ಶುಕ್ರವಾರ, ಆಗಸ್ಟ್ 30, 2013

ಅರಳುಮಲ್ಲಿಗೆ ಪಾರ್ಥಸಾರಥಿ

ಅರಳುಮಲ್ಲಿಗೆ ಪಾರ್ಥಸಾರಥಿ

ಹರಿದಾಸ ಸಾಹಿತ್ಯವನ್ನು ವಿಶಾಲವ್ಯಾಪ್ತಿಯಲ್ಲಿ ಪಸರಿಸುತ್ತಿರುವ  ಅರಳುಮಲ್ಲಿಗೆ ಪಾರ್ಥಸಾರಥಿಯವರು ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ ಮಾರ್ಚ್ 22, 1948ರಂದು ಜನಿಸಿದರು. ಅವರ ತಂದೆ ಕೃಷ್ಣಮೂರ್ತಿರಾವ್ ಮತ್ತು  ತಾಯಿ ರಂಗಮ್ಮನವರು. ಪಾರ್ಥಸಾರಥಿಯವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಅರಳು ಮಲ್ಲಿಗೆಯಲ್ಲಿ. ಪ್ರೌಢಶಾಲೆಗೆ ಸೇರಿದ್ದು ದೊಡ್ಡಬಳ್ಳಾಪುರದ ಹೈಸ್ಕೂಲಿಗೆ.  ಮುಂದೆ ಅವರು ಬೆಂಗಳೂರಿನ ಆರ್.ಸಿ. ಕಾಲೇಜಿನಿಂದ ಬಿ.ಕಾಂ., ಸೆಂಟ್ರಲ್ ಕಾಲೇಜಿನಿಂದ ಎಂ.ಕಾಂ ಪದವಿಗಳಲ್ಲದೆಕ್ಯಾಲಿಫೋರ್ನಿಯ  ವಿಶ್ವವಿದ್ಯಾಲಯದಿಂದ  ಡಾಕ್ಟರೇಟ್ ಗೌರವವನ್ನು ಗಳಿಸಿದರು.  ತಮ್ಮ ಓದು ಮುಗಿಸಿದ ನಂತರ  ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನ ಪ್ರಾಧ್ಯಾಪಕರಾಗಿ 1971ರಿಂದ 28 ವರ್ಷಕಾಲ ಸುದೀರ್ಘ ಸೇವೆ ಸಲ್ಲಿಸಿ  ನಂತರ ಸ್ವಯಂ ನಿವೃತ್ತಿ ಪಡೆದರು.  ಇಂದೂ ಸಹಾ ಅವರು ಹಲವಾರು ಪ್ರತಿಷ್ಠಿತ ಮ್ಯಾನೇಜ್ ಮೆಂಟ್ ಇನ್ಸ್ಟಿಟ್ಯೂಟುಗಳಂತಹ ಅನೇಕ ಸಂಸ್ಥೆಗಳಿಗೆ ಸಲಹೆಗಾರರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ, ಆಹ್ವಾನಿತ ಉಪನ್ಯಾಸಕರಾಗಿ  ಸೇವೆ ಸಲ್ಲಿಸುತ್ತಿದ್ದಾರೆ.

ಹರಿದಾಸ ಮನೆತನದಿಂದ ಬಂದ ಬಳುವಳಿಯಾಗಿ ಪಾರ್ಥಸಾರಥಿಯವರ ರಕ್ತದಲ್ಲೂ ಹರಿದದ್ದು ಹರಿದಾಸ ಸಾಹಿತ್ಯವೇ. ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ನವ್ಯ ಸಾಹಿತ್ಯದ ಸುಳಿಗೆ ಸಿಕ್ಕಿ, ನವ್ಯರಂತೆ ತಾವೂ ಸಾಹಿತ್ಯ ರಚಿಸದಿದ್ದರೆ ಸ್ಥಾನವಿಲ್ಲವೆಂಬ ಭ್ರಮೆಯಿಂದ,  1971ರಲ್ಲಿ  ಹೂವು ಹಾವು ತೀರ್ಥಎಂಬ ಕಾದಂಬರಿಯೊಂದನ್ನು ಬರೆದಿದ್ದರಂತೆ. ಸ್ವಾಮೀಜಿಯೊಬ್ಬರು ಲೌಕಿಕ ಸೆಳೆತಕ್ಕೆ ಸಿಕ್ಕಿ ಪೀಠ ತ್ಯಜಿಸಿದ ಕಥಾವಸ್ತುವನ್ನು ಆ ಕಾದಂಬರಿ ಒಳಗೊಂಡಿತ್ತು. ಆದರೆ ಹರಿದಾಸ ಸಾಹಿತ್ಯದತ್ತ ಹರಿದ ಮನಸ್ಸು ಹರಿದಾಸ ಅಕಾಡೆಮಿಹುಟ್ಟುಹಾಕಲು ಪ್ರೇರಣೆ ಒದಗಿಸಿತು.  ಇದರಿಂದ ಹರಿದಾಸ ಸಾಹಿತ್ಯದ  ಪ್ರಚಾರ ಕೈಗೊಂಡು, ಆ ಸಲುವಾಗಿ ದೇಶದೆಲ್ಲೆಡೆ  ಪರ್ಯಟನೆ ಕೈಗೊಂಡದ್ದೇ ಅಲ್ಲದೆ ಹಲವಾರು ಬಾರಿ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್, ಸಿಂಗಪೂರ್, ಬಹರಿನ್ಯು ಎ ಇ , ಖತಾರ್ ಒಳಗೊಂಡಂತೆ ವಿಶ್ವದಾದ್ಯಂತ ಪ್ರವಾಸ ಕೈಗೊಂಡು  ಬಳಲಿದ್ದ  ಮನಗಳಿಗೆ ಸಾಂತ್ವನ ನೀಡುವಂತಹ  ಆಧ್ಯಾತ್ಮಿಕ  ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ.  ಹೀಗೆ ಅವರು ವಿಶ್ವದಾದ್ಯಂತ ನೀಡಿರುವ ಒಟ್ಟಾರೆ ಪ್ರವಚನಗಳ ಸಂಖ್ಯೆ 4000ವನ್ನು ಮೀರಿವೆ.

ಅರಳುಮಲ್ಲಿಗೆ ಪಾರ್ಥಸಾರಥಿಯವರು ನಲವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ವಿಷ್ಣುಸಹಸ್ರನಾಮ, ಅರಳು ಮಲ್ಲಿಗೆ ಅಮೃತ ನುಡಿಗಳು, ಹರಿದಾಸರ 4500 ಹಾಡುಗಳು, ವಾದಿರಾಜ ಸಂಪುಟ, ಶ್ರೀಪಾದರಾಜ ಸಂಪುಟ, ಶ್ರೀ  ವ್ಯಾಸರಾಜ ಸಂಪುಟ, ಹರಿದಾಸ ಝೇಂಕಾರ ತರಂಗಿಣಿ, ಪುರಂದರ ಸಂಪುಟ, ದಾಸ ಸಾಹಿತ್ಯ ವೈಭವ, ಜನಪ್ರಿಯ ಭಜನ ಸಂಪುಟ, ರಂಗ ವಿಠ್ಠಲ, ದಾಸ ಸಾಹಿತ್ಯ ವಾಹಿನಿ, ಸಿರಿ ಕೃಷ್ಣಮಧ್ವಾಚಾರ್ಯರು, ಸಂಸ್ಕೃತಿ ಪುರುಷರು, ಕಲಾ ತಪಸ್ವಿಮಹತ್ತಾಗಿ ಚಿಂತಿಸು, ಆಡಳಿತ ಮೂಲ ತತ್ವಗಳು ಮುಂತಾದ ವೈವಿಧ್ಯಮಯ ಮತ್ತು ವಿದ್ವತ್ ಪೂರ್ಣ ಸಂಗತಿಗಳಿವೆ.  ಇದಲ್ಲದೆ ಧ್ವನಿ ಸುರುಳಿಮತ್ತು ಸಿ.ಡಿ.ಗಳ ಮೂಲಕವೂ ಹರಿದಾಸ ಸಾಹಿತ್ಯವೇ ಅಲ್ಲದೆ  ಭಾಗವತ, ಭಗವದ್ಗೀತ, ರಾಮಾಯಣ ವಿಷ್ಣುಸಹಸ್ರನಾಮ, ಚಕ್ರ ಶಾಸ್ತ್ರ  ಮುಂತಾದ  ಮೌಲ್ಯಗಳು ಜನಸಾಮಾನ್ಯರಿಗೆ ತಲುಪುವಂತೆ ಶ್ರದ್ಧಾಪೂರ್ವಕವಾದ ಕಾಯಕ  ಮಾಡುತ್ತಾ ಬಂದಿದ್ದಾರೆ. 

ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿ ಗೌರವಗಳು  ಸಂದಿವೆ.


ನಮ್ಮ ನಾಡಿನ ಈ ಮಹಾನ್ ಸಾಂಸ್ಕೃತಿಕ ರಾಯಭಾರಿಗಳಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳು ಮತ್ತು ಗೌರವಪೂರ್ವಕ ನಮನಗಳು.

Tag: Aralu Mallige Parthasarathy

ಕಾಮೆಂಟ್‌ಗಳಿಲ್ಲ: