ಭಾನುವಾರ, ಸೆಪ್ಟೆಂಬರ್ 1, 2013

ಎಂ.ಎನ್. ವ್ಯಾಸರಾವ್

ಎಂ.ಎನ್. ವ್ಯಾಸರಾವ್

ಗೀತರಚನಕಾರ, ಕವಿ, ಕಥೆಗಾರ, ಕಾದಂಬರಿಕಾರರಾದ ಎಂ.ಎನ್. ವ್ಯಾಸರಾವ್ ಅವರು  ಜನವರಿ 27, 1945ರಂದು  ಮೈಸೂರಿನಲ್ಲಿ ಜನಿಸಿದರು. ತಂದೆ ನರಸಿಂಗರಾವ್, ತಾಯಿ ಸುಶೀಲಮ್ಮನವರು. ಪ್ರಾಥಮಿಕ ಶಿಕ್ಷಣವನ್ನು  ಮೈಸೂರಿನಲ್ಲಿ ನಡೆಸಿ, ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ. ಪದವಿ. ಡ್ರಾಮ್ಯಾಟಿಕ್ಸ್‌ನಲ್ಲಿ ಡಿಪ್ಲೊಮ ಹೀಗೆ ವಿದ್ಯಾಭ್ಯಾಸವನ್ನು ಪೂರೈಸಿದ ವ್ಯಾಸರಾವ್  ಯುನೈಟೆಡ್ ಕಮರ್ಶಿಯಲ್ ಬ್ಯಾಂಕಿನಲ್ಲಿ  34 ವರ್ಷಗಳ  ಸೇವೆಯ ನಂತರ ಸ್ವಯಂ ನಿವೃತ್ತಿ ಪಡೆದು  ಅಧ್ಯಯನ, ಸಾಹಿತ್ಯರಚನೆ ಮತ್ತಿತರ ಸೃಜನಶೀಲ ಚಟುವಟಿಕೆಗಳಲ್ಲಿ ತಮ್ಮನ್ನು  ತೊಡಗಿಸಿಕೊಂಡಿದ್ದಾರೆ.

ವ್ಯಾಸರಾವ್ ಮೊದಲು ಜನರ ಕಿವಿಯನ್ನು ಅಥವಾ ಗಮನವನ್ನು ಸೆಳೆದದ್ದು

"ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನೆಯಾಗೇನೈತೆ  ಸೊಗಸು"

ಎಂಬ ಹಾಡಿನಿಂದ.  ಈ ಹಾಡು ಎಲ್ಲ ಸಿನಿಮಾ ಹಾಡುಗಳಂತೆ ಅಲ್ಲದೆ, ಅದರ ಅರ್ಥದ, ಭಾವದ ಸೊಗಸಿನಿಂದ ಒಳ್ಳೆಯ ಕಾವ್ಯಕ್ಕೆ ತೀರಾ ಹತ್ತಿರವಾದ ಒಂದು ಅನುಭವವನ್ನು ಕೊಡುವಂಥದ್ದಾಗಿದೆ.  ವ್ಯಾಸರಾವ್ ಒಳಗಿನ ಕವಿ, ಇಲ್ಲಿ ಮೊಟ್ಟಮೊದಲು ತನ್ನನ್ನು ತಾನು ಅಭಿವ್ಯಕ್ತಪಡಿಸಿಕೊಂಡಿದ್ದು ಹೀಗೆ.

ವ್ಯಾಸರಾವ್ ಅವರ ಒಂದು ಮಾತು ನನ್ನನ್ನು ತುಂಬು ಆವರಿಸಿದೆ ಎಂದು ಹೇಳಿದರೆ ತಪ್ಪಾಗಲಾರದು.  ನಾವು ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಗೆ ಬ್ಯಾಂಕ್ ಆಗಿದ್ದ ಯೂಕೋ ಬ್ಯಾಂಕಿನಲ್ಲಿ ಇದ್ದ ಅವರು, ನಮ್ಮೆಲ್ಲರಿಗೆ ಸ್ನೇಹದಿಂದ ಇದ್ದರು ಎಂಬ ಕಾರಣದಿಂದ ನಮ್ಮ ಕನ್ನಡ ಸಂಪದದಲ್ಲಿ ಒಂದು ಕವನ ಸ್ಪರ್ಧೆ ಅಂತ ಮಾಡಿಕೊಂಡಿದ್ದೇವೆ.  ತಮಗೆ ತೀರ್ಪು ನೀಡಲು ಸಾಧ್ಯವೇಎಂದು ಹಿಂಜರಿತದಿಂದ ಕೇಳಿಕೊಂಡಾಗ ಪ್ರೀತಿಯಿಂದ ಬಂದರು.   ಬಂದಾಗ ಪ್ರೀತಿಯಿಂದಲೇ ನುಡಿದರು  ನಿಮ್ಮಲ್ಲಿ ಒಂದಿಬ್ಬರಿಗೆ ಬಿಟ್ಟು ಇನ್ಯಾರಿಗೂ ಕವನ ಬರೆಯಲು ಬರುವುದಿಲ್ಲಎಂದು.  ಹಾಗೆ ಬರೆಯಲು ಬರದಿದ್ದವರ ಪಟ್ಟಿಯಲ್ಲಿ ನಾನೂ ಇದ್ದದ್ದರಿಂದ ಕವನ ಬರೆಯುವುದನ್ನು ನಿಲ್ಲಿಸಿದೆ.  ಅವರು ನಮಗೆ ಕವನ ಬರೆಯಲು ಬರುವುದಿಲ್ಲ ಎಂದು ಹೇಳಿದ್ದರಿಂದ ಅಲ್ಲ.  ಅವರು ಹೇಳಿದ ಒಂದು ಮಾತು ನನ್ನ ಮನದಾಳಕ್ಕೆ ಇಳಿದದ್ದರಿಂದ.  ನಾವು ನಮ್ಮ ನಾಡಿನ ಬಗ್ಗೆ ಹೇಳಲಿಕ್ಕೆ ಏನೂ ಉಳಿದೇ ಇಲ್ಲ.  ಅದನ್ನು ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಳಯ ವಿಲೀನ ವಿಶದ ವಿಷಯ ವಿಶೇಷಂಎಂಬ ಮಾತಿನಲ್ಲಿ ನೃಪತುಂಗ ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಹೇಳಿಯಾಗಿದೆ!”.  ಅವರ ಈ ಮಾತು ಕಾವ್ಯ ಬರೆಯುವ ಯುವಕರ  ಉತ್ಸಾಹಕ್ಕೆ ತಣ್ಣೀರೆರಚುವಂತಿರದೆ, ನಮ್ಮ ನೋಟ, ನಮ್ಮ ಹುಡುಕುವಿಕೆ, ನಮ್ಮ ಪರಿಶ್ರಮ, ನಮ್ಮ ಅಧ್ಯಯನ ಹೇಗೆ ಸಾಗಬೇಕು ಎಂಬ ಬಗ್ಗೆ ತಿಳಿಹೇಳುವಂತಿತ್ತು.   ಈ ಕನ್ನಡ ಸಂಪದದ ಪುಟದಲ್ಲಿ ಹಲವಾರು  ವಿಚಾರ ತುಂಬುವಾಗಲೂ, ನಾನು ಹೇಳಬೇಕು ಎಂಬುದಕ್ಕಿಂತ ನಮ್ಮ ನಾಡಿನಲ್ಲಿ, ಭಾಷೆಯಲ್ಲಿ, ಜನಪದದಲ್ಲಿ, ಬಾಳಿ ಬದುಕಿದ ಹಿರಿಯರಲ್ಲಿ, ಸಾಧಕರಲ್ಲಿ, ಅನುಭಾವಿಗಳಲ್ಲಿ  ಎಷ್ಟೊಂದು ಇದೆ, ಅದರಲ್ಲಿ ಕಿಂಚಿತ್ತು ನಮಗೆ ಕಂಡರೆ ಎಷ್ಟು ಚೆನ್ನಿರುತ್ತದೆ ಎಂಬ ಜಾಗೃತಿಯನ್ನು  ನನ್ನೊಡನೆ ಇರಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತೇನೆ.  ಈ ನಿಟ್ಟಿನಲ್ಲಿ ಎಂ. ಎನ್. ವ್ಯಾಸರಾಯರು ನನ್ನ ನೆನಪಲ್ಲಿ ಹಲವು ದಶಕಗಳಿಂದ ಹಸುರಾಗಿದ್ದಾರೆ. 

ನೀನಿಲ್ಲದೇ ನನಗೇನಿದೆ’, ‘ಹೃದಯವನೆ ಕಾಣದಾದ ಕನಸುಗಳ ನೂಕಿದೆ’, ‘ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆಮುಂತಾದ ಭಾವಗೀತೆಗಳಿಂದಲೂ, ‘ಇವಳೇ ಅವಳು, ಅವಳೇ ಇವಳು ಮನದಲ್ಲಿ ನಿಂತವಳು’, ‘ಆ ಸೂರ್ಯ ಚಂದ್ರ ನಕ್ಷತ್ರ ಮಾಲೆ ಬಂದಂತೆ ನೀನು’, ‘ನೆನಪಿನ ಕನಸಿನಲಿ ಭಾವನ ಜೀವನ’, ‘ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮಶೃತಿ’, ‘ಚಂದ ಚಂದ ಸಂಗಾತಿ ನೋಟವೆ ಚಂದ’, ‘ನೀನೇ ನನ್ನ ಕಾವ್ಯ ಕನ್ನಿಕೆ’, ‘ಯುಗಯುಗಗಳೆ ಸಾಗಲಿ ನಮ್ಮ ಪ್ರೀತಿ ಶಾಶ್ವತಮುಂತಾದ ನೂರಾರು ಚಿತ್ರಗೀತೆಗಳಿಂದಲೂ ಎಂ. ಎನ್. ವ್ಯಾಸರಾಯರು ಸಂಗೀತಪ್ರಿಯರಿಗೆ ಆಪ್ತರಾಗಿದ್ದಾರೆ.

ಚಲನಚಿತ್ರ ಜಗತ್ತಿನ ಸಂಬಂಧವನ್ನುಳಿಸಿಕೊಂಡೂ ವ್ಯಾಸರಾವ್ ಅವರು  ಹಲವಾರು ವರ್ಷಗಳಿಂದ ಕವಿತೆಯನ್ನು ಬರೆಯುತ್ತಲೇ ಬಂದಿದ್ದಾರೆ. ಅವರ ಮೊದಲ ಸಂಕಲನ ಬೆಳ್ಳಿ ಮೂಡುವ ಮುನ್ನ’. 

ಬೀಡಿ ಹಚ್ಚಲು
ಕಡ್ಡಿ ಕೇಳಿದ
ಕೊಟ್ಟೆ.
ಹಚ್ಚಿಸಿ ಪಕ್ಕಕ್ಕೆಸೆದು ಹೋದ.
ಅಲ್ಲಿದ್ದ ಮೆದೆ ಹತ್ತಿ
ಈಗ ನನ್ನ ಮನೆ
ಧಗಧಗನೆ
(ಸ್ನೇಹ)


ನಾನೊಂದು ಕಡೆ ನೀನೊಂದು ಕಡೆ
ತ್ರಾಸಿನ ಬಟ್ಟುಗಳಾಗಿ ನಮ್ಮ ನಡುವೆ
ಪೈಪೋಟಿ ಬೆಳೆಯುತ್ತದೆ.
…………………………………………………….
ಹೀಗೆ ನಿರಂತರವಾಗಿ ನಮ್ಮ ಬೆಲೆ
ಏರುತ್ತ ಇಳಿಯುತ್ತ
ಕೈಯಿಂದ ಕೈಗೆ ಬದಲಾಗುತ್ತ
(ಸರಕು)

ಬೇಕು ನನಗೆ;
ಕ್ಷಣಕ್ಕಾದರೂ ಶಾಪ ಮರೆತು ರತಿಗೆ ಹಾತೊರೆವ
ಪಾಂಡು ಮಾದ್ರಿಯರಂಥ
ಕೆಚ್ಚೆದೆಯ ಧೀಮಂತ ಬದುಕು
(ಗಂಧರ್ವರೆ)

ಕೊನೆ ಮುಟ್ಟುವುದಕ್ಕಿಂತ ಹಾದಿ ತಪ್ಪುವುದೇ ಹೆಚ್ಚು
(ಪ್ರೀತಿ)

ಮಣ್ಣಿನೊಳಪದರದಡಿಯಲ್ಲಿ
ಎಚ್ಚರದ ಬೀಜಗಳು
ಆಕಳಿಸಿ ಮೈ ಮುರಿವ…..
(ದೃಷ್ಟಿ)

ನಮ್ಮಿಬ್ಬರ ನಡುವೆ ಶಬ್ದಗಳಿವೆ ಎಚ್ಚರವಿಲ್ಲ
ಧ್ವನಿಗಳು ಸುತ್ತುತ್ತಿವೆ, ಸ್ಪಂದನವಿಲ್ಲ
(ಮೌನ)


ಇದೀಗ ನಮ್ಮನ್ನು ನಾವೇ ಒರೆಗೆ ಹಚ್ಚಿಕೊಳ್ಳುವ ಸಮಯ
ನಮ್ಮ ಕನಸು ಮನಸುಗಳಲ್ಲಿ ಅಪ್ಪಟವೆಷ್ಟು?
(ಹಸ್ತಾಂತರ)

ಇಂಥಹ ಸುಂದರ ಸಾಲುಗಳ ಮನನವನ್ನು ಈ ಕವನ ಸಂಕಲನದಲ್ಲಿ ಮೂಡಿಸಿ, ಅದಕ್ಕೆ ಮುನ್ನುಡಿ ಬರೆದ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರಿಂದ ಸದ್ಭಾವ ನುಡಿಗಳನ್ನು ಹೊತ್ತುಬಂದ ಈ ಬೆಳ್ಳಿಮೂಡುವ ಮುನ್ನಕವನ ಸಂಕಲನದಿಂದ ವ್ಯಾಸರಾಯರು ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರತಿಷ್ಠಿತ ಯುವ ಕವಿಗಳ ಸಾಲಿಗೆ ಬಂದರು.  ಮುಂದೆ ಮಳೆಯಲ್ಲಿ ನೆನೆದ ಮರಗಳುಕಥಾಸಂಕಲನ; ‘ಉತ್ತರ ಮುಖಿನೀಳ್ಗವಿತೆಗಳ ಸಂಕಲನ; ಸ್ಕಾಟ್ ಡಬಲ್ ಎಕ್ಸ್, ಅಖಿಲಾ ಮೈ ಡಾರ್ಲಿಂಗ್ ಮುಂತಾದ ಪತ್ತೇದಾರಿ ಕಾದಂಬರಿಗಳು; ನಿರೋಷ, ನದಿಮೂಲ ಮೊದಲಾದ ಸೃಜನಶೀಲ ಕಾದಂಬರಿಗಳು, ‘ಕತ್ತಲಲ್ಲಿ ಬಂದವರುನಾಟಕ ಹೀಗೆ ಎಂ. ಎನ್. ವ್ಯಾಸರಾಯರ ಸಾಹಿತ್ಯ ಪಥ ಮುಂದೆ ಸಾಗುತ್ತ ನಡೆದಿದೆ.

ವ್ಯಾಸರಾಯರ ಹಲವಾರು ಕಥೆಗಳು ತೆಲುಗು, ಹಿಂದಿ, ಬಂಗಾಳಿ, ಇಂಗ್ಲಿಷ್‌ ಇನ್ನಿತರ ಭಾಷೆಗಳಿಗೆ ಭಾಷಾಂತರಗೊಂಡಿವೆ. ಅವರು ಹಲವಾರು ಚೀನಿ, ಇಂಗ್ಲಿಷ್, ಐರಿಶ್, ಫ್ರೆಂಚ್, ಉರ್ದು ಮುಂತಾದ ಭಾಷೆಗಳಲ್ಲಿನ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಿ.ಸಿ. ರಾಮಚಂದ್ರಶರ್ಮ, ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಡಾ. ರಾಜಕುಮಾರ್, ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, ಸುಮತೀಂದ್ರ ನಾಡಿಗ್, ಎಚ್.ಎಸ್. ವೆಂಕಟೇಶಮೂರ್ತಿ, ಸಿ. ಅಶ್ವತ್ಥ್ ಮೊದಲಾದವರ ಸಂದರ್ಶನ ಲೇಖನಗಳನ್ನು  ಪ್ರಕಟಿಸಿದ್ದಾರೆ. ಕೆ.ಎಸ್. ಅಶ್ವತ್ಥರ ಆತ್ಮಕಥನವನ್ನು  ಸುಧಾ ಪತ್ರಿಕೆಯಲ್ಲಿ ನಿರೂಪಿಸಿದ್ದಾರೆ. ಶ್ರವಣ ಮತ್ತು ದೃಶ್ಯಮಾಧ್ಯಮದಲ್ಲಿ ಅನೇಕ ಕಾರ್ಯಕ್ರಮ ನೀಡಿದ್ದಾರೆ.   ಹಲವಾರು  ಕ್ಯಾಸೆಟ್ಟುಗಳಿಗೆ ಹಾಡುಗಳನ್ನು ಮೂಡಿಸಿದ್ದಾರೆ, 35ಕ್ಕೂ ಮಿಕ್ಕು ಧಾರಾವಾಹಿಗಳಿಗೆ ಸಾಹಿತ್ಯ ರಚನೆ ಮಾಡಿದ್ದಾರೆ. ನೂರಾರು ಚಲನಚಿತ್ರಗಳಿಗೆ ಗೀತರಚಸಿದ್ದಾರೆ.  ವ್ಯಾಸರಾಯರ  ಸಾಹಿತ್ಯದ ಮೈಸೂರು ಮಲ್ಲಿಗೆ, ಆಸ್ಪೋಟ, ದಂಗೆ ಎದ್ದ ಮಕ್ಕಳು, ವಾತ್ಸಲ್ಯ ಪಥ ಪ್ರಶಸ್ತಿ ಪಡೆದ ಚಲನಚಿತ್ರಗಳಾಗಿವೆ.

ಮಳೆಯಲ್ಲಿ ನೆನೆದ ಮರಗಳುಕಥಾ ಸಂಕಲನಕ್ಕೆ ಸಾಹಿತ್ಯ ಅಕಾಡಮಿ ಬಹುಮಾನ; ಹಲವಾರು ವಿಚಾರ ಸಂಕೀರ್ಣ, ಕವಿ ಸಮ್ಮೇಳನಗಳಲ್ಲಿ ಪ್ರಮುಖ ಪಾತ್ರ; ಸಾಹಿತ್ಯ, ಸಿನಿಮಾಗಳಿಗೆ ಸಂಬಂಧಿತ ಹಲವಾರು ಪ್ರಶಸ್ತಿ ಗೌರವಗಳು ಎಂ. ಎನ್. ವ್ಯಾಸರಾಯರನ್ನು ಅರಸಿ ಬಂದಿವೆ. 


ಎಂ. ಎನ್. ವ್ಯಾಸರಾಯರ ಕೊಡುಗೆಗಳನ್ನು ಅನುಭಾವಿಸುವ ಭಾಗ್ಯ ಕನ್ನಡಿಗರಿಗೆ ನಿರಂತರವಾಗಿ ದೊರಕುತ್ತಿರಲಿ, ಅವರ ಸಾಧಾನಾಶಕ್ತಿಗಳ ಜಗತ್ತು ನಿರಂತರ ವಿಸ್ತರಿಸುತ್ತಿರಲಿ, ಅವರ ಬದುಕು ಸುಂದರವಾಗಿರಲಿ ಎಂದು ಅವರಿಗೆ ಹುಟ್ಟುಹಬ್ಬದ ನಲ್ಮೆಯ ಶುಭ ಹಾರೈಕೆಗಳನ್ನು ಸಲ್ಲಿಸೋಣ.

Tag: M. N. Vyasa Rao

ಕಾಮೆಂಟ್‌ಗಳಿಲ್ಲ: