಚಿತ್ರಗಳಲ್ಲಿ ನನ್ನ ಕೊಡುಗೆ ಏನು, ವೈಶಾಲಿ ಕೊಡುಗೆ ಏನು? ಎಂದು ಬಿಡಿಸಿ ಹೇಳಲಾಗುವುದಿಲ್ಲ ಎಂದೇ ನನಗನ್ನಿಸುತ್ತದೆ.  ಕೆಲವೊಂದು ಚಿತ್ರಗಳಲ್ಲಿ ಆಕೆಯ ಕೊಡುಗೆಯೇ ಹೆಚ್ಚು”.  ಇದು ಒಂದು ರೀತಿಯಲ್ಲಿ ಗಿರೀಶ್ ಮತ್ತು ವೈಶಾಲಿ ಜೋಡಿಯಲ್ಲಿದ್ದ ಅನ್ಯೋನ್ಯತೆ, ಪೂರಕತೆ, ಪಾರಸ್ಪರಿಕತೆಗಳ ಜೊತೆಗೆ ವೈಶಾಲಿ ಅವರಿಗಿದ್ದ ವಿಶಾಲವಾದ ಸಾಮರ್ಥ್ಯವನ್ನು ಸಹಾ ಮನದಟ್ಟು ಮಾಡಿಕೊಡುತ್ತದೆ.

ರಂಗಭೂಮಿ, ಸಿನಿಮಾ, ಟಿ ವಿ ಕ್ಷೇತ್ರ ಮೂರರಲ್ಲೂ ಅಭಿನಯಿಸಿ ಪ್ರಶಂಸೆ ಪಡೆದು ಪ್ರಶಸ್ತಿ ಗೆದ್ದ ಪ್ರಥಮ ಕನ್ನಡ ನಟಿ ವೈಶಾಲಿ.  ಹಯವದನ ಅಭಿನಯಕ್ಕಾಗಿ ಅಖಿಲ ಭಾರತ ವಿಮರ್ಶಕ ಒಕ್ಕೂಟದಿಂದ ರಾಷ್ಟ್ರ ಮಟ್ಟದ ಶ್ರೇಷ್ಠ ರಂಗನಟಿ ಪ್ರಶಸ್ತಿ, ಆಕ್ರಮಣದ ಚಿತ್ರಕ್ಕಾಗಿ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ, ಆಕ್ರಮಣದ ವಿನ್ಯಾಸಕ್ಕಾಗಿ ರಾಷ್ಟ್ರ ಪ್ರಶಸ್ತಿ, ತಾಯಿ ಸಾಹೇಬದ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ,  ಕ್ಷಮಯಾ ಧರಿತ್ರಿ ಟಿ ವಿ ಧಾರಾವಾಹಿಗಾಗಿ ರಾಷ್ಟ್ರಮಟ್ಟದ ಪ್ರಶಂಸಾ ಪತ್ರ ಮುಂತಾದವು ವೈಶಾಲಿ ಅವರಿಗೆ ಸಂದ ಪ್ರಶಸ್ತಿಗಳಲ್ಲಿ ಪ್ರಮುಖವಾದವು.

ಇಷ್ಟೊಂದು ಪ್ರತಿಭಾನ್ವಿತ ವ್ಯಕ್ತಿ, ಕ್ರಿಯಾಶೀಲ ಪ್ರತಿಭೆ ಅಷ್ಟೊಂದು ಬೇಗ ಈ ಲೋಕದಿಂದ ಹೊರಟು ಬಿಟ್ಟರು.  ಅವರು ಈ ಲೋಕವನ್ನಗಲಿದ್ದು ಸೆಪ್ಟೆಂಬರ್ 27, 2010ರಂದು.   ಬಹುಷಃ ಕೆಲವೊಂದು ಜನರಿಗೆ ಮಾತ್ರ ತಿಳಿದಿರುತ್ತದೆ.  ಈ ಲೋಕದಿಂದ ನಾವು ಯಾವಾಗ ಬೇಕಾದರೂ ರೈಟ್ ಹೇಳಬೇಕಾಗುತ್ತದೆ ಎಂದು.  ಆದ್ದರಿಂದಲೇ ಅವರು ಅಷ್ಟೊಂದು ಸಾಧಿಸಿ ಹೊರಟುಬಿಡುತ್ತಾರೆ.  ನಾವು ಈ ಎಲ್ಲವನ್ನೂ ಮೂಖವಾಗಿ ನೋಡುತ್ತಿದ್ದು, ಈ ಪ್ರತಿಭೆಗಳು ನಮ್ಮ ಲೋಕವನ್ನಗಲಿದಾಗ ಬೆಚ್ಚಿ ಬಿದ್ದು ಹೌದೇ, ಹೀಗಾಯಿತೆ? ಎಂದು ನಿಟ್ಟುಸಿರು ಬಿಡುತ್ತಿರುತ್ತೇವೆ.  ಇಂತಹ ಅನನ್ಯ ಕ್ರಿಯಾಶೀಲರ ಬದುಕಿಗೆ ನಾವು ತಲೆಬಾಗುವುದನ್ನು ಬಿಟ್ಟು ಏನು ತಾನೇ ಹೇಳಲಾದೀತು.  ಈ ವೈಶಾಲಿ ಎಂಬ ವೈಶಾಲ್ಯತೆಯ ನೆನಪಿಗೆ ಶಿರಬಾಗಿ ನಮನಗಳು.


Tag: Vaishali Kasaravalli

ಕಾಮೆಂಟ್‌ಗಳಿಲ್ಲ: