ಬುಧವಾರ, ಆಗಸ್ಟ್ 28, 2013

ಕೆ ಬಾಲಚಂದರ್

ಕೆ ಬಾಲಚಂದರ್

ಭಾರತೀಯ ಚಿತ್ರರಂಗದ ಮಹಾನ್ ನಿರ್ದೇಶಕರಲ್ಲಿ ಒಬ್ಬರಾದ ಕೆ ಬಾಲಚಂದರ್ ಅವರ ಜನ್ಮ ದಿನ ಜುಲೈ 9, 1930.  ಚಲನಚಿತ್ರರಂಗದಲ್ಲಿ ಪ್ರತಿಷ್ಠಿತ ಹೆಸರುಗಳಾಗಿರುವ ಕಮಲ ಹಾಸನ್, ರಜನೀಕಾಂತ್, ಪ್ರಕಾಶ್ ರಾಜ್, ವಿವೇಕ್ , ರಮೇಶ್ ಅರವಿಂದ್, ಜಯಪ್ರದಾ, ಸರಿತಾ, ಸುಜಾತಾ, ಗೀತಾ, ವಿಮಲಾ ರಾಮನ್, ಮಾಳವಿಕಾ ಅವಿನಾಶ್  ಅಂತಹ ಪ್ರತಿಭೆಗಳ ಹಿಂದಿರುವ ಅದಮ್ಯ ಶಕ್ತಿ  ಕೆ ಬಾಲಚಂದರ್.  ಅವರು ನಿರ್ದೇಶಿಸಿರುವ ಚಿತ್ರಗಳು ಎಂಭತ್ತಕ್ಕೂ ಹೆಚ್ಚು.  ಚಿತ್ರಕಥೆ ರೂಪಿಸಿರುವ ಚಿತ್ರಗಳ ಸಂಖ್ಯೆ ನೂರಕ್ಕೂ ಹೆಚ್ಚು.  ಅವರು ತಮ್ಮ ಚಿತ್ರ ಸಂಸ್ಥೆ ಕವಿತಾಲಯ ಪ್ರೊಡಕ್ಷನ್ಸ್ ಮೂಲಕ ಹಲವಾರು ಚಿತ್ರಗಳನ್ನು  ರೂಪಿಸಿದ್ದಾರೆ.  ತಮ್ಮ ಪ್ರಧಾನ ಭೂಮಿಕೆಯಾದ  ತಮಿಳು ಚಿತ್ರರಂಗವಲ್ಲದೆ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಚಿತ್ರಗಳನ್ನೂ ನಿರ್ಮಿಸಿ ನಿರ್ದೇಶಿಸಿದ್ದಾರೆ.  ಅಷ್ಟೊಂದು ಸಾಧಿಸಿದ್ದರೂ ತಮ್ಮ ಸೌಜನ್ಯಯುತ ನಡವಳಿಕೆಯಿಂದ ಎಲ್ಲೆಲ್ಲೂ ಗೌರವಿಸಲ್ಪಟ್ಟಿದ್ದಾರೆ.  ಪದ್ಮಶ್ರೀ ಮತ್ತು ದಾದಾ ಸಾಹೇಬ್ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.  ಒಂಭತ್ತು ಬಾರಿ ಅವರು ರಾಷ್ಟೀಯ ಚಲನಚಿತ್ರ ಪುರಸ್ಕಾರ ಪಡೆದಿದ್ದಾರೆ. ಫಿಲಂ ಫೇರ್ ಮತ್ತಿತರ ಪ್ರಶಸ್ತಿಗಳನ್ನೂ ಲ್ಲೆಕ್ಕವಿಲ್ಲದಷ್ಟು ಬಾರಿ ಸ್ವೀಕರಿಸಿದ್ದಾರೆ.

ಕೆ ಬಾಲಚಂದರ್ ಅಂದರೆ ಅಪೂರ್ವ ರಾಗಂಗಳ್, ಅವರ್ಗಳ್, ಮನ್ಮಥ ಲೀಲೈ, ವರುಮಯಿನ್ ನಿರಂ ಸಿಗಪ್ಪು, ಸಿಂಧು ಭೈರವಿ, ಮರೋಚರಿತ್ರ, ಏಕ್ ದೂಜೆ ಕೆ ಲಿಯೇ, ಅವಳ್  ಒರು ತೊಡರ್ ಕಥೈ, ಬೆಂಕಿಯಲ್ಲಿ ಅರಳಿದ ಹೂವು, ಸುಂದರ ಸ್ವಪ್ನಗಳು, ಎರಡು ರೇಖೆಗಳು,  ತೂಂಗಾದೆ ತಂಬಿ ತೂಂಗಾದೆ, ತಣ್ಣೀರ್ ತಣ್ಣೀರ್, ರುದ್ರವೀಣಾ ಮುಂತಾದ ಅನೇಕ ಚಿತ್ರಗಳು  ಒಮ್ಮೆಲೆ ನೆನಪಾಗುತ್ತವೆ.     ಮೇರು ನಟ ವಿಷ್ಣುವರ್ಧನ್ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ತಾರೆ ಲಕ್ಷ್ಮಿ ನಿರ್ಮಾಣದ ಮಕ್ಕಳ ಸೈನ್ಯ ಚಿತ್ರದ ನಿರ್ಮಾಣ ಕೂಡಾ ಬಾಲಚಂದರ್ ಅವರದೇ.  ಎ ಆರ್ ರೆಹಮಾನ್ ಮೊದಲಿಗೆ ಚಿತ್ರ ನಿರ್ದೇಶಕರಾಗಿದ್ದೂ ಬಾಲಚಂದರ್  ನಿರ್ಮಾಣದ (ಮಣಿರತ್ನಂ ನಿರ್ದೇಶನದ) ರೋಜಾ ಚಿತ್ರದಲ್ಲಿ.   ಹೀಗೆ ಅವರ ಹಲವಾರು ಚಿತ್ರಗಳು ನೆನಪಾಗುತ್ತವೆ.  ಅವರು ಕೊಟ್ಟ ಮರೆಯಲಾಗದ ಪ್ರತಿಭೆಗಳು ನೆನಪಾಗುತ್ತವೆ.   ಅವರು ಇಂದು ದೂರದರ್ಶನದಲ್ಲಿ ಮೂಡಿಸುತ್ತಿರುವ ಹಲವಾರು ಸುಂದರ ಧಾರಾವಾಹಿಗಳು ನೆನಪಿಗೆ ಬರುತ್ತವೆ.    ವ್ಯಕ್ತಿ ನೆಲೆಯ ಅಂತರ್ಮುಖಿ ಸಮಸ್ಯೆಗಳನ್ನು ಬಿಂಬಿಸುವ ಚಿತ್ರಗಳಿಗೆ ಅವರು ಪ್ರಧಾನ ಹೆಸರು.  ಅವರ ಚಿತ್ರಗಳಲ್ಲಿನ ಚಿತ್ರಕಥೆ, ತಾಂತ್ರಿಕ ಗುಣ ಮಟ್ಟ, ಅಭಿನಯ ಕೌಶಲ್ಯ, ಸಂಗೀತ ಗುಣ ಇವುಗಳೆಲ್ಲಾ ಮಹತ್ವಪೂರ್ಣವೆನಿಸಿವೆ.

ಕಮಲ ಹಾಸನ್, ರಜನೀಕಾಂತ್, ಪ್ರಕಾಶ್ ರಾಜ್ ಮುಂತಾದ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿದ ಅವರ ಪ್ರತಿಭೆಯನ್ನು  ಹೊಗಳಿದಾಗಲೆಲ್ಲಾ,  “ಅವರೆಲ್ಲಾ ಮಹಾನ್ ಪ್ರತಿಭಾವಂತರು, ನನಗೆ ಅಂತಹ ಕಲಾವಿದರೊಂದಿಗೆ ಕೆಲಸ ಮಾಡುವ ಸೌಭಾಗ್ಯ” ಸಿಕ್ಕಿತು ಎಂದು ಬಾಲಚಂದರ್ ಸೌಜನ್ಯ ತೋರುತ್ತಾರೆ.  1983ರಲ್ಲಿ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು.  ಆ ವರ್ಷ ಪ್ರಶಸ್ತಿ ಪಡೆದ ಚಿತ್ರ ನಮ್ಮ ಜಿ ವಿ ಅಯ್ಯರ್ ಅವರ ಆದಿ ಶಂಕರಾಚಾರ್ಯ.  ಆಗ ಕೆ ಬಾಲಚಂದರ್ ನುಡಿದರು “ಈ ಚಿತ್ರಕ್ಕೆ ಪ್ರಶಸ್ತಿ ನೀಡುವುದಕ್ಕೆ ಸ್ವರ್ಣ ಕಮಲಕ್ಕಿಂತ ದೊಡ್ಡ ಪ್ರಶಸ್ತಿ ಇಲ್ಲವೆಲ್ಲ ಎಂಬುದು ಒಂದು ಕೊರೆ ಎನಿಸುತ್ತಿದೆ” ಎಂದು ನುಡಿದಿದ್ದರು.    ಹೀಗೆ ಅಷ್ಟೊಂದು ಸಾಧಿಸಿದ್ದರೂ ಮತ್ತೊಬ್ಬರ ಶ್ರೇಷ್ಠತೆಯನ್ನು ಗೌರವಿಸುವ ಮಹಾನ್ ಸಹೃದಯಿ ಬಾಲಚಂದರ್.

ಈ ಮಹಾನ್ ದಿಗ್ದರ್ಶಕರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

Tag: K. Balachander

ಕಾಮೆಂಟ್‌ಗಳಿಲ್ಲ: